ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಅ. ಕಾರ್ಯಗಳು 13:1-52

13  ಅಂತಿಯೋಕ್ಯದ ಸ್ಥಳಿಕ ಸಭೆಯಲ್ಲಿ ಬಾರ್ನಬ, ನೀಗರನೆಂದು ಕರೆಯಲ್ಪಡುತ್ತಿದ್ದ ಸಿಮೆಯೋನ, ಕುರೇನ್ಯದ ಲೂಕ್ಯ, ಉಪಾಧಿಪತಿಯಾದ ಹೆರೋದನೊಂದಿಗೆ ಶಿಕ್ಷಣಪಡೆದ ಮೆನಹೇನ ಮತ್ತು ಸೌಲರೆಂಬ ಪ್ರವಾದಿಗಳೂ ಬೋಧಕರೂ ಇದ್ದರು.  ಅವರು ಯೆಹೋವನಿಗೆ ಬಹಿರಂಗವಾಗಿ ಸೇವೆಮಾಡುತ್ತಾ ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮವು ಅವರಿಗೆ, “ಎಲ್ಲ ಜನರಲ್ಲಿ ಬಾರ್ನಬ ಮತ್ತು ಸೌಲರನ್ನು ನನಗಾಗಿ, ನಾನು ಅವರನ್ನು ಕರೆದಿರುವ ಕೆಲಸಕ್ಕಾಗಿ ಪ್ರತ್ಯೇಕಿಸಿರಿ” ಎಂದು ಹೇಳಿತು.  ಬಳಿಕ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ ಅವರ ಮೇಲೆ ತಮ್ಮ ಕೈಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.  ಹೀಗೆ ಈ ಪುರುಷರು ಪವಿತ್ರಾತ್ಮದಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ಸಮುದ್ರಮಾರ್ಗವಾಗಿ ಸೈಪ್ರಸ್‌ಗೆ ಹೋದರು.  ಅವರು ಸಲಮೀಸ್‌ಗೆ ಬಂದಾಗ ಅಲ್ಲಿದ್ದ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಪ್ರಕಟಿಸಲಾರಂಭಿಸಿದರು. ಪರಿಚಾರಕನಾಗಿ ಯೋಹಾನನೂ ಅವರೊಂದಿಗಿದ್ದನು.  ಅವರು ಇಡೀ ದ್ವೀಪದಲ್ಲಿ ಪಾಫೋಸ್‌ ಎಂಬಲ್ಲಿಯ ವರೆಗೂ ಸಂಚರಿಸಿದಾಗ ಮಂತ್ರವಾದಿಯೂ ಸುಳ್ಳು ಪ್ರವಾದಿಯೂ ಆಗಿದ್ದ ಬಾರ್‌ಯೇಸು ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಸಂಧಿಸಿದರು.  ಅವನು ಬುದ್ಧಿವಂತನಾಗಿದ್ದ ಸೆರ್ಗ್ಯ ಪೌಲನೆಂಬ ಪ್ರಾಂತಾಧಿಪತಿಯ ಜೊತೆಯಲ್ಲಿದ್ದನು. ಆ ಪ್ರಾಂತಾಧಿಪತಿಯು ದೇವರ ವಾಕ್ಯವನ್ನು ಕೇಳುವ ತೀವ್ರಾಪೇಕ್ಷೆಯಿಂದ ಬಾರ್ನಬ ಮತ್ತು ಸೌಲರನ್ನು ತನ್ನ ಬಳಿಗೆ ಕರೆಸಿಕೊಂಡನು.  ಆದರೆ ಆ ಮಂತ್ರವಾದಿಯಾದ ಎಲುಮನು ಅವರನ್ನು ವಿರೋಧಿಸಿ ಪ್ರಾಂತಾಧಿಪತಿಯು ಅವರ ಮಾತುಗಳಲ್ಲಿ ನಂಬಿಕೆಯಿಡುವುದರಿಂದ ಅವನನ್ನು ತಡೆಯಲು ಪ್ರಯತ್ನಿಸಿದನು. (ಎಲುಮನೆಂಬ ಹೆಸರನ್ನು ಮಂತ್ರವಾದಿ ಎಂದು ಭಾಷಾಂತರಿಸಲಾಗಿದೆ.)  ಆಗ ಪೌಲನೆಂದೂ ಕರೆಯಲ್ಪಡುವ ಸೌಲನು ಪವಿತ್ರಾತ್ಮಭರಿತನಾಗಿ ಅವನನ್ನು ದಿಟ್ಟಿಸಿ ನೋಡಿ 10  ಅವನಿಗೆ, “ಎಲ್ಲ ರೀತಿಯ ಮೋಸದಿಂದಲೂ ಎಲ್ಲ ರೀತಿಯ ನೀಚತನದಿಂದಲೂ ತುಂಬಿರುವವನೇ, ಪಿಶಾಚನ ಮಗನೇ, ಸರ್ವ ನೀತಿಯ ವೈರಿಯೇ, ಯೆಹೋವನ ನೀಟಾದ ಮಾರ್ಗಗಳನ್ನು ಡೊಂಕುಮಾಡುವುದನ್ನು ನೀನು ನಿಲ್ಲಿಸುವುದಿಲ್ಲವೊ? 11  ಇಗೋ! ಯೆಹೋವನು ನಿನ್ನ ವಿರುದ್ಧ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಸ್ವಲ್ಪ ಸಮಯದ ವರೆಗೆ ಸೂರ್ಯನ ಬೆಳಕನ್ನು ಕಾಣದೆ ಹೋಗುವಿ” ಎಂದು ಹೇಳಿದನು. ಕೂಡಲೆ ದಟ್ಟವಾದ ಮಂಜು ಮತ್ತು ಕತ್ತಲೆಯು ಅವನನ್ನು ಆವರಿಸಿತು. ಅವನು ತನ್ನ ಕೈಹಿಡಿದು ನಡಿಸುವವರಿಗಾಗಿ ಹುಡುಕಾಡುತ್ತಾ ತಿರುಗಾಡಿದನು. 12  ಪ್ರಾಂತಾಧಿಪತಿಯು ನಡೆದ ಘಟನೆಯನ್ನು ನೋಡಿ ಯೆಹೋವನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ವಿಶ್ವಾಸಿಯಾದನು. 13  ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸ್‍ನಿಂದ ಸಮುದ್ರಪ್ರಯಾಣ ಮಾಡಿ ಪಂಫುಲ್ಯದಲ್ಲಿದ್ದ ಪೆರ್ಗಕ್ಕೆ ಬಂದರು. ಆದರೆ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು. 14  ಆ ಬಳಿಕ ಅವರು ಪೆರ್ಗದಿಂದ ಪಿಸಿದ್ಯದಲ್ಲಿದ್ದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್‌ ದಿನದಂದು ಅವರು ಸಭಾಮಂದಿರಕ್ಕೆ ಹೋಗಿ ಕುಳಿತುಕೊಂಡರು. 15  ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥದ ಪಾರಾಯಣವು ಮುಗಿದ ಬಳಿಕ ಸಭಾಮಂದಿರದ ಸಭಾಪತಿಗಳು ಅವರಿಗೆ, “ಜನರೇ, ಸಹೋದರರೇ, ಜನರಿಗಾಗಿ ಉತ್ತೇಜನದ ಮಾತೇನಾದರೂ ನಿಮ್ಮಲ್ಲಿ ಇದ್ದರೆ ಅದನ್ನು ತಿಳಿಸಿರಿ” ಎಂದು ಹೇಳಿಕಳುಹಿಸಿದರು. 16  ಆಗ ಪೌಲನು ಎದ್ದುನಿಂತು ಕೈಸನ್ನೆ ಮಾಡಿ ಹೇಳಿದ್ದು: “ಇಸ್ರಾಯೇಲ್ಯರೇ ಮತ್ತು ದೇವಭಯವುಳ್ಳ ಇತರರೇ ಕೇಳಿರಿ. 17  ಈ ಇಸ್ರಾಯೇಲ್‌ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡನು; ಈ ಜನರು ಈಜಿಪ್ಟಿನಲ್ಲಿ ಪರದೇಶೀಯ ನಿವಾಸಿಗಳಾಗಿದ್ದಾಗ ಆತನು ಅವರನ್ನು ಉನ್ನತಿಗೇರಿಸಿ ತನ್ನ ಭುಜಬಲದಿಂದ ಅವರನ್ನು ಅಲ್ಲಿಂದ ಕರೆತಂದನು. 18  ಮತ್ತು ಸುಮಾರು ನಲವತ್ತು ವರ್ಷಗಳ ವರೆಗೆ ಅರಣ್ಯದಲ್ಲಿ ಅವರ ವರ್ತನೆಯನ್ನು ಸಹಿಸಿಕೊಂಡನು. 19  ಕಾನಾನ್‌ ದೇಶದಲ್ಲಿ ಏಳು ಜನಾಂಗಗಳನ್ನು ನಿರ್ಮೂಲಮಾಡಿದ ಬಳಿಕ ಅವರ ಆ ದೇಶವನ್ನು ಅವರಿಗೆ ಚೀಟುಹಾಕಿ ಪಾಲುಮಾಡಿ ಹಂಚಿಕೊಟ್ಟನು; 20  ಇದೆಲ್ಲ ಸುಮಾರು ನಾನೂರೈವತ್ತು ವರ್ಷಗಳ ಕಾಲದಲ್ಲಿ ನಡೆಯಿತು. “ಇದಾದ ಬಳಿಕ ಪ್ರವಾದಿಯಾದ ಸಮುವೇಲನ ಕಾಲದ ವರೆಗೆ ಅವರಿಗೆ ನ್ಯಾಯಾಧಿಪತಿಗಳನ್ನು ಕೊಟ್ಟನು. 21  ಆದರೆ ಅಂದಿನಿಂದ ಅವರು ತಮಗಾಗಿ ಒಬ್ಬ ರಾಜನನ್ನು ನೇಮಿಸುವಂತೆ ಒತ್ತಾಯಿಸಿದಾಗ, ದೇವರು ಅವರಿಗೆ ಬೆನ್ಯಾಮೀನ್‌ ಕುಲದ ಕೀಷನ ಮಗನಾದ ಸೌಲನನ್ನು ಕೊಟ್ಟನು; ಅವನು ನಲವತ್ತು ವರ್ಷ ಆಳಿದನು. 22  ಅವನನ್ನು ತೆಗೆದುಹಾಕಿದ ಬಳಿಕ ಆತನು ಅವರಿಗಾಗಿ ದಾವೀದನನ್ನು ರಾಜನಾಗಿ ನೇಮಿಸಿದನು. ಇವನ ಕುರಿತಾಗಿಯೇ ಆತನು, ‘ಇಷಯನ ಮಗನಾದ ದಾವೀದನನ್ನು ನಾನು ಕಂಡುಕೊಂಡಿದ್ದೇನೆ. ಇವನು ನನ್ನ ಹೃದಯಕ್ಕೆ ಮೆಚ್ಚಿಕೆಯಾದವನು; ಇವನೇ ನಾನು ಅಪೇಕ್ಷಿಸುವುದನ್ನೆಲ್ಲ ನೆರವೇರಿಸುವನು’ ಎಂದು ಸಾಕ್ಷಿಹೇಳಿದನು. 23  ಈ ಮನುಷ್ಯನ ಸಂತಾನದಿಂದ ದೇವರು ತನ್ನ ವಾಗ್ದಾನಕ್ಕನುಸಾರ ಇಸ್ರಾಯೇಲ್ಯರಿಗೆ ರಕ್ಷಕನಾದ ಯೇಸುವನ್ನು ನೀಡಿದನು. 24  ಇವನ ಆಗಮನಕ್ಕೆ ಮುಂಚೆ ಯೋಹಾನನು ಇಸ್ರಾಯೇಲಿನ ಎಲ್ಲ ಜನರಿಗೆ ಪಶ್ಚಾತ್ತಾಪದ ಸಂಕೇತವಾದ ದೀಕ್ಷಾಸ್ನಾನದ ಕುರಿತು ಬಹಿರಂಗವಾಗಿ ಸಾರಿದನು. 25  ಆದರೆ ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿದ್ದಾಗ, ‘ನಾನು ಯಾರೆಂದು ನೀವು ನೆನಸುತ್ತೀರಿ? ನಾನು ಅವನಲ್ಲ. ಆದರೆ ನನ್ನ ಅನಂತರ ಒಬ್ಬನು ಬರುತ್ತಾನೆ; ಅವನ ಪಾದಗಳ ಕೆರಗಳನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳುತ್ತಿದ್ದನು. 26  “ಜನರೇ, ಸಹೋದರರೇ, ಅಬ್ರಹಾಮನ ವಂಶಸ್ಥರೇ ಮತ್ತು ನಿಮ್ಮಲ್ಲಿರುವ ದೇವಭಯವುಳ್ಳ ಇತರರೇ, ಈ ರಕ್ಷಣೆಯ ವಾಕ್ಯವು ನಮಗೆ ಕಳುಹಿಸಿಕೊಡಲ್ಪಟ್ಟಿದೆ. 27  ಯೆರೂಸಲೇಮಿನ ನಿವಾಸಿಗಳಿಗೂ ಅವರ ಅಧಿಪತಿಗಳಿಗೂ ಇವನ ಕುರಿತು ತಿಳಿದಿರಲಿಲ್ಲ; ಆದರೆ ಅವರು ನ್ಯಾಯಾಧಿಪತಿಗಳಂತೆ ವರ್ತಿಸುವಾಗ ಪ್ರತಿ ಸಬ್ಬತ್‌ ದಿನದಲ್ಲಿ ಪಾರಾಯಣಮಾಡಲಾಗುತ್ತಿದ್ದ ಪ್ರವಾದಿಗಳ ಮಾತುಗಳನ್ನು ನೆರವೇರಿಸಿದರು. 28  ಮತ್ತು ಅವನನ್ನು ಮರಣಕ್ಕೊಪ್ಪಿಸಲು ಅವರಿಗೆ ಯಾವುದೇ ಕಾರಣವು ಸಿಗಲಿಲ್ಲವಾದರೂ ಅವನನ್ನು ಕೊಲ್ಲಿಸುವಂತೆ ಪಿಲಾತನನ್ನು ಒತ್ತಾಯಿಸಿದರು. 29  ಅವನ ಕುರಿತಾಗಿ ಬರೆದಿರುವ ಎಲ್ಲ ವಿಷಯಗಳನ್ನು ನೆರವೇರಿಸಿದ ಬಳಿಕ ಅವರು ಅವನನ್ನು ಕಂಬದಿಂದ ಕೆಳಗಿಳಿಸಿ ಸ್ಮರಣೆಯ ಸಮಾಧಿಯಲ್ಲಿಟ್ಟರು. 30  ಆದರೆ ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನು; 31  ಮತ್ತು ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆಯಲ್ಲಿ ಬಂದವರಿಗೆ ಅವನು ಅನೇಕ ದಿವಸಗಳ ವರೆಗೆ ಕಾಣಿಸಿಕೊಂಡನು; ಅವರು ಈಗ ಜನರ ಮುಂದೆ ಅವನ ಸಾಕ್ಷಿಗಳಾಗಿದ್ದಾರೆ. 32  “ಆದುದರಿಂದ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನದ ಕುರಿತಾದ ಸುವಾರ್ತೆಯನ್ನು ನಾವು ನಿಮಗೆ ತಿಳಿಯಪಡಿಸುತ್ತಿದ್ದೇವೆ. 33  ಯೇಸುವನ್ನು ಪುನರುತ್ಥಾನಗೊಳಿಸುವ ಮೂಲಕ ಅವರ ಮಕ್ಕಳಾದ ನಮಗೋಸ್ಕರ ದೇವರು ಅದನ್ನು ಸಂಪೂರ್ಣವಾಗಿ ನೆರವೇರಿಸಿದ್ದಾನೆ; ಹೀಗೆ ‘ನೀನು ನನ್ನ ಮಗನು, ನಾನು ಇಂದು ನಿನಗೆ ತಂದೆಯಾಗಿದ್ದೇನೆ’ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು. 34  ಆತನು ಅವನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸಿ ಇನ್ನೆಂದೂ ಕೊಳೆಯುವುದಕ್ಕೆ ಹಿಂದಿರುಗುವಂತೆ ಬಿಡುವುದಿಲ್ಲ ಎಂಬುದನ್ನು, ‘ನಾನು ದಾವೀದನಿಗೆ ವಾಗ್ದಾನಿಸಿದ ವಿಶ್ವಾಸಾರ್ಹವಾದ ಪ್ರೀತಿಪೂರ್ವಕ ದಯೆಯನ್ನು ನಿಮಗೆ ಖಂಡಿತವಾಗಿಯೂ ತೋರಿಸುವೆನು’ ಎಂಬ ಮಾತಿನಲ್ಲಿ ತಿಳಿಸಿದ್ದಾನೆ. 35  ಆತನು ಇನ್ನೊಂದು ಕೀರ್ತನೆಯಲ್ಲಿ, ‘ನೀನು ನಿನ್ನ ನಿಷ್ಠಾವಂತನನ್ನು ಕೊಳೆಯುವಂತೆ ಬಿಡುವುದಿಲ್ಲ’ ಎಂದೂ ಹೇಳಿದ್ದಾನೆ. 36  ದಾವೀದನಾದರೋ ತನ್ನ ಸಂತತಿಯವರಲ್ಲಿ ದೇವರ ಸುವ್ಯಕ್ತ ಚಿತ್ತಕ್ಕನುಸಾರ ಸೇವೆಮಾಡಿ ಮರಣದಲ್ಲಿ ನಿದ್ರೆಹೋಗಿ ತನ್ನ ಪೂರ್ವಜರೊಂದಿಗೆ ಇಡಲ್ಪಟ್ಟು ಕೊಳೆತವನ್ನು ಅನುಭವಿಸಿದನು. 37  ಆದರೆ ದೇವರಿಂದ ಎಬ್ಬಿಸಲ್ಪಟ್ಟವನು ಕೊಳೆತವನ್ನು ಅನುಭವಿಸಲಿಲ್ಲ. 38  “ಆದುದರಿಂದ ಸಹೋದರರೇ, ಇವನ ಮೂಲಕವೇ ಪಾಪಗಳ ಕ್ಷಮಾಪಣೆಯು ನಿಮಗೆ ಸಾರಲ್ಪಡುತ್ತಿದೆ ಎಂಬುದು ನಿಮಗೆ ತಿಳಿದಿರಲಿ; 39  ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ನಿರ್ದೋಷಿಗಳೆಂದು ಎಣಿಸಲ್ಪಡಸಾಧ್ಯವಿಲ್ಲದ ಎಲ್ಲ ಸಂಗತಿಗಳಿಂದ ನಂಬುವವರಾದ ಪ್ರತಿಯೊಬ್ಬರೂ ಇವನ ಮೂಲಕ ನಿರ್ದೋಷಿಗಳೆಂದು ಎಣಿಸಲ್ಪಡುವರು. 40  ಆದುದರಿಂದ ಪ್ರವಾದಿಗಳ ಗ್ರಂಥದಲ್ಲಿ ತಿಳಿಸಲ್ಪಟ್ಟಿರುವುದು ನಿಮ್ಮ ಮೇಲೆ ಬರದಂತೆ ನೋಡಿಕೊಳ್ಳಿರಿ. 41  ಅದೇನೆಂದರೆ, ‘ಎಲೈ ತಿರಸ್ಕಾರಮಾಡುವವರೇ, ಆಶ್ಚರ್ಯಪಡಿರಿ ಮತ್ತು ನಾಶವಾಗಿಹೋಗಿರಿ. ನಿಮ್ಮ ದಿನಗಳಲ್ಲಿ ನಾನು ಒಂದು ಕಾರ್ಯವನ್ನು ನಡಿಸುವೆನು; ಈ ಕಾರ್ಯವನ್ನು ಒಬ್ಬನು ನಿಮಗೆ ವಿವರವಾಗಿ ತಿಳಿಸಿದರೂ ನೀವದನ್ನು ನಂಬುವುದೇ ಇಲ್ಲ.’ ” 42  ಪೌಲ ಬಾರ್ನಬರು ಸಭಾಮಂದಿರವನ್ನು ಬಿಟ್ಟುಹೋಗುತ್ತಿದ್ದಾಗ, ಈ ಸಂಗತಿಗಳ ಕುರಿತು ಮುಂದಿನ ಸಬ್ಬತ್‌ ದಿನದಲ್ಲಿಯೂ ಮಾತಾಡುವಂತೆ ಜನರು ಕೇಳಿಕೊಳ್ಳತೊಡಗಿದರು. 43  ಸಭಾಮಂದಿರದ ಸಭೆಯು ಮುಗಿದ ಬಳಿಕ ಯೆಹೂದ್ಯರಲ್ಲಿಯೂ ದೇವರನ್ನು ಆರಾಧಿಸುತ್ತಿದ್ದ ಯೆಹೂದಿ ಮತಾವಲಂಬಿಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾಲಿಸಿದರು; ಇವರು ಅವರೊಂದಿಗೆ ಮಾತಾಡುತ್ತಾ ದೇವರ ಅಪಾತ್ರ ದಯೆಯಲ್ಲಿ ಮುಂದುವರಿಯುವಂತೆ ಅವರನ್ನು ಉತ್ತೇಜಿಸಿದರು. 44  ಮುಂದಿನ ಸಬ್ಬತ್‌ ದಿನದಲ್ಲಿ ಹೆಚ್ಚುಕಡಮೆ ಇಡೀ ಪಟ್ಟಣವೇ ಯೆಹೋವನ ವಾಕ್ಯವನ್ನು ಕೇಳಿಸಿಕೊಳ್ಳುವುದಕ್ಕೆ ಒಟ್ಟುಗೂಡಿತು. 45  ಜನರ ದೊಡ್ಡ ಗುಂಪನ್ನು ಯೆಹೂದ್ಯರು ಕಂಡು ಹೊಟ್ಟೆಕಿಚ್ಚಿನಿಂದ ತುಂಬಿದವರಾಗಿ ಪೌಲನು ಹೇಳಿದ ವಿಷಯಗಳಿಗೆ ವಿರುದ್ಧವಾಗಿ ದೂಷಣೆಮಾಡಲಾರಂಭಿಸಿದರು. 46  ಆಗ ಪೌಲ ಬಾರ್ನಬರು ಧೈರ್ಯದಿಂದ ಮಾತಾಡುತ್ತಾ ಹೇಳಿದ್ದು: “ದೇವರ ವಾಕ್ಯವನ್ನು ಮೊದಲು ನಿಮಗೆ ತಿಳಿಸುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಿರಸ್ಕರಿಸಿ ನಿಮ್ಮನ್ನು ನಿತ್ಯಜೀವಕ್ಕೆ ಯೋಗ್ಯರೆಂದು ತೀರ್ಪುಮಾಡಿಕೊಳ್ಳದೇ ಹೋದುದರಿಂದ ನಾವು ಅನ್ಯಜನಾಂಗಗಳ ಕಡೆಗೆ ತಿರುಗುತ್ತೇವೆ. 47  ಸತ್ಯಾಂಶವೇನೆಂದರೆ ಯೆಹೋವನು ನಮಗೆ, ‘ನೀನು ಭೂಮಿಯ ಕಟ್ಟಕಡೆಯ ವರೆಗೂ ರಕ್ಷಣೆಯ ಸಾಧನವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ನೇಮಿಸಿದ್ದೇನೆ’ ಎಂದು ಅಪ್ಪಣೆಕೊಟ್ಟಿದ್ದಾನೆ.” 48  ಅನ್ಯಜನಾಂಗಗಳವರು ಇದನ್ನು ಕೇಳಿಸಿಕೊಂಡಾಗ ಬಹಳ ಸಂತೋಷಪಟ್ಟು ಯೆಹೋವನ ವಾಕ್ಯವನ್ನು ಕೊಂಡಾಡಿದರು ಮತ್ತು ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿದ್ದ ಎಲ್ಲರೂ ವಿಶ್ವಾಸಿಗಳಾದರು. 49  ಇದಲ್ಲದೆ ಯೆಹೋವನ ವಾಕ್ಯವು ಇಡೀ ದೇಶದಾದ್ಯಂತ ಹಬ್ಬುತ್ತಾ ಬಂತು. 50  ಆದರೆ ಯೆಹೂದ್ಯರು ದೇವರನ್ನು ಆರಾಧಿಸುತ್ತಿದ್ದ ವಿಖ್ಯಾತರಾದ ಸ್ತ್ರೀಯರನ್ನು ಮತ್ತು ಪಟ್ಟಣದ ಪ್ರಮುಖ ಪುರುಷರನ್ನು ಪ್ರೇರಿಸಿ, ಪೌಲ ಬಾರ್ನಬರ ವಿರುದ್ಧ ಹಿಂಸೆಯನ್ನು ಎಬ್ಬಿಸಿ ಅವರನ್ನು ತಮ್ಮ ಮೇರೆಯಿಂದ ಹೊರಗೆ ಹಾಕಿದರು. 51  ಅವರಿಗೆ ವಿರೋಧವಾಗಿ ಪೌಲ ಬಾರ್ನಬರು ತಮ್ಮ ಪಾದಗಳ ಧೂಳನ್ನು ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು. 52  ಮತ್ತು ಶಿಷ್ಯರು ಆನಂದದಿಂದಲೂ ಪವಿತ್ರಾತ್ಮದಿಂದಲೂ ತುಂಬಿದವರಾಗಿ ಮುಂದುವರಿದರು.

ಪಾದಟಿಪ್ಪಣಿ