ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅ. ಕಾರ್ಯಗಳು 12:1-25

12  ಸುಮಾರು ಅದೇ ಸಮಯದಲ್ಲಿ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ದುರುಪಚರಿಸುವುದಕ್ಕೆ ಕೈಹಾಕಿದನು.  ಅವನು ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.  ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂಬುದನ್ನು ಕಂಡು ಪೇತ್ರನನ್ನು ಸಹ ಬಂಧಿಸಲು ಮುಂದಾದನು. (ಅವು ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ದಿನಗಳಾಗಿದ್ದವು.)  ಪಸ್ಕಹಬ್ಬದ ಬಳಿಕ ಅವನನ್ನು ಜನರ ಮುಂದೆ ಹಾಜರುಪಡಿಸಬೇಕೆಂಬ ಉದ್ದೇಶದಿಂದ ಅವನನ್ನು ಹಿಡಿದು ಸೆರೆಮನೆಯಲ್ಲಿ ಹಾಕಿಸಿ ನಾಲ್ಕು ಮಂದಿ ಸಿಪಾಯಿಗಳಿದ್ದ ನಾಲ್ಕು ಗುಂಪುಗಳನ್ನು ಪಾಳಿಗನುಸಾರ ಕಾಯಲು ನೇಮಿಸಿದನು.  ಹೀಗೆ ಪೇತ್ರನನ್ನು ಸೆರೆಮನೆಯಲ್ಲಿ ಇಡಲಾಯಿತಾದರೂ ಸಭೆಯವರು ಅವನ ಪರವಾಗಿ ತೀವ್ರಾಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಾ ಇದ್ದರು.  ಹೆರೋದನು ಪೇತ್ರನನ್ನು ಜನರ ಮುಂದೆ ಹಾಜರುಪಡಿಸಲಿದ್ದ ದಿವಸದ ಹಿಂದಿನ ರಾತ್ರಿ ಅವನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು; ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.  ಆಗ ಯೆಹೋವನ ದೂತನು ಅವನ ಬಳಿಯಲ್ಲಿ ನಿಂತನು ಮತ್ತು ಆ ಸೆರೆಕೋಣೆಯಲ್ಲಿ ಬೆಳಕು ಹೊಳೆಯಿತು. ಆ ದೂತನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದು ಹೇಳಿದನು. ಆಗಲೇ ಅವನ ಕೈಗಳಿಂದ ಸರಪಣಿ​ಗಳು ಕಳಚಿಬಿದ್ದವು.  ದೇವದೂತನು ಅವನಿಗೆ, “ನಡುಕಟ್ಟಿಕೊಂಡು ನಿನ್ನ ಕೆರ​ಗಳನ್ನು ಹಾಕಿಕೊ” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು. ಕಡೆಗೆ ದೇವದೂತನು ಅವನಿಗೆ, “ನಿನ್ನ ಮೇಲಂಗಿ​ಯನ್ನು ಹಾಕಿಕೊಂಡು ನನ್ನ ಹಿಂದೆಯೇ ಬಾ” ಎಂದನು.  ಅವನು ಹೊರಗೆ ಬಂದು ಅವನನ್ನು ಹಿಂಬಾಲಿಸುತ್ತಾ ಹೋದನು, ಆದರೆ ದೇವದೂತನ ಮೂಲಕ ನಡೆಯುತ್ತಿದ್ದ ಸಂಗತಿ ನಿಜವಾದದ್ದೆಂದು ಅವನಿಗೆ ತಿಳಿದಿರಲಿಲ್ಲ. ತಾನು ದರ್ಶನವನ್ನು ನೋಡುತ್ತಿದ್ದೇನೆಂದು ಅವನು ನೆನಸಿದನು. 10  ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ನಡಿಸುವ ಕಬ್ಬಿಣದ ದ್ವಾರದ ಬಳಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಅಲ್ಲಿಂದ ಹೊರಗೆ ಹೋಗಿ ಒಂದು ಬೀದಿಯನ್ನು ದಾಟಿದ ಬಳಿಕ ತಕ್ಷಣವೇ ದೇವದೂತನು ಅವನನ್ನು ಬಿಟ್ಟುಹೋದನು. 11  ಆಗ ಪೇತ್ರನು ಎಚ್ಚರಗೊಂಡು, “ಯೆಹೋವನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದಿ ಜನರು ಮಾಡಲು ನಿರೀಕ್ಷಿಸುತ್ತಿದ್ದ ಎಲ್ಲ ವಿಷಯ​ಗಳಿಂದಲೂ ನನ್ನನ್ನು ಬಿಡಿಸಿದನೆಂದು ಈಗ ನನಗೆ ನಿಜವಾಗಿಯೂ ತಿಳಿದುಬಂತು” ಎಂದುಕೊಂಡನು. 12  ಇದರ ಕುರಿತು ಆಲೋಚಿಸಿದ ಬಳಿಕ ಅವನು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥಿಸುತ್ತಿದ್ದರು. 13  ಪೇತ್ರನು ಕದವನ್ನು ತಟ್ಟಿದಾಗ, ರೋದೆ ಎಂಬ ​ಹೆಸರಿನ ಸೇವಕಿಯು ಬಾಗಿಲನ್ನು ತೆರೆಯಲು ಬಂದಳು. 14  ಅವಳು ಪೇತ್ರನ ಸ್ವರವನ್ನು ಗುರುತಿಸಿ ಸಂತೋಷಭರಿತಳಾಗಿ ಬಾಗಿಲನ್ನು ತೆರೆಯದೆ ಹಿಂದೆ ಓಡಿಹೋಗಿ ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆಂದು ತಿಳಿಸಿದಳು. 15  ಅವರು ಅವಳಿಗೆ, “ನಿನಗೆ ಹುಚ್ಚುಹಿಡಿದಿದೆ” ಎಂದರು. ಆದರೆ ತಾನು ಹೇಳಿದಂತೆಯೇ ಅವನು ಬಾಗಿಲ ಮುಂದೆ ನಿಂತಿದ್ದಾನೆ ಎಂದು ಅವಳು ದೃಢವಾಗಿ ಹೇಳುತ್ತಾ ಇದ್ದಳು. ಅದಕ್ಕೆ ಅವರು, “ಅದು ಅವನ ದೂತನು” ಎಂದು ಹೇಳಿದರು. 16  ಆದರೆ ಪೇತ್ರನು ಬಾಗಿಲನ್ನು ತಟ್ಟುತ್ತಲೇ ಇದ್ದನು. ಅವರು ಬಾಗಿಲನ್ನು ತೆರೆದಾಗ ಅವನನ್ನು ನೋಡಿ ​ಬೆರಗಾದರು. 17  ಅವನು ಅವರಿಗೆ ಸುಮ್ಮನಿರುವಂತೆ ಕೈಸನ್ನೆ ಮಾಡಿ, ಯೆಹೋವನು ತನ್ನನ್ನು ಸೆರೆಮನೆಯಿಂದ ಹೇಗೆ ಹೊರಗೆ ಕರೆದುಕೊಂಡು ಬಂದನೆಂಬುದನ್ನು ವಿವರ​ವಾಗಿ ತಿಳಿಸುತ್ತಾ, “ಈ ವಿಷಯಗಳನ್ನು ಯಾಕೋಬನಿಗೂ ಸಹೋದರರಿಗೂ ತಿಳಿಸಿರಿ” ಎಂದು ಹೇಳಿದನು. ಹೀಗೆ ತಿಳಿಸಿದ ಬಳಿಕ ಅವನು ಹೊರಬಂದು ಬೇರೊಂದು ಸ್ಥಳಕ್ಕೆ ಹೊರಟುಹೋದನು. 18  ಬೆಳಗಾದಾಗ, ಪೇತ್ರನಿಗೆ ಏನಾಯಿತು ಎಂಬ ವಿಷಯದಲ್ಲಿ ಸಿಪಾಯಿಗಳ ನಡುವೆ ದೊಡ್ಡ ಗೊಂದಲವೇ ಉಂಟಾಯಿತು. 19  ಹೆರೋದನು ಅವನನ್ನು ತುಂಬ ಹುಡುಕಿಸಿ ಅವನು ಸಿಗದೇ ಹೋದುದರಿಂದ ಕಾವಲುಗಾರರನ್ನು ವಿಚಾರಿಸಿ ಅವರಿಗೆ ಶಿಕ್ಷೆವಿಧಿಸುವಂತೆ ಆಜ್ಞಾಪಿಸಿದನು; ಅನಂತರ ಅವನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಸ್ವಲ್ಪಕಾಲ ಕಳೆದನು. 20  ಈಗ ಅವನು ತೂರ್‌ ಮತ್ತು ಸೀದೋನ್‌ ಪಟ್ಟಣಗಳ ಜನರ ವಿರುದ್ಧ ಕಾದಾಡುವ ಮನೋಭಾವದಿಂದಿದ್ದನು. ಆದುದರಿಂದ ಅಲ್ಲಿನ ಜನರೆಲ್ಲರೂ ಒಂದು ಗೂಡಿ ಅವನ ಬಳಿಗೆ ಬಂದು, ಅರಸನ ಶಯನಾಗಾರದ ಮುಖ್ಯಸ್ಥನಾಗಿದ್ದ ಬ್ಲಾಸ್ತನನ್ನು ಒಡಂಬಡಿಸಿದ ಬಳಿಕ ಸಮಾಧಾನಕ್ಕಾಗಿ ಬೇಡಿಕೊಳ್ಳಲಾರಂಭಿಸಿದರು; ಏಕೆಂದರೆ ಈ ಅರಸನ ಊರಿನಿಂದಲೇ ಇವರಿಗೆ ಆಹಾರಧಾನ್ಯವು ಒದಗಿಸಲ್ಪಡುತ್ತಿತ್ತು. 21  ಗೊತ್ತುಮಾಡಿದ ​ದಿನದಂದು ಹೆರೋದನು ರಾಜವಸ್ತ್ರವನ್ನು ಧರಿಸಿಕೊಂಡು ನ್ಯಾಯಸ್ಥಾನದಲ್ಲಿ ಕುಳಿತು ಸಾರ್ವಜನಿಕ ​ಭಾಷಣಮಾಡಲಾರಂಭಿಸಿದನು. 22  ಆಗ ಕೂಡಿಬಂದಿದ್ದ ಜನರು, “ಇದು ಮನುಷ್ಯನ ಧ್ವನಿಯಲ್ಲ, ದೇವರ ಧ್ವನಿಯೇ!” ಎಂದು ಆರ್ಭಟಿಸಿದರು. 23  ಹೆರೋದನು ದೇವರಿಗೆ ಮಹಿಮೆಯನ್ನು ಸಲ್ಲಿಸದ ಕಾರಣ ಕೂಡಲೆ ಯೆಹೋವನ ದೂತನು ಅವನನ್ನು ಹೊಡೆದನು; ಅವನು ಹುಳಬಿದ್ದು ಸತ್ತನು. 24  ಆದರೆ ಯೆಹೋವನ ವಾಕ್ಯವು ವೃದ್ಧಿಯಾಗಿ ಹಬ್ಬುತ್ತಾ ಹೋಯಿತು. 25  ಬಾರ್ನಬ ಮತ್ತು ಸೌಲರು ಯೆರೂಸಲೇಮಿನಲ್ಲಿ ಪರಿಹಾರ ಕಾರ್ಯವನ್ನು ಪೂರ್ಣ ರೀತಿಯಲ್ಲಿ ಮುಗಿಸಿದ ಬಳಿಕ ಮಾರ್ಕ ಎಂಬ ಉಪನಾಮವಿದ್ದ ಯೋಹಾನನನ್ನು ತಮ್ಮೊಂದಿಗೆ ಕರೆದುಕೊಂಡು ಅಲ್ಲಿಂದ ಹಿಂದಿರುಗಿದರು.

ಪಾದಟಿಪ್ಪಣಿ