ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅ. ಕಾರ್ಯಗಳು 10:1-48

10  ಕೈಸರೈಯದಲ್ಲಿ ಇಟಲಿಯ ದಳ ಎಂದು ಕರೆಯಲ್ಪಡುತ್ತಿದ್ದ ಒಂದು ದಳದ ಸೇನಾಧಿಕಾರಿಯಾದ ಕೊರ್ನೇಲ್ಯನೆಂಬ ಒಬ್ಬ ಮನುಷ್ಯನಿದ್ದನು.  ಅವನು ದೇವಭಕ್ತನೂ ತನ್ನ ಮನೆಯವರೆಲ್ಲರೊಂದಿಗೆ ಸೇರಿ ದೇವರಿಗೆ ಭಯಪಡುವವನೂ ಆಗಿದ್ದನು; ಅವನು ಜನರಿಗೆ ಬಹಳವಾಗಿ ದಾನಧರ್ಮಗಳನ್ನು ಮಾಡುತ್ತಾ ದೇವರನ್ನು ನಿತ್ಯವೂ ಯಾಚಿಸುತ್ತಾ ಇದ್ದನು.  ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಅವನು ಒಂದು ದರ್ಶನದಲ್ಲಿ ದೇವರ ಒಬ್ಬ ದೂತನು ತನ್ನ ಬಳಿಗೆ ಬಂದು, “ಕೊರ್ನೇಲ್ಯನೇ” ಎಂದು ಕರೆಯುವುದನ್ನು ಸ್ಪಷ್ಟವಾಗಿ ಕಂಡನು.  ಆಗ ಅವನು ಆ ದೇವದೂತನನ್ನು ದಿಟ್ಟಿಸಿ ನೋಡಿ ಭಯಭೀತನಾಗಿ, “ಏನು ಸ್ವಾಮಿ?” ಎಂದನು. ಅದಕ್ಕೆ ಅವನು, “ನಿನ್ನ ಪ್ರಾರ್ಥನೆಗಳೂ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿಬಂದಿವೆ.  ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಸಿಕೊ.  ಅವನು ಚರ್ಮಕಾರನಾದ ಸೀಮೋನನ ಮನೆಯಲ್ಲಿ ತಂಗಿದ್ದಾನೆ; ಅವನ ಮನೆಯು ಸಮುದ್ರದ ಬಳಿಯಲ್ಲಿದೆ” ಎಂದು ಹೇಳಿದನು.  ಅವನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದ ಕೂಡಲೆ ಅವನು ತನ್ನ ಮನೆಯ ಸೇವಕರಲ್ಲಿ ಇಬ್ಬರನ್ನು ಮತ್ತು ಯಾವಾಗಲೂ ತನ್ನ ಜೊತೆಗೆ ಇರುತ್ತಿದ್ದ ಸೈನಿಕರಲ್ಲಿ ಒಬ್ಬ ದೇವಭಕ್ತನನ್ನು ಕರೆದು,  ಅವರಿಗೆ ಎಲ್ಲ ವಿಷಯಗಳನ್ನು ತಿಳಿಸಿ ಯೊಪ್ಪಕ್ಕೆ ಕಳುಹಿಸಿದನು.  ಮರುದಿನ ಅವರು ಪ್ರಯಾಣಿಸುತ್ತಾ ಆ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಗೆ ಪ್ರಾರ್ಥಿಸಲಿಕ್ಕಾಗಿ ಪೇತ್ರನು ಮಾಳಿಗೆಯನ್ನು ಹತ್ತಿದನು. 10  ಆದರೆ ಅವನಿಗೆ ತುಂಬ ಹಸಿವೆಯಾಗಿ ಊಟಮಾಡಲು ಬಯಸಿದನು. ಮನೆಯವರು ಊಟವನ್ನು ಸಿದ್ಧಪಡಿಸುತ್ತಿದ್ದಾಗ, ಅವನು ಧ್ಯಾನಪರವಶನಾಗಿ 11  ಆಕಾಶವು ತೆರೆದಿರುವುದನ್ನೂ ನಾಲ್ಕು ಮೂಲೆಗಳಲ್ಲಿ ಹಿಡಿಯಲ್ಪಟ್ಟಿದ್ದ ದೊಡ್ಡ ನಾರುಬಟ್ಟೆಯ ಹಾಸಿನಂತಿರುವ ಯಾವುದೋ ಪಾತ್ರೆ ಕೆಳಗಿಳಿಸಲ್ಪಡುತ್ತಿರುವುದನ್ನೂ ಕಂಡನು; 12  ಅದರಲ್ಲಿ ಎಲ್ಲ ಜಾತಿಯ ಚತುಷ್ಪಾದಿ ಪ್ರಾಣಿಗಳೂ ನೆಲದ ಮೇಲೆ ಹರಿದಾಡುವ ಜೀವಿಗಳೂ ಆಕಾಶದ ಪಕ್ಷಿಗಳೂ ಇದ್ದವು. 13  ಆಗ, “ಪೇತ್ರನೇ ಎದ್ದು ಕಡಿದು ತಿನ್ನು” ಎಂಬ ವಾಣಿಯನ್ನು ಅವನು ಕೇಳಿಸಿಕೊಂಡನು. 14  ಅದಕ್ಕೆ ಪೇತ್ರನು, “ಖಂಡಿತವಾಗಿಯೂ ಬೇಡ ಸ್ವಾಮಿ. ನಾನು ಎಂದೂ ಹೊಲೆಯಾದ ಮತ್ತು ಅಶುದ್ಧವಾದ ಯಾವುದನ್ನೂ ತಿಂದವನಲ್ಲ” ಎಂದನು. 15  ಆಗ ಆ ವಾಣಿಯು ಎರಡನೆಯ ಸಲ ಅವನಿಗೆ, “ದೇವರು ಶುದ್ಧೀಕರಿಸಿರುವುದನ್ನು ನೀನು ಹೊಲೆಯಾದದ್ದೆಂದು ಹೇಳುವುದನ್ನು ನಿಲ್ಲಿಸು” ಎಂದಿತು. 16  ಹೀಗೆ ಮೂರನೆಯ ಸಲ ಸಂಭವಿಸಿದ ಬಳಿಕ, ತಕ್ಷಣವೇ ಆ ಪಾತ್ರೆಯು ಆಕಾಶಕ್ಕೆ ಎತ್ತಲ್ಪಟ್ಟಿತು. 17  ಪೇತ್ರನು ತಾನು ನೋಡಿದ ದರ್ಶನದ ಅರ್ಥವೇನಾಗಿರಬಹುದೆಂದು ತನ್ನೊಳಗೇ ಕಳವಳಪಡುತ್ತಿದ್ದಾಗ, ಕೊರ್ನೇಲ್ಯನಿಂದ ಕಳುಹಿಸಲ್ಪಟ್ಟ ಮನುಷ್ಯರು ವಿಚಾರಿಸಿ ಸೀಮೋನನ ಮನೆಯನ್ನು ಕಂಡುಕೊಂಡು ಆ ಮನೆಯ ಬಾಗಿಲ ಬಳಿಯಲ್ಲೇ ನಿಂತು, 18  ಪೇತ್ರನೆನಿಸಿಕೊಳ್ಳುವ ಸೀಮೋನನು ಅಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು. 19  ಪೇತ್ರನು ಆ ದರ್ಶನದ ಕುರಿತು ಮನಸ್ಸಿನಲ್ಲಿ ಆಲೋಚಿಸುತ್ತಿದ್ದಾಗಲೇ ದೇವರಾತ್ಮವು ಅವನಿಗೆ, “ನೋಡು, ಮೂವರು ಮನುಷ್ಯರು ನಿನ್ನನ್ನು ಹುಡುಕುತ್ತಿದ್ದಾರೆ. 20  ನೀನು ಎದ್ದು ಕೆಳಗಿಳಿದು ಸ್ವಲ್ಪವೂ ಸಂಶಯಪಡದೆ ಅವರೊಂದಿಗೆ ಹೋಗು; ಏಕೆಂದರೆ ನಾನೇ ಅವರನ್ನು ಕಳುಹಿಸಿದ್ದೇನೆ” ಎಂದು ಹೇಳಿತು. 21  ಆಗ ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಹೋಗಿ, “ನೀವು ಹುಡುಕುತ್ತಿರುವ ಮನುಷ್ಯನು ನಾನೇ. ನೀವು ಬಂದಿರುವ ಕಾರಣವೇನು?” ಎಂದು ಕೇಳಿದನು. 22  ಅದಕ್ಕೆ ಅವರು, “ನೀತಿವಂತನೂ ದೇವಭಯವುಳ್ಳವನೂ ಯೆಹೂದ್ಯರ ಇಡೀ ಜನಾಂಗದಿಂದ ಒಳ್ಳೆಯ ಹೆಸರು ಪಡೆದವನೂ ಆಗಿರುವ ಸೇನಾಧಿಕಾರಿಯಾದ ಕೊರ್ನೇಲ್ಯನಿಗೆ, ನಿನ್ನನ್ನು ಅವನ ಮನೆಗೆ ಕರೆತಂದು ನೀನು ಹೇಳಲಿಕ್ಕಿರುವ ವಿಷಯಗಳನ್ನು ಕೇಳಿಸಿಕೊಳ್ಳುವಂತೆ ಒಬ್ಬ ಪವಿತ್ರ ದೂತನ ಮೂಲಕ ದೇವರಿಂದ ಆಜ್ಞೆಯು ಕೊಡಲ್ಪಟ್ಟಿದೆ” ಎಂದರು. 23  ಇದನ್ನು ಕೇಳಿ ಪೇತ್ರನು ಅವರನ್ನು ಒಳಕ್ಕೆ ಕರೆದು ಉಪಚರಿಸಿದನು. ಮರುದಿನ ಅವನು ಎದ್ದು ಅವರೊಂದಿಗೆ ಹೊರಟನು; ಯೊಪ್ಪದಲ್ಲಿದ್ದ ಕೆಲವು ಸಹೋದರರೂ ಅವನೊಂದಿಗೆ ಹೋದರು. 24  ಮರುದಿನ ಅವನು ಕೈಸರೈಯಕ್ಕೆ ಬಂದನು. ಕೊರ್ನೇಲ್ಯನು ಇವರನ್ನು ಎದುರುನೋಡುತ್ತಾ ಇದ್ದನು ಮತ್ತು ತನ್ನ ಬಂಧುಬಳಗದವರನ್ನೂ ಆಪ್ತ ಸ್ನೇಹಿತರನ್ನೂ ಕರೆಸಿಕೊಂಡಿದ್ದನು. 25  ಪೇತ್ರನು ಮನೆಯನ್ನು ಪ್ರವೇಶಿಸಿದಾಗ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಪಾದಗಳಿಗೆ ಬಿದ್ದು ಪ್ರಣಾಮಮಾಡಿದನು. 26  ಆದರೆ ಪೇತ್ರನು ಅವನನ್ನು ಮೇಲೆತ್ತುತ್ತಾ, “ಏಳು, ನಾನೂ ಒಬ್ಬ ಮನುಷ್ಯನೇ” ಎಂದು ಹೇಳಿದನು. 27  ಅವನೊಂದಿಗೆ ಸಂಭಾಷಣೆಮಾಡುತ್ತಾ ಮನೆಯೊಳಗೆ ಹೋದಾಗ ಅಲ್ಲಿ ಅನೇಕರು ಒಟ್ಟುಗೂಡಿರುವುದನ್ನು ಕಂಡು 28  ಅವನು ಅವರಿಗೆ, “ಒಬ್ಬ ಯೆಹೂದ್ಯನು ಇನ್ನೊಂದು ಕುಲದ ಮನುಷ್ಯನೊಂದಿಗೆ ಹೊಕ್ಕುಬಳಕೆಮಾಡುವುದು ಅಥವಾ ಸಮೀಪಿಸುವುದು ಎಷ್ಟು ಧರ್ಮನಿಷಿದ್ಧವಾಗಿದೆ ಎಂಬುದು ನಿಮಗೆ ತಿಳಿದೇ ಇದೆ; ಆದರೂ ಯಾವನೇ ಮನುಷ್ಯನನ್ನು ಹೊಲೆಯಾದವನು ಅಥವಾ ಅಶುದ್ಧನು ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. 29  ಆದುದರಿಂದ ನನ್ನನ್ನು ಕರೇಕಳುಹಿಸಿದಾಗ ಯಾವುದೇ ಆಕ್ಷೇಪಣೆಯಿಲ್ಲದೆ ನಾನು ಬಂದೆ. ಈಗ ನೀವು ಯಾವ ಕಾರಣಕ್ಕಾಗಿ ನನ್ನನ್ನು ಕರೇಕಳುಹಿಸಿದಿರಿ ಎಂಬುದನ್ನು ತಿಳಿಸುವಂತೆ ಕೇಳಿಕೊಳ್ಳುತ್ತೇನೆ” ಎಂದನು. 30  ಅದಕ್ಕೆ ಕೊರ್ನೇಲ್ಯನು, “ನಾಲ್ಕು ದಿವಸಗಳ ಹಿಂದೆ ಈ ಸಮಯದಲ್ಲಿ ಅಂದರೆ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯದಲ್ಲಿ ನಾನು ನನ್ನ ಮನೆಯಲ್ಲಿ ಪ್ರಾರ್ಥನೆಮಾಡುತ್ತಿದ್ದಾಗ, ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತು, 31  ‘ಕೊರ್ನೇಲ್ಯನೇ, ನಿನ್ನ ಪ್ರಾರ್ಥನೆಯು ಅನುಗ್ರಹಪೂರ್ವಕವಾಗಿ ಕೇಳಲ್ಪಟ್ಟಿದೆ ಮತ್ತು ನಿನ್ನ ದಾನಧರ್ಮಗಳು ದೇವರ ಸನ್ನಿಧಾನದಲ್ಲಿ ಜ್ಞಾಪಿಸಿಕೊಳ್ಳಲ್ಪಟ್ಟಿವೆ. 32  ಆದುದರಿಂದ ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಸಿಕೊ. ಆ ಮನುಷ್ಯನು ಸಮುದ್ರದ ಬಳಿಯಲ್ಲಿ ವಾಸವಾಗಿರುವ ಚರ್ಮಕಾರನಾದ ಸೀಮೋನನ ಮನೆಯಲ್ಲಿ ತಂಗಿದ್ದಾನೆ’ ಎಂದನು. 33  ಹೀಗಾಗಿ ನಾನು ಕೂಡಲೆ ನಿನ್ನನ್ನು ಕರೆತರಲಿಕ್ಕಾಗಿ ಜನರನ್ನು ಕಳುಹಿಸಿದೆ ಮತ್ತು ನೀನು ಇಲ್ಲಿಗೆ ಬಂದದ್ದು ಒಳ್ಳೇದಾಯಿತು. ಯೆಹೋವನು ನಿನಗೆ ಹೇಳುವಂತೆ ಆಜ್ಞಾಪಿಸಿರುವ ಎಲ್ಲ ವಿಷಯಗಳನ್ನು ಕೇಳಿಸಿಕೊಳ್ಳಲು ನಾವೆಲ್ಲರೂ ಈಗ ದೇವರ ಸನ್ನಿಧಾನದಲ್ಲಿ ಕೂಡಿಬಂದಿದ್ದೇವೆ” ಎಂದು ಹೇಳಿದನು. 34  ಆಗ ಪೇತ್ರನು ಮಾತಾಡಲಾರಂಭಿಸಿ ಹೇಳಿದ್ದು: “ದೇವರು ಪಕ್ಷಪಾತಿಯಲ್ಲ ಎಂಬುದು ನನಗೆ ನಿಶ್ಚಯವಾಗಿ ತಿಳಿದದೆ. 35  ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ. 36  ಯೇಸು ಕ್ರಿಸ್ತನಿಂದ ಸಾಧ್ಯವಾಗಿರುವ ಶಾಂತಿಯ ಕುರಿತಾದ ಸುವಾರ್ತೆಯನ್ನು ಅಂದರೆ ಇವನೇ ಎಲ್ಲ ಜನಗಳಿಗೂ ಕರ್ತನಾಗಿದ್ದಾನೆ ಎಂಬುದನ್ನು ಸಾರುವಂತೆ ಆತನು ಇಸ್ರಾಯೇಲ್ಯರಿಗೆ ತಿಳಿಯಪಡಿಸಿದನು. 37  ಯೋಹಾನನು ಸಾರಿದ ದೀಕ್ಷಾಸ್ನಾನದ ಬಳಿಕ ಗಲಿಲಾಯದಿಂದ ಆರಂಭಿಸಿ ಯೂದಾಯದಾದ್ಯಂತ ಯಾವ ವಿಷಯದ ಕುರಿತು ಮಾತಾಡಲಾಗುತ್ತಿತ್ತು ಎಂಬುದು ನಿಮಗೆ ತಿಳಿದಿದೆ. 38  ಅದೇನೆಂದರೆ, ನಜರೇತಿನವನಾದ ಯೇಸುವನ್ನು ದೇವರು ಪವಿತ್ರಾತ್ಮದಿಂದಲೂ ಶಕ್ತಿಯಿಂದಲೂ ಅಭಿಷೇಕಿಸಿದ್ದನ್ನೂ ದೇವರು ಅವನೊಂದಿಗಿದ್ದುದರಿಂದ ಅವನು ದೇಶದಾದ್ಯಂತ ಹೋಗಿ ಒಳ್ಳೇದನ್ನು ಮಾಡುತ್ತಾ ಪಿಶಾಚನಿಂದ ಪೀಡಿಸಲ್ಪಟ್ಟವರೆಲ್ಲರನ್ನು ಸ್ವಸ್ಥಪಡಿಸಿದ್ದನ್ನೂ ನೀವು ಬಲ್ಲಿರಷ್ಟೆ. 39  ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸಲೇಮಿನಲ್ಲಿಯೂ ಅವನು ಮಾಡಿದ ಎಲ್ಲ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ; ಆದರೆ ಅವರು ಸಹ ಅವನನ್ನು ಕಂಬಕ್ಕೆ ತೂಗಹಾಕಿ ಕೊಂದರು. 40  ದೇವರು ಅವನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಕಾಣಿಸಿಕೊಳ್ಳುವಂತೆ ಮಾಡಿದನು; 41  ಅವನು ಎಲ್ಲ ಜನರಿಗೆ ಕಾಣಿಸಿಕೊಳ್ಳದೆ ದೇವರಿಂದ ಮುಂಚಿತವಾಗಿಯೇ ನೇಮಿಸಲ್ಪಟ್ಟ ಸಾಕ್ಷಿಗಳಾದ ನಮಗೆ ಕಾಣಿಸಿಕೊಂಡನು. ಅವನು ಸತ್ತವರೊಳಗಿಂದ ಜೀವಿತನಾಗಿ ಎದ್ದ ಬಳಿಕ ನಾವು ಅವನೊಂದಿಗೆ ಅನ್ನಪಾನಗಳನ್ನು ತೆಗೆದುಕೊಂಡೆವು. 42  ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಿಸಲ್ಪಟ್ಟಿರುವವನು ಇವನೇ ಎಂದು ಜನರಿಗೆ ಸಾರಿಹೇಳುವಂತೆ ಮತ್ತು ಕೂಲಂಕಷವಾದ ಸಾಕ್ಷಿಯನ್ನು ನೀಡುವಂತೆ ಅವನು ನಮಗೆ ಆಜ್ಞಾಪಿಸಿದನು. 43  ಅವನಲ್ಲಿ ನಂಬಿಕೆಯನ್ನಿಡುವ ಪ್ರತಿಯೊಬ್ಬನೂ ಅವನ ಹೆಸರಿನ ಮೂಲಕ ತನ್ನ ಪಾಪಗಳಿಗೆ ಕ್ಷಮಾಪಣೆಯನ್ನು ಹೊಂದುತ್ತಾನೆ ಎಂದು ಎಲ್ಲ ಪ್ರವಾದಿಗಳು ಇವನ ಕುರಿತು ಸಾಕ್ಷಿನೀಡಿದ್ದಾರೆ.” 44  ಪೇತ್ರನು ಈ ವಿಷಯಗಳ ಕುರಿತು ಇನ್ನೂ ಮಾತಾಡುತ್ತಿರುವಾಗಲೇ ವಾಕ್ಯಕ್ಕೆ ಕಿವಿಗೊಡುತ್ತಿದ್ದವರೆಲ್ಲರ ಮೇಲೆ ಪವಿತ್ರಾತ್ಮವು ಬಂತು. 45  ಅನ್ಯಜನಾಂಗಗಳ ಜನರ ಮೇಲೆಯೂ ಪವಿತ್ರಾತ್ಮದ ಉಚಿತ ವರವು ಸುರಿಸಲ್ಪಟ್ಟದ್ದರಿಂದ ಪೇತ್ರನೊಂದಿಗೆ ಬಂದಿದ್ದ ಸುನ್ನತಿಯಾಗಿದ್ದ ನಂಬಿಗಸ್ತರು ಆಶ್ಚರ್ಯಪಟ್ಟರು. 46  ಏಕೆಂದರೆ ಅವರು ಬೇರೆ ಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಅವರು ಕೇಳಿಸಿಕೊಂಡರು. ಆಗ ಪೇತ್ರನು, 47  “ನಮ್ಮಂತೆಯೇ ಪವಿತ್ರಾತ್ಮವನ್ನು ಹೊಂದಿದವರಾದ ಇವರಿಗೆ ನೀರಿನಿಂದ ದೀಕ್ಷಾಸ್ನಾನವಾಗದಂತೆ ಯಾರಾದರೂ ಅಭ್ಯಂತರ ಮಾಡಬಲ್ಲರೇ?” ಎಂದು ಕೇಳಿದನು. 48  ಹೀಗೆ ಹೇಳಿದ ಬಳಿಕ ಅವನು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಅವರಿಗೆ ಅಪ್ಪಣೆಕೊಟ್ಟನು. ಆ ಬಳಿಕ ಅವರು ಇನ್ನೂ ಕೆಲವು ದಿವಸ ತಮ್ಮೊಂದಿಗೆ ಉಳಿಯುವಂತೆ ಅವನನ್ನು ಕೇಳಿಕೊಂಡರು.

ಪಾದಟಿಪ್ಪಣಿ