ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಸುಖೀ ಸಂಸಾರ ಸಾಧ್ಯ!

 ಭಾಗ 7

ಮಕ್ಕಳನ್ನು ಮಾರ್ಗದರ್ಶಿಸಿ

ಮಕ್ಕಳನ್ನು ಮಾರ್ಗದರ್ಶಿಸಿ

“ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ.”—ಧರ್ಮೋಪದೇಶಕಾಂಡ 6:6, 7

ಯೆಹೋವನು ಕುಟುಂಬವನ್ನು ಸ್ಥಾಪಿಸಿದಾಗ ಮಕ್ಕಳನ್ನು ಬೆಳೆಸುವ ಹೊಣೆಯನ್ನು ಹೆತ್ತವರಿಗೆ ಕೊಟ್ಟನು. (ಕೊಲೊಸ್ಸೆ 3:20) ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಆದ್ದರಿಂದ ಹೆತ್ತವರೇ, ನಿಮ್ಮ ಮಗು ಯೆಹೋವನನ್ನು ಪ್ರೀತಿಸುವಂತೆ ಕಲಿಸುವ ಮತ್ತು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಯುವಂತೆ ಮಾಡುವ ಕರ್ತವ್ಯ ನಿಮ್ಮದೇ. (2 ತಿಮೊಥೆಯ 1:5; 3:15) ಇದನ್ನು ಮಾಡಲು ನಿಮ್ಮ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಿ. ಜೊತೆಗೆ ನೀವು ಅವರಿಗೆ ಉತ್ತಮ ಮಾದರಿಯಾಗಿರಿ. ದೇವರ ವಾಕ್ಯ ಮೊದಲು ನಿಮ್ಮ ಹೃದಯದಲ್ಲಿ ಬೇರೂರಿದ್ದರೆ ಮಾತ್ರ ನಿಮ್ಮ ಮಕ್ಕಳಿಗೆ ಅದನ್ನು ಚೆನ್ನಾಗಿ ಕಲಿಸಲು ಸಾಧ್ಯ.—ಕೀರ್ತನೆ 40:8.

 1 ಮಕ್ಕಳು ಮನಬಿಚ್ಚಿ ಮಾತಾಡಲು ನೆರವಾಗಿ

ಬೈಬಲಿನ ಹಿತವಚನ: “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ . . . ಆಗಿರಬೇಕು.” (ಯಾಕೋಬ 1:19) ನಿಮ್ಮ ಮಕ್ಕಳು ನಿಮ್ಮೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಬೇಕೆಂದು ನೀವು ಬಯಸುತ್ತೀರಲ್ಲವೇ? ಹಾಗಾದರೆ ನಿಮ್ಮೊಂದಿಗೆ ಮಾತಾಡಬೇಕೆಂದು ಅವರಿಗನಿಸಿದಾಗೆಲ್ಲಾ ನೀವು ಮಾತಾಡಲು ಸಿದ್ಧರಿದ್ದೀರೆಂದು ತೋರಿಸಿಕೊಡಿ. ನೀವು ಶಾಂತರಾಗಿರುವ ಮೂಲಕ ಅವರು ತಮ್ಮ ಭಾವನೆಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ವ್ಯಕ್ತಪಡಿಸಲು ನೆರವಾಗಿ. (ಯಾಕೋಬ 3:18) ನೀವು ಒರಟಾಗಿ ಮಾತಾಡುತ್ತೀರೆಂದು ಅಥವಾ ಮಕ್ಕಳು ಮಾತಾಡಲಾರಂಭಿಸಿದ ಕೂಡಲೇ ಅವರ ತಪ್ಪನ್ನು ಎತ್ತಿತೋರಿಸುತ್ತೀರೆಂದು ಅವರಿಗನಿಸುವುದಾದರೆ, ಅವರೆಂದಿಗೂ ನಿಮ್ಮೊಂದಿಗೆ ಮನಬಿಚ್ಚಿ ಮಾತಾಡುವುದಿಲ್ಲ. ನಿಮ್ಮ ಮಕ್ಕಳೊಂದಿಗೆ ಮಾತಾಡುವಾಗ ತಾಳ್ಮೆಯಿಂದಿರಿ, ನೀವು ಅವರನ್ನು ಪ್ರೀತಿಸುತ್ತೀರೆಂದು ಅವರಿಗೆ ಗೊತ್ತಾಗಲಿ.—ಮತ್ತಾಯ 3:17; 1 ಕೊರಿಂಥ 8:1.

ಹೀಗೆ ಮಾಡಿ:

  • ನಿಮ್ಮ ಮಕ್ಕಳು ಮಾತಾಡಲು ಬಯಸುವಾಗೆಲ್ಲಾ ಅವರಿಗೆ ಸಮಯಕೊಡಿ

  • ಸಮಸ್ಯೆ ಎದುರಾದಾಗ ಮಾತ್ರವಲ್ಲದೆ ಯಾವಾಗಲೂ ನಿಮ್ಮ ಮಕ್ಕಳೊಂದಿಗೆ ಮಾತಾಡುತ್ತಿರಿ

2 ಮಕ್ಕಳ ಮನಸ್ಸಿನಲ್ಲೇನಿದೆ ಎಂದು ತಿಳಿದುಕೊಳ್ಳಿ

ಬೈಬಲಿನ ಹಿತವಚನ: “ಕಾರ್ಯವನ್ನು ಜ್ಞಾನದಿಂದ ನಡೆಸುವವನು ಒಳ್ಳೆಯದನ್ನು ಪಡೆಯುವನು.” (ಜ್ಞಾನೋಕ್ತಿ 16:20, ಪವಿತ್ರ ಗ್ರಂಥ) ನಿಮ್ಮ ಮಕ್ಕಳು ಏನಾದರೂ ಹೇಳುವಾಗ ಅವರ ಮಾತಿಗೆ ಕಿವಿಗೊಟ್ಟರಷ್ಟೇ ಸಾಲದು, ಅದರ ಹಿಂದೆ ಅಡಗಿರುವ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಒಂದು ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಹೇಳುವ, ಹಿಂದೆ ಮುಂದೆ ಯೋಚಿಸದೆ ಬಾಯಿಗೆ ಬಂದದ್ದನ್ನು ಹೇಳಿಬಿಡುವ ಸ್ವಭಾವ ಯುವಜನರಲ್ಲಿರುತ್ತದೆ. ಆದ್ದರಿಂದ ಹೆತ್ತವರೇ ಬೇಗನೆ ಅಸಮಾಧಾನಗೊಳ್ಳಬೇಡಿ. (ಜ್ಞಾನೋಕ್ತಿ 19:11) ಏಕೆಂದರೆ “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ” ಜ್ಞಾನೋಕ್ತಿ ಇದೆ.—ಜ್ಞಾನೋಕ್ತಿ 18:13.

ಹೀಗೆ ಮಾಡಿ:

  • ನಿಮ್ಮ ಮಕ್ಕಳು ಅದೇನೇ ಹೇಳುತ್ತಿರಲಿ ಮಧ್ಯದಲ್ಲಿ ಬಾಯಿ ಹಾಕಬೇಡಿ ಅಥವಾ ಅತಿಯಾಗಿ ಪ್ರತಿಕ್ರಿಯಿಸಬೇಡಿ

  • ಅವರ ವಯಸ್ಸಿನಲ್ಲಿ ನಿಮಗೆ ಹೇಗನಿಸುತ್ತಿತ್ತು, ಯಾವುದು ನಿಮಗೆ ಪ್ರಾಮುಖ್ಯವಾಗಿತ್ತು ಎಂದು ನೆನಪುಮಾಡಿಕೊಳ್ಳಿ

 3 ನಿಮ್ಮಲ್ಲಿನ ಐಕ್ಯತೆ ತೋರಿಬರಲಿ

ಬೈಬಲಿನ ಹಿತವಚನ: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:8) ಯೆಹೋವನು ತಂದೆ, ತಾಯಿ ಇಬ್ಬರಿಗೂ ಮಕ್ಕಳ ಮೇಲೆ ಅಧಿಕಾರವನ್ನು ಕೊಟ್ಟಿದ್ದಾನೆ. ಆದ್ದರಿಂದ ನಿಮಗೆ ಗೌರವ ಮತ್ತು ವಿಧೇಯತೆ ತೋರಿಸುವಂತೆ ನೀವು ನಿಮ್ಮ ಮಕ್ಕಳಿಗೆ ಕಲಿಸಬೇಕು. (ಎಫೆಸ 6:1-3) ಹೆತ್ತವರೇ ನಿಮ್ಮಲ್ಲಿ ‘ಏಕಮನಸ್ಸು’ ಇಲ್ಲದಿದ್ದರೆ ನಿಮ್ಮ ಮಕ್ಕಳು ಅದನ್ನು ಬೇಗನೆ ಕಂಡುಹಿಡಿದುಬಿಡುತ್ತಾರೆ. (1 ಕೊರಿಂಥ 1:10) ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಮಕ್ಕಳ ಮುಂದೆ ವ್ಯಕ್ತಪಡಿಸಬೇಡಿ. ಒಂದುವೇಳೆ ಹಾಗೆ ಮಾಡಿದರೆ, ನಿಮ್ಮ ಮೇಲೆ ಅವರಿಗಿರುವ ಗೌರವ ಕಡಿಮೆಯಾಗಿಬಿಡುತ್ತದೆ.

ಹೀಗೆ ಮಾಡಿ:

  • ನಿಮ್ಮ ಮಕ್ಕಳಿಗೆ ಶಿಸ್ತು ಕೊಡುವ ಬಗ್ಗೆ ನೀವಿಬ್ಬರೂ ಚರ್ಚಿಸಿ ಒಂದೇ ನಿರ್ಣಯಕ್ಕೆ ಬನ್ನಿ

  • ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ನಿಮ್ಮಿಬ್ಬರಿಗೆ ಬೇರೆ ಬೇರೆ ಅಭಿಪ್ರಾಯವಿರುವಲ್ಲಿ, ನಿಮ್ಮ ಸಂಗಾತಿಗೆ ಯಾಕೆ ಬೇರೆ ಅಭಿಪ್ರಾಯವಿದೆಯೆಂದು ತಿಳಿದುಕೊಳ್ಳಲು ಪ್ರಯತ್ನಿಸಿ

 4 ಮೊದಲೇ ಯೋಜಿಸಿ

ಬೈಬಲಿನ ಹಿತವಚನ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು.” (ಜ್ಞಾನೋಕ್ತಿ 22:6) ನಿಮ್ಮ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ಕೊಡಬೇಕು ಎಂದು ಯೋಚಿಸಿದರಷ್ಟೇ ಸಾಲದು, ಅದಕ್ಕೊಂದು ಯೋಜನೆ ಬೇಕು. ಅಂದರೆ ಹೇಗೆ ತರಬೇತಿ ನೀಡಬೇಕು, ಹೇಗೆ ಶಿಸ್ತು ನೀಡಬೇಕು ಅಂತ ಮೊದಲೇ ಯೋಜಿಸಬೇಕು. (ಕೀರ್ತನೆ 127:4; ಜ್ಞಾನೋಕ್ತಿ 29:17) ಶಿಸ್ತು ಅಂದರೆ ಶಿಕ್ಷೆ ಕೊಡುವುದು ಮಾತ್ರವೇ ಅಲ್ಲ, ಒಂದು ನಿಯಮವನ್ನು ಇಡುವಾಗ ಅದನ್ನು ಯಾಕಿಡಲಾಗಿದೆ ಅಂತ ನಿಮ್ಮ ಮಕ್ಕಳಿಗೆ ಮನಗಾಣಿಸುವುದೂ ಸೇರಿದೆ. (ಜ್ಞಾನೋಕ್ತಿ 28:7) ಜೊತೆಗೆ ದೇವರ ವಾಕ್ಯದ ಕಡೆಗೆ ಪ್ರೀತಿ ಬೆಳೆಸಿಕೊಳ್ಳಲು ಮತ್ತು ಅದರ ತತ್ವಗಳನ್ನು ವಿವೇಚಿಸಿ ತಿಳಿದುಕೊಳ್ಳಲು ಕಲಿಸಿ. (ಕೀರ್ತನೆ 1:2) ಹೀಗೆ ಮಾಡುವಾಗ ನಿಮ್ಮ ಮಕ್ಕಳು ಉತ್ತಮ ಮನಸ್ಸಾಕ್ಷಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.—ಇಬ್ರಿಯ 5:14.

ಹೀಗೆ ಮಾಡಿ:

  • ನಿಮ್ಮ ಮಕ್ಕಳು ಯೆಹೋವನನ್ನು ಒಬ್ಬ ನಿಜ ಹಾಗೂ ಭರವಸಾರ್ಹ ವ್ಯಕ್ತಿಯಾಗಿ ವೀಕ್ಷಿಸುತ್ತಿದ್ದಾರಾ ಎಂದು ಖಚಿತಪಡಿಸಿಕೊಳ್ಳಿ

  • ಇಂಟರ್‌ನೆಟ್‌ ಅಥವಾ ಸೋಶಿಯಲ್‌ ನೆಟ್‌ವರ್ಕ್‌ಗಳಂತಹ ವಿಷಯಗಳಿಂದ ಎದುರಾಗಬಲ್ಲ ನೈತಿಕ ಅಪಾಯಗಳನ್ನು ಗುರುತಿಸಿ, ಅವುಗಳಿಂದ ದೂರವಿರುವುದು ಹೇಗೆಂದು ಕಲಿತುಕೊಳ್ಳಲು ಸಹಾಯಮಾಡಿ. ವಿಕೃತ ಕಾಮುಕರ ಕೈಗೆ ಸಿಲುಕದೆ ತಪ್ಪಿಸಿಕೊಳ್ಳುವುದು ಹೇಗೆಂದು ಕಲಿಸಿ

“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು . . . ”