ಅಮೆರಿಕ

ಗಿಲ್ಯಡ್‌ ಶಾಲೆ, ಪ್ಯಾಟರ್ಸನ್‌, ನ್ಯೂಯಾರ್ಕ್‌

ಪನಾಮ

ಅನೇಕ ವರ್ಷಗಳಿಂದಲೂ ದೇವಪ್ರಭುತ್ವಾತ್ಮಕ ಶಿಕ್ಷಣ ಯೆಹೋವನ ಸಾಕ್ಷಿಗಳ ಒಂದು ವೈಶಿಷ್ಟ್ಯತೆಯಾಗಿದೆ. ‘ತಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲಿಕ್ಕಾಗಿ’ ಯಾರು ತಮ್ಮನ್ನು ಸುವಾರ್ತೆ ಸಾರುವ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೋ ಅವರಿಗೆ ವಿಶೇಷ ತರಬೇತಿ ಕೊಡಲಾಗುತ್ತದೆ.—2 ತಿಮೊಥೆಯ 4:5.

ಪಯನೀಯರ್‌ ಸೇವಾ ಶಾಲೆ: ಒಬ್ಬ ಪಯನೀಯರ್‌ ಒಂದು ವರ್ಷದ ಸೇವೆಯನ್ನು ಪೂರ್ತಿಗೊಳಿಸಿದಾಗ ಪಯನೀಯರ್‌ ಸೇವಾ ಶಾಲೆಗೆ ಸೇರ್ಪಡೆಯಾಗುವ ಅವಕಾಶ ದೊರೆಯುತ್ತದೆ. ಅದು ಆರು ದಿನಗಳ ತರಬೇತಿ. ಹತ್ತಿರದ ರಾಜ್ಯಸಭಾಗೃಹದಲ್ಲಿ ನಡೆಯುತ್ತದೆ. ಈ ಶಾಲೆ ಪಯನೀಯರರು ಯೆಹೋವನಿಗೆ ಹೆಚ್ಚು ಆಪ್ತರಾಗಲು, ಸುವಾರ್ತೆ ಸಾರುವ ಬೇರೆ ಬೇರೆ ವಿಧಾನಗಳಲ್ಲಿ ನಿಪುಣರಾಗಲು, ನಂಬಿಗಸ್ತಿಕೆಯಿಂದ ಮಾಡುತ್ತಿರುವ ಸೇವೆಯನ್ನು ಮುಂದುವರಿಸಲು ನೆರವಾಗುತ್ತದೆ.

ರಾಜ್ಯ ಸೌವಾರ್ತಿಕರಿಗಾಗಿ ಶಾಲೆ: ಈ ಶಾಲೆಯ ಅವಧಿ ಎರಡು ತಿಂಗಳು. ಈ ಶಾಲೆಯು, ತಮ್ಮ ಊರನ್ನು ಬಿಟ್ಟು ಅಗತ್ಯವಿರುವಲ್ಲಿ ಹೋಗಿ ಸೇವೆಮಾಡಲು ಸಿದ್ಧರಿರುವ ಅನುಭವಸ್ಥ ಪಯನೀಯರರಿಗೆ ತರಬೇತಿ ಕೊಡುತ್ತದೆ. ಇವರು ಈ ಭೂಮಿಯಲ್ಲಿ ಜೀವಿಸಿದ ಮಹಾ ಸೌವಾರ್ತಿಕನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾರೆ. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎನ್ನುವ ಮನೋಭಾವ ಅವರಲ್ಲಿದೆ. (ಯೆಶಾಯ 6:8; ಯೋಹಾನ 7:29) ಊರು ಬಿಟ್ಟು ಹೋಗುವುದು ಸುಲಭವೇನಲ್ಲ. ಸರಳ ಜೀವನ ನಡೆಸಬೇಕಾಗುತ್ತದೆ. ಅಲ್ಲಿನ ಸಂಸ್ಕೃತಿ, ಹವಾಮಾನ, ಊಟ ಎಲ್ಲವೂ ಬೇರೆಯೇ ಆಗಿರಬಹುದು. ಹೊಸ ಭಾಷೆಯನ್ನು ಕಲಿಯಬೇಕಾಗಬಹುದು. ಇದಕ್ಕೆಲ್ಲ ಹೊಂದಿಕೊಳ್ಳಲು ಅವರು ಸಿದ್ಧರಾಗಿರುತ್ತಾರೆ. ಈ ಶಾಲೆಯಿಂದ ಅವಿವಾಹಿತ ಸಹೋದರರು, ಅವಿವಾಹಿತ ಸಹೋದರಿಯರು ಹಾಗೂ ದಂಪತಿಗಳು ತರಬೇತಿ ಪಡೆಯುತ್ತಾರೆ. ವಿದ್ಯಾರ್ಥಿಗಳ ವಯೋಮಿತಿ 23ರಿಂದ 65. ಈ ಶಾಲೆಯು ಅವರಿಗೆ ತಮ್ಮ ನೇಮಕವನ್ನು ನಿರ್ವಹಿಸಲು ಬೇಕಾಗುವ ಗುಣಗಳನ್ನು ಹಾಗೂ ಯೆಹೋವನಿಗೂ ಸಂಘಟನೆಗೂ ಹೆಚ್ಚು ಉಪಯುಕ್ತರಾಗಲಿಕ್ಕಾಗಿ ಬೇಕಾಗುವ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ.

ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌: “ಗಿಲ್ಯಡ್‌” ಹೀಬ್ರು ಭಾಷೆಯ ಪದವಾಗಿದ್ದು “ಸಾಕ್ಷಿಗಾಗಿ ಹಾಕಿರುವ ಕುಪ್ಪೆ” ಎಂಬ ಅರ್ಥ ಅದಕ್ಕಿದೆ. ಇಸವಿ 1943ರಿಂದ ಇಂದಿನವರೆಗೆ ಈ ಶಾಲೆಯ 8,000ಕ್ಕೂ ಹೆಚ್ಚು ಪದವೀಧರರನ್ನು ಮಿಷನರಿಗಳಾಗಿ ಕಳುಹಿಸಲಾಗಿದೆ. “ಭೂಮಿಯ ಕಟ್ಟಕಡೆಯ ವರೆಗೂ” ಸಾಕ್ಷಿ ಕೊಡುವುದರಲ್ಲಿ ಅವರು ಯಶಸ್ಸು ಪಡೆದಿದ್ದಾರೆ. (ಅಪೊಸ್ತಲರ ಕಾರ್ಯಗಳು 13:47) ಉದಾಹರಣೆಗೆ, ಪೆರು ದೇಶಕ್ಕೆ ನಮ್ಮ ಮಿಷನರಿಗಳು ಕಾಲಿಡುವ ಮುನ್ನ ಅಲ್ಲಿ ಒಂದು ಸಭೆ ಕೂಡ ಇರಲಿಲ್ಲ. ಆದರೆ ಈಗ 1,000ಕ್ಕಿಂತ ಹೆಚ್ಚು ಸಭೆಗಳಿವೆ! ನಮ್ಮ ಮಿಷನರಿಗಳು ಜಪಾನಿನಲ್ಲಿ ಸೇವೆ ಆರಂಭಿಸಿದಾಗ ಅಲ್ಲಿದ್ದ ಯೆಹೋವನ ಸಾಕ್ಷಿಗಳು ಹತ್ತಕ್ಕಿಂತಲೂ ಕಡಿಮೆ. ಈಗ ಆ ಸಂಖ್ಯೆ 2 ಲಕ್ಷವನ್ನು ಮೀರಿದೆ. ಗಿಲ್ಯಡ್‌ ಶಾಲೆಯ ಅವಧಿ ಐದು ತಿಂಗಳು. ಇದರಲ್ಲಿ ವಿದ್ಯಾರ್ಥಿಗಳು ದೇವರ ವಾಕ್ಯವಾದ ಬೈಬಲಿನ ಸಮಗ್ರ ಅಧ್ಯಯನ ಮಾಡುತ್ತಾರೆ. ಈ ಶಾಲೆಗೆ ಯಾರನ್ನು ಆಮಂತ್ರಿಸಲಾಗುತ್ತದೆ? ವಿಶೇಷ ಪಯನೀಯರರು, ಮಿಷನರಿಗಳು, ಬ್ರಾಂಚ್‌ ಆಫೀಸಿನಲ್ಲಿ ಸೇವೆ ಮಾಡುವವರು ಹಾಗೂ ಸರ್ಕಿಟ್‌ ಸೇವೆಯಲ್ಲಿರುವವರು. ಲೋಕವ್ಯಾಪಕ ಕೆಲಸವನ್ನು ಹೆಚ್ಚು ಮಾಡಲು ಹಾಗೂ ಸುಗಮವಾಗಿ ನಡೆಸಲು ನೆರವಾಗುವಂತೆ ಈ ಶಾಲೆ ಅವರಿಗೆ ತರಬೇತಿ ನೀಡುತ್ತದೆ.

  • ಪಯನೀಯರ್‌ ಸೇವಾ ಶಾಲೆಯ ಉದ್ದೇಶವೇನು?

  • ‘ರಾಜ್ಯ ಸೌವಾರ್ತಿಕರ ಶಾಲೆ’ ಯಾರಿಗಾಗಿ?