ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 54

ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ

ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ

ಅಶ್ಶೂರಕ್ಕೆ ಸೇರಿದ ನಿನೆವೆ ಪಟ್ಟಣದ ಜನರು ತುಂಬ ಕೆಟ್ಟವರಾಗಿದ್ದರು. ಆದ್ದರಿಂದ ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವಂತೆ ಎಚ್ಚರಿಸಲು ಯೆಹೋವನು ತನ್ನ ಪ್ರವಾದಿ ಯೋನನನ್ನು ಕಳುಹಿಸಿದನು. ಆದರೆ ಯೋನ ಅಲ್ಲಿಗೆ ಹೋಗದೆ ವಿರುದ್ಧವಾದ ದಿಕ್ಕಿಗೆ ಓಡಿಹೋದ. ತಾರ್ಷೀಷಿಗೆ ಹೋಗುವ ಹಡಗನ್ನು ಹತ್ತಿ ಪ್ರಯಾಣ ಆರಂಭಿಸಿದ.

ಸಮುದ್ರದ ಮಧ್ಯೆ ದೊಡ್ಡ ಬಿರುಗಾಳಿ ಬೀಸಿತು. ನಾವಿಕರು ಭಯದಿಂದ ಕಂಗಾಲಾದರು. ಅವರು ತಮ್ಮ ತಮ್ಮ ದೇವರುಗಳಿಗೆ ಪ್ರಾರ್ಥಿಸುತ್ತಾ, ‘ಯಾಕೆ ಹೀಗಾಗುತ್ತಿದೆ?’ ಅಂತ ಮಾತಾಡಿಕೊಂಡರು. ಕೊನೆಗೆ ಯೋನ ‘ಇದಕ್ಕೆಲ್ಲಾ ನಾನೇ ಕಾರಣ. ಯೆಹೋವನು ಹೇಳಿದ ಕೆಲಸವನ್ನು ಮಾಡದೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದೇನೆ. ನೀವು ನನ್ನನ್ನ ಎತ್ತಿ ಸಮುದ್ರಕ್ಕೆ ಹಾಕಿ. ಆಗ ಬಿರುಗಾಳಿ ನಿಲ್ಲುತ್ತದೆ’ ಅಂದ. ಯೋನನನ್ನು ನೀರಿಗೆ ಹಾಕಲು ನಾವಿಕರಿಗೆ ಇಷ್ಟ ಇರಲಿಲ್ಲ. ಆದರೆ ಯೋನ ಅವರನ್ನು ಒತ್ತಾಯ ಮಾಡಿದ. ಕೊನೆಗೆ ಅವರು ಅವನನ್ನು ಸಮುದ್ರಕ್ಕೆ ಹಾಕಿದರು. ಆಗ ಬಿರುಗಾಳಿ ನಿಂತು ಹೋಯಿತು.

ನೀರಿಗೆ ಬಿದ್ದ ಯೋನ ತಾನು ಖಂಡಿತ ಸಾಯುತ್ತೀನಿ ಅಂತ ಅಂದುಕೊಂಡ. ನೀರಿನಲ್ಲಿ ಮುಳುಗುತ್ತಿರುವಾಗ ಯೆಹೋವನಿಗೆ ಪ್ರಾರ್ಥಿಸಿದ. ಆಗ ಯೆಹೋವನು ಒಂದು ದೊಡ್ಡ ಮೀನನ್ನು ಕಳುಹಿಸಿದನು. ಅದು ಅವನನ್ನು ನುಂಗಿತು. ಆದರೆ ಸಾಯಿಸಲಿಲ್ಲ. ಮೀನಿನ ಹೊಟ್ಟೆಯಲ್ಲಿದ್ದ ಯೋನ ಯೆಹೋವನಿಗೆ ‘ಇನ್ನು ಮುಂದೆ ನಾನು ಯಾವಾಗಲೂ ನಿನ್ನ ಮಾತು ಕೇಳುತ್ತೀನಿ’ ಎಂದು ಪ್ರಾರ್ಥಿಸಿದ. ಯೆಹೋವನು ಮೂರು ದಿನ ಯೋನನನ್ನು ಮೀನಿನ ಹೊಟ್ಟೆಯಲ್ಲಿ ಸುರಕ್ಷಿತವಾಗಿಟ್ಟನು. ನಂತರ ಮೀನು ಅವನನ್ನು ಒಣನೆಲದಲ್ಲಿ ಕಕ್ಕುವಂತೆ ಮಾಡಿದನು.

ಯೆಹೋವನು ಯೋನನನ್ನು ಕಾಪಾಡಿದ. ಹಾಗಂತ ಯೋನ ನಿನೆವೆಗೆ ಹೋಗಬೇಕಾಗಿ ಇರಲಿಲ್ವಾ? ಯೆಹೋವನು ಯೋನನಿಗೆ ನಿನೆವೆಗೆ ಹೋಗಲು ಮತ್ತೆ ಹೇಳಿದನು. ಈ ಸಾರಿ ಯೋನ  ವಿಧೇಯನಾದ. ಅವನು ಅಲ್ಲಿಗೆ ಹೋಗಿ ಆ ಕೆಟ್ಟ ಜನರಿಗೆ ‘ಇನ್ನು 40 ದಿನದಲ್ಲಿ ನಿನೆವೆ ನಾಶ ಆಗುತ್ತೆ’ ಎಂದ. ನಿನೆವೆಯ ಜನರು ಬದಲಾಗುತ್ತಾರೆ ಅಂತ ಯೋನ ಅಂದುಕೊಂಡಿರಲಿಲ್ಲ. ಆದರೆ ಅವರು ಬದಲಾದರು! ನಿನೆವೆಯ ರಾಜ, ‘ದೇವರಿಗೆ ಪ್ರಾರ್ಥಿಸಿ. ಕೆಟ್ಟತನವನ್ನು ಬಿಟ್ಟುಬಿಡಿ. ಆಗ ಒಂದುವೇಳೆ ಅವನು ನಮ್ಮನ್ನು ನಾಶಮಾಡದೇ ಇರಬಹುದು’ ಎಂದು ಜನರಿಗೆ ಹೇಳಿದ. ಜನರು ಪಶ್ಚಾತ್ತಾಪ ಪಟ್ಟಿದ್ದರಿಂದ ಯೆಹೋವನು ನಿನೆವೆಯನ್ನು ನಾಶಮಾಡಲಿಲ್ಲ.

ಆಗ ಯೋನನಿಗೆ ತುಂಬ ಸಿಟ್ಟು ಬಂತು. ಯೆಹೋವನು ಯೋನನಿಗೆ ತಾಳ್ಮೆ ಮತ್ತು ಕರುಣೆ ತೋರಿಸಿದ್ದನು. ಆದರೆ ಯೋನ ನಿನೆವೆಯ ಜನರಿಗೆ ಕರುಣೆ ತೋರಿಸಲಿಲ್ಲ. ಬದಲಿಗೆ ಊರ ಹೊರಗೆ ಹೋಗಿ ಸೋರೆಗಿಡದ ಕೆಳಗೆ ಕೂತುಕೊಂಡು ಪಟ್ಟಣ ನಾಶ ಆಗುತ್ತಾ ಅಂತ ನೋಡುತ್ತಿದ್ದ. ಆ ಸೋರೆಗಿಡ ಒಣಗಿಹೋಯಿತು. ಯೋನನ ಕೋಪ ನೆತ್ತಿಗೇರಿತು. ಆಗ ಯೆಹೋವನು ಯೋನನಿಗೆ ‘ನಿನಗೆ ಈ ಗಿಡದ ಮೇಲೆ ಇರುವಷ್ಟು ಕಾಳಜಿ ಆ ಜನರ ಮೇಲೆ ಇಲ್ಲ. ನಾನು ಅವರಿಗೆ ಕರುಣೆ ತೋರಿಸಿದ್ದೇನೆ. ಆದ್ದರಿಂದ ಅವರು ನಾಶವಾಗಲಿಲ್ಲ’ ಅಂದನು. ಇದರಿಂದ ಏನು ಗೊತ್ತಾಗುತ್ತೆ? ಗಿಡಕ್ಕಿಂತ ನಿನೆವೆಯ ಜನರು ತುಂಬ ಪ್ರಾಮುಖ್ಯವಾಗಿದ್ದರು.

“ಯೆಹೋವನು . . . ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ.”—2 ಪೇತ್ರ 3:9