ಒಂದಿನ ರಾಜ ಅಹಾಬ ಇಜ್ರೇಲಿನ ಅರಮನೆಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ಆಗ ನಾಬೋತನೆಂಬ ವ್ಯಕ್ತಿಯ ದ್ರಾಕ್ಷಿ ತೋಟ ಕಣ್ಣಿಗೆ ಬಿತ್ತು. ಅಹಾಬನಿಗೆ ಆ ತೋಟವನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಅವನು ಆ ತೋಟವನ್ನು ಖರೀದಿಸಲು ಪ್ರಯತ್ನಿಸಿದ. ಆದರೆ ನಾಬೋತ ತನ್ನ ತೋಟವನ್ನು ಮಾರಲು ಸಿದ್ಧನಿರಲಿಲ್ಲ. ಯಾಕೆಂದರೆ ತಮ್ಮ ಪಿತ್ರಾರ್ಜಿತ ಭೂಮಿಯನ್ನು ಮಾರುವುದು ಯೆಹೋವನ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿತ್ತು. ದೇವರ ನಿಯಮವನ್ನು ಪಾಲಿಸಬೇಕೆಂಬ ನಾಬೋತನ ನಿರ್ಧಾರವನ್ನು ಅಹಾಬ ಗೌರವಿಸಿದನಾ? ಇಲ್ಲ. ಅಹಾಬ ತುಂಬ ಕೋಪಗೊಂಡ. ಅವನಿಗೆ ಎಷ್ಟು ಬೇಜಾರಾಯಿತೆಂದರೆ ತನ್ನ ಕೋಣೆಯಿಂದ ಹೊರಗೆ ಬರಲಿಲ್ಲ, ಊಟನೂ ಮಾಡಲಿಲ್ಲ.

ಅಹಾಬನ ಹೆಂಡತಿ ದುಷ್ಟ ರಾಣಿ ಈಜೆಬೆಲಳು ಅವನಿಗೆ ‘ನೀನು ಇಸ್ರಾಯೇಲಿನ ರಾಜ. ನಿನಗೆ ಏನು ಬೇಕೋ ಅದನ್ನೆಲ್ಲಾ ನೀನು ತೆಗೆದುಕೊಳ್ಳಬಹುದು. ಆ ತೋಟವನ್ನು ನಾನು ನಿನಗೆ ಕೊಡಿಸುತ್ತೇನೆ’ ಅಂದಳು. ನಾಬೋತ ದೇವರನ್ನು ದೂಷಿಸಿದ್ದಾನೆ ಎಂಬ ಆರೋಪ ಹಾಕಿ ಅವನನ್ನು ಕಲ್ಲೆಸೆದು ಕೊಲ್ಲಲು ಊರಿನ ಹಿರೀಪುರುಷರಿಗೆ ಅವಳು ಪತ್ರ ಬರೆದಳು. ಆ ಹಿರೀಪುರುಷರು ಅವಳು ಹೇಳಿದಂತೆ ಮಾಡಿದರು. ಆಗ ಈಜೆಬೆಲಳು ಅಹಾಬನಿಗೆ ‘ನಾಬೋತ ಸತ್ತ. ಅವನ ದ್ರಾಕ್ಷಿ ತೋಟ ಈಗ ನಿನ್ನದು’ ಅಂದಳು.

ಈಜೆಬೆಲಳು ಕೊಂದಿದ್ದು ನಾಬೋತನನ್ನು ಮಾತ್ರ ಅಲ್ಲ. ಯೆಹೋವನನ್ನು ಪ್ರೀತಿಸುತ್ತಿದ್ದ ಇನ್ನೂ ಅನೇಕ ಮುಗ್ಧ ಜನರನ್ನೂ ಕೊಂದಳು. ವಿಗ್ರಹಗಳನ್ನು ಪೂಜಿಸಿದಳು ಮತ್ತು ಇನ್ನೂ ಅನೇಕ ಕೆಟ್ಟ ಕೆಲಸಗಳನ್ನು ಮಾಡಿದಳು. ಅವಳು ಮಾಡುತ್ತಿದ್ದ ಎಲ್ಲಾ ಕೆಟ್ಟ ಕೆಲಸಗಳನ್ನು ಯೆಹೋವನು ನೋಡುತ್ತಿದ್ದನು. ಆತನು ಅವಳಿಗೆ ಏನು ಮಾಡಿದ ಗೊತ್ತಾ?

ಅಹಾಬ ಸತ್ತ ನಂತರ ಅವನ ಮಗ ಯೋರಾಮ ರಾಜನಾದ. ಯೆಹೋವನು ಈಜೆಬೆಲ್‌ ಮತ್ತು ಅವಳ ಕುಟುಂಬವನ್ನು ಶಿಕ್ಷಿಸಲು ಯೇಹು ಎಂಬ ವ್ಯಕ್ತಿಯನ್ನು ಕಳುಹಿಸಿದನು.

ಯೇಹು ರಥವನ್ನು ಹತ್ತಿ ಈಜೆಬೆಲಳಿದ್ದ ಸ್ಥಳವಾದ ಇಜ್ರೇಲಿಗೆ ಹೋದ. ಆಗ ಯೋರಾಮ ರಥದಲ್ಲಿ ಬಂದು ಯೇಹುವನ್ನು ಭೇಟಿ ಮಾಡಿ ‘ಒಳ್ಳೇ ಸುದ್ದಿ ಏನಾದರೂ ಇದೆಯಾ?’ ಎಂದು ಕೇಳಿದ. ಆಗ ಯೇಹು ‘ನಿನ್ನ ತಾಯಿ ಈಜೆಬೆಲಳು ದುಷ್ಟ ಕೆಲಸಗಳನ್ನು ಮಾಡುತ್ತಿರುವಾಗ ಒಳ್ಳೇ ಸುದ್ದಿ ಎಲ್ಲಿರುತ್ತೆ?’ ಅಂದ. ಯೋರಾಮ ರಥವನ್ನು ಹಿಂದಕ್ಕೆ ತಿರುಗಿಸಿ ವಾಪಸ್ಸು ಹೋಗಲು ಪ್ರಯತ್ನಿಸಿದ. ಆಗ ಯೇಹು ಬಾಣ ಬೀಸಿ ಅವನನ್ನು ಕೊಂದ.

 ಆಮೇಲೆ ಯೇಹು ಈಜೆಬೆಲಳ ಅರಮನೆಗೆ ಹೋದ. ಯೇಹು ಬರುತ್ತಿದ್ದಾನೆಂಬ ಸುದ್ದಿ ಕೇಳಿ ಈಜೆಬೆಲ್‌ ಅಲಂಕಾರ ಮಾಡಿಕೊಂಡು ಮಾಳಿಗೆಯ ಕಿಟಕಿಯ ಹತ್ತಿರ ನಿಂತು ಕಾಯುತ್ತಿದ್ದಳು. ಯೇಹು ಬಂದಾಗ ಅವನಿಗೆ ಒರಟಾಗಿ ವಂದಿಸಿದಳು. ಆಗ ಯೇಹು ಅವಳ ಪಕ್ಕದಲ್ಲಿ ನಿಂತಿದ್ದ ಸೇವಕರಿಗೆ ‘ಅವಳನ್ನು ಕೆಳಗೆ ದೊಬ್ಬಿ!’ ಅಂದ. ಅವರು ಈಜೆಬೆಲಳನ್ನು ಕಿಟಕಿಯಿಂದ ಹೊರಗೆ ಹಾಕಿದರು. ಅವಳು ಕೆಳಗೆ ಬಿದ್ದು ಸತ್ತಳು.

ಆಮೇಲೆ ಯೇಹು ಅಹಾಬನ 70 ಗಂಡು ಮಕ್ಕಳನ್ನು ಕೊಲ್ಲಿಸಿದ ಮತ್ತು ಬಾಳನ ಆರಾಧನೆಯನ್ನು ತೆಗೆದುಹಾಕಿ ದೇಶವನ್ನು ಶುದ್ಧಮಾಡಿದ. ಈ ಕಥೆಯಿಂದ, ಯೆಹೋವನು ಎಲ್ಲವನ್ನು ನೋಡುತ್ತಿರುತ್ತಾನೆ ಮತ್ತು ಯಾರು ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೋ ಅವರಿಗೆ ಸರಿಯಾದ ಸಮಯದಲ್ಲಿ ಶಿಕ್ಷೆ ಕೊಡುತ್ತಾನೆಂದು ಗೊತ್ತಾಗುತ್ತೆ ಅಲ್ವಾ?

“ಮೊದಲು ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು.”—ಜ್ಞಾನೋಕ್ತಿ 20:21