ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ನಮಗೆ ಕಲಿಸುವ ಪಾಠಗಳು

 ಪಾಠ 17

ಮೋಶೆ ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಿದ

ಮೋಶೆ ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಿದ

ಈಜಿಪ್ಟಿನಲ್ಲಿ ಯಾಕೋಬನ ಕುಟುಂಬಕ್ಕೆ ಇಸ್ರಾಯೇಲ್ಯರು ಎಂಬ ಹೆಸರು ಬಂತು. ಯಾಕೋಬ ಮತ್ತು ಯೋಸೇಫ ತೀರಿ ಹೋದ ನಂತರ ಒಬ್ಬ ಹೊಸ ಫರೋಹ ರಾಜನಾದ. ಇಸ್ರಾಯೇಲ್ಯರು ಈಜಿಪ್ಟಿನವರಿಗಿಂತ ಬಲಶಾಲಿಗಳಾಗುತ್ತಾ ಇರೋದನ್ನು ಕಂಡು ಫರೋಹ ಹೆದರಿದ. ಹಾಗಾಗಿ ಇಸ್ರಾಯೇಲ್ಯರನ್ನು ದಾಸರನ್ನಾಗಿ ಮಾಡಿಕೊಂಡ. ಇಟ್ಟಿಗೆ ಮಾಡುವ ಮತ್ತು ಹೊಲದಲ್ಲಿ ಕೆಲಸ ಮಾಡುವಂತೆ ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಈಜಿಪ್ಟಿನವರು ಅವರಿಗೆ ಎಷ್ಟು ಕಷ್ಟ ಕೊಟ್ಟರೂ ಇಸ್ರಾಯೇಲ್ಯರ ಸಂಖ್ಯೆಯಂತೂ ಹೆಚ್ಚುತ್ತಲೇ ಇತ್ತು. ಇದು ಫರೋಹನಿಗೆ ಇಷ್ಟ ಆಗಲಿಲ್ಲ. ಆದ್ದರಿಂದ ಇಸ್ರಾಯೇಲ್ಯರಿಗೆ ಹುಟ್ಟುವ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲುವ ಆಜ್ಞೆಯನ್ನು ಹೊರಡಿಸಿದ. ಇದನ್ನು ಕೇಳಿದಾಗ ಇಸ್ರಾಯೇಲ್ಯರಿಗೆ ಎಷ್ಟು ಭಯ ಆಗಿರಬೇಕಲ್ವಾ?

ಯೋಕೆಬೆದ ಎಂಬ ಇಸ್ರಾಯೇಲ್ಯ ಸ್ತ್ರೀಗೆ ಒಂದು ಸುಂದರ ಗಂಡು ಮಗು ಹುಟ್ಟಿತು. ಮಗುವನ್ನು ಈಜಿಪ್ಟಿನವರಿಂದ ಕಾಪಾಡಲು ಅದನ್ನು ಒಂದು ಬುಟ್ಟಿಯಲ್ಲಿ ಹಾಕಿ ನೈಲ್‌ ನದಿಯ ಜಂಬುಹುಲ್ಲಿನಲ್ಲಿ ಬಚ್ಚಿಟ್ಟಳು. ಮಗುವಿನ ಅಕ್ಕ ಮಿರ್‍ಯಾಮ ಸ್ವಲ್ಪ ದೂರದಲ್ಲಿ ನಿಂತು ಏನಾಗುತ್ತೆ ಎಂದು ನೋಡುತ್ತಿದ್ದಳು.

ಫರೋಹನ ಮಗಳು ಸ್ನಾನಕ್ಕಾಗಿ ನೈಲ್‌ ನದಿಗೆ ಬಂದಳು. ಆ ಬುಟ್ಟಿ ಅವಳ ಕಣ್ಣಿಗೆ ಬಿತ್ತು. ಅದನ್ನು ತೆಗೆದು ನೋಡಿದಾಗ ಪುಟ್ಟ ಕಂದಮ್ಮ ಅಳುತ್ತಿತ್ತು. ಅದನ್ನು ಕಂಡ ಅವಳಿಗೆ ಅಯ್ಯೋ ಪಾಪ! ಅನಿಸಿತು. ಆಗ ಮಿರ್‍ಯಾಮಳು ‘ನಿಮಗಾಗಿ ಈ ಮಗುವನ್ನು  ನೋಡಿಕೊಳ್ಳಲು ಒಬ್ಬ ದಾದಿಯನ್ನು ಕರೆದುಕೊಂಡು ಬರಲಾ?’ ಎಂದು ರಾಜಕುಮಾರಿಯನ್ನು ಕೇಳಿದಳು. ಅವಳು ಒಪ್ಪಿದಾಗ ಮಿರ್‍ಯಾಮ್‌ ತನ್ನ ಸ್ವಂತ ತಾಯಿ ಯೋಕೆಬೆದಳನ್ನು ಕರೆದುಕೊಂಡು ಬರುತ್ತಾಳೆ. ಆಗ ಫರೋಹನ ಮಗಳು ‘ನನಗಾಗಿ ಈ ಮಗುವನ್ನು ಸಾಕು, ನಿನಗೆ ಸಂಬಳ ಕೊಡುತ್ತೇನೆ’ ಅಂದಳು.

ಆ ಮಗು ದೊಡ್ಡವನಾದ ಮೇಲೆ ಯೋಕೆಬೆದ ಅವನನ್ನು ಫರೋಹನ ಮಗಳ ಹತ್ತಿರ ಕರೆದುಕೊಂಡು ಬಂದಳು. ಅವಳು ಅವನಿಗೆ ಮೋಶೆ ಎಂದು ಹೆಸರಿಟ್ಟು ತನ್ನ ಸ್ವಂತ ಮಗನಂತೆ ಬೆಳೆಸಿದಳು. ಮೋಶೆ ಅರಮನೆಯಲ್ಲಿ ರಾಜಕುಮಾರನಂತೆ ಬೆಳೆದ. ಅವನಿಗೆ ಏನೂ ಕೊರತೆ ಇರಲಿಲ್ಲ. ಆದರೆ ಮೋಶೆ ಯೆಹೋವನನ್ನು ಮರೆಯಲಿಲ್ಲ. ತಾನು ಈಜಿಪ್ಟಿನವನಲ್ಲ, ಇಸ್ರಾಯೇಲ್ಯನು ಅಂತ ಮೋಶೆಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಿದ.

ಮೋಶೆಗೆ 40 ವರ್ಷವಾದಾಗ ತನ್ನ ಜನರಿಗೆ ಸಹಾಯ ಮಾಡಲು ನಿರ್ಧರಿಸಿದ. ಒಂದಿನ ಒಬ್ಬ ಈಜಿಪ್ಟಿನವನು ಇಸ್ರಾಯೇಲ್ಯ ದಾಸನನ್ನು ಹೊಡೆಯುತ್ತಿರೋದನ್ನು ನೋಡಿದ. ಮೋಶೆ ಈಜಿಪ್ಟಿನವನಿಗೆ ಎಷ್ಟು ಜೋರಾಗಿ ಹೊಡೆದ ಅಂದರೆ ಅವನು ಸತ್ತೇ ಹೋದ. ಮೋಶೆ ಶವವನ್ನು ಮರಳಿನಲ್ಲಿ ಮುಚ್ಚಿಟ್ಟ. ಇದು ಫರೋಹನಿಗೆ ಗೊತ್ತಾದಾಗ ಅವನು ಮೋಶೆಯನ್ನು ಕೊಲ್ಲಲು ಪ್ರಯತ್ನಿಸಿದ. ಮೋಶೆ ಮಿದ್ಯಾನ್‌ ದೇಶಕ್ಕೆ ಓಡಿ ಹೋದ. ಆದರೆ ಯೆಹೋವನು ಮೋಶೆಯನ್ನು ಕೈ ಬಿಡಲಿಲ್ಲ.

‘ಮೋಶೆಯು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿದ್ದು ನಂಬಿಕೆಯಿಂದಲೇ. ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು.’—ಇಬ್ರಿಯ 11:24, 25