ಅಲ್ಲಿ ನಿಂತಿರುವವನು ಅಪೊಸ್ತಲನಾದ ಪೇತ್ರನು. ಅವನ ಹಿಂದೆ ನಿಂತಿರುವವರು ಅವನ ಕೆಲವು ಮಿತ್ರರಾಗಿದ್ದಾರೆ. ಆದರೆ ಆ ಮನುಷ್ಯನು ಪೇತ್ರನಿಗೆ ಅಡ್ಡ ಬೀಳುತ್ತಿರುವುದೇಕೆ? ಅವನು ಹಾಗೇ ಅಡ್ಡಬೀಳಬೇಕೋ? ಅವನು ಯಾರೆಂದು ನಿಮಗೆ ಗೊತ್ತಿದೆಯೇ?

ಆ ಮನುಷ್ಯನ ಹೆಸರು ಕೊರ್ನೇಲ್ಯ. ಅವನು ಒಬ್ಬ ರೋಮನ್‌ ಸೈನ್ಯಾಧಿಕಾರಿ. ಕೊರ್ನೇಲ್ಯನಿಗೆ ಪೇತ್ರನ ಪರಿಚಯವಿಲ್ಲ. ಆದರೆ ಪೇತ್ರನನ್ನು ತನ್ನ ಮನೆಗೆ ಆಮಂತ್ರಿಸುವಂತೆ ಅವನಿಗೆ ಹೇಳಲಾಗಿದೆ. ಇದು ಹೇಗೆ ಸಂಭವಿಸಿತೆಂದು ನಾವು ನೋಡೋಣ.

ಯೇಸುವನ್ನು ಮೊದಲು ಹಿಂಬಾಲಿಸಿದವರು ಯೆಹೂದ್ಯರಾಗಿದ್ದರು. ಆದರೆ ಕೊರ್ನೇಲ್ಯನು ಒಬ್ಬ ಯೆಹೂದ್ಯನಲ್ಲ. ಆದರೂ ಅವನು ದೇವರನ್ನು ಪ್ರೀತಿಸುತ್ತಾನೆ. ಆತನಿಗೆ ಪ್ರಾರ್ಥಿಸುತ್ತಾನೆ. ಅಷ್ಟೇ ಅಲ್ಲ, ಜನರಿಗೆ ಅನೇಕ ಉಪಕಾರಗಳನ್ನು ಮಾಡುತ್ತಾನೆ. ಒಂದು ಮಧ್ಯಾಹ್ನ ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡು, ‘ದೇವರು ನಿನ್ನನ್ನು ಮೆಚ್ಚಿದ್ದಾನೆ. ಅವನು ನಿನ್ನ ಪ್ರಾರ್ಥನೆಗಳನ್ನು ಉತ್ತರಿಸಲಿರುವನು. ಪೇತ್ರನೆಂಬ ಮನುಷ್ಯನನ್ನು ಕರೆದುಕೊಂಡು ಬರಲು ಕೆಲವು ಜನರನ್ನು ಕಳುಹಿಸು. ಅವನು ಯೊಪ್ಪದ ಸಮುದ್ರದ ಬಳಿಯಲ್ಲಿ ವಾಸಿಸುವ ಸೀಮೋನನ ಮನೆಯಲ್ಲಿದ್ದಾನೆ’ ಎಂದು ಹೇಳುತ್ತಾನೆ.

ಆ ಕೂಡಲೆ ಕೊರ್ನೇಲ್ಯನು ಪೇತ್ರನನ್ನು ಕಂಡುಹಿಡಿಯಲು ಕೆಲವು ಜನರನ್ನು ಕಳುಹಿಸುತ್ತಾನೆ. ಮಾರಣೆ ದಿನ, ಆ ಜನರು ಯೊಪ್ಪಕ್ಕೆ ಹತ್ತಿರವಾಗುವಾಗ, ಪೇತ್ರನು ಸೀಮೋನನ ಮನೆಯ ಮಾಳಿಗೆಯ ಮೇಲಿರುತ್ತಾನೆ. ಅಲ್ಲಿ ಒಂದು ದೊಡ್ಡ ವಸ್ತ್ರವು ಆಕಾಶದಿಂದ ಇಳಿಯುವುದನ್ನು ತಾನು ಕಾಣುತ್ತಾನೆಂದು ಪೇತ್ರನು ನೆನಸುವಂತೆ ದೇವರು ಮಾಡುತ್ತಾನೆ. ಆ ವಸ್ತ್ರದೊಳಗೆ ಸಕಲ ವಿಧವಾದ ಪ್ರಾಣಿಗಳಿದ್ದವು. ದೇವರ ನಿಯಮಕ್ಕನುಸಾರ ಈ ಪ್ರಾಣಿಗಳು ಅಶುದ್ಧವಾಗಿದ್ದು ಅದನ್ನು ತಿನ್ನಬಾರದಿತ್ತು. ಆದರೂ ಒಂದು ವಾಣಿಯು, ‘ಪೇತ್ರನೇ, ಎದ್ದು ಕೊಯ್ದು ತಿನ್ನು’ ಎಂದು ಹೇಳುತ್ತದೆ.

ಅದಕ್ಕೆ ಪೇತ್ರನು, ‘ಬೇಡವೇ ಬೇಡ ಸ್ವಾಮಿ! ಅಶುದ್ಧ ಪದಾರ್ಥವನ್ನು ನಾನೆಂದೂ ತಿಂದವನಲ್ಲ’ ಎಂದನ್ನುತ್ತಾನೆ. ಆದರೆ ವಾಣಿಯು ಪೇತ್ರನಿಗೆ ‘ದೇವರು ಈಗ ಶುದ್ಧಮಾಡಿದ್ದನ್ನು ಅಶುದ್ಧವೆನ್ನಬೇಡ’ ಎಂದು ತಿಳಿಸುತ್ತದೆ. ಹೀಗೆ ಮೂರು ಸಾರಿ ಆಗುತ್ತದೆ. ಇದೆಲ್ಲಾದರ ಅರ್ಥವೇನಾಗಿರಬಹುದೆಂದು ಪೇತ್ರನು ಯೋಚಿಸುತ್ತಿರುವಾಗಲೇ, ಕೊರ್ನೇಲ್ಯನು ಕಳುಹಿಸಿದ ಆ ಮನುಷ್ಯರು ಮನೆಗೆ ಬಂದು ಪೇತ್ರನಿಗಾಗಿ ವಿಚಾರಿಸುತ್ತಾರೆ.

ಪೇತ್ರನು ಕೆಳಗಿಳಿದು ಬಂದು, ‘ನೀವು ಹುಡುಕುತ್ತಿರುವ ಮನುಷ್ಯನು ನಾನೇ. ನೀವು ಬಂದ ಕಾರಣವೇನು?’ ಎಂದು ಅವರನ್ನು ಕೇಳುತ್ತಾನೆ. ಪೇತ್ರನನ್ನು ತನ್ನ ಮನೆಗೆ ಆಮಂತ್ರಿಸುವಂತೆ ಒಬ್ಬ ದೇವದೂತನು ಕೊರ್ನೇಲ್ಯನಿಗೆ ಹೇಳಿದನೆಂದು ಅವರು ವಿವರಿಸುತ್ತಾರೆ. ಆಗ, ಅವರೊಂದಿಗೆ ಹೋಗಲು ಪೇತ್ರನು ಒಪ್ಪುತ್ತಾನೆ. ಮರುದಿನ ಪೇತ್ರ ಮತ್ತು ಅವನ ಮಿತ್ರರು ಕೊರ್ನೇಲ್ಯನನ್ನು ಭೇಟಿಯಾಗಲು ಕೈಸರೈಯಕ್ಕೆ ಹೋಗುತ್ತಾರೆ.

ಕೊರ್ನೇಲ್ಯನು ತನ್ನ ಸಂಬಂಧಿಕರನ್ನೂ ಆಪ್ತ ಮಿತ್ರರನ್ನೂ ಒಟ್ಟುಸೇರಿಸಿ ಕಾಯುತ್ತಿರುತ್ತಾನೆ. ಪೇತ್ರನು ಬಂದಾಗ ಕೊರ್ನೇಲ್ಯನು ಅವನನ್ನು ಎದುರುಗೊಂಡು, ಈ ಚಿತ್ರದಲ್ಲಿ ನೀವು ಕಾಣುವಂತೆ, ಪೇತ್ರನ ಪಾದಕ್ಕೆ ಬಿದ್ದು ನಮಸ್ಕರಿಸುತ್ತಾನೆ. ಆದರೆ ಪೇತ್ರನು ‘ಏಳು, ನಾನು ಸಹ ನಿನ್ನ ಹಾಗೇ ಕೇವಲ ಒಬ್ಬ ಮನುಷ್ಯನು’ ಎಂದು ಹೇಳುತ್ತಾನೆ. ಹೌದು, ಒಬ್ಬ ಮನುಷ್ಯನಿಗೆ ಅಡ್ಡಬಿದ್ದು ಆರಾಧಿಸುವುದು ಸರಿಯಲ್ಲವೆಂದು ಬೈಬಲ್‌ ಹೇಳುತ್ತದೆ. ಯೆಹೋವನನ್ನು ಮಾತ್ರವೇ ನಾವು ಆರಾಧಿಸಬೇಕು.

ಪೇತ್ರನೀಗ ಕೂಡಿಬಂದವರಿಗೆಲ್ಲಾ ಸುವಾರ್ತೆಯನ್ನು ಸಾರುತ್ತಾನೆ. ‘ದೇವರು ತನ್ನನ್ನು ಆರಾಧಿಸ ಬಯಸುವ ಎಲ್ಲ ಜನರನ್ನು ಸ್ವೀಕರಿಸುತ್ತಾನೆಂದು ನನಗೆ ತಿಳಿದುಬಂದಿದೆ’ ಅನ್ನುತ್ತಾನೆ ಪೇತ್ರನು. ಅವನಿನ್ನೂ ಮಾತಾಡುತ್ತಿರುವಾಗಲೇ, ದೇವರು ತನ್ನ ಪವಿತ್ರಾತ್ಮವನ್ನು ಕಳುಹಿಸುತ್ತಾನೆ. ಮತ್ತು ಜನರು ವಿವಿಧ ಭಾಷೆಗಳಲ್ಲಿ ಮಾತಾಡಲು ತೊಡಗುತ್ತಾರೆ. ಪೇತ್ರನೊಂದಿಗೆ ಬಂದ ಯೆಹೂದ್ಯ ಶಿಷ್ಯರನ್ನು ಇದು ಆಶ್ಚರ್ಯಗೊಳಿಸುತ್ತದೆ. ಯಾಕೆಂದರೆ ದೇವರು ಯೆಹೂದ್ಯರನ್ನು ಮಾತ್ರವೇ ಮೆಚ್ಚುತ್ತಾನೆಂದು ಅವರು ನೆನಸಿದ್ದರು. ದೇವರು ಯಾವುದೇ ಒಂದು ಜಾತಿಯ ಜನರನ್ನು ಇತರ ಜಾತಿಯ ಜನರಿಗಿಂತ ಹೆಚ್ಚು ಶ್ರೇಷ್ಠರೆಂದಾಗಲಿ ಪ್ರಾಮುಖ್ಯರೆಂದಾಗಲಿ ನೋಡುವುದಿಲ್ಲವೆಂದು ಇದರಿಂದ ಅವರು ಕಲಿತುಕೊಳ್ಳುತ್ತಾರೆ. ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಒಳ್ಳೆಯ ವಿಷಯ ಇದಾಗಿದೆ ಅಲ್ಲವೇ?