ಪಾರಿವಾಳವು ಈ ವ್ಯಕ್ತಿಯ ತಲೆಯ ಮೇಲೆ ಇಳಿದು ಬರುತ್ತಿರುವುದನ್ನು ನೋಡಿರಿ. ಅವನೇ ಯೇಸು. ಅವನಿಗೀಗ ಸುಮಾರು 30 ವಯಸ್ಸು. ಅವನೊಂದಿಗಿರುವ ಆ ಪುರುಷನು ಯೋಹಾನನು. ಅವನ ಕುರಿತು ನಾವು ಈ ಮೊದಲೇ ಸ್ವಲ್ಪ ಕಲಿತ್ತಿದ್ದೇವೆ. ಮರಿಯಳು ತನ್ನ ಸಂಬಂಧಿಯಾದ ಎಲಿಸಬೇತಳನ್ನು ನೋಡಲು ಹೋದದ್ದೂ, ಎಲಿಸಬೇತಳ ಗರ್ಭದೊಳಗಿದ್ದ ಮಗು ಉಲ್ಲಾಸದಿಂದ ಹಾರಾಡಿದ್ದೂ ನಿಮಗೆ ನೆನಪಿದೆಯೇ? ಗರ್ಭದಲ್ಲಿದ್ದ ಆ ಮಗು ಯೋಹಾನನಾಗಿದ್ದನು. ಆದರೆ ಈಗ ಯೋಹಾನ ಮತ್ತು ಯೇಸು ಏನು ಮಾಡುತ್ತಿದ್ದಾರೆ?

ಯೋಹಾನನು ಯೇಸುವನ್ನು ಈಗ ತಾನೇ ಯೊರ್ದನ್‌ ಹೊಳೆಯ ನೀರಿನೊಳಗೆ ಮುಳುಗಿಸಿ ಎಬ್ಬಿಸಿದ್ದಾನೆ. ವ್ಯಕ್ತಿಯೊಬ್ಬನು ದೀಕ್ಷಾಸ್ನಾನ ಪಡೆಯುವುದು ಹೀಗೆಯೇ. ಮೊದಲು ಅವನನ್ನು ನೀರಿನೊಳಗೆ ಮುಳುಗಿಸಿ ನಂತರ ಮೇಲೆ ತರಲಾಗುತ್ತದೆ. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡುತ್ತಿರುವುದರಿಂದ ಅವನನ್ನು ಸ್ನಾನಿಕನಾದ ಯೋಹಾನನೆಂದು ಕರೆಯಲಾಗುತ್ತದೆ. ಆದರೆ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುವುದೇಕೆ?

ಏಕೆಂದರೆ, ತನಗೆ ದೀಕ್ಷಾಸ್ನಾನ ಮಾಡಿಸುವಂತೆ ಯೇಸುವೇ ಬಂದು ಯೋಹಾನನಿಗೆ ಕೇಳಿಕೊಂಡನು. ತಾವು ಮಾಡಿದ ಕೆಟ್ಟ ಕೆಲಸಗಳಿಗಾಗಿ ದುಃಖ ವ್ಯಕ್ತಪಡಿಸ ಬಯಸುವ ಜನರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಾನೆ. ಆದರೆ ದುಃಖ ವ್ಯಕ್ತಪಡಿಸುವುದಕ್ಕೆ ಯೇಸು ಎಂದಾದರೂ ಕೆಟ್ಟ ಕೆಲಸವನ್ನು ಮಾಡಿದ್ದನೋ? ಇಲ್ಲ. ಯೇಸು ಎಂದೂ ಮಾಡಿರಲಿಲ್ಲ. ಯಾಕೆಂದರೆ ಅವನು ಪರಲೋಕದಿಂದ ಬಂದ ದೇವರ ಸ್ವಂತ ಮಗನಾಗಿದ್ದಾನೆ. ಆದುದರಿಂದ ಬೇರೊಂದು ಕಾರಣಕ್ಕಾಗಿ ತನಗೆ ದೀಕ್ಷಾಸ್ನಾನ ಮಾಡಿಸುವಂತೆ ಅವನು ಯೋಹಾನನಿಗೆ ಹೇಳುತ್ತಾನೆ. ಆ ಕಾರಣವೇನಾಗಿತ್ತೆಂದು ನಾವು ನೋಡೋಣ.

ಇಲ್ಲಿ ಯೋಹಾನನ ಬಳಿಗೆ ಬರುವ ಮುಂಚೆ, ಯೇಸು ಒಬ್ಬ ಬಡಗಿಯಾಗಿದ್ದನು. ಮರದಿಂದ ಮೇಜು, ಕುರ್ಚಿ ಮತ್ತು ಬೆಂಚುಗಳಂತಹ ಪೀಠೋಪಕರಣಗಳನ್ನು ಮಾಡುವ ವ್ಯಕ್ತಿಯೇ ಬಡಗಿ. ಮರಿಯಳ ಗಂಡನಾದ ಯೋಸೇಫನು ಸಹ ಒಬ್ಬ ಬಡಗಿಯಾಗಿದ್ದನು. ಯೇಸುವಿಗೂ ಆ ಕೆಲಸವನ್ನು ಕಲಿಸಿಕೊಟ್ಟಿದ್ದನು. ಆದರೆ ಯೆಹೋವನು ತನ್ನ ಮಗನನ್ನು ಭೂಮಿಗೆ ಕಳುಹಿಸಿದ್ದು ಒಬ್ಬ ಬಡಗಿಯಾಗುವುದಕ್ಕೆ ಅಲ್ಲ. ಆತನು ಅವನಿಗಾಗಿ ಒಂದು ವಿಶೇಷ ಕೆಲಸವನ್ನು ಇಟ್ಟಿದ್ದಾನೆ. ಯೇಸು ಅದನ್ನು ಮಾಡಲು ತೊಡಗುವ ಸಮಯವು ಬಂದಿದೆ. ಆದುದರಿಂದ ತಂದೆಯ ಚಿತ್ತವನ್ನು ಮಾಡಲು ಬಂದಿದ್ದೇನೆಂದು ತೋರಿಸಲಿಕ್ಕಾಗಿ ಯೇಸು ಈಗ ತನಗೆ ದೀಕ್ಷಾಸ್ನಾನಮಾಡಿಸುವಂತೆ ಯೋಹಾನನಿಗೆ ಹೇಳುತ್ತಾನೆ. ದೇವರು ಇದನ್ನು ಮೆಚ್ಚಿದನೋ?

ಹೌದು, ಮೆಚ್ಚಿದನು. ಯಾಕೆಂದರೆ ಯೇಸು ನೀರಿನೊಳಗಿಂದ ಮೇಲಕ್ಕೆ ಬಂದ ಬಳಿಕ ಪರಲೋಕದಿಂದ ಒಂದು ವಾಣಿಯು, ‘ಈತನು ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ’ ಎಂದು ಹೇಳುತ್ತದೆ. ಅದಲ್ಲದೆ, ಆಕಾಶವು ತೆರೆಯುವಂತೆ ಕಾಣುತ್ತದೆ ಮತ್ತು ಈ ಪಾರಿವಾಳವು ಯೇಸುವಿನ ಮೇಲೆ ಇಳಿದುಬರುತ್ತದೆ. ಆದರೆ ಇದು ಒಂದು ನಿಜ ಪಾರಿವಾಳವಲ್ಲ. ಪಾರಿವಾಳದ ಹಾಗೆ ಕಾಣುತ್ತದಷ್ಟೇ. ಅದು ನಿಜವಾಗಿ ದೇವರ ಪವಿತ್ರಾತ್ಮವಾಗಿದೆ.

ಈಗ ಯೇಸುವಿಗೆ ಯೋಚಿಸಲು ಬಹಳಷ್ಟು ವಿಷಯಗಳಿವೆ. ಆದುದರಿಂದ ಅವನು 40 ದಿನಗಳ ವರೆಗೆ ಒಂದು ಏಕಾಂತ ಸ್ಥಳಕ್ಕೆ ಹೋಗುತ್ತಾನೆ. ಅಲ್ಲಿ ಸೈತಾನನು ಅವನ ಬಳಿಗೆ ಬರುತ್ತಾನೆ. ದೇವರ ನಿಯಮಗಳಿಗೆ ವಿರುದ್ಧವಾದ ವಿಷಯಗಳನ್ನು ಮಾಡುವಂತೆ ಯೇಸುವನ್ನು ಸೈತಾನನು ಮೂರು ಬಾರಿ ಶೋಧಿಸಲು ಪ್ರಯತ್ನಿಸುತ್ತಾನೆ. ಆದರೆ ಯೇಸು ಸೈತಾನನು ಹೇಳಿದಂತೆ ಮಾಡುವುದಿಲ್ಲ.

ತದನಂತರ, ಯೇಸು ಆ ಏಕಾಂತ ಸ್ಥಳದಿಂದ ಬಂದು ಕೆಲವು ಪುರುಷರನ್ನು ಭೇಟಿಯಾಗುತ್ತಾನೆ. ಅವರು ಯೇಸುವಿನ ಪ್ರಥಮ ಹಿಂಬಾಲಕರು ಅಥವಾ ಶಿಷ್ಯರಾಗುತ್ತಾರೆ. ಅವರಲ್ಲಿ ಅಂದ್ರೆಯ, (ಸೀಮೋನನೆಂದೂ ಕರೆಯಲ್ಪಡುವ) ಪೇತ್ರ, ಫಿಲಿಪ್ಪ ಮತ್ತು (ಬಾರ್ತೊಲೊಮಾಯನೆಂದೂ ಕರೆಯಲ್ಪಡುವ) ನತಾನಯೇಲ್‌ ಎಂಬವರು ಕೆಲವರಾಗಿದ್ದಾರೆ. ಯೇಸು ಮತ್ತು ಈ ಹೊಸ ಶಿಷ್ಯರು ಗಲಿಲಾಯ ಪ್ರದೇಶಕ್ಕೆ ಹೊರಟುಹೋಗುತ್ತಾರೆ. ಗಲಿಲಾಯದಲ್ಲಿ ಅವರು ನತಾನಯೇಲನ ಹುಟ್ಟೂರಾದ ಕಾನಾದಲ್ಲಿ ತಂಗುತ್ತಾರೆ. ಅಲ್ಲಿ ಯೇಸು ಒಂದು ದೊಡ್ಡ ಮದುವೆ ಔತಣಕ್ಕೆ ಹೋಗಿ, ತನ್ನ ಮೊದಲನೆಯ ಅದ್ಭುತವನ್ನು ನಡಿಸುತ್ತಾನೆ. ಅದೇನೆಂದು ನಿಮಗೆ ಗೊತ್ತೋ? ಅವನು ನೀರನ್ನು ದ್ರಾಕ್ಷಾಮದ್ಯವನ್ನಾಗಿ ಮಾಡುತ್ತಾನೆ.