ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 96

ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ

ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ

ಯೇಸು ದೇಶದಲ್ಲೆಲ್ಲಾ ಸಂಚಾರ ಮಾಡುತ್ತಾ ರೋಗಿಗಳನ್ನು ಗುಣಪಡಿಸುತ್ತಾನೆ. ಯೇಸು ಈ ಅದ್ಭುತಗಳನ್ನು ಮಾಡಿದ ಸುದ್ದಿಯು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಪಟ್ಟಣಗಳಲ್ಲೂ ಹಬ್ಬುತ್ತದೆ. ಆದುದರಿಂದ ಕುಂಟರು, ಕುರುಡರು, ಕಿವುಡರು ಮುಂತಾದ ಅನೇಕ ರೋಗಿಗಳನ್ನು ಜನರು ಅವನ ಬಳಿಗೆ ಕರೆತರುತ್ತಾರೆ. ಯೇಸು ಅವರೆಲ್ಲರನ್ನು ಗುಣಪಡಿಸುತ್ತಾನೆ.

ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿ ಈಗ ಮೂರಕ್ಕಿಂತಲೂ ಹೆಚ್ಚು ವರ್ಷಗಳು ದಾಟಿವೆ. ಈಗ ಯೇಸು ತನ್ನ ಅಪೊಸ್ತಲರನ್ನು ಕರೆದು, ತಾನು ಬೇಗನೆ ಯೆರೂಸಲೇಮಿಗೆ ಹೋಗಲಿದ್ದೇನೆ ಮತ್ತು ಅಲ್ಲಿ ತನ್ನನ್ನು ಕೊಲ್ಲಲಾಗುತ್ತದೆ, ಅನಂತರ ತಾನು ಜೀವಂತನಾಗಿ ಎದ್ದುಬರುತ್ತೇನೆ ಎಂದು ಹೇಳುತ್ತಾನೆ. ಈ ಮಧ್ಯೆ ಯೇಸು ರೋಗಿಗಳನ್ನು ಗುಣಪಡಿಸುತ್ತಾ ಇರುತ್ತಾನೆ.

ಒಮ್ಮೆ ಯೇಸು ಸಬ್ಬತ್‌ ದಿನದಂದು ಜನರಿಗೆ ಕಲಿಸುತ್ತಿರುತ್ತಾನೆ. ಅದು ಯೆಹೂದ್ಯರಿಗೆ ವಿಶ್ರಾಂತಿಯ ದಿನವಾಗಿದೆ. ಈ ಚಿತ್ರದಲ್ಲಿ ನೀವು ನೋಡುವ ಸ್ತ್ರೀ ಕಾಯಿಲೆಯಿಂದ ತುಂಬಾ ಬಳಲುತ್ತಿದ್ದಳು. 18 ವರ್ಷಗಳಿಂದ ಆಕೆಯ ನಡು ಬಾಗಿ ನೆಟ್ಟಗೆ ನಿಂತುಕೊಳ್ಳಲು ಆಕೆಗೆ ಆಗುತ್ತಿರಲಿಲ್ಲ. ಯೇಸು ಆಕೆಯನ್ನು ನೋಡಿ ಆಕೆಯ ಮೇಲೆ ತನ್ನ ಕೈಗಳನ್ನು ಇಡುತ್ತಾನೆ. ಆಗ ಆಕೆ ನೆಟ್ಟಗೆ ನಿಲ್ಲುತ್ತಾಳೆ. ಅವಳಿಗೆ ವಾಸಿಯಾಗುತ್ತದೆ!

ಇದನ್ನು ನೋಡಿದ ಧಾರ್ಮಿಕ ಮುಖಂಡರು ಬಹಳ ಸಿಟ್ಟುಗೊಳ್ಳುತ್ತಾರೆ. ಅವರಲ್ಲಿ ಒಬ್ಬನು, ‘ಕೆಲಸ ಮಾಡುವುದಕ್ಕೆ ನಮಗೆ ಆರು ದಿನಗಳು ಇವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಕೊಳ್ಳಬೇಕು. ಸಬ್ಬತ್‌ ದಿನದಲ್ಲಿ ಅಲ್ಲ!’ ಎಂದು ಜನರಿಗೆ ಬೊಬ್ಬೆಹಾಕುತ್ತಾನೆ.

ಆದರೆ ಯೇಸು ‘ಅಯ್ಯೋ ಕೆಟ್ಟಜನರೇ. ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್‌ ದಿನದಲ್ಲಿ ತನ್ನ ಕತ್ತೆಯನ್ನು ಬಿಚ್ಚಿ ನೀರು ಕುಡಿಸುವುದಕ್ಕೆ ಹಿಡಿದುಕೊಂಡು ಹೋಗುತ್ತಾನಲ್ಲಾ. ಹಾಗಾದರೆ 18 ವರ್ಷಗಳಿಂದ ರೋಗಿಯಾಗಿರುವ ಈ ಬಡ ಸ್ತ್ರೀ ಸಬ್ಬತ್‌ ದಿನದಲ್ಲಿ ಸ್ವಸ್ಥಳಾಗಬಾರದೇ?’ ಎಂದು ಉತ್ತರಿಸುತ್ತಾನೆ. ಯೇಸು ಕೊಟ್ಟ ಉತ್ತರವು ಈ ಕೆಟ್ಟ ಜನರನ್ನು ನಾಚಿಕೆಗೀಡು ಮಾಡುತ್ತದೆ.

ಅನಂತರ ಯೇಸು ಮತ್ತು ಅವನ ಅಪೊಸ್ತಲರು ಯೆರೂಸಲೇಮಿಗೆ ಪ್ರಯಾಣಿಸುತ್ತಾರೆ. ಅವರು ಯೆರಿಕೋ ಪಟ್ಟಣವನ್ನು ಸಮೀಪಿಸುತ್ತಾರೆ. ಆಗ ಯೇಸು ಆ ದಾರಿಯಿಂದ ಹೋಗುತ್ತಿದ್ದಾನೆಂದು ಕುರುಡರಾದ ಇಬ್ಬರು ಭಿಕ್ಷುಕರಿಗೆ ತಿಳಿಯುತ್ತದೆ. ಆದುದರಿಂದ ಅವರು, ‘ಯೇಸುವೇ ನಮಗೆ ಸಹಾಯಮಾಡು!’ ಎಂದು ಕೂಗಿಕೊಳ್ಳುತ್ತಾರೆ.

ಯೇಸು ಆ ಕುರುಡರನ್ನು ಕರೆದು, ‘ನಾನು ನಿಮಗೆ ಏನು ಮಾಡಬೇಕೆಂದು ಬಯಸುತ್ತೀರಿ?’ ಎಂದು ಕೇಳುತ್ತಾನೆ. ಅದಕ್ಕವರು, ‘ನಮ್ಮ ಕಣ್ಣುಗಳು ತೆರೆಯಲ್ಪಡಬೇಕು ಸ್ವಾಮೀ’ ಎಂದು ಉತ್ತರಿಸುತ್ತಾರೆ. ಯೇಸು ಅವರ ಕಣ್ಣುಗಳನ್ನು ಮುಟ್ಟುತ್ತಾನೆ. ಆ ಕೂಡಲೆ ಅವರಿಗೆ ಕಣ್ಣು ಕಾಣಿಸುತ್ತದೆ! ಯೇಸು ಈ ಎಲ್ಲಾ ಆಶ್ಚರ್ಯಕರ ಅದ್ಭುತಗಳನ್ನು ಯಾಕೆ ಮಾಡುತ್ತಾನೆಂದು ನಿಮಗೆ ಗೊತ್ತೋ? ಯಾಕೆಂದರೆ ಅವನು ಜನರನ್ನು ಪ್ರೀತಿಸುತ್ತಾನೆ ಮತ್ತು ಜನರು ತನ್ನಲ್ಲಿ ನಂಬಿಕೆಯಿಡಬೇಕೆಂದು ಬಯಸುತ್ತಾನೆ. ಆದುದರಿಂದ ಅವನು ರಾಜನಾಗಿ ಭೂಮಿಯನ್ನು ಆಳುವಾಗ ಯಾರೊಬ್ಬರೂ ಕಾಯಿಲೆ ಬೀಳುವುದಿಲ್ಲವೆಂಬ ಭರವಸೆ ನಮಗಿರಬಲ್ಲದು.