ಎರಡು ದಿನಗಳ ನಂತರ ಅಂದರೆ ಗುರುವಾರ ರಾತ್ರಿಯಂದು ಯೇಸು ಮತ್ತು ಅವನ 12 ಮಂದಿ ಅಪೊಸ್ತಲರು ಮಾಳಿಗೆಯ ಮೇಲಿರುವ ಈ ದೊಡ್ಡ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಲು ಬಂದಿರುತ್ತಾರೆ. ಒಬ್ಬ ಮನುಷ್ಯನು ಹೊರಟು ಹೋಗುತ್ತಿರುವುದನ್ನು ಅಲ್ಲಿ ನೀವು ಕಾಣಬಹುದು. ಅವನು ಇಸ್ಕರಿಯೋತ ಯೂದನು. ಯೇಸುವನ್ನು ಹೇಗೆ ಹಿಡಿಯಬಹುದೆಂದು ಯಾಜಕರಿಗೆ ತಿಳಿಸಲು ಅವನು ಹೋಗುತ್ತಿದ್ದಾನೆ.

ಕೇವಲ ಒಂದು ದಿನ ಮುಂಚೆ ಯೂದನು ಆ ಯಾಜಕರ ಬಳಿಗೆ ಹೋಗಿ, ‘ಯೇಸುವನ್ನು ಹಿಡಿಯಲು ನಾನು ನಿಮಗೆ ಸಹಾಯ ಮಾಡಿದರೆ ನೀವು ನನಗೇನು ಕೊಡುವಿರಿ?’ ಎಂದು ಕೇಳಿದ್ದನು. ಅದಕ್ಕವರು, ‘ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡುತ್ತೇವೆ’ ಎಂದರು. ಆದುದರಿಂದ ಆ ಜನರನ್ನು ಯೇಸುವಿನ ಬಳಿಗೆ ಕರೆತರಲು ಯೂದನು ಈಗ ಹೋಗುತ್ತಿದ್ದಾನೆ. ಎಂಥ ದ್ರೋಹ ಅಲ್ಲವೇ?

ಪಸ್ಕದೂಟವು ಮುಗಿಯುತ್ತದೆ. ಆದರೆ ಯೇಸು ಈಗ ಇನ್ನೊಂದು ವಿಶೇಷ ಭೋಜನವನ್ನು ಆರಂಭಿಸುತ್ತಾನೆ. ಅವನು ರೊಟ್ಟಿಯನ್ನು ತೆಗೆದುಕೊಂಡು ಮುರಿದು ತನ್ನ ಅಪೊಸ್ತಲರಿಗೆ ಕೊಡುತ್ತಾ, ‘ತಿನ್ನಿರಿ, ಯಾಕೆಂದರೆ ಇದು ನಿಮಗೋಸ್ಕರ ಕೊಡಲಾಗುವ ನನ್ನ ದೇಹವನ್ನು ಸೂಚಿಸುತ್ತದೆ’ ಅಂದನು. ಅನಂತರ ಅವನು ದ್ರಾಕ್ಷಾಮದ್ಯದ ಪಾತ್ರೆಯನ್ನು ತೆಗೆದು ಅವರಿಗೆ ಕೊಟ್ಟು, ‘ಕುಡಿಯಿರಿ, ಯಾಕೆಂದರೆ ಇದು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತವನ್ನು ಸೂಚಿಸುತ್ತದೆ’ ಎಂದು ಹೇಳಿದನು. ಈ ವಿಶೇಷ ಭೋಜನವನ್ನು ಬೈಬಲ್‌ ‘ಕರ್ತನ ಸಂಧ್ಯಾ ಭೋಜನ’ ಅಥವಾ ‘ಕರ್ತನ ರಾತ್ರಿ ಭೋಜನ’ ಎಂದು ಕರೆಯುತ್ತದೆ.

ಇಸ್ರಾಯೇಲ್ಯರು ಪಸ್ಕದೂಟವನ್ನು ಮಾಡಲು ಕಾರಣವೇನೆಂದರೆ, ಐಗುಪ್ತದಲ್ಲಿ ದೇವದೂತನು ಅವರ ಮನೆಗಳನ್ನು ‘ದಾಟಿಹೋಗಿ’ ಐಗುಪ್ತ್ಯರ ಮನೆಗಳಲ್ಲಿದ್ದ ಚೊಚ್ಚಲ ಮಕ್ಕಳನ್ನು ಸಂಹರಿಸಿದ ಆ ಸಮಯವನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿತ್ತು. ಈಗಲಾದರೋ ಯೇಸು ತನ್ನ ಹಿಂಬಾಲಕರು ತನ್ನನ್ನು ಮತ್ತು ತಾನು ಅವರಿಗೋಸ್ಕರ ಹೇಗೆ ಜೀವವನ್ನು ಕೊಟ್ಟೆನೆಂಬುದನ್ನು ನೆನಪಿಸಿಕೊಳ್ಳುವಂತೆ ಬಯಸುತ್ತಾನೆ. ಆದುದರಿಂದಲೇ ಈ ವಿಶೇಷ ಭೋಜನವನ್ನು ಪ್ರತಿ ವರ್ಷ ಆಚರಿಸುವಂತೆ ಅವನು ಅವರಿಗೆ ಹೇಳುತ್ತಾನೆ.

ಕರ್ತನ ಸಂಧ್ಯಾ ಭೋಜನವನ್ನು ಮಾಡಿದ ಮೇಲೆ ಯೇಸು ತನ್ನ ಶಿಷ್ಯರಿಗೆ ಧೈರ್ಯವಾಗಿರುವಂತೆ ಮತ್ತು ನಂಬಿಕೆಯಲ್ಲಿ ದೃಢರಾಗಿರುವಂತೆ ಹೇಳುತ್ತಾನೆ. ಕೊನೆಗೆ, ಅವರು ದೇವರಿಗೆ ಕೀರ್ತನೆಗಳನ್ನು ಹಾಡಿ ಹೊರಟುಹೋಗುತ್ತಾರೆ. ಈಗ ರಾತ್ರಿ ಬಹಳ ಹೊತ್ತಾಗಿದೆ, ಪ್ರಾಯಶಃ ಮಧ್ಯರಾತ್ರಿ ಕಳೆದಿದೆ. ಈಗ ಅವರು ಎಲ್ಲಿಗೆ ಹೋಗುತ್ತಾರೆಂದು ನಾವು ನೋಡೋಣ.