ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 78

ಗೋಡೆಯ ಮೇಲೆ ಕೈಬರಹ

ಗೋಡೆಯ ಮೇಲೆ ಕೈಬರಹ

ಇಲ್ಲಿ ಏನು ಸಂಭವಿಸುತ್ತಿದೆ ಗೊತ್ತಾ? ಜನರು ಒಂದು ದೊಡ್ಡ ಔತಣವನ್ನು ನಡಿಸುತ್ತಿದ್ದಾರೆ. ಬಾಬೆಲಿನ ಅರಸನು ಒಂದು ಸಾವಿರ ಪ್ರಧಾನ ಅತಿಥಿಗಳನ್ನು ಆಮಂತ್ರಿಸಿದ್ದಾನೆ. ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯದಿಂದ ತಕ್ಕೊಂಡು ಬಂದಿದ್ದ ಬೆಳ್ಳಿಬಂಗಾರದ ಪಾತ್ರೆಗಳನ್ನೂ ಬೋಗುಣಿಗಳನ್ನೂ ಅವರು ಈ ಔತಣದಲ್ಲಿ ಬಳಸುತ್ತಿದ್ದಾರೆ. ಆದರೆ ಥಟ್ಟನೆ ಒಬ್ಬ ಮನುಷ್ಯನ ಕೈಬೆರಳುಗಳು ಗಾಳಿಯಲ್ಲಿ ತೋರಿಬಂದು ಗೋಡೆಯ ಮೇಲೆ ಬರೆಯಲಾರಂಭಿಸುತ್ತವೆ. ಎಲ್ಲರೂ ಹೆದರಿಹೋಗುತ್ತಾರೆ.

ಈಗ ನೆಬೂಕದ್ನೆಚ್ಚರನ ಮೊಮ್ಮಗನಾದ ಬೇಲ್ಶೆಚ್ಚರನು ಅರಸನಾಗಿದ್ದಾನೆ. ಅವನು ವಿದ್ವಾಂಸರನ್ನು ಕರೆಯಿಸಿ ಎಂದು ಗಟ್ಟಿಯಾಗಿ ಕೂಗಿ ಹೇಳುತ್ತಾನೆ. ‘ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ಅನೇಕ ಬಹುಮಾನಗಳನ್ನು ಕೊಟ್ಟು, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನಾಗಿ ನೇಮಿಸುವೆನು’ ಎನ್ನುತ್ತಾನೆ ಅರಸನು. ಆದರೆ ಆ ವಿದ್ವಾಂಸರಲ್ಲಿ ಒಬ್ಬರಿಗೂ ಆ ಗೋಡೆಯ ಮೇಲಿನ ಬರಹವನ್ನು ಓದಲಿಕ್ಕಾಗಲಿ ಅದರ ಅರ್ಥವನ್ನು ತಿಳಿಸಲಿಕ್ಕಾಗಲಿ ಆಗಲಿಲ್ಲ.

ಈ ಗದ್ದಲ ಕೇಳಿ ಅರಸನ ತಾಯಿ ಭೋಜನಶಾಲೆಗೆ ಬರುತ್ತಾಳೆ. ‘ನೀನು ಹೆದರಬೇಡ. ಪವಿತ್ರದೇವರುಗಳನ್ನು ಬಲ್ಲಾತನೊಬ್ಬನು ನಿನ್ನ ರಾಜ್ಯದಲ್ಲಿದ್ದಾನೆ. ನಿನ್ನ ಅಜ್ಜನಾದ ನೆಬೂಕದ್ನೆಚ್ಚರನು ಅರಸನಾಗಿದ್ದಾಗ ಅವನನ್ನು ತನ್ನ ವಿದ್ವಾಂಸರೆಲ್ಲರ ಮುಖ್ಯಸ್ಥನನ್ನಾಗಿ ಮಾಡಿದ್ದನು. ಅವನ ಹೆಸರು ದಾನಿಯೇಲ. ಅವನನ್ನು ಕರೇಕಳುಹಿಸು. ಇದೆಲ್ಲಾದರ ಅರ್ಥವನ್ನು ಅವನು ನಿನಗೆ ತಿಳಿಸುವನು’ ಎಂದು ಅವಳು ಅರಸನಿಗೆ ಹೇಳುತ್ತಾಳೆ.

ಕೂಡಲೆ ದಾನಿಯೇಲನನ್ನು ಕರೆದುಕೊಂಡು ಬರುತ್ತಾರೆ. ಅರಸನು ಕೊಡುವ ಯಾವುದೇ ಕೊಡುಗೆಗಳನ್ನು ದಾನಿಯೇಲನು ನಿರಾಕರಿಸಿ, ಯೆಹೋವನು ಬೇಲ್ಶೆಚ್ಚರನ ಅಜ್ಜನಾದ ನೆಬೂಕದ್ನೆಚ್ಚರನನ್ನು ರಾಜಪಧವಿಯಿಂದ ತೆಗೆದುಹಾಕಿದ್ದೇಕೆಂದು ಹೇಳಲಾರಂಭಿಸುತ್ತಾನೆ. ‘ಅವನು ಬಹು ಉಬ್ಬಿಕೊಂಡಿದ್ದನು. ಆದುದರಿಂದ ಯೆಹೋವನು ಅವನನ್ನು ಶಿಕ್ಷಿಸಿದನು’ ಎಂದು ಹೇಳುತ್ತಾನೆ ದಾನಿಯೇಲನು.

‘ಆದರೆ ನೀನು ಅವನಿಗೆ ಸಂಭವಿಸಿದ್ದೆಲ್ಲವನ್ನು ತಿಳುಕೊಂಡರೂ ನೆಬೂಕದ್ನೆಚ್ಚರನಂತೆಯೇ ಉಬ್ಬಿಕೊಂಡಿರುತ್ತೀ. ಯೆಹೋವನ ಆಲಯದಿಂದ ತಂದ ಪಾತ್ರೆಗಳಲ್ಲಿ ಮತ್ತು ಬೋಗುಣಿಗಳಲ್ಲಿ ಪಾನಮಾಡಿರುತ್ತೀ. ಮರಕಲ್ಲುಗಳಿಂದ ಮಾಡಲ್ಪಟ್ಟ ದೇವರುಗಳನ್ನು ಸ್ತುತಿಸಿದ್ದೀ. ನಮ್ಮ ಮಹಾ ನಿರ್ಮಾಣಿಕನನ್ನು ನೀನು ಗೌರವಿಸಿರುವುದಿಲ್ಲ. ಆದುದರಿಂದಲೇ ಈ ಬರಹಗಳನ್ನು ಬರೆಯಲು ದೇವರು ಕೈಯನ್ನು ಕಳುಹಿಸಿದ್ದಾನೆ’ ಎಂದು ದಾನಿಯೇಲನು ಬೇಲ್ಶೆಚ್ಚರನಿಗೆ ವಿವರಿಸುತ್ತಾನೆ.

‘ಬರೆದ ಬರಹವು ಇದೇ—ಮೆನೇ, ಮೆನೇ, ತೆಕೇಲ್‌, ಮತ್ತು ಪಾರ್ಸಿನ್‌’ ಅನ್ನುತ್ತಾನೆ ದಾನಿಯೇಲನು.

‘ಮೆನೇ ಅಂದರೆ ದೇವರು ನಿನ್ನ ಆಳಿಕೆಯ ದಿನಗಳನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ. ತೆಕೇಲ್‌ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿದ್ದೀ. ಪಾರ್ಸಿನ್‌ ಅಂದರೆ ನಿನ್ನ ರಾಜ್ಯವು ಮೇದ್ಯಯರಿಗೂ ಪಾರಸಿಯರಿಗೂ ಕೊಡಲ್ಪಟ್ಟಿದೆ’ ಎಂದು ದಾನಿಯೇಲನು ಅರ್ಥವನ್ನು ವಿವರಿಸಿ ಹೇಳುತ್ತಾನೆ.

ದಾನಿಯೇಲನು ಇನ್ನೂ ಮಾತಾಡುತ್ತಿರುವಾಗಲೇ, ಮೇದ್ಯಯ ಮತ್ತು ಪಾರಸಿಯರು ಬಾಬೆಲನ್ನು ಆಕ್ರಮಿಸಲು ಪ್ರಾರಂಭಿಸಿರುತ್ತಾರೆ. ಅವರು ಪಟ್ಟಣವನ್ನು ವಶಪಡಿಸಿಕೊಂಡು ಬೇಲ್ಶೆಚ್ಚರನನ್ನು ಕೊಲ್ಲುತ್ತಾರೆ. ಗೋಡೆಯ ಮೇಲೆ ಬರೆಯಲ್ಪಟ್ಟ ಆ ವಿಷಯವು ಅದೇ ರಾತ್ರಿ ಸತ್ಯವಾಗುತ್ತದೆ! ಆದರೆ ಇಸ್ರಾಯೇಲ್ಯರಿಗೆ ಈಗ ಏನು ಸಂಭವಿಸಲಿದೆ? ನಾವದನ್ನು ಮತ್ತೆ ಕಂಡುಕೊಳ್ಳುವೆವು. ಆದರೆ ಮೊದಲು ದಾನಿಯೇಲನಿಗೆ ಏನಾಗುತ್ತದೆಂದು ನೋಡೋಣ.

ದಾನಿಯೇಲ 5:1-31.