ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 59

ದಾವೀದನು ಓಡಿಹೋಗಲು ಕಾರಣ

ದಾವೀದನು ಓಡಿಹೋಗಲು ಕಾರಣ

ದಾವೀದನು ಗೊಲ್ಯಾತನನ್ನು ಕೊಂದನಂತರ, ಇಸ್ರಾಯೇಲ್ಯರ ಸೇನಾಪತಿ ಅಬ್ನೇರನು ಅವನನ್ನು ಸೌಲನ ಬಳಿಗೆ ಕರೆದುಕೊಂಡು ಬರುತ್ತಾನೆ. ಸೌಲನು ದಾವೀದನನ್ನು ಬಹಳವಾಗಿ ಮೆಚ್ಚುತ್ತಾನೆ. ಅವನನ್ನು ತನ್ನ ಸೇನಾಪತಿಯನ್ನಾಗಿ ಮಾಡುತ್ತಾನೆ ಮತ್ತು ತನ್ನ ಅರಮನೆಯಲ್ಲಿಯೇ ಇರಿಸಿಕೊಳ್ಳುತ್ತಾನೆ.

ತದನಂತರ, ಇಸ್ರಾಯೇಲಿನ ಸೈನ್ಯವು ಫಿಲಿಷ್ಟಿಯರೊಂದಿಗೆ ಹೋರಾಡಿ ಹಿಂದೆ ಬರುವಾಗ ಸ್ತ್ರೀಯರು ಹೀಗೆ ಹಾಡುತ್ತಾರೆ: ‘ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ಆದರೆ ದಾವೀದನು ಹತ್ತುಸಾವಿರಗಟ್ಟಳೆಯಾಗಿ ಕೊಂದನು.’ ಇದನ್ನು ಕೇಳಿದಾಗ ಸೌಲನಿಗೆ ಹೊಟ್ಟೆಕಿಚ್ಚಾಗುತ್ತದೆ. ಯಾಕೆಂದರೆ ಜನರು ಸೌಲನಿಗಿಂತ ದಾವೀದನಿಗೆ ಹೆಚ್ಚು ಗೌರವವನ್ನು ಕೊಡುತ್ತಾರೆ. ಆದರೆ ಸೌಲನ ಮಗನಾದ ಯೋನಾತಾನನು ಅಸೂಯೆಪಡುವುದಿಲ್ಲ. ಅವನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಾನೆ. ದಾವೀದನು ಸಹ ಯೋನಾತಾನನನ್ನು ಪ್ರೀತಿಸುತ್ತಾನೆ. ಹೀಗೆ ಅವರಿಬ್ಬರು ತಾವು ಯಾವಾಗಲೂ ಸ್ನೇಹಿತರಾಗಿಯೇ ಇರುವೆವೆಂದು ಒಬ್ಬರಿಗೊಬ್ಬರು ವಚನಕೊಡುತ್ತಾರೆ.

ಕಿನ್ನರಿ ಬಾರಿಸುವುದರಲ್ಲಿ ದಾವೀದನು ನಿಪುಣ. ಅವನು ನುಡಿಸುವ ಸಂಗೀತ ಸೌಲನಿಗೂ ಇಷ್ಟ. ಆದರೆ ಒಂದು ದಿನ ಸೌಲನು ದಾವೀದನ ಮೇಲಿನ ಅಸೂಯೆಯಿಂದ ಭೀಕರ ಕೆಲಸವನ್ನು ಮಾಡುತ್ತಾನೆ. ದಾವೀದನು ಕಿನ್ನರಿ ಬಾರಿಸುತ್ತಿದ್ದಾಗ ಅವನು, ‘ನಿನ್ನನ್ನು ಗೋಡೆಗೆ ಸೇರಿಸಿ ತಿವಿದುಬಿಡುತ್ತೇನೆ’ ಎಂದು ಕೂಗಿ ತನ್ನ ಈಟಿಯನ್ನು ಎಸೆಯುತ್ತಾನೆ! ತಕ್ಷಣ ದಾವೀದನು ಪಕ್ಕಕ್ಕೆ ಸರಿಯುತ್ತಾನೆ. ಈಟಿ ಗುರಿತಪ್ಪುತ್ತದೆ. ಇನ್ನೊಂದು ಸಲ ಸೌಲನು ದಾವೀದನನ್ನು ಕೊಲ್ಲಲು ಈಟಿಯನ್ನು ಎಸೆಯುತ್ತಾನೆ. ಆಗಲೂ ಅದು ಗುರಿತಪ್ಪುತ್ತದೆ. ತಾನೀಗ ತುಂಬಾ ಜಾಗ್ರತೆಯಿಂದ ಇರಬೇಕೆಂದು ದಾವೀದನು ತಿಳಿದುಕೊಳ್ಳುತ್ತಾನೆ.

ಸೌಲನು ಕೊಟ್ಟ ವಚನವೇನೆಂದು ನಿಮಗೆ ನೆನಪಿದೆಯೇ? ಗೊಲ್ಯಾತನನ್ನು ಕೊಂದವನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವೆನೆಂದು ಅವನು ಹೇಳಿದ್ದನು. ಕೊನೆಗೆ ತನ್ನ ಮಗಳಾದ ಮೀಕಲಳನ್ನು ದಾವೀದನು ಮದುವೆಯಾಗಬಹುದೆಂದು ಸೌಲನು ಹೇಳುತ್ತಾನೆ. ಆದರೆ ಮೊದಲು ಅವನು ಶತ್ರುಗಳಾದ ಫಿಲಿಷ್ಟಿಯರಲ್ಲಿ 100 ಮಂದಿಯನ್ನು ಕೊಲ್ಲಬೇಕೆಂದು ಹೇಳುತ್ತಾನೆ. ಹೀಗೆ ಏಕೆ ಹೇಳಿದನೆಂದು ಸ್ವಲ್ಪ ಯೋಚಿಸಿ! ಫಿಲಿಷ್ಟಿಯರು ದಾವೀದನನ್ನು ಖಂಡಿತ ಕೊಂದುಬಿಡಬಹುದೆಂದು ನೆನಸಿಯೇ ಸೌಲನು ಹೀಗೆ ಹೇಳಿದನು. ಆದರೆ ಅವರಿಗೆ ಕೊಲ್ಲಲಿಕ್ಕಾಗುವುದಿಲ್ಲ. ಹೀಗೆ ಸೌಲನು ತನ್ನ ಮಗಳನ್ನು ದಾವೀದನಿಗೆ ಮದುವೆಮಾಡಿ ಕೊಡುತ್ತಾನೆ.

ಒಂದು ದಿನ ಸೌಲನು, ದಾವೀದನನ್ನು ಕೊಲ್ಲಬೇಕೆಂದು ಯೋನಾತಾನನಿಗೂ ತನ್ನ ಎಲ್ಲಾ ಸೇವಕರಿಗೂ ಹೇಳುತ್ತಾನೆ. ಆದರೆ ಯೋನಾತಾನನು ‘ದಾವೀದನಿಗೆ ಏನೂ ಕೇಡು ಮಾಡಬೇಡಿ. ಅವನು ನಿಮಗೆಂದೂ ಏನೂ ಕೆಟ್ಟದನ್ನು ಮಾಡಿಲ್ಲ. ಬದಲಿಗೆ ನಿಮಗೆ ದೊಡ್ಡ ಸಹಾಯವನ್ನೇ ಮಾಡಿದ್ದಾನೆ. ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಅವನು ಆ ಗೊಲ್ಯಾತನನ್ನು ಕೊಂದನು. ನೀವದನ್ನು ನೋಡಿ ಸಂತೋಷಪಟ್ಟಿರಲ್ಲಾ’ ಎಂದು ತನ್ನ ತಂದೆಗೆ ಹೇಳುತ್ತಾನೆ.

ಸೌಲನು ತನ್ನ ಮಗನಿಗೆ ಕಿವಿಗೊಡುತ್ತಾನೆ ಮತ್ತು ದಾವೀದನಿಗೆ ಹಾನಿಮಾಡುವುದಿಲ್ಲವೆಂದು ವಚನಕೊಡುತ್ತಾನೆ. ಯೋನಾತಾನನು ದಾವೀದನನ್ನು ಹಿಂದೆ ಕರೆತರುತ್ತಾನೆ. ಮುಂಚಿನಂತೆ ದಾವೀದನು ಸೌಲನ ಅರಮನೆಯಲ್ಲಿ ಕೆಲಸಮಾಡುತ್ತಾನೆ. ಆದರೆ, ಒಂದು ದಿನ ದಾವೀದನು ಸಂಗೀತ ನುಡಿಸುತ್ತಿದ್ದಾಗ ಮೂರನೆಯ ಸಾರಿ ಸೌಲನು ಪುನಃ ತನ್ನ ಈಟಿಯನ್ನು ದಾವೀದನೆಡೆಗೆ ಎಸೆಯುತ್ತಾನೆ. ದಾವೀದನು ತಪ್ಪಿಸಿಕೊಳ್ಳುತ್ತಾನೆ. ಈಟಿ ಗೋಡೆಗೆ ನಾಟುತ್ತದೆ. ತಾನು ತಪ್ಪಿಸಿಕೊಂಡು ಓಡಿಹೋಗಬೇಕು ಇಲ್ಲದಿದ್ದರೆ ಜೀವಕ್ಕೆ ಅಪಾಯವೆಂದು ದಾವೀದನಿಗೆ ಗೊತ್ತಾಗುತ್ತದೆ!

ಆ ರಾತ್ರಿ ದಾವೀದನು ತನ್ನ ಮನೆಗೆ ಹೋಗುತ್ತಾನೆ. ಆದರೆ ಸೌಲನು ಅವನನ್ನು ಕೊಲ್ಲಲು ಕೆಲವು ಜನರನ್ನು ಅಲ್ಲಿಗೆ ಕಳುಹಿಸುತ್ತಾನೆ. ಮೀಕಲಳಿಗೆ ತನ್ನ ತಂದೆಯ ಈ ಉಪಾಯ ತಿಳಿಯುತ್ತದೆ. ಆಗ ಅವಳು ತನ್ನ ಗಂಡನಿಗೆ ‘ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ಖಂಡಿತ ನಾಳೆ ಹತನಾಗುವಿ’ ಎಂದು ಎಚ್ಚರಿಸುತ್ತಾಳೆ. ಆಮೇಲೆ ಆ ರಾತ್ರಿ ಒಂದು ಕಿಟಿಕಿಯ ಮೂಲಕ ತಪ್ಪಿಸಿಕೊಳ್ಳುವಂತೆ ಅವಳು ದಾವೀದನಿಗೆ ಸಹಾಯಮಾಡುತ್ತಾಳೆ. ಸೌಲನ ಕೈಗೆ ಸಿಗದಂತೆ ದಾವೀದನು ಸುಮಾರು ಏಳು ವರ್ಷಗಳ ತನಕ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಳ್ಳಬೇಕಾಗುತ್ತದೆ.

1 ಸಮುವೇಲ 17:55-58; 18:1-30; 19:1-18.