ದಾವೀದನು ಸಾಯುವ ಮುಂಚೆ, ಯೆಹೋವನು ತನ್ನ ಆಲಯವನ್ನು ಕಟ್ಟುವುದಕ್ಕಾಗಿ ಕೊಟ್ಟಿದ್ದ ನಕ್ಷೆಗಳನ್ನು ಸೊಲೊಮೋನನ ಕೈಗೆ ಒಪ್ಪಿಸಿದ್ದನು. ಸೊಲೊಮೋನನು ತನ್ನ ಆಳಿಕೆಯ ನಾಲ್ಕನೆಯ ವರ್ಷದಲ್ಲಿ ಆಲಯವನ್ನು ಕಟ್ಟಲಾರಂಭಿಸುತ್ತಾನೆ. ಅದನ್ನು ಕಟ್ಟಿ ಮುಗಿಸಲು ಏಳೂವರೆ ವರ್ಷ ಹಿಡಿಯುತ್ತದೆ. ಲಕ್ಷಕ್ಕಿಂತಲೂ ಹೆಚ್ಚು ಜನರು ಆ ಕೆಲಸವನ್ನು ಮಾಡುತ್ತಾರೆ. ಅಷ್ಟೇ ಅಲ್ಲ, ಅದನ್ನು ಕಟ್ಟಲು ಬಹಳ ಹಣ ತಗಲುತ್ತದೆ. ಏಕೆಂದರೆ, ಅದರ ನಿರ್ಮಾಣಕ್ಕಾಗಿ ತುಂಬಾ ಬೆಳ್ಳಿಬಂಗಾರವನ್ನು ಬಳಸಲಾಗುತ್ತದೆ.

ಗುಡಾರಕ್ಕೆ ಇದ್ದಂತೆಯೇ ದೇವಾಲಯಕ್ಕೂ ಎರಡು ಮುಖ್ಯ ಕೋಣೆಗಳಿವೆ. ಆದರೆ ಈ ಕೋಣೆಗಳು ಗುಡಾರದಲ್ಲಿದ್ದ ಕೋಣೆಗಳಿಗಿಂತ ಎರಡಷ್ಟು ದೊಡ್ಡದಾಗಿವೆ. ಆಲಯದ ಒಳಗಿನ ಕೋಣೆಯಲ್ಲಿ ಸೊಲೊಮೋನನು ಒಡಂಬಡಿಕೆಯ ಮಂಜೂಷವನ್ನು ಇಡಿಸಿದ್ದಾನೆ. ಗುಡಾರದಲ್ಲಿದ್ದ ಇತರ ಸಾಮಾನುಗಳನ್ನು ಬೇರೆ ಕೋಣೆಯಲ್ಲಿ ಇಡಲಾಗುತ್ತದೆ.

ದೇವಾಲಯವು ಕಟ್ಟಿ ಮುಗಿಸಲ್ಪಟ್ಟಾಗ ಅಲ್ಲಿ ಒಂದು ದೊಡ್ಡ ಉತ್ಸವವು ನಡೆಯುತ್ತದೆ. ನೀವು ಚಿತ್ರದಲ್ಲಿ ನೋಡುವಂತೆ, ಸೊಲೊಮೋನನು ಆಲಯದ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತಾನೆ. ‘ಯೆಹೋವ ದೇವರೇ, ಉನ್ನತ ಉನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ಈ ಮಂದಿರವು ನಿನಗೆ ಹೇಗೆ ಸಾಕಾದೀತು. ಆದರೂ ನನ್ನ ದೇವರೇ, ನಿನ್ನ ಜನರು ಈ ಸ್ಥಳದ ಕಡೆಗೆ ತಿರುಗಿಕೊಂಡು ಪ್ರಾರ್ಥನೆ ಮಾಡುವಾಗ ದಯವಿಟ್ಟು ಲಾಲಿಸು.’

ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಮುಗಿಸುವಾಗ ಆಕಾಶದಿಂದ ಬೆಂಕಿ ಬೀಳುತ್ತದೆ. ಅದು ಅಲ್ಲಿದ್ದ ಪ್ರಾಣಿ ಯಜ್ಞಗಳನ್ನು ದಹಿಸಿಬಿಡುತ್ತದೆ. ಅಲ್ಲದೆ, ಯೆಹೋವನ ಉಜ್ವಲ ಬೆಳಕು ಆಲಯವನ್ನು ತುಂಬುತ್ತದೆ. ಯೆಹೋವನು ಆಲಿಸುತ್ತಿದ್ದಾನೆ ಮತ್ತು ಆಲಯವೂ ಸೊಲೊಮೋನನ ಪ್ರಾರ್ಥನೆಯೂ ಆತನಿಗೆ ಮೆಚ್ಚಿಗೆಯಾಗಿವೆ ಎಂದು ಇದು ತೋರಿಸುತ್ತದೆ. ಗುಡಾರದ ಬದಲಿಗೆ, ಈ ದೇವಾಲಯವು ಈಗ ಜನರು ಆರಾಧನೆಗಾಗಿ ಕೂಡಿಬರುವ ಸ್ಥಳವಾಗುತ್ತದೆ.

ಬಹಳ ವರ್ಷಗಳ ವರೆಗೆ ಸೊಲೊಮೋನನು ವಿವೇಕದಿಂದ ಆಳುತ್ತಾನೆ. ಜನರೆಲ್ಲರೂ ಸಂತೋಷದಿಂದಿರುತ್ತಾರೆ. ಆದರೆ ಯೆಹೋವನನ್ನು ಆರಾಧಿಸದ ಅನೇಕ ವಿದೇಶೀ ಸ್ತ್ರೀಯರನ್ನು ಸೊಲೊಮೋನನು ವಿವಾಹವಾಗುತ್ತಾನೆ. ಅವರಲ್ಲಿ ಒಬ್ಬಳು ವಿಗ್ರಹಕ್ಕೆ ಪೂಜೆಮಾಡುವುದು ನಿಮಗೆ ಕಾಣಿಸುತ್ತದೋ? ಕೊನೆಗೆ ಸೊಲೊಮೋನನ ಪತ್ನಿಯರು ಅವನು ಬೇರೆ ದೇವರುಗಳನ್ನು ಆರಾಧಿಸುವಂತೆ ಮಾಡುತ್ತಾರೆ. ಸೊಲೊಮೋನನು ಹೀಗೆ ಮಾಡುವಾಗ ಏನಾಗುತ್ತದೆಂದು ನಿಮಗೆ ತಿಳಿದಿದೆಯೇ? ಅವನು ಜನರನ್ನು ಇನ್ನು ಮುಂದೆ ದಯೆಯಿಂದ ಉಪಚರಿಸುವುದಿಲ್ಲ. ಅವನು ಕ್ರೂರನಾಗುತ್ತಾನೆ ಮತ್ತು ಜನರು ಅವನ ಆಳಿಕೆಯಲ್ಲಿ ಸಂತೋಷಪಡುವುದಿಲ್ಲ.

ಇದರಿಂದ ಯೆಹೋವನು ಸೊಲೊಮೋನನ ಮೇಲೆ ಸಿಟ್ಟುಗೊಳ್ಳುತ್ತಾನೆ. ಆತನು ಅವನಿಗೆ ಹೇಳುವುದು: ‘ನಾನು ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ಇನ್ನೊಬ್ಬ ಪುರುಷನಿಗೆ ಕೊಡುವೆನು. ಆದರೆ ಅದನ್ನು ನಿನ್ನ ಜೀವಮಾನ ಕಾಲದಲ್ಲಿ ಮಾಡದೆ ನಿನ್ನ ಮಗನ ಆಳಿಕೆಯಲ್ಲಿ ಮಾಡುವೆನು. ಆದರೆ ನಿನ್ನ ಮಗನಿಂದ ರಾಜ್ಯದ ಜನರೆಲ್ಲರನ್ನು ನಾನು ಕಿತ್ತುಕೊಳ್ಳುವುದಿಲ್ಲ.’ ಇದು ಹೇಗೆ ಸಂಭವಿಸುತ್ತದೆಂದು ನಾವು ನೋಡೋಣ.

1 ಪೂರ್ವಕಾಲವೃತ್ತಾಂತ 28:9-21; 29:1-9; 1 ಅರಸುಗಳು 5:1-18; 2 ಪೂರ್ವಕಾಲವೃತ್ತಾಂತ 6:12-42; 7:1-5; 1 ಅರಸುಗಳು 11:9-13.