ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 56

ಸೌಲ—ಇಸ್ರಾಯೇಲಿನ ಮೊದಲನೆಯ ಅರಸ

ಸೌಲ—ಇಸ್ರಾಯೇಲಿನ ಮೊದಲನೆಯ ಅರಸ

 ಮುವೇಲನು ಆ ಮನುಷ್ಯನ ತಲೆಯ ಮೇಲೆ ಎಣ್ಣೆಯನ್ನು ಹೊಯ್ಯುತ್ತಿರುವುದನ್ನು ನೋಡಿರಿ. ಅರಸನಾಗಿ ಆರಿಸಲ್ಪಟ್ಟಿದ್ದಾನೆಂದು ತೋರಿಸಲು ಒಬ್ಬ ವ್ಯಕ್ತಿಗೆ ಅವರು ಹಾಗೆಯೇ ಮಾಡುತ್ತಿದ್ದರು. ಸೌಲನ ತಲೆಯ ಮೇಲೆ ಎಣ್ಣೆಯನ್ನು ಹೊಯ್ಯುವಂತೆ ಯೆಹೋವನೇ ಸಮುವೇಲನಿಗೆ ಹೇಳುತ್ತಾನೆ. ಅದು ಸುವಾಸನೆಭರಿತವಾದ ವಿಶೇಷ ರೀತಿಯ ತೈಲವಾಗಿದೆ.

ಅರಸನಾಗಲು ತಾನು ಯೋಗ್ಯನಲ್ಲವೆಂದು ಸೌಲನು ಎಣಿಸಿದನು. ‘ನಾನು ಇಸ್ರಾಯೇಲ್‌ ಕುಲಗಳಲ್ಲಿ ಅತಿ ಅಲ್ಪವಾಗಿರುವ ಬೆನ್ಯಾಮೀನ್‌ ಕುಲದವನು. ಹಾಗಿರುವಾಗ ಮುಂದೆ ನಾನೊಬ್ಬ ಅರಸನಾಗುವೆನೆಂದು ನೀನು ಯಾಕೆ ಹೇಳುತ್ತೀ?’ ಎಂದು ಅವನು ಸಮುವೇಲನಿಗೆ ಕೇಳುತ್ತಾನೆ. ತಾನೊಬ್ಬ ದೊಡ್ಡ ವ್ಯಕ್ತಿ ಮತ್ತು ಶ್ರೇಷ್ಠನು ಎಂದು ಸೌಲನು ತೋರಿಸಿಕೊಳ್ಳದೆ ಇದ್ದ ಕಾರಣ ಯೆಹೋವನು ಅವನನ್ನು ಮೆಚ್ಚುತ್ತಾನೆ. ಅದಕ್ಕಾಗಿಯೇ ಆತನು ಅವನನ್ನು ಅರಸನಾಗಿ ಆರಿಸಿಕೊಳ್ಳುತ್ತಾನೆ.

ಆದರೆ ಸೌಲನು ಬಡವನಲ್ಲ ಅಥವಾ ಒಬ್ಬ ಸಾಧಾರಣ ಮನುಷ್ಯನೂ ಅಲ್ಲ. ಅವನು ಒಂದು ಶ್ರೀಮಂತ ಕುಟುಂಬದವನು. ಎತ್ತರವಾದ ಅತಿ ಸುಂದರ ಪುರುಷ. ಇಸ್ರಾಯೇಲಿನಲ್ಲಿದ್ದ ಬೇರೆಲ್ಲರಿಗಿಂತಲೂ ಸುಮಾರು ಒಂದು ಅಡಿ ಹೆಚ್ಚು ಎತ್ತರವುಳ್ಳವನು. ಸೌಲನು ಅತಿ ವೇಗದ ಒಬ್ಬ ಓಟಗಾರನೂ ಆಗಿದ್ದಾನೆ. ಮಾತ್ರವಲ್ಲ, ಅತಿ ಬಲಿಷ್ಠ ಪುರುಷನು. ಸೌಲನನ್ನು ರಾಜನಾಗಿ ಆರಿಸಿದುದಕ್ಕಾಗಿ ಜನರು ಸಂತೋಷಪಡುತ್ತಾರೆ. ಅವರೆಲ್ಲರು ‘ಅರಸನು ಚಿರಂಜೀವಿಯಾಗಿರಲಿ!’ ಎಂದು ಕೂಗಿ ಹರಸುತ್ತಾರೆ.

ಇಸ್ರಾಯೇಲಿನ ಶತ್ರುಗಳು ಎಂದಿನಂತೆ ಬಲಾಢ್ಯರು. ಅವರು ಇನ್ನೂ ಇಸ್ರಾಯೇಲ್ಯರಿಗೆ ತುಂಬಾ ತೊಂದರೆ ಮಾಡುತ್ತಿದ್ದಾರೆ. ಸೌಲನು ಅರಸನಾಗಿ ಮಾಡಲ್ಪಟ್ಟ ಸ್ವಲ್ಪದರಲ್ಲಿಯೇ ಅಮ್ಮೋನಿಯರು ಅವರ ವಿರುದ್ಧ ಹೋರಾಡಲು ಬರುತ್ತಾರೆ. ಆದರೆ ಸೌಲನು ಒಂದು ದೊಡ್ಡ ಸೈನ್ಯವನ್ನು ಒಟ್ಟುಗೂಡಿಸಿ, ಅಮ್ಮೋನಿಯರೊಂದಿಗೆ ಹೋರಾಡಿ ಜಯಗಳಿಸುತ್ತಾನೆ. ಇದರಿಂದಾಗಿ ಸೌಲನು ರಾಜನಾದುದಕ್ಕಾಗಿ ಜನರಿಗೆ ಇನ್ನಷ್ಟು ಸಂತೋಷವಾಗುತ್ತದೆ.

ವರ್ಷಗಳು ದಾಟಿದಂತೆ, ಸೌಲನು ಅನೇಕ ಶತ್ರುಗಳನ್ನು ಸೋಲಿಸಿ ಇಸ್ರಾಯೇಲ್ಯರಿಗೆ ಜಯವನ್ನು ತರುತ್ತಾನೆ. ಯೋನಾತಾನನೆಂಬ ಧೀರ ಪುತ್ರನೂ ಸೌಲನಿಗಿದ್ದಾನೆ. ಯೋನಾತಾನನು ಸಹ ಇಸ್ರಾಯೇಲ್‌ ಅನೇಕ ಯುದ್ಧಗಳನ್ನು ಜಯಿಸುವಂತೆ ಸಹಾಯಮಾಡುತ್ತಾನೆ. ಫಿಲಿಷ್ಟಿಯರಿನ್ನೂ ಇಸ್ರಾಯೇಲ್ಯರ ಕಟು ಶತ್ರುಗಳು. ಒಂದು ದಿನ ಸಾವಿರಾರು ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧವಾಗಿ ಯುದ್ಧಮಾಡಲು ಬರುತ್ತಾರೆ.

ಆಗ ಸಮುವೇಲನು ಸೌಲನಿಗೆ ತಾನು ಬಂದು ಯೆಹೋವನಿಗೊಂದು ಯಜ್ಞವನ್ನು ಅಥವಾ ಅರ್ಪಣೆಯನ್ನು ಮಾಡುವ ತನಕ ಕಾಯುವಂತೆ ಹೇಳುತ್ತಾನೆ. ಆದರೆ ಸಮುವೇಲನು ಬರುವುದಕ್ಕೆ ವಿಳಂಬವಾಗುತ್ತದೆ. ಫಿಲಿಷ್ಟಿಯರು ಯುದ್ಧವನ್ನು ಆರಂಭಿಸುವರೊ ಎಂದು ಸೌಲನಿಗೆ ಭಯವಾಗುತ್ತದೆ. ಆದುದರಿಂದ ಅವನು ತಾನೇ ಮುಂದೆ ಹೋಗಿ ಯಜ್ಞವನ್ನು ಅರ್ಪಿಸುತ್ತಾನೆ. ಕೊನೆಗೆ ಸಮುವೇಲನು ಬಂದಾಗ ನಡೆದ ವಿಷಯ ತಿಳಿಯುತ್ತದೆ. ಆಗ ಸೌಲನು ಅವಿಧೇಯನಾಗಿದ್ದಾನೆಂದು ಸಮುವೇಲನು ಹೇಳುತ್ತಾನೆ. ಆದಕಾರಣ, ‘ಯೆಹೋವನು ಬೇರೊಬ್ಬನನ್ನು ಇಸ್ರಾಯೇಲಿನ ಅರಸನಾಗಿ ಆರಿಸಿಕೊಳ್ಳುವನು’ ಅನ್ನುತ್ತಾನೆ ಅವನು.

ತದನಂತರ ಸೌಲನು ಇನ್ನೊಂದು ಕೆಟ್ಟ ಕೆಲಸ ಮಾಡುತ್ತಾನೆ. ಆದುದರಿಂದ ಸಮುವೇಲನು ಅವನಿಗೆ ಹೇಳುವುದು: ‘ಕೊಬ್ಬಿದ ಕುರಿಯ ಯಜ್ಞಕ್ಕಿಂತ ಯೆಹೋವನಿಗೆ ವಿಧೇಯನಾಗುವುದು ಅತ್ಯುತ್ತಮ. ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟಿದ್ದರಿಂದ ಆತನು ನಿನ್ನನ್ನು ಇಸ್ರಾಯೇಲಿನ ಅರಸುತನದಿಂದ ತಳ್ಳಿಬಿಟ್ಟಿದ್ದಾನೆ.’

ಇದರಿಂದ ನಾವು ಒಳ್ಳೆಯ ಪಾಠವನ್ನು ಕಲಿಯಬಲ್ಲೆವು. ಯೆಹೋವನಿಗೆ ಯಾವಾಗಲೂ ವಿಧೇಯರಾಗುವುದು ಅದೆಷ್ಟು ಪ್ರಾಮುಖ್ಯವೆಂದು ಇದು ನಮಗೆ ತೋರಿಸಿಕೊಡುತ್ತದೆ. ಅದಲ್ಲದೆ, ಸೌಲನಂತೆ, ಒಬ್ಬ ಒಳ್ಳೆಯ ವ್ಯಕ್ತಿಯು ಕೆಟ್ಟವನಾಗಿ ಪರಿಣಮಿಸಬಹುದೆಂದೂ ಇದು ತೋರಿಸುತ್ತದೆ. ನಾವು ಕೆಟ್ಟವರಾಗಲು ಎಂದೂ ಬಯಸುವುದಿಲ್ಲ, ಅಲ್ಲವೇ?

1 ಸಮುವೇಲ 9 ರಿಂದ 11 ಅಧ್ಯಾಯಗಳು; 1 ಸಮುವೇಲ 13:5-14; 14:47-52; 15:1-35; 2 ಸಮುವೇಲ 1:23.