ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 74

ಭಯಪಡದ ಒಬ್ಬ ಮನುಷ್ಯ

ಭಯಪಡದ ಒಬ್ಬ ಮನುಷ್ಯ

ಈ ತರುಣನಿಗೆ ಜನರು ಗೇಲಿ ಮಾಡುತ್ತಾ ಕೇಕೆ ಹಾಕಿ ನಗುತ್ತಿದ್ದಾರೆ ನೋಡಿರಿ. ಅವನು ಯಾರೆಂದು ನಿಮಗೆ ಗೊತ್ತೋ? ಅವನೇ ಯೆರೆಮೀಯ. ಅವನು ದೇವರ ಒಬ್ಬ ಮುಖ್ಯ ಪ್ರವಾದಿ.

ರಾಜ ಯೋಷೀಯನು ದೇಶದೊಳಗಿಂದ ವಿಗ್ರಹಗಳನ್ನು ನಾಶಮಾಡಲಾರಂಭಿಸಿದ ತರುವಾಯ ತುಸು ಸಮಯದಲ್ಲೇ ಯೆಹೋವನು ಯೆರೆಮೀಯನಿಗೆ ತನ್ನ ಪ್ರವಾದಿಯಾಗುವಂತೆ ಹೇಳುತ್ತಾನೆ. ಆದರೆ, ಯೆರೆಮೀಯನು ತಾನು ಪ್ರವಾದಿಯಾಗಲು ತೀರ ಚಿಕ್ಕವನೆಂದು ನೆನಸುತ್ತಾನೆ. ಆದರೆ ತಾನೇ ಸಹಾಯ ನೀಡುವೆನೆಂದು ಯೆಹೋವನು ಅವನಿಗೆ ಹೇಳುತ್ತಾನೆ.

ದುಷ್ಕೃತ್ಯಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಯೆರೆಮೀಯನು ಇಸ್ರಾಯೇಲ್ಯರಿಗೆ ಹೇಳುತ್ತಾನೆ. ‘ಬೇರೆ ಜನಾಂಗಗಳು ಆರಾಧಿಸುವ ದೇವರುಗಳು ಸುಳ್ಳು’ ಎಂದು ಹೇಳುತ್ತಾನೆ ಅವನು. ಆದರೆ ಅನೇಕ ಇಸ್ರಾಯೇಲ್ಯರು ಸತ್ಯದೇವರಾದ ಯೆಹೋವನನ್ನು ಆರಾಧಿಸದೆ ಮೂರ್ತಿಗಳನ್ನೇ ಆರಾಧಿಸುತ್ತಾರೆ. ಅವರ ಆ ಕೆಟ್ಟತನಕ್ಕಾಗಿ ದೇವರು ಅವರನ್ನು ಖಂಡಿತ ಶಿಕ್ಷಿಸುವನೆಂದು ಯೆರೆಮೀಯನು ಜನರಿಗೆ ಹೇಳುವಾಗ, ಅವರು ಅವನನ್ನು ನೋಡಿ ನಗುತ್ತಾರಷ್ಟೇ.

ವರ್ಷಗಳು ದಾಟುತ್ತವೆ. ಯೋಷೀಯನು ತೀರಿಹೋಗುತ್ತಾನೆ. ಮೂರು ತಿಂಗಳುಗಳ ಅನಂತರ ಅವನ ಮಗ ಯೆಹೋಯಾಕೀನನು ಅರಸನಾಗುತ್ತಾನೆ. ಯೆರೆಮೀಯನು ಜನರಿಗೆ ‘ನೀವು ದುರ್ಮಾರ್ಗಗಳನ್ನು ಬಿಟ್ಟು ಹಿಂದಿರುಗದಿದ್ದರೆ ಯೆರೂಸಲೇಮ್‌ ನಾಶವಾಗುವುದು’ ಎಂದು ಹೇಳುತ್ತಾ ಇರುತ್ತಾನೆ. ಅದಕ್ಕೆ ಯಾಜಕರು ಯೆರೆಮೀಯನನ್ನು ಹಿಡಿದು, ‘ನೀನು ಇಂಥದ್ದನ್ನೆಲ್ಲಾ ನುಡಿಯುತ್ತಿರುವುದರಿಂದ ನಿನ್ನನ್ನು ಸುಮ್ಮನೆ ಬಿಡಬಾರದು, ಕೊಂದುಬಿಡಬೇಕು’ ಎಂದು ಕೂಗುತ್ತಾರೆ. ಬಳಿಕ ಅವರು ಇಸ್ರಾಯೇಲಿನ ಸರದಾರರಿಗೆ, ‘ಯೆರೆಮೀಯನನ್ನು ಕೊಂದುಹಾಕಬೇಕು, ಯಾಕೆಂದರೆ ಅವನು ನಮ್ಮ ಪಟ್ಟಣದ ವಿರುದ್ಧವಾಗಿ ಮಾತಾಡಿದ್ದಾನೆ’ ಎಂದು ಹೇಳುತ್ತಾರೆ.

ಯೆರೆಮೀಯನು ಈಗ ಏನು ಮಾಡುವನು? ಅವನು ಭಯಪಡುವುದಿಲ್ಲ! ಅವನು ಅವರೆಲ್ಲರಿಗೆ ಹೇಳುವುದು: ‘ಈ ಮಾತುಗಳನ್ನು ನಿಮಗೆ ಹೇಳುವುದಕ್ಕೆ ಯೆಹೋವನು ನನ್ನನ್ನು ಕಳುಹಿಸಿದ್ದಾನೆ. ನೀವು ದುರ್ಮಾರ್ಗವನ್ನು ಬಿಟ್ಟು ಹಿಂದಿರುಗದೆ ಹೋದಲ್ಲಿ ಯೆಹೋವನು ಯೆರೂಸಲೇಮನ್ನು ನಾಶಮಾಡುವನು. ಒಂದುವೇಳೆ, ನೀವು ನನ್ನನ್ನು ಕೊಂದುಹಾಕುವಲ್ಲಿ ಯಾವ ತಪ್ಪನ್ನೂ ಮಾಡದ ಒಬ್ಬ ವ್ಯಕ್ತಿಯನ್ನು ನೀವು ಕೊಲ್ಲುವವರಾಗುತ್ತೀರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.’

ಸರದಾರರು ಯೆರೆಮೀಯನನ್ನು ಕೊಲ್ಲುವುದಿಲ್ಲ. ಇಸ್ರಾಯೇಲ್ಯರು ತಮ್ಮ ದುರ್ಮಾರ್ಗಗಳನ್ನು ಬಿಡುವುದೇ ಇಲ್ಲ. ತದನಂತರ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಮಾಡುತ್ತಾನೆ. ಕೊನೆಗೆ ನೆಬೂಕದ್ನೆಚ್ಚರನು ಇಸ್ರಾಯೇಲ್ಯರನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಾನೆ. ಅವನು ಸಾವಿರಾರು ಮಂದಿಯನ್ನು ಸೆರೆಹಿಡಿದು ಬಾಬೆಲಿಗೆ ಕರೆದುಕೊಂಡು ಹೋಗುತ್ತಾನೆ. ಅಪರಿಚಿತ ಜನರು ನಿಮ್ಮನ್ನು ನಿಮ್ಮ ಮನೆಯಿಂದ ಅಪರಿಚಿತ ದೇಶಕ್ಕೆ ಎಳೆದೊಯ್ದರೆ ಹೇಗಿರುವುದೆಂದು ಸ್ವಲ್ಪ ಯೋಚಿಸಿರಿ!

ಯೆರೆಮೀಯ 1:1-8; 10:1-5; 26:1-16; 2 ಅರಸುಗಳು 24:1-17.