ನೀವು ಒಂದುವೇಳೆ ಸತ್ತು ಹೋದಿರಿ ಎಂದು ನೆನಸಿ. ನೀವು ಪುನಃ ಜೀವಂತವಾದರೆ ನಿಮ್ಮ ಅಮ್ಮಗೆ ಹೇಗನಿಸುವುದು? ಅಮ್ಮಗೆ ತುಂಬಾ ಸಂತೋಷವಾಗುತ್ತದೆ ಅಲ್ಲವೇ? ಆದರೆ ಸತ್ತ ವ್ಯಕ್ತಿ ಪುನಃ ಜೀವಿಸಲು ಆಗುತ್ತದೋ? ಈ ಮುಂಚೆ ಯಾವಾಗಲಾದರೂ ಆ ರೀತಿ ನಡೆದಿದೆಯೇ?

ಇಲ್ಲಿರುವ ಆ ಪುರುಷ, ಸ್ತ್ರೀ ಮತ್ತು ಚಿಕ್ಕ ಹುಡುಗನನ್ನು ನೋಡಿರಿ. ಆ ಪುರುಷನು ಪ್ರವಾದಿಯಾದ ಎಲೀಯ. ಆ ಸ್ತ್ರೀಯು ಚಾರೆಪ್ತಾ ಪಟ್ಟಣದ ಒಬ್ಬಾಕೆ ವಿಧವೆ. ಚಿಕ್ಕ ಹುಡುಗನು ಅವಳ ಮಗ. ಒಂದು ದಿನ ಈ ಹುಡುಗನು ಕಾಯಿಲೆ ಬೀಳುತ್ತಾನೆ. ಅವನ ದೇಹ ಸ್ಥಿತಿ ಕೆಡುತ್ತಾ ಕೆಡುತ್ತಾ ಬಂದು ಕೊನೆಗೆ ಅವನು ಸಾಯುತ್ತಾನೆ. ಆಗ ಎಲೀಯನು ಆ ಸ್ತ್ರೀಗೆ, ‘ಹುಡುಗನನ್ನು ನನಗೆ ಕೊಡು’ ಎನ್ನುತ್ತಾನೆ.

ಎಲೀಯನು ಸತ್ತ ಹುಡುಗನನ್ನು ಮಾಳಿಗೆಯ ಕೋಣೆಗೆ ತೆಗೆದುಕೊಂಡು ಹೋಗಿ ಅವನನ್ನು ಮಂಚದ ಮೇಲೆ ಮಲಗಿಸುತ್ತಾನೆ. ಅನಂತರ, ‘ಯೆಹೋವನೇ, ಈ ಹುಡುಗನು ಪುನಃ ಜೀವಿಸುವಂತೆ ಮಾಡು’ ಎಂದು ಪ್ರಾರ್ಥಿಸುತ್ತಾನೆ. ಆಗ ಹುಡುಗನು ಉಸಿರಾಡಲು ಪ್ರಾರಂಭಿಸುತ್ತಾನೆ. ಆಮೇಲೆ ಎಲೀಯನು ಅವನನ್ನು ಕೆಳಗೆ ಕರಕೊಂಡು ಹೋಗಿ ಆ ಸ್ತ್ರೀಗೆ ‘ನೋಡು, ನಿನ್ನ ಮಗನು ಜೀವದಿಂದಿದ್ದಾನೆ!’ ಎಂದು ಹೇಳುತ್ತಾನೆ. ಆದುದರಿಂದಲೇ ಆ ತಾಯಿ ಅಷ್ಟೊಂದು ಸಂತೋಷಪಡುತ್ತಿದ್ದಾಳೆ.

ಯೆಹೋವನ ಇನ್ನೊಬ್ಬ ಪ್ರಧಾನ ಪ್ರವಾದಿಯ ಹೆಸರು ಎಲೀಷ. ಅವನು ಎಲೀಯನ ಸಹಾಯಕನಾಗಿ ಸೇವೆಮಾಡುತ್ತಾನೆ. ಆದರೆ ತಕ್ಕ ಸಮಯದಲ್ಲಿ ಯೆಹೋವನು ಎಲೀಷನನ್ನು ಸಹ ಅದ್ಭುತಗಳನ್ನು ಮಾಡಲು ಉಪಯೋಗಿಸುತ್ತಾನೆ. ಒಮ್ಮೆ ಎಲೀಷನು ಶೂನೇಮ್‌ ಪಟ್ಟಣಕ್ಕೆ ಹೋಗುತ್ತಾನೆ. ಅಲ್ಲಿ ಒಬ್ಬ ಸ್ತ್ರೀಯು ಅವನಿಗೆ ತುಂಬ ಉಪಕಾರ ಮಾಡಿ ದಯೆತೋರಿಸುತ್ತಾಳೆ. ತದನಂತರ ಈ ಸ್ತ್ರೀಗೆ ಒಂದು ಗಂಡು ಮಗುವಾಗುತ್ತದೆ.

ಈ ಮಗು ಬೆಳೆದು ದೊಡ್ಡವನಾದಾಗ ಒಂದು ಬೆಳಿಗ್ಗೆ, ಹೊಲದಲ್ಲಿ ಕೆಲಸ ಮಾಡುತ್ತಿರುವ ತನ್ನ ತಂದೆ ಬಳಿಗೆ ಹೋಗುತ್ತಾನೆ. ಥಟ್ಟನೆ ಹುಡುಗನು ‘ಅಯ್ಯೋ, ನನ್ನ ತಲೆ ತುಂಬಾ ನೋಯುತ್ತಿದೆ!’ ಎಂದು ಕೂಗಿಕೊಳ್ಳುತ್ತಾನೆ. ಅವನನ್ನು ಮನೆಗೆ ತೆಗೆದುಕೊಂಡು ಹೋದ ಮೇಲೆ ಹುಡುಗನು ಸತ್ತುಹೋಗುತ್ತಾನೆ. ಅವನ ತಾಯಿಗೆ ದುಃಖದಿಂದ ಕರುಳು ಕಿತ್ತುಬಂದಂತಾಗುತ್ತದೆ! ಆ ಕೂಡಲೆ ಅವಳು ಹೋಗಿ ಎಲೀಷನನ್ನು ಕರೆದುಕೊಂಡು ಬರುತ್ತಾಳೆ.

ಎಲೀಷನು ಬಂದು ಆ ಸತ್ತ ಹುಡುಗನು ಇದ್ದ ಕೋಣೆಗೆ ಹೋಗುತ್ತಾನೆ. ಅಲ್ಲಿ ಅವನು ಯೆಹೋವನಿಗೆ ಪ್ರಾರ್ಥಿಸುತ್ತಾನೆ. ಮತ್ತು ಹುಡುಗನ ಮೇಲೆ ಮಲಗುತ್ತಾನೆ. ಬೇಗನೆ ಹುಡುಗನ ದೇಹ ಬೆಚ್ಚಗಾಗುತ್ತದೆ. ಅವನು ಏಳು ಸಾರಿ ಸೀನುತ್ತಾನೆ. ತಾಯಿ ಒಳಗೆ ಬಂದು ನೋಡುವಾಗ ತನ್ನ ಮಗನು ಜೀವಂತನಾಗಿರುವುದನ್ನು ಕಾಣುತ್ತಾಳೆ. ತನ್ನ ಮಗನನ್ನು ನೋಡಿ ಆಕೆಗೆ ಸಂತೋಷ ಉಕ್ಕಿಬರುತ್ತದೆ!

ಅನೇಕಾನೇಕ ಜನರು ಸತ್ತಿದ್ದಾರೆ. ಇದು ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಹೇಳಲಾಗದಷ್ಟು ದುಃಖವನ್ನುಂಟುಮಾಡಿದೆ. ಮೃತರಿಗೆ ಜೀವ ನೀಡಿ ಅವರನ್ನು ಎಬ್ಬಿಸುವ ಶಕ್ತಿ ನಮಗಿಲ್ಲ. ಆದರೆ ಯೆಹೋವನಿಗಿದೆ. ಆತನು ಹೇಗೆ ಕೋಟ್ಯಂತರ ಜನರನ್ನು ಪುನಃ ಜೀವಿಸುವಂತೆ ಮಾಡುವನೆಂದು ನಾವು ಮುಂದಕ್ಕೆ ಕಲಿಯಲಿರುವೆವು.

1 ಅರಸುಗಳು 17:8-24; 2 ಅರಸುಗಳು 4:8-37.