ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 61

ದಾವೀದನು ಅರಸನಾಗುತ್ತಾನೆ

ದಾವೀದನು ಅರಸನಾಗುತ್ತಾನೆ

ಸೌಲನು ಪುನಃ ದಾವೀದನನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಾನೆ. ಅವನು ಶೂರರಾದ 3,000 ಮಂದಿ ಸೈನಿಕರನ್ನು ಕರೆದುಕೊಂಡು ದಾವೀದನನ್ನು ಹುಡುಕುತ್ತಾ ಹೋಗುತ್ತಾನೆ. ದಾವೀದನಿಗೆ ಇದರ ಕುರಿತು ತಿಳಿದಾಗ, ಸೌಲನು ಮತ್ತು ಅವನ ಜನರು ರಾತ್ರಿ ತಂಗಿದ್ದ ಸ್ಥಳವನ್ನು ಕಂಡುಹಿಡಿಯಲು ಗೂಢಚಾರರನ್ನು ಕಳುಹಿಸುತ್ತಾನೆ. ಅದನ್ನು ಕಂಡುಕೊಂಡಾಗ ದಾವೀದನು ತನ್ನ ಸೇವಕರಲ್ಲಿ ಇಬ್ಬರಿಗೆ ‘ನಿಮ್ಮಲ್ಲಿ ನನ್ನ ಸಂಗಡ ಸೌಲನ ಪಾಳೆಯಕ್ಕೆ ಯಾರು ಬರುವಿರಿ?’ ಎಂದು ಕೇಳುತ್ತಾನೆ.

‘ನಾನು ಬರುತ್ತೇನೆ’ ಎಂದು ಉತ್ತರಕೊಡುತ್ತಾನೆ ಅಬೀಷೈ. ದಾವೀದನ ಸಹೋದರಿ ಚೆರೂಯಳ ಮಗನೇ ಅಬೀಷೈ. ದಾವೀದ ಮತ್ತು ಅಬೀಷೈರಿಬ್ಬರು ಸೌಲನೂ ಅವನ ಜನರೂ ನಿದ್ದೆಮಾಡುತ್ತಿರುವ ಪಾಳೆಯದೊಳಗೆ ಮೆಲ್ಲನೆ ಸದ್ದಿಲ್ಲದೆ ಹೋಗುತ್ತಾರೆ. ಅವರು ಸೌಲನ ತಲೆಯ ಬಳಿಯಲ್ಲಿರುವ ಅವನ ಬರ್ಜಿ ಮತ್ತು ನೀರಿನ ತಂಬಿಗೆಯನ್ನು ತೆಗೆದುಕೊಂಡು ಬರುತ್ತಾರೆ. ಅವರನ್ನು ಯಾರೂ ನೋಡುವುದಿಲ್ಲ, ಯಾರಿಗೂ ಗೊತ್ತಾಗುವುದೂ ಇಲ್ಲ. ಯಾಕೆಂದರೆ ಅವರೆಲ್ಲರೂ ಗಾಢ ನಿದ್ರೆಯಲ್ಲಿದ್ದಾರೆ.

ಈಗ ದಾವೀದ ಮತ್ತು ಅಬೀಷೈಯನ್ನು ನೋಡಿರಿ. ಅವರು ಅಲ್ಲಿಂದ ಬಂದು ಗುಡ್ಡದ ಮೇಲೆ ಸುರಕ್ಷಿತರಾಗಿದ್ದಾರೆ. ದಾವೀದನು ಇಸ್ರಾಯೇಲಿನ ಸೇನಾಪತಿಯನ್ನು ಕೂಗಿ ಕರೆಯುತ್ತಾ, ‘ಅಬ್ನೇರನೇ, ನೀನು ನಿನ್ನ ಒಡೆಯನಾದ ಅರಸನನ್ನು ಯಾಕೆ ಕಾಯುತ್ತಿಲ್ಲ? ಅವನ ಬರ್ಜಿಯೂ ನೀರಿನ ತಂಬಿಗೆಯೂ ಎಲ್ಲಿವೆ ನೋಡು?’ ಎಂದು ಕೂಗಿ ಕೇಳುತ್ತಾನೆ.

ಸೌಲನಿಗೆ ಎಚ್ಚರಿಕೆಯಾಗುತ್ತದೆ. ಅವನು ದಾವೀದನ ಸ್ವರದ ಗುರುತು ಹಿಡಿದು, ‘ದಾವೀದನೇ, ನೀನಾ ಮಾತಾಡುತ್ತಿರುವುದು?’ ಎಂದು ಕೇಳುತ್ತಾನೆ. ಅಲ್ಲಿ ಕೆಳಗೆ ಸೌಲ ಮತ್ತು ಅಬ್ನೇರನು ನಿಂತುಕೊಂಡಿರುವುದನ್ನು ನೀವು ನೋಡಬಲ್ಲಿರೋ?

‘ಹೌದು, ನನ್ನೊಡೆಯನಾದ ಅರಸನೇ. ನನ್ನನ್ನು ಯಾಕೆ ಸೆರೆಹಿಡಿಯಲು ಪ್ರಯತ್ನಿಸುತ್ತೀ? ನಿನಗೆ ನಾನೇನು ಕೆಟ್ಟದ್ದು ಮಾಡಿದ್ದೇನೆ? ಅರಸನೇ, ಇಗೋ ನಿನ್ನ ಬರ್ಜಿ ಇಲ್ಲಿದೆ, ನಿನ್ನ ಸೇವಕರಲ್ಲಿ ಒಬ್ಬನು ಬಂದು ತೆಗೆದುಕೊಂಡು ಹೋಗಲಿ’ ಎಂದು ದಾವೀದನು ಉತ್ತರಿಸುತ್ತಾನೆ.

‘ನಾನು ತಪ್ಪು ಮಾಡಿದ್ದೇನೆ, ಹುಚ್ಚುತನದಿಂದ ವರ್ತಿಸಿದ್ದೇನೆ’ ಎಂದು ಸೌಲನು ಒಪ್ಪಿಕೊಳ್ಳುತ್ತಾನೆ. ಆಗ ದಾವೀದನು ತನ್ನ ದಾರಿ ಹಿಡಿಯುತ್ತಾನೆ ಮತ್ತು ಸೌಲನು ಮನೆಗೆ ಹಿಂದಿರುಗುತ್ತಾನೆ. ದಾವೀದನು ತನ್ನ ಮನಸ್ಸಿನಲ್ಲಿ, ‘ನಾನು ಇಲ್ಲಿದ್ದರೆ ಒಂದಲ್ಲ ಒಂದು ದಿನ ಸೌಲನು ನನ್ನನ್ನು ಕೊಲ್ಲುವನು. ಆದುದರಿಂದ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಹೋಗಬೇಕು’ ಎಂದು ಅಂದುಕೊಳ್ಳುತ್ತಾನೆ. ಮತ್ತು ಹಾಗೆಯೇ ಮಾಡುತ್ತಾನೆ. ದಾವೀದನು ಫಿಲಿಷ್ಟಿಯರನ್ನು ಮರುಳುಮಾಡಿ, ತಾನೀಗ ಅವರ ಪಕ್ಷದಲ್ಲಿದ್ದೇನೆಂದು ಅವರು ನಂಬುವಂತೆ ಮಾಡುತ್ತಾನೆ.

ಕೆಲವು ಸಮಯದ ನಂತರ ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧಮಾಡಲು ಹೋಗುತ್ತಾರೆ. ಯುದ್ಧದಲ್ಲಿ ಸೌಲ ಮತ್ತು ಯೋನಾತಾನರಿಬ್ಬರೂ ಮಡಿಯುತ್ತಾರೆ. ಇದರಿಂದ ದಾವೀದನಿಗೆ ಅತಿ ದುಃಖವಾಗುತ್ತದೆ. ಅವನು ಒಂದು ಅಂದವಾದ ಹಾಡನ್ನು ರಚಿಸಿ, ಈ ರೀತಿ ಹಾಡುತ್ತಾನೆ: ‘ಯೋನಾತಾನನೇ, ನನ್ನ ಸಹೋದರನೇ, ನಿನಗೋಸ್ಕರ ನಾನು ದುಃಖಪಡುತ್ತೇನೆ. ನೀನು ನನಗೆಷ್ಟು ಪ್ರಿಯನಾಗಿದ್ದೀ!’

ಇದಾದ ನಂತರ ದಾವೀದನು ಇಸ್ರಾಯೇಲಿನ ಹೆಬ್ರೋನ್‌ ಪಟ್ಟಣಕ್ಕೆ ಹಿಂದಿರುಗುತ್ತಾನೆ. ಸೌಲನ ಮಗನಾದ ಈಷ್ಬೋಶೆತನನ್ನು ರಾಜನಾಗುವುದಕ್ಕೆ ಆರಿಸಿಕೊಂಡ ಜನರ ನಡುವೆ ಮತ್ತು ದಾವೀದನು ರಾಜನಾಗುವಂತೆ ಬಯಸುವ ಬೇರೆ ಜನರ ನಡುವೆ ಒಂದು ಯುದ್ಧವಾಗುತ್ತದೆ. ಆದರೆ ಕೊನೆಗೆ ದಾವೀದನ ಜನರು ಗೆಲ್ಲುತ್ತಾರೆ. ದಾವೀದನು ಅರಸನಾದಾಗ ಅವನಿಗೆ 30 ವರ್ಷ. ಏಳೂವರೆ ವರ್ಷ ಅವನು ಹೆಬ್ರೋನಿನಲ್ಲಿ ರಾಜ್ಯವಾಳುತ್ತಾನೆ. ಅಲ್ಲಿ ಅವನಿಗೆ ಹುಟ್ಟಿದ ಕೆಲವು ಪುತ್ರರೆಂದರೆ ಅಮ್ನೋನ, ಅಬ್ಷಾಲೋಮ, ಅದೋನೀಯ.

ದಾವೀದನೂ ಅವನ ಸೇವಕರೂ ಯೆರೂಸಲೇಮ್ ಎಂಬ ಒಂದು ಸುಂದರ ಪಟ್ಟಣವನ್ನು ವಶಪಡಿಸಿಕೊಳ್ಳುವ ಸಮಯವು ಬರುತ್ತದೆ. ದಾವೀದನ ಸಹೋದರಿ ಚೆರೂಯಳ ಇನ್ನೊಬ್ಬ ಮಗನಾದ ಯೋವಾಬನು ಯುದ್ಧದಲ್ಲಿ ನಾಯಕತ್ವ ವಹಿಸುತ್ತಾನೆ. ಆದುದರಿಂದ ದಾವೀದನು ಯೋವಾಬನನ್ನು ತನ್ನ ಸೇನಾಪತಿಯನ್ನಾಗಿ ಮಾಡಿ ಬಹುಮಾನಿಸುತ್ತಾನೆ. ಈಗ ದಾವೀದನು ಯೆರೂಸಲೇಮ್ ಪಟ್ಟಣದಲ್ಲಿ ಆಳಲಾರಂಭಿಸುತ್ತಾನೆ.

1 ಸಮುವೇಲ 26:1-25; 27:1-7; 31:1-6; 2 ಸಮುವೇಲ 1:26; 3:1-21; 5:1-10; 1 ಪೂರ್ವಕಾಲವೃತ್ತಾಂತ 11:1-9.