ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 65

ರಾಜ್ಯವು ಇಬ್ಭಾಗವಾಗುತ್ತದೆ

ರಾಜ್ಯವು ಇಬ್ಭಾಗವಾಗುತ್ತದೆ

ಈ ಮನುಷ್ಯನು ತನ್ನ ಅಂಗಿಯನ್ನು ತುಂಡುತುಂಡಾಗಿ ಹರಿಯುತ್ತಿರುವುದು ಏಕೆಂದು ನಿಮಗೆ ಗೊತ್ತೋ? ಹಾಗೆ ಮಾಡುವಂತೆ ಅವನಿಗೆ ಯೆಹೋವನೇ ಹೇಳಿದನು. ಈ ಮನುಷ್ಯನು ದೇವರ ಪ್ರವಾದಿಯಾದ ಅಹೀಯನು. ಪ್ರವಾದಿ ಎಂದರೇನೆಂದು ನಿಮಗೆ ತಿಳಿದಿದೆಯೇ? ಭವಿಷ್ಯತ್ತಿನಲ್ಲಿ ನಡೆಯಲಿರುವ ವಿಷಯವನ್ನು ದೇವರು ಯಾರಿಗೆ ತಿಳಿಸುತ್ತಾನೋ ಆ ವ್ಯಕ್ತಿಯೇ ಪ್ರವಾದಿ.

ಇಲ್ಲಿ ಅಹೀಯನು ಯಾರೊಬ್ಬಾಮನೊಂದಿಗೆ ಮಾತಾಡುತ್ತಿದ್ದಾನೆ. ಸೊಲೊಮೋನನು ತನ್ನ ಕೆಲವು ಕಟ್ಟಡದ ಕೆಲಸಮಾಡಲು ಮುಖ್ಯಸ್ಥನನ್ನಾಗಿ ನೇಮಿಸಿದ ವ್ಯಕ್ತಿಯೇ ಯಾರೊಬ್ಬಾಮನು. ಅಹೀಯನು ಯಾರೊಬ್ಬಾಮನನ್ನು ಇಲ್ಲಿ ದಾರಿಯಲ್ಲಿ ಸಂಧಿಸುವಾಗ ಒಂದು ವಿಚಿತ್ರ ಸಂಗತಿಯನ್ನು ಮಾಡುತ್ತಾನೆ. ಅವನು ತಾನು ಧರಿಸಿರುವ ಹೊಸ ಅಂಗಿಯನ್ನು ತೆಗೆದು ಅದನ್ನು 12 ತುಂಡುಗಳಾಗಿ ಹರಿಯುತ್ತಾನೆ. ಅವನು ಯಾರೊಬ್ಬಾಮನಿಗೆ ಹೇಳುವುದು: ‘ಹತ್ತು ತುಂಡುಗಳನ್ನು ನಿನಗಾಗಿ ತೆಗೆದುಕೋ.’ ಅಹೀಯನು ಯಾರೊಬ್ಬಾಮನಿಗೆ ಹತ್ತು ತುಂಡುಗಳನ್ನು ಕೊಡುವುದು ಏಕೆಂದು ನಿಮಗೆ ತಿಳಿದಿದೆಯೇ?

ಯೆಹೋವನು ಸೊಲೊಮೋನನಿಂದ ರಾಜ್ಯವನ್ನು ಕಿತ್ತುಕೊಳ್ಳಲಿರುವನೆಂದು ಅಹೀಯನು ವಿವರಿಸುತ್ತಾನೆ. ಯೆಹೋವನು ಹತ್ತು ಕುಲಗಳನ್ನು ಯಾರೊಬ್ಬಾಮನಿಗೆ ಕೊಡಲಿದ್ದಾನೆಂದು ಅವನು ಹೇಳುತ್ತಾನೆ. ಅಂದರೆ ಸೊಲೊಮೋನನ ಪುತ್ರ ರೆಹಬ್ಬಾಮನಿಗೆ ಆಳಲಿಕ್ಕೆ ಎರಡು ಕುಲಗಳು ಮಾತ್ರವೇ ಇರುತ್ತವೆ.

ಅಹೀಯನು ಯಾರೊಬ್ಬಾಮನಿಗೆ ಅಂದದ್ದನ್ನು ಸೊಲೊಮೋನನು ಕೇಳಿ ಬಲು ಸಿಟ್ಟುಗೊಂಡು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ ಯಾರೊಬ್ಬಾಮನು ಐಗುಪ್ತಕ್ಕೆ ಓಡಿಹೋಗುತ್ತಾನೆ. ಸ್ವಲ್ಪ ಸಮಯದ ಮೇಲೆ ಸೊಲೊಮೋನನು ಸಾಯುತ್ತಾನೆ. ಅವನು 40 ವರ್ಷ ಅರಸನಾಗಿದ್ದನು. ಆಗ ಅವನ ಮಗ ರೆಹಬ್ಬಾಮನು ರಾಜನಾಗುತ್ತಾನೆ. ಯಾರೊಬ್ಬಾಮನು ಐಗುಪ್ತದಲ್ಲಿರುವಾಗ ಸೊಲೊಮೋನನು ಸತ್ತನೆಂದು ತಿಳಿಯುತ್ತದೆ. ಆದುದರಿಂದ ಅವನು ಇಸ್ರಾಯೇಲಿಗೆ ಹಿಂದಿರುಗಿ ಬರುತ್ತಾನೆ.

ರೆಹಬ್ಬಾಮನು ಒಳ್ಳೆಯ ಅರಸನಲ್ಲ. ಅವನು ತನ್ನ ತಂದೆ ಸೊಲೊಮೋನನಿಗಿಂತಲೂ ಹೆಚ್ಚು ಕ್ರೂರಿಯಾಗುತ್ತಾನೆ. ಯಾರೊಬ್ಬಾಮ ಮತ್ತು ಇತರ ಪ್ರಧಾನ ಪುರುಷರು ಅರಸ ರೆಹಬ್ಬಾಮನ ಬಳಿಗೆ ಹೋಗಿ ಜನರನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ. ಆದರೆ ರೆಹಬ್ಬಾಮನು ಅವರ ಮಾತನ್ನು ಕೇಳುವುದಿಲ್ಲ. ಈಗ ಅವನು ಮುಂಚಿಗಿಂತಲೂ ಹೆಚ್ಚು ಕ್ರೂರಿಯಾಗುತ್ತಾನೆ. ಆದುದರಿಂದ ಜನರು ಯಾರೊಬ್ಬಾಮನನ್ನು ಹತ್ತು ಕುಲಗಳ ಅರಸನನ್ನಾಗಿ ಮಾಡುತ್ತಾರೆ. ಬೆನ್ಯಾಮೀನ್‌ ಮತ್ತು ಯೆಹೂದ ಎಂಬ ಎರಡು ಕುಲಗಳಾದರೋ ರೆಹಬ್ಬಾಮನನ್ನೇ ತಮ್ಮ ಅರಸನನ್ನಾಗಿ ಇಟ್ಟುಕೊಳ್ಳುತ್ತವೆ.

ಯಾರೊಬ್ಬಾಮನು ತನ್ನ ಜನರು ಯೆಹೋವನನ್ನು ಆಲಯದಲ್ಲಿ ಆರಾಧಿಸುವುದಕ್ಕಾಗಿ ಯೆರೂಸಲೇಮಿಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಆದುದರಿಂದ ಅವನು ಬಂಗಾರದ ಎರಡು ಬಸವನ ಮೂರ್ತಿಗಳನ್ನು ಮಾಡಿ ಹತ್ತು-ಕುಲಗಳ ರಾಜ್ಯದ ಜನರು ಅದನ್ನು ಆರಾಧಿಸುವಂತೆ ಮಾಡುತ್ತಾನೆ. ಬಲುಬೇಗನೆ ದೇಶವು ಪಾತಕ ಮತ್ತು ಹಿಂಸಾಚಾರದಿಂದ ತುಂಬುತ್ತದೆ.

ಎರಡು-ಕುಲಗಳ ರಾಜ್ಯದಲ್ಲೂ ತೊಂದರೆಯಿದೆ. ರೆಹಬ್ಬಾಮನು ಅರಸನಾಗಿ ಐದು ವರ್ಷದೊಳಗಾಗಿ ಐಗುಪ್ತದ ಅರಸನು ಯೆರೂಸಲೇಮಿನ ವಿರುದ್ಧ ಯುದ್ಧಕ್ಕೆ ಬರುತ್ತಾನೆ. ಯೆಹೋವನ ಆಲಯದಲ್ಲಿದ್ದ ಅನೇಕ ಅಮೂಲ್ಯ ವಸ್ತುಗಳನ್ನು ಅವನು ತೆಗೆದುಕೊಂಡು ಹೋಗುತ್ತಾನೆ. ಹೀಗೆ ಆಲಯವು ಕಟ್ಟಲ್ಪಟ್ಟಾಗ ಹೇಗಿತ್ತೋ ಹಾಗೆ ಉಳಿಯುವುದು ಕೇವಲ ಕೊಂಚ ಕಾಲವಷ್ಟೇ.

1 ಅರಸುಗಳು 11:26-43; 12:1-33; 14:21-31.