ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 60

ಅಬೀಗೈಲ್‌ ಮತ್ತು ದಾವೀದ

ಅಬೀಗೈಲ್‌ ಮತ್ತು ದಾವೀದ

ದಾವೀದನನ್ನು ಎದುರುಗೊಳ್ಳಲು ಬರುತ್ತಿರುವ ಆ ಸುಂದರ ಸ್ತ್ರೀ ಯಾರೆಂದು ನಿಮಗೆ ಗೊತ್ತೋ? ಅವಳ ಹೆಸರು ಅಬೀಗೈಲ್‌. ಅವಳು ತುಂಬಾ ಬುದ್ಧಿವಂತೆ. ಒಂದು ಕೆಟ್ಟ ಕೃತ್ಯವನ್ನು ಮಾಡದಂತೆ ಆಕೆ ದಾವೀದನನ್ನು ತಡೆಯುತ್ತಾಳೆ. ಆದರೆ ಅದರ ಕುರಿತು ತಿಳಿಯುವ ಮುಂಚೆ, ದಾವೀದನಿಗೆ ಏನು ಸಂಭವಿಸುತ್ತಾ ಇದೆಯೆಂದು ನಾವು ನೋಡೋಣ.

ದಾವೀದನು ಸೌಲನಿಂದ ದೂರ ಓಡಿಹೋದ ಅನಂತರ ಒಂದು ಗವಿಯಲ್ಲಿ ಅಡಗಿಕೊಳ್ಳುತ್ತಾನೆ. ಅವನ ಅಣ್ಣಂದಿರೂ ಬೇರೆ ಎಲ್ಲಾ ಸಂಬಂಧಿಕರೂ ಬಂದು ಅವನನ್ನು ಸೇರಿಕೊಳ್ಳುತ್ತಾರೆ. ಒಟ್ಟಿಗೆ ಸುಮಾರು 400 ಜನರು ಅವನ ಬಳಿಗೆ ಬರುತ್ತಾರೆ. ದಾವೀದನು ಅವರೆಲ್ಲರ ನಾಯಕನಾಗುತ್ತಾನೆ. ಆಗ ದಾವೀದನು ಮೋವಾಬ್ಯ ಅರಸನ ಬಳಿಗೆ ಹೋಗಿ ‘ನನಗೆ ಒಳ್ಳೆದಾಗುವ ವರೆಗೂ ನನ್ನ ತಂದೆತಾಯಿ ನಿನ್ನ ಬಳಿಯಲ್ಲಿರುವುದಕ್ಕೆ ದಯವಿಟ್ಟು ಅಪ್ಪಣೆಕೊಡು’ ಎಂದು ವಿನಂತಿಸಿಕೊಳ್ಳುತ್ತಾನೆ. ತದನಂತರ ದಾವೀದನು ಮತ್ತು ಅವನ ಜನರು ಬೆಟ್ಟಗಳಲ್ಲಿ ಅಡಗಿಕೊಳ್ಳುತ್ತಾರೆ.

ದಾವೀದನು ಅಬೀಗೈಲಳನ್ನು ಸಂಧಿಸುವುದು ಇದರ ನಂತರವೇ. ಅವಳ ಗಂಡನಾದ ನಾಬಾಲನು ಧನಿಕ ಜಮೀನುದಾರ. ಅವನಲ್ಲಿ 3,000 ಕುರಿಗಳೂ 1,000 ಆಡುಗಳೂ ಇವೆ. ನಾಬಾಲನು ಒಬ್ಬ ನೀಚ. ಆದರೆ ಅವನ ಪತ್ನಿ ಅಬೀಗೈಲ್‌ ಸುಂದರಿಯೂ ಯಾವುದು ಯೋಗ್ಯವೋ ಅದನ್ನು ಮಾಡುವುದು ಹೇಗೆಂದು ತಿಳಿದವಳೂ ಆಗಿದ್ದಾಳೆ. ಒಮ್ಮೆ ಅವಳು ತನ್ನ ಕುಟುಂಬವನ್ನು ಸಹ ಕಾಪಾಡುತ್ತಾಳೆ. ಹೇಗೆಂದು ನಾವು ನೋಡೋಣ.

ದಾವೀದನು ಮತ್ತು ಅವನ ಜನರು ನಾಬಾಲನಿಗೆ ದಯೆತೋರಿಸಿದ್ದರು. ಅವನ ಕುರಿಗಳನ್ನು ಕಾಪಾಡುವುದಕ್ಕೆ ಅವರು ಬಹಳ ಸಹಾಯಮಾಡಿದ್ದರು. ಆದುದರಿಂದ ಒಂದು ದಿನ ದಾವೀದನು ತನಗೆ ಸಹಾಯಮಾಡುವಂತೆ ಕೇಳುತ್ತಾ ನಾಬಾಲನ ಬಳಿಗೆ ತನ್ನ ಕೆಲವು ಜನರನ್ನು ಕಳುಹಿಸುತ್ತಾನೆ. ದಾವೀದನ ಜನರು ನಾಬಾಲನ ಹತ್ತಿರ ಬಂದಾಗ ಅವನೂ ಅವನ ಸೇವಕರೂ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿರುತ್ತಾರೆ. ಅದೊಂದು ಔತಣದ ದಿನವಾಗಿದೆ ಮತ್ತು ನಾಬಾಲನಲ್ಲಿ ತಿನ್ನಲು ತುಂಬಾ ಒಳ್ಳೆಯ ತಿಂಡಿಗಳಿವೆ. ಆದುದರಿಂದ ದಾವೀದನ ಜನರು ‘ನಾವು ನಿನಗೆ ದಯೆತೋರಿಸಿದ್ದೇವೆ. ನಿನ್ನ ಕುರಿಗಳಲ್ಲಿ ಯಾವುದನ್ನೂ ನಾವು ಕದಿಯಲಿಲ್ಲ, ಬದಲಿಗೆ ಅವುಗಳನ್ನು ನೋಡಿಕೊಳ್ಳಲು ನೆರವಾಗಿದ್ದೇವೆ. ಈಗ ದಯವಿಟ್ಟು ನಮಗೆ ಸ್ವಲ್ಪ ಆಹಾರವನ್ನು ಕೊಡು’ ಎಂದು ಕೇಳುತ್ತಾರೆ.

‘ನಿಮ್ಮಂಥ ಜನರಿಗೆ ನಾನು ನನ್ನ ಆಹಾರವನ್ನು ಕೊಡೆನು’ ಎನ್ನುತ್ತಾನೆ ನಾಬಾಲ. ಅವನು ಅತಿ ತುಚ್ಛ ರೀತಿಯಲ್ಲಿ ಮಾತಾಡುತ್ತಾನೆ ಮತ್ತು ದಾವೀದನ ಕುರಿತು ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾನೆ. ದಾವೀದನ ಜನರು ಹಿಂದೆ ಬಂದು ದಾವೀದನಿಗೆ ಅದನ್ನು ತಿಳಿಸಿದಾಗ ಅವನು ತುಂಬ ಸಿಟ್ಟಾಗುತ್ತಾನೆ. ‘ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ!’ ಎಂದು ತನ್ನ ಜನರಿಗೆ ಆಜ್ಞಾಪಿಸುತ್ತಾನೆ. ಅವರು ನಾಬಾಲನನ್ನೂ ಅವನ ಜನರನ್ನೂ ಕೊಲ್ಲಲು ಹೊರಡುತ್ತಾರೆ.

ನಾಬಾಲನ ಸೇವಕರಲ್ಲಿ ಒಬ್ಬನು ಅವನಾಡಿದ ತುಚ್ಛ ಮಾತುಗಳನ್ನು ಕೇಳಿ ಅಬೀಗೈಲಳಿಗೆ ತಿಳಿಸುತ್ತಾನೆ. ಆ ಕೂಡಲೆ ಅಬೀಗೈಲಳು ದಾವೀದನಿಗೂ ಅವನ ಜನರಿಗೂ ಬೇಕಾದ ಆಹಾರವನ್ನು ಸಿದ್ಧಪಡಿಸಿ ಅವುಗಳನ್ನು ಕತ್ತೆಗಳ ಮೇಲೆ ಹೊರಿಸಿ ಹೊರಡುತ್ತಾಳೆ. ಆಕೆ ದಾವೀದನನ್ನು ಕಂಡಾಗ ಕತ್ತೆಯಿಂದಿಳಿದು ಅಡ್ಡಬಿದ್ದು, ‘ಸ್ವಾಮೀ, ದಯವಿಟ್ಟು ನನ್ನ ಗಂಡ ನಾಬಾಲನು ಹೇಳಿದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಅವನು ಮೂರ್ಖ, ಬುದ್ಧಿಹೀನ ಕಾರ್ಯಗಳನ್ನು ಮಾಡುತ್ತಾನೆ. ಇಗೋ, ಈ ಕಾಣಿಕೆಯನ್ನು ದಯವಿಟ್ಟು ಸ್ವೀಕರಿಸಿ. ನಡೆದ ಸಂಗತಿಗಾಗಿ ನಮ್ಮನ್ನು ಕ್ಷಮಿಸಿ’ ಎಂದು ಕೇಳಿಕೊಳ್ಳುತ್ತಾಳೆ.

ಅದಕ್ಕೆ ದಾವೀದನು, ‘ನೀನು ಬುದ್ಧಿವಂತೆ. ನಾಬಾಲನು ತೋರಿಸಿದ ತುಚ್ಛತನಕ್ಕೆ ಪ್ರತಿಯಾಗಿ ಅವನನ್ನು ಕೊಲ್ಲುವುದರಿಂದ ನೀನು ನನ್ನನ್ನು ತಡೆದಿ. ಈಗ ಸಮಾಧಾನದಿಂದ ಮನೆಗೆ ಹೋಗು’ ಎಂದು ಆಕೆಗೆ ಹೇಳುತ್ತಾನೆ. ತದನಂತರ ನಾಬಾಲನು ಸತ್ತಾಗ ಅಬೀಗೈಲಳು ದಾವೀದನ ಹೆಂಡತಿಯಾಗುತ್ತಾಳೆ.

1 ಸಮುವೇಲ 22:1-4; 25:1-43.