ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 45

ಯೊರ್ದನ್‌ ಹೊಳೆಯನ್ನು ದಾಟುವುದು

ಯೊರ್ದನ್‌ ಹೊಳೆಯನ್ನು ದಾಟುವುದು

ನೋಡಿರಿ! ಇಸ್ರಾಯೇಲ್ಯರು ಯೊರ್ದನ್‌ ಹೊಳೆಯನ್ನು ದಾಟುತ್ತಿದ್ದಾರೆ! ಆದರೆ ಹೊಳೆಯಲ್ಲಿ ನೀರೇ ಕಾಣುತ್ತಿಲ್ಲ? ವರ್ಷದ ಆ ಸಮಯದಲ್ಲಿ ಅಲ್ಲಿ ತುಂಬಾ ಮಳೆ ಬೀಳುತ್ತದೆ. ಆದ್ದರಿಂದ, ಕೆಲವೇ ನಿಮಿಷಗಳ ಹಿಂದೆ ಹೊಳೆಯು ಬಹಳವಾಗಿ ತುಂಬಿ ಹರಿಯುತ್ತಿತ್ತು. ಆದರೆ ಈಗ ನೀರೇ ಇಲ್ಲ! ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ಒಣ ನೆಲದ ಮೇಲೆ ನಡೆದು ದಾಟಿದಂತೆಯೇ ಇಲ್ಲಿಯೂ ನೆಲದ ಮೇಲೆ ನಡೆದುಹೋಗುತ್ತಿದ್ದಾರೆ! ಆದರೆ ನೀರೆಲ್ಲಾ ಎಲ್ಲಿ ಹೋಯಿತು? ನಾವೀಗ ಅದನ್ನು ತಿಳಿದುಕೊಳ್ಳೋಣ.

ಯೊರ್ದನ್‌ ಹೊಳೆಯನ್ನು ದಾಟುವ ಸಮಯವು ಬಂದಾಗ, ಇಸ್ರಾಯೇಲ್ಯರಿಗೆ ಹೀಗನ್ನುವಂತೆ ಯೆಹೋವನು ಯೆಹೋಶುವನಿಗೆ ಹೇಳುತ್ತಾನೆ: ‘ಯಾಜಕರು ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಮುಂದಾಗಿ ಹೋಗಬೇಕು. ಅವರು ಯೊರ್ದನ್‌ ನದಿಯ ನೀರಿನೊಳಗೆ ತಮ್ಮ ಕಾಲುಗಳನ್ನು ಇಡುತ್ತಲೇ ನೀರು ಹರಿಯುವುದು ನಿಂತುಹೋಗುವುದು.’

ಆದುದರಿಂದ ಯಾಜಕರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ಹೋಗುತ್ತಾರೆ. ಯೊರ್ದನ್‌ ಹೊಳೆಯ ಹತ್ತಿರ ಅವರು ಬಂದಾಗ ಯಾಜಕರು ನೀರಿನೊಳಗೆ ಕಾಲಿಡುತ್ತಾರೆ. ಅದು ಆಳವಾಗಿದೆ. ಮಾತ್ರವಲ್ಲ ನೀರು ರಭಸದಿಂದ ಹರಿಯುತ್ತಿದೆ. ಆದರೆ ಅವರು ನೀರಲ್ಲಿ ಕಾಲಿಡುತ್ತಲೇ ನೀರು ಹರಿಯುವುದು ನಿಂತುಹೋಗುತ್ತದೆ! ಅದೊಂದು ಅದ್ಭುತ! ಮೇಲಣಿಂದ ಬರುವ ನೀರನ್ನು ಯೆಹೋವನು ಆ ಜಾಗದಲ್ಲಿ ಅಣೆಕಟ್ಟಿನಂತೆ ತಡೆಗಟ್ಟಿದ್ದಾನೆ. ಆದುದರಿಂದ ಬೇಗನೆ ಹೊಳೆಯಲ್ಲಿ ನೀರು ಇಲ್ಲದೆ ಹೋಗುತ್ತದೆ!

ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಒಣಗಿದ ಹೊಳೆಯ ಮಧ್ಯಭಾಗಕ್ಕೆ ನಡೆದು ಹೋಗುತ್ತಾರೆ. ಚಿತ್ರದಲ್ಲಿ ನೀವು ಅವರನ್ನು ಕಾಣಬಲ್ಲಿರೋ? ಅವರು ಅಲ್ಲಿ ನಿಂತುಕೊಳ್ಳುವಾಗ, ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಯೊರ್ದನ್‌ ಹೊಳೆಯನ್ನು ದಾಟುತ್ತಾರೆ!

ಎಲ್ಲರೂ ಹೊಳೆ ದಾಟಿದಾಗ, ದೃಢಕಾಯರಾದ 12 ಮಂದಿ ಪುರುಷರಿಗೆ ಯೆಹೋಶುವನು ಹೀಗನ್ನುವಂತೆ ಯೆಹೋವನು ಆಜ್ಞಾಪಿಸುತ್ತಾನೆ: ‘ನದಿಯೊಳಗೆ ಯಾಜಕರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ನಿಂತಿರುವ ಸ್ಥಳಕ್ಕೆ ಹೋಗಿ ಹನ್ನೆರಡು ಕಲ್ಲುಗಳನ್ನು ಎತ್ತಿಕೊಂಡು ಬನ್ನಿರಿ. ಅವನ್ನು ನೀವೆಲ್ಲರು ಈ ರಾತ್ರಿ ಇಳುಕೊಳ್ಳುವ ಸ್ಥಳದಲ್ಲಿ ನಿಲ್ಲಿಸಿರಿ. ಭವಿಷ್ಯದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳು ಏನನ್ನು ಸೂಚಿಸುತ್ತವೆಂದು ಕೇಳುವಾಗ, ಯೆಹೋವನ ಒಡಂಬಡಿಕೆಯ ಮಂಜೂಷವು ಯೊರ್ದನನ್ನು ದಾಟುವಾಗ ನೀರು ಹರಿಯುವುದು ನಿಂತುಹೋಯಿತು ಎಂದು ಹೇಳಿರಿ. ಈ ಕಲ್ಲುಗಳು ಈ ಅದ್ಭುತವನ್ನು ನಿಮಗೆ ನೆನಪುಹುಟ್ಟಿಸುವುವು!’ ಇದಲ್ಲದೆ ಯೆಹೋಶುವನು ಸಹ 12 ಕಲ್ಲುಗಳನ್ನು ತೆಗೆದುಕೊಂಡು ಯೊರ್ದನಿನ ಮಧ್ಯದಲ್ಲಿ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸುತ್ತಾನೆ.

ಕೊನೆಗೆ ಯೆಹೋಶುವನು ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರಿಗೆ ‘ಯೊರ್ದನ್‌ ನದಿಯಿಂದ ಮೇಲಕ್ಕೆ ಬನ್ನಿರಿ’ ಎಂದು ಹೇಳುತ್ತಾನೆ. ಅವರು ಬಂದ ಕೂಡಲೆ ನೀರು ಮತ್ತೆ ರಭಸದಿಂದ ಹರಿಯಲಾರಂಭಿಸುತ್ತದೆ.

ಯೆಹೋಶುವ 3:1-17; 4:1-18.