ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 37

ಆರಾಧನೆಗಾಗಿ ಒಂದು ಡೇರೆ

ಆರಾಧನೆಗಾಗಿ ಒಂದು ಡೇರೆ

ಈ ಕಟ್ಟಡ ಏನೆಂದು ನಿಮಗೆ ತಿಳಿದಿದೆಯೋ? ಇದು ಯೆಹೋವನನ್ನು ಆರಾಧಿಸುವುದಕ್ಕಾಗಿರುವ ಒಂದು ವಿಶೇಷ ಡೇರೆ. ಇದನ್ನು ಗುಡಾರವೆಂದೂ ಕರೆಯುತ್ತಿದ್ದರು. ಜನರು ಐಗುಪ್ತವನ್ನು ಬಿಟ್ಟುಬಂದ ಬಳಿಕ ಒಂದು ವರ್ಷದಲ್ಲಿ ಅದನ್ನು ಕಟ್ಟಿ ಮುಗಿಸಿದರು. ಅದನ್ನು ಕಟ್ಟುವಂತೆ ಯಾರು ಹೇಳಿದರೆಂದು ನಿಮಗೆ ಗೊತ್ತೋ?

ಯೆಹೋವನೇ ಅದನ್ನು ಕಟ್ಟುವಂತೆ ಹೇಳಿದನು. ಮೋಶೆ ಸೀನಾಯಿ ಬೆಟ್ಟದ ಮೇಲಿದ್ದಾಗ ಅದನ್ನು ಹೇಗೆ ಕಟ್ಟಬೇಕೆಂದು ಯೆಹೋವನು ಹೇಳಿದನು. ಅದನ್ನು ಬಿಡಿ ಬಿಡಿ ಭಾಗಗಳಾಗಿ ಬಿಡಿಸಲು ಆಗುವಂಥ ರೀತಿಯಲ್ಲಿ ಕಟ್ಟುವಂತೆ ಆತನು ಹೇಳಿದನು. ಹೀಗೆ ಆ ಭಾಗಗಳನ್ನು ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಒಯ್ಯಬಹುದಿತ್ತು ಮತ್ತು ಅಲ್ಲಿ ಪುನಃ ಜೋಡಿಸಸಾಧ್ಯವಿತ್ತು. ಆದುದರಿಂದ ಇಸ್ರಾಯೇಲ್ಯರು ಅರಣ್ಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗ ಡೇರೆಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು.

ನೀವು ಡೇರೆಯ ಕೊನೆಯಲ್ಲಿರುವ ಚಿಕ್ಕ ಕೋಣೆಯ ಒಳಗಡೆ ನೋಡುವುದಾದರೆ, ಅಲ್ಲಿ ಒಂದು ಸಣ್ಣ ಪೆಟ್ಟಿಗೆಯನ್ನು ಕಾಣುವಿರಿ. ಅದರ ಹೆಸರು ಒಡಂಬಡಿಕೆಯ ಮಂಜೂಷ. ಅದರ ಮೇಲೆ ಪ್ರತಿಯೊಂದು ತುದಿಯಲ್ಲಿ ಬಂಗಾರದಿಂದ ಮಾಡಿದ ಎರಡು ದೇವದೂತರು ಅಥವಾ ಕೆರೂಬಿಯರು ಇದ್ದರು. ಯೆಹೋವನು ಮೊದಲು ಕೊಟ್ಟ ದಶಾಜ್ಞೆಗಳ ಕಲ್ಲಿನ ಹಲಗೆಗಳನ್ನು ಮೋಶೆಯು ಒಡೆದುಹಾಕಿದ್ದರಿಂದ ಆತನು ಪುನಃ ಅವುಗಳನ್ನು ಕಲ್ಲಿನ ಹಲಗೆಗಳ ಮೇಲೆ ಬರೆದುಕೊಟ್ಟನು. ಈ ಕಲ್ಲುಗಳನ್ನು ಒಡಂಬಡಿಕೆಯ ಮಂಜೂಷದ ಒಳಗೆ ಇಡಲಾಗಿತ್ತು. ಅಲ್ಲದೆ ಒಂದು ಪಾತ್ರೆಯಲ್ಲಿ ಮನ್ನವನ್ನು ಹಾಕಿ ಅದರೊಳಗೆ ಇಡಲಾಗಿತ್ತು. ಮನ್ನ ಏನೆಂದು ನಿಮಗೆ ನೆನಪಿದೆಯೇ?

ಮೋಶೆಯ ಅಣ್ಣನಾದ ಆರೋನನನ್ನು ಯೆಹೋವನು ಮಹಾ ಯಾಜಕನಾಗಿ ಆರಿಸುತ್ತಾನೆ. ಜನರು ಯೆಹೋವನನ್ನು ಆರಾಧಿಸುವಂತೆ ಅವನು ಸಹಾಯಮಾಡುತ್ತಾನೆ. ಅವನ ಪುತ್ರರು ಕೂಡ ಯಾಜಕರಾಗಿದ್ದಾರೆ.

ಈಗ ಡೇರೆಯ ದೊಡ್ಡದಾದ ಕೋಣೆಯನ್ನು ನೋಡಿರಿ. ಅದು ಚಿಕ್ಕ ಕೋಣೆಯ ಎರಡರಷ್ಟಿದೆ. ಒಂದು ಚಿಕ್ಕ ಪೆಟ್ಟಿಗೆಯಿಂದ ಸ್ವಲ್ಪ ಹೊಗೆಯು ಹೊರಬರುತ್ತಿರುವುದನ್ನು ನೀವಲ್ಲಿ ನೋಡುತ್ತೀರೋ? ಅದು ಧೂಪವೆಂದು ಕರೆಯಲ್ಪಡುವ ಒಂದು ಸುವಾಸನೆಯ ದ್ರವ್ಯವನ್ನು ಯಾಜಕರು ಸುಡುವ ವೇದಿಯಾಗಿದೆ. ಅಲ್ಲದೆ ಏಳು ಹಣತೆಗಳುಳ್ಳ ಒಂದು ದೀಪಸ್ತಂಭವೂ ಅಲ್ಲಿದೆ. ಕೋಣೆಯಲ್ಲಿರುವ ಮೂರನೆಯ ವಸ್ತುವು ಒಂದು ಮೇಜು. ಅದರ ಮೇಲೆ ಹನ್ನೆರಡು ರೊಟ್ಟಿಗಳು ಇಡಲ್ಪಟ್ಟಿವೆ.

ಗುಡಾರದ ಅಂಗಣದಲ್ಲಿ ಒಂದು ದೊಡ್ಡ ಬೋಗುಣಿ ಅಥವಾ ಗಂಗಾಳವಿದೆ. ಅದರಲ್ಲಿ ನೀರು ತುಂಬಿರುತ್ತದೆ. ಕೈಕಾಲುಗಳನ್ನು ತೊಳೆಯುವುದಕ್ಕೋಸ್ಕರ ಯಾಜಕರು ಅದನ್ನು ಉಪಯೋಗಿಸುತ್ತಾರೆ. ಅಂಗಣದಲ್ಲಿ ಒಂದು ದೊಡ್ಡ ಯಜ್ಞವೇದಿಯೂ ಇದೆ. ಇಲ್ಲಿ ಯೆಹೋವನಿಗೆ ಅರ್ಪಿಸಲಾಗುವ ಪಶುಗಳನ್ನು ಹೋಮ ಮಾಡಲಾಗುತ್ತದೆ. ಗುಡಾರವು ಪಾಳೆಯದ ಮಧ್ಯದಲ್ಲಿದೆ. ಇಸ್ರಾಯೇಲ್ಯರು ಅದರ ಸುತ್ತಲೂ ತಮ್ಮ ಡೇರೆಗಳಲ್ಲಿ ವಾಸಮಾಡುತ್ತಾರೆ.

ವಿಮೋಚನಕಾಂಡ 25:8-40; 26:1-37; 27:1-8; 28:1; 30:1-10, 17-21; 34:1, 2; ಇಬ್ರಿಯ 9:1-5.