ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 21

ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ

ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ

ಚಿತ್ರದಲ್ಲಿರುವ ಈ ಹುಡುಗನು ಎಷ್ಟು ಬೇಸರದಿಂದ ಇದ್ದಾನೆಂದು ನೋಡಿರಿ. ಅವನ ಮುಖ ಎಷ್ಟು ನಿರಾಶೆಯಿಂದ ತುಂಬಿದೆ. ಅವನು ಯೋಸೇಫನು. ಅವನ ಅಣ್ಣಂದಿರು ಈಗಷ್ಟೇ ಅವನನ್ನು ಇಲ್ಲಿರುವ ಪುರುಷರಿಗೆ ಮಾರಿದ್ದಾರೆ. ಈ ಪುರುಷರು ಐಗುಪ್ತ ದೇಶಕ್ಕೆ ಪ್ರಯಾಣ ಮಾಡುತ್ತಾ ಇದ್ದರು. ಅಲ್ಲಿ ಯೋಸೇಫನು ದಾಸನಾಗುತ್ತಾನೆ. ಅವನ ಮಲಅಣ್ಣಂದಿರು ಈ ಕೆಟ್ಟ ಸಂಗತಿಯನ್ನು ಮಾಡಿದ್ದೇಕೆ? ಅವರಿಗೆ ಯೋಸೇಫನ ಮೇಲೆ ಹೊಟ್ಟೆಕಿಚ್ಚು ಇದ್ದದರಿಂದಲೇ.

ಅವರ ತಂದೆಯಾದ ಯಾಕೋಬನಿಗೆ ಯೋಸೇಫನೆಂದರೆ ಬಹಳ ಇಷ್ಟ. ಅವನಿಗೆ ಒಂದು ಸುಂದರವಾದ ನಿಲುವಂಗಿಯನ್ನು ಮಾಡಿಕೊಡುವ ಮೂಲಕ ಯಾಕೋಬನು ತನ್ನ ಪ್ರೀತಿಯನ್ನು ತೋರಿಸಿದನು. ಅವನು ಯೋಸೇಫನನ್ನು ಹೆಚ್ಚು ಪ್ರೀತಿಸುವುದನ್ನು ಅವನ ಹತ್ತು ಮಂದಿ ಅಣ್ಣಂದಿರು ನೋಡಿದಾಗ, ಅವರು ಹೊಟ್ಟೆಕಿಚ್ಚು ಪಟ್ಟು ಯೋಸೇಫನನ್ನು ದ್ವೇಷಿಸಿದರು. ಅವರು ಅವನನ್ನು ದ್ವೇಷಿಸಲು ಇನ್ನೊಂದು ಕಾರಣವೂ ಇತ್ತು.

ಯೋಸೇಫನಿಗೆ ಎರಡು ಕನಸುಗಳು ಬಿದ್ದವು. ಆ ಎರಡೂ ಕನಸುಗಳಲ್ಲಿ ಅವನ ಅಣ್ಣಂದಿರು ಬಗ್ಗಿ ಅವನಿಗೆ ನಮಸ್ಕರಿಸುವುದನ್ನು ಕಂಡನು. ಇದನ್ನು ಯೋಸೇಫನು ತನ್ನ ಅಣ್ಣಂದಿರಿಗೆ ತಿಳಿಸಿದಾಗ, ಅವರ ದ್ವೇಷ ಇನ್ನಷ್ಟು ಹೆಚ್ಚಾಯಿತು.

ಹೀಗಿರುವಾಗ ಒಂದಾನೊಂದು ಕಾಲದಲ್ಲಿ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಕುರಿಗಳನ್ನು ಮೇಯಿಸಲು ಹೋಗಿದ್ದರು. ಒಂದು ದಿನ, ಯಾಕೋಬನು ಯೋಸೇಫನನ್ನು ಕರೆದು ಅಣ್ಣಂದಿರು ಹೇಗಿದ್ದಾರೆಂದು ನೋಡಿಕೊಂಡು ಬರುವಂತೆ ಹೇಳುತ್ತಾನೆ. ಯೋಸೇಫನು ಬರುವುದನ್ನು ಅವನ ಅಣ್ಣಂದಿರು ಕಂಡಾಗ ಅವರಲ್ಲಿ ಕೆಲವರು, ‘ನಾವು ಅವನನ್ನು ಕೊಲ್ಲೋಣ!’ ಎಂದು ಹೇಳುತ್ತಾರೆ. ಆದರೆ ಅವರಲ್ಲಿ ದೊಡ್ಡವನಾದ ರೂಬೇನನು ‘ಬೇಡ, ಹಾಗೆ ಮಾಡಬೇಡಿ!’ ಎಂದು ಹೇಳುತ್ತಾನೆ. ಆಗ ಅವರು ಯೋಸೇಫನನ್ನು ಹಿಡಿದು ನೀರಿಲ್ಲದ ಒಂದು ಗುಂಡಿಗೆ ಹಾಕುತ್ತಾರೆ. ಆಮೇಲೆ ಅವನನ್ನು ಏನು ಮಾಡುವುದೆಂದು ಯೋಚಿಸುತ್ತಾ ಕೂತುಕೊಳ್ಳುತ್ತಾರೆ.

ಆ ಸಮಯದಲ್ಲಿ ಕೆಲವು ಇಷ್ಮಾಯೇಲ್ಯ ಪುರುಷರು ಆ ದಾರಿಯಾಗಿ ಬರುತ್ತಾರೆ. ಯೆಹೂದನು ತನ್ನ ಮಲಸಹೋದರರಿಗೆ, ‘ಬನ್ನಿ, ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ’ ಎಂದು ಹೇಳುತ್ತಾನೆ. ಅವರು ಹಾಗೆಯೇ ಮಾಡುತ್ತಾರೆ. ಅವರು ಯೋಸೇಫನನ್ನು 20 ಬೆಳ್ಳಿ ನಾಣ್ಯಗಳಿಗೆ ಮಾರಿಬಿಡುತ್ತಾರೆ. ಅದೆಷ್ಟು ನಿರ್ದಯವಾದ ನೀಚಕಾರ್ಯವಾಗಿತ್ತು!

ಸರಿ, ಈಗ ಯೋಸೇಫನ ಅಣ್ಣಂದಿರು ತಮ್ಮ ತಂದೆಗೆ ಏನು ಹೇಳುವರು? ಅವರೊಂದು ಆಡನ್ನು ಕೊಂದು ಅದರ ರಕ್ತದಲ್ಲಿ ಯೋಸೇಫನ ಸುಂದರವಾದ ನಿಲುವಂಗಿಯನ್ನು ಅದ್ದಿ ಅದ್ದಿ ತೆಗೆಯುತ್ತಾರೆ. ಅನಂತರ ಅವರು ಆ ನಿಲುವಂಗಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ಮತ್ತು ತಮ್ಮ ತಂದೆಯಾದ ಯಾಕೋಬನಿಗೆ ತೋರಿಸಿ ‘ಇದು ನಮಗೆ ಸಿಕ್ಕಿತು, ಇದು ಯೋಸೇಫನ ಅಂಗಿಯೋ ಅಲ್ಲವೋ ನೋಡು’ ಎಂದು ಹೇಳುತ್ತಾರೆ.

ಯಾಕೋಬನಿಗೆ ಆ ಅಂಗಿಯ ಗುರುತು ಸಿಗುತ್ತದೆ. ‘ಅಯ್ಯೋ, ಒಂದು ಕಾಡುಮೃಗವು ಯೋಸೇಫನನ್ನು ಕೊಂದಿರಬೇಕು’ ಎಂದು ಅವನು ಜೋರಾಗಿ ಅಳುತ್ತಾನೆ. ಯೋಸೇಫನ ಸಹೋದರರಿಗೆ ಅದೇ ಬೇಕಿತ್ತು. ತಮ್ಮ ತಂದೆಯು ಹಾಗೆಯೇ ನೆನಸಬೇಕೆಂದು ಅವರು ಬಯಸಿದ್ದರು. ಯಾಕೋಬನಿಗೆ ಬಹಳ ದುಃಖವಾಗುತ್ತದೆ. ಅನೇಕ ದಿನಗಳ ವರೆಗೆ ಅವನು ಶೋಕಿಸುತ್ತಾ ಇರುತ್ತಾನೆ. ಆದರೆ ಯೋಸೇಫನು ಸತ್ತಿಲ್ಲ. ಅವನನ್ನು ಕರೆದುಕೊಂಡು ಹೋದ ಸ್ಥಳದಲ್ಲಿ ಏನಾಯಿತೆಂದು ನಾವೀಗ ನೋಡೋಣ.

ಆದಿಕಾಂಡ 37:1-35.