ಐಗುಪ್ತಕ್ಕೆ ಕರೆದುಕೊಂಡು ಬಂದಾಗ ಯೋಸೇಫನಿಗೆ ಕೇವಲ 17 ವರ್ಷ ಪ್ರಾಯವಾಗಿತ್ತು. ಅಲ್ಲಿ ಅವನನ್ನು ಪೋಟೀಫರನೆಂಬ ಹೆಸರಿನ ಮನುಷ್ಯನಿಗೆ ಮಾರುತ್ತಾರೆ. ಈ ಪೋಟೀಫರನು ಐಗುಪ್ತದ ಅರಸನ ಕೈಕೆಳಗೆ ಕೆಲಸಮಾಡುತ್ತಾನೆ. ಐಗಪ್ತದ ಅರಸನನ್ನು ಫರೋಹನೆಂದು ಕರೆಯುತ್ತಾರೆ.

ಯೋಸೇಫನು ತನ್ನ ಯಜಮಾನನಾದ ಪೋಟೀಫರನಿಗಾಗಿ ಕಷ್ಟಪಟ್ಟು ದುಡಿಯುತ್ತಾನೆ. ಹೀಗೆ ಯೋಸೇಫನು ಇನ್ನೂ ದೊಡ್ಡವನಾದಾಗ ಪೋಟೀಫರನು ತನ್ನ ಇಡೀ ಮನೆಯನ್ನು ನೋಡಿಕೊಳ್ಳುವಂತೆ ಅವನನ್ನು ನೇಮಿಸುತ್ತಾನೆ. ಹಾಗಾದರೆ, ಯೋಸೇಫನು ಇಲ್ಲಿ ಸೆರೆಮನೆಯಲ್ಲಿ ಏಕೆ ಇದ್ದಾನೆ? ಇದಕ್ಕೆ ಕಾರಣ ಪೋಟೀಫರನ ಹೆಂಡತಿಯಾಗಿದ್ದಾಳೆ.

ಯೋಸೇಫನು ಬೆಳೆದು ದೊಡ್ಡವನಾದಾಗ ಅತಿ ಸುಂದರನಾಗಿ ಕಾಣುತ್ತಾನೆ. ಪೋಟೀಫರನ ಹೆಂಡತಿಯು ಅವನನ್ನು ತನ್ನೊಂದಿಗೆ ಮಲಗುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಇದು ತಪ್ಪೆಂದು ಯೋಸೇಫನಿಗೆ ತಿಳಿದಿದೆ. ಅವನು ಹಾಗೆ ಮಾಡಲು ಒಪ್ಪುವುದಿಲ್ಲ. ಇದರಿಂದ ಪೋಟೀಫರನ ಹೆಂಡತಿಗೆ ತುಂಬಾ ಕೋಪ ಬರುತ್ತದೆ. ಅವಳ ಗಂಡ ಮನೆಗೆ ಬಂದಾಗ ಅವಳು ಯೋಸೇಫನ ಬಗ್ಗೆ ಸುಳ್ಳು ಹೇಳುತ್ತಾಳೆ. ‘ಆ ದುಷ್ಟ ಯೋಸೇಫನು ನನ್ನೊಡನೆ ಮಲಗಲು ಪ್ರಯತ್ನಿಸಿದನು!’ ಎನ್ನುತ್ತಾಳೆ ಅವಳು. ಪೋಟೀಫರನು ತನ್ನ ಹೆಂಡತಿಯ ಮಾತನ್ನು ನಂಬುತ್ತಾನೆ. ಅವನಿಗೆ ಯೋಸೇಫನ ಮೇಲೆ ಬಹಳ ಸಿಟ್ಟು ಬರುತ್ತದೆ. ಆದ್ದರಿಂದ, ಯೋಸೇಫನನ್ನು ಅವನು ಸೆರೆಮನೆಗೆ ಹಾಕಿಸುತ್ತಾನೆ.

ಯೋಸೇಫನು ಒಳ್ಳೆಯವನೆಂದು ಸೆರೆಮನೆಯ ಯಜಮಾನನು ಬೇಗನೆ ತಿಳಿದುಕೊಳ್ಳುತ್ತಾನೆ. ಆದುದರಿಂದ ಸೆರೆಯಲ್ಲಿದ್ದ ಬೇರೆ ಎಲ್ಲಾ ಕೈದಿಗಳನ್ನು ಯೋಸೇಫನ ಕೈಕೆಳಗೆ ಒಪ್ಪಿಸುತ್ತಾನೆ. ಸ್ವಲ್ಪ ಸಮಯದ ನಂತರ, ಫರೋಹನು ತನ್ನ ಪಾನದಾಯಕನ ಮತ್ತು ಭಕ್ಷ್ಯಗಾರನ ಮೇಲೆ ಕೋಪಗೊಂಡು ಅವರನ್ನು ಸೆರೆಮನೆಗೆ ಹಾಕುತ್ತಾನೆ. ಒಂದು ರಾತ್ರಿ, ಅವರಿಬ್ಬರಿಗೂ ವಿಶೇಷ ಕನಸು ಬೀಳುತ್ತದೆ. ಆದರೆ ಆ ಕನಸುಗಳ ಅರ್ಥವು ಅವರಿಗೆ ತಿಳಿಯುವುದಿಲ್ಲ. ಮರುದಿನ ಯೋಸೇಫನು ‘ನಿಮ್ಮ ಕನಸನ್ನು ನನಗೆ ತಿಳಿಸಿರಿ’ ಎಂದು ಹೇಳುತ್ತಾನೆ. ಅವರು ಅದನ್ನು ತಿಳಿಸಿದಾಗ, ಯೋಸೇಫನು ದೇವರ ಸಹಾಯದಿಂದ ಅದರ ಅರ್ಥವನ್ನು ವಿವರಿಸುತ್ತಾನೆ.

ಪಾನದಾಯಕನಿಗೆ ಯೋಸೇಫನು ವಿವರಿಸುವುದು: ‘ಮೂರು ದಿನದೊಳಗೆ ನಿನ್ನನ್ನು ಸೆರೆಮನೆಯಿಂದ ಬಿಡಿಸುವರು. ನೀನು ಪುನಃ ಫರೋಹನ ಪಾನದಾಯಕನಾಗುವಿ. ನೀನು ಬಿಡುಗಡೆಯಾದಾಗ, ಫರೋಹನಿಗೆ ನನ್ನ ಕುರಿತು ಹೇಳು. ಮತ್ತು ಇಲ್ಲಿಂದ ನಾನು ಬಿಡುಗಡೆಯಾಗುವಂತೆ ನನಗೆ ಸಹಾಯಮಾಡು.’ ಆದರೆ ಭಕ್ಷ್ಯಗಾರನಿಗೆ ಹೇಳುವುದು: ‘ಕೇವಲ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆ ಕಡಿಯುವನು.’

ಮೂರು ದಿನಗಳೊಳಗೆ ಯೋಸೇಫನು ತಿಳಿಸಿದಂತೆಯೇ ನಡೆಯುತ್ತದೆ. ಫರೋಹನು ಭಕ್ಷ್ಯಗಾರನ ತಲೆ ಕಡಿಸುತ್ತಾನೆ. ಪಾನದಾಯಕನಾದರೋ ಸೆರೆಮನೆಯಿಂದ ಬಿಡಿಸಲ್ಪಡುತ್ತಾನೆ. ಅಷ್ಟೇ ಅಲ್ಲ, ಪುನಃ ಅರಸನ ಸೇವೆ ಮಾಡುತ್ತಾನೆ. ಆದರೆ ಅವನು ಯೋಸೇಫನ ಕುರಿತು ಮರೆತೇಬಿಡುತ್ತಾನೆ! ಅವನ ಕುರಿತು ಫರೋಹನಿಗೆ ತಿಳಿಸುವುದಿಲ್ಲ. ಯೋಸೇಫನು ಸೆರೆಮನೆಯಲ್ಲಿಯೇ ಉಳಿಯಬೇಕಾಗುತ್ತದೆ.

ಆದಿಕಾಂಡ 39:1-23; 40:1-23.