ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 24

ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ

ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ

ಯೋಸೇಫನು ತನ್ನ ಅಣ್ಣಂದಿರು ಇನ್ನೂ ನಿರ್ದಯಿಗಳಾಗಿ ಇದ್ದಾರೋ ಎಂದು ತಿಳಿಯಲು ಬಯಸುತ್ತಾನೆ. ಆದುದರಿಂದ ಅವರಿಗೆ ‘ನೀವು ಗೂಢಚಾರರು. ನಮ್ಮ ದೇಶದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚಲು ಬಂದವರು’ ಎಂದು ಹೇಳುತ್ತಾನೆ.

ಆದರೆ ಅವರು ‘ಅಲ್ಲ, ನಾವು ಗೂಢಚಾರರಲ್ಲ, ಒಳ್ಳೆಯ ಮನುಷ್ಯರು. ನಾವೆಲ್ಲರೂ ಅಣ್ಣತಮ್ಮಂದಿರು. ನಾವು ಹನ್ನೆರಡು ಮಂದಿ ಇದ್ದೆವು. ಆದರೆ ಒಬ್ಬನು ಇಲ್ಲ, ಚಿಕ್ಕವನು ತಂದೆಯ ಬಳಿಯಲ್ಲಿ ಮನೆಯಲ್ಲಿದ್ದಾನೆ’ ಎಂದು ಹೇಳುತ್ತಾರೆ.

ಯೋಸೇಫನು ಅವರ ಮಾತನ್ನು ನಂಬದವನಂತೆ ನಟಿಸುತ್ತಾನೆ. ಅವರಲ್ಲಿ ಒಬ್ಬನಾದ ಸಿಮೆಯೋನನನ್ನು ಸೆರೆಮನೆಯಲ್ಲಿಟ್ಟು ಉಳಿದವರು ಆಹಾರ ತೆಗೆದುಕೊಂಡು ಮನೆಗೆ ಹೋಗುವಂತೆ ಹೇಳುತ್ತಾನೆ. ಆದರೆ ಅವರಿಗೆ, ‘ನೀವು ಹಿಂದೆ ಬರುವಾಗ ನಿಮ್ಮ ಚಿಕ್ಕ ತಮ್ಮನನ್ನು ಕರೆದುಕೊಂಡು ಬರಬೇಕು’ ಎಂದು ಅವನು ಹೇಳುತ್ತಾನೆ.

ಅವರು ಕಾನಾನ್‌ ದೇಶದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ ನಡೆದದ್ದೆಲ್ಲವನ್ನು ತಮ್ಮ ತಂದೆಯಾದ ಯಾಕೋಬನಿಗೆ ತಿಳಿಸುತ್ತಾರೆ. ಯಾಕೋಬನು ಅದನ್ನು ಕೇಳಿ ತುಂಬ ದುಃಖಪಡುತ್ತಾನೆ. ‘ಯೋಸೇಫನೂ ಇಲ್ಲ, ಈಗ ಸಿಮೆಯೋನನೂ ಇಲ್ಲ. ನನ್ನ ಕೊನೆಯ ಮಗನಾದ ಬೆನ್ಯಾಮೀನನನ್ನು ಕರೆದುಕೊಂಡು ಹೋಗಲು ನಾನಂತೂ ಬಿಡುವುದೇ ಇಲ್ಲ’ ಎಂದು ಅವನು ಅಳುತ್ತಾನೆ. ಆದರೆ ಸಮಯ ಕಳೆದಂತೆ ಅವರಲ್ಲಿದ್ದ ಆಹಾರವು ಮುಗಿಯುತ್ತಾ ಬರುತ್ತದೆ. ಅವರು ಆಹಾರವನ್ನು ತರಬೇಕಾದರೆ ಬೆನ್ಯಾಮೀನನನ್ನು ಐಗುಪ್ತಕ್ಕೆ ಕರಕೊಂಡು ಹೋಗಲೇಬೇಕು. ಇದಕ್ಕೆ ಯಾಕೋಬನು ಈಗ ಒಪ್ಪಲೇಬೇಕಾಗುತ್ತದೆ.

ತನ್ನ ಸಹೋದರರು ಬರುತ್ತಿರುವುದನ್ನು ಯೋಸೇಫನು ನೋಡುತ್ತಾನೆ. ತನ್ನ ತಮ್ಮನಾದ ಬೆನ್ಯಾಮೀನನನ್ನು ನೋಡಿ ಅವನಿಗೆ ಬಹಳ ಸಂತೋಷವಾಗುತ್ತದೆ. ಯೋಸೇಫನೇ ಐಗುಪ್ತದ ಈ ಅಧಿಕಾರಿಯೆಂದು ಅವರಲ್ಲಿ ಯಾರಿಗೂ ತಿಳಿದಿಲ್ಲ. ತನ್ನ 10 ಮಂದಿ ಅಣ್ಣಂದಿರನ್ನು ಪರೀಕ್ಷಿಸಲು ಯೋಸೇಫನು ಈಗ ಏನನ್ನೋ ಮಾಡುತ್ತಾನೆ.

ಅವರ ಚೀಲಗಳಲ್ಲಿ ದವಸಧಾನ್ಯವನ್ನು ತುಂಬಿಸುವಂತೆ ಯೋಸೇಫನು ತನ್ನ ಸೇವಕರಿಗೆ ಅಪ್ಪಣೆಕೊಡುತ್ತಾನೆ. ಆದರೆ ಅವರಿಗೆ ತಿಳಿಯದಂತೆ ಬೆನ್ಯಾಮೀನನ ಚೀಲದೊಳಗೆ ದವಸಧಾನ್ಯದೊಂದಿಗೆ ತನ್ನ ವಿಶೇಷವಾದ ಬೆಳ್ಳಿಯ ಪಾನಪಾತ್ರೆಯನ್ನೂ ಇರಿಸುತ್ತಾನೆ. ಅವರೆಲ್ಲರೂ ಹೊರಟು ಸ್ವಲ್ಪ ದೂರ ಹೋದ ನಂತರ ಯೋಸೇಫನು ತನ್ನ ಸೇವಕರನ್ನು ಅವರ ಹಿಂದೆ ಕಳುಹಿಸುತ್ತಾನೆ. ಸೇವಕರು ಅವರನ್ನು ಹಿಂದಟ್ಟಿ ‘ನಮ್ಮ ಧನಿಯ ಬೆಳ್ಳಿಯ ಪಾತ್ರೆಯನ್ನು ನೀವು ಕದ್ದದ್ದೇಕೆ?’ ಎಂದು ಅವರನ್ನು ಕೇಳುತ್ತಾರೆ.

‘ನಾವು ಆತನ ಪಾತ್ರೆಯನ್ನು ಕದಿಯಲಿಲ್ಲ. ನೀವು ನಮ್ಮ ಚೀಲದಲ್ಲಿ ಹುಡುಕಿ. ನಮ್ಮಲ್ಲಿ ಯಾರ ಚೀಲದಲ್ಲಾದರೂ ಆ ಪಾತ್ರೆಯು ಸಿಕ್ಕಿದರೆ ಅವನಿಗೆ ಮರಣ ದಂಡನೆ ಆಗಲಿ’ ಎನ್ನುತ್ತಾರೆ ಸೋದರರೆಲ್ಲರೂ.

ಆದುದರಿಂದ ಸೇವಕರು ಎಲ್ಲಾ ಚೀಲಗಳನ್ನು ಪರೀಕ್ಷಿಸಿ ನೋಡುತ್ತಾರೆ. ನೀವು ಚಿತ್ರದಲ್ಲಿ ನೋಡುವಂತೆ, ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಗುತ್ತದೆ. ಸೇವಕರು ಅನ್ನುವುದು: ‘ನೀವೆಲ್ಲರೂ ಹೋಗಬಹುದು, ಆದರೆ ಬೆನ್ಯಾಮೀನನು ನಮ್ಮೊಂದಿಗೆ ಬರಬೇಕು.’ ಈಗ ಆ 10 ಮಂದಿ ಅಣ್ಣಂದಿರು ಏನು ಮಾಡುವರು?

ಬೆನ್ಯಾಮೀನನೊಂದಿಗೆ ಅವರೆಲ್ಲರೂ ಯೋಸೇಫನ ಮನೆಗೆ ಹಿಂದಿರುಗುತ್ತಾರೆ. ಯೋಸೇಫನು ತನ್ನ ಅಣ್ಣಂದಿರಿಗೆ ಹೇಳುವುದು: ‘ನೀವೆಲ್ಲರೂ ಮನೆಗೆ ಹೋಗಬಹುದು. ಆದರೆ ಬೆನ್ಯಾಮೀನನು ನನ್ನ ದಾಸನಾಗಿ ಇಲ್ಲೇ ಇರಬೇಕು.’

ಈಗ ಯೆಹೂದನು ಮುಂದೆ ಬಂದು ಹೇಳುವುದು: ‘ನಾನು ಈ ಹುಡುಗನನ್ನು ಇಲ್ಲಿ ಬಿಟ್ಟು ಮನೆಗೆ ಹೋದರೆ ನನ್ನ ತಂದೆಯು ಸಾಯುವನು. ಯಾಕೆಂದರೆ ಇವನನ್ನು ನಮ್ಮ ತಂದೆ ಬಹಳ ಪ್ರೀತಿಸುತ್ತಾನೆ. ಆದುದರಿಂದ ದಯವಿಟ್ಟು ನನ್ನನ್ನು ನಿನ್ನ ದಾಸನಾಗಿ ಮಾಡಿಕೋ. ಆದರೆ ಈ ಹುಡುಗನನ್ನು ಮನೆಗೆ ಹೋಗುವಂತೆ ಬಿಡು.’

ತನ್ನ ಅಣ್ಣಂದಿರು ಬದಲಾಗಿದ್ದಾರೆಂದು ಯೋಸೇಫನಿಗೆ ಈಗ ತಿಳಿಯುತ್ತದೆ. ಅವರು ಈಗ ದಯಾಪರರಾದ ಒಳ್ಳೆಯ ಜನರಾಗಿದ್ದಾರೆ. ಈಗ ಯೋಸೇಫನು ಏನು ಮಾಡುತ್ತಾನೆಂದು ನಾವು ನೋಡೋಣ.

ಆದಿಕಾಂಡ 42:9-38; 43:1-34; 44:1-34.