ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 20

ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ

ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ

ದೀನಳು ಯಾರನ್ನು ನೋಡಲು ಹೋಗುತ್ತಿದ್ದಾಳೆಂದು ನೀವು ಹೇಳಬಲ್ಲಿರೋ? ಕಾನಾನ್‌ ದೇಶದಲ್ಲಿರುವ ಕೆಲವು ಹುಡುಗಿಯರನ್ನು ನೋಡಲು ಅವಳು ಹೋಗುತ್ತಿದ್ದಾಳೆ. ಆದರೆ ಅವಳ ತಂದೆ ಯಾಕೋಬನಿಗೆ ಇದು ಇಷ್ಟವಾಗುತ್ತದೋ? ಈ ಪ್ರಶ್ನೆಯನ್ನು ಉತ್ತರಿಸಲು, ಅಬ್ರಹಾಮ ಮತ್ತು ಇಸಾಕರು ಕಾನಾನಿನ ಸ್ತ್ರೀಯರ ಕುರಿತು ಏನು ನೆನಸಿದ್ದರೆಂಬದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿರಿ.

ತನ್ನ ಮಗನಾದ ಇಸಾಕನು ಕಾನಾನಿನ ಹೆಣ್ಣನ್ನು ಮದುವೆಯಾಗುವಂತೆ ಅಬ್ರಹಾಮನು ಇಷ್ಟಪಟ್ಟನೋ? ಖಂಡಿತ ಇಲ್ಲ. ಇಸಾಕ ಮತ್ತು ರೆಬೆಕ್ಕ ತಮ್ಮ ಮಗನಾದ ಯಾಕೋಬನು ಕಾನಾನ್ಯ ಹುಡುಗಿಯನ್ನು ಮದುವೆಯಾಗುವಂತೆ ಬಯಸಿದರೋ? ಇಲ್ಲ, ಅವರು ಬಯಸಲಿಲ್ಲ. ಅದು ಏಕೆಂದು ನಿಮಗೆ ಗೊತ್ತೋ?

ಅದು ಯಾಕೆಂದರೆ ಕಾನಾನಿನ ಈ ಜನರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಮದುವೆಯಾಗಲಿಕ್ಕಾಗಿಯೋ ಆಪ್ತ ಮಿತ್ರರಾಗಿರಲಿಕ್ಕಾಗಿಯೋ ಅವರು ಅಷ್ಟು ಒಳ್ಳೆಯ ಜನರಾಗಿರಲಿಲ್ಲ. ಆದುದರಿಂದ ತನ್ನ ಮಗಳು ಈ ಕಾನಾನ್ಯ ಹುಡುಗಿಯರೊಂದಿಗೆ ಸ್ನೇಹ ಬೆಳೆಸುವುದು ಯಾಕೋಬನಿಗೆ ಇಷ್ಟವಿರಲಿಲ್ಲವೆಂದು ನಾವು ಹೇಳಸಾಧ್ಯವಿದೆ.

ಆದರೆ ದೀನಳು ನಿಜವಾಗಿಯೂ ತೊಂದರೆಯಲ್ಲಿ ಸಿಕ್ಕಿಬಿದ್ದಳೋ? ಹೌದು. ಚಿತ್ರದಲ್ಲಿ, ಒಬ್ಬ ಕಾನಾನ್ಯ ಪುರುಷನು ದೀನಳನ್ನು ನೋಡುತ್ತಿರುವುದನ್ನು ನೀವು ಗಮನಿಸಿದ್ದೀರೋ? ಅವನ ಹೆಸರು ಶೆಕೆಮ್. ಒಂದು ದಿನ ದೀನಳು ಆ ಹುಡುಗಿಯರನ್ನು ಭೇಟಿಯಾಗಲು ಬಂದಾಗ, ಶೆಕೆಮನು ಅವಳನ್ನು ತೆಗೆದುಕೊಂಡು ಹೋಗಿ, ತನ್ನೊಂದಿಗೆ ಮಲಗುವಂತೆ ಬಲಾತ್ಕರಿಸಿದನು. ಇದು ತಪ್ಪಾಗಿತ್ತು. ಯಾಕೆಂದರೆ ಮದುವೆಯಾಗಿರುವ ಪುರುಷ ಮತ್ತು ಸ್ತ್ರೀಯು ಮಾತ್ರ ಒಟ್ಟಿಗೆ ಮಲಗಬಹುದಾಗಿದೆ. ಶೆಕೆಮನು ದೀನಳಿಗೆ ಮಾಡಿದ ಈ ಕೆಟ್ಟ ಸಂಗತಿಯಿಂದ ಬಹಳಷ್ಟು ತೊಂದರೆ ಉಂಟಾಯಿತು.

ನಡೆದ ಸಂಗತಿಯ ಕುರಿತು ದೀನಳ ಸಹೋದರರು ಕೇಳಿದಾಗ ತುಂಬಾ ಕೋಪಗೊಂಡರು. ಸಿಮೆಯೋನ ಮತ್ತು ಲೇವಿ ಎಂಬ ಇಬ್ಬರು ಸಹೋದರರು ಎಷ್ಟು ಕೋಪಗೊಂಡರೆಂದರೆ, ಕತ್ತಿಗಳನ್ನು ಹಿಡುಕೊಂಡು ಪಟ್ಟಣಕ್ಕೆ ಹೋಗಿ ಹಠಾತ್ತನೇ ಆ ಜನರನ್ನು ಹೊಡೆದರು. ಅವರು ತಮ್ಮ ಸಹೋದರರೊಂದಿಗೆ ಸೇರಿ ಶೆಕೆಮನನ್ನು ಮತ್ತು ಬೇರೆ ಎಲ್ಲಾ ಪುರುಷರನ್ನು ಕೊಂದುಬಿಟ್ಟರು. ತನ್ನ ಗಂಡುಮಕ್ಕಳು ಈ ಕೆಟ್ಟ ಸಂಗತಿಯನ್ನು ಮಾಡಿದ ಕಾರಣ ಯಾಕೋಬನು ಸಿಟ್ಟುಗೊಂಡನು.

ಈ ಎಲ್ಲಾ ತೊಂದರೆಯು ಪ್ರಾರಂಭವಾದದ್ದು ಹೇಗೆ? ದೇವರ ನಿಯಮಗಳಿಗೆ ವಿಧೇಯರಾಗದ ಜನರೊಂದಿಗೆ ದೀನಳು ಸ್ನೇಹ ಬೆಳೆಸಿದ ಕಾರಣದಿಂದಲೇ. ನಾವು ಅಂಥ ಮಿತ್ರರನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ, ಅಲ್ಲವೇ?

ಆದಿಕಾಂಡ 34:1-31.