ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 25

ಇಡೀ ಕುಟುಂಬವು ಐಗುಪ್ತಕ್ಕೆ ಸ್ಥಳಾಂತರಿಸುತ್ತದೆ

ಇಡೀ ಕುಟುಂಬವು ಐಗುಪ್ತಕ್ಕೆ ಸ್ಥಳಾಂತರಿಸುತ್ತದೆ

ಯೋಸೇಫನಿಗೆ ತನ್ನ ಭಾವನೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ತನ್ನ ಸೇವಕರೆಲ್ಲರಿಗೂ ಕೋಣೆಯನ್ನು ಬಿಟ್ಟು ಹೋಗುವಂತೆ ಅವನು ಹೇಳುತ್ತಾನೆ. ಮತ್ತು ತನ್ನ ಸೋದರರೊಂದಿಗೆ ಒಬ್ಬನೇ ಇರುವಾಗ, ಯೋಸೇಫನು ಜೋರಾಗಿ ಅಳುತ್ತಾನೆ. ಅವನ ಸೋದರರಿಗೆ ಎಷ್ಟು ಆಶ್ಚರ್ಯವಾಗಿರಬಹುದು ಎಂಬುದನ್ನು ನಾವು ಕಲ್ಪಿಸಿಕೊಳ್ಳಬಹುದು. ಯಾಕೆಂದರೆ ಅವನು ಯಾಕೆ ಅಳುತ್ತಿದ್ದಾನೆಂದು ಅವರಿಗೆ ತಿಳಿದಿರಲಿಲ್ಲ. ಕೊನೆಗೂ ತಡೆಯಲಾರದೆ ಅವನು ‘ನಾನು ಯೋಸೇಫನು. ನನ್ನ ತಂದೆ ಇನ್ನೂ ಜೀವದಿಂದಿದ್ದಾರೋ?’ ಎಂದು ಕೇಳುತ್ತಾನೆ.

ಅವನ ಸೋದರರಿಗೆ ಎಷ್ಟು ಆಶ್ಚರ್ಯವಾಗುತ್ತದೆಂದರೆ ಅವರಿಗೆ ಮಾತೇ ಹೊರಡುವುದಿಲ್ಲ. ಅವರಿಗೆ ಭಯವಾಗುತ್ತದೆ. ಆದರೆ ಯೋಸೇಫನು, ‘ದಯವಿಟ್ಟು ನನ್ನ ಹತ್ತಿರ ಬನ್ನಿರಿ’ ಅನ್ನುತ್ತಾನೆ. ಅವರು ಹತ್ತಿರ ಬಂದಾಗ ಅವನು ಹೇಳುವುದು: ‘ಐಗುಪ್ತ ದೇಶಕ್ಕೆ ನೀವು ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ.’

ಯೋಸೇಫನು ದಯೆಯಿಂದ ಮಾತಾಡುತ್ತಾನೆ: ‘ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಬೇಸರಪಟ್ಟುಕೊಳ್ಳಬೇಡಿರಿ. ಜನರನ್ನು ರಕ್ಷಿಸಲಿಕ್ಕಾಗಿ ದೇವರೇ ನನ್ನನ್ನು ಐಗುಪ್ತಕ್ಕೆ ಕಳುಹಿಸಿದನು. ಫರೋಹನು ನನ್ನನ್ನು ಇಡೀ ದೇಶದ ಅಧಿಪತಿಯಾಗಿ ಮಾಡಿದ್ದಾನೆ. ಆದುದರಿಂದ ನೀವು ಬೇಗನೆ ತಂದೆಯ ಬಳಿಗೆ ಹೋಗಿ ಇದನ್ನು ತಿಳಿಸಿರಿ. ಇಲ್ಲಿಗೆ ಬಂದು ವಾಸಿಸಬೇಕೆಂದು ಹೇಳಿರಿ.’

ಅನಂತರ ಯೋಸೇಫನು ತನ್ನ ಸೋದರರನ್ನು ಅಪ್ಪಿಕೊಂಡು ಮುದ್ದಿಡುತ್ತಾನೆ. ಯೋಸೇಫನ ಅಣ್ಣತಮ್ಮಂದಿರು ಬಂದಿದ್ದಾರೆಂದು ಫರೋಹನಿಗೆ ತಿಳಿದಾಗ, ಅವನು ಯೋಸೇಫನಿಗೆ ಹೇಳುವುದು: ‘ಅವರು ರಥಗಳನ್ನು ತೆಗೆದುಕೊಂಡು ಹೋಗಿ ಅವರ ತಂದೆಯನ್ನೂ ಕುಟುಂಬಗಳನ್ನೂ ಇಲ್ಲಿಗೆ ಕರೆದುಕೊಂಡು ಬರಲಿ. ಐಗುಪ್ತ ದೇಶದಲ್ಲೇ ಒಳ್ಳೆಯ ಪ್ರದೇಶವನ್ನು ನಾನು ಅವರಿಗೆ ಕೊಡುವೆನು.’

ಅವರು ಹಾಗೆಯೇ ಮಾಡುತ್ತಾರೆ. ಅವನ ತಂದೆಯು ತನ್ನ ಇಡೀ ಕುಟುಂಬದೊಂದಿಗೆ ಐಗುಪ್ತಕ್ಕೆ ಬಂದಾಗ ಯೋಸೇಫನು ಬಂದು ಅವನನ್ನು ಅಪ್ಪಿಕೊಳ್ಳುವುದನ್ನು ನೀವು ಚಿತ್ರದಲ್ಲಿ ನೋಡಬಹುದು.

ಯಾಕೋಬನ ಕುಟುಂಬವು ತುಂಬಾ ದೊಡ್ಡದಾಗಿತ್ತು. ಐಗುಪ್ತಕ್ಕೆ ಅವರು ಬಂದಾಗ ಯಾಕೋಬನು, ಅವನ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟಿಗೆ 70 ಮಂದಿ ಇದ್ದರು. ಅವರೊಂದಿಗೆ ಅವರ ಹೆಂಡತಿಯರು ಕೂಡ ಇದ್ದರು, ಮತ್ತು ಅನೇಕ ಸೇವಕರು ಸಹ ಇದ್ದಿರಬಹುದು. ಇವರೆಲ್ಲರೂ ಐಗುಪ್ತದಲ್ಲಿ ವಾಸಿಸಿದರು. ಅವರನ್ನು ಇಸ್ರಾಯೇಲ್ಯರೆಂದು ಕರೆಯಲಾಗುತ್ತಿತ್ತು. ಯಾಕೆಂದರೆ ದೇವರು ಯಾಕೋಬನ ಹೆಸರನ್ನು ಇಸ್ರಾಯೇಲ್‌ ಎಂದು ಬದಲಾಯಿಸಿದ್ದನು. ಮುಂದೆ ನಾವು ನೋಡಲಿರುವಂತೆ, ಇಸ್ರಾಯೇಲ್ಯರು ದೇವರಿಗೆ ಅತಿ ವಿಶೇಷವಾದ ಜನರಾದರು.

ಆದಿಕಾಂಡ 45:1-28; 46:1-27.