ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

 ಅಧ್ಯಾಯ 2

ಒಂದು ಸುಂದರ ತೋಟ

ಒಂದು ಸುಂದರ ತೋಟ

ಈ ಚಿತ್ರದಲ್ಲಿರುವ ಭೂಮಿಯನ್ನು ನೋಡಿರಿ! ಎಲ್ಲವೂ ಎಷ್ಟೊಂದು ಸುಂದರವಾಗಿದೆ! ಹಸುರು ಹುಲ್ಲು, ಮರಗಳು, ಬಣ್ಣಬಣ್ಣದ ಹೂವುಗಳು ಮತ್ತು ಎಲ್ಲಾ ಪ್ರಾಣಿಗಳನ್ನು ನೋಡಿರಿ. ಆನೆ ಮತ್ತು ಸಿಂಹಗಳನ್ನು ನೀವು ಗುರುತಿಸುವಿರೋ?

ಈ ಸುಂದರವಾದ ತೋಟವನ್ನು ಯಾರು ಉಂಟುಮಾಡಿದರು? ದೇವರೇ. ನಾವೀಗ ದೇವರು ಭೂಮಿಯನ್ನು ನಮಗಾಗಿ ಹೇಗೆ ಸಿದ್ಧಮಾಡಿದನೆಂಬದನ್ನು ನೋಡೋಣ.

ಮೊದಲು, ಹಸುರು ಹುಲ್ಲು ಬೆಳೆದು ಭೂಮಿಯನ್ನು ಆವರಿಸುವಂತೆ ದೇವರು ಮಾಡಿದನು. ಮಾತ್ರವಲ್ಲ, ಎಲ್ಲಾ ವಿಧದ ಚಿಕ್ಕ ಚಿಕ್ಕ ಸಸಿಗಳನ್ನೂ ಪೊದೆಗಳನ್ನೂ ವೃಕ್ಷಗಳನ್ನೂ ಆತನು ಉಂಟುಮಾಡಿದನು. ಈ ಮರಗಿಡಗಳು ಭೂಮಿಯು ಬಲು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಅಷ್ಟೇ ಅಲ್ಲ, ಅನೇಕ ಮರಗಿಡಗಳು ತುಂಬ ರುಚಿ ರುಚಿಯಾದ ಫಲಗಳನ್ನೂ ನಮಗೆ ಕೊಡುತ್ತವೆ.

ಅನಂತರ, ನೀರಿನಲ್ಲಿ ಈಜಾಡುವ ಮೀನುಗಳನ್ನು ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನು ದೇವರು ಉಂಟುಮಾಡಿದನು. ನಾಯಿ, ಬೆಕ್ಕು, ಕುದುರೆ, ದೊಡ್ಡ ದೊಡ್ಡ ಪ್ರಾಣಿಗಳು, ಚಿಕ್ಕ ಚಿಕ್ಕ ಪ್ರಾಣಿಗಳು ಇವುಗಳನ್ನೆಲ್ಲಾ ಆತನು ಉಂಟುಮಾಡಿದನು. ನಿಮ್ಮ ಮನೆಯ ಹತ್ತಿರ ಯಾವ ಯಾವ ಪ್ರಾಣಿಗಳನ್ನು ನೀವು ನೋಡುತ್ತೀರಿ? ಇವೆಲ್ಲವುಗಳನ್ನು ದೇವರು ನಮಗಾಗಿ ಸೃಷ್ಟಿಸಿದಕ್ಕಾಗಿ ನಾವು ಸಂತೋಷಿಸಬೇಕಲ್ಲವೇ?

ಕೊನೆಗೆ, ದೇವರು ಭೂಮಿಯ ಒಂದು ಭಾಗವನ್ನು ಅತಿ ವಿಶಿಷ್ಟ ಸ್ಥಳವನ್ನಾಗಿ ಮಾಡಿದನು. ಈ ಸ್ಥಳವನ್ನು ಆತನು ಏದೆನ್‌ ತೋಟ ಎಂದು ಕರೆದನು. ಅದರಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಎಲ್ಲವೂ ಅಂದವಾಗಿತ್ತು. ತಾನು ಮಾಡಿದ ಈ ಸುಂದರ ತೋಟದಂತೆಯೇ ಇಡೀ ಭೂಮಿ ಆಗಬೇಕೆಂದು ದೇವರು ಬಯಸಿದನು.

ಆದರೆ ಈ ತೋಟದ ಚಿತ್ರವನ್ನು ಇನ್ನೊಮ್ಮೆ ನೋಡಿರಿ. ಇಲ್ಲಿ ಯಾವುದು ಇಲ್ಲವೆಂದು ದೇವರು ಕಂಡುಕೊಂಡನು ಎಂಬುದು ನಿಮಗೆ ಗೊತ್ತೋ? ಅದೇನೆಂದು ನಾವು ನೋಡೋಣ.

ಆದಿಕಾಂಡ 1:11-25; 2:8, 9.