ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ನಮಗೆ ಏನು ಕಲಿಸುತ್ತದೆ?

 ಅಧ್ಯಾಯ 8

ದೇವರ ರಾಜ್ಯ ಎಂದರೇನು?

ದೇವರ ರಾಜ್ಯ ಎಂದರೇನು?

1. ಈ ಅಧ್ಯಾಯದಲ್ಲಿ ನಾವು ಏನನ್ನು ಕಲಿಯಲಿದ್ದೇವೆ?

ಪ್ರಾರ್ಥನೆಯನ್ನು ಹೇಗೆ ಮಾಡಬೇಕೆಂದು ತನ್ನ ಶಿಷ್ಯರಿಗೆ ಕಲಿಸಲಿಕ್ಕಾಗಿ ಯೇಸು ಒಂದು ಪ್ರಾರ್ಥನೆಯನ್ನು ಮಾಡಿ ತೋರಿಸಿದನು. ಆ ಪ್ರಾರ್ಥನೆಯನ್ನು ‘ಕರ್ತನ ಪ್ರಾರ್ಥನೆ’ ಎಂದು ಅನೇಕರು ಕರೆಯುತ್ತಾರೆ. ನಾವು ಈ ಅಧ್ಯಾಯದಲ್ಲಿ, ಯೇಸು ಈ ಪ್ರಾರ್ಥನೆಯಲ್ಲಿ ಏನೆಲ್ಲ ಬೇಡಿಕೊಂಡನು? ಈ ಪ್ರಾರ್ಥನೆಯ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು? ಎಂದು ಕಲಿಯಲಿದ್ದೇವೆ.

2. ಯಾವ ಮೂರು ಪ್ರಾಮುಖ್ಯ ವಿಷಯಗಳಿಗಾಗಿ ಪ್ರಾರ್ಥಿಸುವಂತೆ ಯೇಸು ಕಲಿಸಿದನು?

2 ಯೇಸು ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9-13 ಓದಿ.) ಈ ಮೂರು ವಿಷಯಗಳಿಗಾಗಿ ಪ್ರಾರ್ಥಿಸುವಂತೆ ಯೇಸು ಏಕೆ ಹೇಳಿದನು?—ಟಿಪ್ಪಣಿ 19ನ್ನು ನೋಡಿ.

3. ದೇವರ ರಾಜ್ಯದ ಬಗ್ಗೆ ನಾವು ಯಾವ ವಿಷಯಗಳನ್ನು ತಿಳಿದುಕೊಳ್ಳಬೇಕು?

3 ಈಗಾಗಲೇ ನಾವು ದೇವರ ಹೆಸರು ಯೆಹೋವ ಎಂದು ಕಲಿತಿದ್ದೇವೆ. ಆತನು ಮನುಷ್ಯರನ್ನು, ಭೂಮಿಯನ್ನು ಯಾಕೆ ಸೃಷ್ಟಿಮಾಡಿದನು ಎಂದು ಸಹ ತಿಳಿದುಕೊಂಡಿದ್ದೇವೆ. “ನಿನ್ನ ರಾಜ್ಯವು ಬರಲಿ” ಎಂದು ಯೇಸು ಏಕೆ ಪ್ರಾರ್ಥಿಸಿದನು? ದೇವರ ರಾಜ್ಯ ಎಂದರೇನು? ಅದು ಏನು ಮಾಡಲಿದೆ? ದೇವರ ಪವಿತ್ರವಾದ ಹೆಸರಿನ ಮೇಲೆ ಬಂದಿರುವ ಕಳಂಕವನ್ನು ಅದು ಹೇಗೆ ತೆಗೆದುಹಾಕಲಿದೆ? ಎಂದು ಸಹ ಈಗ ಕಲಿಯಲಿದ್ದೇವೆ.

ದೇವರ ರಾಜ್ಯ ಎಂದರೇನು?

4. (ಎ) ದೇವರ ರಾಜ್ಯ ಎಂದರೇನು? (ಬಿ) ಅದರ ರಾಜ ಯಾರು?

4 ಸ್ವರ್ಗದಲ್ಲಿ ಯೆಹೋವ ದೇವರು ಒಂದು ಸರ್ಕಾರವನ್ನು ಸ್ಥಾಪಿಸಿ ಯೇಸು ಕ್ರಿಸ್ತನನ್ನು ಅದರ ರಾಜನನ್ನಾಗಿ ಮಾಡಿದನು. ಈ ಸರ್ಕಾರವನ್ನು ಬೈಬಲಿನಲ್ಲಿ ದೇವರ ರಾಜ್ಯ ಎಂದು ಕರೆಯಲಾಗಿದೆ. “ರಾಜರಾಗಿ ಆಳುವವರ ರಾಜನೂ ಕರ್ತರಾಗಿ ಆಳುವವರ ಕರ್ತನೂ” ಯೇಸು ಆಗಿದ್ದಾನೆ. (1 ತಿಮೊಥೆಯ 6:15)  ಮಾನವ ಅಧಿಕಾರಿಗಳಿಗೆ ಮಾಡಲು ಆಗುವುದಕ್ಕಿಂತ ಹೆಚ್ಚು ಒಳ್ಳೆಯ ಕೆಲಸಗಳನ್ನು ಮಾಡುವ ಸಾಮರ್ಥ್ಯ ಯೇಸುವಿಗಿದೆ. ಇಲ್ಲಿಯವರೆಗೆ ಆಳಿದ ಅಧಿಕಾರಿಗಳೆಲ್ಲರನ್ನು ಒಟ್ಟುಗೂಡಿಸಿದರೂ ಯೇಸುವನ್ನು ಮೀರಿಸಲು ಅವರಿಂದ ಆಗುವುದಿಲ್ಲ. ಅಷ್ಟು ಶಕ್ತಿ ಯೇಸು ಒಬ್ಬನಲ್ಲೇ ಇದೆ.

5. (ಎ) ದೇವರ ಸರ್ಕಾರ ಎಲ್ಲಿಂದ ಆಳ್ವಿಕೆ ನಡೆಸಲಿದೆ? (ಬಿ) ಯಾವುದರ ಮೇಲೆ ಆಳ್ವಿಕೆ ನಡೆಸಲಿದೆ?

5 ಯೇಸು ಪುನರುತ್ಥಾನವಾಗಿ ನಲ್ವತ್ತು ದಿವಸಗಳಾದ ನಂತರ ಸ್ವರ್ಗಕ್ಕೆ ಹೋದನು. ಸಮಯಾನಂತರ ಯೆಹೋವ ದೇವರು ಯೇಸುವನ್ನು ತನ್ನ ರಾಜ್ಯದ ರಾಜನನ್ನಾಗಿ ನೇಮಿಸಿದನು. (ಅಪೊಸ್ತಲರ ಕಾರ್ಯಗಳು 2:33) ಈ ರಾಜ್ಯವು ಸ್ವರ್ಗದಿಂದ ಭೂಮಿಯನ್ನು ಆಳಲಿದೆ. (ಪ್ರಕಟನೆ 11:15) ಹಾಗಾಗಿಯೇ ದೇವರ ರಾಜ್ಯವನ್ನು ಬೈಬಲಿನಲ್ಲಿ “ಸ್ವರ್ಗೀಯ ರಾಜ್ಯ” ಎಂದು ಕರೆಯಲಾಗಿದೆ.—2 ತಿಮೊಥೆಯ 4:18.

6, 7. ಎಲ್ಲ ಮಾನವ ಅಧಿಕಾರಿಗಳಿಗಿಂತ ಯೇಸು ಯಾಕೆ ಶ್ರೇಷ್ಠನು?

6 ಎಲ್ಲ ಮಾನವ ಅಧಿಕಾರಿಗಳಿಗಿಂತ ಯೇಸುವೇ ಶ್ರೇಷ್ಠನು. ಯಾಕೆಂದರೆ ಆತನೊಬ್ಬನೇ ‘ಅಮರತ್ವವನ್ನು ಹೊಂದಿದ್ದಾನೆ’ ಎಂದು ಬೈಬಲ್‌ ತಿಳಿಸುತ್ತದೆ. (1 ತಿಮೊಥೆಯ 6:16) ಮಾನವ ಅಧಿಕಾರಿಗಳು ಒಂದಲ್ಲ ಒಂದು ದಿನ ಸಾಯುತ್ತಾರೆ. ಆದರೆ ರಾಜನಾಗಿರುವ ಯೇಸುವಿಗೆ ಸಾವೇ ಇಲ್ಲ. ಮುಂದೆ ಆತನು ನಮಗಾಗಿ ಮಾಡಲಿರುವ ಎಲ್ಲ ಕೆಲಸಗಳು ಸದಾಕಾಲಕ್ಕೂ ಉಳಿಯುತ್ತವೆ.

7 ಯೇಸು ನ್ಯಾಯವಂತ ಮತ್ತು ಕರುಣಾಭರಿತ ರಾಜ ಆಗಿರುತ್ತಾನೆಂದು ಬೈಬಲಿನಲ್ಲಿ ಮೊದಲೇ ತಿಳಿಸಲಾಗಿತ್ತು. ಆ ಮಾತುಗಳು ಹೀಗಿವೆ: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು.” (ಯೆಶಾಯ 11:2-4) ಇಂಥವನು ನಿಮ್ಮ ರಾಜನಾಗಬೇಕೆಂದು ನೀವು ಬಯಸುವುದಿಲ್ಲವಾ?

8. ಯೇಸು ಒಬ್ಬನೇ ಆಳುವುದಿಲ್ಲ ಎಂದು ನಮಗೆ ಹೇಗೆ ಗೊತ್ತು?

8 ಯೇಸುವಿನೊಂದಿಗೆ ಸ್ವರ್ಗದಿಂದ ಆಳ್ವಿಕೆ ನಡೆಸಲು ಕೆಲವು ಮಾನವರನ್ನು ಯೆಹೋವ ದೇವರು ಆರಿಸಿಕೊಂಡಿದ್ದಾನೆ. ಹಾಗಾಗಿಯೇ ಪೌಲನು ತಿಮೊಥೆಯನಿಗೆ “ನಾವು ಸಹಿಸಿಕೊಳ್ಳುತ್ತಾ ಇರುವುದಾದರೆ [ಯೇಸುವಿನೊಂದಿಗೆ] ನಾವು ಸಹ  ಅರಸರಾಗಿ ಆಳುವೆವು” ಎಂದು ಹೇಳಿದನು. (2 ತಿಮೊಥೆಯ 2:12) ಆದರೆ ಈಗ ಪ್ರಶ್ನೆ ಏನೆಂದರೆ, ಯೇಸುವಿನೊಂದಿಗೆ ಎಷ್ಟು ಮಂದಿ ರಾಜರಾಗಿ ಆಳುತ್ತಾರೆ?

9. (ಎ) ಯೇಸುವಿನೊಂದಿಗೆ ಎಷ್ಟು ಮಂದಿ ಆಳ್ವಿಕೆ ಮಾಡಲಿದ್ದಾರೆ? (ಬಿ) ಯೆಹೋವನು ಇವರನ್ನು ಯಾವಾಗಿನಿಂದ ಆಯ್ಕೆ ಮಾಡಲು ಆರಂಭಿಸಿದನು?

9 ಅಧ್ಯಾಯ 7ರಲ್ಲಿ ಕಲಿತಂತೆ, ಯೇಸು ಸ್ವರ್ಗದಲ್ಲಿ ರಾಜನಾಗಿರುವುದನ್ನು ಮತ್ತು ಆತನೊಂದಿಗೆ 1,44,000 ಮಂದಿ ರಾಜರು ಇರುವುದನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡನು. ಆದರೆ ಈ 1,44,000 ಮಂದಿ ಯಾರು? ಇವರ ಬಗ್ಗೆ ಯೋಹಾನನು ಹೀಗೆ ತಿಳಿಸಿದ್ದಾನೆ: ಇವರ “ಹಣೆಗಳ ಮೇಲೆ [ಯೇಸುವಿನ] ಹೆಸರೂ ಅವನ ತಂದೆಯ ಹೆಸರೂ ಬರೆಯಲ್ಪಟ್ಟಿತ್ತು. ಕುರಿಮರಿಯು [ಅಂದರೆ, ಯೇಸು] ಎಲ್ಲಿ ಹೋದರೂ ಇವರು ಅವನನ್ನು ಹಿಂಬಾಲಿಸುತ್ತಾ ಹೋಗುತ್ತಾರೆ. ಇವರು ಮಾನವಕುಲದ ಮಧ್ಯದಿಂದ . . .  ಕೊಂಡುಕೊಳ್ಳಲ್ಪಟ್ಟವರು.” (ಪ್ರಕಟನೆ 14:1, 4 ಓದಿ.) ಇವರು ನಂಬಿಗಸ್ತ ಕ್ರೈಸ್ತರಾಗಿದ್ದಾರೆ. ಯೇಸುವಿನೊಂದಿಗೆ ‘ರಾಜರಾಗಿ ಸ್ವರ್ಗದಿಂದ ಭೂಮಿಯ ಮೇಲೆ ಆಳ್ವಿಕೆ ಮಾಡಲಿಕ್ಕಾಗಿ’ ದೇವರು ಅವರನ್ನು ಆರಿಸಿಕೊಂಡಿದ್ದಾನೆ. ಭೂಮಿಯಲ್ಲಿರುವ ಅವರು ತೀರಿಹೋದಾಗ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ. (ಪ್ರಕಟನೆ 5:10) ಯೆಹೋವನು ಈ 1,44,000 ಮಂದಿ ನಂಬಿಗಸ್ತ ಕ್ರೈಸ್ತರನ್ನು ಒಂದನೇ ಶತಮಾನದಿಂದ ಆಯ್ಕೆ ಮಾಡಲು ಆರಂಭಿಸಿದನು.

10. ಯೇಸುವನ್ನು ಮತ್ತು 1,44,000 ಮಂದಿಯನ್ನು ರಾಜರನ್ನಾಗಿ ಯೆಹೋವನು ಆರಿಸಿಕೊಂಡಿರುವುದು ನಮ್ಮ ಮೇಲಿನ ಪ್ರೀತಿಯಿಂದಲೇ ಎಂದು ಹೇಗೆ ಹೇಳಬಹುದು?

10 ಯೇಸುವಿನೊಂದಿಗೆ ಆಳ್ವಿಕೆ ಮಾಡುವಂತೆ ಯೆಹೋವನು ಮಾನವರನ್ನು ಆಯ್ಕೆ ಮಾಡಿದ್ದರಿಂದ ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ, ಎಷ್ಟು ಅಕ್ಕರೆಯಿದೆ ಎಂದು ಗೊತ್ತಾಗುತ್ತದೆ. ಯೇಸು ನಮ್ಮನ್ನು ಅರ್ಥ ಮಾಡಿಕೊಳ್ಳುವುದರಿಂದ ಅವನು ಒಬ್ಬ ಒಳ್ಳೇ ಅರಸನಾಗಿ ನಮ್ಮನ್ನು ಆಳುತ್ತಾನೆ ಎಂದು ನಾವು ಭರವಸೆ ಇಡಬಹುದು. ಆತನಿಗೆ ಮನುಷ್ಯನ ಜೀವನ ಹೇಗೆ ಅಂತ ಗೊತ್ತು, ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳ ಬಗ್ಗೆಯೂ ಗೊತ್ತು. ಯೇಸು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾನೆ. ಆತನು ‘ನಮ್ಮ ಬಲಹೀನತೆಗಳನ್ನು ಅರಿತು ಅನುಕಂಪ ತೋರಿಸುತ್ತಾನೆ ಮತ್ತು ನಮ್ಮಂತೆಯೇ ಎಲ್ಲ ವಿಷಯಗಳಲ್ಲಿ ಪರೀಕ್ಷೆಗೆ ಒಳಗಾಗಿದ್ದಾನೆ’ ಎಂದು ಪೌಲನು ಹೇಳಿದನು. (ಇಬ್ರಿಯ 4:15; 5:8) ಯೇಸುವಿನಂತೆ 1,44,000 ಮಂದಿಗೂ ಮಾನವರ ಜೀವನ ಹೇಗಿರುತ್ತದೆಂದು ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲದೇ, ಅವರು ನಮ್ಮಂತೆಯೇ ಅಪರಿಪೂರ್ಣತೆಯ ವಿರುದ್ಧ  ಹೋರಾಡಿದ್ದಾರೆ, ಅನಾರೋಗ್ಯದಿಂದ ಬಳಲಿದ್ದಾರೆ. ಹಾಗಾಗಿ ಯೇಸು ಮತ್ತು 1,44,000 ಮಂದಿ ನಮ್ಮ ಪರಿಸ್ಥಿತಿಯನ್ನು ಮಾತ್ರವಲ್ಲ, ನಾವು ಅನುಭವಿಸುವ ಸಮಸ್ಯೆಗಳನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ.

ದೇವರ ರಾಜ್ಯ ಏನು ಮಾಡಲಿದೆ?

11. ಸ್ವರ್ಗದಲ್ಲಿರುವ ಎಲ್ಲರೂ ದೇವರ ಚಿತ್ತದಂತೆ ಯಾವಾಗಲೂ ನಡೆದುಕೊಳ್ಳುತ್ತಿದ್ದರಾ?

11 ‘ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ’ ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿಕೊಟ್ಟನು. ಇಲ್ಲಿ ಯೇಸು ‘ದೇವರ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ’ ಅಂತ ಯಾಕೆ ಹೇಳಿದನು? ಯಾಕೆಂದರೆ ಸ್ವರ್ಗದಲ್ಲಿ ದೇವರ ಚಿತ್ತ ಇನ್ನೂ ನೆರವೇರಿರಲಿಲ್ಲ. ಯಾಕೆ ನೆರವೇರಿರಲಿಲ್ಲ? ಈಗಾಗಲೇ ಅಧ್ಯಾಯ 3ರಲ್ಲಿ ನಾವು ನೋಡಿದಂತೆ ಪಿಶಾಚನಾದ ಸೈತಾನನು ದೇವರಿಗೆ ವಿರುದ್ಧವಾಗಿ ದಂಗೆಯೆದ್ದನು. ಆದರೂ ಯೆಹೋವನು ಸೈತಾನನನ್ನು ಮತ್ತು ಅವನ ಹಿಂಬಾಲಕರಾಗಿರುವ ದೆವ್ವಗಳನ್ನು ಸ್ವಲ್ಪ ಸಮಯದ ವರೆಗೆ ಸ್ವರ್ಗದಲ್ಲಿ ಇರಲಿಕ್ಕಾಗಿ ಬಿಟ್ಟನು. ಆ ಸಮಯದಲ್ಲಿ ಸ್ವರ್ಗದಲ್ಲಿ ಎಲ್ಲರೂ ದೇವರ ಇಷ್ಟದಂತೆ ನಡೆದುಕೊಳ್ಳುತ್ತಿರಲಿಲ್ಲ. ಸೈತಾನನ ಬಗ್ಗೆ ಮತ್ತು ದೆವ್ವಗಳ ಬಗ್ಗೆ ಅಧ್ಯಾಯ 10ರಲ್ಲಿ ನೋಡೋಣ.

12. ಪ್ರಕಟನೆ 12:10ರಲ್ಲಿ ಯಾವ ಎರಡು ಪ್ರಾಮುಖ್ಯ ಘಟನೆಗಳ ಕುರಿತು ತಿಳಿಸಲಾಗಿದೆ?

12 ಯೇಸು ದೇವರ ರಾಜ್ಯದ ರಾಜನಾದ ಕೂಡಲೇ ಸೈತಾನನ ವಿರುದ್ಧ ಯುದ್ಧ ಮಾಡುವನು ಎಂದು ಬೈಬಲ್‌ ವಿವರಿಸುತ್ತದೆ. (ಪ್ರಕಟನೆ 12:7-10 ಓದಿ.) ಪ್ರಕಟನೆ 12:10ರಲ್ಲಿ ಎರಡು ತುಂಬ ಪ್ರಾಮುಖ್ಯ ಘಟನೆಗಳ ಕುರಿತು ತಿಳಿಸಲಾಗಿದೆ. ದೇವರ ರಾಜ್ಯದ ರಾಜನಾಗಿ ಯೇಸು ಆಳ್ವಿಕೆ ಆರಂಭಿಸಿದನು ಎನ್ನುವುದು ಮೊದಲನೇ ಘಟನೆಯಾದರೆ, ಸೈತಾನನನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಲಾಯಿತು ಎನ್ನುವುದು ಎರಡನೇ ಘಟನೆಯಾಗಿದೆ. ಈ ಎರಡೂ ಘಟನೆಗಳು ಈಗಾಗಲೇ ನೆರವೇರಿವೆ ಎಂದು ನಾವು ಮುಂದೆ ಕಲಿಯಲಿದ್ದೇವೆ.

13. ಸೈತಾನನನ್ನು ಭೂಮಿಗೆ ದೊಬ್ಬಿದಾಗ ಸ್ವರ್ಗದಲ್ಲಿ ಏನಾಯಿತು?

13 ಸೈತಾನನನ್ನು ಮತ್ತು ದೆವ್ವಗಳನ್ನು ಸ್ವರ್ಗದಿಂದ ಕೆಳಗೆ ದೊಬ್ಬಿದಾಗ ನಂಬಿಗಸ್ತ ದೇವದೂತರಿಗಾದ ಸಂತೋಷದ ಕುರಿತು ಬೈಬಲಿನಲ್ಲಿ ತಿಳಿಸಲಾಗಿದೆ. ಅಲ್ಲಿ ಹೀಗೆ ಹೇಳಲಾಗಿದೆ: “ಸ್ವರ್ಗವೇ, ಅದರಲ್ಲಿ ವಾಸಮಾಡುವವರೇ ಹರ್ಷಿಸಿರಿ!” (ಪ್ರಕಟನೆ 12:12) ಈಗ ಸ್ವರ್ಗದಲ್ಲಿ ಶಾಂತಿ ಮತ್ತು ಐಕ್ಯ ತುಂಬಿ ತುಳುಕುತ್ತಿದೆ. ಯಾಕೆಂದರೆ ಅಲ್ಲಿ ಪ್ರತಿಯೊಬ್ಬರೂ ದೇವರ ಇಷ್ಟದಂತೆ ನಡೆಯುತ್ತಿದ್ದಾರೆ.

ಸೈತಾನನನ್ನು ಮತ್ತು ದೆವ್ವಗಳನ್ನು ಭೂಮಿಗೆ ದೊಬ್ಬಿದಾಗಿನಿಂದ ಭೂಮಿಯಲ್ಲಿ ಕಷ್ಟ-ಸಂಕಟ ತುಂಬಿತುಳುಕುತ್ತಿದೆ. ಆದರೆ ಇದು ಬೇಗನೆ ಅಂತ್ಯವಾಗಲಿದೆ

14. ಸೈತಾನನನ್ನು ಸ್ವರ್ಗದಿಂದ ದೊಬ್ಬಿದ್ದರಿಂದ ಭೂಮಿಯ ಮೇಲೆ ಏನಾಯಿತು?

 14 ಆದರೆ ಭೂಮಿಯ ಮೇಲೆ ಬಂದು ಸೈತಾನ ಏನು ಮಾಡಿದನು? ‘ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದಿರುವ ಅವನು ತುಂಬಾ ಕೋಪಗೊಂಡು’ ಜನ ಜೀವನವನ್ನು ಅಸ್ತವ್ಯಸ್ತ ಮಾಡಿದನು. (ಪ್ರಕಟನೆ 12:12) ‘ಸ್ವರ್ಗದಲ್ಲಂತೂ ತನಗೆ ಜಾಗವಿಲ್ಲ, ಭೂಮಿಯ ಮೇಲೂ ತಾನು ಹೆಚ್ಚು ಸಮಯ ಉಳಿಯುವುದಿಲ್ಲ’ ಎಂದು ಅವನಿಗೆ ಚೆನ್ನಾಗಿ ಗೊತ್ತಿರುವುದರಿಂದ ಅವನ ಕೋಪ ನೆತ್ತಿಗೇರಿದೆ. ಹಾಗಾಗಿ ಇರುವಷ್ಟು ಸಮಯದಲ್ಲೇ ತನ್ನಿಂದಾದಷ್ಟು ಹೆಚ್ಚು ಕೆಟ್ಟದ್ದನ್ನು ಮಾಡುತ್ತಿದ್ದಾನೆ. ಹೀಗೆ ಭೂಮಿಯನ್ನು ಸಮಸ್ಯೆಗಳಿಂದ, ನೋವು-ನರಳಾಟದಿಂದ ತುಂಬಿಸಲು ಪ್ರಯತ್ನಿಸುತ್ತಿದ್ದಾನೆ.

15. ಭೂಮಿಯ ಬಗ್ಗೆ ದೇವರು ಯಾವ ಆಸೆ ಇಟ್ಟುಕೊಂಡಿದ್ದಾನೆ?

15 ಆದರೆ ದೇವರು ಭೂಮಿಯ ಬಗ್ಗೆ ಏನು ಆಸೆ ಇಟ್ಟುಕೊಂಡಿದ್ದಾನೋ ಅದೇನು ಬದಲಾಗಿಲ್ಲ. ಪರಿಪೂರ್ಣ ಮನುಷ್ಯರು ಸುಂದರ ತೋಟವಾಗಲಿರುವ ಈ ಭೂಮಿಯ ಮೇಲೆ ಸಾವೇ ಇಲ್ಲದೆ ಜೀವಿಸಬೇಕು ಎಂದು ಈಗಲೂ ದೇವರು ಬಯಸುತ್ತಾನೆ. (ಕೀರ್ತನೆ 37:29) ಈ ಆಸೆಯನ್ನು ದೇವರ ರಾಜ್ಯ ಹೇಗೆ ನಿಜ ಮಾಡಲಿದೆ?

16, 17. ದೇವರ ರಾಜ್ಯದ ಬಗ್ಗೆ ದಾನಿಯೇಲ 2:44ರಿಂದ ನಾವೇನು ಕಲಿಯುತ್ತೇವೆ?

16 ದಾನಿಯೇಲ 2:44ರಲ್ಲಿರುವ ಪ್ರವಾದನೆ ಹೀಗೆ ಹೇಳುತ್ತದೆ: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಈ ಪ್ರವಾದನೆ ದೇವರ ರಾಜ್ಯದ ಬಗ್ಗೆ ನಮಗೆ ಏನನ್ನು ಕಲಿಸುತ್ತದೆ?

17 “ಆ ರಾಜರ ಕಾಲದಲ್ಲಿ” ದೇವರ ರಾಜ್ಯ ಆಳಲು ಆರಂಭಿಸುತ್ತದೆ ಎನ್ನುವ ಮಾತಿನಿಂದ ಈ ಪ್ರವಾದನೆ ಆರಂಭವಾಗುತ್ತದೆ. ಇದರ ಅರ್ಥ ದೇವರ ರಾಜ್ಯ ತನ್ನ ಆಳ್ವಿಕೆಯನ್ನು ಆರಂಭಿಸಿದಾಗ ಭೂಮಿಯ ಮೇಲೆ ಬೇರೆ ಸರ್ಕಾರಗಳು ಸಹ ಇರುತ್ತವೆ ಎಂದಾಗಿದೆ. ನಂತರ, ದೇವರ ರಾಜ್ಯವು ಎಂದಿಗೂ ಬಿದ್ದುಹೋಗುವುದಿಲ್ಲ, ಸದಾಕಾಲಕ್ಕೂ ಇರುತ್ತದೆ, ಅದರ ಸ್ಥಾನವನ್ನು ಯಾವ ಮಾನವ ಸರ್ಕಾರವು ಎಂದಿಗೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದೆ. ಪ್ರವಾದನೆಯ ಕೊನೆಯಲ್ಲಿ ಹೀಗೆ ಹೇಳಲಾಗಿದೆ: ದೇವರ ರಾಜ್ಯಕ್ಕೂ, ಮಾನವ ಸರ್ಕಾರಗಳಿಗೂ ಒಂದು ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ದೇವರ ರಾಜ್ಯಕ್ಕೆ ಜಯ ಸಿಗುತ್ತದೆ ಮತ್ತು  ಅದೊಂದೇ ಇಡೀ ಭೂಮಿಯನ್ನು ಆಳುತ್ತದೆ. ಹೀಗೆ ಮಾನವರು ಅತ್ಯುತ್ತಮ ಸರ್ಕಾರದ ಪ್ರಜೆಗಳಾಗುತ್ತಾರೆ.

18. ದೇವರ ರಾಜ್ಯ ಮತ್ತು ಮಾನವ ಸರ್ಕಾರಗಳ ನಡುವೆ ನಡೆಯುವ ಯುದ್ಧದ ಹೆಸರೇನು?

18 ದೇವರ ರಾಜ್ಯ ಭೂಮಿಯ ಮೇಲಿನ ಆಳ್ವಿಕೆಯನ್ನು ಹೇಗೆ ತನ್ನ ಕೈಗೆ ತೆಗೆದುಕೊಳ್ಳುತ್ತದೆ? ಮೊದಲಿಗೆ, ದೆವ್ವಗಳು “ಇಡೀ ನಿವಾಸಿತ ಭೂಮಿಯ ರಾಜರನ್ನು ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕಾಗಿ ಒಟ್ಟುಗೂಡಿಸಲಿಕ್ಕಾಗಿ ಅವರ ಬಳಿಗೆ ಹೋಗುತ್ತವೆ.” ಹೀಗೆ ಭೂಮಿಯ ರಾಜರನ್ನು ಅಂದರೆ ಮಾನವ ಸರ್ಕಾರಗಳನ್ನು ದಾರಿ ತಪ್ಪಿಸುತ್ತವೆ. ನಂತರ ಆ ಸರ್ಕಾರಗಳು ದೇವರ ರಾಜ್ಯದ ವಿರುದ್ಧ ಯುದ್ಧ ಮಾಡಲು ಮುಂದಾಗುತ್ತವೆ. ಆ ಯುದ್ಧದ ಹೆಸರೇ ಅರ್ಮಗೆದೋನ್‌. ಈ ಯುದ್ಧದಲ್ಲಿ ಜಯ ಸಿಗುವುದು ದೇವರ ರಾಜ್ಯಕ್ಕೇ.—ಪ್ರಕಟನೆ 16:14, 16; ಟಿಪ್ಪಣಿ 10ನ್ನು ನೋಡಿ.

19, 20. ದೇವರ ರಾಜ್ಯ ನಮಗೆ ಏಕೆ ಬೇಕು?

19 ದೇವರ ರಾಜ್ಯ ನಮಗೆ ಏಕೆ ಬೇಕು? ಮುಖ್ಯವಾಗಿ ಮೂರು ಕಾರಣಗಳಿಗಾಗಿ. ಮೊದಲನೇ ಕಾರಣ, ನಾವು ಪಾಪಿಗಳಾಗಿರುವುದರಿಂದ ನಮಗೆ ಕಾಯಿಲೆ ಬರುತ್ತದೆ ಮತ್ತು ನಾವು ಸಾಯುತ್ತೇವೆ. ಆದರೆ ದೇವರ ರಾಜ್ಯದಲ್ಲಿ ನಮಗೆ ಕಾಯಿಲೆ ಮತ್ತು ಸಾವು ಇರುವುದಿಲ್ಲ ಎಂದು ಬೈಬಲ್‌ ತಿಳಿಸುತ್ತದೆ. ಇದೇ ವಿಷಯವನ್ನು ಯೋಹಾನ 3:16ರಲ್ಲಿ ಹೀಗೆ ಹೇಳಲಾಗಿದೆ: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”

20 ಎರಡನೇ ಕಾರಣ, ನಮ್ಮ ಸುತ್ತ ಕೆಟ್ಟ ಜನರು ತುಂಬಿಕೊಂಡಿರುವುದೇ. ಎಲ್ಲಿ ನೋಡಿದರೂ ಸುಳ್ಳು ಹೇಳುವ, ಮೋಸ ಮಾಡುವ, ನಡತೆಗೆಟ್ಟ ಜನರೇ ಇದ್ದಾರೆ. ಅವರನ್ನು ತೆಗೆದುಹಾಕಲು ನಮ್ಮಿಂದ ಆಗುವುದಿಲ್ಲ. ಆದರೆ ದೇವರಿಗೆ ಆಗುತ್ತದೆ. ಕೆಟ್ಟದ್ದನ್ನು ಮಾಡುತ್ತಲೇ ಇದ್ದು ಬದಲಾಗಲು ಇಷ್ಟಪಡದ ಜನರು ಅರ್ಮಗೆದೋನ್‌ ಯುದ್ಧದಲ್ಲಿ ನಾಶವಾಗಿ ಹೋಗುತ್ತಾರೆ. (ಕೀರ್ತನೆ 37:10 ಓದಿ.) ಮೂರನೇ ಕಾರಣ, ಮಾನವ ಸರ್ಕಾರಗಳಲ್ಲಿರುವ ಕುಂದುಕೊರತೆ, ಭ್ರಷ್ಟಾಚಾರ ಮತ್ತು ಅವುಗಳು ಮಾಡುವ ದಬ್ಬಾಳಿಕೆಯೇ ಆಗಿದೆ. ಜನರು ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಲು ಮಾನವ ಸರ್ಕಾರಗಳು ಸ್ವಲ್ಪವೂ ಸಹಾಯ ಮಾಡುವುದಿಲ್ಲ. ಬದಲಿಗೆ ಬೈಬಲಿನಲ್ಲಿ ಹೇಳಿರುವಂತೆ  ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಹಾನಿಯನ್ನು ಮಾಡುವುದರಲ್ಲೇ’ ಮುಂದಿವೆ.—ಪ್ರಸಂಗಿ 8:9.

21. ಭೂಮಿಯ ಮೇಲೆ ಎಲ್ಲವೂ ದೇವರ ಇಷ್ಟದ ಪ್ರಕಾರ ನಡೆಯುವಂತೆ ದೇವರ ರಾಜ್ಯ ಹೇಗೆ ನೋಡಿಕೊಳ್ಳುತ್ತದೆ?

21 ಅರ್ಮಗೆದೋನ್‌ ಯುದ್ಧದ ನಂತರ ಭೂಮಿಯ ಮೇಲೆ ಎಲ್ಲವೂ ದೇವರ ಇಷ್ಟದ ಪ್ರಕಾರ ನಡೆಯುವಂತೆ ದೇವರ ರಾಜ್ಯ ನೋಡಿಕೊಳ್ಳುತ್ತದೆ. ಸೈತಾನನನ್ನು, ದೆವ್ವಗಳನ್ನು ಬಂಧನದಲ್ಲಿ ಇಡಲಾಗುತ್ತದೆ. (ಪ್ರಕಟನೆ 20:1-3) ಭೂಮಿಯ ಮೇಲೆ ಆರೋಗ್ಯ ಸಮಸ್ಯೆಯಾಗಲಿ, ಸಾವಾಗಲಿ ಇರುವುದಿಲ್ಲ. ವಿಮೋಚನಾ ಮೌಲ್ಯದಿಂದಾಗಿ ಎಲ್ಲಾ ನಂಬಿಗಸ್ತ ಮನುಷ್ಯರು ಸುಂದರ ತೋಟವಾಗಲಿರುವ ಭೂಮಿಯಲ್ಲಿ ಸಾವೇ ಇಲ್ಲದೆ ಜೀವಿಸಲಿದ್ದಾರೆ. (ಪ್ರಕಟನೆ 22:1-3) ದೇವರ ರಾಜ್ಯವು ಯೆಹೋವನ ಹೆಸರಿಗೆ ಅಂಟಿಕೊಂಡಿರುವ ಕಳಂಕವನ್ನು ತೆಗೆದುಹಾಕಲಿದೆ. ಇದರರ್ಥ ದೇವರ ರಾಜ್ಯವು ಭೂಮಿಯನ್ನು ಆಳುವಾಗ ಎಲ್ಲ ಜನರು ದೇವರ ಹೆಸರಿಗೆ ಮಹಿಮೆ, ಗೌರವವನ್ನು ಸಲ್ಲಿಸುತ್ತಾರೆ.—ಟಿಪ್ಪಣಿ 20ನ್ನು ನೋಡಿ.

ಯೇಸು ಯಾವಾಗ ದೇವರ ರಾಜ್ಯದ ರಾಜನಾದನು?

22. ಯೇಸು ಭೂಮಿಯ ಮೇಲೆ ಇದ್ದಾಗ ಅಥವಾ ಸತ್ತು ಪುನರುತ್ಥಾನವಾದ ತಕ್ಷಣ ರಾಜನಾಗಲಿಲ್ಲ ಎಂದು ನಮಗೆ ಹೇಗೆ ಗೊತ್ತು?

22 ‘ದೇವರ ರಾಜ್ಯ ಬರಲಿ’ ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿಕೊಟ್ಟನು. ಇದರರ್ಥ ದೇವರ ರಾಜ್ಯ ಭವಿಷ್ಯತ್ತಿನಲ್ಲಿ ಬರಲಿತ್ತು. ಮೊದಲಿಗೆ ಯೆಹೋವನು ತನ್ನ ಸರ್ಕಾರವನ್ನು ಸ್ಥಾಪಿಸಿ, ಯೇಸುವನ್ನು ಅದರ ರಾಜನನ್ನಾಗಿ ಮಾಡಲಿದ್ದನು. ಹಾಗಾದರೆ ಯೇಸು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದ ಕೂಡಲೇ ದೇವರ ರಾಜ್ಯದ ರಾಜನಾದನಾ? ಇಲ್ಲ. ಯೇಸು ಅದಕ್ಕಾಗಿ ಸ್ವಲ್ಪ ಸಮಯ ಕಾಯಬೇಕಿತ್ತು. ಇದನ್ನು ಪೇತ್ರನು ಮತ್ತು ಪೌಲನು  ಯೇಸುವಿನ ಪುನರುತ್ಥಾನವಾಗಿ ಸ್ವಲ್ಪ ಸಮಯದ ನಂತರ ಸ್ಪಷ್ಟವಾಗಿ ವಿವರಿಸಿದರು. ಅವರು ಕೀರ್ತನೆ 110:1ರಲ್ಲಿರುವ ಪ್ರವಾದನೆಯನ್ನು ಯೇಸುವಿಗೆ ಹೋಲಿಸಿದರು. ಆ ಪ್ರವಾದನೆಯಲ್ಲಿ ಯೆಹೋವ ದೇವರು ಯೇಸುವಿಗೆ “ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು. (ಅಪೊಸ್ತಲರ ಕಾರ್ಯಗಳು 2:32-35; ಇಬ್ರಿಯ 10:12, 13) ಹಾಗಾದರೆ ಯೇಸು ರಾಜನಾಗಲಿಕ್ಕಾಗಿ ಎಷ್ಟು ಸಮಯ ಕಾಯಬೇಕಿತ್ತು?

ಭೂಮಿ ಮೇಲೆ ಎಲ್ಲವೂ ದೇವರ ಇಷ್ಟದ ಪ್ರಕಾರ ನಡೆಯುವಂತೆ ದೇವರ ರಾಜ್ಯ ನೋಡಿಕೊಳ್ಳುತ್ತದೆ

23. (ಎ) ದೇವರ ರಾಜ್ಯದ ರಾಜನಾಗಿ ತನ್ನ ಆಳ್ವಿಕೆಯನ್ನು ಯೇಸು ಯಾವಾಗ ಆರಂಭಿಸಿದನು? (ಬಿ) ಮುಂದಿನ ಅಧ್ಯಾಯದಲ್ಲಿ ನಾವು ಯಾವುದರ ಬಗ್ಗೆ ಕಲಿಯಲಿದ್ದೇವೆ?

23 ಕ್ರಿ.ಶ. 1914ಕ್ಕಿಂತ ತುಂಬ ವರ್ಷಗಳ ಮೊದಲೇ ಕೆಲವು ಮಂದಿ ಕ್ರೈಸ್ತರು ಸೇರಿ ಶ್ರದ್ಧೆಯಿಂದ ಬೈಬಲನ್ನು ಅಧ್ಯಯನ ಮಾಡುತ್ತಿದ್ದರು. ಆ ಅಧ್ಯಯನದ ಮೂಲಕ 1914ನೇ ವರ್ಷವು ಬೈಬಲ್‌ ಪ್ರವಾದನೆಗಳಲ್ಲಿ ಪ್ರಾಮುಖ್ಯವಾದ ವರ್ಷವೆಂದು ಅವರು ಅರ್ಥಮಾಡಿಕೊಂಡರು. 1914ರಿಂದ ಪ್ರಪಂಚದಲ್ಲಿ ನಡೆದ ಘಟನೆಗಳು ಅವರು ಅರ್ಥಮಾಡಿಕೊಂಡ ವಿಷಯವು ಸರಿ ಎಂದು ರುಜುಪಡಿಸಿದವು. ಆ ವರ್ಷ ಯಾಕೆ ಪ್ರಾಮುಖ್ಯವಾಗಿತ್ತೆಂದರೆ, ಯೇಸು ರಾಜನಾಗಿ ತನ್ನ ಆಳ್ವಿಕೆಯನ್ನು ಆರಂಭಿಸಿದ್ದು ಅದೇ ವರ್ಷದಲ್ಲಿ. (ಕೀರ್ತನೆ 110:2) ಇದಾದ ಕೂಡಲೇ ಸೈತಾನನನ್ನು ಭೂಮಿಗೆ ದೊಬ್ಬಲಾಯಿತು. ಈಗ ಅವನಿಗೆ ಉಳಿದಿರುವುದು ‘ಸ್ವಲ್ಪವೇ ಸಮಯಾವಧಿ.’ (ಪ್ರಕಟನೆ 12:12) ನಾವು ಅದೇ ಸಮಯಾವಧಿಯಲ್ಲಿ ಜೀವಿಸುತ್ತಿದ್ದೇವೆ ಎನ್ನುವುದನ್ನು ರುಜುಪಡಿಸುವಂಥ ಇನ್ನೂ ಹೆಚ್ಚು ವಿಷಯಗಳನ್ನು ಮುಂದಿನ ಅಧ್ಯಾಯದಲ್ಲಿ ನೋಡಲಿದ್ದೇವೆ. ಜೊತೆಗೆ, ಬಲು ಬೇಗನೆ ಈ ಭೂಮಿಯ ಮೇಲೆ ಎಲ್ಲವೂ ದೇವರ ಇಷ್ಟದ ಪ್ರಕಾರ ನಡೆಯುವಂತೆ ದೇವರ ರಾಜ್ಯವು ಮಾಡಲಿದೆ ಎಂದು ಸಹ ಕಲಿಯಲಿದ್ದೇವೆ.—ಟಿಪ್ಪಣಿ 21ನ್ನು ನೋಡಿ.