ಮಾಹಿತಿ ಇರುವಲ್ಲಿ ಹೋಗಲು

ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?

ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?
  • ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯೇ?

  • ಯುದ್ಧ ಮತ್ತು ಕಷ್ಟ ಕೊನೆಗೊಳ್ಳುವವೋ?

  • ಸತ್ತ ಮೇಲೆ ನಮಗೆ ಏನಾಗುತ್ತದೆ?

  • ಸತ್ತವರನ್ನು ಪುನಃ ನೋಡಲು ಸಾಧ್ಯವಿದೆಯೋ?

  • ನಾನು ಹೇಗೆ ಪ್ರಾರ್ಥನೆಮಾಡಿದರೆ ದೇವರು ಕಿವಿಗೊಡುತ್ತಾನೆ?

  • ನಾನು ಜೀವನದಲ್ಲಿ ಹೇಗೆ ಸಂತೋಷವಾಗಿರಬಲ್ಲೆ?

ಈ ಪ್ರಶ್ನೆಗಳಿಗೆ ಉತ್ತರಗಳು ಎಲ್ಲಿ ಸಿಗುತ್ತವೆ? ನೀವು ವಿವಿಧ ವ್ಯಕ್ತಿಗಳನ್ನು ಕೇಳುವುದಾದರೆ ವಿವಿಧ ಉತ್ತರಗಳು ಸಿಗುತ್ತವೆ. ಹೆಚ್ಚು ತಿಳಿದಿರುವ ಮತ್ತು ಅನುಭವವಿರುವ ವ್ಯಕ್ತಿಗಳನ್ನು ಕೇಳುವುದಾದರೆ, ಆಗಲೂ ನಿಮಗೆ ಸಿಗುವ ಉತ್ತರಗಳು ಒಂದಕ್ಕೊಂದು ಭಿನ್ನವಾಗಿರುತ್ತವೆ. ಕೆಲವೊಂದು ಉತ್ತರಗಳು ಆ ಸಮಯಕ್ಕೆ ಸರಿಯೆಂದನಿಸಿದರೂ ಆಮೇಲೆ ಅವು ಸಮಂಜಸವಾಗಿ ಕಾಣಲಿಕ್ಕಿಲ್ಲ.

ಆದರೆ, ಭರವಸಾರ್ಹವಾದ ಉತ್ತರಗಳನ್ನು ಕೊಡುವ ಒಂದು ಗ್ರಂಥವಿದೆ. ಅದು ಖಚಿತವಾದ ಮಾಹಿತಿಯನ್ನು ಕೊಡುತ್ತದೆ. ಯೇಸು ಕ್ರಿಸ್ತನು ದೇವರಿಗೆ ಪ್ರಾರ್ಥಿಸುತ್ತಾ, “ನಿನ್ನ ವಾಕ್ಯವೇ ಸತ್ಯವು” ಎಂದು ಹೇಳಿದನು. (ಯೋಹಾನ 17:17) ಇಂದು ನಾವು ಆ ಸತ್ಯವಾಕ್ಯವನ್ನು ಪವಿತ್ರ ಬೈಬಲ್‌ ಎಂಬುದಾಗಿ ಕರೆಯುತ್ತೇವೆ. ಮೇಲಿನ ಪ್ರಶ್ನೆಗಳಿಗೆ ಬೈಬಲ್‌ ನೀಡುವ ಸ್ಪಷ್ಟ ಮತ್ತು ಸತ್ಯ ಉತ್ತರಗಳ ನಸುನೋಟವನ್ನು ನೀವು ಮುಂದಿನ ಪುಟಗಳಲ್ಲಿ ಕಾಣುವಿರಿ.

 ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯೇ?

ಈ ಪ್ರಶ್ನೆಗೆ ಕಾರಣ: ನಾವಿರುವ ಈ ಲೋಕದಲ್ಲಿ ಎಲ್ಲಿ ನೋಡಿದರೂ ಕ್ರೂರತನ ಮತ್ತು ಅನ್ಯಾಯ ತುಂಬಿತುಳುಕುತ್ತಿವೆ. ನಾವು ಪಡುತ್ತಿರುವ ಕಷ್ಟಸಂಕಟಗಳು ದೈವೇಚ್ಛೆಯಾಗಿದೆ ಎಂದು ಅನೇಕ ಧರ್ಮಗಳು ಕಲಿಸುತ್ತವೆ.

ಬೈಬಲ್‌ ತಿಳಿಸುವುದು: ದೇವರು ಕೆಟ್ಟದ್ದಕ್ಕೆ ಕಾರಣನಲ್ಲ. “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ!” ಎಂದು ಯೋಬ 34:10 ರಲ್ಲಿ ಬೈಬಲ್‌ ತಿಳಿಸುತ್ತದೆ. ದೇವರು ಮಾನವರಿಗಾಗಿ ಪ್ರೀತಿಯ ಉದ್ದೇಶವಿಟ್ಟಿದ್ದಾನೆ. ಆದುದರಿಂದಲೇ, “ಪರಲೋಕದಲ್ಲಿರುವ ನಮ್ಮ ತಂದೆಯೇ, . . . ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸುವಂತೆ ಯೇಸು ಕಲಿಸಿಕೊಟ್ಟನು. (ಮತ್ತಾಯ 6:9, 10) ದೇವರಿಗೆ ನಮ್ಮ ಬಗ್ಗೆ ಎಷ್ಟು ಗಾಢ ಚಿಂತೆ ಇದೆಯೆಂದರೆ ತನ್ನ ಆ ಉದ್ದೇಶವನ್ನು ಈಡೇರಿಸಲು ಆತನು ಮಹಾ ತ್ಯಾಗವನ್ನೇ ಮಾಡಿದ್ದಾನೆ.—ಯೋಹಾನ 3:16.

ಈ ವಚನಗಳನ್ನು ಸಹ ನೋಡಿ: ಆದಿಕಾಂಡ 1:26-28; ಯಾಕೋಬ 1:13; ಮತ್ತು 1 ಪೇತ್ರ 5:6, 7.

ಯುದ್ಧ ಮತ್ತು ಕಷ್ಟ ಕೊನೆಗೊಳ್ಳುವವೋ?

ಈ ಪ್ರಶ್ನೆಗೆ ಕಾರಣ: ಯುದ್ಧವು ಲೆಕ್ಕವಿಲ್ಲದಷ್ಟು ಜನರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಜನರ ಕಷ್ಟದ ನರಳಾಟವನ್ನು ನೋಡಿ ನಾವೆಲ್ಲರು ನೊಂದಿದ್ದೇವೆ.

ಬೈಬಲ್‌ ತಿಳಿಸುವುದು: ಇಡೀ ಭೂಮಿಯಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವೆನೆಂದು ದೇವರು ಮುಂತಿಳಿಸುತ್ತಾನೆ. ಆತನು ಈ ಭೂಮಿಯನ್ನು ಆಳಲಾರಂಭಿಸುವಾಗ ಜನರು ‘ಯುದ್ಧಾಭ್ಯಾಸವನ್ನು’ ಮಾಡುವುದಿಲ್ಲ. ಬದಲಾಗಿ, ಅವರು ತಮ್ಮ “ಕತ್ತಿಗಳನ್ನು [ನೇಗಿಲಿನ] ಗುಳಗಳನ್ನಾಗಿ” ಮಾಡುವರು. (ಯೆಶಾಯ 2:4) ದೇವರು ಅನ್ಯಾಯ ಮತ್ತು ಕಷ್ಟನರಳಾಟಗಳನ್ನೆಲ್ಲಾ ಕೊನೆಗಾಣಿಸುವನು. ಬೈಬಲ್‌ ವಾಗ್ದಾನಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ [ಇಂದಿರುವ ಅನ್ಯಾಯ ಮತ್ತು ಕಷ್ಟಸಂಕಟಗಳು ಸಹ] ಇಲ್ಲದೆ ಹೋಯಿತು.”—ಪ್ರಕಟನೆ 21:3, 4.

ಈ ವಚನಗಳನ್ನು ಸಹ ನೋಡಿ: ಕೀರ್ತನೆ 37:10, 11; 46:9; ಮತ್ತು ಮಿಾಕ 4:1-4.

ಸತ್ತ ಮೇಲೆ ನಮಗೆ ಏನಾಗುತ್ತದೆ?

ಈ ಪ್ರಶ್ನೆಗೆ ಕಾರಣ: ಒಬ್ಬ ಮನುಷ್ಯನು ಸತ್ತರೂ ಅವನ ಆತ್ಮವು ಶರೀರದಿಂದ ಬೇರ್ಪಟ್ಟು ಜೀವಿಸುತ್ತಾ ಇರುತ್ತದೆಂದು ಹೆಚ್ಚಿನ ಧರ್ಮಗಳು ಕಲಿಸುತ್ತವೆ. ಸತ್ತುಹೋದ ಪೂರ್ವಿಕರು ತಮಗೆ ಸಹಾಯಮಾಡಬಲ್ಲರು ಅಥವಾ ಹಾನಿಮಾಡಬಲ್ಲರು ಎಂದು ಕೆಲವರು ನಂಬುತ್ತಾರೆ. ದೇವರು ದುಷ್ಟರನ್ನು ಬೆಂಕಿಯ ನರಕಕ್ಕೆ ಹಾಕಿ ನಿತ್ಯಯಾತನೆ ಕೊಟ್ಟು ಶಿಕ್ಷಿಸುತ್ತಾನೆಂದು ಇನ್ನು ಕೆಲವರು ನಂಬುತ್ತಾರೆ.

ಬೈಬಲ್‌ ತಿಳಿಸುವುದು: ಮೃತರು ಕೇಳಲಾರರು, ನೋಡಲಾರರು, ಮಾತಾಡಲಾರರು, ಯೋಚಿಸಲಾರರು, ಏಕೆಂದರೆ ಅವರಲ್ಲಿ ಜೀವವೇ ಇರುವುದಿಲ್ಲ. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಪ್ರಸಂಗಿ 9:5 ತಿಳಿಸುತ್ತದೆ. ಸತ್ತವರಿಗೆ ಯಾವ ತಿಳುವಳಿಕೆಯೂ ಭಾವನೆಯೂ ಇಲ್ಲದ ಕಾರಣ ಅವರು ಜನರಿಗೆ ಹಾನಿಮಾಡಲು ಅಥವಾ ಸಹಾಯಮಾಡಲು ಸಾಧ್ಯವಿಲ್ಲ.—ಕೀರ್ತನೆ 146:3, 4.

ಈ ವಚನಗಳನ್ನು ಸಹ ನೋಡಿ: ಆದಿಕಾಂಡ 3:19 ಮತ್ತು ಪ್ರಸಂಗಿ 9:6, 10.

 ಸತ್ತವರನ್ನು ಪುನಃ ನೋಡಲು ಸಾಧ್ಯವಿದೆಯೋ?

ಈ ಪ್ರಶ್ನೆಗೆ ಕಾರಣ: ಬದುಕಬೇಕೆಂಬುದೇ ನಮ್ಮ ಆಸೆ, ನಮ್ಮ ಅಚ್ಚುಮೆಚ್ಚಿನವರೊಂದಿಗೆ ಸಂತೋಷದಿಂದ ಬದುಕಿಬಾಳಲು ನಾವು ಇಷ್ಟಪಡುತ್ತೇವೆ. ಆದುದರಿಂದ ನಾವು ಸ್ವಾಭಾವಿಕವಾಗಿಯೇ, ತೀರಿಹೋದ ನಮ್ಮ ಪ್ರಿಯ ಜನರನ್ನು ಪುನಃ ನೋಡಲು ಹಂಬಲಿಸುತ್ತೇವೆ.

ಬೈಬಲ್‌ ತಿಳಿಸುವುದು: ಮೃತರಾಗಿರುವ ಹೆಚ್ಚಿನ ಜನರು ಪುನಃ ಜೀವಂತರಾಗಿ ಎದ್ದುಬರುವರು. ‘ಸಮಾಧಿಗಳಲ್ಲಿರುವವರು ಎದ್ದು ಹೊರಗೆ ಬರುವ ಕಾಲ ಬರುತ್ತದೆ’ ಎಂದು ಯೇಸು ವಚನಕೊಟ್ಟನು. (ಯೋಹಾನ 5:28, 29) ದೇವರು ಆರಂಭದಲ್ಲೇ ಉದ್ದೇಶಿಸಿದಂತೆ, ಪುನಃ ಜೀವಂತರಾಗಿ ಎದ್ದುಬರುವ ಮಾನವರು ಪರದೈಸ್‌ ಭೂಮಿಯಲ್ಲಿ ಅಂದರೆ ಸುಂದರವಾದ ಉದ್ಯಾನವನದಂತಾಗುವ ಇದೇ ಭೂಮಿಯಲ್ಲಿ ಜೀವಿಸುವರು. (ಯೆಶಾಯ 65:21-25) ಆಗ ದೇವರ ಆಜ್ಞೆ ಪಾಲಿಸುವ ಜನರು ಪರಿಪೂರ್ಣ ಆರೋಗ್ಯದಿಂದ ನಳನಳಿಸುತ್ತಾ ಶಾಶ್ವತವಾಗಿ ಜೀವಿಸುವರು. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಬೈಬಲ್‌ ಹೇಳುತ್ತದೆ.—ಕೀರ್ತನೆ 37:29.

ಈ ವಚನಗಳನ್ನು ಸಹ ನೋಡಿ: ಯೋಬ 14:14, 15; ಲೂಕ 7:11-17; ಮತ್ತು ಅ. ಕೃತ್ಯಗಳು 24:15.

ನಾನು ಹೇಗೆ ಪ್ರಾರ್ಥನೆಮಾಡಿದರೆ ದೇವರು ಕಿವಿಗೊಡುತ್ತಾನೆ?

ಈ ಪ್ರಶ್ನೆಗೆ ಕಾರಣ: ಹೆಚ್ಚುಕಡಿಮೆ ಎಲ್ಲ ಧರ್ಮದಲ್ಲಿರುವ ಜನರು ದೇವರನ್ನು ಬೇಡಿಕೊಳ್ಳುತ್ತಾರೆ ಅಥವಾ ಪ್ರಾರ್ಥನೆಮಾಡುತ್ತಾರೆ. ಹಾಗಿದ್ದರೂ ತಮ್ಮ ಪ್ರಾರ್ಥನೆಗಳಿಗೆ ಯಾವುದೇ ಫಲ ಸಿಕ್ಕಿಲ್ಲವೆಂದು ಅನೇಕರು ಭಾವಿಸುತ್ತಾರೆ.

ಬೈಬಲ್‌ ತಿಳಿಸುವುದು: ಪ್ರಾರ್ಥನೆಮಾಡುವಾಗ ಒಂದೇ ವಿಷಯವನ್ನು ಪುನರುಚ್ಚರಿಸಬಾರದೆಂದು ಯೇಸು ಕಲಿಸಿದನು. “ಪ್ರಾರ್ಥನೆಮಾಡುವಾಗ . . . ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ” ಎಂದು ಅವನು ತಿಳಿಸಿದನು. (ಮತ್ತಾಯ 6:7) ನಮ್ಮ ಪ್ರಾರ್ಥನೆಗಳನ್ನು ದೇವರು ಆಲಿಸಬೇಕಾದರೆ ಆತನು ಮೆಚ್ಚುವಂಥ ರೀತಿಯಲ್ಲಿ ನಾವು ಪ್ರಾರ್ಥನೆಮಾಡಬೇಕು. ಹಾಗೆ ಮಾಡಲು ಮೊದಲಾಗಿ ದೇವರ ಚಿತ್ತವೇನೆಂಬುದನ್ನು ನಾವು ಕಲಿಯಬೇಕು, ಬಳಿಕ ಅದಕ್ಕನುಸಾರ ಪ್ರಾರ್ಥಿಸಬೇಕು. “ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ” ಎಂದು ಮೊದಲನೆಯ ಯೋಹಾನ 5:14 ವಿವರಿಸುತ್ತದೆ.

ಈ ವಚನಗಳನ್ನು ಸಹ ನೋಡಿ: ಕೀರ್ತನೆ 65:2; ಯೋಹಾನ 14:6; 16:23, 24; ಮತ್ತು 1 ಯೋಹಾನ 3:22.

ನಾನು ಜೀವನದಲ್ಲಿ ಹೇಗೆ ಸಂತೋಷವಾಗಿರಬಲ್ಲೆ?

ಈ ಪ್ರಶ್ನೆಗೆ ಕಾರಣ: ಹಣ, ಕೀರ್ತಿ ಅಥವಾ ಸೌಂದರ್ಯವಿದ್ದರೆ ನಾವು ಸಂತೋಷವಾಗಿರುತ್ತೇವೆ ಎಂದು ಅನೇಕರು ನೆನಸುತ್ತಾರೆ. ಆದುದರಿಂದ, ಅವರು ಅಂಥ ವಿಷಯಗಳನ್ನು ಪಡೆಯಲು ಶತಪ್ರಯತ್ನ ಮಾಡುತ್ತಾರೆ. ಆದರೆ ಅವೆಲ್ಲವುಗಳಿಂದ ಸಂತೋಷ ಲಭಿಸುವುದಿಲ್ಲವೆಂದು ಅವರು ಕೊನೆಗೆ ತಿಳಿದುಕೊಳ್ಳುತ್ತಾರೆ.

ಬೈಬಲ್‌ ತಿಳಿಸುವುದು: ಸಂತೋಷದ ಕೀಲಿಕೈಯನ್ನು ಯೇಸು ತಿಳಿಸಿದನು. “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು” ಅಂದರೆ ಸಂತೋಷವಾಗಿರುವರು ಎಂದು ಅವನು ಹೇಳಿದನು. (ಲೂಕ 11:28) ದೇವರ ಕುರಿತಾದ ಮತ್ತು ನಮಗಾಗಿ ಆತನು ಇಟ್ಟಿರುವ ಉದ್ದೇಶದ ಕುರಿತಾದ ಆಧ್ಯಾತ್ಮಿಕ ಸತ್ಯವನ್ನು ತಿಳಿಯಲಿಕ್ಕಾಗಿರುವ ನಮ್ಮ ದಾಹವನ್ನು ನೀಗಿಸಲು ನಾವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಆ ದೊಡ್ಡ ಅಗತ್ಯವನ್ನು ಪೂರೈಸುವಲ್ಲಿ ಮಾತ್ರ ನಾವು ಸಂತೋಷವಾಗಿರಬಲ್ಲೆವು. ಆ ಆಧ್ಯಾತ್ಮಿಕ ಸತ್ಯವು ಬೈಬಲಿನಲ್ಲಿದೆ. ಆ ಸತ್ಯವನ್ನು ತಿಳಿದುಕೊಳ್ಳುವುದು, ಜೀವನದಲ್ಲಿ ನಿಜವಾಗಿಯೂ ಯಾವುದು ಪ್ರಮುಖವಾಗಿದೆ ಮತ್ತು ಯಾವುದು ಪ್ರಮುಖವಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ನಮಗೆ ಸಹಾಯಮಾಡುತ್ತದೆ. ನಮ್ಮ ಪ್ರತಿಯೊಂದು ನಿರ್ಣಯ ಮತ್ತು ಕ್ರಿಯೆಗಳನ್ನು ಬೈಬಲ್‌ ಸತ್ಯಕ್ಕೆ ಹೊಂದಿಕೆಯಲ್ಲಿ ಮಾಡುವುದಾದರೆ ಹೆಚ್ಚು ಅರ್ಥಪೂರ್ಣ ಜೀವನ ನಮ್ಮದಾಗಿರುತ್ತದೆ.—ಲೂಕ 11:28.

ಈ ವಚನಗಳನ್ನು ಸಹ ನೋಡಿ: ಜ್ಞಾನೋಕ್ತಿ 3:5, 6, 13-18 ಮತ್ತು 1 ತಿಮೊಥೆಯ 6:9, 10.

 ಇವು, ಆರಂಭದಲ್ಲಿ ತಿಳಿಸಲಾದ ಆರು ಪ್ರಶ್ನೆಗಳಿಗೆ ಬೈಬಲ್‌ ನೀಡುವ ಉತ್ತರಗಳ ಕಿರುನೋಟವಷ್ಟೇ. ಇನ್ನೂ ಹೆಚ್ಚನ್ನು ತಿಳಿಯಲು ನೀವು ಬಯಸುತ್ತೀರೊ? ಸತ್ಯಕ್ಕಾಗಿ ಹುಡುತ್ತಿರುವವರಲ್ಲಿ ನೀವು ಒಬ್ಬರಾಗಿರುವುದಾದರೆ ಖಂಡಿತವಾಗಿಯೂ ತಿಳಿಯಲು ಬಯಸುವಿರಿ ಎಂಬುದರಲ್ಲಿ ಸಂಶಯವಿಲ್ಲ. ನಿಮಗೆ ಇನ್ನೂ ಅನೇಕ ಪ್ರಶ್ನೆಗಳಿರಬಹುದು. ಉದಾಹರಣೆಗೆ, ‘ದೇವರಿಗೆ ನಮ್ಮ ಬಗ್ಗೆ ಚಿಂತೆ ಇರುವುದಾದರೆ, ಇತಿಹಾಸದಾದ್ಯಂತ ಇಷ್ಟೊಂದು ಕೆಟ್ಟತನ ಹಾಗೂ ಕಷ್ಟಸಂಕಟವನ್ನು ನೋಡಿಯೂ ಏಕೆ ಸುಮ್ಮನಿದ್ದಾನೆ? ನನ್ನ ಕುಟುಂಬ ಜೀವನವನ್ನು ಹೇಗೆ ಉತ್ತಮಗೊಳಿಸಬಲ್ಲೆ?’ ಈ ಪ್ರಶ್ನೆಗಳಿಗೆ ಮತ್ತು ಇತರ ಅನೇಕ ಪ್ರಶ್ನೆಗಳಿಗೆ ಬೈಬಲ್‌ ಸ್ಪಷ್ಟವಾದ ಸಂತೃಪ್ತಿಕರ ಉತ್ತರಗಳನ್ನು ಒದಗಿಸುತ್ತದೆ.

ಹಾಗಿದ್ದರೂ, ಇಂದು ಅನೇಕರು ಬೈಬಲ್‌ ಏನು ತಿಳಿಸುತ್ತದೆ ಎಂದು ನೋಡಲು ಹಿಂಜರಿಯುತ್ತಾರೆ. ಬೈಬಲ್‌ ಒಂದು ದೊಡ್ಡ ಗ್ರಂಥ, ಅದನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವೆಂದು ಅವರು ನೆನಸುತ್ತಾರೆ. ಬೈಬಲಿನಲ್ಲಿರುವ ಉತ್ತರಗಳನ್ನು ತಿಳಿದುಕೊಳ್ಳಲು ನೀವು ಇಚ್ಛಿಸುತ್ತೀರೊ? ಹಾಗಿರುವಲ್ಲಿ ನಿಮಗೆ ನೆರವಾಗುವ ಎರಡು ಸಾಧನಗಳನ್ನು ಯೆಹೋವನ ಸಾಕ್ಷಿಗಳು ಒದಗಿಸುತ್ತಾರೆ.

ಮೊದಲನೆಯದು, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕವಾಗಿದೆ. ಈ ಪುಸ್ತಕವು ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ನೀಡುವ ಸ್ಪಷ್ಟ ಉತ್ತರಗಳನ್ನು ತಿಳಿದುಕೊಳ್ಳಲು ಜನರಿಗೆ ಸಹಾಯಮಾಡುತ್ತದೆ. ಎರಡನೆಯದು, ಮನೆಯಲ್ಲೇ ಬೈಬಲ್‌ ಅಧ್ಯಯನ ಮಾಡುವ ಕಾರ್ಯಕ್ರಮವಾಗಿದೆ. ಇದು ಉಚಿತವಾಗಿದ್ದು, ನಿಮ್ಮ ಪ್ರದೇಶದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಅರ್ಹರಾದವರೊಬ್ಬರು ನಿಮ್ಮ ಮನೆ ಅಥವಾ ಬೇರೆ ಅನುಕೂಲ ಸ್ಥಳದಲ್ಲಿ ನಿಮ್ಮನ್ನು ಭೇಟಿಮಾಡಿ, ವಾರಕ್ಕೊಮ್ಮೆ ಸ್ವಲ್ಪ ಸಮಯ ನಿಮ್ಮೊಂದಿಗೆ ಬೈಬಲ್‌ ವಿಷಯಗಳನ್ನು ಚರ್ಚೆಮಾಡುವರು. ಈ ಕಾರ್ಯಕ್ರಮದಿಂದ ಜಗತ್ತಿನೆಲ್ಲೆಡೆಯಿರುವ ಲಕ್ಷಾಂತರ ಜನರು ಪ್ರಯೋಜನಪಡೆದಿದ್ದಾರೆ. ಅವರಲ್ಲಿ ಅನೇಕರು, “ನನಗೆ ಸತ್ಯ ಸಿಕ್ಕಿತು!” ಎಂದು ಉದ್ಗರಿಸಿದ್ದಾರೆ.

ಇದಕ್ಕಿಂತ ದೊಡ್ಡದಾದ ಇನ್ನೊಂದು ನಿಧಿ ಸಿಗಲಿಕ್ಕಿಲ್ಲ. ಬೈಬಲಿನ ಸತ್ಯವು ಮೂಢನಂಬಿಕೆ, ಗಲಿಬಿಲಿ ಮತ್ತು ಭಯಭೀತಿಗಳಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. ಅಲ್ಲದೆ, ನಿರೀಕ್ಷೆ, ಉದ್ದೇಶ ಮತ್ತು ಹರ್ಷಾನಂದವನ್ನು ಕೊಡುತ್ತದೆ. ಯೇಸು ಹೇಳಿದ್ದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:31, 32.