ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಅವರ ನಂಬಿಕೆಯನ್ನು ಅನುಕರಿಸಿ

 ಅಧ್ಯಾಯ ಏಳು

‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದವನು’

‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದವನು’

1, 2. (1) ಯಾವ ಸನ್ನಿವೇಶದಲ್ಲಿ ಸಮುವೇಲನು ಇಸ್ರಾಯೇಲ್‌ ಜನಾಂಗದೊಂದಿಗೆ ಮಾತಾಡಿದನು? (2) ಪಶ್ಚಾತ್ತಾಪಪಡುವಂತೆ ಅವರನ್ನು ಪ್ರೇರಿಸಬೇಕಾದ ಅಗತ್ಯ ಏಕಿತ್ತು?

ಸಮುವೇಲ ಪ್ರವಾದಿಯಾಗಿ ನ್ಯಾಯಸ್ಥಾಪಕನಾಗಿ ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡುತ್ತಾ ದಶಕಗಳೇ ಸಂದಿವೆ. ಈಗ ಅವನ ಮಾತಿನ ಮೇರೆಗೆ ಇಸ್ರಾಯೇಲ್ ಜನರೆಲ್ಲರೂ ಗಿಲ್ಗಾಲ್‌ ಪಟ್ಟಣದಲ್ಲಿ ಸೇರಿಬಂದಿದ್ದಾರೆ. ಅಲ್ಲಿನ ಹೊಲಗಳಲ್ಲಿ ಹೊಂಬಣ್ಣದ ಗೋದಿ ತೆನೆಗಳು ಕೊಯ್ಲಿಗೆ ಸಿದ್ಧವಾಗಿ ನಿಂತಿವೆ. ಇಸ್ರಾಯೇಲಿನಲ್ಲಿ ಅದು ಬೇಸಗೆ ಕಾಲ. ಆಧುನಿಕ ಕ್ಯಾಲೆಂಡರಿಗನುಸಾರ ಮೇ/ಜೂನ್‌ ತಿಂಗಳು. ನೆರೆದಿದ್ದ ಜನರನ್ನು ಸಮುವೇಲ ನೋಡುತ್ತಿದ್ದಂತೆ ಅಲ್ಲಿ ಮೌನ ಆವರಿಸುತ್ತದೆ. ಈಗ ಸಮುವೇಲನು ಅವರಿಗೆ ತಿಳಿಹೇಳಬೇಕೆಂದಿದ್ದ ಸಂಗತಿಯನ್ನು ಮನಸ್ಸಿಗೆ ನಾಟುವಂತೆ ಹೇಗೆ ಹೇಳುವನು?

2 ಆ ಜನರು ತಮಗೊಬ್ಬ ಅರಸ ಬೇಕೆಂದು ಹಠಹಿಡಿದಿದ್ದರು. ಇದೆಷ್ಟು ಗಂಭೀರ ತಪ್ಪೆಂದು ಅವರು ಮನಗಂಡಿರಲಿಲ್ಲ. ಆ ಬೇಡಿಕೆ ಮೂಲಕ ಅವರು ತಮ್ಮ ದೇವರಾದ ಯೆಹೋವನಿಗೆ, ಆತನ ಪ್ರವಾದಿ ಸಮುವೇಲನಿಗೆ ಅಗೌರವ ತೋರಿಸುತ್ತಿದ್ದರು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಯೆಹೋವನು ತಮ್ಮ ರಾಜನಾಗಿರುವುದು ಬೇಡ ಎನ್ನುತ್ತಿದ್ದರು! ಈ ತಪ್ಪಿಗಾಗಿ ಪಶ್ಚಾತ್ತಾಪಪಡುವಂತೆ ಸಮುವೇಲನು ಅವರನ್ನು ಹೇಗೆ ಪ್ರೇರಿಸುವನು?

ಕೆಟ್ಟ ಪ್ರಭಾವ ಬೀರುವವರ ಮಧ್ಯೆಯಿದ್ದರೂ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಾಧ್ಯವೆಂದು ಸಮುವೇಲನ ಬಾಲ್ಯ ಕಲಿಸುತ್ತದೆ

3, 4. (1) ಸಮುವೇಲ ತಾನು ಚಿಕ್ಕವನಾಗಿದ್ದ ಸಮಯಕ್ಕೆ ಸೂಚಿಸಿ ಮಾತಾಡಿದ್ದೇಕೆ? (2) ನಂಬಿಕೆಯ ವಿಷಯದಲ್ಲಿ ಅವನಿಟ್ಟ ಮಾದರಿ ಇಂದು ನಮಗೇಕೆ ಸಹಾಯಕರ?

3 ಸಮುವೇಲ ಮಾತು ಆರಂಭಿಸಿದ. “ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ” ಎಂದನು. ನರೆಗೂದಲು ಅವನ ಮಾತಿನ ತೂಕ ಹೆಚ್ಚಿಸಿತು. (1 ಸಮು. 11:14, 15; 12:2) ಈಗ ವೃದ್ಧನಾಗಿದ್ದರೂ ಅವನಿಗೆ ತಾನು ಚಿಕ್ಕವನಾಗಿದ್ದ ದಿನಗಳ ನೆನಪು ಮಾಸಿಹೋಗಿರಲಿಲ್ಲ, ಮನಸ್ಸಲ್ಲಿ ಹಚ್ಚಹಸುರಾಗಿತ್ತು. ಅವನು ಬೆಳೆಯುತ್ತಾ ಬಂದಂತೆ ಅನೇಕ ನಿರ್ಣಯಗಳನ್ನು ಮಾಡಿದ್ದನು. ಆ ನಿರ್ಣಯಗಳೇ ಜೀವನವಿಡೀ ಯೆಹೋವನಲ್ಲಿ ನಂಬಿಕೆ ಹಾಗೂ ಭಕ್ತಿ ತೋರಿಸಲು ಅವನಿಗೆ ನೆರವಾದವು.

 4 ನಂಬಿಕೆಯಿಲ್ಲದ, ನಿಷ್ಠಾಹೀನ ಜನರ ಮಧ್ಯೆ ಜೀವಿಸಿದ್ದಾಗಲೂ ಸಮುವೇಲ ದೇವರಲ್ಲಿನ ನಂಬಿಕೆ ಬಲಪಡಿಸಿಕೊಳ್ಳುತ್ತಾ, ಕಾಪಾಡಿಕೊಳ್ಳುತ್ತಾ ಬಂದನು. ಇಂದು ನಾವು ಜೀವಿಸುತ್ತಿರುವ ಲೋಕದಲ್ಲೂ ನಂಬಿಕೆಯಿಲ್ಲದವರೂ ಭ್ರಷ್ಟ ಜನರೂ ತುಂಬಿದ್ದಾರೆ. ಹಾಗಾಗಿ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಸಮುವೇಲನಂತೆ ನಮಗೂ ಒಂದು ಸವಾಲು. (ಲೂಕ 18:8 ಓದಿ.) ಸಮುವೇಲನ ಮಾದರಿಯಿಂದ ನಾವೇನು ಕಲಿಯಬಹುದು? ಅದನ್ನು ತಿಳಿಯಲು, ಮೊದಲು ಅವನ ಬಾಲ್ಯದ ದಿನಗಳಿಗೆ ಹಿಂದಿರುಗೋಣ.

“ಯೆಹೋವನ ಸಾನ್ನಿಧ್ಯಸೇವೆ ಮಾಡುತ್ತಿದ್ದ” ಬಾಲಕ

5, 6. (1) ಸಮುವೇಲನ ಬಾಲ್ಯ ಎಲ್ಲರಂತಿರಲಿಲ್ಲ ಏಕೆ? (2) ಅವನನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂಬ ಖಾತ್ರಿ ಹೆತ್ತವರಿಗಿತ್ತೇಕೆ?

5 ಸಮುವೇಲನ ಬಾಲ್ಯ ಎಲ್ಲರಂತಿರಲಿಲ್ಲ. ಮೊಲೆಬಿಟ್ಟ ಕೂಡಲೇ ಯೆಹೋವನ ಪವಿತ್ರ ಗುಡಾರದಲ್ಲಿ ಅವನ ಜೀವನುದ್ದದ ಸೇವೆ ಆರಂಭವಾಯಿತು. ಬಹುಶಃ ಆಗ ಅವನ ಪ್ರಾಯ ಮೂರು ವರ್ಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು. ಶೀಲೋವಿನಲ್ಲಿದ್ದ ಈ ಗುಡಾರ ಸಮುವೇಲನ ಹುಟ್ಟೂರಾದ ರಾಮದಿಂದ 30ಕ್ಕಿಂತ ಹೆಚ್ಚು ಕಿ.ಮೀ. ದೂರದಲ್ಲಿತ್ತು. ಅವನ ತಂದೆ ಎಲ್ಕಾನ, ತಾಯಿ ಹನ್ನ ಅವನನ್ನು ಜೀವನಪರ್ಯಂತ ನಾಜೀರನಾಗಿರಲು ಅಂದರೆ ಒಂದು ವಿಶೇಷ ಸೇವೆಗಾಗಿ ಯೆಹೋವನಿಗೆ ಅರ್ಪಿಸಿದ್ದರು. * ಇದು ಹೆತ್ತವರು ಸಮುವೇಲನನ್ನು ತೊರೆದಿದ್ದರು, ಅವರಿಗೆ ಅವನ ಮೇಲೆ ಪ್ರೀತಿಯಿರಲಿಲ್ಲ ಎಂದು ತೋರಿಸಿತೇ?

6 ಖಂಡಿತ ಇಲ್ಲ! ತಮ್ಮ ಮಗನನ್ನು ಶೀಲೋವಿನಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ ಅವರಿಗಿತ್ತು. ಏಕೆಂದರೆ ಗುಡಾರದ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮಹಾ ಯಾಜಕ ಏಲಿಯೊಂದಿಗೆ ಸಮುವೇಲ ಕೆಲಸಮಾಡುತ್ತಿದ್ದನು. ಅಷ್ಟುಮಾತ್ರವಲ್ಲ ಗುಡಾರಕ್ಕೆ ಸಂಬಂಧಪಟ್ಟ ಕೆಲವೊಂದು ಕೆಲಸಗಳನ್ನು ಮಾಡುತ್ತಿದ್ದ ಹಲವಾರು ಸ್ತ್ರೀಯರೂ ಅಲ್ಲಿದ್ದರು. ಬಹುಶಃ ಅವರು ಅವನನ್ನು ನೋಡಿಕೊಳ್ಳುತ್ತಿದ್ದರು.—ವಿಮೋ. 38:8; ನ್ಯಾಯ. 11:34-40.

7, 8. (1) ವರ್ಷ ವರ್ಷವೂ ಸಮುವೇಲನ ಹೆತ್ತವರು ಅವನಿಗೆ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದದ್ದು ಹೇಗೆ? (2) ಸಮುವೇಲನ ಹೆತ್ತವರಿಂದ ಇಂದಿನ ಹೆತ್ತವರು ಏನು ಕಲಿಯಬಹುದು?

7 ಅಷ್ಟೇ ಅಲ್ಲ ಪ್ರಾರ್ಥನೆಯ ಫಲವಾಗಿ ಪಡೆದ ಈ ಮುದ್ದಿನ ಜ್ಯೇಷ್ಠ ಪುತ್ರನನ್ನು ಎಲ್ಕಾನ ಮತ್ತು ಹನ್ನ ಮರೆಯಲು ಸಾಧ್ಯವೇ ಇರಲಿಲ್ಲ. ತನಗೊಬ್ಬ ಮಗನನ್ನು ಕೊಡುವಂತೆ ದೇವರಲ್ಲಿ ಬೇಡಿಕೊಂಡು, ಅವನನ್ನು ಜೀವನಪೂರ್ತಿ ಆತನ ಸೇವೆಗಾಗಿ ಸಮರ್ಪಿಸುತ್ತೇನೆಂದು ಹನ್ನಳು ಮಾತುಕೊಟ್ಟಿದ್ದಳು. ಅದರಂತೆ ನಡೆದಿದ್ದಳು. ಆಕೆ ಕೈಯಾರೆ ಹೊಲಿದಿದ್ದ ಒಂದು ಹೊಸ ಅಂಗಿಯನ್ನು ಪ್ರತಿವರ್ಷ ದೇವಗುಡಾರಕ್ಕೆ ಬಂದಾಗ ಸಮುವೇಲನಿಗಾಗಿ ತರುತ್ತಿದ್ದಳು. ಅದನ್ನು ಅವನು ಗುಡಾರ ಸೇವೆ ಮಾಡುವಾಗ ಹಾಕಿಕೊಳ್ಳುತ್ತಿದ್ದನು. ತಂದೆತಾಯಿ ಬರುತ್ತಿದ್ದಾಗಲೆಲ್ಲ ಪುಟ್ಟ ಸಮುವೇಲ ನಿಜವಾಗಿಯೂ ಖುಷಿಪಟ್ಟಿರಬೇಕು. ದೇವಗುಡಾರದಲ್ಲಿ ಸೇವೆಮಾಡುವುದು ದೊಡ್ಡ ಸುಯೋಗ ಎಂದು ಹೆತ್ತವರು ಸಮುವೇಲನಿಗೆ ಹೇಳುತ್ತಿದ್ದರು. ವಾತ್ಸಲ್ಯದಿಂದ ಕೂಡಿದ ಹೆತ್ತವರ ಆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಸಮುವೇಲನಿಗೆ ಬೇಕಾದ ಬಲಕೊಟ್ಟಿತು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

 8 ಎಲ್ಕಾನ ಮತ್ತು ಹನ್ನಳಿಂದ ಇಂದಿನ ಹೆತ್ತವರು ಎಷ್ಟೋ ವಿಷಯಗಳನ್ನು ಕಲಿಯಬಹುದು. ಹೆತ್ತವರು ಮಕ್ಕಳ ಪಾಲನೆಪೋಷಣೆ ಮಾಡುವಾಗ ಬರೀ ಅವರ ಭೌತಿಕ ಅಗತ್ಯಗಳಿಗೆ ಗಮನಕೊಟ್ಟು ಅವರ ಆಧ್ಯಾತ್ಮಿಕ ಅಗತ್ಯಗಳನ್ನು ನಿರ್ಲಕ್ಷಿಸುತ್ತಿರುವುದು ಇಂದು ಸಾಮಾನ್ಯ. ಸಮುವೇಲನ ಹೆತ್ತವರಾದರೊ ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಟ್ಟರು. ಅವರ ಮಗನು ನಂಬಿಗಸ್ತ ವ್ಯಕ್ತಿಯಾಗಿ ಬೆಳೆಯುವುದರಲ್ಲಿ ಇದು ಮಹತ್ವದ ಪಾತ್ರವಹಿಸಿತು.—ಜ್ಞಾನೋಕ್ತಿ 22:6 ಓದಿ.

9, 10. (1) ದೇವಗುಡಾರವನ್ನು ವರ್ಣಿಸಿ. (ಪಾದಟಿಪ್ಪಣಿ ಸಹ ನೋಡಿ.) (2) ಎಳೆಯ ಸಮುವೇಲನಿಗೆ ಆ ಪವಿತ್ರ ಸ್ಥಳದ ಬಗ್ಗೆ ಹೇಗನಿಸುತ್ತಿತ್ತೆಂದು ವರ್ಣಿಸಿ. (3) ಸಮುವೇಲನಿಗೆ ಯಾವ್ಯಾವ ಕೆಲಸ ಇದ್ದಿರಬಹುದು? (4) ಇಂದಿನ ಎಳೆಯರು ಅವನ ಮಾದರಿಯನ್ನು ಹೇಗೆ ಅನುಕರಿಸಬಹುದೆಂದು ನೆನಸುತ್ತೀರಿ?

9 ಆ ಪುಟ್ಟ ಪೋರ ಬೆಳೆದು ದೊಡ್ಡವನಾಗುತ್ತಿರುವುದನ್ನು, ಶೀಲೋವಿನ ಸುತ್ತಲಿನ ಬೆಟ್ಟಗುಡ್ಡ ಹತ್ತಿ ಅಲ್ಲೇನಿದೆಯೆಂದು ಸುತ್ತಾಡಿ ನೋಡುತ್ತಿರುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಗುಡ್ಡದ ಮೇಲೆ ನಿಂತು ಕೆಳಗಿರುವ ಪಟ್ಟಣವನ್ನೂ ಒಂದು ಬದಿಯಲ್ಲಿ ಹರವಿಕೊಂಡಿದ್ದ ಕಣಿವೆಯನ್ನೂ ಅವನು ಕಣ್ತುಂಬಿಕೊಳ್ಳುತ್ತಿದ್ದಿರಬಹುದು. ಹೀಗೆ ನೋಡುತ್ತಿದ್ದಾಗೆಲ್ಲ ಯೆಹೋವನ ಗುಡಾರ ಕಣ್ಣಿಗೆ ಬೀಳುತ್ತಿದ್ದಂತೆ ಅವನು ಹೆಮ್ಮೆಯಿಂದ ಹಿಗ್ಗಿರಬಹುದು. ಆ ಗುಡಾರ ನಿಜವಾಗಿ ಪವಿತ್ರ ಸ್ಥಳವಾಗಿತ್ತು. * ಹೆಚ್ಚುಕಡಿಮೆ 400 ವರ್ಷಗಳ ಹಿಂದೆ ಮೋಶೆಯ ಮೇಲ್ವಿಚಾರಣೆಯಡಿ ಕಟ್ಟಲಾಗಿದ್ದ ಈ ಗುಡಾರ ಜಗತ್ತಿನಲ್ಲೇ ಯೆಹೋವನ ಶುದ್ಧಾರಾಧನೆಯ ಏಕೈಕ ಕೇಂದ್ರವಾಗಿತ್ತು.

10 ಬರುತ್ತಾ ಬರುತ್ತಾ ಎಳೆಯ ಸಮುವೇಲನಿಗೆ ದೇವಗುಡಾರ ತುಂಬ ಇಷ್ಟವಾಗತೊಡಗಿತು. “ಬಾಲಕನಾದ ಸಮುವೇಲನು ಏಫೋದೆಂಬ ನಾರುಮಡಿಯಂಗಿಯನ್ನು ತೊಟ್ಟುಕೊಂಡು ಯೆಹೋವನ ಸಾನ್ನಿಧ್ಯಸೇವೆಯನ್ನು ಮಾಡುತ್ತಿದ್ದನು” ಎಂದು ಸಮುವೇಲನೇ ಕಾಲಾನಂತರ ಬರೆದ ಮಾತು ಬೈಬಲಿನಲ್ಲಿದೆ. (1 ಸಮು. 2:18) ಆ ತೋಳಿಲ್ಲದ ಸಾದಾ ಅಂಗಿಯನ್ನು ಧರಿಸುತ್ತಿದ್ದದ್ದು ಅವನು ಗುಡಾರದಲ್ಲಿ ಯಾಜಕರಿಗೆ ಸಹಾಯ ಮಾಡುತ್ತಿದ್ದನೆಂದು ತೋರಿಸಿಕೊಡುತ್ತದೆ. ಸಮುವೇಲ ಯಾಜಕವರ್ಗಕ್ಕೆ ಸೇರಿದವನಲ್ಲದಿದ್ದರೂ ಬೆಳಗ್ಗೆ ಗುಡಾರದ ಅಂಗಳದ ಪ್ರವೇಶದ್ವಾರಗಳನ್ನು ತೆರೆಯುವ, ವೃದ್ಧ ಏಲಿಗೆ ಸಹಾಯ ಮಾಡುವಂಥ ಕೆಲಸಗಳನ್ನು ಅವನಿಗೆ ಕೊಡಲಾಗಿತ್ತು. ಅವನು ಈ ಸುಯೋಗಗಳಲ್ಲಿ ತುಂಬ ಆನಂದಿಸುತ್ತಿದ್ದನು. ಆದರೆ ಸ್ವಲ್ಪ ಸಮಯ ನಂತರ ಅವನ ಮುಗ್ಧ ಮನಸ್ಸಿನ ನೆಮ್ಮದಿ ಕದಡಿತು. ಏಕೆಂದರೆ ಯೆಹೋವನ ಗುಡಾರದಲ್ಲಿ ತುಂಬ ಗಂಭೀರ ತಪ್ಪುಗಳು ನಡೆಯುತ್ತಿದ್ದವು.

ನೀತಿಗೆಟ್ಟವರ ಮಧ್ಯದಲ್ಲಿದ್ದರೂ ನಿರ್ಮಲನು

11, 12. (1) ಹೊಫ್ನಿ ಫೀನೆಹಾಸರ ಯಾವ ಮನೋಭಾವ ಅವರ ಪಾಪಗಳಿಗೆ ಕಾರಣವಾಗಿತ್ತು? (2) ದೇವಗುಡಾರದಲ್ಲಿ ಹೊಫ್ನಿ ಫೀನೆಹಾಸರು ಯಾವ ರೀತಿಯ ದುಷ್ಟತನ, ನೀತಿಭ್ರಷ್ಟತೆಯನ್ನು ನಡೆಸುತ್ತಿದ್ದರು? (ಪಾದಟಿಪ್ಪಣಿ ಸಹ ನೋಡಿ.)

11 ಎಳೆಯ ವಯಸ್ಸಿನ ಸಮುವೇಲನ ಕಣ್ಮುಂದೆಯೇ ದುಷ್ಟತನ, ನೀತಿಭ್ರಷ್ಟತೆ ನಡೆಯುತ್ತಿತ್ತು. ಏಲಿಗೆ ಹೊಫ್ನಿ, ಫೀನೆಹಾಸ ಎಂಬಿಬ್ಬರು ಗಂಡುಮಕ್ಕಳಿದ್ದರು. “ಏಲಿಯ ಮಕ್ಕಳು  ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ” ಎನ್ನುತ್ತದೆ ಸಮುವೇಲನ ವೃತ್ತಾಂತ. (1 ಸಮು. 2:12) ಈ ವಚನದ ಎರಡು ಭಾಗಗಳು ಒಂದಕ್ಕೊಂದು ಸಂಬಂಧಿಸಿವೆ. ಹೊಫ್ನಿ ಫೀನೆಹಾಸರಿಬ್ಬರು “ಬಹುದುಷ್ಟರಾಗಿದ್ದರು” ಏಕೆಂದರೆ ಯೆಹೋವನ ಬಗ್ಗೆ ಅವರಿಗೆ ಸ್ವಲ್ಪವೂ ಗೌರವವಿರಲಿಲ್ಲ. ಆತನ ನೀತಿನಿಯಮಗಳನ್ನು ಒಂಚೂರು ಲೆಕ್ಕಕ್ಕೆ ತಕ್ಕೊಳ್ಳುತ್ತಿರಲಿಲ್ಲ. ಅವರಿಗಿದ್ದ ಈ ಮನೋಭಾವವೇ ಅವರು ಮಾಡಿದ ಎಲ್ಲ ಪಾಪಗಳಿಗೆ ಕಾರಣವಾಗಿತ್ತು.

12 ದೇವಗುಡಾರದಲ್ಲಿ ಯಾಜಕರು ಮಾಡಬೇಕಾದ ಕೆಲಸಗಳೇನು, ಯಜ್ಞಗಳನ್ನು ಅರ್ಪಿಸುವುದು ಹೇಗೆ ಎಂದು ಮೋಶೆಯ ಧರ್ಮಶಾಸ್ತ್ರ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟಿತ್ತು. ಕಾರಣ? ಆ ಯಜ್ಞಗಳು, ಜನರ ಪಾಪಗಳನ್ನು ಕ್ಷಮಿಸಲು ದೇವರು ಮಾಡಿದ ಏರ್ಪಾಡುಗಳನ್ನು ಸೂಚಿಸಿದವು. ಅವುಗಳ ಮೂಲಕ ಜನರು ದೇವರ ದೃಷ್ಟಿಯಲ್ಲಿ ಶುದ್ಧರಾಗಿ ಆತನ ಆಶೀರ್ವಾದ, ಮಾರ್ಗದರ್ಶನಗಳನ್ನು ಪಡೆಯಲು ಅರ್ಹರಾಗಬಹುದಿತ್ತು. ಆದರೆ ಹೊಫ್ನಿ ಫೀನೆಹಾಸರು ಈ ಯಜ್ಞಾರ್ಪಣೆಗಳಿಗೆ ಅಗೌರವ ತೋರಿಸಿದಲ್ಲದೆ ಜೊತೆ-ಯಾಜಕರು ಸಹ ಅದನ್ನೇ ಮಾಡುವಂತೆ ಪ್ರೇರಿಸಿದರು. *

13, 14. (1) ದೇವಗುಡಾರದಲ್ಲಿ ನಡೆಯುತ್ತಿದ್ದ ದುಷ್ಟತನ ಯಥಾರ್ಥ ಜನರನ್ನು ಹೇಗೆ ಬಾಧಿಸುತ್ತಿತ್ತು? (2) ಒಬ್ಬ ತಂದೆ ಹಾಗೂ ಮಹಾ ಯಾಜಕನಾಗಿ ಏಲಿ ತನ್ನ ಕರ್ತವ್ಯ ಪೂರೈಸಲು ತಪ್ಪಿಹೋದದ್ದು ಹೇಗೆ?

13 ಇಂಥ ಘೋರ ತಪ್ಪುಗಳು ಎಗ್ಗಿಲ್ಲದೆ ಮುಂದುವರಿಯುತ್ತಿರುವುದನ್ನು ಎಳೆಯ ಸಮುವೇಲ ನೋಡಿ ಆಶ್ಚರ್ಯಪಡುವುದನ್ನು ಊಹಿಸಿಕೊಳ್ಳಿ. ಆಧ್ಯಾತ್ಮಿಕ ಬಲ, ಸಾಂತ್ವನ ಪಡೆಯುವ ಆಸೆಯಿಂದ ಪವಿತ್ರ ಗುಡಾರಕ್ಕೆ ಬರುತ್ತಿದ್ದ ಬಡವರು, ದೀನದಲಿತರು ಹೀಗೆ ಎಷ್ಟೋ ಜನರು ಬರೇ ನೋವು, ಅವಮಾನ, ನಿರಾಸೆಯಿಂದ ವಾಪಸ್ಸು ಹೋಗುತ್ತಿದ್ದದ್ದನ್ನು ಅವನು ನೋಡಿರಬೇಕಲ್ಲವೇ? ಹೊಫ್ನಿ ಫೀನೆಹಾಸರು ಯೆಹೋವನ ನೈತಿಕ ಮಟ್ಟಗಳನ್ನೂ ಕಡೆಗಣಿಸಿ ಗುಡಾರದಲ್ಲಿ ಸೇವೆಮಾಡುತ್ತಿದ್ದ ಕೆಲವು ಸ್ತ್ರೀಯರೊಡನೆ ಸಂಗಮಿಸುತ್ತಿದ್ದಾರೆಂದು ತಿಳಿದಾಗ ಸಮುವೇಲನಿಗೆ ಹೇಗನಿಸಿರಬೇಕಲ್ಲವೇ? (1 ಸಮು. 2:22) ಇದನ್ನೆಲ್ಲ ಏಲಿ ಸರಿಮಾಡುವನೆಂದು ಅವನು ನಿರೀಕ್ಷಿಸಿರಬಹುದು.

ಏಲಿಯ ಪುತ್ರರ ದುಷ್ಟತನ ನೋಡಿ ಸಮುವೇಲ ಮನಸ್ಸಿನಲ್ಲಿ ತುಂಬ ನೊಂದುಕೊಂಡಿರಬೇಕು

14 ದಿನೇ ದಿನೇ ಹೆಚ್ಚಾಗುತ್ತಿದ್ದ ಈ ಘೋರ ಅನ್ಯಾಯವನ್ನು ಸರಿಪಡಿಸುವ ಅಧಿಕಾರ ಏಲಿಗಿತ್ತು. ಮಹಾ ಯಾಜಕನಾಗಿದ್ದ ಅವನು ಗುಡಾರದಲ್ಲಿ ನಡೆಯುವ ಎಲ್ಲದಕ್ಕೂ ಜವಾಬ್ದಾರನಾಗಿದ್ದ ಕಾರಣ ಕ್ರಮ ತಕ್ಕೊಳ್ಳಬೇಕಿತ್ತು. ಅಲ್ಲದೆ ಒಬ್ಬ ತಂದೆಯಾಗಿ ತನ್ನ ಪುತ್ರರನ್ನು ಸರಿದಾರಿಗೆ ತರುವ ಹೊಣೆ ಅವನದ್ದಾಗಿತ್ತು. ಏಕೆಂದರೆ ಅವರ ದುಷ್ಕೃತ್ಯಗಳಿಂದ ಸ್ವತಃ ಅವರಿಗೂ ಅಸಂಖ್ಯಾತ ಜನರಿಗೂ ಹಾನಿಯಾಗುತ್ತಿತ್ತು. ಆದರೆ ಏಲಿ ಒಬ್ಬ ತಂದೆ ಮತ್ತು ಮಹಾ  ಯಾಜಕನಾಗಿ ತನ್ನ ಕರ್ತವ್ಯ ಪೂರೈಸಲಿಲ್ಲ. ತನ್ನ ಪುತ್ರರಿಗೆ ಒಂದೆರಡು ಮಾತು ಹೇಳಿ ಸೌಮ್ಯವಾಗಿ ಗದರಿಸಿದನಷ್ಟೆ. (1 ಸಮುವೇಲ 2:23-25 ಓದಿ.) ಆದರೆ ಅವರಿಗೆ ನಿಜವಾಗಿ ಕಠಿನ ಶಿಸ್ತು ಕ್ರಮದ ಅಗತ್ಯವಿತ್ತು. ಅವರು ಮಾಡುತ್ತಿದ್ದದ್ದು ಮರಣದಂಡನೆಗೆ ಯೋಗ್ಯವಾದ ಪಾಪಗಳನ್ನು!

15. (1) ಯೆಹೋವನು ಏಲಿಗೆ ಯಾವ ತೀಕ್ಷ್ಣ ಸಂದೇಶವನ್ನು ಕೊಟ್ಟನು? (2) ಈ ಎಚ್ಚರಿಕೆಗೆ ಏಲಿ ಕುಟುಂಬ ಹೇಗೆ ಪ್ರತಿಕ್ರಿಯಿಸಿತು?

15 ಈ ಕೆಟ್ಟತನ ಎಷ್ಟು ವಿಪರೀತಕ್ಕೆ ಹೋಯಿತೆಂದರೆ ‘ದೇವರ ಮನುಷ್ಯನೊಬ್ಬನು’ ಅಂದರೆ ಪ್ರವಾದಿಯು ಏಲಿಗೆ ತೀಕ್ಷ್ಣ ನ್ಯಾಯತೀರ್ಪಿನ ಸಂದೇಶವನ್ನು ಕೊಟ್ಟನು. ಈ ಪ್ರವಾದಿಯನ್ನು (ಇವನ ಹೆಸರು ಬೈಬಲಿನಲ್ಲಿಲ್ಲ) ಕಳುಹಿಸಿದ್ದು ಯೆಹೋವನೇ. ‘ನೀನು ನನ್ನನ್ನು ಗೌರವಿಸುವದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸಿದಿ’ ಎಂದು ಯೆಹೋವನು ಏಲಿಗೆ ಹೇಳಿದನು. ಅವನ ದುಷ್ಟ ಪುತ್ರರು ಒಂದೇ ದಿನದಲ್ಲಿ ಸಾಯುವರು, ಅವನ ಕುಟುಂಬ ಭಾರೀ ಕಷ್ಟಕ್ಕೊಳಗಾಗುವುದು ಮಾತ್ರವಲ್ಲ ಅಮೂಲ್ಯ ಯಾಜಕ ಸೇವೆಯನ್ನೂ ಕಳಕೊಳ್ಳುವುದು ಎಂದು ಮುಂತಿಳಿಸಿದನು. ಈ ಕಟ್ಟೆಚ್ಚರಿಕೆ ಕೇಳಿದ ನಂತರವಾದರೂ ಆ ಇಡೀ ಕುಟುಂಬ ಬದಲಾಯಿತೇ? ಇಲ್ಲ ಎಂದು ಬೈಬಲ್‌ ವೃತ್ತಾಂತ ತೋರಿಸುತ್ತದೆ.—1 ಸಮು. 2:27–3:1.

16. (1) ಎಳೆಯ ಸಮುವೇಲನ ಪ್ರಗತಿಯ ಕುರಿತ ಯಾವ ಮಾತುಗಳು ವೃತ್ತಾಂತದಲ್ಲಿವೆ? (2) ಆ ಮಾತುಗಳು ನಿಮ್ಮನ್ನು ಪ್ರೋತ್ಸಾಹಿಸಿತೇ? ವಿವರಿಸಿ.

16 ಇಂಥ ನೀತಿಭ್ರಷ್ಟ ಕೃತ್ಯಗಳು ಎಳೆಯ ಸಮುವೇಲನ ಮೇಲೆ ಯಾವ ಪರಿಣಾಮ ಬೀರಿದವು? ಈ ಕರಾಳ ವೃತ್ತಾಂತದಲ್ಲಿ ಸಮುವೇಲನ ಬೆಳವಣಿಗೆ ಮತ್ತು ಪ್ರಗತಿಯ ಕುರಿತ ಒಳ್ಳೇ ಮಾತುಗಳು ಬೆಳಕಿನ ಕಿರಣಗಳಂತಿವೆ. 1 ಸಮುವೇಲ 2:18 ನ್ನು ನೆನಪಿಸಿಕೊಳ್ಳಿ. “ಬಾಲಕನಾದ ಸಮುವೇಲನು . . . ಯೆಹೋವನ ಸಾನ್ನಿಧ್ಯಸೇವೆಯನ್ನು” ನಂಬಿಗಸ್ತಿಕೆಯಿಂದ ಮಾಡುತ್ತಿದ್ದನೆಂದು ಆ ವಚನ ತೋರಿಸುತ್ತದೆ. ಆ ಚಿಕ್ಕ ಪ್ರಾಯದಲ್ಲೇ ಸಮುವೇಲನು ದೇವರ ಸೇವೆಯ ಮೇಲೆ ಗಮನ ನೆಟ್ಟನು. ಅದೇ ಅಧ್ಯಾಯದ 21ನೇ ವಚನದಲ್ಲಿ ಇನ್ನಷ್ಟು ಪ್ರೋತ್ಸಾಹಕರ ವಿಷಯವೊಂದನ್ನು ಓದುತ್ತೇವೆ: “ಬಾಲಕನಾಗಿದ್ದ ಸಮುವೇಲನು ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದನು.” ಸಮುವೇಲನು ದೊಡ್ಡವನಾಗುತ್ತಾ ಹೋದಂತೆ ಸ್ವರ್ಗೀಯ ತಂದೆಯಾದ ಯೆಹೋವನೊಂದಿಗಿನ ಅವನ ಬಂಧ ಇನ್ನಷ್ಟು ಬಲಗೊಳ್ಳುತ್ತಾ ಹೋಯಿತು. ನಮಗೂ ಯೆಹೋವನೊಂದಿಗೆ ಇಷ್ಟೊಂದು ಆಪ್ತವಾದ ವೈಯಕ್ತಿಕ ಸಂಬಂಧವಿದ್ದರೆ ಯಾವುದೇ ರೀತಿಯ ನೀತಿಭ್ರಷ್ಟತೆ ನಮ್ಮ ಮೇಲೆ ಕಿಂಚಿತ್ತೂ ಪರಿಣಾಮ ಬೀರದಂತೆ ಅದು ಕಾಪಾಡುತ್ತದೆ.

17, 18. (1) ತಮ್ಮ ಸುತ್ತ ನೀತಿಭ್ರಷ್ಟ ಕೃತ್ಯಗಳು ನಡೆಯುತ್ತಿರುವಾಗ ಕ್ರೈಸ್ತ ಯುವಜನರು ಸಮುವೇಲನ ಮಾದರಿಯನ್ನು ಹೇಗೆ ಅನುಕರಿಸಬಹುದು? (2) ಸಮುವೇಲನು ನಡಕೊಂಡ ರೀತಿ ಸರಿಯಾಗಿತ್ತೆಂದು ಯಾವುದು ತೋರಿಸುತ್ತದೆ?

17 ಮಹಾ ಯಾಜಕ ಏಲಿ ಮತ್ತವನ ಪುತ್ರರೇ ಇಂಥ ಪಾಪಗಳನ್ನು ಮಾಡುತ್ತಿರುವಾಗ ತಾನೂ ತನಗಿಷ್ಟ ಬಂದಂತೆ ನಡೆಯಬಹುದೆಂದು ಸಮುವೇಲ ನೆನಸಬಹುದಿತ್ತು. ಆದರೆ ಅವನು ಹಾಗೆ ನೆನಸಲಿಲ್ಲ. ಅಧಿಕಾರದ ಸ್ಥಾನದಲ್ಲಿರುವವರು ಅಥವಾ ಬೇರಾರೊ ನಡೆಸುವ ನೀತಿಭ್ರಷ್ಟ ಕೃತ್ಯಗಳನ್ನು ನೆಪವಾಗಿಟ್ಟುಕೊಂಡು ನಾವು ತಪ್ಪು ದಾರಿ ಹಿಡಿಯುವುದು ಸರಿಯಲ್ಲ. ಇಂದು ಅನೇಕ ಕ್ರೈಸ್ತ ಯುವಜನರು ಕೂಡ ಸಮುವೇಲನಂತಿದ್ದಾರೆ. ತಮ್ಮ ಸುತ್ತಲಿರುವವರು ಒಳ್ಳೇ ಮಾದರಿಯಿಡಲು ತಪ್ಪಿದರೂ ಇವರು ‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವರಾಗುತ್ತಿದ್ದಾರೆ.’ ಅಂದರೆ ಯೆಹೋವನೊಟ್ಟಿಗೆ ಆಪ್ತವಾದ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ.

 18 ಸಮುವೇಲನು ಈ ರೀತಿ ನಡೆದುಕೊಂಡದ್ದರ ಫಲಿತಾಂಶವೇನಾಗಿತ್ತು? “ಬಾಲಕನಾದ ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ” ಅಂದರೆ ಮೆಚ್ಚುಗೆಗೆ ಪಾತ್ರನಾದನು ಎನ್ನುತ್ತದೆ ಬೈಬಲ್‌. (1 ಸಮು. 2:26) ಹೌದು, ಯಾರ ಮೆಚ್ಚುಗೆ ಪಡೆಯುವುದು ಮುಖ್ಯವಾಗಿತ್ತೊ ಅವರೆಲ್ಲರ ಮೆಚ್ಚುಗೆಯನ್ನು ಸಮುವೇಲ ಪಡೆದನು. ಅದರಲ್ಲೂ ಸ್ವತಃ ಯೆಹೋವನು, ಅವನು ನಡೆಸಿದ ನಂಬಿಗಸ್ತ ಜೀವನಕ್ಕಾಗಿ ಅವನನ್ನು ತುಂಬ ಇಷ್ಟಪಟ್ಟನು. ಶೀಲೋವಿನಲ್ಲಿ ನಡೆಯುತ್ತಿದ್ದ ಕೆಟ್ಟತನಕ್ಕೆ ತನ್ನ ದೇವರು ಕೊನೆ ತರುವನೆಂಬ ಭರವಸೆ ಸಮುವೇಲನಿಗಿತ್ತು. ಆದರೆ ಯಾವಾಗ ಎಂಬ ಪ್ರಶ್ನೆ ಅವನ ಮನಸ್ಸಿನಲ್ಲಿದ್ದಿರಬಹುದು. ಆ ಪ್ರಶ್ನೆಗೆ ಒಂದು ರಾತ್ರಿ ಅವನಿಗೆ ಉತ್ತರ ಸಿಕ್ಕಿತು.

“ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ”

19, 20. (1) ಒಮ್ಮೆ ದೇವಗುಡಾರದಲ್ಲಿ ಸಮುವೇಲನಿಗಾದ ಅನುಭವವನ್ನು ವರ್ಣಿಸಿ. (2) ಅವನು ಏಲಿಯೊಂದಿಗೆ ಹೇಗೆ ನಡಕೊಂಡನು? (3) ತನ್ನ ಜೊತೆ ಮಾತಾಡುತ್ತಿರುವುದು ಯಾರೆಂದು ಸಮುವೇಲನಿಗೆ ಹೇಗೆ ಗೊತ್ತಾಯಿತು?

19 ರಾತ್ರಿ ಕಳೆದು ಇನ್ನೇನು ಬೆಳಗಾಗುವುದರಲ್ಲಿತ್ತು. ಎಲ್ಲೆಡೆ ಇನ್ನೂ ಕತ್ತಲು. ದೇವಗುಡಾರದ ದೊಡ್ಡ ದೀಪ ಇನ್ನೂ ಉರಿಯುತ್ತಿತ್ತು. ನೀರವ ವಾತಾವರಣ. ಮಲಗಿದ್ದ ಸಮುವೇಲನಿಗೆ ಯಾರೋ ಕರೆದಂತಾಯಿತು. ಏಲಿಯೇ ಇರಬಹುದೆಂದು ನೆನಸಿದನು. ಏಲಿ ಈಗ ಹಣ್ಣುಹಣ್ಣು ಮುದುಕನಾಗಿದ್ದ, ಅವನ ದೃಷ್ಟಿ ಮೊಬ್ಬಾಗಿತ್ತು. ಸಮುವೇಲ ಎದ್ದು ಅವನ ಬಳಿ “ಒಡನೆ” ಓಡಿಹೋದನು. ಆ ಬಾಲಕ ಬರಿಗಾಲಿನಲ್ಲಿ ದಡಬಡ ಅಂತ ಓಡಿಹೋಗಿ ಏಲಿಗೆ ಏನು ಬೇಕೆಂದು ನೋಡುವುದನ್ನು ಮನಸ್ಸಲ್ಲೇ ಕಲ್ಪಿಸಿಕೊಳ್ಳಬಲ್ಲಿರಾ? ಸಮುವೇಲನು ಏಲಿಯೊಂದಿಗೆ ದಯೆ, ಗೌರವದಿಂದ ನಡಕೊಂಡದ್ದನ್ನು ನೆನಸುವಾಗ ಹೃದಯ ತುಂಬಿಬರುತ್ತದಲ್ಲವೇ? ಏಲಿ ಪಾಪಮಾಡಿದ್ದರೂ ಅವನಿನ್ನೂ ಯೆಹೋವನ ನೇಮಿತ ಮಹಾ ಯಾಜಕನೆಂಬುದನ್ನು ಸಮುವೇಲ ಮರೆತಿರಲಿಲ್ಲ.—1 ಸಮು. 3:2-5.

20 ಅವನು ಏಲಿಯನ್ನು ಎಬ್ಬಿಸಿ, “ಇಗೋ ಬಂದಿದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ” ಅಂದನು. ಆದರೆ ಏಲಿ  ಅವನಿಗೆ ‘ನಾನು ಕರೆಯಲಿಲ್ಲ, ಹೋಗಿ ಮಲಗಿಕೊ’ ಅಂತ ಹೇಳಿದನು. ಪುನಃ ಎರಡು ಬಾರಿ ಹಾಗೆಯೇ ಆಯಿತು! ಆಗ ಏಲಿಗೆ ಏನು ಆಗುತ್ತಿದೆಯೆಂದು ಗೊತ್ತಾಯಿತು. ಆ ಸಮಯದಲ್ಲಿ ಯೆಹೋವನು ತನ್ನ ಜನರಿಗೆ ಪ್ರವಾದನಾತ್ಮಕ ಸಂದೇಶಗಳನ್ನು ಅಥವಾ ದರ್ಶನಗಳನ್ನು ಕೊಡುವುದು ವಿರಳವಾಗಿತ್ತು. ಅದಕ್ಕೆ ಕಾರಣ ಏನೆಂಬುದು ಸ್ಪಷ್ಟ. ಆದರೆ ಈಗ ಯೆಹೋವನು ಪುನಃ ತನ್ನ ಜನರಿಗೆ ಸಂದೇಶಗಳನ್ನು ಕೊಡಲಾರಂಭಿಸಿದ್ದಾನೆ, ಅದೂ ಈ ಹುಡುಗನ ಮೂಲಕ ಎಂದು ಏಲಿಗೆ ತಿಳಿಯಿತು. ಅವನು ಸಮುವೇಲನಿಗೆ ಮಲಗಲು ಹೇಳಿ, ಇನ್ನೊಮ್ಮೆ ಆ ಧ್ವನಿ ಕೇಳಿ ಬಂದರೆ ಏನು ಹೇಳಬೇಕೆಂದೂ ತಿಳಿಸಿದನು. ಸಮುವೇಲನು ಹಾಗೇ ಮಾಡಿದನು. ಸ್ವಲ್ಪ ಹೊತ್ತಿನಲ್ಲಿ “ಸಮುವೇಲನೇ, ಸಮುವೇಲನೇ” ಎಂಬ ಧ್ವನಿ ಕೇಳಿ ಬಂದಾಗ ಅವನು “ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ” ಅಥವಾ ಇನ್ನೊಂದು ಭಾಷಾಂತರ (ಪರಿಶುದ್ಧ ಬೈಬಲ್‌ *) ಹೇಳುವಂತೆ “ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.—1 ಸಮು. 3:1, 5-10.

21. (1) ಇಂದು ಯೆಹೋವನ ಮಾತನ್ನು ಹೇಗೆ ಕೇಳಿಸಿಕೊಳ್ಳಬಲ್ಲೆವು? (2) ಹಾಗೆ ಕೇಳಿಸಿಕೊಳ್ಳುವುದು ಏಕೆ ಪ್ರಯೋಜನಕರ?

21 ಈಗ ಶೀಲೋವಿನಲ್ಲಿ ಯೆಹೋವನ ಮಾತನ್ನು ಕೇಳುವ ಸೇವಕನೊಬ್ಬನಿದ್ದ. ಆ ಸೇವಕನಾದ ಸಮುವೇಲನು ಜೀವನಪರ್ಯಂತ ಯೆಹೋವನ ಮಾತು ಕೇಳಿದನು. ನಿಮ್ಮ ಬಗ್ಗೆ ಏನು? ರಾತ್ರಿ ಹೊತ್ತಿನಲ್ಲಿ ಅಶರೀರವಾಣಿ ಕೇಳಿಸಿಕೊಳ್ಳಲಿಕ್ಕಾಗಿ ನಾವೇನು ಕಾಯುತ್ತಾ ಇರಬೇಕಾಗಿಲ್ಲ. ಏಕೆಂದರೆ ದೇವರ ಮಾತು ಇಂದು ಒಂದರ್ಥದಲ್ಲಿ ನಮಗೆ ಯಾವಾಗಲೂ ಕೇಳಿಬರುತ್ತಿದೆ. ಅದು ಬೈಬಲಿನ ಮೂಲಕವೇ. ಪೂರ್ಣಗೊಂಡಿರುವ ಆತನ ಆ ವಾಕ್ಯದಲ್ಲಿ ಆತನು ಹೇಳಿರುವ ಎಲ್ಲ ಮಾತುಗಳಿವೆ. ನಾವೆಷ್ಟು ಹೆಚ್ಚಾಗಿ ದೇವರ ಮಾತಿಗೆ ಕಿವಿಗೊಟ್ಟು ಅದರಂತೆ ನಡೆದುಕೊಳ್ಳುತ್ತೇವೋ ನಮ್ಮ ನಂಬಿಕೆ ಅಷ್ಟೇ ಹೆಚ್ಚು ಬಲಗೊಳ್ಳುತ್ತದೆ. ಸಮುವೇಲನ ವಿಷಯದಲ್ಲೂ ಹೀಗೆಯೇ ಆಯಿತು.

ಸಮುವೇಲನಿಗೆ ಹೆದರಿಕೆಯಿದ್ದರೂ ಯೆಹೋವನ ನ್ಯಾಯತೀರ್ಪಿನ ಸಂದೇಶವನ್ನು ಏಲಿಗೆ ಯಥಾವತ್ತಾಗಿ ತಿಳಿಸಿದನು

22, 23. (1) ಸಮುವೇಲನು ಏಲಿಗೆ ತಿಳಿಸಿದ ಸಂದೇಶ ಹೇಗೆ ನಿಜವಾಯಿತು? (2) ಸಮುವೇಲನ ಕೀರ್ತಿ ಹೇಗೆ ಬೆಳಗುತ್ತಾ ಹೋಯಿತು?

22 ಆ ರಾತ್ರಿ ನಡೆದ ಘಟನೆ ಸಮುವೇಲನ ಜೀವನದಲ್ಲಿ ಒಂದು ಮೈಲಿಗಲ್ಲಾಗಿತ್ತು. ಅವನು ಅಂದಿನಿಂದ ಯೆಹೋವನೊಂದಿಗೆ ಒಂದು ವಿಶೇಷ ಸಂಬಂಧ ಹೊಂದಿದನು ಅಂದರೆ ದೇವರ ಪ್ರವಾದಿಯೂ ವಕ್ತಾರನೂ ಆದನು. ಆ ಬಾಲಕ ಏಲಿಯ ಕುಟುಂಬದ ವಿರುದ್ಧ ಯೆಹೋವನು ಈಗಾಗಲೇ ನುಡಿದಿದ್ದ ಪ್ರವಾದನೆ ಬೇಗನೆ ನೆರವೇರಲಿದೆ ಅಂತ ಏಲಿಗೆ ಹೇಳಬೇಕಿತ್ತು. ಆರಂಭದಲ್ಲಿ ಹುಡುಗ ಹೆದರಿದನು. ಹಾಗಿದ್ದರೂ ಧೈರ್ಯಮಾಡಿ ಅದನ್ನು ಏಲಿಗೆ ತಿಳಿಸಿದನು. ಏಲಿ ಆ ದೈವಿಕ ತೀರ್ಪನ್ನು ದೀನತೆಯಿಂದ ಸ್ವೀಕರಿಸಿದನು. ಸಕಾಲದಲ್ಲಿ ಎಲ್ಲವೂ ಯೆಹೋವನು ಹೇಳಿದಂತೆಯೇ ಆಯಿತು. ಇಸ್ರಾಯೇಲ್ಯರು ಫಿಲಿಷ್ಟಿಯರ ವಿರುದ್ಧ ಯುದ್ಧಕ್ಕಿಳಿದರು. ಅದೇ ದಿನ ಹೊಫ್ನಿ, ಫೀನೆಹಾಸರಿಬ್ಬರೂ ಹತರಾದರು. ಯೆಹೋವನ ಪವಿತ್ರ ಮಂಜೂಷ ಶತ್ರುವಶವಾದದ್ದನ್ನು ಕೇಳಿದೊಡನೆ ಏಲಿಯೂ ಸತ್ತುಹೋದನು.—1 ಸಮು. 3:10-18; 4:1-18.

23 ಆದರೆ ನಂಬಿಗಸ್ತ ಪ್ರವಾದಿ ಎಂದು ಸಮುವೇಲನಿಗಿದ್ದ ಕೀರ್ತಿ ಬೆಳಗುತ್ತಾ ಹೋಯಿತು. ಅವನು ನುಡಿದ ಪ್ರವಾದನೆಗಳಲ್ಲಿ ಒಂದೂ ಬಿದ್ದುಹೋಗಲಿಲ್ಲ ಏಕೆಂದರೆ ‘ಯೆಹೋವನು ಅವನೊಡನೆ ಇದ್ದನು’ ಎನ್ನುತ್ತದೆ ವೃತ್ತಾಂತ.—1 ಸಮುವೇಲ 3:19 ಓದಿ.

 ‘ಸಮುವೇಲ ಯೆಹೋವನಿಗೆ ಮೊರೆಯಿಟ್ಟನು’

24. (1) ಇಸ್ರಾಯೇಲ್ಯರ ಬೇಡಿಕೆ ಏನಾಗಿತ್ತು? (2) ಇದು ಏಕೆ ಒಂದು ಗಂಭೀರ ಪಾಪವಾಗಿತ್ತು?

24 ಇಸ್ರಾಯೇಲ್ಯರು ಸಮುವೇಲನ ನಂಬಿಗಸ್ತಿಕೆಯ ಮಾದರಿಯನ್ನು ಅನುಸರಿಸಿ ಯೆಹೋವನಿಗೆ ಆಪ್ತರಾದರೊ? ನಂಬಿಗಸ್ತ ಜನರಾದರೊ? ಇಲ್ಲ! ಕಾಲಾನಂತರ ಅವರು ತಮಗೆ ನ್ಯಾಯ ತೀರಿಸಲು ಬೇರೆ ಜನಾಂಗಗಳಿಗಿರುವಂತೆ ಮಾನವ ರಾಜ ಬೇಕು, ಪ್ರವಾದಿ ಬೇಡ ಅಂದರು. ಯೆಹೋವನ ನಿರ್ದೇಶನದ ಮೇರೆಗೆ ಸಮುವೇಲ ಅವರ ಈ ಬೇಡಿಕೆಯನ್ನು ಪೂರೈಸಿದನು. ಆದರೆ ಅವರು ಮಾಡಿದ ಪಾಪ ಎಷ್ಟು ಗಂಭೀರ ಎಂಬುದನ್ನೂ ಅವರ ಅರಿವಿಗೆ ತರಬೇಕಿತ್ತು. ಏಕೆಂದರೆ ಅವರು ತಿರಸ್ಕರಿಸಿದ್ದು ಮನುಷ್ಯನನ್ನಲ್ಲ, ಸ್ವತಃ ಯೆಹೋವನನ್ನೇ! ಇದನ್ನು ಮನಗಾಣಿಸಲಿಕ್ಕೆಂದೇ ಸಮುವೇಲ ಅವರೆಲ್ಲರನ್ನು ಗಿಲ್ಗಾಲಿನಲ್ಲಿ ಒಟ್ಟುಸೇರಿಸಿದನು.

ಸಮುವೇಲನು ನಂಬಿಕೆಯಿಂದ ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ಯೆಹೋವನು ಗುಡುಗುಮಳೆ ಬರಮಾಡಿದನು

25, 26. ಇಸ್ರಾಯೇಲ್ಯರು ಯೆಹೋವನ ವಿರುದ್ಧ ಮಾಡಿದ ಪಾಪದ ಗಂಭೀರತೆಯನ್ನು ವೃದ್ಧ ಸಮುವೇಲನು ಜನರಿಗೆ ಮನಗಾಣಿಸಿದ್ದು ಹೇಗೆ?

25 ಈಗ ನಾವು ಗಿಲ್ಗಾಲಿನಲ್ಲಿ ಸಮುವೇಲನು ಇಸ್ರಾಯೇಲ್ಯರನ್ನು ಉದ್ದೇಶಿಸಿ ಮಾತಾಡಲಿಕ್ಕಿದ್ದ ಆ ಉದ್ವಿಗ್ನ ಸಮಯವನ್ನು ಪುನಃ ಮನಸ್ಸಿಗೆ ತರೋಣ. ವೃದ್ಧ ಸಮುವೇಲ ತಾನು ಜೀವನಪರ್ಯಂತ ನಂಬಿಗಸ್ತಿಕೆಯಿಂದ ನಡೆದದ್ದರ ಬಗ್ಗೆ ಅವರಿಗೆ ನೆನಪಿಸಿದ್ದನು. ಆಮೇಲೆ ಅವನು ‘ಯೆಹೋವನಿಗೆ ಮೊರೆಯಿಟ್ಟನು’ ಎನ್ನುತ್ತದೆ ವೃತ್ತಾಂತ. ಗುಡುಗುಮಳೆ ಸುರಿಸುವಂತೆ ಯೆಹೋವನನ್ನು ಅವನು ಕೇಳಿಕೊಂಡನು.—1 ಸಮು. 12:17, 18.

26 ಗುಡುಗುಮಳೆ! ಅದೂ ಬೇಸಗೆಯಲ್ಲಿ? ಅದು ಅಲ್ಲಿವರೆಗೆ ಕಂಡುಕೇಳರಿಯದ ವಿಷಯವಾಗಿತ್ತು! ಇದರ ಬಗ್ಗೆ ಜನರು ಸ್ವಲ್ಪ ಸಂದೇಹಪಟ್ಟಿದ್ದರೂ ಅಥವಾ ಅಪಹಾಸ್ಯ ಮಾಡಿದ್ದರೂ ಸ್ವಲ್ಪದರಲ್ಲೇ ಅದಕ್ಕೆಲ್ಲ ತೆರೆಬಿತ್ತು. ಒಮ್ಮಿಂದೊಮ್ಮೆಲೆ ಆಕಾಶದಲ್ಲಿ ಕಾರ್ಮೋಡಗಳು ಕವಿದವು! ಬೀಸುತ್ತಿದ್ದ ಗಾಳಿಯ ರಭಸಕ್ಕೆ ಹೊಲದಲ್ಲಿದ್ದ ಗೋದಿಯ ತೆನೆಗಳು ಹೊಯ್ದಾಡಿದವು. ಗುಡುಗಿನ ಗರ್ಜನೆ ಆರಂಭವಾಯಿತು. ಕೊನೆಗೆ ಧಾರಾಕಾರ ಮಳೆ ಸುರಿಯಿತು. ಅಲ್ಲಿದ್ದವರ ಪ್ರತಿಕ್ರಿಯೆ? ‘ಜನರೆಲ್ಲರು ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟರು.’ ಕೊನೆಗೂ ತಾವೆಷ್ಟು ಗಂಭೀರ ಪಾಪ ಮಾಡಿದ್ದೇವೆಂದು ಅವರು ಅರಿತುಕೊಂಡರು.—1 ಸಮು. 12:18, 19.

27. ಸಮುವೇಲನ ನಂಬಿಕೆಯನ್ನು ಅನುಕರಿಸುವವರಿಗೆ ಯೆಹೋವನು ಹೇಗೆ ಪ್ರತಿಫಲ ಕೊಡುತ್ತಾನೆ?

27 ಆ ದಂಗೆಕೋರ ಜನರಿಗೆ ಅವರ ತಪ್ಪಿನ ಅರಿವುಂಟುಮಾಡಲು ಯೆಹೋವನು ಸಮುವೇಲನಿಗೆ ಸಹಾಯಮಾಡಿದನು. ಹೀಗೆ ಸಮುವೇಲನ ನಂಬಿಕೆಗೆ ಪ್ರತಿಫಲಕೊಟ್ಟನು. ಸಮುವೇಲನ ಬಾಲ್ಯದಿಂದಲೇ ಯೆಹೋವನು ಈ ರೀತಿಯಲ್ಲಿ ಅವನ ಪರವಾಗಿ ಕ್ರಮಗೈಯುತ್ತಾ ಬಂದಿದ್ದನು. ಯೆಹೋವನು ಇಂದಿಗೂ ಬದಲಾಗಿಲ್ಲ. ಸಮುವೇಲನ ನಂಬಿಗಸ್ತ ಜೀವನ ಮಾದರಿಯನ್ನು ಅನುಕರಿಸುವವರೆಲ್ಲರನ್ನು ಆತನು ಈಗಲೂ ಬೆಂಬಲಿಸುತ್ತಾನೆ.

^ ಪ್ಯಾರ. 5 ನಾಜೀರರಾಗಿರುವ ಹರಕೆಹೊತ್ತವರು ಮದ್ಯ ಸೇವಿಸಬಾರದಿತ್ತು, ಕೂದಲನ್ನು ಕತ್ತರಿಸಬಾರದಿತ್ತು. ಹೆಚ್ಚಿನವರು ನಿರ್ದಿಷ್ಟ ಅವಧಿಗೆ ಮಾತ್ರ ನಾಜೀರರಾಗಿರುವ ಹರಕೆ ಹೊರುತ್ತಿದ್ದರು. ಇನ್ನು ಕೆಲವರು ಜೀವನಪೂರ್ತಿ ನಾಜೀರರಾಗಿದ್ದರು. ಉದಾಹರಣೆಗೆ ಸಂಸೋನ, ಸಮುವೇಲ, ಸ್ನಾನಿಕನಾದ ಯೋಹಾನ.

^ ಪ್ಯಾರ. 9 ದೇವಗುಡಾರವು ಆಯತಾಕಾರದ್ದು. ಅದು ಮರದ ಚೌಕಟ್ಟಿನ ಮೇಲಿದ್ದ ಒಂದು ರೀತಿಯ ದೊಡ್ಡ ಡೇರೆ. ಆ ಗುಡಾರಕ್ಕಾಗಿ ಬಳಸಲಾಗಿದ್ದ ವಸ್ತುಗಳು ಶ್ರೇಷ್ಠ ಗುಣಮಟ್ಟದ್ದಾಗಿದ್ದವು. ಕಡಲುಹಂದಿಯ ತೊಗಲು, ಕಸೂತಿ ಹಾಕಿದ ಸುಂದರ ಬಟ್ಟೆಯನ್ನು ಬಳಸಲಾಗಿತ್ತು. ದುಬಾರಿ ಮರಕ್ಕೆ ಚಿನ್ನ, ಬೆಳ್ಳಿಯ ತಗಡನ್ನು ಹೊದಿಸಲಾಗಿತ್ತು. ಈ ಗುಡಾರ ಆಯತಾಕಾರದ ಅಂಗಳದೊಳಗಿತ್ತು. ಅಂಗಳದಲ್ಲಿ ಅತ್ಯಾಕರ್ಷಕ ಯಜ್ಞವೇದಿಯೂ ಇತ್ತು. ಸಮಯಾನಂತರ ಗುಡಾರದ ಬದಿಗಳಲ್ಲಿ ಯಾಜಕರಿಗಾಗಿ ಕೋಣೆಗಳನ್ನೂ ಕಟ್ಟಲಾಯಿತು. ಅಂಥದೊಂದು ಕೋಣೆಯಲ್ಲೇ ಸಮುವೇಲ ಮಲಗುತ್ತಿದ್ದಿರಬಹುದು.

^ ಪ್ಯಾರ. 12 ಅವರು ತೋರಿಸಿದ ಅಗೌರವದ ಎರಡು ಉದಾಹರಣೆಗಳು ಈ ವೃತ್ತಾಂತದಲ್ಲಿವೆ. ಒಂದು: ಯಾಜಕರು ಯಜ್ಞಾರ್ಪಿತ ಪ್ರಾಣಿಯ ನಿರ್ದಿಷ್ಟ ಭಾಗಗಳನ್ನು ಮಾತ್ರ ತಿನ್ನಬೇಕೆಂದು ಧರ್ಮಶಾಸ್ತ್ರ ತಿಳಿಸಿತ್ತು. (ಧರ್ಮೋ. 18:3) ಆದರೆ ಇದಕ್ಕೆ ವಿರುದ್ಧವಾದ ರೂಢಿಯನ್ನು ಆ ದುಷ್ಟ ಯಾಜಕರು ಆರಂಭಿಸಿದ್ದರು. ಅವರು ತಮ್ಮ ಆಳುಗಳನ್ನು ಕಳುಹಿಸಿ ಹಂಡೆಯಲ್ಲಿ ಮಾಂಸ ಬೇಯುತ್ತಿದ್ದಾಗಲೇ ತ್ರಿಶೂಲ (ದೊಡ್ಡ ಮುಳ್ಳುಚಮಚ) ಚುಚ್ಚಿ, ಯಾವ ಒಳ್ಳೇ ತುಂಡು ಸಿಗುತ್ತದೊ ಅದನ್ನು ತರುವಂತೆ ಹೇಳುತ್ತಿದ್ದರು. ಇನ್ನೊಂದು: ಯಜ್ಞಗಳನ್ನು ಅರ್ಪಿಸಲು ವೇದಿಯ ಬಳಿ ಜನರು ಬಂದೊಡನೆ ದುಷ್ಟ ಯಾಜಕರು ತಮ್ಮ ಆಳನ್ನು ಕಳುಹಿಸಿ ಅವರನ್ನು ದಬಾಯಿಸಿ, ಅವರು ಪ್ರಾಣಿಯ ಕೊಬ್ಬನ್ನು ಯೆಹೋವನಿಗೆ ಅರ್ಪಿಸುವ ಮುಂಚೆಯೇ ಹಸಿಮಾಂಸವನ್ನು ಒತ್ತಾಯದಿಂದ ಕಿತ್ತುಕೊಳ್ಳುತ್ತಿದ್ದರು.—ಯಾಜ. 3:3-5; 1 ಸಮು. 2:13-17.

^ ಪ್ಯಾರ. 20 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.