ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ ಒಂಬತ್ತು

ವಿವೇಚನೆಯಿಂದ ಕ್ರಿಯೆಗೈದಾಕೆ

ವಿವೇಚನೆಯಿಂದ ಕ್ರಿಯೆಗೈದಾಕೆ

1-3. (1) ಅಬೀಗೈಲಳ ಮನೆಮಂದಿಯ ಮೇಲೆ ಏಕೆ ಅಪಾಯ ಬಂದೆರಗಲಿತ್ತು? (2) ಈ ಅಸಾಧಾರಣ ಮಹಿಳೆಯ ಬಗ್ಗೆ ನಾವೇನು ಕಲಿಯಲಿದ್ದೇವೆ?

ಅಬೀಗೈಲ್‌ ಬಳಿ ಓಡೋಡಿ ಬಂದಿದ್ದ ಯುವ ಸೇವಕನ ಕಣ್ಣುಗಳಲ್ಲಿ ಆತಂಕ ತುಂಬಿತ್ತು. ಅವನು ಭಯದಿಂದ ಕಂಗಾಲಾಗಿದ್ದ. ಏಕೆಂದರೆ ಅಬೀಗೈಲ್‌ ಗಂಡನಾದ ನಾಬಾಲನ ಮನೆಮಂದಿ ಮೇಲೆ ಒಂದು ದೊಡ್ಡ ಗಂಡಾಂತರ ಬಂದೆರಗಲಿತ್ತು. ಸುಮಾರು 400 ಯೋಧರು ಈಗಾಗಲೇ ದಾರಿಯಲ್ಲಿದ್ದರು. ಅವರ ಮನಸ್ಸಿನಲ್ಲಿ ಒಂದೇ ಗುರಿ. ನಾಬಾಲನ ಮನೆಯಲ್ಲಿನ ಎಲ್ಲ ಗಂಡಸರನ್ನು ಹತಿಸಬೇಕೆನ್ನುವುದೇ. ಏಕೆ?

2 ಇಷ್ಟಕ್ಕೆಲ್ಲ ಕಾರಣ ಅಬೀಗೈಲಳ ಗಂಡನಾದ ನಾಬಾಲನೇ. ಅವನ ಸೊಕ್ಕಿನ ನಿರ್ದಯ ವರ್ತನೆಯೇ. ಇದೇನೂ ಹೊಸತಲ್ಲ. ಮುಂಚೆಯೂ ಬೇರೆಯವರೊಂದಿಗೆ ಹಾಗೆ ನಡೆದುಕೊಂಡಿದ್ದ. ಆದರೆ ಈ ಸಲ ಅವನು ಅವಮಾನಿಸಿದ್ದು ಅಂಥಿಂಥವನನ್ನಲ್ಲ, ತಾಲೀಮು ಪಡೆದ ನಿಷ್ಠಾವಂತ ಯೋಧತಂಡದ ನೆಚ್ಚಿನ ಸೇನಾಪತಿಯನ್ನು! ಹಾಗಾಗಿ ನಡೆದದ್ದನ್ನು ನೋಡಿದ ಯುವ ಸೇವಕನೊಬ್ಬ ತನ್ನ ಜೀವವನ್ನು ಕೈಯಲ್ಲಿ ಹಿಡಿದು ಓಡಿಬಂದು ಅಬೀಗೈಲಳಿಗೆ ಸುದ್ದಿ ಮುಟ್ಟಿಸಿದ. ನಾಬಾಲನ ಕೈಕೆಳಗೆ ಬಹುಶಃ ಒಬ್ಬ ಕುರುಬನಾಗಿದ್ದ ಅವನಿಗೆ, ತಮ್ಮವರನ್ನು ಗಂಡಾಂತರದಿಂದ ರಕ್ಷಿಸಲು ಆಕೆ ಹೇಗಾದರೂ ದಾರಿ ಹುಡುಕುವಳೆಂಬ ಭರವಸೆ. ಆದರೆ ಒಂದು ಸೈನ್ಯದ ಎದುರು ಒಂಟಿ ಸ್ತ್ರೀ ತಾನೇ ಏನು ಮಾಡಲಿಕ್ಕಾಗುತ್ತದೆ?

ಒಂದು ಸೈನ್ಯದ ಎದುರು ಒಂಟಿ ಸ್ತ್ರೀ ತಾನೇ ಏನು ಮಾಡಲಿಕ್ಕಾಗುತ್ತದೆ?

3 ಮೊದಲು ಈ ಅಸಾಧಾರಣ ಮಹಿಳೆಯ ಬಗ್ಗೆ ಇನ್ನಷ್ಟನ್ನು ಕಲಿಯೋಣ. ಅಬೀಗೈಲ್‌ ಯಾರು? ಈ ಬಿಕ್ಕಟ್ಟು ತಲೆದೋರಿದ್ದು ಹೇಗೆ? ಅವಳ ನಂಬಿಕೆಯ ಮಾದರಿಯಿಂದ ನಾವೇನು ಕಲಿಯಬಲ್ಲೆವು?

‘ಬಹುಬುದ್ಧಿವಂತೆ ಮತ್ತು ಸುಂದರಿ’

4. ನಾಬಾಲ ಎಂಥ ವ್ಯಕ್ತಿಯಾಗಿದ್ದ?

4 ಅಬೀಗೈಲಳಿಗೆ ನಾಬಾಲ ಸರಿಯಾದ ಜೋಡಿಯಾಗಿರಲಿಲ್ಲ. ಅಬೀಗೈಲಳೇನೋ  ಮುತ್ತಿನಂಥ ಹೆಂಡತಿ. ಆದರೆ ಅವಳಿಗೆ ಸಿಕ್ಕಿದ ಗಂಡ ಒಬ್ಬ ನೀಚ. ಅವನ ಹತ್ತಿರ ಸಿಕ್ಕಾಪಟ್ಟೆ ಹಣ ಇತ್ತು. ಆ ದುಡ್ಡಿನ ಮದ ಅವನಲ್ಲಿ ‘ನಾನೇ ಪ್ರಧಾನ ಬೇರೆಲ್ಲರೂ ಅಧೀನ’ ಎಂಬ ಅಹಂ ಹುಟ್ಟಿಸಿತ್ತು. ಆದರೆ ಬೇರೆಯವರಿಗೆ ಅವನ ಬಗ್ಗೆ ಯಾವ ಅಭಿಪ್ರಾಯವಿತ್ತು? ಬೈಬಲಿನಲ್ಲಿ ಅವನನ್ನು ವರ್ಣಿಸಲು ಬಳಸಿರುವ ತುಚ್ಛ ಪದಗಳನ್ನು ಬೇರಾವ ವ್ಯಕ್ತಿಗೂ ಬಳಸಿಲ್ಲ. ಅವನ ಹೆಸರಿನ ಅರ್ಥ “ಬುದ್ಧಿಹೀನ” ಅಥವಾ “ಮೂರ್ಖ.” ಅವನು ಹುಟ್ಟಿದಾಗ ಹೆತ್ತವರು ಇಟ್ಟ ಹೆಸರು ಅದಾಗಿತ್ತೊ? ಇಲ್ಲವೇ ಅವನ ಗುಣದಿಂದಾಗಿ ಕಾಲಾನಂತರ ಅವನಿಗೆ ಅಂಟಿಕೊಂಡ ಅಡ್ಡಹೆಸರು ಅದಾಗಿತ್ತೊ? ಗೊತ್ತಿಲ್ಲ. ಏನೇ ಇರಲಿ, ಅವನ ನಡೆನುಡಿಗೆ ಆ ಹೆಸರು ಹೇಳಿಮಾಡಿಸಿದಂತಿತ್ತು. ಅವನು “ನಿಷ್ಠುರನೂ ದುಷ್ಕರ್ಮಿಯೂ ಆಗಿದ್ದ.” ದಬ್ಬಾಳಿಕೆ ಮಾಡುತ್ತಿದ್ದ, ಕುಡುಕನೂ ಆಗಿದ್ದ. ಅವನೆಂದರೆ ಎಲ್ಲರಿಗೆ ಭಯ, ಯಾರಿಗೂ ಇಷ್ಟವಾಗುತ್ತಿರಲಿಲ್ಲ.—1 ಸಮು. 25:2, 3, 17, 21, 25.

5, 6. (1) ಅಬೀಗೈಲಳಲ್ಲಿದ್ದ ಅತ್ಯಾಕರ್ಷಕ ಗುಣಗಳು ಯಾವುವೆಂದು ನಿಮಗನಿಸುತ್ತದೆ? (2) ಅಬೀಗೈಲಳ ಮದುವೆ ಮೂರ್ಖನಾದ ನಾಬಾಲನೊಂದಿಗೆ ಆಗಲು ಕಾರಣವೇನಿರಬಹುದು?

5 ನಾಬಾಲನಿಗೂ ಅಬೀಗೈಲಳಿಗೂ ರಾತ್ರಿ-ಹಗಲಿನಷ್ಟು ವ್ಯತ್ಯಾಸ. ಅವಳ ಹೆಸರಿನ ಅರ್ಥ “ನನ್ನ ತಂದೆ ಆನಂದಪಡುತ್ತಾನೆ” ಎಂದು. ಸಾಮಾನ್ಯವಾಗಿ ತಂದೆಯೊಬ್ಬನು ಸುಂದರಿಯಾಗಿರುವ ಮಗಳ ಬಗ್ಗೆ ಹೆಮ್ಮೆಪಡುತ್ತಾನೆ. ಆದರೆ ವಿವೇಕಿಯಾದ ತಂದೆಯು ಮಗಳ ಆಂತರಿಕ ಸೌಂದರ್ಯದ ಬಗ್ಗೆ ಹೆಚ್ಚು ಆನಂದಪಡುತ್ತಾನೆ. ರೂಪಲಾವಣ್ಯ ಇರುವ ಹೆಚ್ಚಿನವರಿಗೆ ವಿವೇಚನೆ, ವಿವೇಕ, ಧೈರ್ಯ, ನಂಬಿಕೆ ಇತ್ಯಾದಿ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯವೆಂದನಿಸುವುದಿಲ್ಲ. ಆದರೆ ಅಬೀಗೈಲ್‌ ಹಾಗಿರಲಿಲ್ಲ. ಅವಳಲ್ಲಿ ಸೌಂದರ್ಯವೂ ಇತ್ತು, ವಿವೇಚನೆಯೂ ಇತ್ತು. ಅದಕ್ಕಾಗಿ ಬೈಬಲ್‌ ಅವಳ ಬಗ್ಗೆ ಹೊಗಳಿ ಮಾತಾಡುತ್ತದೆ.1 ಸಮುವೇಲ 25:3 ಓದಿ.

6 ಚತುರೆಯಾದ ಈ ಯುವತಿ ಇಂಥ ಮೂರ್ಖನನ್ನು ಮದುವೆ ಆದದ್ದಾದರೂ ಹೇಗೆಂದು ಅನೇಕರಿಂದು ಸೋಜಿಗಪಡಬಹುದು. ನೆನಪಿಡಿ, ಬೈಬಲ್‌ ಕಾಲಗಳಲ್ಲಿ ಹೆಚ್ಚಾಗಿ ವಿವಾಹಗಳನ್ನು ಹೆತ್ತವರು ನಿಶ್ಚಯಿಸುತ್ತಿದ್ದರು. ಒಂದುವೇಳೆ ಅವರು ನಿಶ್ಚಯಿಸದಿದ್ದರೂ ಅವರ ಒಪ್ಪಿಗೆ ಪಡೆಯುವುದು ಮಹತ್ತ್ವದ್ದಾಗಿತ್ತು. ಅಬೀಗೈಲಳ ಹೆತ್ತವರು ನಾಬಾಲನ ಆಸ್ತಿಅಂತಸ್ತಿಗೆ ಮರುಳಾಗಿ ಈ ಮದುವೆಗೆ ಒಪ್ಪಿಗೆ ನೀಡಿದ್ದರೊ ಅಥವಾ ಅವರೇ ಅದನ್ನು ಏರ್ಪಡಿಸಿದ್ದರೊ? ಇಲ್ಲವೆ ಬಡತನಕ್ಕೆ ಕಟ್ಟುಬಿದ್ದು ಮಗಳನ್ನು ಅವನಿಗೆ ಗಂಟುಹಾಕಿದ್ದರೊ? ಏನೇ ಇರಲಿ, ನಾಬಾಲನ ಹಣವಂತೂ ಅವನನ್ನು ಅಬೀಗೈಲಳಿಗೆ ತಕ್ಕ ಗಂಡನನ್ನಾಗಿ ಮಾಡಲಿಲ್ಲ.

7. (1) ವಿವಾಹದ ಬಗ್ಗೆ ಸರಿಯಾದ ನೋಟವಿಟ್ಟುಕೊಳ್ಳುವಂತೆ ಮಕ್ಕಳಿಗೆ ಕಲಿಸಲಿಚ್ಛಿಸುವ ಹೆತ್ತವರು ಏನು ಮಾಡಬಾರದು? (2) ಅಬೀಗೈಲಳು ಏನು ಮಾಡಲು ಗಟ್ಟಿಮನಸ್ಸು ಮಾಡಿದ್ದಳು?

7 ವಿವೇಕವುಳ್ಳ ಹೆತ್ತವರು ತಮ್ಮ ಮಕ್ಕಳಿಗೆ ವಿವಾಹದ ವಿಷಯದಲ್ಲಿ ಸರಿಯಾದ ನೋಟವನ್ನಿಟ್ಟುಕೊಳ್ಳುವಂತೆ ತಪ್ಪದೆ ಕಲಿಸುತ್ತಾರೆ. ಹಣಕ್ಕಾಗಿ ಮದುವೆಯಾಗುವಂತೆ ಇಲ್ಲವೆ ವಯಸ್ಕರ ಪಾತ್ರಗಳನ್ನು, ಜವಾಬ್ದಾರಿಗಳನ್ನು ನಿಭಾಯಿಸಲಾಗದಷ್ಟು  ಎಳೆ ವಯಸ್ಸಿನಲ್ಲೇ ಜೋಡಿ ಹುಡುಕುವಂತೆ ತಮ್ಮ ಮಕ್ಕಳನ್ನು ಒತ್ತಾಯಿಸುವುದಿಲ್ಲ. (1 ಕೊರಿಂ. 7:36) ಅಬೀಗೈಲಳಿಗಾದರೋ ಈಗ ಚಿಂತಿಸಿ ಫಲವಿರಲಿಲ್ಲ. ಕಾಲ ಮಿಂಚಿಹೋಗಿತ್ತು. ಆಕೆ ನಾಬಾಲನನ್ನು ಮದುವೆಯಾಗಲು ಕಾರಣ ಏನೇ ಆಗಿರಲಿ ಗಂಡನೊಟ್ಟಿಗೆ ಆದಷ್ಟು ಹೊಂದಿಕೊಂಡು ಹೋಗಲು ಗಟ್ಟಿಮನಸ್ಸು ಮಾಡಿದ್ದಳು.

‘ಬಂದವರನ್ನು ಬೈದನು’

8. (1) ನಾಬಾಲನು ಅವಮಾನಿಸಿದ್ದು ಯಾರನ್ನು? (2) ಹೀಗೆ ಮಾಡಿದ್ದು ಬುದ್ಧಿಗೇಡಿತನವೆಂದು ಏಕೆ ಹೇಳುತ್ತೀರಿ?

8 ಈಗ ನಾಬಾಲನು ಅಬೀಗೈಲಳನ್ನು ತುಂಬ ಇಕ್ಕಟ್ಟಿಗೆ ಸಿಲುಕಿಸಿದ್ದನು. ಏಕೆಂದರೆ ಅವನು ಅವಮಾನಿಸಿದ್ದು ಸಾಧಾರಣ ವ್ಯಕ್ತಿಯನ್ನಲ್ಲ. ಯೆಹೋವನ ನಂಬಿಗಸ್ತ ಸೇವಕನನ್ನು. ಸೌಲನ ಬಳಿಕ ರಾಜನ ಸ್ಥಾನಕ್ಕೆ ದೇವರು ಆರಿಸಿಕೊಂಡಿದ್ದ ವ್ಯಕ್ತಿಯನ್ನು. ಪ್ರವಾದಿ ಸಮುವೇಲನ ಮೂಲಕ ಅಭಿಷೇಕಿಸಲ್ಪಟ್ಟಿದ್ದ ದಾವೀದನನ್ನು. (1 ಸಮು. 16:1, 2, 11-13) ರಾಜ ಸೌಲ ಮತ್ಸರದಿಂದ ದಾವೀದನನ್ನು ಕೊಲ್ಲಲು ಹವಣಿಸುತ್ತಿದ್ದ. ಹಾಗಾಗಿ ದಾವೀದ ತಪ್ಪಿಸಿಕೊಂಡು 600 ನಿಷ್ಠಾವಂತ ಯೋಧರೊಂದಿಗೆ ಅರಣ್ಯದಲ್ಲಿ ವಾಸಿಸುತ್ತಿದ್ದನು.

9, 10. (1) ದಾವೀದನು ಮತ್ತವನ ಸಂಗಡಿಗರು ಯಾವ ಪರಿಸ್ಥಿತಿಯಲ್ಲಿ ಬದುಕುಳಿಯಲು ಹೆಣಗಾಡುತ್ತಿದ್ದರು? (2) ಅವರು ಮಾಡಿದ ಉಪಕಾರಕ್ಕೆ ನಾಬಾಲ ಏಕೆ ಕೃತಜ್ಞನಾಗಿರಬೇಕಿತ್ತು? (ಪ್ಯಾರ 10ರ ಪಾದಟಿಪ್ಪಣಿ ಸಹ ನೋಡಿ.)

9 ನಾಬಾಲ ವಾಸಿಸುತ್ತಿದ್ದದ್ದು ಮಾವೋನ್‌ ಪಟ್ಟಣದಲ್ಲಿ. ಕೆಲಸಮಾಡುತ್ತಿದ್ದದ್ದು ಹತ್ತಿರದ ಕರ್ಮೆಲ್‌ ಪಟ್ಟಣದಲ್ಲಿ. * ಅಲ್ಲಿ ಅವನಿಗೆ ಸ್ವಂತ ಜಮೀನು ಇದ್ದಿರಬಹುದು. ನಾಬಾಲನ ಬಳಿಯಿದ್ದ 3,000 ಕುರಿಗಳ ಸಾಕಣೆಗೆ ಸೂಕ್ತವಾಗಿದ್ದ ಹುಲ್ಲುಗಾವಲುಗಳು ಆ ಎರಡು ಪಟ್ಟಣಗಳ ಸುತ್ತಲಿದ್ದವು. ಆ ಹುಲ್ಲುಗಾವಲುಗಳ ಸುತ್ತಲಿದ್ದ ಪ್ರದೇಶ ಕಾಡುಮೇಡು. ದಕ್ಷಿಣದಲ್ಲಿ ವಿಶಾಲವಾದ ಪಾರಾನ್‌ ಅರಣ್ಯ. ಪೂರ್ವದಲ್ಲಿ ಲವಣ ಸಮುದ್ರಕ್ಕೆ (ಮೃತ ಸಮುದ್ರ) ಹೋಗುವ ಮಾರ್ಗದುದ್ದಕ್ಕೂ ಕಡಿದಾದ ಕಮರಿಗಳು ಹಾಗೂ ಗುಹೆಗಳಿದ್ದ ನಿರ್ಜನ ಬಂಜರುಭೂಮಿ. ಇಂಥ ಪ್ರದೇಶಗಳಲ್ಲಿ ವಾಸಹೂಡಿದ್ದ ದಾವೀದ ಮತ್ತವನ ಸೈನಿಕರು ಬದುಕುಳಿಯಲು ಹೆಣಗಾಡುತ್ತಿದ್ದರು. ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು. ಅವರು ಪಟ್ಟ ಕಷ್ಟ ಒಂದೆರಡಲ್ಲ. ಧನಿಕ ನಾಬಾಲನ ಹತ್ತಿರ ಕುರುಬರಾಗಿ ಕೆಲಸಮಾಡುತ್ತಿದ್ದ ಯುವ ಪುರುಷರು ಅವರಿಗೆ ಆಗಾಗ್ಗೆ ಎದುರಾಗುತ್ತಿದ್ದರು.

10 ಶ್ರಮಜೀವಿಗಳಾದ ದಾವೀದನ ಸೈನಿಕರು ಆ ಕುರುಬರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು? ಅವರಿಗೆ ಬೇಕಾದಾಗಲೆಲ್ಲ ಒಂದೊಂದು ಕುರಿಯನ್ನು ಹೇಳದೆಕೇಳದೆ ಸುಲಭವಾಗಿ ಎಗರಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಾಬಾಲನ  ಹಿಂಡುಗಳಿಗೂ ಸೇವಕರಿಗೂ ಕಾವಲುಗೋಡೆಯಂತಿದ್ದರು. (1 ಸಮುವೇಲ 25:15, 16 ಓದಿ.) ಕುರಿಗಳು ಮತ್ತು ಕುರುಬರಿಗಿದ್ದ ಅಪಾಯಗಳು ಹಲವು. ತುಂಬ ಪರಭಕ್ಷಕ ಪ್ರಾಣಿಗಳಿದ್ದವು. ಅಲ್ಲದೆ, ಇಸ್ರಾಯೇಲಿನ ದಕ್ಷಿಣ ಗಡಿಯು ಹತ್ತಿರದಲ್ಲೇ ಇದ್ದದರಿಂದ ಪರದೇಶಿ ಸುಲಿಗೆಗಾರರೂ ಕಳ್ಳಕಾಕರೂ ಆಗಾಗ್ಗೆ ದಾಳಿಮಾಡುತ್ತಿದ್ದರು. *

11, 12. (1) ನಾಬಾಲನಿಗೆ ಕಳುಹಿಸಿದ ಸಂದೇಶದಲ್ಲಿ ದಾವೀದನು ಹೇಗೆ ಜಾಣ್ಮೆ ಮತ್ತು ಗೌರವ ತೋರಿಸಿದನು? (2) ದಾವೀದನ ಸಂದೇಶಕ್ಕೆ ನಾಬಾಲ ಪ್ರತಿಕ್ರಿಯಿಸಿದ ವಿಧ ಏಕೆ ತಪ್ಪಾಗಿತ್ತು?

11 ಆ ಅರಣ್ಯದಲ್ಲಿ ತನ್ನ ಅಷ್ಟೂ ಮಂದಿ ಸೈನಿಕರಿಗೆ ಆಹಾರ ಒದಗಿಸುವುದು ದಾವೀದನಿಗೆ ಕಷ್ಟವಾಗುತ್ತಿತ್ತು. ಆದುದರಿಂದ ಒಂದು ದಿನ ದಾವೀದನು ನಾಬಾಲನ ಬಳಿ ಸಹಾಯ ಕೇಳಲಿಕ್ಕಾಗಿ ಹತ್ತು ಮಂದಿ ದೂತರನ್ನು ಕಳುಹಿಸಿದನು. ಅದಕ್ಕಾಗಿ ಆರಿಸಿಕೊಂಡಿದ್ದ ಸಮಯವೂ ಸೂಕ್ತವಾಗಿತ್ತು. ಏಕೆಂದರೆ ಅದು ಕುರಿಗಳ ಉಣ್ಣೆ ಕತ್ತರಿಸುವ ಸಮಯ. ಇಂಥ ಸಮಯದಲ್ಲಿ ಹಬ್ಬದ ವಾತಾವರಣ, ರಸದೌತಣ, ಉದಾರವಾಗಿ ದಾನಧರ್ಮ ಕೊಡುವುದು ವಾಡಿಕೆ. ಏನು ಹೇಳಬೇಕೆನ್ನುವುದನ್ನು ಸಹ ದಾವೀದನು ಜಾಗ್ರತೆಯಿಂದ ಯೋಚಿಸಿ ಹೇಳಿ ಕಳುಹಿಸಿದನು. ನಾಬಾಲನನ್ನು ವಿನಯದಿಂದ ಸಂಬೋಧಿಸಿದ್ದನು. ತನಗಿಂತ ಹಿರಿಯನಾಗಿದ್ದ ನಾಬಾಲನ ವಯಸ್ಸಿಗೆ ಮರ್ಯಾದೆ ತೋರಿಸುತ್ತಾ ತನ್ನನ್ನು ‘ನಿನ್ನ ಮಗನಾದ ದಾವೀದ’ ಎಂದು ಸೂಚಿಸಿದ್ದನು. ದಾವೀದನ ಬಿನ್ನಹಕ್ಕೆ ನಾಬಾಲನ ಪ್ರತಿಕ್ರಿಯೆ ಏನಾಗಿತ್ತು?—1 ಸಮು. 25:5-8.

12 ಅವನು ಕೋಪದಿಂದ ಸಿಡಿದೆದ್ದ! ಈ ಅಧ್ಯಾಯದ ಆರಂಭದಲ್ಲಿ ತಿಳಿಸಲಾದ ಯುವ ಸೇವಕನು ತಾನು ನೋಡಿದ್ದನ್ನು ಅಬೀಗೈಲಳಿಗೆ ವರ್ಣಿಸುವಾಗ, “ದಣಿಯು ಬಂದವರ ಮೇಲೆ ಬಿದ್ದು ಬೈದನು” ಎಂದನು. ಜಿಪುಣ ನಾಬಾಲ ತನ್ನ ಬಳಿಯಿದ್ದ ರೊಟ್ಟಿ, ನೀರು, ಮಾಂಸವನ್ನು ಕಂಡಕಂಡವರಿಗೆಲ್ಲ ಕೊಡಲಾರೆ ಎಂದು ಗುಡುಗಿದ. ದಾವೀದ ಲೆಕ್ಕಕ್ಕೆ ಬಾರದವ, ಓಡಿಹೋದ ಸೇವಕ ಎಂದು ಅಣಕಿಸಿದ. ನಾಬಾಲನ ದೃಷ್ಟಿಕೋನ ದಾವೀದನನ್ನು ದ್ವೇಷಿಸುತ್ತಿದ್ದ ಸೌಲನಂತಿತ್ತು. ನಾಬಾಲನಿಗಾಗಲಿ ಸೌಲನಿಗಾಗಲಿ ದಾವೀದನ ಬಗ್ಗೆ ದೇವರಿಗಿದ್ದ ದೃಷ್ಟಿಕೋನ ಇರಲಿಲ್ಲ. ಯೆಹೋವನಿಗೆ ದಾವೀದ ತುಂಬ ಪ್ರಿಯನಾಗಿದ್ದನು. ಆತನ ದೃಷ್ಟಿಯಲ್ಲಿ ದಾವೀದನು ಬಂಡಾಯವೆದ್ದ ದಾಸನಾಗಿರಲಿಲ್ಲ, ಇಸ್ರಾಯೇಲಿನ ಭಾವೀ ಅರಸನಾಗಿದ್ದನು.—1 ಸಮು. 25:10, 11, 14.

13. (1) ನಾಬಾಲನು ಮಾಡಿದ ಅವಮಾನಕ್ಕೆ ದಾವೀದನ ಆರಂಭದ ಪ್ರತಿಕ್ರಿಯೆ ಹೇಗಿತ್ತು? (2) ಯಾಕೋಬ 1:20 ರಲ್ಲಿರುವ ಮೂಲತತ್ವ ದಾವೀದನ ಪ್ರತಿಕ್ರಿಯೆಯ ಕುರಿತು ನಮಗೇನು ತಿಳಿಸುತ್ತದೆ?

13 ದೂತರು ವಾಪಸ್ಸು ಬಂದು ನಡೆದ ಸಂಗತಿಯನ್ನು ದಾವೀದನಿಗೆ ತಿಳಿಸಿದಾಗ ಅವನು ಕೋಪದಿಂದ ಕೆರಳಿದನು. “ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ” ಎಂದು ತನ್ನ  ಯೋಧರಿಗೆ ಅಪ್ಪಣೆಕೊಟ್ಟನು. ತಾನೂ ಶಸ್ತ್ರಸಜ್ಜಿತನಾಗಿ 400 ಮಂದಿ ಯೋಧರೊಡನೆ ನಾಬಾಲನ ಮನೆಮಂದಿಯ ಮೇಲೆ ದಾಳಿಮಾಡಲು ಹೊರಟನು. ಅವನ ಮನೆಯಲ್ಲಿ ಒಬ್ಬ ಗಂಡಸನ್ನೂ ಜೀವಂತವಾಗಿ ಉಳಿಸುವುದಿಲ್ಲವೆಂದು ಪ್ರತಿಜ್ಞೆಮಾಡಿದನು. (1 ಸಮು. 25:12, 13, 21, 22) ದಾವೀದನ ಕೋಪ ಸಮಂಜಸವಾಗಿತ್ತು ನಿಜ. ಆದರೆ ಅದನ್ನು ವ್ಯಕ್ತಪಡಿಸಲಿದ್ದ ರೀತಿ ತಪ್ಪಾಗಿತ್ತು. “ಮನುಷ್ಯನ ಕೋಪವು ದೇವರ ನೀತಿಯನ್ನು ಸಾಧಿಸುವುದಿಲ್ಲ” ಎನ್ನುತ್ತದೆ ಬೈಬಲ್‌. (ಯಾಕೋ. 1:20) ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅಬೀಗೈಲಳು ತನ್ನ ಮನೆಮಂದಿಯನ್ನು ಹೇಗೆ ಕಾಪಾಡಸಾಧ್ಯವಿತ್ತು?

‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’

14. (1) ನಾಬಾಲ ಮಾಡಿದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಅಬೀಗೈಲಳು ಪ್ರಥಮ ಹೆಜ್ಜೆ ತೆಗೆದುಕೊಂಡಿದ್ದಳೆಂದು ಹೇಗೆ ಹೇಳಬಹುದು? (2) ನಾಬಾಲ ಮತ್ತು ಅಬೀಗೈಲಳ ಮಧ್ಯೆಯಿದ್ದ ವ್ಯತ್ಯಾಸದಿಂದ ನಾವು ಯಾವ ಪಾಠ ಕಲಿಯಬಹುದು? (ಪಾದಟಿಪ್ಪಣಿ ಸಹ ನೋಡಿ.)

14 ನಾಬಾಲ ಮಾಡಿದ ಘೋರ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಅಬೀಗೈಲಳು ಮೊದಲ ಹೆಜ್ಜೆಯನ್ನು ತಕ್ಕೊಂಡಾಗಿತ್ತೆಂದು ಹೇಳಬಹುದು. ಅದೇನೆಂದರೆ, ಸುದ್ದಿಮುಟ್ಟಿಸಲು ತನ್ನ ಬಳಿ ಓಡಿ ಬಂದಿದ್ದ ಸೇವಕನ ಮಾತನ್ನು ಆಕೆ ಗಮನಕೊಟ್ಟು ಕೇಳಿದಳು. ಆಕೆ ನಾಬಾಲನಂತಿರಲಿಲ್ಲ. “ಮೂರ್ಖನಾದ ಅವನೊಡನೆ ಮಾತಾಡುವದಸಾಧ್ಯ” ಎಂದ ಆ ಸೇವಕ. * (1 ಸಮು. 25:17) ನಾಬಾಲನಿಗೆ ಎಷ್ಟು ಅಹಂ ಇತ್ತೆಂದರೆ ಬೇರೆಯವರಿಗೆ ಅವನು ಸ್ವಲ್ಪವೂ ಕಿವಿಗೊಡುತ್ತಿರಲಿಲ್ಲ. ಈ ರೀತಿಯ ಸೊಕ್ಕು ನಮ್ಮೀ ದಿನಗಳಲ್ಲೂ ಸರ್ವೇಸಾಮಾನ್ಯ. ಆದರೆ ಅಬೀಗೈಲಳು ಅಂಥವಳಲ್ಲವೆಂದು ಆ ಸೇವಕನಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದಲೇ ಅವನು ಈಗ ಸಮಸ್ಯೆಯನ್ನು ಅವಳ ಮುಂದಿಟ್ಟ.

ಅಬೀಗೈಲಳು ನಾಬಾಲನಂತಿರಲಿಲ್ಲ, ಗಮನಕೊಟ್ಟು ಕೇಳಿದಳು

15, 16. (1) ಅಬೀಗೈಲಳು ಜ್ಞಾನೋಕ್ತಿ ಪುಸ್ತಕದಲ್ಲಿ ವರ್ಣಿಸಲಾದ ಗುಣವತಿಯಾದ ಸತಿಯಂತೆ ಇದ್ದಳೆಂದು ಹೇಗೆ ಹೇಳಬಹುದು? (2) ಅಬೀಗೈಲಳು ತೆಗೆದುಕೊಂಡ ಹೆಜ್ಜೆ ಅವಳು ಗಂಡನ ಶಿರಸ್ಸುತನಕ್ಕೆ ಬೆಲೆಕೊಡಲಿಲ್ಲ ಎಂದರ್ಥವಲ್ಲವೇಕೆ?

15 ಅಬೀಗೈಲಳು ಕ್ಷಣದಲ್ಲೇ ಯೋಚಿಸಿ ಶೀಘ್ರವಾಗಿ ಕ್ರಿಯೆಗೈದಳು. ಈ ಒಂದೇ ವೃತ್ತಾಂತದಲ್ಲಿ ಆಕೆ ನಾಲ್ಕು ಸಂದರ್ಭಗಳಲ್ಲಿ ಶೀಘ್ರವಾಗಿ ಕ್ರಿಯೆಗೈದದ್ದರ ಬಗ್ಗೆ ತಿಳಿಸಲಾಗಿದೆ. ಅವಳು ದಾವೀದ ಮತ್ತು ಅವನ ಸಂಗಡಿಗರಿಗಾಗಿ ರೊಟ್ಟಿ, ದ್ರಾಕ್ಷಾರಸ, ಕುರಿಮಾಂಸ, ಹುರಿಗಾಳು, ಒಣಗಿದ ದ್ರಾಕ್ಷೇಗೊಂಚಲುಗಳು, ಅಂಜೂರಹಣ್ಣುಗಳ ಉಂಡೆಗಳು ಇತ್ಯಾದಿಗಳ ಉದಾರ ಕೊಡುಗೆಯನ್ನು ತಕ್ಷಣ ಸಿದ್ಧಪಡಿಸಿದಳು. ಅಬೀಗೈಲಳಿಗೆ  ತನ್ನ ಮನೆಯಲ್ಲಿ ಏನೇನು ಇದೆಯೆಂದು ಚೆನ್ನಾಗಿ ಗೊತ್ತಿತ್ತು. ಮನೆಯ ಕೆಲಸಕಾರ್ಯಗಳೆಲ್ಲವೂ ಅವಳ ಸುಪರ್ದಿನಲ್ಲಿತ್ತು. ಕಾಲಾನಂತರ ಜ್ಞಾನೋಕ್ತಿ ಪುಸ್ತಕದಲ್ಲಿ ತಿಳಿಸಲಾದ ಗುಣವತಿಯಾದ ಸತಿಯಂತೆ ಇದ್ದಳು ಅವಳು. (ಜ್ಞಾನೋ. 31:10-31) ಆ ಎಲ್ಲ ಆಹಾರ ಸಾಮಾಗ್ರಿಗಳನ್ನು ತನ್ನ ಸೇವಕರ ಜೊತೆ ಮುಂದೆ ಕಳುಹಿಸಿ ನಂತರ ಅವಳೊಬ್ಬಳೇ ಅವರ ಹಿಂದೆ ಹೋದಳು. ಆದರೆ ಆಕೆ ತನ್ನ “ಗಂಡನಾದ ನಾಬಾಲನಿಗೆ ಏನೂ ತಿಳಿಸಲಿಲ್ಲ” ಎಂದು ಬೈಬಲ್‌ ಹೇಳುತ್ತದೆ.—1 ಸಮು. 25:18, 19.

16 ಇದರರ್ಥ ಅಬೀಗೈಲಳು ತನ್ನ ಗಂಡನ ಶಿರಸ್ಸುತನಕ್ಕೆ ಬೆಲೆಕೊಡಲಿಲ್ಲವೆಂದಾ? ಖಂಡಿತ ಹಾಗಲ್ಲ. ನಾಬಾಲನು ನೀಚತನದಿಂದ ವರ್ತಿಸಿದ್ದು ಯೆಹೋವನ ಅಭಿಷಿಕ್ತ ಸೇವಕನೊಂದಿಗೆ ಎಂದು ನೆನಪಿಡಿ. ಅದರಿಂದಾಗಿ ನಾಬಾಲನ ಮನೆಯಲ್ಲಿದ್ದ ಅನೇಕ ಅಮಾಯಕರು ಸಾಯಲಿಕ್ಕಿದ್ದರು. ಅಬೀಗೈಲಳು ಈಗ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದಲ್ಲಿ ಗಂಡನ ತಪ್ಪಿನಲ್ಲಿ ಬಹುಶಃ ಆಕೆಯೂ ಭಾಗಿಯಾದಂತೆ ಆಗುತ್ತಿತ್ತು. ಆದ್ದರಿಂದ ಈ ಸಂದರ್ಭದಲ್ಲಿ ಆಕೆ ತನ್ನ ಗಂಡನಿಗಿಂತ ತನ್ನ ದೇವರಿಗೆ ಅಧೀನತೆ ತೋರಿಸಲು ಪ್ರಾಶಸ್ತ್ಯ ಕೊಡಲೇಬೇಕಿತ್ತು.

17, 18. (1) ಅಬೀಗೈಲಳು ದಾವೀದನನ್ನು ಹೇಗೆ ಎದುರುಗೊಂಡಳು? (2) ದಾವೀದನಿಗೆ ಏನು ಹೇಳಿದಳು? (3) ಅವಳ ಮಾತುಗಳು ಪರಿಣಾಮ ಬೀರಲು ಕಾರಣವೇನು?

17 ಸ್ವಲ್ಪ ದೂರದಲ್ಲೇ ಅಬೀಗೈಲಳು ದಾವೀದ ಮತ್ತವನ ಯೋಧರನ್ನು ಸಂಧಿಸಿದಳು. ಈಗಲೂ ಅವಳು ಶೀಘ್ರವಾಗಿ ಕ್ರಿಯೆಗೈದಳು. ಹೇಗೆಂದರೆ ಬೇಗನೆ ಕತ್ತೆಯಿಂದಿಳಿದು ನೆಲದ ವರೆಗೆ ಬಾಗಿ ದಾವೀದನನ್ನು ವಂದಿಸಿದಳು. (1 ಸಮು. 25:20, 23) ತನ್ನ ಮನಸ್ಸಿನಲ್ಲಿದ್ದದ್ದನ್ನು ಅವನ ಮುಂದೆ ಬಿಚ್ಚಿಟ್ಟಳು. ತನ್ನ ಗಂಡ ಹಾಗೂ ಮನೆಮಂದಿಗೆ ಪ್ರಾಣಭಿಕ್ಷೆ ನೀಡುವಂತೆ ಅಂಗಲಾಚಿದಳು. ಅವಳ ಮಾತುಗಳು ಪರಿಣಾಮ ಬೀರಿದವು. ಕಾರಣವೇನು?

“ನಿನ್ನ ದಾಸಿಯು ಮಾತಾಡುವದಕ್ಕೆ ಅಪ್ಪಣೆಯಾಗಲಿ”

18 ನಡೆದಂಥ ಅನ್ಯಾಯದ ಹೊಣೆಗಾರಿಕೆಯನ್ನು ಆಕೆ ತನ್ನ ಮೇಲೆ ತೆಗೆದುಕೊಂಡು ತನ್ನನ್ನು ಕ್ಷಮಿಸುವಂತೆ ದಾವೀದನಲ್ಲಿ ಕೇಳಿಕೊಂಡಳು. ತನ್ನ ಗಂಡ ಅವನ ಹೆಸರಿಗೆ ತಕ್ಕಂತೆ ಮೂರ್ಖನೆಂಬ ಸತ್ಯಾಂಶವನ್ನು ಒಪ್ಪಿಕೊಂಡಳು. ಹೀಗೆ ಅವಳು ಬಹುಶಃ ಪರೋಕ್ಷವಾಗಿ ಹೇಳಿದ್ದೇನೆಂದರೆ ಅಂಥ ವ್ಯಕ್ತಿಯನ್ನು ಶಿಕ್ಷಿಸುವುದು ದಾವೀದನ ಘನತೆಗೆ ಯೋಗ್ಯವಲ್ಲ ಎಂದು. ದಾವೀದನು ‘ಯೆಹೋವನ ಶತ್ರುಗಳೊಡನೆ ಯುದ್ಧಮಾಡುತ್ತಾನೆ’ ಎಂಬುದನ್ನು ಅಂಗೀಕರಿಸುವ ಮೂಲಕ ಯೆಹೋವನ ಪ್ರತಿನಿಧಿಯಾದ ಅವನಲ್ಲಿ ಭರವಸೆ ವ್ಯಕ್ತಪಡಿಸಿದಳು. ‘ಯೆಹೋವನು ನಿನ್ನನ್ನು ಇಸ್ರಾಯೇಲ್‌ ಪ್ರಭುವನ್ನಾಗಿ ಮಾಡುವನು’ ಎಂದು ಹೇಳುವ ಮೂಲಕ ದಾವೀದ ಮತ್ತು ಅವನ ರಾಜತ್ವದ ಬಗ್ಗೆ ಯೆಹೋವನು ಮಾಡಿದ ವಾಗ್ದಾನ ತನಗೆ ತಿಳಿದಿದೆಯೆಂದು ತೋರಿಸಿಕೊಟ್ಟಳು. ಅಷ್ಟುಮಾತ್ರವಲ್ಲ ರಕ್ತಾಪರಾಧಕ್ಕಾಗಲಿ, ಮುಂದೆ “ಪಶ್ಚಾತ್ತಾಪ ಮನೋವ್ಯಥೆಗಳಿಗೆ” ಅಂದರೆ ಬಹುಶಃ ಚುಚ್ಚುವ ಮನಸ್ಸಾಕ್ಷಿಗಾಗಲಿ  ಕಾರಣವಾಗಬಲ್ಲ ಕೃತ್ಯವೆಸಗದಂತೆ ದಾವೀದನನ್ನು ಕೇಳಿಕೊಂಡಳು. (1 ಸಮುವೇಲ 25:24-31 ಓದಿ.) ನಿಜಕ್ಕೂ ಮನಸ್ಪರ್ಶಿಸುವ ದಯಾಪೂರ್ಣ ಮಾತುಗಳವು!

19. (1) ಅಬೀಗೈಲಳ ಮಾತುಗಳಿಗೆ ದಾವೀದ ಹೇಗೆ ಪ್ರತಿಕ್ರಿಯಿಸಿದನು? (2) ಅವನು ಆಕೆಯನ್ನು ಪ್ರಶಂಸಿಸಿದ್ದೇಕೆ?

19 ದಾವೀದನ ಪ್ರತಿಕ್ರಿಯೆ ಹೇಗಿತ್ತು? ಅಬೀಗೈಲಳು ತಂದಿದ್ದೆಲ್ಲವನ್ನು ಸ್ವೀಕರಿಸಿದನು. “ಈ ಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ” ಎಂದೂ ಹೇಳಿದನು. ಬೇಗನೆ ಬಂದು ತನ್ನನ್ನು ಎದುರುಗೊಳ್ಳಲು ಧೈರ್ಯದಿಂದ ಹೆಜ್ಜೆ ತಕ್ಕೊಂಡದ್ದಕ್ಕಾಗಿ ಆಕೆಯನ್ನು ಶ್ಲಾಘಿಸಿದನು. ರಕ್ತಾಪರಾಧಕ್ಕೆ ಗುರಿಯಾಗದಂತೆ ಆಕೆ ತನ್ನನ್ನು ತಡೆದಳೆಂದು ಒಪ್ಪಿಕೊಂಡನು. “ಸಮಾಧಾನದಿಂದ ಮನೆಗೆ ಹೋಗು” ಎಂದು ಆಕೆಗೆ ಹೇಳಿದ್ದಲ್ಲದೆ ಅವಳು ಹೇಳಿದಂತೆ ಮಾಡುತ್ತೇನೆಂದು ದೈನ್ಯದಿಂದ ನುಡಿದನು.—1 ಸಮು. 25:32-35.

“ನಿನ್ನ ದಾಸಿ”

20, 21. (1) ಅಬೀಗೈಲಳು ಗಂಡನ ಬಳಿ ಸಿದ್ಧಮನಸ್ಸಿನಿಂದ ಹಿಂದಿರುಗಿದ್ದನ್ನು ನೀವೇಕೆ ಮೆಚ್ಚುತ್ತೀರಿ? (2) ನಾಬಾಲನೊಂದಿಗೆ ಮಾತಾಡಲು ಅವಳು ಆರಿಸಿಕೊಂಡ ಸಮಯವು ಹೇಗೆ ಅವಳ ಧೈರ್ಯ ಹಾಗೂ ವಿವೇಚನೆಯನ್ನು ತೋರಿಸುತ್ತದೆ?

20 ಬಳಿಕ ಅಬೀಗೈಲಳು ತನ್ನ ಮನೆಗೆ ಹಿಂದಿರುಗುವಾಗ ದಾರಿಯಲ್ಲಿ ಆ ಭೇಟಿಯ ಬಗ್ಗೆ ಯೋಚಿಸಿರಬೇಕು. ಅಲ್ಲದೆ, ನಂಬಿಗಸ್ತನಾದ ದಯಾಪರ ದಾವೀದನಿಗೂ ನಿರ್ದಯನಾದ ತನ್ನ ಗಂಡನಿಗೂ ಇದ್ದ ವ್ಯತ್ಯಾಸವನ್ನು ಆಕೆ ಗಮನಿಸಿದ್ದಿರಬೇಕು. ಆದರೆ ಆಕೆ ಅದನ್ನೇ ಮನಸ್ಸಿನಲ್ಲಿ ಮೆಲುಕುಹಾಕಲಿಲ್ಲ. “ಅಬೀಗೈಲಳು ನಾಬಾಲನ ಬಳಿಗೆ ಬಂದಳು” ಎನ್ನುತ್ತದೆ ವೃತ್ತಾಂತ. ಹೌದು, ಆಕೆ ತನ್ನ ಗಂಡನ ಬಳಿ ಹಿಂದಿರುಗಿದಳು. ಅವನ ಮಡದಿಯಾಗಿ ತನ್ನ ಕರ್ತವ್ಯವನ್ನು ಆದಷ್ಟು ಮಟ್ಟಿಗೆ ಪೂರೈಸುವ ದೃಢನಿಶ್ಚಯದಿಂದಿದ್ದಳು. ತಾನು ದಾವೀದನಿಗೂ ಅವನ ಸೈನಿಕರಿಗೂ ಕೊಟ್ಟ ಕೊಡುಗೆಗಳ ಬಗ್ಗೆ ಗಂಡನಿಗೆ ಹೇಳಬೇಕೆಂದಿದ್ದಳು. ಅದನ್ನು ತಿಳಿಯುವ ಹಕ್ಕು ಅವನಿಗಿತ್ತು. ಮಾತ್ರವಲ್ಲ, ಅವನ ಜೀವಕ್ಕೆ ಬಂದಿದ್ದ ಅಪಾಯ ಹೇಗೆ ತಪ್ಪಿತ್ತೆಂದು ಬೇರೆಯವರಿಂದ ತಿಳಿದು ಅವನು ಇನ್ನಷ್ಟು ನಾಚಿಕೆಗೆ ಗುರಿಯಾಗುವ ಮುಂಚೆ ಆಕೆಯೇ ಅವನಿಗೆ ಅದರ ಬಗ್ಗೆ ತಿಳಿಸಬೇಕೆಂದಿದ್ದಳು. ಆದರೆ ಮನೆಗೆ ಬಂದು ನೋಡಿದಾಗ ಗಂಡನು ರಾಜರಂತೆ ದೊಡ್ಡ ಔತಣ ಮಾಡಿಸಿ, ಕಂಠಪೂರ್ತಿ ಕುಡಿದು ಮತ್ತನಾಗಿದ್ದನು. ಹಾಗಾಗಿ ಅವಳಿಗೆ ಏನನ್ನೂ ಹೇಳಲಾಗಲಿಲ್ಲ.—1 ಸಮು. 25:36.

ಅಬೀಗೈಲಳು ತನ್ನ ಗಂಡ ನಾಬಾಲನಿಗೆ ಅವನ ಜೀವ ಉಳಿಸಲು ತಾನೇನು ಮಾಡಿದೆ ಎಂದು ಧೈರ್ಯದಿಂದ ಹೇಳಿದಳು

21 ಈ ಸಂದರ್ಭದಲ್ಲೂ ಅಬೀಗೈಲಳು ಧೈರ್ಯ ಹಾಗೂ ವಿವೇಚನೆ ತೋರಿಸಿದಳು. ಅವನ ನಶೆ ಇಳಿಯಲೆಂದು ಮರುದಿನ ಬೆಳಗ್ಗೆ ವರೆಗೆ ಕಾದಳು. ಏಕೆಂದರೆ ಆಗ ಅವನು ಆಕೆಯ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರುವನು. ಆದರೆ ಸಿಟ್ಟು ನೆತ್ತಿಗೇರುವ  ಅಪಾಯವೂ ಇತ್ತು. ಹಾಗಿದ್ದರೂ ಮರುದಿನ ಆಕೆ ಅವನ ಬಳಿ ಹೋಗಿ ನಡೆದದ್ದೆಲ್ಲವನ್ನು ಹೇಳಿದಳು. ಗಂಡ ಕೋಪದಿಂದ ಕೆರಳಿ ತನ್ನ ಮೇಲೆ ಖಂಡಿತ ಕೈಯೆತ್ತುವನೆಂದು ಆಕೆ ನೆನಸಿದ್ದಿರಬೇಕು. ಆದರೆ ಅವನು ಮರಗಟ್ಟಿದವನಂತೆ ಕೂತಿದ್ದನು.—1 ಸಮು. 25:37.

22. (1) ನಾಬಾಲನಿಗೆ ಏನಾಯಿತು? (2) ಮನೆಯಲ್ಲಿ ನಡೆಯುವ ಯಾವುದೇ ದೌರ್ಜನ್ಯ ದುರುಪಚಾರದ ಸಂಬಂಧದಲ್ಲಿ ಈ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ?

22 ಅವನಿಗೇನಾಯಿತು? “ಅವನ ಹೃದಯವು ನಿಂತುಹೋಯಿತು, ಅವನು ಸ್ತಬ್ಧನಾದನು.” ಅವನಿಗೆ ಒಂದು ವಿಧದ ಲಕ್ವಹೊಡೆದಿದ್ದಿರಬೇಕು. ಆದರೆ ಅವನು ಅಸುನೀಗಿದ್ದು ಸುಮಾರು ಹತ್ತು ದಿನಗಳ ಬಳಿಕವೇ. ಅದೂ ಬರೀ ರೋಗದ ಕಾರಣದಿಂದಲ್ಲ. ವೃತ್ತಾಂತ ಹೇಳುವಂತೆ “ನಾಬಾಲನು ಯೆಹೋವನಿಂದ ಹತನಾಗಿ ಸತ್ತನು.” (1 ಸಮು. 25:38) ದೇವಹಸ್ತದಿಂದ ನಡೆದ ಈ ವಧೆಯಿಂದಾಗಿ ಅಬೀಗೈಲಳಿಗೆ ದುಃಸ್ವಪ್ನದಂತಿದ್ದ ದಾಂಪತ್ಯ ಕೊನೆಕಂಡಿತು. ಇಂದು ಯೆಹೋವನು ಈ ರೀತಿ ಒಬ್ಬರನ್ನು ವಧಿಸುವ ಮೂಲಕ ಅದ್ಭುತ ನಡೆಸಿ ಗೃಹಹಿಂಸಾಚಾರವನ್ನು  ಅಂತ್ಯಗೊಳಿಸುವುದಿಲ್ಲ. ಆದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಯಾವುದೇ ದೌರ್ಜನ್ಯ ದುರುಪಚಾರವು ಆತನ ಕಣ್ಣಿಗೆ ಮರೆಯಾಗಿರುವುದಿಲ್ಲ ಎಂಬುದನ್ನು ಈ ವೃತ್ತಾಂತ ಸ್ಪಷ್ಟವಾಗಿ ತೋರಿಸುತ್ತದೆ. ಆತನು ತನ್ನ ತಕ್ಕ ಸಮಯದಲ್ಲಿ ಖಂಡಿತ ನ್ಯಾಯಮಾಡುವನು.ಲೂಕ 8:17 ಓದಿ.

23. (1) ಅಬೀಗೈಲಳಿಗೆ ಇನ್ಯಾವ ಆಶೀರ್ವಾದ ಸಿಕ್ಕಿತು? (2) ದಾವೀದನ ಹೆಂಡತಿಯಾಗುವ ಅವಕಾಶ ಸಿಕ್ಕಿದೊಡನೆ ಆಕೆ ಬದಲಾಗಲಿಲ್ಲವೆಂದು ಹೇಗೆ ಗೊತ್ತಾಗುತ್ತದೆ?

23 ಅಬೀಗೈಲಳಿಗೆ ದುರಂತಕರ ದಾಂಪತ್ಯದಿಂದ ಬಿಡುಗಡೆ ಸಿಕ್ಕಿದ್ದಲ್ಲದೆ ಇನ್ನೊಂದು ಆಶೀರ್ವಾದವೂ ಸಿಕ್ಕಿತು. ನಾಬಾಲನ ಸಾವಿನ ಸುದ್ದಿ ದಾವೀದನಿಗೆ ಸಿಕ್ಕಿದಾಗ ಆಕೆಯ ಬಳಿ ದೂತರನ್ನು ಕಳುಹಿಸಿ ಮದುವೆ ಪ್ರಸ್ತಾಪ ಮಾಡಿದನು. ಅದಕ್ಕವಳು, “ನಿನ್ನ ದಾಸಿಯಾದ ನಾನು ನನ್ನ ಸ್ವಾಮಿಯ ಸೇವಕರ ಪಾದಗಳನ್ನು ತೊಳೆಯುವ ಸೇವಕಿಯಾಗುವದಕ್ಕೆ ಸಿದ್ಧಳಾಗಿದ್ದೇನೆ” ಎಂದು ಉತ್ತರಕೊಟ್ಟಳು. ಭಾವೀ ರಾಜನ ಪತ್ನಿಯಾಗುತ್ತೇನೆಂದು ಗೊತ್ತಾದಾಗ ಆಕೆ ಹಮ್ಮಿನಿಂದ ಬೀಗಲಿಲ್ಲವೆಂಬುದು ಸ್ಪಷ್ಟ. ದಾವೀದನ ಸೇವಕರ ಸೇವೆ ಮಾಡಲು ಸಹ ತಾನು ಸಿದ್ಧಳೆಂದು ಹೇಳಿದಳು! ಬಳಿಕ ಅವನ ಬಳಿ ಹೋದಳು. ಈ ಸಂದರ್ಭದಲ್ಲೂ ಆಕೆ ಶೀಘ್ರವಾಗಿ ಕ್ರಿಯೆಗೈದಳೆಂದು ವೃತ್ತಾಂತ ಹೇಳುತ್ತದೆ.—1 ಸಮು. 25:39-42.

24. (1) ಹೊಸ ಜೀವನದಲ್ಲಿ ಅಬೀಗೈಲಳು ಯಾವ ಕಷ್ಟಗಳನ್ನು ಎದುರಿಸಿದಳು? (2) ದಾವೀದ ಮತ್ತು ಯೆಹೋವನು ಅವಳನ್ನು ಹೇಗೆ ವೀಕ್ಷಿಸಿದರು?

24 ಇದು ಕಥೆಗಳಲ್ಲಿರುವಂಥ ರೀತಿಯ ಸುಖಾಂತ್ಯವಾಗಿರಲಿಲ್ಲ. ಏಕೆಂದರೆ ದಾವೀದನ ಪತ್ನಿಯಾಗಿ ಅಬೀಗೈಲಳ ಬದುಕು ಮುಂದೆ ಬರೀ ಹೂವಿನ ಹಾದಿ ಆಗಿದ್ದಿರಲಿಕ್ಕಿಲ್ಲ. ದಾವೀದನು ಈಗಾಗಲೇ ಅಹೀನೋವಮಳನ್ನು ಮದುವೆಯಾಗಿದ್ದ. ಆ ಕಾಲದಲ್ಲಿ ಬಹುಪತ್ನಿತ್ವ ಪದ್ಧತಿಯು ನಂಬಿಗಸ್ತ ಮಹಿಳೆಯರಿಗೆ ನಾನಾ ಸವಾಲುಗಳನ್ನು ತಂದೊಡ್ಡಿತ್ತು. ಅಷ್ಟುಮಾತ್ರವಲ್ಲದೆ ದಾವೀದನು ಇನ್ನೂ ರಾಜನಾಗಿರಲಿಲ್ಲ. ಆದುದರಿಂದ ಹಲವಾರು ಕಷ್ಟತೊಂದರೆಗಳನ್ನು ಎದುರಿಸಲಿಕ್ಕಿತ್ತು. ಆದರೂ ಬಾಳಹಾದಿಯಲ್ಲಿ ಮುಂದೆ ಸಾಗುವಾಗ ಅಬೀಗೈಲಳು ದಾವೀದನಿಗೆ ಸಹಾಯವನ್ನೂ ಬೆಂಬಲವನ್ನೂ ಕೊಟ್ಟಳು. ಅವನಿಗೊಬ್ಬ ಮಗನನ್ನೂ ಹೆತ್ತಳು. ತನ್ನನ್ನು ಮೆಚ್ಚುವ, ಸಂರಕ್ಷಿಸುವ ಗಂಡ ಅವಳಿಗಿದ್ದ. ಒಂದು ಸಂದರ್ಭದಲ್ಲಿ ಆಕೆ ಅಪಹರಿಸಲ್ಪಟ್ಟಾಗ ಅವಳನ್ನು ಬಿಡಿಸಿ ತಂದ! (1 ಸಮು. 30:1-19) ಅವನು ಅವಳನ್ನು ಪ್ರೀತಿಸಿ ಅಮೂಲ್ಯವಾಗಿ ಕಾಣುವ ಮೂಲಕ ಯೆಹೋವ ದೇವರನ್ನು ಅನುಕರಿಸಿದ. ವಿವೇಚನಾಭರಿತ, ಧೈರ್ಯಶಾಲಿ, ನಂಬಿಗಸ್ತ ಸ್ತ್ರೀಯರು ಯೆಹೋವನಿಗೆ ಪ್ರಿಯರೂ ಅಮೂಲ್ಯರೂ ಆಗಿದ್ದಾರೆ.

^ ಪ್ಯಾರ. 9 ಇದು, ಸಮಯಾನಂತರ ಪ್ರವಾದಿ ಎಲೀಯನು ಮತ್ತು ಬಾಳನ ಪ್ರವಾದಿಗಳು ಸಂಧಿಸಿದ್ದ ಉತ್ತರದ ಪ್ರಸಿದ್ಧ ಕರ್ಮೆಲ್‌ ಬೆಟ್ಟವಲ್ಲ. (ಅಧ್ಯಾಯ 10 ನೋಡಿ.) ಬದಲಿಗೆ ದಕ್ಷಿಣದ ಅರಣ್ಯದ ಅಂಚಿನಲ್ಲಿದ್ದ ಒಂದು ಪಟ್ಟಣ.

^ ಪ್ಯಾರ. 10 ಸ್ಥಳೀಯ ಜಮೀನುದಾರರು ಮತ್ತು ಅವರ ಹಿಂಡುಗಳನ್ನು ರಕ್ಷಿಸುವುದು ಯೆಹೋವ ದೇವರಿಗೆ ಸಲ್ಲಿಸುವ ಒಂದು ಸೇವೆಯೆಂದು ದಾವೀದನು ಎಣಿಸಿರಬೇಕು. ಆ ಕಾಲದಲ್ಲಿ ಅಬ್ರಹಾಮ, ಇಸಾಕ, ಯಾಕೋಬರ ವಂಶಜರು ಆ ದೇಶದಲ್ಲಿ ವಾಸಿಸಬೇಕೆಂಬುದು ಯೆಹೋವನ ಉದ್ದೇಶವಾಗಿತ್ತು. ಆದಕಾರಣ ಆ ಪ್ರದೇಶವನ್ನು ವಿದೇಶೀ ಆಕ್ರಮಣಕಾರರಿಂದ ಮತ್ತು ಸುಲಿಗೆಗಾರರಿಂದ ರಕ್ಷಿಸುವುದು ಒಂದು ರೀತಿಯ ಪವಿತ್ರ ಸೇವೆಯೇ ಆಗಿತ್ತು.

^ ಪ್ಯಾರ. 14 ಈ ಸೇವಕನು ಬಳಸಿದ “ಮೂರ್ಖ” ಎಂಬ ಪದದ ಅಕ್ಷರಾರ್ಥ “ಬಿಲಯೇಲನ ಮಗ (ನಿಷ್ಪ್ರಯೋಜಕ)” ಎಂದಾಗಿದೆ. ಇತರ ಬೈಬಲ್‌ ಭಾಷಾಂತರಗಳು ಆ ಪದಕ್ಕೆ “ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದವ” ಎಂಬ ವರ್ಣನೆ ಸೇರಿಸಿ, “ಅವನೊಟ್ಟಿಗೆ ಮಾತಾಡಿ ಪ್ರಯೋಜನವಿಲ್ಲ” ಎಂದು ಕೊನೆಯಲ್ಲಿ ಹೇಳಿವೆ.