“ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲ.” —ಪ್ರಸಂಗಿ 4:12.

1, 2. (ಎ) ಹೊಸ ಮದುವೆಗಳ ವಿಷಯದಲ್ಲಿ ನಾವು ಕೆಲವೊಮ್ಮೆ ಏನೆಂದು ಆಲೋಚಿಸಬಹುದು ಮತ್ತು ಏಕೆ? (ಬಿ) ಈ ಅಧ್ಯಾಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಚರ್ಚಿಸುವೆವು?

ಮದುವೆಗಳಿಗೆ ಹೋಗುವುದೆಂದರೆ ನಿಮಗೆ ತುಂಬ ಇಷ್ಟವೊ? ಅನೇಕರಿಗೆ ತುಂಬ ಇಷ್ಟ. ಏಕೆಂದರೆ ಇಂಥ ಸಂದರ್ಭಗಳು ತುಂಬ ಸಂತೋಷದಾಯಕವಾಗಿರಬಲ್ಲವು. ನವಜೋಡಿಯು ಅತ್ಯುತ್ತಮವಾದ ಉಡುಪುಗಳನ್ನು ಧರಿಸಿ ಚೆನ್ನಾಗಿ ಅಲಂಕರಿಸಿಕೊಂಡಿರುವುದನ್ನು ನೀವು ನೋಡುತ್ತೀರಿ. ಅಷ್ಟುಮಾತ್ರವಲ್ಲ, ಅವರ ಮುಖದ ಮೇಲೆ ಅಪಾರವಾದ ಸಂತೋಷದ ಕಳೆ ಇರುತ್ತದೆ! ಆ ದಿನ ಅವರು ತುಂಬ ಉಲ್ಲಾಸ ವದನರಾಗಿರುತ್ತಾರೆ ಮತ್ತು ಅವರ ಭವಿಷ್ಯತ್ತು ನಿರೀಕ್ಷೆ ಮತ್ತು ಭರವಸೆಯಿಂದ ತುಂಬಿರುವಂತೆ ತೋರುತ್ತದೆ.

2 ಆದರೂ ಅನೇಕ ವಿಧಗಳಲ್ಲಿ ವಿವಾಹವು ಇಂದು ಅಪಾರ ಅವ್ಯವಸ್ಥೆಯಿಂದ ಕೂಡಿದೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ನವ ವಿವಾಹಿತ ದಂಪತಿಗೆ ಒಳ್ಳೇದಾಗಬೇಕೆಂದು ನಾವು ನಿರೀಕ್ಷಿಸುತ್ತೇವಾದರೂ ಕೆಲವೊಮ್ಮೆ ‘ಈ ಮದುವೆಯು ಸಂತೋಷಮಯವಾಗಿರುವುದೊ? ಇವರು ಚೆನ್ನಾಗಿ ಬಾಳುವರೊ?’ ಎಂದು ನಾವು ಆಲೋಚಿಸಬಹುದು. ಈ ಪ್ರಶ್ನೆಗಳಿಗೆ ಉತ್ತರವು, ಗಂಡ ಮತ್ತು ಹೆಂಡತಿಯು ವಿವಾಹದ ಕುರಿತಾದ ದೇವರ ಸಲಹೆಯ ಮೇಲೆ ಭರವಸೆಯಿಟ್ಟು ಅದನ್ನು ಅನ್ವಯಿಸುವರೊ ಇಲ್ಲವೊ ಎಂಬುದರ ಮೇಲೆ ಅವಲಂಬಿಸಿರುವುದು. (ಜ್ಞಾನೋಕ್ತಿ 3:5, 6 ಓದಿ.) ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ಅವರು ಆತನ ಸಲಹೆಯನ್ನು ಅನ್ವಯಿಸುವ ಅಗತ್ಯವಿದೆ. ನಾವೀಗ ಈ ನಾಲ್ಕು ಪ್ರಶ್ನೆಗಳಿಗೆ ಬೈಬಲು ನೀಡುವ ಉತ್ತರದ ಮೇಲೆ ಗಮನವನ್ನು ಕೇಂದ್ರೀಕರಿಸೋಣ: ಒಬ್ಬನು ಏಕೆ ಮದುವೆಯಾಗಬೇಕು? ನೀವು ಮದುವೆಯಾಗುವಲ್ಲಿ ಒಬ್ಬ ಸಂಗಾತಿಯಾಗಿ ಯಾರನ್ನು ಆಯ್ಕೆಮಾಡಬೇಕು? ಮದುವೆಗಾಗಿ ನೀವು ಹೇಗೆ ಸಿದ್ಧತೆಯನ್ನು  ಮಾಡಿಕೊಳ್ಳಸಾಧ್ಯವಿದೆ? ಮತ್ತು ದಂಪತಿಗಳು ಸಂತೋಷದಿಂದ ಬಾಳ್ವೆಮಾಡಲು ಯಾವುದು ಸಹಾಯಮಾಡಬಲ್ಲದು?

ಏಕೆ ಮದುವೆಯಾಗಬೇಕು?

3. ಕ್ಷುಲ್ಲಕ ಕಾರಣಗಳಿಗಾಗಿ ಮದುವೆಯಾಗುವುದು ಅವಿವೇಕಯುತವಾಗಿದೆ ಏಕೆ?

3 ಮದುವೆಯು ಸಂತೋಷಕ್ಕೆ ಅತ್ಯಾವಶ್ಯಕ ಎಂಬುದು ಕೆಲವರ ನಂಬಿಕೆ. ಅವರ ದೃಷ್ಟಿಕೋನದಲ್ಲಿ ಒಬ್ಬ ವ್ಯಕ್ತಿಯು ಸಂಗಾತಿಯನ್ನು ಕಂಡುಕೊಂಡರೆ ಮಾತ್ರ ಅವನು ಜೀವನದಲ್ಲಿ ಸಂತೃಪ್ತಿಯನ್ನು ಅಥವಾ ಆನಂದವನ್ನು ಪಡೆದುಕೊಳ್ಳಸಾಧ್ಯವಿದೆ. ಇದು ನಿಜವಾಗಿಯೂ ಅಸತ್ಯವಾಗಿದೆ! ಅವಿವಾಹಿತನಾಗಿದ್ದ ಯೇಸು ಅವಿವಾಹಿತ ಸ್ಥಿತಿಯನ್ನು ಒಂದು ವರವಾಗಿ ವರ್ಣಿಸಿದನು ಮತ್ತು ಅದಕ್ಕೆ ಆಸ್ಪದಮಾಡಿಕೊಳ್ಳಸಾಧ್ಯವಿರುವವರು ಹಾಗೆ ಮಾಡುವಂತೆ ಅವರನ್ನು ಉತ್ತೇಜಿಸಿದನು. (ಮತ್ತಾಯ 19:11, 12) ಅಪೊಸ್ತಲ ಪೌಲನು ಸಹ ಅವಿವಾಹಿತತನದ ಪ್ರಯೋಜನಗಳ ಕುರಿತು ಚರ್ಚಿಸಿದನು. (1 ಕೊರಿಂಥ 7:32-38) ಯೇಸುವಾಗಲಿ ಪೌಲನಾಗಲಿ ಈ ವಿಷಯದಲ್ಲಿ ಯಾವುದೇ ನಿಯಮವನ್ನು ಮಾಡಲಿಲ್ಲ; ವಾಸ್ತವದಲ್ಲಿ ‘ಮದುವೆಯಾಗಬಾರದೆಂದು’ ಹೇಳುವುದು ‘ದೆವ್ವಗಳ ಬೋಧನೆಗಳಲ್ಲಿ’ ಒಂದಾಗಿ ಪಟ್ಟಿಮಾಡಲ್ಪಟ್ಟಿದೆ. (1 ತಿಮೊಥೆಯ 4:1-3) ಆದರೂ ಯಾವುದೇ ಅಪಕರ್ಷಣೆಯಿಲ್ಲದೆ ಯೆಹೋವನ ಸೇವೆಮಾಡಲು ಬಯಸುವವರಿಗೆ ಅವಿವಾಹಿತ ಸ್ಥಿತಿಯಿಂದ ಹೆಚ್ಚಿನ ಪ್ರಯೋಜನವಿದೆ. ಹಾಗಾದರೆ ಸಮವಯಸ್ಕರ ಒತ್ತಡದಂಥ ಕ್ಷುಲ್ಲಕ ಕಾರಣಗಳಿಗಾಗಿ ಮದುವೆಯಾಗುವುದು ವಿವೇಕಯುತವಾಗದೆ ಇದ್ದೀತು.

4. ಒಂದು ಒಳ್ಳೆಯ ವಿವಾಹವು ಮಕ್ಕಳನ್ನು ಬೆಳೆಸಲು ಯಾವ ಬುನಾದಿಯನ್ನು ಒದಗಿಸುತ್ತದೆ?

4 ಇನ್ನೊಂದು ಕಡೆಯಲ್ಲಿ, ಮದುವೆಮಾಡಿಕೊಳ್ಳಲು ಸಮಂಜಸವಾದ ಕಾರಣಗಳು ಇವೆಯೊ? ಹೌದು. ವಿವಾಹವು ಸಹ ನಮ್ಮ ಪ್ರೀತಿಭರಿತ ದೇವರ ಒಂದು ಕೊಡುಗೆಯಾಗಿದೆ. (ಆದಿಕಾಂಡ 2:18 ಓದಿ.) ಇದು ಕೆಲವೊಂದು ಪ್ರಯೋಜನಗಳನ್ನು ಹೊಂದಿದೆ ಮತ್ತು ಆಶೀರ್ವಾದಗಳನ್ನು ತರುವ ಸಾಧ್ಯತೆಯುಳ್ಳದ್ದಾಗಿದೆ. ಉದಾಹರಣೆಗೆ, ಒಂದು ಒಳ್ಳೆಯ ವಿವಾಹವು ಕುಟುಂಬ ಜೀವನಕ್ಕೆ ಅತ್ಯುತ್ತಮವಾದ ಬುನಾದಿಯಾಗಿದೆ. ಮಕ್ಕಳನ್ನು ಬೆಳೆಸಲು, ಅವರಿಗೆ ಪ್ರೀತಿ, ಶಿಸ್ತು ಮತ್ತು ಮಾರ್ಗದರ್ಶನವನ್ನು ನೀಡಲು ಹೆತ್ತವರಿರುವ ಸುಭದ್ರವಾದ ಪರಿಸರದ ಆವಶ್ಯಕತೆಯಿದೆ. (ಕೀರ್ತನೆ 127:3; ಎಫೆಸ 6:1-4) ಆದರೆ ಮದುವೆಮಾಡಿಕೊಳ್ಳಲು ಕೇವಲ ಮಕ್ಕಳನ್ನು ಬೆಳೆಸುವುದೊಂದೇ ಕಾರಣವಾಗಿರಬಾರದು.

5, 6. (ಎ) ಪ್ರಸಂಗಿ 4:9-12 ಕ್ಕನುಸಾರ ಒಂದು ಆಪ್ತ ಸ್ನೇಹದಿಂದ ದೊರೆಯುವ ಪ್ರಾಯೋಗಿಕ ಪ್ರಯೋಜನಗಳಲ್ಲಿ ಕೆಲವು ಯಾವುವು? (ಬಿ) ಒಂದು ವಿವಾಹವು ಮೂರು ಹುರಿಯ ಹಗ್ಗದಂತಿರಸಾಧ್ಯವಿದೆ ಹೇಗೆ?

 5 ಈ ಅಧ್ಯಾಯದ ಮುಖ್ಯ ವಚನವನ್ನು ಅದರ ಪೂರ್ವಾಪರದೊಂದಿಗೆ ಪರಿಗಣಿಸಿರಿ: “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನಿಲ್ಲದಿದ್ದರೆ ಅವನ ಗತಿ ದುರ್ಗತಿಯೇ. ಮತ್ತು ಒಬ್ಬನ ಮಗ್ಗುಲಲ್ಲೊಬ್ಬನು ಮಲಗಿಕೊಂಡರೆ ಇಬ್ಬರಿಗೂ ಬೆಚ್ಚಗಾಗುವದು; ಒಂಟಿಗನಿಗೆ ಹೇಗೆ ಬೆಚ್ಚಗಾದೀತು. ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲ.”—ಪ್ರಸಂಗಿ 4:9-12.

6 ಮೂಲತಃ ಈ ಶಾಸ್ತ್ರವಚನವು ಗೆಳೆತನದ ಮೌಲ್ಯದ ಕುರಿತು ಮಾತಾಡುತ್ತದೆ. ವಿವಾಹವು ಅತ್ಯಾಪ್ತ ಗೆಳೆತನಗಳನ್ನು ಒಳಗೂಡಿದೆ ಎಂಬುದು ನಿಶ್ಚಯ. ಈ ಶಾಸ್ತ್ರವಚನವು ತೋರಿಸುವಂತೆ ಅಂಥ ಐಕ್ಯಭಾವವು ಸಹಾಯ, ಸಾಂತ್ವನ ಮತ್ತು ಸಂರಕ್ಷಣೆಯನ್ನು ಒದಗಿಸಬಲ್ಲದು. ಒಂದು ವಿವಾಹವು ಕೇವಲ ಇಬ್ಬರು ವ್ಯಕ್ತಿಗಳ ಬಂಧಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿರುವಲ್ಲಿ ಅದು ವಿಶೇಷವಾಗಿ ಬಲವಾದದ್ದಾಗಿರುತ್ತದೆ. ಈ ವಚನವು ಸೂಚಿಸುವಂತೆ ಎರಡು ಹುರಿಯ ಹಗ್ಗವು ಕಿತ್ತುಹೋಗಬಹುದು. ಮೂರು ಹುರಿಗಳು ಒಂದಕ್ಕೊಂದು ಹೆಣೆದುಕೊಂಡಿರುವಲ್ಲಿ ಅಥವಾ ನುಲಿದುಕೊಂಡಿರುವಲ್ಲಿ ಅದು ಕಿತ್ತುಹೋಗುವುದು ತುಂಬ ಕಷ್ಟ. ಯೆಹೋವನಿಗೆ ಸಂತೋಷವನ್ನು ಉಂಟುಮಾಡುವುದು ಗಂಡನ ಮತ್ತು ಹೆಂಡತಿಯ ಮುಖ್ಯ ಚಿಂತೆಯಾಗಿರುವಾಗ ಅವರ ಮದುವೆಯು ಮೂರು ಹುರಿಯ ಹಗ್ಗದಂತಿರುತ್ತದೆ. ಯೆಹೋವನು ವಿವಾಹದಲ್ಲಿ ಪ್ರಮುಖವಾದ ಒಂದು ಪಾತ್ರವನ್ನು ನಿರ್ವಹಿಸುವುದರಿಂದ ಆ ಐಕ್ಯಭಾವವು ತುಂಬ ಬಲವಾದದ್ದಾಗಿರುತ್ತದೆ.

7, 8. (ಎ) ಲೈಂಗಿಕ ಬಯಕೆಗಳೊಂದಿಗೆ ಹೋರಾಡುತ್ತಿರುವ ಅವಿವಾಹಿತ ಕ್ರೈಸ್ತರಿಗೆ ಪೌಲನು ಯಾವ ಸಲಹೆಯನ್ನು ಬರೆದನು? (ಬಿ) ವಿವಾಹದ ವಿಷಯದಲ್ಲಿ ಬೈಬಲು ನಮಗೆ ಯಾವ ವಾಸ್ತವಿಕ ನೋಟವನ್ನು ಒದಗಿಸುತ್ತದೆ?

7 ಮಾತ್ರವಲ್ಲದೆ, ಲೈಂಗಿಕ ಬಯಕೆಗಳನ್ನು ಯೋಗ್ಯವಾದ ರೀತಿಯಲ್ಲಿ ತೃಪ್ತಿಪಡಿಸಸಾಧ್ಯವಿರುವ ಏಕಮಾತ್ರ ಏರ್ಪಾಡು ವಿವಾಹವಾಗಿದೆ. ಈ ಏರ್ಪಾಡಿನಲ್ಲಿ ಲೈಂಗಿಕ ಸಂಬಂಧವನ್ನು ಯೋಗ್ಯವಾಗಿಯೇ ಸಂತೋಷದ ಮೂಲವಾಗಿ ಪರಿಗಣಿಸಲಾಗುತ್ತದೆ. (ಜ್ಞಾನೋಕ್ತಿ 5:18) ಲೈಂಗಿಕ ಅಪೇಕ್ಷೆಗಳು ಮೊದಲಾಗಿ ಹೆಚ್ಚು ಬಲವಾಗಿರುವ “ಯೌವನದ ಪರಿಪಕ್ವ ಸ್ಥಿತಿ” ಎಂದು ಬೈಬಲು ಯಾವುದನ್ನು ಕರೆಯುತ್ತದೋ ಅದನ್ನು ಒಬ್ಬ ಅವಿವಾಹಿತ ವ್ಯಕ್ತಿಯು ದಾಟಿರುವಾಗಲೂ  ಅವನು ಅಥವಾ ಅವಳು ಲೈಂಗಿಕ ಬಯಕೆಗಳೊಂದಿಗೆ ಹೋರಾಡುತ್ತಿರಬಹುದು. ಇಂಥ ಬಯಕೆಗಳನ್ನು ನಿಯಂತ್ರಿಸದಿದ್ದಲ್ಲಿ ಇವು ಅಶುದ್ಧವಾದ ಅಥವಾ ಅಯೋಗ್ಯವಾದ ನಡತೆಗೆ ನಡೆಸಬಲ್ಲವು. ಪೌಲನು ಅವಿವಾಹಿತ ವ್ಯಕ್ತಿಗಳಿಗೆ ಈ ಸಲಹೆಯನ್ನು ಬರೆಯುವಂತೆ ಪ್ರೇರಿಸಲ್ಪಟ್ಟನು: “ಅವರಿಗೆ ಸ್ವನಿಯಂತ್ರಣವಿಲ್ಲದಿದ್ದರೆ ಅವರು ಮದುವೆಮಾಡಿಕೊಳ್ಳಲಿ; ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದೇ ಮೇಲು.”—1 ಕೊರಿಂಥ 7:9, 36; ಯಾಕೋಬ 1:15.

8 ಯಾವುದೇ ಕಾರಣಗಳು ಒಬ್ಬ ವ್ಯಕ್ತಿಯನ್ನು ಮದುವೆಮಾಡಿಕೊಳ್ಳುವಂತೆ ಪ್ರಚೋದಿಸುವುದಾದರೂ ವಾಸ್ತವಿಕ ನೋಟವುಳ್ಳವರಾಗಿರುವುದು ಒಳ್ಳೇದು. ಪೌಲನು ತಿಳಿಸಿದಂತೆ, ಮದುವೆಮಾಡಿಕೊಳ್ಳುವವರಿಗೆ “ತಮ್ಮ ಶರೀರದಲ್ಲಿ ಸಂಕಟವಿರುವುದು.” (1 ಕೊರಿಂಥ 7:28) ವಿವಾಹಿತ ವ್ಯಕ್ತಿಗಳು ಅವಿವಾಹಿತ ವ್ಯಕ್ತಿಗಳು ಎದುರಿಸದಿರುವಂಥ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. ಆದರೂ ನೀವು ಮದುವೆಯಾಗುವ ಆಯ್ಕೆಯನ್ನು ಮಾಡುವುದಾದರೆ ಹೇಗೆ ಪಂಥಾಹ್ವಾನಗಳನ್ನು ಕಡಿಮೆಗೊಳಿಸಿ ಆಶೀರ್ವಾದಗಳನ್ನು ಹೆಚ್ಚಿಸಬಲ್ಲಿರಿ? ಒಂದು ವಿಧವು ಒಬ್ಬ ಸಂಗಾತಿಯನ್ನು ವಿವೇಕದಿಂದ ಆರಿಸಿಕೊಳ್ಳುವುದೇ ಆಗಿದೆ.

ಯಾರು ಒಬ್ಬ ಒಳ್ಳೆಯ ವಿವಾಹ ಸಂಗಾತಿಯಾಗಬಲ್ಲರು?

9, 10. (ಎ) ಅವಿಶ್ವಾಸಿಗಳೊಂದಿಗೆ ನಿಕಟ ಬಂಧವನ್ನು ರೂಪಿಸುವ ಅಪಾಯವನ್ನು ಪೌಲನು ಹೇಗೆ ದೃಷ್ಟಾಂತಿಸಿದನು? (ಬಿ) ಒಬ್ಬ ಅವಿಶ್ವಾಸಿಯನ್ನು ವಿವಾಹವಾಗಬಾರದೆಂಬ ದೇವರ ಸಲಹೆಯನ್ನು ಅಲಕ್ಷಿಸುವುದರಿಂದ ಅನೇಕವೇಳೆ ಏನಾಗುತ್ತದೆ?

9 ಒಬ್ಬ ವಿವಾಹ ಸಂಗಾತಿಯನ್ನು ಆರಿಸಿಕೊಳ್ಳುವಾಗ ಅನ್ವಯಿಸಬೇಕಾಗಿರುವ ಒಂದು ಅತ್ಯಾವಶ್ಯಕ ಮೂಲತತ್ತ್ವವನ್ನು ಬರೆಯುವಂತೆ ಪೌಲನು ಪ್ರೇರಿಸಲ್ಪಟ್ಟನು. ಅದೇನೆಂದರೆ, “ನೀವು ಅವಿಶ್ವಾಸಿಗಳೊಂದಿಗೆ ಅಸಮರ್ಪಕವಾದ ನೊಗದಡಿ ಸೇರಬೇಡಿರಿ.” (2 ಕೊರಿಂಥ 6:14, ಪಾದಟಿಪ್ಪಣಿ) ಅವನ ದೃಷ್ಟಾಂತವು ಕೃಷಿ ಜೀವನದ ವಾಸ್ತವಾಂಶದ ಮೇಲೆ ಆಧಾರಿತವಾಗಿತ್ತು. ಗಾತ್ರದಲ್ಲಿ ಅಥವಾ ಬಲದಲ್ಲಿ ಅಪಾರವಾದ ಭಿನ್ನತೆಯಿರುವ ಎರಡು ಪ್ರಾಣಿಗಳನ್ನು ಒಂದೇ ನೊಗಕ್ಕೆ ಕಟ್ಟುವುದಾದರೆ ಎರಡೂ ಪ್ರಾಣಿಗಳು ಕಷ್ಟಪಡುವವು. ತದ್ರೀತಿಯಲ್ಲಿ ಒಬ್ಬ ವಿಶ್ವಾಸಿಯೂ ಅವಿಶ್ವಾಸಿಯೂ ವಿವಾಹದ ಮೂಲಕ ಒಂದೇ ನೊಗದಡಿ ಬರುವುದಾದರೆ, ನಿಸ್ಸಂದೇಹವಾಗಿಯೂ ಅವರು ಘರ್ಷಣೆಯನ್ನು ಮತ್ತು ಒತ್ತಡಗಳನ್ನು ಎದುರಿಸುವರು. ಒಬ್ಬ ಸಂಗಾತಿಯು ಯೆಹೋವನ ಪ್ರೀತಿಯಲ್ಲಿ ಉಳಿಯಲು ಬಯಸುತ್ತಿರುವಾಗ ಅವರ ಸಂಗಾತಿಯು ಅದರ ವಿಷಯದಲ್ಲಿ ಸ್ವಲ್ಪವೇ ಆಸಕ್ತಿಯನ್ನು ತೋರಿಸುವಲ್ಲಿ ಅಥವಾ ಆಸಕ್ತಿಯನ್ನೇ ತೋರಿಸದಿರುವಲ್ಲಿ,  ಜೀವನದಲ್ಲಿನ ಅವರ ಆದ್ಯತೆಗಳು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ ಮತ್ತು ಹೆಚ್ಚಿನ ಕಿರಿಕಿರಿ ಉಂಟಾಗುವುದು ಸಂಭವನೀಯ. ಆದುದರಿಂದ ಪೌಲನು ಕ್ರೈಸ್ತರಿಗೆ ‘ಕರ್ತನಲ್ಲಿರುವವರನ್ನು ಮಾತ್ರ’ ವಿವಾಹವಾಗುವಂತೆ ಉತ್ತೇಜಿಸಿದನು.—1 ಕೊರಿಂಥ 7:39.

10 ಕೆಲವೊಂದು ವಿದ್ಯಮಾನಗಳಲ್ಲಿ, ಅವಿವಾಹಿತ ಕ್ರೈಸ್ತರು ಸದ್ಯಕ್ಕೆ ತಾವು ಅನುಭವಿಸುತ್ತಿರುವ ಒಂಟಿತನಕ್ಕಿಂತಲೂ ಅಸಮರ್ಪಕವಾದ ನೊಗದಡಿ ಸೇರುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕೆಲವರು ಬೈಬಲಿನ ಸಲಹೆಯನ್ನು ಅಲಕ್ಷಿಸಲು ನಿರ್ಧರಿಸಿ, ಯೆಹೋವನ ಸೇವೆಮಾಡದಿರುವಂಥ ಒಬ್ಬ ವ್ಯಕ್ತಿಯನ್ನು ವಿವಾಹವಾಗುತ್ತಾರೆ. ಇದರ ಪರಿಣಾಮವು ಪದೇ ಪದೇ ದುಃಖಕರವಾಗಿರುತ್ತದೆ. ಇಂಥವರು ಜೀವನದ ಅತಿ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಲಾರದಂಥ ಒಬ್ಬ ವ್ಯಕ್ತಿಯನ್ನು ಮದುವೆಯಾಗಿರುತ್ತಾರೆ. ಇದರಿಂದ ಉಂಟಾಗುವ ಒಂಟಿತನವು ವಿವಾಹಕ್ಕೆ ಮುಂಚೆ ಅವರು ಅನುಭವಿಸಿರುವಂಥ ಒಂಟಿತನಕ್ಕಿಂತ ಅತ್ಯಧಿಕವಾಗಿರಬಹುದು. ಸಂತೋಷಕರವಾಗಿಯೇ, ಈ ವಿಷಯದಲ್ಲಿ ಕೊಡಲ್ಪಟ್ಟಿರುವ ದೈವಿಕ ಸಲಹೆಯಲ್ಲಿ ಭರವಸೆಯಿಡುವ ಮತ್ತು ಅದಕ್ಕನುಸಾರ ನಿಷ್ಠೆಯಿಂದ ನಡೆಯುವ ಸಾವಿರಾರು ಮಂದಿ ಅವಿವಾಹಿತ ಕ್ರೈಸ್ತರಿದ್ದಾರೆ. (ಕೀರ್ತನೆ 32:8 ಓದಿ.) ಒಂದಲ್ಲಒಂದು ದಿನ ವಿವಾಹವಾಗುವ ನಿರೀಕ್ಷೆಯಿಂದ ಅವರು ಯೆಹೋವ ದೇವರನ್ನು ಆರಾಧಿಸುವವರ ನಡುವೆ ಒಬ್ಬ ಸಂಗಾತಿಯನ್ನು ಕಂಡುಕೊಳ್ಳುವ ತನಕ ಅವಿವಾಹಿತರಾಗಿಯೇ ಉಳಿಯುತ್ತಾರೆ.

11. ಒಬ್ಬ ವಿವಾಹ ಸಂಗಾತಿಯನ್ನು ವಿವೇಕದಿಂದ ಆರಿಸಿಕೊಳ್ಳಲು ಯಾವುದು ನಿಮಗೆ ಸಹಾಯಮಾಡಬಲ್ಲದು? (“ ಒಬ್ಬ ಸಂಗಾತಿಯಲ್ಲಿ ನಾನು ಏನನ್ನು ನೋಡಲು ಬಯಸುತ್ತಿದ್ದೇನೆ?” ಎಂಬ ಚೌಕವನ್ನೂ ನೋಡಿ.)

11 ಯೆಹೋವನ ಸೇವಕರಲ್ಲಿ ಎಲ್ಲರೂ ಯೋಗ್ಯರಾದ ವಿವಾಹ ಸಂಗಾತಿಗಳಾಗಿಬಿಡುವುದಿಲ್ಲ. ನೀವು ವಿವಾಹವಾಗಲು ಯೋಚಿಸುತ್ತಿರುವಲ್ಲಿ ಯಾರ ವ್ಯಕ್ತಿತ್ವ, ಆಧ್ಯಾತ್ಮಿಕ ಗುರಿಗಳು ಮತ್ತು ದೇವರ ಮೇಲಣ ಪ್ರೀತಿಯು ನಿಮ್ಮದಕ್ಕೆ ಸರಿಹೊಂದುತ್ತದೋ ಅಂಥ ಒಬ್ಬ ಸಂಗಾತಿಗಾಗಿ ಹುಡುಕಿರಿ. ಈ ವಿಷಯದಲ್ಲಿ ನಂಬಿಗಸ್ತ ಆಳು ವರ್ಗವು ಹೆಚ್ಚಿನ ಮುದ್ರಿತ ಮಾಹಿತಿಯನ್ನು ಒದಗಿಸಿದೆ. ಇಂಥ ಶಾಸ್ತ್ರಾಧಾರಿತ ಸಲಹೆಯನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವುದು ಹಾಗೂ ಅದು ಈ ಪ್ರಮುಖ ನಿರ್ಣಯವನ್ನು ಮಾಡುವುದರಲ್ಲಿ ನಿಮ್ಮನ್ನು ಮಾರ್ಗದರ್ಶಿಸುವಂತೆ ಬಿಡುವುದು ವಿವೇಕಯುತವಾಗಿರುವುದು. *ಕೀರ್ತನೆ 119:105 ಓದಿ.

12. ಅನೇಕ ದೇಶಗಳಲ್ಲಿ ವಿವಾಹದ ಕುರಿತಾದ ಯಾವ ಪದ್ಧತಿಯು ರೂಢಿಯಲ್ಲಿದೆ ಮತ್ತು ಬೈಬಲಿನ ಯಾವ ಉದಾಹರಣೆಯು ಈ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡುತ್ತದೆ?

 12 ಅನೇಕ ದೇಶಗಳಲ್ಲಿ ಹೆತ್ತವರು ತಮ್ಮ ಮಗನಿಗೆ ಅಥವಾ ಮಗಳಿಗೆ ಒಬ್ಬ ಸಂಗಾತಿಯನ್ನು ಆಯ್ಕೆಮಾಡುವ ಪದ್ಧತಿಯಿದೆ. ಇಂಥ ಸಂಸ್ಕೃತಿಗಳಲ್ಲಿ, ಇಂಥ ಪ್ರಮುಖ ಆಯ್ಕೆಯನ್ನು ಮಾಡಲು ಅಗತ್ಯವಿರುವ ಹೆಚ್ಚಿನ ವಿವೇಕ ಹಾಗೂ ಅನುಭವವು ಹೆತ್ತವರಿಗಿದೆ ಎಂದು ಸಾಮಾನ್ಯವಾಗಿ ಅಂಗೀಕರಿಸಲಾಗುತ್ತದೆ. ದೊಡ್ಡವರು ನಿಶ್ಚಯಿಸಿದ ವಿವಾಹಗಳು ಅನೇಕವೇಳೆ ಯಶಸ್ವಿಕರವಾಗುತ್ತವೆ; ಬೈಬಲಿನ ಸಮಯಗಳಲ್ಲಿಯೂ ಅವು ಯಶಸ್ವಿಕರವಾಗಿದ್ದವು. ಇಸಾಕನಿಗೆ ಹೆಣ್ಣು ನೋಡಲಿಕ್ಕಾಗಿ ತನ್ನ ಸೇವಕನನ್ನು ಕಳುಹಿಸಿದ ಅಬ್ರಹಾಮನ ಉದಾಹರಣೆಯು ಇಂದು ತದ್ರೀತಿಯ ಸ್ಥಾನದಲ್ಲಿರಬಹುದಾದ ಹೆತ್ತವರಿಗೆ ಬೋಧಪ್ರದವಾಗಿದೆ. ಅಬ್ರಹಾಮನಿಗೆ ಹಣ ಮತ್ತು ಸಾಮಾಜಿಕ ಸ್ಥಾನಮಾನಗಳು ಚಿಂತೆಯ ವಿಷಯಗಳಾಗಿರಲಿಲ್ಲ. ಬದಲಾಗಿ ಯೆಹೋವನನ್ನು ಆರಾಧಿಸುತ್ತಿದ್ದಂಥ ಜನರ ನಡುವೆ ಇಸಾಕನಿಗಾಗಿ ಹೆಣ್ಣನ್ನು ನೋಡಲು ಅವನು ದೃಢನಿಶ್ಚಿತ ಪ್ರಯತ್ನಗಳನ್ನು ಮಾಡಿದನು. *ಆದಿಕಾಂಡ 24:3, 67.

ಯಶಸ್ವಿಕರವಾದ ಮದುವೆಗಾಗಿ ನೀವು ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳಸಾಧ್ಯವಿದೆ?

13-15. (ಎ) ವಿವಾಹದ ಕುರಿತು ಆಲೋಚಿಸುತ್ತಿರುವ ಒಬ್ಬ ಯುವಕನಿಗೆ ಜ್ಞಾನೋಕ್ತಿ 24:27ರಲ್ಲಿ ಕಂಡುಬರುವ ಮೂಲತತ್ತ್ವವು ಹೇಗೆ ಸಹಾಯಮಾಡಬಲ್ಲದು? (ಬಿ) ಒಬ್ಬ ಯುವತಿಯು ವಿವಾಹಕ್ಕಾಗಿ ಸಿದ್ಧಳಾಗಿರಲು ಏನು ಮಾಡಸಾಧ್ಯವಿದೆ?

13 ನೀವು ಮದುವೆಯ ವಿಷಯದಲ್ಲಿ ಗಂಭೀರವಾಗಿ ಆಲೋಚಿಸುತ್ತಿರುವಲ್ಲಿ, ‘ನಾನು ಇದಕ್ಕೆ ನಿಜವಾಗಿಯೂ ಸಿದ್ಧನಾಗಿದ್ದೇನೊ?’ ಎಂದು ಸ್ವತಃ ಕೇಳಿಕೊಳ್ಳುವುದು ಒಳ್ಳೇದು. ಇದಕ್ಕೆ ಉತ್ತರವು, ಪ್ರೀತಿ, ಲೈಂಗಿಕತೆ, ಒಡನಾಟ ಅಥವಾ ಮಕ್ಕಳನ್ನು ಬೆಳೆಸುವುದರ ಕುರಿತಾದ ನಿಮ್ಮ ಅನಿಸಿಕೆಗಳ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ.  ಬದಲಾಗಿ ಪ್ರತಿಯೊಬ್ಬ ಭಾವೀ ಗಂಡ ಅಥವಾ ಹೆಂಡತಿಯು ನಿರ್ದಿಷ್ಟ ಗುರಿಗಳ ಕುರಿತು ಆಲೋಚಿಸಬೇಕಾಗಿದೆ.

14 ಮದುವೆಮಾಡಿಕೊಳ್ಳಲಿಕ್ಕಾಗಿ ಒಬ್ಬ ಹುಡುಗಿಯನ್ನು ಹುಡುಕುತ್ತಿರುವ ಯುವಕನು ಈ ಮೂಲತತ್ತ್ವದ ಕುರಿತು ಜಾಗರೂಕತೆಯಿಂದ ಆಲೋಚಿಸಬೇಕು: “ಹೊರಗೆ ನಿನ್ನ ಕೆಲಸವನ್ನು ಮುಗಿಸು; ನಿನ್ನ ಹೊಲಗಳನ್ನು ಸಿದ್ಧಪಡಿಸು; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.” (ಜ್ಞಾನೋಕ್ತಿ 24:27, NIBV) ಇದು ಯಾವ ಅಂಶವನ್ನು ಒತ್ತಿಹೇಳುತ್ತದೆ? ಆ ದಿನಗಳಲ್ಲಿ ಒಬ್ಬನು ಮದುವೆಮಾಡಿಕೊಂಡು ಒಂದು ಕುಟುಂಬವನ್ನು ಸ್ಥಾಪಿಸಬೇಕಾದರೆ, ‘ಒಬ್ಬ ಪತ್ನಿಯನ್ನು ಹಾಗೂ ಸಮಯಾನಂತರ ಹುಟ್ಟಬಹುದಾದ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಬೆಂಬಲಿಸಲು ನಾನು ಸಿದ್ಧನಾಗಿದ್ದೇನೊ?’ ಎಂದು ಸ್ವತಃ ಕೇಳಿಕೊಳ್ಳಬೇಕಾಗಿತ್ತು. ಅವನು ತನ್ನ ಹೊಲಗಳನ್ನು ಅಥವಾ ಬೆಳೆಗಳನ್ನು ನೋಡಿಕೊಳ್ಳುವ ಮೂಲಕ ಮೊದಲು ಕೆಲಸ ಮಾಡಬೇಕಾಗಿತ್ತು. ಇದೇ ಮೂಲತತ್ತ್ವವು ಇಂದೂ ಅನ್ವಯವಾಗುತ್ತದೆ. ಮದುವೆಯಾಗಲು ಬಯಸುವಂಥ ಒಬ್ಬ ಪುರುಷನು ಆ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧನಾಗುವ ಅಗತ್ಯವಿದೆ. ಅವನು ಶಾರೀರಿಕವಾಗಿ ಕೆಲಸಮಾಡಲು ಶಕ್ತನಾಗಿರುವ ತನಕ ಕೆಲಸಮಾಡಲೇಬೇಕು. ತನ್ನ ಕುಟುಂಬದ ಶಾರೀರಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆವಶ್ಯಕತೆಗಳನ್ನು ಪೂರೈಸದಿರುವಂಥ ಒಬ್ಬ ಪುರುಷನು ನಂಬದವನಿಗಿಂತ ಕಡೆಯಾದವನಾಗಿದ್ದಾನೆ ಎಂದು ದೇವರ ವಾಕ್ಯವು ಸೂಚಿಸುತ್ತದೆ!—1 ತಿಮೊಥೆಯ 5:8 ಓದಿ.

15 ತದ್ರೀತಿಯಲ್ಲಿ ವಿವಾಹವಾಗಲು ನಿರ್ಧರಿಸುವಂಥ ಒಬ್ಬ ಸ್ತ್ರೀಯು ಸಹ ಗಂಭೀರವಾದ ಅನೇಕ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಸಿದ್ಧಳಾಗಿರುತ್ತಾಳೆ. ಒಬ್ಬ ಹೆಂಡತಿಯು ತನ್ನ ಗಂಡನಿಗೆ ಸಹಾಯಮಾಡುವಾಗ ಮತ್ತು ತನ್ನ ಮನೆವಾರ್ತೆಯನ್ನು ನೋಡಿಕೊಳ್ಳುವಾಗ ಅವಳಿಗಿರಬೇಕಾದ ಕೆಲವು ಕೌಶಲಗಳು ಮತ್ತು ಗುಣಗಳನ್ನು ಬೈಬಲು ಹೊಗಳುತ್ತದೆ. (ಜ್ಞಾನೋಕ್ತಿ 31:10-31) ವಿವಾಹದಲ್ಲಿ ಒಳಗೂಡಿರುವ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಸಿದ್ಧರಾಗದೇ ವಿವಾಹ ಸಂಬಂಧವನ್ನು ಪ್ರವೇಶಿಸುವ ಸ್ತ್ರೀಪುರುಷರು ನಿಜವಾಗಿಯೂ ಸ್ವಾರ್ಥಿಗಳಾಗಿದ್ದಾರೆ, ಏಕೆಂದರೆ ಭಾವೀ ಸಂಗಾತಿಗೆ ತಾವು ಏನು ನೀಡಸಾಧ್ಯವಿದೆ ಎಂಬುದರ ಕುರಿತು ಅವರು ಆಲೋಚಿಸಲು ತಪ್ಪಿಹೋಗುತ್ತಾರೆ. ಆದರೆ ವಿವಾಹದ ಕುರಿತು ಆಲೋಚಿಸುತ್ತಿರುವವರು ಎಲ್ಲಕ್ಕಿಂತಲೂ ಪ್ರಮುಖವಾಗಿ ಆಧ್ಯಾತ್ಮಿಕವಾಗಿ ಸಿದ್ಧರಾಗಿರುವ ಅಗತ್ಯವಿದೆ.

16, 17. ವಿವಾಹಕ್ಕಾಗಿ ಸಿದ್ಧರಾಗುತ್ತಿರುವವರು ಯಾವ ಶಾಸ್ತ್ರಾಧಾರಿತ ಮೂಲತತ್ತ್ವಗಳ ಕುರಿತು ಮನನಮಾಡಬೇಕಾಗಿದೆ?

 16 ವಿವಾಹಕ್ಕಾಗಿ ಸಿದ್ಧರಾಗುವುದರಲ್ಲಿ ಗಂಡ ಮತ್ತು ಹೆಂಡತಿಗೆ ದೇವರು ನೇಮಿಸಿರುವ ಪಾತ್ರಗಳ ಕುರಿತು ಮನನಮಾಡುವುದೂ ಒಳಗೂಡಿದೆ. ಒಬ್ಬ ಪುರುಷನು ಒಂದು ಕ್ರೈಸ್ತ ಮನೆವಾರ್ತೆಯ ಶಿರಸ್ಸಾಗಿರುವುದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಈ ಪಾತ್ರವು ಒಬ್ಬ ನಿರಂಕುಶ ಪ್ರಭುವಾಗಿ ವರ್ತಿಸಲು ಒಂದು ಪರವಾನಗಿಯಾಗಿರುವುದಿಲ್ಲ. ಬದಲಾಗಿ ಯೇಸು ಶಿರಸ್ಸುತನವನ್ನು ನಿರ್ವಹಿಸುವ ವಿಧವನ್ನು ಅವನು ಅನುಕರಿಸಬೇಕು. (ಎಫೆಸ 5:23) ಅದೇ ರೀತಿಯಲ್ಲಿ ಒಬ್ಬ ಕ್ರೈಸ್ತ ಸ್ತ್ರೀಯು ಪತ್ನಿಯ ಗೌರವಭರಿತ ಪಾತ್ರವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅವಳು ತನ್ನ ‘ಗಂಡನ ನಿಯಮಕ್ಕೆ’ ಅಧೀನಳಾಗಲು ಮನಃಪೂರ್ವಕವಾಗಿ ಸಿದ್ಧಳಾಗಿರುವಳೊ? (ರೋಮನ್ನರಿಗೆ 7:2) ಈಗಾಗಲೇ ಅವಳು ಯೆಹೋವನ ಹಾಗೂ ಕ್ರಿಸ್ತನ ನಿಯಮದ ಕೆಳಗಿದ್ದಾಳೆ. (ಗಲಾತ್ಯ 6:2) ಮನೆವಾರ್ತೆಯಲ್ಲಿ ಅವಳ ಗಂಡನಿಗಿರುವ ಅಧಿಕಾರವು ಇನ್ನೊಂದು ನಿಯಮವನ್ನು ಪ್ರತಿನಿಧಿಸುತ್ತದೆ. ಒಬ್ಬ ಅಪರಿಪೂರ್ಣ ಪುರುಷನ ಅಧಿಕಾರಕ್ಕೆ ಒಳಪಡಿಸಲ್ಪಡುವಾಗ ಅವಳು ಬೆಂಬಲ ನೀಡುವವಳಾಗಿಯೂ ಅಧೀನಳಾಗಿಯೂ ಇರಬಲ್ಲಳೊ? ಈ ಪ್ರತೀಕ್ಷೆಯು ಅವಳಿಗೆ ಹಿಡಿಸದಿರುವುದಾದರೆ ಅವಳು ವಿವಾಹವಾಗದಿರುವುದು ಒಳ್ಳೇದು.

17 ಇದಲ್ಲದೆ ಪ್ರತಿಯೊಬ್ಬ ದಂಪತಿಯು ತಮ್ಮ ಸಂಗಾತಿಯ ವಿಶೇಷ ಆವಶ್ಯಕತೆಗಳನ್ನು ಪೂರೈಸಲು ಸಿದ್ಧರಾಗಿರುವ ಅಗತ್ಯವಿದೆ. (ಫಿಲಿಪ್ಪಿ 2:4 ಓದಿ.) ಪೌಲನು ಬರೆದುದು: “ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ; ಅದೇ ಸಮಯದಲ್ಲಿ, ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು.” ದೈವಿಕ ಪ್ರೇರಣೆಯ ಕೆಳಗೆ ಪೌಲನು ಮನಗಂಡದ್ದೇನೆಂದರೆ, ಒಬ್ಬ ಪುರುಷನು ತನ್ನ ಕಡೆಗೆ ಪತ್ನಿಗಿರುವ ಆಳವಾದ ಗೌರವವನ್ನು ಗ್ರಹಿಸುವ ವಿಶೇಷ ಆವಶ್ಯಕತೆಯುಳ್ಳವನಾಗಿದ್ದಾನೆ. ಮತ್ತು ಒಬ್ಬ ಸ್ತ್ರೀಯು ತನ್ನ ಗಂಡನಿಂದ ಪ್ರೀತಿಸಲ್ಪಡುವ ಅನಿಸಿಕೆಯನ್ನು ಹೊಂದುವ ವಿಶೇಷ ಆವಶ್ಯಕತೆಯುಳ್ಳವಳಾಗಿದ್ದಾಳೆ.—ಎಫೆಸ 5:21-33.

ಪ್ರಣಯಾಚರಣೆ ಮಾಡುವಾಗ ಅನೇಕ ಜೋಡಿಗಳು ವಿವೇಕಯುತವಾಗಿ ಒಬ್ಬ ಸಹಚರಿಗಾಗಿ ಏರ್ಪಾಡನ್ನು ಮಾಡುತ್ತಾರೆ

18. ವಿವಾಹಕ್ಕಾಗಿ ಯೋಜಿಸುತ್ತಿರುವ ಜೋಡಿಗಳು ಪ್ರಣಯಾಚರಣೆಯ ಸಂದರ್ಭದಲ್ಲಿ ಸ್ವನಿಯಂತ್ರಣವನ್ನು ಏಕೆ ತೋರಿಸಬೇಕು?

18 ಆದುದರಿಂದ ಪ್ರಣಯಾಚರಣೆಯು (ಕೋರ್ಟ್ಷಿಪ್‌) ಕೇವಲ ಮೋಜುಮಸ್ತಿಗಾಗಿರುವ ಸಮಯವಾಗಿರುವುದಿಲ್ಲ. ಇದು ಒಬ್ಬ ಪುರುಷನು  ಮತ್ತು ಸ್ತ್ರೀಯು ಪರಸ್ಪರ ಹೇಗೆ ಯೋಗ್ಯವಾಗಿ ವ್ಯವಹರಿಸುವುದು ಎಂಬುದನ್ನು ಕಲಿಯುವ, ವಿವಾಹವು ವಿವೇಕಯುತವಾದ ಆಯ್ಕೆಯಾಗಿದೆಯೋ ಎಂಬುದನ್ನು ಪರಿಗಣಿಸುವ ಸಮಯವಾಗಿದೆ. ಇದು ಸ್ವನಿಯಂತ್ರಣವನ್ನು ತೋರಿಸುವ ಸಮಯವೂ ಆಗಿದೆ! ಶಾರೀರಿಕವಾಗಿ ಆಪ್ತರಾಗುವ ಪ್ರಲೋಭನೆಯು ತುಂಬ ಬಲವಾಗಿರಸಾಧ್ಯವಿದೆ—ಎಷ್ಟೆಂದರೂ ಈ ಆಕರ್ಷಣೆಯು ಸ್ವಾಭಾವಿಕವೇ. ಆದರೆ ನಿಜವಾಗಿಯೂ ಒಬ್ಬರನ್ನೊಬ್ಬರು ಪ್ರೀತಿಸುವವರು ತಮ್ಮ ಪ್ರಿಯ ವ್ಯಕ್ತಿಯ ಆಧ್ಯಾತ್ಮಿಕತೆಗೆ ಹಾನಿಯನ್ನು ಉಂಟುಮಾಡಸಾಧ್ಯವಿರುವ ಯಾವುದೇ ಕೃತ್ಯಗಳಿಂದ ದೂರವಿರುವರು. (1 ಥೆಸಲೊನೀಕ 4:6) ನೀವು ಪ್ರಣಯಾಚರಣೆ ಮಾಡುತ್ತಿರುವಲ್ಲಿ ಸ್ವನಿಯಂತ್ರಣವನ್ನು ತೋರಿಸಿರಿ; ನೀವು ವಿವಾಹವಾಗಲಿ ಆಗದಿರಲಿ ನಿಮ್ಮ ಜೀವನದಾದ್ಯಂತ ಈ ಗುಣದಿಂದ ಪ್ರಯೋಜನ ಪಡೆಯಬಲ್ಲಿರಿ.

ನೀವು ಹೇಗೆ ವಿವಾಹವು ದೀರ್ಘಕಾಲ ಬಾಳುವಂತೆ ಮಾಡಬಲ್ಲಿರಿ?

19, 20. ವಿವಾಹದ ಕುರಿತಾದ ಒಬ್ಬ ಕ್ರೈಸ್ತನ ದೃಷ್ಟಿಕೋನವು ಇಂದಿನ ಲೋಕದಲ್ಲಿರುವ ಅನೇಕರ ದೃಷ್ಟಿಕೋನಕ್ಕಿಂತ ಹೇಗೆ ಭಿನ್ನವಾಗಿರಬೇಕು? ದೃಷ್ಟಾಂತಿಸಿರಿ.

19 ಒಬ್ಬ ದಂಪತಿಗಳು ತಮ್ಮ ಮದುವೆಯನ್ನು ದೀರ್ಘಕಾಲ ಉಳಿಸಿಕೊಳ್ಳಬೇಕಾದರೆ ವಚನಬದ್ಧತೆಯ ಕುರಿತಾದ ಯೋಗ್ಯ ನೋಟ ಅವರಿಗಿರಬೇಕು. ಕಾದಂಬರಿಗಳು ಮತ್ತು ಚಲನಚಿತ್ರಗಳಲ್ಲಿ ಅನೇಕವೇಳೆ ಒಂದು ವಿವಾಹವು ಜನರು ಹಂಬಲಿಸುವಂಥ ಸುಖಾಂತ್ಯವನ್ನು ಹೊಂದಿರುತ್ತದೆ. ನಿಜ ಜೀವನದಲ್ಲಿಯಾದರೋ ವಿವಾಹವು ಒಂದು ಅಂತ್ಯವಲ್ಲ; ಅದು ಆರಂಭವಾಗಿದೆ ಅಷ್ಟೆ—ಯೆಹೋವನು ಶಾಶ್ವತವಾಗಿ ಉಳಿಯಲು ಏರ್ಪಡಿಸಿದ ಒಂದು ವಿಷಯದ ಆರಂಭವಾಗಿದೆ ಅಷ್ಟೆ. (ಆದಿಕಾಂಡ 2:24) ದುಃಖಕರವಾಗಿಯೇ ಇಂದಿನ ಲೋಕದಲ್ಲಿ ಇದು ಸಾಮಾನ್ಯ ದೃಷ್ಟಿಕೋನವಾಗಿಲ್ಲ. ಕೆಲವು ಸಂಸ್ಕೃತಿಗಳಲ್ಲಿ ಜನರು ಮದುವೆಯಾಗುವುದನ್ನು “ಗಂಟುಹಾಕುವುದು” ಎಂದು ಹೇಳುತ್ತಾರೆ. ಈ ದೃಷ್ಟಾಂತವು ವಿವಾಹದ ಕುರಿತಾದ ಸರ್ವಸಾಮಾನ್ಯ ನೋಟವನ್ನು ಸೂಕ್ತವಾಗಿಯೇ ವರ್ಣಿಸುತ್ತದೆ ಎಂಬುದನ್ನು ಅವರು ಗ್ರಹಿಸದಿರಬಹುದು. ಅದು ಹೇಗೆ? ಒಂದು ಒಳ್ಳೆಯ ಗಂಟು ಅಗತ್ಯವಿರುವಾಗ ಗಟ್ಟಿಯಾಗಿರಬೇಕಾದರೂ, ಅದರ ಇನ್ನೊಂದು ಪ್ರಮುಖ ಆವಶ್ಯಕತೆಯೇನೆಂದರೆ ಬೇಕಾದಾಗ ಅದನ್ನು ಸುಲಭವಾಗಿ ಹಾಕಸಾಧ್ಯವಿದೆ ಮತ್ತು ಬಿಚ್ಚಸಾಧ್ಯವಿದೆ.

 20 ಇಂದು ಅನೇಕರು ವಿವಾಹವನ್ನು ತಾತ್ಕಾಲಿಕವಾದ ಏರ್ಪಾಡಾಗಿ ಪರಿಗಣಿಸುತ್ತಾರೆ. ಅವರು ಅತ್ಯಾತುರಭಾವದಿಂದ ಆ ಸಂಬಂಧವನ್ನು ಪ್ರವೇಶಿಸುತ್ತಾರೆ, ಏಕೆಂದರೆ ಇದು ತಮ್ಮ ಆವಶ್ಯಕತೆಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದು ಅವರು ನೆನಸುತ್ತಾರೆ; ಆದರೆ ಇದು ಪಂಥಾಹ್ವಾನದಾಯಕವಾಗಿ ತೋರಿದ ಕೂಡಲೆ ಅದರಿಂದ ಹೊರಗೆ ಬರಲು ನಿರೀಕ್ಷಿಸುತ್ತಾರೆ. ಆದರೂ ವಿವಾಹದಂಥ ಬಂಧವನ್ನು ಸೂಚಿಸಲು ಬೈಬಲು ಹಗ್ಗದ ದೃಷ್ಟಾಂತವನ್ನು ಉಪಯೋಗಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಹಡಗುಗಳನ್ನು ನಡೆಸಲಿಕ್ಕಾಗಿ ಉಪಯೋಗಿಸುವ ಹಗ್ಗಗಳು ದೀರ್ಘಕಾಲ ಬಾಳಿಕೆ ಬರುವಂತೆ, ತೀವ್ರವಾದ ಚಂಡಮಾರುತದಲ್ಲಿ  ಸಹ ಎಂದೂ ಸವೆಯದಂತೆ ಅಥವಾ ಹೆಣಿಗೆ ಬಿಚ್ಚಿಕೊಳ್ಳದಂತೆ ತಯಾರಿಸಲ್ಪಟ್ಟಿರುತ್ತವೆ. ತದ್ರೀತಿಯಲ್ಲಿ ವಿವಾಹವು ದೀರ್ಘಕಾಲ ಬಾಳುವಂತೆ ಉದ್ದೇಶಿಸಲ್ಪಟ್ಟಿದೆ. “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ” ಎಂದು ಯೇಸು ಹೇಳಿದನೆಂಬುದನ್ನು ನೆನಪಿನಲ್ಲಿಡಿ. (ಮತ್ತಾಯ 19:6) ನೀವು ವಿವಾಹವಾಗುವುದಾದರೆ ವಿವಾಹದ ಕುರಿತು ನಿಮಗೆ ಇದೇ ದೃಷ್ಟಿಕೋನವಿರುವ ಅಗತ್ಯವಿದೆ. ಇಂಥ ರೀತಿಯ ವಚನಬದ್ಧತೆಯು ವಿವಾಹವನ್ನು ಹೊರೆಯಾಗಿ ಮಾಡುತ್ತದೊ? ಇಲ್ಲ.

21. ಒಬ್ಬ ಗಂಡನೂ ಹೆಂಡತಿಯೂ ಪರಸ್ಪರರ ಕಡೆಗೆ ಯಾವ ಮನೋಭಾವವನ್ನು ಕಾಪಾಡಿಕೊಳ್ಳಬೇಕಾಗಿದೆ ಮತ್ತು ಹೀಗೆ ಮಾಡಲು ಯಾವುದು ಅವರಿಗೆ ಸಹಾಯಮಾಡಬಹುದು?

21 ಒಬ್ಬ ಗಂಡನೂ ಹೆಂಡತಿಯೂ ಪರಸ್ಪರರ ಕಡೆಗೆ ಯೋಗ್ಯ ನೋಟವನ್ನು ಕಾಪಾಡಿಕೊಳ್ಳಬೇಕಾಗಿದೆ. ಒಬ್ಬ ದಂಪತಿಯು ಪರಸ್ಪರರ ಒಳ್ಳೇ ಗುಣಗಳು ಮತ್ತು ಪ್ರಯತ್ನಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುವಲ್ಲಿ ವಿವಾಹವು ಆನಂದ ಮತ್ತು ಚೈತನ್ಯದ ಮೂಲವಾಗಿರುವುದು. ಒಬ್ಬ ಅಪರಿಪೂರ್ಣ ಸಂಗಾತಿಯ ಕುರಿತು ಇಂಥ ಸಕಾರಾತ್ಮಕ ನೋಟವನ್ನು ಹೊಂದಿರುವುದು ಅವಾಸ್ತವಿಕವಾಗಿದೆಯೊ? ಯೆಹೋವನೆಂದೂ ಅವಾಸ್ತವಿಕನಲ್ಲ, ಆದರೂ ನಮ್ಮ ಕುರಿತು ಆತನು ಸಕಾರಾತ್ಮಕ ನೋಟವನ್ನು ಹೊಂದಿರುವುದು ನಮಗೆ ಪ್ರಾಮುಖ್ಯವಾದದ್ದಾಗಿದೆ. “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” ಎಂದು ಕೀರ್ತನೆಗಾರನು ಕೇಳಿದನು. (ಕೀರ್ತನೆ 130:3) ಅದೇ ರೀತಿಯಲ್ಲಿ ಗಂಡಂದಿರು ಮತ್ತು ಹೆಂಡತಿಯರು ಪರಸ್ಪರರ ಕುರಿತು ಸಕಾರಾತ್ಮಕವಾದ ಮತ್ತು ಕ್ಷಮಿಸುವ ಮನೋಭಾವವನ್ನು ಹೊಂದಿರಬೇಕಾಗಿದೆ.—ಕೊಲೊಸ್ಸೆ 3:13 ಓದಿ.

22, 23. ಅಬ್ರಹಾಮನೂ ಸಾರಳೂ ಇಂದಿನ ವಿವಾಹಿತ ದಂಪತಿಗಳಿಗೆ ಹೇಗೆ ಒಳ್ಳೇ ಮಾದರಿಯಾಗಿದ್ದಾರೆ?

22 ವಿವಾಹವು ಅನೇಕ ವರ್ಷಗಳ ಕಾಲ ಮುಂದುವರಿದಂತೆ ಅದು ಹೆಚ್ಚಿನ ಸಂತೋಷವನ್ನೂ ಸಂತೃಪ್ತಿಯನ್ನೂ ತರಬಲ್ಲದು. ಬೈಬಲು ನಮಗೆ ಅಬ್ರಹಾಮ ಮತ್ತು ಸಾರಳು ವೃದ್ಧ ದಂಪತಿಗಳಾಗಿದ್ದಾಗ ಅವರ ವೈವಾಹಿಕ ಜೀವನವು ಹೇಗಿತ್ತೆಂಬುದನ್ನು ತೋರಿಸುತ್ತದೆ. ಅವರ ಜೀವನವು ಕಷ್ಟತೊಂದರೆಗಳು ಮತ್ತು ಪಂಥಾಹ್ವಾನಗಳಿಂದ ಮುಕ್ತವಾಗಿರಲಿಲ್ಲ ಎಂಬುದಂತೂ ಖಂಡಿತ. ಬಹುಶಃ 60ಗಳ ಪ್ರಾಯದ ಸ್ತ್ರೀಯಾಗಿದ್ದ ಸಾರಳಿಗೆ ಊರ್‌ನಂಥ ಸಮೃದ್ಧ ಪಟ್ಟಣದಲ್ಲಿದ್ದ ಸುಖಸೌಕರ್ಯಗಳಿಂದ ಕೂಡಿದ್ದ ಮನೆಯನ್ನು ಬಿಟ್ಟು ತನ್ನ ಉಳಿದ ಜೀವಮಾನದಾದ್ಯಂತ  ಗುಡಾರಗಳಲ್ಲಿ ವಾಸಿಸಲು ಹೋಗುವುದು ಹೇಗಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಿರಿ. ಆದರೂ ಅವಳು ತನ್ನ ಗಂಡನ ಶಿರಸ್ಸುತನಕ್ಕೆ ತನ್ನನ್ನು ಅಧೀನಪಡಿಸಿಕೊಂಡಳು. ಅಬ್ರಹಾಮನಿಗೆ ನಿಜವಾದ ಸಹಕಾರಿಣಿಯೂ ಸಹಾಯಕಿಯೂ ಆಗಿದ್ದ ಸಾರಳು ತನ್ನ ಗಂಡನ ನಿರ್ಣಯಗಳನ್ನು ಯಶಸ್ವಿಗೊಳಿಸಲು ಗೌರವಪೂರ್ಣವಾಗಿ ಸಹಾಯಮಾಡಿದಳು. ಅವಳ ಅಧೀನತೆಯು ಮೇಲುಮೇಲಿನದ್ದಾಗಿರಲಿಲ್ಲ. “ತನ್ನೊಳಗೆ” ಅಥವಾ ತನ್ನ ಮನಸ್ಸಿನಲ್ಲಿಯೂ ಅವಳು ತನ್ನ ಗಂಡನನ್ನು ಯಜಮಾನ ಎಂದು ಸಂಬೋಧಿಸಿದಳು. (ಆದಿಕಾಂಡ 18:12; 1 ಪೇತ್ರ 3:6) ಅಬ್ರಹಾಮನ ಬಗ್ಗೆ ಅವಳಿಗಿದ್ದ ಗೌರವವು ಹೃದಯದಾಳದಿಂದ ಬಂದದ್ದಾಗಿತ್ತು.

23 ನಿಶ್ಚಯವಾಗಿಯೂ ಅಬ್ರಹಾಮನೂ ಸಾರಳೂ ಎಲ್ಲ ವಿಷಯಗಳನ್ನು ಯಾವಾಗಲೂ ಒಂದೇ ರೀತಿಯಲ್ಲಿ ನೋಡುತ್ತಿದ್ದರು ಎಂಬುದು ಇದರ ಅರ್ಥವಲ್ಲ. ಒಮ್ಮೆ ಸಾರಳು ಕೊಟ್ಟಂಥ ಒಂದು ಸಲಹೆಯು ಅಬ್ರಹಾಮನಿಗೆ “ಬಹುದುಃಖವನ್ನು ಹುಟ್ಟಿಸಿತು.” ಆದರೂ ಯೆಹೋವನ ಮಾರ್ಗದರ್ಶನಕ್ಕನುಸಾರ ಅಬ್ರಹಾಮನು ದೀನಭಾವದಿಂದ ತನ್ನ ಹೆಂಡತಿಯ ಮಾತಿಗೆ ಕಿವಿಗೊಟ್ಟನು ಮತ್ತು ಇದು ಆ ಕುಟುಂಬಕ್ಕೆ ಒಂದು ಆಶೀರ್ವಾದವಾಗಿ ಪರಿಣಮಿಸಿತು. (ಆದಿಕಾಂಡ 21:9-13) ಇಂದು ಗಂಡಂದಿರು ಮತ್ತು ಹೆಂಡತಿಯರು, ಹಲವಾರು ದಶಕಗಳಿಂದ ವೈವಾಹಿಕ ಜೀವನವನ್ನು ನಡೆಸಿರುವವರು ಸಹ ದೇವಭಕ್ತಿಯಿದ್ದ ಈ ದಂಪತಿಯಿಂದ ಹೆಚ್ಚನ್ನು ಕಲಿಯಸಾಧ್ಯವಿದೆ.

24. ಯಾವ ರೀತಿಯ ವಿವಾಹಗಳು ಯೆಹೋವ ದೇವರಿಗೆ ಕೀರ್ತಿಯನ್ನು ತರುತ್ತವೆ ಮತ್ತು ಏಕೆ?

24 ಕ್ರೈಸ್ತ ಸಭೆಯಲ್ಲಿ ಸಾವಿರಗಟ್ಟಲೆ ಸಂತೋಷಭರಿತ ವಿವಾಹಿತ ದಂಪತಿಗಳಿದ್ದಾರೆ. ಈ ವಿವಾಹಗಳಲ್ಲಿ ಹೆಂಡತಿಯು ತನ್ನ ಗಂಡನನ್ನು ಆಳವಾಗಿ ಗೌರವಿಸುತ್ತಾಳೆ, ಗಂಡನು ತನ್ನ ಹೆಂಡತಿಯನ್ನು ಪ್ರೀತಿಸುತ್ತಾನೆ ಮತ್ತು ಮಾನ್ಯಮಾಡುತ್ತಾನೆ ಹಾಗೂ ಎಲ್ಲ ವಿಷಯಗಳಲ್ಲಿ ಯೆಹೋವನ ಚಿತ್ತವನ್ನು ಮಾಡುವುದಕ್ಕೆ ಪ್ರಥಮ ಸ್ಥಾನವನ್ನು ಕೊಡಲು ಇಬ್ಬರೂ ಒಟ್ಟಿಗೆ ಕಾರ್ಯನಡಿಸುತ್ತಾರೆ. ಒಂದುವೇಳೆ ನೀವು ಮದುವೆಯಾಗಲು ನಿರ್ಧರಿಸುವಲ್ಲಿ ನಿಮ್ಮ ಸಂಗಾತಿಯನ್ನು ವಿವೇಕದಿಂದ ಆಯ್ಕೆಮಾಡಿರಿ, ವಿವಾಹಕ್ಕಾಗಿ ಒಳ್ಳೇ ರೀತಿಯಲ್ಲಿ ಸಿದ್ಧತೆಯನ್ನು ಮಾಡಿರಿ ಮತ್ತು ಯೆಹೋವ ದೇವರಿಗೆ ಕೀರ್ತಿಯನ್ನು ತರುವಂಥ ಶಾಂತಿಭರಿತವಾದ ಪ್ರೀತಿಪೂರ್ಣ ವಿವಾಹ ಜೀವನವನ್ನು ನಡೆಸಲು ಕಾರ್ಯನಡಿಸಿರಿ. ಹಾಗೆ ಮಾಡುವಲ್ಲಿ ನಿಮ್ಮ ವಿವಾಹವು ದೇವರ ಪ್ರೀತಿಯಲ್ಲಿ ಉಳಿಯುವಂತೆ ನಿಮಗೆ ಖಂಡಿತವಾಗಿಯೂ ಸಹಾಯಮಾಡುವುದು.

^ ಪ್ಯಾರ. 11 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಅಧ್ಯಾಯ 2ನ್ನು ನೋಡಿ.

^ ಪ್ಯಾರ. 12 ನಂಬಿಗಸ್ತರಾಗಿದ್ದ ಮೂಲಪಿತೃಗಳಲ್ಲಿ ಕೆಲವರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದರು. ಯೆಹೋವನು ಮೂಲಪಿತೃಗಳೊಂದಿಗೆ ಮತ್ತು ಮಾಂಸಿಕ ಇಸ್ರಾಯೇಲ್ಯರೊಂದಿಗೆ ವ್ಯವಹರಿಸುತ್ತಿದ್ದಾಗ ಬಹುಪತ್ನೀತ್ವದ ರೂಢಿಯನ್ನು ಅನುಮತಿಸಿದನು. ಆತನು ಅದನ್ನು ಸ್ಥಾಪಿಸಲಿಲ್ಲ, ಬದಲಾಗಿ ಅದನ್ನು ನಿಯಂತ್ರಿಸಿದನು. ಆದರೆ ಈಗ ಯೆಹೋವನು ತನ್ನ ಆರಾಧಕರ ನಡುವೆ ಬಹುಪತ್ನೀತ್ವವನ್ನು ಅನುಮತಿಸುವುದಿಲ್ಲ ಎಂಬುದನ್ನು ಕ್ರೈಸ್ತರು ಮನಸ್ಸಿನಲ್ಲಿಡುತ್ತಾರೆ.—ಮತ್ತಾಯ 19:9; 1 ತಿಮೊಥೆಯ 3:2.