ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 11

‘ವಿವಾಹವು ಗೌರವಾರ್ಹವಾಗಿರಲಿ’

‘ವಿವಾಹವು ಗೌರವಾರ್ಹವಾಗಿರಲಿ’

“ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು.” —ಜ್ಞಾನೋಕ್ತಿ 5:18.

1, 2. ನಾವು ಯಾವ ಪ್ರಶ್ನೆಯನ್ನು ಪರಿಗಣಿಸುವೆವು ಮತ್ತು ಏಕೆ?

ನಿಮಗೆ ವಿವಾಹವಾಗಿದೆಯೊ? ಆಗಿರುವಲ್ಲಿ ನಿಮ್ಮ ವಿವಾಹವು ಸಂತೋಷದ ಮೂಲವಾಗಿದೆಯೋ ಅಥವಾ ನೀವು ಗಂಭೀರವಾದ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರೊ? ನೀವು ಮತ್ತು ನಿಮ್ಮ ಸಂಗಾತಿ ಭಾವನಾತ್ಮಕವಾಗಿ ದೂರವಾಗಿದ್ದೀರೊ? ನೀವು ವಿವಾಹ ಜೀವನದಲ್ಲಿ ಆನಂದಿಸುವ ಬದಲು ಅದನ್ನು ತಾಳಿಕೊಂಡು ಹೋಗುತ್ತಿದ್ದೀರೊ? ಹಾಗಿರುವಲ್ಲಿ ನೀವು ಈ ಮುಂಚೆ ಆನಂದಿಸುತ್ತಿದ್ದ ಬೆಚ್ಚಗಿನ ವೈವಾಹಿಕ ಬಂಧವು ಈಗ ತಣ್ಣಗಾಗಿರುವುದು ನಿಮಗೆ ದುಃಖವನ್ನು ಉಂಟುಮಾಡುತ್ತಿರಬಹುದು. ಒಬ್ಬ ಕ್ರೈಸ್ತರಾಗಿರುವ ನೀವು ನಿಮ್ಮ ವಿವಾಹವು ನೀವು ಪ್ರೀತಿಸುವಂಥ ದೇವರಾದ ಯೆಹೋವನಿಗೆ ಮಹಿಮೆ ತರುವಂತಿರಬೇಕೆಂದು ಬಯಸುತ್ತೀರಿ ಎಂಬುದು ಖಂಡಿತ. ಆದುದರಿಂದ ನೀವು ಈಗ ಎದುರಿಸುತ್ತಿರುವ ಸನ್ನಿವೇಶಗಳು ನಿಮಗೆ ಚಿಂತೆ ಮತ್ತು ಮನೋವೇದನೆಯನ್ನು ಉಂಟುಮಾಡುತ್ತಿರಬಹುದು. ಹಾಗಿದ್ದರೂ ನಿಮ್ಮ ಸನ್ನಿವೇಶವು ಆಶಾರಹಿತವಾಗಿದೆ ಎಂಬ ತೀರ್ಮಾನಕ್ಕೆ ದಯವಿಟ್ಟು ಬರಬೇಡಿ.

2 ಈ ಮುಂಚೆ ದಾಂಪತ್ಯದಲ್ಲಿ ಆತ್ಮೀಯತೆ ಇರಲಿಲ್ಲವಾದರೂ ಕೇವಲ ಒಟ್ಟಿಗೆ ಜೀವಿಸುತ್ತಿದ್ದ ಆದರೆ ಈಗ ಉತ್ತಮ ಕ್ರೈಸ್ತ ದಂಪತಿಗಳಾಗಿ ಬಾಳುತ್ತಿರುವಂಥ ಕೆಲವರು ನಮ್ಮ ಮಧ್ಯೆ ಇದ್ದಾರೆ. ಅವರು ತಮ್ಮ ಸಂಬಂಧವನ್ನು ಬಲಪಡಿಸಲು ಮಾರ್ಗವನ್ನು ಕಂಡುಕೊಂಡರು. ನೀವು ಸಹ ನಿಮ್ಮ ವಿವಾಹದಲ್ಲಿ ಹೆಚ್ಚಿನ ಸಂತೃಪ್ತಿಯನ್ನು ಕಂಡುಕೊಳ್ಳಬಲ್ಲಿರಿ. ಹೇಗೆ?

ದೇವರಿಗೆ ಮತ್ತು ನಿಮ್ಮ ಸಂಗಾತಿಗೆ ಹೆಚ್ಚು ನಿಕಟರಾಗುವುದು

3, 4. ವಿವಾಹ ಸಂಗಾತಿಗಳು ದೇವರಿಗೆ ಹೆಚ್ಚು ನಿಕಟರಾಗಲು ಶ್ರಮಿಸುವುದಾದರೆ ಹೇಗೆ ಪರಸ್ಪರ ನಿಕಟರಾಗುವರು? ದೃಷ್ಟಾಂತಿಸಿರಿ.

3 ನೀವು ಮತ್ತು ನಿಮ್ಮ ಸಂಗಾತಿಯು ದೇವರಿಗೆ ಹೆಚ್ಚು ನಿಕಟರಾಗಲು ಶ್ರಮಿಸುವಾಗ  ನೀವು ಪರಸ್ಪರ ಹೆಚ್ಚು ಹತ್ತಿರವಾಗುವಿರಿ. ಏಕೆ? ಒಂದು ದೃಷ್ಟಾಂತವನ್ನು ಪರಿಗಣಿಸಿರಿ: ತಳದಲ್ಲಿ ಅಗಲವಾಗಿದ್ದು ತುದಿಯಲ್ಲಿ ಕಿರಿದಾಗಿರುವ ಕೋನಾಕಾರದ ಒಂದು ಬೆಟ್ಟವನ್ನು ಚಿತ್ರಿಸಿಕೊಳ್ಳಿ. ಒಬ್ಬ ಪುರುಷನು ಬೆಟ್ಟದ ತಪ್ಪಲಿನ ಎಡಭಾಗದಲ್ಲಿ ನಿಂತಿದ್ದಾನೆ ಮತ್ತು ಒಬ್ಬ ಸ್ತ್ರೀಯು ತಪ್ಪಲಿನ ಇನ್ನೊಂದು ಪಾರ್ಶ್ವದಲ್ಲಿ ಅಂದರೆ ಬಲಭಾಗದಲ್ಲಿ ನಿಂತಿದ್ದಾಳೆ. ಇಬ್ಬರೂ ಬೆಟ್ಟವನ್ನು ಹತ್ತಲಾರಂಭಿಸುತ್ತಾರೆ. ಅವರಿಬ್ಬರು ಇನ್ನೂ ಬೆಟ್ಟದ ತಪ್ಪಲಿನಲ್ಲಿರುವಾಗ ವಿಸ್ತಾರವಾದ ಅಂತರವು ಅವರನ್ನು ಪ್ರತ್ಯೇಕಿಸುತ್ತದೆ. ಆದರೂ ಅವರಿಬ್ಬರೂ ಬೆಟ್ಟದ ಮೇಲಕ್ಕೆ ಹತ್ತುತ್ತಾ ಅಗಲ ಕಿರಿದಾದ ತುದಿಯ ಕಡೆಗೆ ಸಾಗುವಾಗ ಅವರ ಮಧ್ಯೆ ಇರುವ ಅಂತರವು ಕಡಿಮೆಯಾಗುತ್ತಾ ಹೋಗುತ್ತದೆ. ಈ ದೃಷ್ಟಾಂತದಲ್ಲಿರುವ ಪುನರಾಶ್ವಾಸನೆ ನೀಡುವ ಪಾಠವನ್ನು ನೀವು ಗ್ರಹಿಸಬಲ್ಲಿರೊ?

4 ಪೂರ್ಣ ರೀತಿಯಲ್ಲಿ ಯೆಹೋವನ ಸೇವೆಮಾಡಲು ನೀವು ಮಾಡುವ ಪ್ರಯತ್ನವನ್ನು ಒಂದು ಬೆಟ್ಟವನ್ನು ಹತ್ತಲು ಮಾಡುವ ಪ್ರಯತ್ನಕ್ಕೆ ಹೋಲಿಸಸಾಧ್ಯವಿದೆ. ನೀವು ಯೆಹೋವನನ್ನು ಪ್ರೀತಿಸುವುದರಿಂದ ದೃಷ್ಟಾಂತಕ್ಕನುಸಾರ ಈಗಾಗಲೇ ಮೇಲೆ ಹತ್ತಲು ಅತ್ಯಧಿಕ ಪ್ರಯತ್ನವನ್ನು ಮಾಡುತ್ತಿದ್ದೀರಿ ಎಂಬುದು ನಿಜ. ಆದರೆ ನೀವು ಮತ್ತು ನಿಮ್ಮ ಸಂಗಾತಿಯು ಭಾವನಾತ್ಮಕವಾಗಿ ದೂರವಾಗಿರುವಲ್ಲಿ ನೀವಿಬ್ಬರೂ ಬೆಟ್ಟದ ಎರಡೂ ಬದಿಗಳಿಂದ ಹತ್ತುತ್ತಿರಬಹುದು. ಆದರೆ ನೀವು ಮೇಲೆ ಹತ್ತುತ್ತಾ ಹೋದಂತೆ ಏನಾಗುತ್ತದೆ? ಆರಂಭದಲ್ಲಿ ಸಾಕಷ್ಟು ದೊಡ್ಡ ಅಂತರವು ನಿಮ್ಮನ್ನು ಪ್ರತ್ಯೇಕಿಸುತ್ತದೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಆದರೂ ನೀವು ದೇವರಿಗೆ ಹೆಚ್ಚು ನಿಕಟವಾಗಲು ಪ್ರಯತ್ನಿಸಿದಷ್ಟು—ಹೆಚ್ಚು ಮೇಲೆ ಹತ್ತಲು ಪ್ರಯತ್ನಿಸಿದಷ್ಟು—ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ನಿಕಟತೆ ಹೆಚ್ಚುತ್ತದೆ. ವಾಸ್ತವದಲ್ಲಿ ದೇವರಿಗೆ ಹೆಚ್ಚು ನಿಕಟವಾಗುವುದೇ ನಿಮ್ಮ ಸಂಗಾತಿಗೆ ಹೆಚ್ಚು ನಿಕಟವಾಗಲಿಕ್ಕಾಗಿರುವ ಕೀಲಿಕೈ ಆಗಿದೆ. ಆದರೆ ಇದನ್ನು ಮಾಡುವುದಾದರೂ ಹೇಗೆ?

ಬೈಬಲ್‌ ಜ್ಞಾನವನ್ನು ಅನ್ವಯಿಸುವಾಗ ನಿಮ್ಮ ವಿವಾಹವನ್ನು ಬಪಡಿಸುವ ಶಕ್ತಿ ಅದಕ್ಕಿದೆ

5. (ಎ) ಯೆಹೋವನಿಗೆ ಮತ್ತು ತನ್ನ ವಿವಾಹ ಸಂಗಾತಿಗೆ ಒಬ್ಬನು ಹೆಚ್ಚು ನಿಕಟವಾಗುವ ಒಂದು ವಿಧವು ಯಾವುದು? (ಬಿ) ಯೆಹೋವನು ವಿವಾಹವನ್ನು ಹೇಗೆ ವೀಕ್ಷಿಸುತ್ತಾನೆ?

5 ದೃಷ್ಟಾಂತಕ್ಕನುಸಾರ ಮೇಲೆ ಹತ್ತಲಿಕ್ಕಾಗಿರುವ ಒಂದು ಪ್ರಮುಖ ವಿಧವು ಯಾವುದೆಂದರೆ, ನೀವು ಮತ್ತು ನಿಮ್ಮ ಸಂಗಾತಿಯು ದೇವರ ವಾಕ್ಯದಲ್ಲಿ ಕಂಡುಬರುವ ವಿವಾಹಕ್ಕೆ ಸಂಬಂಧಪಟ್ಟ ಬುದ್ಧಿವಾದಕ್ಕೆ ಕಿವಿಗೊಡುವುದೇ ಆಗಿದೆ. (ಕೀರ್ತನೆ 25:4; ಯೆಶಾಯ 48:17, 18) ಆದುದರಿಂದ ಅಪೊಸ್ತಲ ಪೌಲನು  ಕೊಟ್ಟ ನಿರ್ದಿಷ್ಟವಾದ ಸಲಹೆಯನ್ನು ಪರಿಗಣಿಸಿರಿ. “ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ” ಎಂದು ಅವನು ಹೇಳಿದನು. (ಇಬ್ರಿಯ 13:4) ಇದರ ಅರ್ಥವೇನಾಗಿದೆ? “ಗೌರವಾರ್ಹ” ಎಂಬ ಪದವು ಒಂದು ವಿಷಯವು ಮಾನ್ಯತೆಯುಳ್ಳದ್ದು ಮತ್ತು ಅಮೂಲ್ಯವಾದದ್ದು ಎಂಬುದನ್ನು ಸೂಚಿಸುತ್ತದೆ. ಯೆಹೋವನು ವಿವಾಹವನ್ನು ಇದೇ ರೀತಿಯಲ್ಲಿ ವೀಕ್ಷಿಸುತ್ತಾನೆ—ಆತನು ಇದನ್ನು ಅಮೂಲ್ಯವಾದದ್ದಾಗಿ ಮಾನ್ಯಮಾಡುತ್ತಾನೆ.

ನಿಮ್ಮ ಪ್ರಚೋದನೆ—ಯೆಹೋವನಿಗಾಗಿರುವ ಹೃತ್ಪೂರ್ವಕ ಪ್ರೀತಿಯೇ

6. ವಿವಾಹದ ಕುರಿತು ಪೌಲನು ಕೊಟ್ಟ ಸಲಹೆಯ ಪೂರ್ವಾಪರವು ಏನನ್ನು ತೋರಿಸುತ್ತದೆ ಮತ್ತು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ?

6 ವಾಸ್ತವದಲ್ಲಿ ದೇವರ ಸೇವಕರಾಗಿರುವ ನಿಮಗೆ ಮತ್ತು ನಿಮ್ಮ ಸಂಗಾತಿಗೆ, ವಿವಾಹವು ಅಮೂಲ್ಯವಾಗಿದೆ, ಪವಿತ್ರವೂ ಆಗಿದೆ ಎಂಬುದು ಈಗಾಗಲೇ ತಿಳಿದಿದೆ. ವಿವಾಹದ ಏರ್ಪಾಡನ್ನು ಸ್ಥಾಪಿಸಿದಾತನು ಯೆಹೋವನೇ ಆಗಿದ್ದಾನೆ. (ಮತ್ತಾಯ 19:4-6 ಓದಿ.) ಆದರೆ ನೀವು ಈಗ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವಲ್ಲಿ ವಿವಾಹವು ಗೌರವಾರ್ಹವಾಗಿದೆ ಎಂಬುದನ್ನು ತಿಳಿದಿರುವುದು ತಾನೇ ನೀವು ಮತ್ತು ನಿಮ್ಮ ಸಂಗಾತಿಯು ಪರಸ್ಪರ ಪ್ರೀತಿ ಮತ್ತು ಗೌರವದಿಂದ ವ್ಯವಹರಿಸುವಂತೆ ಪ್ರಚೋದಿಸಲು ಸಾಕಾಗದಿರಬಹುದು. ಹಾಗಾದರೆ ಇದನ್ನು ಮಾಡಲು ನಿಮ್ಮನ್ನು ಯಾವುದು ಪ್ರಚೋದಿಸುವುದು? ಗೌರವ ತೋರಿಸುವ ವಿಷಯವನ್ನು ಪೌಲನು ಹೇಗೆ ಸಂಬೋಧಿಸಿದನು ಎಂಬುದನ್ನು ಜಾಗರೂಕತೆಯಿಂದ ಗಮನಿಸಿರಿ. ‘ವಿವಾಹವು ಗೌರವಾರ್ಹವಾಗಿ ಇದೆ’ ಎಂದು ಅವನು ಹೇಳಲಿಲ್ಲ; ಬದಲಿಗೆ ‘ವಿವಾಹವು ಗೌರವಾರ್ಹವಾಗಿ ಇರಲಿ’ ಎಂದು ಹೇಳಿದನು. ಪೌಲನು ಬರಿಯ ಒಂದು ಹೇಳಿಕೆಯನ್ನು ಮಾಡಲಿಲ್ಲ, ಬದಲಾಗಿ ಬುದ್ಧಿವಾದವನ್ನು ಕೊಟ್ಟನು. * ಈ ವ್ಯತ್ಯಾಸವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ನಿಮ್ಮ ಸಂಗಾತಿಗಾಗಿ ಪುನಃ ಮಾನ್ಯತೆಯನ್ನು ಬೆಳೆಸಿಕೊಳ್ಳಲು ನೀವು ಹೆಚ್ಚಿನ ಪ್ರಚೋದನೆಯನ್ನು ಕಂಡುಕೊಳ್ಳುವಂತೆ ನಿಮಗೆ ಸಹಾಯಮಾಡಬಹುದು. ಹಾಗೇಕೆ?

7. (ಎ) ನಾವು ಯಾವ ಶಾಸ್ತ್ರಾಧಾರಿತ ಆಜ್ಞೆಗಳನ್ನು ಪಾಲಿಸುತ್ತೇವೆ ಮತ್ತು ಏಕೆ? (ಬಿ) ವಿಧೇಯತೆ ತೋರಿಸುವುದರಿಂದ ಯಾವ ಒಳ್ಳೇ ಫಲಿತಾಂಶಗಳು ಸಿಗುತ್ತವೆ?

 7 ಶಿಷ್ಯರನ್ನಾಗಿ ಮಾಡುವ ನೇಮಕ ಅಥವಾ ಆರಾಧನೆಗಾಗಿ ಒಟ್ಟುಗೂಡಬೇಕೆಂಬ ಸಲಹೆಯಂಥ ಇತರ ಶಾಸ್ತ್ರಾಧಾರಿತ ಆಜ್ಞೆಗಳನ್ನು ನೀವು ಹೇಗೆ ವೀಕ್ಷಿಸುತ್ತೀರಿ ಎಂಬುದನ್ನು ತುಸು ಪರಿಗಣಿಸಿರಿ. (ಮತ್ತಾಯ 28:19; ಇಬ್ರಿಯ 10:24, 25) ಈ ಆಜ್ಞೆಗಳನ್ನು ಪಾಲಿಸುವುದು ಕೆಲವೊಮ್ಮೆ ಪಂಥಾಹ್ವಾನವಾಗಿ ಇರಬಹುದು ಎಂಬುದು ಒಪ್ಪಿಕೊಳ್ಳತಕ್ಕದ್ದೇ. ನೀವು ಯಾರಿಗೆ ಸಾರುತ್ತೀರೋ ಆ ಜನರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದು ಅಥವಾ ನೀವು ಮಾಡುವಂಥ ಐಹಿಕ ಕೆಲಸವು ನಿಮ್ಮನ್ನು ಎಷ್ಟು ದಣಿಸಿಬಿಡಬಹುದೆಂದರೆ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ತುಂಬ ಕಷ್ಟಕರವಾಗಬಹುದು. ಹಾಗಿದ್ದರೂ ನೀವು ರಾಜ್ಯದ ಸಂದೇಶವನ್ನು ಸಾರುತ್ತಾ ಇರುತ್ತೀರಿ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಾ ಇರುತ್ತೀರಿ. ಯಾರಿಂದಲೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ—ಸೈತಾನನಿಂದಲೂ ಸಾಧ್ಯವಿಲ್ಲ! ಏಕೆ? ಏಕೆಂದರೆ ಯೆಹೋವನಿಗಾಗಿರುವ ಹೃತ್ಪೂರ್ವಕ ಪ್ರೀತಿಯು ಆತನ ಆಜ್ಞೆಗಳಿಗೆ ವಿಧೇಯರಾಗುವಂತೆ ನಿಮ್ಮನ್ನು ಪ್ರಚೋದಿಸುತ್ತದೆ. (1 ಯೋಹಾನ 5:3) ಇದರಿಂದ ಯಾವ ಒಳ್ಳೇ ಫಲಿತಾಂಶಗಳು ಸಿಗುತ್ತವೆ? ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಮತ್ತು ಕೂಟಗಳಿಗೆ ಹಾಜರಾಗುವುದು ನಿಮಗೆ ಆಂತರಿಕ ಶಾಂತಿ ಹಾಗೂ ಹೃತ್ಪೂರ್ವಕ ಆನಂದವನ್ನು ನೀಡುತ್ತದೆ; ಏಕೆಂದರೆ ನೀವು ದೇವರ ಚಿತ್ತವನ್ನು ಮಾಡುತ್ತಾ ಇದ್ದೀರಿ ಎಂಬುದು ನಿಮಗೆ ತಿಳಿದಿರುತ್ತದೆ. ಪ್ರತಿಯಾಗಿ ಈ ಭಾವನೆಗಳು ನಿಮ್ಮಲ್ಲಿ ನವಚೈತನ್ಯವನ್ನು ಉಂಟುಮಾಡುತ್ತವೆ. (ನೆಹೆಮಿಾಯ 8:10) ಇದರಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

8, 9. (ಎ) ವಿವಾಹವನ್ನು ಗೌರವಿಸಬೇಕು ಎಂಬ ಬುದ್ಧಿವಾದಕ್ಕೆ ವಿಧೇಯರಾಗಲು ಯಾವುದು ನಮ್ಮನ್ನು ಪ್ರಚೋದಿಸಬಹುದು ಮತ್ತು ಏಕೆ? (ಬಿ) ಯಾವ ಎರಡು ಅಂಶಗಳನ್ನು ನಾವೀಗ ಪರಿಗಣಿಸಲಿದ್ದೇವೆ?

8 ದೇವರಿಗಾಗಿರುವ ನಿಮ್ಮ ಆಳವಾದ ಪ್ರೀತಿಯು ಅಡ್ಡಿತಡೆಗಳ ಹೊರತಾಗಿಯೂ ಸಾರುವ ಮತ್ತು ಕೂಟವಾಗಿ ಕೂಡಿಬರುವ ಆಜ್ಞೆಗಳಿಗೆ ವಿಧೇಯತೆ ತೋರಿಸುವಂತೆ ನಿಮ್ಮನ್ನು ಪ್ರಚೋದಿಸುತ್ತದೆ. ತದ್ರೀತಿಯಲ್ಲಿ ಯೆಹೋವನಿಗಾಗಿರುವ ನಿಮ್ಮ ಪ್ರೀತಿಯು, ಕಷ್ಟಕರವಾಗಿ ತೋರುವಂಥ ಸಂದರ್ಭಗಳಲ್ಲಿಯೂ “[ನಿಮ್ಮ] ವಿವಾಹವು . . . ಗೌರವಾರ್ಹವಾಗಿರಲಿ” ಎಂಬ ಶಾಸ್ತ್ರಾಧಾರಿತ  ಬುದ್ಧಿವಾದಕ್ಕೆ ವಿಧೇಯರಾಗುವಂತೆ ನಿಮ್ಮನ್ನು ಪ್ರಚೋದಿಸಬಲ್ಲದು. (ಇಬ್ರಿಯ 13:4; ಕೀರ್ತನೆ 18:29; ಪ್ರಸಂಗಿ 5:4) ಮಾತ್ರವಲ್ಲದೆ ಸಾರಲು ಮತ್ತು ಕೂಟವಾಗಿ ಕೂಡಿಬರಲು ನೀವು ಮಾಡುವ ಪ್ರಯತ್ನಗಳನ್ನು ದೇವರು ಹೇರಳವಾಗಿ ಆಶೀರ್ವದಿಸುವಂತೆಯೇ ನಿಮ್ಮ ವಿವಾಹವನ್ನು ಗೌರವಿಸಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಗಮನಿಸುವನು ಮತ್ತು ಆಶೀರ್ವದಿಸುವನು.—1 ಥೆಸಲೊನೀಕ 1:3; ಇಬ್ರಿಯ 6:10.

9 ಹಾಗಾದರೆ ನೀವು ನಿಮ್ಮ ವಿವಾಹವನ್ನು ಗೌರವಾರ್ಹವಾದದ್ದಾಗಿ ಹೇಗೆ ಮಾಡಬಲ್ಲಿರಿ? ವಿವಾಹದ ಏರ್ಪಾಡನ್ನು ಹಾಳುಮಾಡುವಂಥ ಯಾವುದೇ ವರ್ತನೆಯಿಂದ ನೀವು ದೂರವಿರುವ ಅಗತ್ಯವಿದೆ. ಅಷ್ಟುಮಾತ್ರವಲ್ಲ ನಿಮ್ಮ ವಿವಾಹ ಬಂಧವನ್ನು ಬಲಪಡಿಸುವಂಥ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

 ವಿವಾಹವನ್ನು ಅಗೌರವಿಸುವಂಥ ಮಾತು ಮತ್ತು ನಡತೆಯಿಂದ ದೂರವಿರಿ

10, 11. (ಎ) ಎಂಥ ನಡತೆಯು ವಿವಾಹವನ್ನು ಅಗೌರವಿಸುತ್ತದೆ? (ಬಿ) ನಾವು ನಮ್ಮ ಸಂಗಾತಿಗೆ ಯಾವ ಪ್ರಶ್ನೆಯನ್ನು ಕೇಳಬೇಕು?

10 ಸ್ವಲ್ಪ ಸಮಯದ ಹಿಂದೆ ಒಬ್ಬ ಕ್ರೈಸ್ತ ಹೆಂಡತಿಯು ಹೇಳಿದ್ದು: “ತಾಳಿಕೊಳ್ಳಲು ನನಗೆ ಸಹಾಯಮಾಡುವಂತೆ ನಾನು ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ.” ಏನನ್ನು ತಾಳಿಕೊಳ್ಳಲು? ಅವಳು ವಿವರಿಸುವುದು: “ನನ್ನ ಗಂಡನು ನನ್ನ ಮೇಲೆ ವಾಗ್ದಾಳಿಮಾಡುತ್ತಾನೆ. ನನ್ನ ಮೈಮೇಲೆ ಗಾಯಗಳು ಕಾಣಲಿಕ್ಕಿಲ್ಲ, ಆದರೆ ‘ನೀನೊಂದು ಹೊರೆ!’ ಮತ್ತು ‘ನೀನು ಅಯೋಗ್ಯಳು!’ ಎಂದು ಅವನು ಯಾವಾಗಲೂ ನುಡಿಯುವ ಚುಚ್ಚುಮಾತುಗಳು ನನ್ನ ಮನಸ್ಸನ್ನು ಘಾಸಿಗೊಳಿಸಿವೆ.” ಈ ಹೆಂಡತಿಯು ಗಂಭೀರವಾಗಿ ಚಿಂತಿಸಬೇಕಾದ ಒಂದು ವಿಷಯವನ್ನು ತಿಳಿಯಪಡಿಸುತ್ತಾಳೆ; ಅದು ದಂಪತಿಗಳು ನಿಂದಾತ್ಮಕ ಮಾತುಗಳನ್ನಾಡುವುದೇ ಆಗಿದೆ.

11 ಕ್ರೈಸ್ತ ಮನೆತನಗಳಲ್ಲಿರುವ ದಂಪತಿಗಳು ಒಬ್ಬರ ಮೇಲೊಬ್ಬರು ಕ್ರೂರವಾದ ಮಾತುಗಳಿಂದ ದಾಳಿಮಾಡುವುದು ಅದೆಷ್ಟು ದುಃಖಕರವಾಗಿದೆ. ಇದು ವಾಸಿಯಾಗಲು ಕಷ್ಟಕರವಾದ ಭಾವನಾತ್ಮದ ಗಾಯಗಳನ್ನು ಉಂಟುಮಾಡುತ್ತದೆ! ಹಾನಿಕಾರಕ ಮಾತಿನಿಂದ ತುಂಬಿರುವಂಥ ಒಂದು ವಿವಾಹವು ಗೌರವಾರ್ಹವಾಗಿರುವುದಿಲ್ಲ ಎಂಬುದು ಖಂಡಿತ. ನಿಮ್ಮ ವಿವಾಹದಲ್ಲಿ ಇಂಥ ಸಮಸ್ಯೆ ಇದೆಯೇ? ಇದನ್ನು ಕಂಡುಕೊಳ್ಳುವ ಒಂದು ವಿಧವು, “ನನ್ನ ಮಾತುಗಳು ನಿನ್ನ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ?” ಎಂದು ನಿಮ್ಮ ಸಂಗಾತಿಯನ್ನು ದೀನಭಾವದಿಂದ ಕೇಳುವುದೇ ಆಗಿದೆ. ನಿಮ್ಮ ಮಾತುಗಳು ಆಗಿಂದಾಗ್ಗೆ ಭಾವನಾತ್ಮಕ ಗಾಯಗಳನ್ನು ಉಂಟುಮಾಡಿವೆ ಎಂದು ನಿಮ್ಮ ಸಂಗಾತಿಗೆ ಅನಿಸುವಲ್ಲಿ ಸನ್ನಿವೇಶವನ್ನು ಉತ್ತಮಗೊಳಿಸಲಿಕ್ಕಾಗಿ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ.—ಗಲಾತ್ಯ 5:15; ಎಫೆಸ 4:31 ಓದಿ.

12. ದೇವರ ದೃಷ್ಟಿಯಲ್ಲಿ ಒಬ್ಬನ ಆರಾಧನೆಯು ಹೇಗೆ ವ್ಯರ್ಥವಾಗಿ ಪರಿಣಮಿಸಸಾಧ್ಯವಿದೆ?

12 ವಿವಾಹದ ಏರ್ಪಾಡಿನಲ್ಲಿ ನೀವು ನಿಮ್ಮ ನಾಲಿಗೆಯನ್ನು ಉಪಯೋಗಿಸುವ ವಿಧವು ಯೆಹೋವನೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿ ಇಟ್ಟುಕೊಳ್ಳಿ. “ಔಪಚಾರಿಕವಾದ ಆರಾಧಕನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಸ್ವಂತ ಹೃದಯವನ್ನು ಮೋಸಗೊಳಿಸಿಕೊಳ್ಳುತ್ತಾ  ಇರುವುದಾದರೆ ಅಂಥವನ ಆರಾಧನಾ ರೀತಿಯು ವ್ಯರ್ಥ” ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 1:26) ನಿಮ್ಮ ಮಾತು ನಿಮ್ಮ ಆರಾಧನೆಗೆ ನಿಕಟವಾಗಿ ಸಂಬಂಧಿಸಿದೆ. ಒಬ್ಬನು ಎಷ್ಟರ ತನಕ ದೇವರ ಸೇವೆಮಾಡುತ್ತಿದ್ದೇನೆಂದು ಹೇಳಿಕೊಳ್ಳುತ್ತಾನೋ ಅಷ್ಟರ ತನಕ ಅವನ ಮನೆಯಲ್ಲಿ ಏನು ನಡೆಯುತ್ತದೆ ಎಂಬುದು ಅಷ್ಟೇನೂ ಪ್ರಾಮುಖ್ಯವಲ್ಲ ಎಂಬ ವಿಚಾರವನ್ನು ಬೈಬಲು ಬೆಂಬಲಿಸುವುದಿಲ್ಲ. ದಯವಿಟ್ಟು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿ. ಇದು ಗಂಭೀರವಾದ ವಿಷಯವಾಗಿದೆ. (1 ಪೇತ್ರ 3:7 ಓದಿ.) ನಿಮ್ಮಲ್ಲಿ ಸಾಮರ್ಥ್ಯಗಳು ಮತ್ತು ಹುರುಪು ಇರಬಹುದು, ಆದರೆ ನೀವು ಬೇಕುಬೇಕೆಂದೇ ನಿಮ್ಮ ಸಂಗಾತಿಯನ್ನು ಚುಚ್ಚುಮಾತುಗಳಿಂದ ನೋಯಿಸುವಲ್ಲಿ ನೀವು ವಿವಾಹದ ಏರ್ಪಾಡನ್ನು ಅಗೌರವಿಸುತ್ತೀರಿ ಹಾಗೂ ನಿಮ್ಮ ಆರಾಧನೆಯು ದೇವರ ದೃಷ್ಟಿಯಲ್ಲಿ ವ್ಯರ್ಥವಾದದ್ದಾಗಿ ಕಂಡುಬರಬಹುದು.

13. ಒಬ್ಬ ವಿವಾಹ ಸಂಗಾತಿಯು ಹೇಗೆ ಭಾವನಾತ್ಮಕ ನೋವನ್ನುಂಟುಮಾಡಸಾಧ್ಯವಿದೆ?

13 ವಿವಾಹ ಸಂಗಾತಿಗಳು ಪರೋಕ್ಷವಾದ ವಿಧಗಳಲ್ಲಿ ಭಾವನಾತ್ಮಕ ನೋವನ್ನು ಉಂಟುಮಾಡುವ ವಿಷಯದಲ್ಲೂ ಜಾಗ್ರತೆ ವಹಿಸತಕ್ಕದ್ದು. ಎರಡು ಉದಾಹರಣೆಗಳನ್ನು ಪರಿಗಣಿಸಿರಿ: ಒಬ್ಬ ಒಂಟಿ ತಾಯಿಯು ಸಲಹೆಯನ್ನು ಪಡೆದುಕೊಳ್ಳಲಿಕ್ಕಾಗಿ ಸಭೆಯಲ್ಲಿರುವ ಒಬ್ಬ ವಿವಾಹಿತ ಪುರುಷನಿಗೆ ಆಗಾಗ ಫೋನ್‌ಮಾಡುತ್ತಾಳೆ ಮತ್ತು ಅವರು ಎಲ್ಲ ವಿಷಯಗಳ ಕುರಿತು ಮಾತಾಡುತ್ತಾರೆ; ಒಬ್ಬ ಅವಿವಾಹಿತ ಕ್ರೈಸ್ತ ಸಹೋದರನು ಒಬ್ಬ ವಿವಾಹಿತ ಕ್ರೈಸ್ತ ಸಹೋದರಿಯೊಂದಿಗೆ ಕ್ಷೇತ್ರ ಸೇವೆಯಲ್ಲಿ ಒಟ್ಟಿಗೆ ಕೆಲಸಮಾಡುವ ಮೂಲಕ ಪ್ರತಿ ವಾರ ಅವಳೊಂದಿಗೆ ತುಂಬ ಸಮಯವನ್ನು ಕಳೆಯುತ್ತಾನೆ. ಈ ಉದಾಹರಣೆಗಳಲ್ಲಿರುವ ವಿವಾಹಿತ ವ್ಯಕ್ತಿಗಳಿಗೆ ಯೋಗ್ಯವಾದ ಹೇತುಗಳಿರಬಹುದು; ಆದರೆ ಅವರ ನಡತೆಯು ಅವರ ಸಂಗಾತಿಗಳ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ? ಇಂಥ ಸನ್ನಿವೇಶವನ್ನು ಎದುರಿಸುತ್ತಿರುವ ಒಬ್ಬ ಹೆಂಡತಿಯು ಹೇಳಿದ್ದು: “ನನ್ನ ಗಂಡನು ಸಭೆಯಲ್ಲಿರುವ ಇನ್ನೊಬ್ಬ ಸಹೋದರಿಗೆ ಇಷ್ಟೊಂದು ಸಮಯ ಮತ್ತು ಗಮನವನ್ನು ಕೊಡುತ್ತಾನೆ ಎಂಬುದು ನನ್ನ ಮನಸ್ಸಿಗೆ ನೋವನ್ನುಂಟುಮಾಡುತ್ತದೆ. ಇದು ನನ್ನಲ್ಲಿ ಕೀಳರಿಮೆಯನ್ನು ಹುಟ್ಟಿಸುತ್ತದೆ.”

14. (ಎ) ಆದಿಕಾಂಡ 2:24 ರಲ್ಲಿ ಯಾವ ವೈವಾಹಿಕ ಹೊಣೆಗಾರಿಕೆಯ ಕುರಿತು ಒತ್ತಿಹೇಳಲಾಗಿದೆ? (ಬಿ) ನಾವು ಸ್ವತಃ ಏನು ಕೇಳಿಕೊಳ್ಳಬೇಕಾಗಿದೆ?

14 ಈ ಸಂಗಾತಿಯ ಮತ್ತು ವಿವಾಹದಲ್ಲಿ ಇಂಥದ್ದೇ ಸನ್ನಿವೇಶವನ್ನು ಎದುರಿಸುವಂಥ ಇತರರ ಮನಸ್ಸಿಗೆ ನೋವಾಗುತ್ತದೆ ಎಂಬುದು ಅರ್ಥಮಾಡಿಕೊಳ್ಳತಕ್ಕ  ವಿಷಯವಾಗಿದೆ. ಅವರ ಸಂಗಾತಿಗಳು ವಿವಾಹದ ವಿಷಯದಲ್ಲಿ ದೇವರು ಕೊಟ್ಟಿರುವ ಮೂಲಭೂತ ಉಪದೇಶವನ್ನು ಅಲಕ್ಷಿಸುತ್ತಾರೆ. ಅದೇನೆಂದರೆ, “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.” (ಆದಿಕಾಂಡ 2:24) ಮದುವೆ ಮಾಡಿಕೊಳ್ಳುವವರು ವಿವಾಹದ ನಂತರವೂ ತಮ್ಮ ಹೆತ್ತವರನ್ನು ಗೌರವಿಸುತ್ತಾರೆ ಎಂಬುದು ನಿಜ; ಆದರೆ ಅವರು ತಮ್ಮ ಸಂಗಾತಿಯ ಕಡೆಗೆ ಪ್ರಪ್ರಧಾನ ಹೊಣೆಗಾರಿಕೆಯನ್ನು ಹೊಂದಿರುವುದು ದೇವರ  ಏರ್ಪಾಡಾಗಿದೆ. ತದ್ರೀತಿಯಲ್ಲಿ ಕ್ರೈಸ್ತರು ತಮ್ಮ ಜೊತೆ ವಿಶ್ವಾಸಿಗಳನ್ನು ಆತ್ಮೀಯವಾಗಿ ಪ್ರೀತಿಸುತ್ತಾರೆ; ಆದರೆ ತಮ್ಮ ಸಂಗಾತಿಯ ಕಡೆಗೆ ಅವರಿಗೆ ಪ್ರಧಾನ ಜವಾಬ್ದಾರಿಯಿದೆ. ಆದುದರಿಂದ ವಿವಾಹಿತ ಕ್ರೈಸ್ತರು ಜೊತೆ ವಿಶ್ವಾಸಿಗಳೊಂದಿಗೆ, ವಿಶೇಷವಾಗಿ ವಿರುದ್ಧ ಲಿಂಗದವರೊಂದಿಗೆ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಕಳೆಯುವಾಗ ಅಥವಾ ಅವರೊಂದಿಗೆ ಅಗತ್ಯಕ್ಕಿಂತ ಹೆಚ್ಚು ಆತ್ಮೀಯರಾಗುವಾಗ ಅವರು ತಮ್ಮ ವಿವಾಹ ಬಂಧದ ಮೇಲೆ ಒತ್ತಡವನ್ನು ಹೇರುತ್ತಾರೆ. ನಿಮ್ಮ ವಿವಾಹದಲ್ಲಿ ವೈಮನಸ್ಯ ಉಂಟಾಗಲು ಇದು ಕಾರಣವಾಗಿರಬಹುದೊ? ‘ನನ್ನ ಸಂಗಾತಿಗೆ ಯೋಗ್ಯವಾಗಿ ಕೊಡಬೇಕಾದ ಸಮಯ, ಗಮನ ಮತ್ತು ಪ್ರೀತಿಯನ್ನು ನಾನು ನಿಜವಾಗಿಯೂ ಕೊಡುತ್ತಿದ್ದೇನೊ?’ ಎಂದು ಸ್ವತಃ ಕೇಳಿಕೊಳ್ಳಿ.

15. ಮತ್ತಾಯ 5:28 ಕ್ಕನುಸಾರ ವಿವಾಹಿತ ಕ್ರೈಸ್ತರು ವಿರುದ್ಧ ಲಿಂಗದ ಒಬ್ಬ ವ್ಯಕ್ತಿಗೆ ಅನುಚಿತ ಗಮನವನ್ನು ಕೊಡುವುದರಿಂದ ದೂರವಿರಬೇಕು ಏಕೆ?

15 ಮಾತ್ರವಲ್ಲದೆ ತಮ್ಮ ಸಂಗಾತಿಯಲ್ಲದ ವಿರುದ್ಧ ಲಿಂಗದ ವ್ಯಕ್ತಿಗಳಿಗೆ ಅನುಚಿತ ಗಮನವನ್ನು ಕೊಡುವಂಥ ವಿವಾಹಿತ ಕ್ರೈಸ್ತರು ಅವಿವೇಕಯುತವಾಗಿ ಅಪಾಯಕರ ನೆಲದ ಮೇಲೆ ಕಾಲಿಡುವವರಾಗಿದ್ದಾರೆ. ದುಃಖಕರವಾಗಿ, ಕೆಲವು ವಿವಾಹಿತ ಕ್ರೈಸ್ತರು ತಾವು ಯಾರೊಂದಿಗೆ ತುಂಬ ಆತ್ಮೀಯರಾಗಿದ್ದಾರೋ ಅವರ ವಿಷಯದಲ್ಲಿ ಪ್ರಣಯಾತ್ಮಕ ಭಾವನೆಗಳನ್ನು ಬೆಳೆಸಿಕೊಂಡಿದ್ದಾರೆ. (ಮತ್ತಾಯ 5:28) ಇದರ ಫಲಿತಾಂಶವಾಗಿ ಇಂಥ ಭಾವನಾತ್ಮಕ ಬಂಧಗಳು ವಿವಾಹವನ್ನು ಇನ್ನಷ್ಟು ಅಗೌರವಿಸುವಂಥ ನಡತೆಗೆ ಮುನ್ನಡೆಸಿವೆ. ಈ ವಿಷಯದಲ್ಲಿ ಅಪೊಸ್ತಲ ಪೌಲನು ಏನು ಹೇಳಿದನು ಎಂಬುದನ್ನು ಪರಿಗಣಿಸಿರಿ.

“ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ”

16. ವಿವಾಹದ ವಿಷಯದಲ್ಲಿ ಪೌಲನು ಯಾವ ಆಜ್ಞೆಯನ್ನು ಕೊಡುತ್ತಾನೆ?

16 “ವಿವಾಹವು . . . ಗೌರವಾರ್ಹವಾಗಿರಲಿ” ಎಂಬ ಬುದ್ಧಿವಾದವನ್ನು ಕೊಟ್ಟ ಕೂಡಲೆ ಪೌಲನು “ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ, ಏಕೆಂದರೆ ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು” ಎಂಬ ಎಚ್ಚರಿಕೆಯನ್ನು ಕೂಡಿಸಿದನು. (ಇಬ್ರಿಯ 13:4) ಪೌಲನು ಲೈಂಗಿಕ ಸಂಬಂಧಗಳನ್ನು ಸೂಚಿಸಲು “ದಾಂಪತ್ಯದ ಹಾಸಿಗೆ” ಎಂಬ ಪದವನ್ನು ಉಪಯೋಗಿಸಿದನು. ಇಂಥ ಸಂಬಂಧಗಳು ವಿವಾಹದ ಏರ್ಪಾಡಿನಲ್ಲಿ ಮಾತ್ರವೇ ಅನುಭವಿಸಲ್ಪಡುವಲ್ಲಿ ಅವು ‘ಮಾಲಿನ್ಯವಿಲ್ಲದ್ದಾಗಿವೆ’ ಅಥವಾ ನೈತಿಕವಾಗಿ ಶುದ್ಧವಾಗಿವೆ. ಆದುದರಿಂದ ಕ್ರೈಸ್ತರು, “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು” ಎಂಬ ಪ್ರೇರಿತ ಮಾತುಗಳಿಗೆ ಕಿವಿಗೊಡುತ್ತಾರೆ.—ಜ್ಞಾನೋಕ್ತಿ 5:18.

17. (ಎ) ವ್ಯಭಿಚಾರದ ವಿಷಯದಲ್ಲಿ ಲೋಕಕ್ಕಿರುವ ದೃಷ್ಟಿಕೋನದಿಂದ ಕ್ರೈಸ್ತರು ಪ್ರಭಾವಿಸಲ್ಪಡಬಾರದೇಕೆ? (ಬಿ) ಯೋಬನಿಂದ ಇಡಲ್ಪಟ್ಟ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು?

 17 ತಮ್ಮ ಸಂಗಾತಿಯಲ್ಲದ ಒಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ಒಳಗೂಡುವವರು ದೇವರ ನೈತಿಕ ನಿಯಮಗಳಿಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತಾರೆ. ಇಂದು ಅನೇಕರು ವ್ಯಭಿಚಾರವನ್ನು ಅಷ್ಟೇನೂ ತಪ್ಪಲ್ಲದ ವರ್ತನೆಯಾಗಿ ಪರಿಗಣಿಸುತ್ತಾರೆ ಎಂಬುದು ನಿಜ. ಆದರೆ ವ್ಯಭಿಚಾರದ ಕುರಿತು ಬೇರೆ ಮಾನವರು ಏನು ನೆನಸುತ್ತಾರೆ ಎಂಬುದು, ಕ್ರೈಸ್ತರು ಅದನ್ನು ಹೇಗೆ ಪರಿಗಣಿಸುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರಬಾರದು. ಏಕೆಂದರೆ ಅಂತಿಮವಾಗಿ ಮಾನವನಲ್ಲ ಬದಲಿಗೆ “ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು” ಎಂಬುದನ್ನು ಅವರು ಮನಗಾಣುತ್ತಾರೆ. (ಇಬ್ರಿಯ 10:31; 12:29) ಆದುದರಿಂದ ನಿಜ ಕ್ರೈಸ್ತರು ಈ ವಿಷಯದಲ್ಲಿ ಯೆಹೋವನ ದೃಷ್ಟಿಕೋನಕ್ಕೆ ಬಿಗಿಯಾಗಿ ಅಂಟಿಕೊಳ್ಳುತ್ತಾರೆ. (ರೋಮನ್ನರಿಗೆ 12:9 ಓದಿ.) ಮೂಲಪಿತನಾದ ಯೋಬನು, “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ” ಎಂದು ಹೇಳಿದನು ಎಂಬುದನ್ನು ಜ್ಞಾಪಿಸಿಕೊಳ್ಳಿ. (ಯೋಬ 31:1) ಹೌದು, ವ್ಯಭಿಚಾರಕ್ಕೆ ನಡಿಸಬಹುದಾದ ಮಾರ್ಗದಲ್ಲಿ ಒಂದೇ ಒಂದು ಹೆಜ್ಜೆಯನ್ನು ಇಡುವುದರಿಂದಲೂ ದೂರವಿರಲಿಕ್ಕೋಸ್ಕರ ನಿಜ ಕ್ರೈಸ್ತರು ತಮ್ಮ ಕಣ್ಣುಗಳನ್ನು ನಿಯಂತ್ರಿಸುತ್ತಾರೆ ಮತ್ತು ತಮ್ಮ ಸಂಗಾತಿಯಲ್ಲದ ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯನ್ನು ಎಂದೂ ಆಸೆಗಣ್ಣಿನಿಂದ ನೋಡುವುದಿಲ್ಲ.—“ವಿವಾಹ ವಿಚ್ಛೇದನ ಮತ್ತು ಪ್ರತ್ಯೇಕವಾಸದ ವಿಷಯದಲ್ಲಿ ಬೈಬಲಿನ ದೃಷ್ಟಿಕೋನ” ಎಂಬ ಪರಿಶಿಷ್ಟವನ್ನು ನೋಡಿ.

18. (ಎ) ಯೆಹೋವನ ದೃಷ್ಟಿಯಲ್ಲಿ ವ್ಯಭಿಚಾರವು ಎಷ್ಟು ಗಂಭೀರವಾದದ್ದಾಗಿದೆ? (ಬಿ) ವ್ಯಭಿಚಾರ ಮತ್ತು ವಿಗ್ರಹಾರಾಧನೆಯ ಮಧ್ಯೆ ಯಾವ ಸಮಾನರೂಪತೆ ಇದೆ?

18 ಯೆಹೋವನ ದೃಷ್ಟಿಯಲ್ಲಿ ವ್ಯಭಿಚಾರವು ಎಷ್ಟು ಗಂಭೀರವಾದದ್ದಾಗಿದೆ? ಈ ವಿಷಯದಲ್ಲಿ ಯೆಹೋವನಿಗಿರುವ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳಲು ಮೋಶೆಯ ಧರ್ಮಶಾಸ್ತ್ರವು ನಮಗೆ ಸಹಾಯಮಾಡುತ್ತದೆ. ಇಸ್ರಾಯೇಲಿನಲ್ಲಿ ಮರಣದಂಡನೆ ವಿಧಿಸಲ್ಪಡುತ್ತಿದ್ದ ಅಪರಾಧಗಳಲ್ಲಿ ವ್ಯಭಿಚಾರ ಮತ್ತು ವಿಗ್ರಹಾರಾಧನೆಗಳು ಸಹ ಸೇರಿದ್ದವು. (ಯಾಜಕಕಾಂಡ 20:2, 10) ಇವೆರಡರ ಮಧ್ಯೆ ಇರುವ ಸಮಾನರೂಪತೆಯನ್ನು ನೀವು ನೋಡಬಲ್ಲಿರೊ? ಒಂದು ವಿಗ್ರಹವನ್ನು ಆರಾಧಿಸುತ್ತಿದ್ದ ಒಬ್ಬ ಇಸ್ರಾಯೇಲ್ಯನು ಯೆಹೋವನೊಂದಿಗಿನ ತನ್ನ ಒಡಂಬಡಿಕೆಯನ್ನು ಉಲ್ಲಂಘಿಸುತ್ತಿದ್ದನು. ತದ್ರೀತಿಯಲ್ಲಿ ವ್ಯಭಿಚಾರ ಮಾಡುತ್ತಿದ್ದ ಒಬ್ಬ ಇಸ್ರಾಯೇಲ್ಯನು ತನ್ನ ಸಂಗಾತಿಯೊಂದಿಗಿನ ತನ್ನ ಒಡಂಬಡಿಕೆಯನ್ನು ಉಲ್ಲಂಘಿಸುತ್ತಿದ್ದನು. ಇಬ್ಬರೂ ದ್ರೋಹದಿಂದ ವರ್ತಿಸುವವರಾಗಿದ್ದರು.  (ವಿಮೋಚನಕಾಂಡ 19:5, 6; ಧರ್ಮೋಪದೇಶಕಾಂಡ 5:9; ಮಲಾಕಿಯ 2:14 ಓದಿ.) ಆದುದರಿಂದ ನಂಬಿಗಸ್ತನೂ ಭರವಸಾರ್ಹನೂ ಆಗಿರುವ ದೇವರಾದ ಯೆಹೋವನ ಮುಂದೆ ಅವರಿಬ್ಬರೂ ನಿಂದನೀಯರಾಗಿದ್ದರು.—ಕೀರ್ತನೆ 33:4.

19. ವ್ಯಭಿಚಾರದಿಂದ ದೂರವಿರುವ ಒಬ್ಬನ ದೃಢನಿರ್ಧಾರವನ್ನು ಯಾವುದು ಬಲಪಡಿಸಬಹುದು ಮತ್ತು ಏಕೆ?

19 ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲ ಎಂಬುದು ನಿಜ. ಆದರೂ ಪುರಾತನ ಇಸ್ರಾಯೇಲಿನಲ್ಲಿ ವ್ಯಭಿಚಾರವನ್ನು ಗಂಭೀರವಾದ ಪಾಪವಾಗಿ ಪರಿಗಣಿಸಲಾಗುತ್ತಿತ್ತು ಎಂಬುದನ್ನು ಜ್ಞಾಪಿಸಿಕೊಳ್ಳುವುದು ಇಂಥ ಕೃತ್ಯವನ್ನು ಮಾಡದಿರುವ ಕ್ರೈಸ್ತರ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸಬಹುದು. ಏಕೆ? ಈ ಹೋಲಿಕೆಯನ್ನು ಪರಿಗಣಿಸಿರಿ: ನೀವು ಎಂದಾದರೂ ಒಂದು ಚರ್ಚಿಗೆ ಹೋಗಿ, ಮೊಣಕಾಲೂರಿ, ಒಂದು ಮೂರ್ತಿಯ ಮುಂದೆ ಪ್ರಾರ್ಥಿಸುವಿರೊ? ‘ಖಂಡಿತವಾಗಿಯೂ ಇಲ್ಲ!’ ಎಂದು ನೀವು ಹೇಳುವಿರಿ. ಒಂದುವೇಳೆ ನಿಮಗೆ ದೊಡ್ಡ ಮೊತ್ತದ ಹಣವನ್ನು ಕೊಡುವಲ್ಲಿ ನೀವು ಹಾಗೆ ಮಾಡಲು ಪ್ರಲೋಭಿಸಲ್ಪಡುವಿರೊ? ‘ಹಾಗೆ ಆಲೋಚಿಸಲೂ ಸಾಧ್ಯವಿಲ್ಲ!’ ಎಂದು ನೀವು ಉತ್ತರಿಸುವಿರಿ. ಒಂದು ಮೂರ್ತಿಯನ್ನು ಆರಾಧಿಸುವ ಮೂಲಕ ಯೆಹೋವನಿಗೆ ದ್ರೋಹಬಗೆಯುವ ವಿಚಾರವೇ ನಿಜ ಕ್ರೈಸ್ತನೊಬ್ಬನಿಗೆ ಹೇವರಿಕೆ ಹುಟ್ಟಿಸುವಂಥದ್ದಾಗಿದೆ. ತದ್ರೀತಿಯಲ್ಲಿ ವ್ಯಭಿಚಾರಮಾಡುವ ಮೂಲಕ—ಈ ಪಾಪವನ್ನು ಗೈಯಲು ಪ್ರಚೋದಕವು ಯಾವುದೇ ಆಗಿರಲಿ—ತಮ್ಮ ದೇವರಾದ ಯೆಹೋವನಿಗೆ ಮತ್ತು ತಮ್ಮ ಸಂಗಾತಿಗೆ ದ್ರೋಹಬಗೆಯುವ ವಿಚಾರವೇ ಕ್ರೈಸ್ತರಲ್ಲಿ ಹೇವರಿಕೆ ಹುಟ್ಟಿಸಬೇಕು. (ಕೀರ್ತನೆ 51:1, 4; ಕೊಲೊಸ್ಸೆ 3:5) ಸೈತಾನನಿಗೆ ಸಂತೋಷವನ್ನು ಉಂಟುಮಾಡಬಲ್ಲ, ಆದರೆ ಯೆಹೋವನಿಗೂ ಪವಿತ್ರವಾದ ವಿವಾಹದ ಏರ್ಪಾಡಿಗೂ ಸಂಪೂರ್ಣ ಅಗೌರವವನ್ನು ತರಬಲ್ಲ ಒಂದು ಕೃತ್ಯವನ್ನು ನಾವು ಎಂದಿಗೂ ಮಾಡಬಯಸುವುದಿಲ್ಲ.

ನಿಮ್ಮ ವಿವಾಹ ಬಂಧವನ್ನು ಬಲಪಡಿಸುವ ವಿಧ

20. ಕೆಲವು ವಿವಾಹಗಳಲ್ಲಿ ಏನು ಸಂಭವಿಸಿದೆ? ದೃಷ್ಟಾಂತಿಸಿರಿ.

20 ವಿವಾಹವನ್ನು ಅಗೌರವಿಸುವಂಥ ನಡತೆಯಿಂದ ದೂರವಿರುವುದರೊಂದಿಗೆ ನಿಮ್ಮ ವಿವಾಹ ಸಂಗಾತಿಗಾಗಿರುವ ನಿಮ್ಮ ಗೌರವವನ್ನು ಪುನರುಜ್ಜೀವಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಬಲ್ಲಿರಿ? ಇದಕ್ಕೆ ಉತ್ತರವನ್ನು  ಕಂಡುಕೊಳ್ಳಲು ವಿವಾಹದ ಏರ್ಪಾಡನ್ನು ಒಂದು ಮನೆಯಾಗಿ ಭಾವಿಸಿ. ವಿವಾಹ ಸಂಗಾತಿಗಳು ಪರಸ್ಪರರಿಗಾಗಿ ಉಪಯೋಗಿಸುವಂಥ ದಯಾಭರಿತ ಮಾತುಗಳು, ಆಲೋಚನಾಮಯ ಕೃತ್ಯಗಳು ಮತ್ತು ಗೌರವಾರ್ಹವಾಗಿರುವ ಇತರ ಅಭಿವ್ಯಕ್ತಿಗಳನ್ನು ಆ ಮನೆಯ ಸೌಂದರ್ಯವನ್ನು ವರ್ಧಿಸುವಂಥ ಅಲಂಕರಣ ಸಾಮಗ್ರಿಗಳಾಗಿ ಪರಿಗಣಿಸಿರಿ. ನೀವು ಪರಸ್ಪರ ಆತ್ಮೀಯರಾಗಿರುವಲ್ಲಿ ನಿಮ್ಮ ವಿವಾಹವು ಮೆರಗನ್ನೂ ಸೌಹಾರ್ದತೆಯನ್ನೂ ಕೊಡುವಂಥ ಅಲಂಕರಣ ಸಾಮಗ್ರಿಗಳಿಂದ ಅಲಂಕರಿಸಲ್ಪಟ್ಟಿರುವ ಒಂದು ಮನೆಯನ್ನು ಹೋಲುತ್ತದೆ. ನಿಮ್ಮ ಪ್ರೀತಿಯು ಕಡಿಮೆಯಾಗುವಲ್ಲಿ ಆ ಅಲಂಕರಣ ಸಾಮಗ್ರಿಗಳು ಕ್ರಮೇಣ ಮಾಯವಾಗಿ ನಿಮ್ಮ ವಿವಾಹವು ಯಾವುದೇ ಅಲಂಕರಣ ಸಾಮಗ್ರಿಗಳಿಲ್ಲದ ಕಳೆರಹಿತ ಮನೆಯಂತಾಗಿಬಿಡುತ್ತದೆ. “ವಿವಾಹವು . . . ಗೌರವಾರ್ಹವಾಗಿರಲಿ” ಎಂಬ ದೇವರ ಆಜ್ಞೆಗೆ ವಿಧೇಯರಾಗಲು ಬಯಸುವುದರಿಂದ ನೀವು ಸನ್ನಿವೇಶವನ್ನು ಉತ್ತಮಗೊಳಿಸುವಂತೆ ಪ್ರಚೋದಿಸಲ್ಪಡುವಿರಿ. ಎಷ್ಟೆಂದರೂ ಅಮೂಲ್ಯವೂ ಗೌರವಾರ್ಹವೂ ಆಗಿರುವ ಏನನ್ನೇ ಆಗಲಿ ದುರಸ್ತುಮಾಡುವುದು ಅಥವಾ ಸುಸ್ಥಿತಿಗೆ ತರುವುದು ಪ್ರಯತ್ನಯೋಗ್ಯವಾಗಿದೆ. ನೀವು ಇದನ್ನು ಹೇಗೆ ಮಾಡಬಲ್ಲಿರಿ? “ಮನೆಯನ್ನು ಕಟ್ಟುವದಕ್ಕೆ [ವಿವೇಕವೇ] ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ [ವಿವೇಚನಾಶಕ್ತಿಯೇ] ಆಧಾರ; ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ [ಜ್ಞಾನವೇ] ಉಪಕರಣ” ಎಂದು ದೇವರ ವಾಕ್ಯವು ಹೇಳುತ್ತದೆ. (ಜ್ಞಾನೋಕ್ತಿ 24:3, 4) ಈ ಮಾತುಗಳನ್ನು ವಿವಾಹಕ್ಕೆ ಹೇಗೆ ಅನ್ವಯಿಸಸಾಧ್ಯವಿದೆ ಎಂಬುದನ್ನು ಪರಿಗಣಿಸಿರಿ.

21. ನಾವು ಹೇಗೆ ಕ್ರಮೇಣವಾಗಿ ನಮ್ಮ ವಿವಾಹವನ್ನು ಬಲಪಡಿಸಬಲ್ಲೆವು? (“ ನನ್ನ ವಿವಾಹವನ್ನು ಹೇಗೆ ಉತ್ತಮಗೊಳಿಸಬಲ್ಲೆ?” ಎಂಬ ಚೌಕವನ್ನೂ ನೋಡಿ.)

21 ಒಂದು ಸಂತೋಷಭರಿತ ಮನೆವಾರ್ತೆಯಲ್ಲಿ ತುಂಬಿರುವಂಥ ‘ಅಮೂಲ್ಯವಾದ  ಸಂಪತ್ತಿನಲ್ಲಿ’ ನಿಜವಾದ ಪ್ರೀತಿ, ದೇವಭಯ ಮತ್ತು ಬಲವಾದ ನಂಬಿಕೆಯಂಥ ಗುಣಗಳು ಸೇರಿವೆ. (ಜ್ಞಾನೋಕ್ತಿ 15:16, 17; 1 ಪೇತ್ರ 1:7) ಇವು ಬಲವಾದ ವಿವಾಹವನ್ನು ರಚಿಸಲು ಸಹಾಯಮಾಡುತ್ತವೆ. ಆದರೆ ಮೇಲೆ ತಿಳಿಸಲ್ಪಟ್ಟ ಜ್ಞಾನೋಕ್ತಿಯಲ್ಲಿ ಕೋಣೆಗಳು ಹೇಗೆ ಅಮೂಲ್ಯವಾದ ಸಂಪತ್ತಿನಿಂದ ತುಂಬಿಸಲ್ಪಟ್ಟಿವೆ ಎಂಬುದನ್ನು ಗಮನಿಸಿದಿರೊ? ‘ಜ್ಞಾನದಿಂದಲೇ.’ ಹೌದು, ಬೈಬಲ್‌ ಜ್ಞಾನವನ್ನು ಅನ್ವಯಿಸುವಾಗ ಅದಕ್ಕೆ ಜನರ ಆಲೋಚನಾಧಾಟಿಯನ್ನು ಬದಲಾಯಿಸುವ ಮತ್ತು ಪರಸ್ಪರರಿಗಾಗಿ ಪ್ರೀತಿಯನ್ನು ಉಜ್ಜೀವಿಸುವ ಶಕ್ತಿಯಿದೆ. (ರೋಮನ್ನರಿಗೆ 12:2; ಫಿಲಿಪ್ಪಿ 1:9) ಆದುದರಿಂದ ನೀವು ಮತ್ತು ನಿಮ್ಮ ಸಂಗಾತಿಯು ಸಂವಾದಿಸಲು ಸಮಯವನ್ನು ತೆಗೆದುಕೊಂಡು ದಿನದ ವಚನ ಅಥವಾ ಕಾವಲಿನಬುರುಜು ಇಲ್ಲವೆ ಎಚ್ಚರ! ಪತ್ರಿಕೆಯಲ್ಲಿ ಬಂದಿರುವ ವಿವಾಹಕ್ಕೆ ಸಂಬಂಧಪಟ್ಟ ಬೈಬಲ್‌ ಆಧಾರಿತ ಲೇಖನದಂಥ ಒಂದು ಬೈಬಲ್‌ ಭಾಗವನ್ನು ಶಾಂತವಾಗಿ ಪರಿಗಣಿಸುವಾಗ, ನಿಮ್ಮ ಮನೆಯ ಸೌಂದರ್ಯವನ್ನು ವರ್ಧಿಸಬಲ್ಲ ಒಂದು ಸುಂದರವಾದ ಅಲಂಕರಣ ಸಾಮಗ್ರಿಯನ್ನು ನೀವು ಪರೀಕ್ಷಿಸುತ್ತಿದ್ದೀರೋ ಎಂಬಂತಿರುತ್ತದೆ. ಯೆಹೋವನಿಗಾಗಿರುವ ಪ್ರೀತಿಯು ನೀವು ಈಗ ತಾನೇ ಪರಿಶೀಲಿಸಿದ ಸಲಹೆಯನ್ನು ನಿಮ್ಮ ವಿವಾಹದಲ್ಲಿ ಅನ್ವಯಿಸುವಂತೆ ಪ್ರಚೋದಿಸುವಾಗ ನೀವು ಆ ಅಲಂಕರಣ ಸಾಮಗ್ರಿಯನ್ನು ಸಾಂಕೇತಿಕವಾಗಿ ಒಳಗಣ ‘ಕೋಣೆಗಳಿಗೆ’ ತರುವಂತಿರುತ್ತದೆ. ಇದರ ಫಲಿತಾಂಶವಾಗಿ ನೀವು ನಿಮ್ಮ ವಿವಾಹದಲ್ಲಿ ಈ ಮುಂಚೆ ಆನಂದಿಸುತ್ತಿದ್ದಂಥ ಸ್ವಲ್ಪಮಟ್ಟಿಗಿನ ಮೆರಗು ಮತ್ತು ಸೌಹಾರ್ದತೆಯು ಮತ್ತೆ ಹಿಂದಿರುಗಬಹುದು.

22. ನಮ್ಮ ವಿವಾಹವನ್ನು ಬಲಪಡಿಸುವುದರಲ್ಲಿ ನಾವು ನಮ್ಮ ಪಾಲನ್ನು ಮಾಡಲು ಶ್ರಮಿಸುವುದಾದರೆ ನಮಗೆ ಯಾವ ಸಂತೃಪ್ತಿಯು ಸಿಗಸಾಧ್ಯವಿದೆ?

22 ಆ ಅಲಂಕರಣ ಸಾಮಗ್ರಿಗಳನ್ನು ಒಂದೊಂದಾಗಿ ಪುನಃ ಸ್ವಸ್ಥಾನದಲ್ಲಿಡಲು ಸಾಕಷ್ಟು ಸಮಯ ಮತ್ತು ಪ್ರಯತ್ನದ ಅಗತ್ಯವಿರಬಹುದು ಎಂಬುದು ಒಪ್ಪಿಕೊಳ್ಳತಕ್ಕ ವಿಷಯ. ಆದರೂ ನೀವು ನಿಮ್ಮ ಪಾಲನ್ನು ಮಾಡಲು ಶ್ರಮಿಸುವುದಾದರೆ, “ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ” ಎಂಬ ಬೈಬಲ್‌ ಆಜ್ಞೆಗೆ ನೀವು ವಿಧೇಯರಾಗುತ್ತಿದ್ದೀರಿ ಎಂಬ ಅರಿವಿನಿಂದ ನಿಮಗೆ ಆಳವಾದ ಸಂತೃಪ್ತಿಯು ಸಿಗುವುದು. (ರೋಮನ್ನರಿಗೆ 12:10; ಕೀರ್ತನೆ 147:11) ಎಲ್ಲಕ್ಕಿಂತಲೂ ಮಿಗಿಲಾಗಿ ನಿಮ್ಮ ವಿವಾಹವನ್ನು ಗೌರವಿಸಲು ನೀವು ಮಾಡುವಂಥ ಶ್ರದ್ಧಾಪೂರ್ವಕ ಪ್ರಯತ್ನಗಳು ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡುವವು.

^ ಪ್ಯಾರ. 6 ವಿವಾಹದ ಕುರಿತಾದ ಪೌಲನ ಸಲಹೆಯು ಕೊಡಲ್ಪಟ್ಟ ಬುದ್ಧಿವಾದಗಳ ಸರಮಾಲೆಯ ಒಂದು ಭಾಗವಾಗಿದೆ ಎಂಬುದನ್ನು ಪೂರ್ವಾಪರವು ತೋರಿಸುತ್ತದೆ.—ಇಬ್ರಿಯ 13:1-5.