ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪರಿಶಿಷ್ಟ

ಮುಷ್ಟಿಮೈಥುನದ ದೌರ್ಬಲ್ಯವನ್ನು ಜಯಿಸಿರಿ

ಮುಷ್ಟಿಮೈಥುನದ ದೌರ್ಬಲ್ಯವನ್ನು ಜಯಿಸಿರಿ

ಮುಷ್ಟಿಮೈಥುನವು ದೇವರನ್ನು ಅಸಂತೋಷಪಡಿಸುವಂಥ ಒಂದು ದುರಭ್ಯಾಸವಾಗಿದೆ. ಇದು ಸ್ವಾರ್ಥಮಗ್ನತೆಯನ್ನು ಉತ್ತೇಜಿಸುವಂಥ ಮತ್ತು ಮನಸ್ಸನ್ನು ಭ್ರಷ್ಟಗೊಳಿಸುವಂಥ ಮನೋಭಾವಗಳನ್ನು ಮನಸ್ಸಿಗೆ ಕ್ರಮೇಣ ತುಂಬಿಸುತ್ತದೆ. * ಮುಷ್ಟಿಮೈಥುನ ಮಾಡುವವನು ಇತರರನ್ನು ಕೇವಲ ಲೈಂಗಿಕ ವಸ್ತುಗಳಾಗಿ, ತನ್ನ ಕಾಮತೃಷೆಯನ್ನು ತಣಿಸುವ ಸಾಧನಗಳಾಗಿ ನೋಡಲೂ ಆರಂಭಿಸಬಹುದು. ಅಂಥ ವ್ಯಕ್ತಿಯು  ಲೈಂಗಿಕತೆಯನ್ನು ಇಬ್ಬರು ವ್ಯಕ್ತಿಗಳ ನಡುವಣ ಪ್ರೀತಿಯ ಅಭಿವ್ಯಕ್ತಿಯಾಗಿ ಅಲ್ಲ, ಬದಲಾಗಿ ಕ್ಷಣಿಕ ಸುಖವನ್ನು ಕೊಡುವ ಮತ್ತು ಲೈಂಗಿಕ ಉದ್ವೇಗವನ್ನು ಕಡಿಮೆಗೊಳಿಸುವ ಶಾರೀರಿಕ ಕ್ರಿಯೆಯಾಗಿ ವೀಕ್ಷಿಸಲಾರಂಭಿಸುತ್ತಾನೆ. ಆದರೆ ಈ ರೀತಿಯ ಉಪಶಮನವು ಕೇವಲ ತಾತ್ಕಾಲಿಕವಾಗಿದೆ. ವಾಸ್ತವದಲ್ಲಿ “ಜಾರತ್ವ, ಅಶುದ್ಧತೆ, [ಮತ್ತು ಅಯೋಗ್ಯವಾದ] ಕಾಮಾಭಿಲಾಷೆ” ಇವುಗಳ ಸಂಬಂಧದಲ್ಲಿ ದೇಹದ ಅಂಗಗಳನ್ನು ಸಾಯಿಸುವ ಬದಲು ಮುಷ್ಟಿಮೈಥುನವು ಅವುಗಳನ್ನು ಕೆರಳಿಸುತ್ತದೆ.—ಕೊಲೊಸ್ಸೆ 3:5.

“ಪ್ರಿಯರೇ . . . ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ” ಎಂದು ಅಪೊಸ್ತಲ ಪೌಲನು ಬರೆದನು. (2 ಕೊರಿಂಥ 7:1) ನೀವು ಈ ಮಾತುಗಳಿಗೆ ವಿಧೇಯರಾಗಲು ಹೆಣಗಾಡುತ್ತಿರುವುದಾದರೆ ಹತಾಶರಾಗಬೇಡಿ. ಯೆಹೋವನು ‘ಕ್ಷಮಿಸಲು’ ಮತ್ತು ಸಹಾಯಮಾಡಲು ಸದಾ ಸಿದ್ಧನಾಗಿದ್ದಾನೆ. (ಕೀರ್ತನೆ 86:5; ಲೂಕ 11:9-13) ವಾಸ್ತವದಲ್ಲಿ ನಿಮ್ಮ ಸ್ವಖಂಡನೀಯ ಹೃದಯ ಮತ್ತು ಈ ದುರಭ್ಯಾಸವನ್ನು ಬಿಟ್ಟುಬಿಡಲು ನೀವು ಮಾಡುವ ಪ್ರಯತ್ನಗಳು—ಕೆಲವೊಮ್ಮೆ ಪುನಃ ಮರುಕಳಿಸಬಹುದಾದರೂ—ಒಳ್ಳೆಯ ಮನೋಭಾವವನ್ನು ಸೂಚಿಸುತ್ತವೆ. “ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ” ಎಂಬುದನ್ನು ಸಹ ಮನಸ್ಸಿನಲ್ಲಿಡಿ. (1 ಯೋಹಾನ 3:20) ದೇವರು ನಮ್ಮ ಪಾಪಗಳಿಗಿಂತ ಹೆಚ್ಚಿನದ್ದನ್ನು ನೋಡುತ್ತಾನೆ; ಆತನು ಇಡೀ ವ್ಯಕ್ತಿಯನ್ನು ನೋಡುತ್ತಾನೆ. ಆತನಿಗೆ ನಮ್ಮ ಕುರಿತು ಎಲ್ಲವೂ ತಿಳಿದಿರುವುದರಿಂದ ನಮ್ಮ ಹೃತ್ಪೂರ್ವಕ ಕ್ಷಮಾಯಾಚನೆಗಳಿಗೆ ಆತನು ಸಹಾನುಭೂತಿಯಿಂದ ಕಿವಿಗೊಡಲು ಶಕ್ತನಾಗಿದ್ದಾನೆ. ಆದುದರಿಂದ ತೊಂದರೆಯಲ್ಲಿ ಸಿಕ್ಕಿಕೊಂಡಿರುವಾಗ ತನ್ನ ತಂದೆಯ ಬಳಿಗೆ ಹೋಗುವ ಮಗುವಿನಂತೆ ನಮ್ರವಾದ ಹೃತ್ಪೂರ್ವಕ ಪ್ರಾರ್ಥನೆಯೊಂದಿಗೆ ದೇವರ ಕಡೆಗೆ ತಿರುಗಿಕೊಳ್ಳಲು ನೀವು ಎಂದಿಗೂ ಬೇಸರಗೊಳ್ಳದಿರಿ. ಯೆಹೋವನು ನಿಮಗೆ ಶುದ್ಧವಾದ ಮನಸ್ಸಾಕ್ಷಿಯನ್ನು ಕೊಟ್ಟು ಆಶೀರ್ವದಿಸುವನು. (ಕೀರ್ತನೆ 51:1-12, 17; ಯೆಶಾಯ 1:18) ಆದರೆ ನಿಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ನೀವು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಉದಾಹರಣೆಗೆ, ನೀವು ಎಲ್ಲ ರೀತಿಯ ಅಶ್ಲೀಲ ಸಾಹಿತ್ಯ ಮತ್ತು ಕೆಟ್ಟ ಸಹವಾಸಿಗಳಿಂದ ದೂರವಿರಲು ಶ್ರಮಿಸುವಿರಿ. *

ನಿಮ್ಮ ಮುಷ್ಟಿಮೈಥುನದ ಸಮಸ್ಯೆಯು ಇನ್ನೂ ಮುಂದುವರಿಯುವಲ್ಲಿ ಇದರ  ಕುರಿತು ದಯವಿಟ್ಟು ಕ್ರೈಸ್ತ ಹೆತ್ತವರಲ್ಲಿ ಒಬ್ಬರ ಬಳಿ ಅಥವಾ ಆಧ್ಯಾತ್ಮಿಕವಾಗಿ ಪ್ರೌಢನಾಗಿರುವ ಕಾಳಜಿವಹಿಸುವ ಒಬ್ಬ ಸ್ನೇಹಿತನ ಬಳಿ ಮಾತಾಡಿರಿ. *ಜ್ಞಾನೋಕ್ತಿ 1:8, 9; 1 ಥೆಸಲೊನೀಕ 5:14; ತೀತ 2:3-5.

^ ಪ್ಯಾರ. 3 ಮುಷ್ಟಿಮೈಥುನವು ಜನನಾಂಗಗಳನ್ನು ನೇವರಿಸುವುದು ಅಥವಾ ಉಜ್ಜುವುದಾಗಿದೆ ಮತ್ತು ಇದು ಸಾಮಾನ್ಯವಾಗಿ ಮೈಥುನೋದ್ರೇಕದ ಪರಾಕಾಷ್ಠೆಯಲ್ಲಿ ಕೊನೆಗೊಳ್ಳುತ್ತದೆ.

^ ಪ್ಯಾರ. 1 ಮನೆಯಲ್ಲಿಟ್ಟಿರುವ ಕಂಪ್ಯೂಟರಿನ ಉಪಯೋಗವನ್ನು ನಿಯಂತ್ರಿಸುವ ಒಂದು ಪ್ರಾಯೋಗಿಕ ಹೆಜ್ಜೆಯಾಗಿ ಅನೇಕ ಕುಟುಂಬಗಳು ಮನೆಯಲ್ಲಿರುವವರೆಲ್ಲರೂ ಸುಲಭದಲ್ಲಿ ನೋಡಲು ಸಾಧ್ಯವಿರುವಂಥ ಸ್ಥಳದಲ್ಲಿ ಕಂಪ್ಯೂಟರನ್ನು ಇಡುತ್ತವೆ. ಮಾತ್ರವಲ್ಲದೆ, ಕೆಲವು ಕುಟುಂಬಗಳು ಅನಪೇಕ್ಷಿತ ವಿಷಯಗಳನ್ನು ಶೋಧಿಸಿ ಬೇರ್ಪಡಿಸುವ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳನ್ನೂ ಖರೀದಿಸುತ್ತವೆ. ಆದರೆ ಯಾವುದೇ ಪ್ರೋಗ್ರ್ಯಾಮ್‌ ಸಂಪೂರ್ಣ ಭರವಸಾರ್ಹವಾಗಿ ಇರುವುದಿಲ್ಲ.

^ ಪ್ಯಾರ. 2 ಮುಷ್ಟಿಮೈಥುನವನ್ನು ಹೇಗೆ ಜಯಿಸುವುದು ಎಂಬುದರ ಕುರಿತಾದ ಪ್ರಾಯೋಗಿಕ ಸಲಹೆಗಳಿಗಾಗಿ 2006, ನವೆಂಬರ್‌ ತಿಂಗಳ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ “ಯುವ ಜನರು ಪ್ರಶ್ನಿಸುವುದು . . . ನಾನು ಈ ದುರಭ್ಯಾಸವನ್ನು ಹೇಗೆ ಜಯಿಸಬಲ್ಲೆ?” ಎಂಬ ಲೇಖನವನ್ನು ಮತ್ತು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 1ರ ಪುಟಗಳು 205-211ನ್ನು ನೋಡಿ.