ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪರಿಶಿಷ್ಟ

ಬಹಿಷ್ಕೃತ ವ್ಯಕ್ತಿಯೊಂದಿಗೆ ವ್ಯವಹರಿಸಬೇಕಾದ ವಿಧ

ಬಹಿಷ್ಕೃತ ವ್ಯಕ್ತಿಯೊಂದಿಗೆ ವ್ಯವಹರಿಸಬೇಕಾದ ವಿಧ

ಪಶ್ಚಾತ್ತಾಪರಹಿತ ಪಾಪವನ್ನು ಮಾಡಿದ್ದಕ್ಕಾಗಿ ಒಬ್ಬ ಸಂಬಂಧಿಕನೋ ಸ್ನೇಹಿತನೋ ಸಭೆಯಿಂದ ಹೊರಹಾಕಲ್ಪಡುವಾಗ ನಮಗೆ ತುಂಬ ನೋವಾಗುತ್ತದೆ. ಈ ವಿಷಯದಲ್ಲಿ ಬೈಬಲು ಕೊಡುವ ನಿರ್ದೇಶನಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ದೇವರ ಮೇಲೆ ನಮಗಿರುವ ಪ್ರೀತಿ ಮತ್ತು ಆತನ ಏರ್ಪಾಡಿಗೆ ನಾವು ತೋರಿಸುವ ನಿಷ್ಠೆಯ ಗಾಢತೆಯನ್ನು ವ್ಯಕ್ತಪಡಿಸಬಲ್ಲದು. * ಈ ವಿಷಯದಲ್ಲಿ ಏಳುವ ಕೆಲವು ಪ್ರಶ್ನೆಗಳನ್ನು ಪರಿಗಣಿಸಿರಿ.

ನಾವು ಬಹಿಷ್ಕೃತ ವ್ಯಕ್ತಿಯೊಂದಿಗೆ ಹೇಗೆ ವ್ಯವಹರಿಸಬೇಕು? “ಸಹೋದರನೆನಿಸಿಕೊಂಡವನು ಜಾರನಾಗಲಿ ಲೋಭಿಯಾಗಲಿ ವಿಗ್ರಹಾರಾಧಕನಾಗಲಿ ದೂಷಕನಾಗಲಿ ಕುಡುಕನಾಗಲಿ ಸುಲುಕೊಳ್ಳುವವನಾಗಲಿ ಆಗಿರುವಲ್ಲಿ ಅವನ ಸಹವಾಸವನ್ನು ಬಿಟ್ಟುಬಿಡಿರಿ, ಅಂಥವನೊಂದಿಗೆ ಊಟವನ್ನೂ ಮಾಡಬೇಡಿ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 5:11) ‘ಕ್ರಿಸ್ತನ ಬೋಧನೆಯಲ್ಲಿ ನೆಲೆಗೊಂಡಿರದವನ’ ಕುರಿತು “ಅಂಥವನನ್ನು ನಿಮ್ಮ ಮನೆಗಳೊಳಗೆ ಎಂದಿಗೂ ಸೇರಿಸಿಕೊಳ್ಳಬೇಡಿರಿ ಅಥವಾ ಅವನಿಗೆ ವಂದನೆಯನ್ನೂ ಹೇಳಬೇಡಿರಿ. ಏಕೆಂದರೆ ಅವನಿಗೆ ವಂದನೆ ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗಿದ್ದಾನೆ” ಎಂದು ನಾವು ಓದುತ್ತೇವೆ. (2 ಯೋಹಾನ 9-11) ನಾವು ಬಹಿಷ್ಕೃತರೊಂದಿಗೆ ಕ್ರೈಸ್ತ ಅಥವಾ ಸಾಮಾಜಿಕ ಸಹವಾಸವನ್ನು ಮಾಡುವುದಿಲ್ಲ. 1981, ಸೆಪ್ಟೆಂಬರ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯು ಪುಟ 25ರಲ್ಲಿ ಹೀಗೆ ಹೇಳುತ್ತದೆ: “ನಾವು ಯಾರಿಗಾದರೂ ‘ನಮಸ್ಕಾರ’ ಎಂದು ಹೇಳುವುದು ತಾನೇ ಒಂದು ಸಂಭಾಷಣೆಗೆ ಮತ್ತು ಪ್ರಾಯಶಃ ಒಂದು ಗೆಳೆತನಕ್ಕೂ ನಡೆಸಸಾಧ್ಯವಿರುವ ಪ್ರಥಮ ಹೆಜ್ಜೆಯಾಗಿರಬಲ್ಲದು. ನಾವು ಬಹಿಷ್ಕೃತ ವ್ಯಕ್ತಿಯ ಸಂಬಂಧದಲ್ಲಿ ಈ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಬಯಸುತ್ತೇವೊ?”

ಕಟ್ಟುನಿಟ್ಟಾಗಿ ಎಲ್ಲ ಸಂಪರ್ಕದಿಂದ ದೂರವಿರುವುದು ಅತ್ಯಾವಶ್ಯಕವೊ? ಹೌದು. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ಇದು ದೇವರಿಗೆ ಮತ್ತು ಆತನ ವಾಕ್ಯಕ್ಕೆ ತೋರಿಸುವ ನಿಷ್ಠೆಯಾಗಿದೆ. ನಮಗೆ ಸುಲಭವಾಗಿರುವಾಗ ಮಾತ್ರವಲ್ಲದೆ ನಮಗೆ ಕಷ್ಟಕರವಾಗಿರುವಾಗಲೂ ನಾವು ಯೆಹೋವನಿಗೆ ವಿಧೇಯರಾಗುತ್ತೇವೆ. ದೇವರು ನ್ಯಾಯವಂತನೂ ಪ್ರೀತಿಪೂರ್ಣನೂ ಆಗಿದ್ದಾನೆ ಮತ್ತು ಆತನ ಆಜ್ಞೆಗಳು ಅತಿ ಹೆಚ್ಚಿನ ಒಳಿತನ್ನು ಉಂಟುಮಾಡುತ್ತವೆ ಎಂಬ ಪರಿಗಣನೆಯೊಂದಿಗೆ ದೇವರಿಗಾಗಿರುವ  ಪ್ರೀತಿಯು ಆತನ ಎಲ್ಲ ಆಜ್ಞೆಗಳಿಗೆ ವಿಧೇಯರಾಗುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಯೆಶಾಯ 48:17; 1 ಯೋಹಾನ 5:3) ಎರಡನೆಯದಾಗಿ, ಪಶ್ಚಾತ್ತಾಪಪಡದಂಥ ತಪ್ಪಿತಸ್ಥನಿಂದ ದೂರವಿರುವುದು ನಮ್ಮನ್ನು ಮತ್ತು ಸಭೆಯಲ್ಲಿ ಉಳಿದವರೆಲ್ಲರನ್ನು ಆಧ್ಯಾತ್ಮಿಕ ಹಾಗೂ ನೈತಿಕ ಭ್ರಷ್ಟತೆಯಿಂದ ಕಾಪಾಡುತ್ತದೆ ಮತ್ತು ಸಭೆಯ ಒಳ್ಳೆಯ ಹೆಸರನ್ನು ಎತ್ತಿಹಿಡಿಯುತ್ತದೆ. (1 ಕೊರಿಂಥ 5:6, 7) ಮೂರನೆಯದಾಗಿ, ಬೈಬಲ್‌ ಮೂಲತತ್ತ್ವಗಳ ಪರವಾಗಿ ನಾವು ತೆಗೆದುಕೊಳ್ಳುವ ದೃಢವಾದ ನಿಲುವು ಬಹಿಷ್ಕೃತನಿಗೂ ಪ್ರಯೋಜನವನ್ನು ತರಬಹುದು. ನ್ಯಾಯನಿರ್ಣಾಯಕ ಕಮಿಟಿಯ ನಿರ್ಣಯವನ್ನು ಬೆಂಬಲಿಸುವ ಮೂಲಕ ನಾವು, ಹಿರಿಯರು ನೆರವು ನೀಡಲು ಪ್ರಯತ್ನಿಸಿದರೂ ಅವರ ಪ್ರಯತ್ನಗಳಿಗೆ ಪ್ರತಿಕ್ರಿಯಿಸಲು ಇಷ್ಟರ ತನಕ ವಿಫಲನಾಗಿದ್ದ ತಪ್ಪಿತಸ್ಥನ ಹೃದಯದ ಮೇಲೆ ಪರಿಣಾಮ ಬೀರಬಹುದು. ಪ್ರಿಯ ವ್ಯಕ್ತಿಗಳೊಂದಿಗಿನ ಅಮೂಲ್ಯ ಸಹವಾಸವನ್ನು ಕಳೆದುಕೊಂಡಿರುವುದು ಅವನಿಗೆ ‘ಬುದ್ಧಿಬರಲು,’ ತನ್ನ ತಪ್ಪಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಯೆಹೋವನ ಬಳಿಗೆ ಹಿಂದಿರುಗಲು ಅಗತ್ಯವಿರುವ ಹೆಜ್ಜೆಗಳನ್ನು ತೆಗೆದುಕೊಳ್ಳಲು ಸಹಾಯಮಾಡಬಹುದು.—ಲೂಕ 15:17.

ಒಬ್ಬ ಸಂಬಂಧಿಕನು ಬಹಿಷ್ಕರಿಸಲ್ಪಟ್ಟಿರುವುದಾದರೆ ಆಗೇನು? ಇಂಥ ಸನ್ನಿವೇಶದಲ್ಲಿ ಕುಟುಂಬದ ಸದಸ್ಯರ ಮಧ್ಯೆಯಿರುವ ಆಪ್ತವಾದ ಬಂಧವು ನಮ್ಮ ನಿಷ್ಠೆಗೆ ನಿಜವಾದ ಪರೀಕ್ಷೆಯನ್ನು ಒಡ್ಡಬಲ್ಲದು. ಬಹಿಷ್ಕರಿಸಲ್ಪಟ್ಟಿರುವ ಒಬ್ಬ ಸಂಬಂಧಿಕನೊಂದಿಗೆ ನಾವು ಹೇಗೆ ವ್ಯವಹರಿಸಬೇಕು? ಏಳಬಹುದಾದ ಪ್ರತಿಯೊಂದು ಸನ್ನಿವೇಶದ ಕುರಿತು ನಾವು ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ, ಆದರೆ ಎರಡು ಮೂಲಭೂತ ಸನ್ನಿವೇಶಗಳ ಮೇಲೆ ನಾವೀಗ ಗಮನವನ್ನು ಕೇಂದ್ರೀಕರಿಸೋಣ.

ಕೆಲವು ಸಂದರ್ಭಗಳಲ್ಲಿ, ಬಹಿಷ್ಕರಿಸಲ್ಪಟ್ಟಿರುವ ಕುಟುಂಬ ಸದಸ್ಯನು ಕುಟುಂಬವರ್ಗದ ಭಾಗವಾಗಿ ಇನ್ನೂ ಒಂದೇ ಮನೆಯಲ್ಲಿ ವಾಸಿಸುತ್ತಿರಬಹುದು. ಅವನ ಬಹಿಷ್ಕಾರವು ಕೌಟುಂಬಿಕ ಬಂಧಗಳನ್ನು ಮುರಿದುಹಾಕುವುದಿಲ್ಲವಾದ್ದರಿಂದ ಯಥಾಪ್ರಕಾರದ ದೈನಂದಿನ ಕೌಟುಂಬಿಕ ಚಟುವಟಿಕೆಗಳು ಮತ್ತು ವ್ಯವಹಾರಗಳು ಮುಂದುವರಿಯಬಹುದು. ಆದರೂ ತನ್ನ ಮಾರ್ಗಕ್ರಮದಿಂದ ಈ ವ್ಯಕ್ತಿಯು ತನ್ನ ಹಾಗೂ ತನ್ನ ವಿಶ್ವಾಸಿ ಕುಟುಂಬ ಸದಸ್ಯರ ಮಧ್ಯೆ ಇದ್ದ ಆಧ್ಯಾತ್ಮಿಕ ಬಂಧವನ್ನು ಮುರಿಯುವ ಆಯ್ಕೆಯನ್ನು ಮಾಡಿದ್ದಾನೆ. ಆದುದರಿಂದ ಯೆಹೋವನಿಗೆ ನಿಷ್ಠಾವಂತರಾಗಿರುವ ಕುಟುಂಬ ಸದಸ್ಯರು ಅವನೊಂದಿಗೆ ಇನ್ನು ಮುಂದೆ ಆಧ್ಯಾತ್ಮಿಕ ಸಹವಾಸವನ್ನು ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಕುಟುಂಬದ ಸದಸ್ಯರೆಲ್ಲರೂ ಕುಟುಂಬ ಆರಾಧನೆಗಾಗಿ ಒಟ್ಟುಗೂಡಿರುವಾಗ ಬಹಿಷ್ಕೃತ ವ್ಯಕ್ತಿಯು ಉಪಸ್ಥಿತನಿರುವಲ್ಲಿ ಅವನು ಅಧ್ಯಯನದಲ್ಲಿ ಭಾಗವಹಿಸಬಾರದು. ಆದರೆ ಬಹಿಷ್ಕರಿಸಲ್ಪಟ್ಟಿರುವವನು ಅಪ್ರಾಪ್ತ ವಯಸ್ಸಿನವನಾಗಿರುವಲ್ಲಿ, ಅವನಿಗೆ ಬೋಧಿಸುವ ಮತ್ತು ಶಿಸ್ತು ನೀಡುವ ಜವಾಬ್ದಾರಿಯನ್ನು ಇನ್ನೂ ಹೆತ್ತವರೇ ನಿರ್ವಹಿಸಬೇಕಾಗಿದೆ.  ಆದುದರಿಂದ ಪ್ರೀತಿಭರಿತ ಹೆತ್ತವರು ಅಂಥವನೊಂದಿಗೆ ಬೈಬಲ್‌ ಅಧ್ಯಯನವನ್ನು ನಡೆಸಬಹುದು. *ಜ್ಞಾನೋಕ್ತಿ 6:20-22; 29:17.

ಬೇರೆ ಸಂದರ್ಭಗಳಲ್ಲಿ, ಬಹಿಷ್ಕರಿಸಲ್ಪಟ್ಟಿರುವ ಸಂಬಂಧಿಕನು ಕುಟುಂಬವರ್ಗದಿಂದ ಮತ್ತು ಮನೆಯಿಂದ ಹೊರಗೆ ವಾಸಿಸುತ್ತಿರಬಹುದು. ಅಪರೂಪಕ್ಕೊಮ್ಮೆ ಆವಶ್ಯಕವಾದ ಕೌಟುಂಬಿಕ ವಿಚಾರವನ್ನು ಚರ್ಚಿಸಲಿಕ್ಕಾಗಿ ಅವನನ್ನು ಸಂಪರ್ಕಿಸುವ ಅಗತ್ಯವೇಳಬಹುದಾದರೂ ಇಂಥ ಯಾವುದೇ ಸಂಪರ್ಕವನ್ನು ಮಿತವಾಗಿಡಬೇಕು. ಒಂದೇ ಮನೆಯಲ್ಲಿ ವಾಸಿಸುತ್ತಿರದಂಥ ಬಹಿಷ್ಕೃತ ಸಂಬಂಧಿಕನೊಂದಿಗೆ ವ್ಯವಹಾರಗಳನ್ನು ಇಟ್ಟುಕೊಳ್ಳಲು ನಿಷ್ಠಾವಂತ ಕ್ರೈಸ್ತ ಕುಟುಂಬದ ಸದಸ್ಯರು ನೆಪಗಳನ್ನು ಹುಡುಕುವುದಿಲ್ಲ. ಬದಲಿಗೆ ಯೆಹೋವನಿಗೆ ಮತ್ತು ಆತನ ಸಂಘಟನೆಗಾಗಿರುವ ನಿಷ್ಠೆಯು, ಬಹಿಷ್ಕಾರದ ಶಾಸ್ತ್ರಾಧಾರಿತ ಏರ್ಪಾಡನ್ನು ಎತ್ತಿಹಿಡಿಯುವಂತೆ ಅವರನ್ನು ಪ್ರಚೋದಿಸುತ್ತದೆ. ಈ ರೀತಿಯಲ್ಲಿ ಅವರು ತಮ್ಮ ನಿಷ್ಠೆಯನ್ನು ಕಾಪಾಡಿಕೊಳ್ಳುವುದು ತಪ್ಪಿತಸ್ಥನ ಮೇಲಿನ ಹಿತಾಸಕ್ತಿಯಿಂದಲೇ ಆಗಿದೆ ಮತ್ತು ಇದು ತಾನು ಪಡೆದುಕೊಂಡ ಶಿಸ್ತಿನಿಂದ ಪ್ರಯೋಜನ ಪಡೆಯುವಂತೆ ಅವನಿಗೆ ಸಹಾಯಮಾಡಬಹುದು. *ಇಬ್ರಿಯ 12:11.

^ ಪ್ಯಾರ. 1 ಈ ವಿಷಯಕ್ಕೆ ಸಂಬಂಧಿಸಿದ ಬೈಬಲ್‌ ಮೂಲತತ್ತ್ವಗಳು ಸಭೆಯಿಂದ ತಮ್ಮನ್ನು ಬೇರ್ಪಡಿಸಿಕೊಳ್ಳುವವರಿಗೂ ಅನ್ವಯಿಸುತ್ತವೆ.

^ ಪ್ಯಾರ. 2 ಒಂದೇ ಮನೆಯಲ್ಲಿ ವಾಸಿಸುತ್ತಿರುವ ಬಹಿಷ್ಕರಿಸಲ್ಪಟ್ಟ ಅಪ್ರಾಪ್ತ ವಯಸ್ಸಿನ ಮಕ್ಕಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ 2001, ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಯ ಪುಟಗಳು 16-17 ಮತ್ತು 1988, ನವೆಂಬರ್‌ 15ರ (ಇಂಗ್ಲಿಷ್‌) ಪತ್ರಿಕೆಯ ಪುಟ 20ನ್ನು ನೋಡಿ.

^ ಪ್ಯಾರ. 1 ಬಹಿಷ್ಕೃತ ಸಂಬಂಧಿಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ 1988, ಏಪ್ರಿಲ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಪುಟಗಳು 26-31 ಮತ್ತು 1981, ಸೆಪ್ಟೆಂಬರ್‌ 15ರ (ಇಂಗ್ಲಿಷ್‌) ಪತ್ರಿಕೆಯ ಪುಟಗಳು 26-31ರಲ್ಲಿ ಚರ್ಚಿಸಲ್ಪಟ್ಟಿರುವ ಶಾಸ್ತ್ರಾಧಾರಿತ ಸಲಹೆಯನ್ನು ನೋಡಿ.