ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು  |  ನಂ. 1 2017

 ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ

ಬೈಬಲನ್ನು ಓದೋದು ಹೇಗೆ?

ಬೈಬಲನ್ನು ಓದೋದು ಹೇಗೆ?

ಬೈಬಲ್‌ ಓದುವುದನ್ನು ಆನಂದಿಸಲು ಮತ್ತು ಅದರಿಂದ ಹೆಚ್ಚು ಪ್ರಯೋಜನ ಪಡೆಯಲು ಏನು ಮಾಡಬೇಕು? ಈ ವಿಷಯದಲ್ಲಿ ಹಲವರಿಗೆ ಸಹಾಯ ಮಾಡಿರುವ ಐದು ಸಲಹೆಗಳನ್ನು ನೋಡೋಣ.

ಪರಿಸರ ಪ್ರಶಾಂತವಾಗಿರಲಿ. ನಿಮ್ಮ ಸುತ್ತಮುತ್ತ ಗಲಾಟೆ, ಸದ್ದುಗದ್ದಲ ಇಲ್ಲದಿರುವಂತೆ ನೋಡಿಕೊಳ್ಳಿ. ಆಗ ನೀವು ಓದುವುದರ ಕಡೆಗೆ ಗಮನಕೊಡಲು ಸಾಧ್ಯವಾಗುತ್ತದೆ. ಬೈಬಲ್‌ ಓದುವಾಗ ಸಾಕಷ್ಟು ಗಾಳಿ, ಬೆಳಕು ಇದ್ದರೆ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯ.

ಸರಿಯಾದ ಮನೋಭಾವ ಇರಲಿ. ತಂದೆಯಿಂದ ಕಲಿಯಲು ಬಯಸುವ ಮಗುವಿನಲ್ಲಿರುವ ಮನೋಭಾವ ನಿಮ್ಮಲ್ಲಿರಬೇಕು. ಕಾರಣ, ಬೈಬಲ್‌ ನಮ್ಮೆಲ್ಲರ ತಂದೆಯಾದ ದೇವರಿಂದ ಬಂದಿದೆ. ಆದ್ದರಿಂದ ಬೈಬಲಿನ ಬಗ್ಗೆ ನಿಮಗೆ ಅಷ್ಟು ಒಳ್ಳೇ ಅಭಿಪ್ರಾಯ ಇಲ್ಲದಿದ್ದರೂ ಅಥವಾ ತಪ್ಪಭಿಪ್ರಾಯ ಇದ್ದರೂ ಅದನ್ನೆಲ್ಲಾ ಪಕ್ಕಕ್ಕಿಟ್ಟು ಓದಲು ಪ್ರಯತ್ನಿಸಿ. ಆಗ ದೇವರು ಹೇಳುವುದು ಸರಿ ಅಂತ ಗೊತ್ತಾಗುತ್ತೆ, ಹೆಚ್ಚು ಕಲಿಯಲೂ ಸಾಧ್ಯವಾಗುತ್ತದೆ.—ಕೀರ್ತನೆ 25:4.

ಓದುವ ಮುಂಚೆ ಪ್ರಾರ್ಥಿಸಿ. ಬೈಬಲಿನಲ್ಲಿ ಇರೋದೆಲ್ಲಾ ದೇವರ ಆಲೋಚನೆಗಳೇ. ಅವುಗಳನ್ನು ಅರ್ಥಮಾಡಿಕೊಳ್ಳಲು ದೇವರ ಸಹಾಯ ಬೇಕು. ಅದಕ್ಕಾಗಿ, ‘ಪವಿತ್ರಾತ್ಮವನ್ನು ಕೊಡುತ್ತೇನೆ’ ಎಂದು ಸ್ವತಃ ದೇವರೇ ಮಾತುಕೊಟ್ಟಿದ್ದಾನೆ. (ಲೂಕ 11:13) ಈ ಪವಿತ್ರಾತ್ಮ ದೇವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕ್ರಮೇಣ ‘ದೇವರ ಅಗಾಧವಾದ ವಿಷಯಗಳನ್ನು’ ಸಹ ಅರ್ಥಮಾಡಿಕೊಳ್ಳಲು ನಿಮ್ಮ ಮನಸ್ಸನ್ನು ತೆರೆಯುತ್ತದೆ.—1 ಕೊರಿಂಥ 2:10.

ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮೇಲೆ ಮೇಲೇ ಓದಬೇಡಿ ಅಥವಾ ಓದಿ ಮುಗಿಸಿಬಿಡಬೇಕು ಅಂತ ಓದಬೇಡಿ. ನೀವು ಓದುತ್ತಿರುವ ವಿಷಯದ ಬಗ್ಗೆ ಯೋಚಿಸಿ. ‘ನಾನು ಓದುತ್ತಿರುವ ಭಾಗದಲ್ಲಿರುವ ಈ ವ್ಯಕ್ತಿಯಲ್ಲಿ ಯಾವ ಗುಣಗಳಿವೆ?’ ‘ಇವುಗಳನ್ನು ನನ್ನ ಜೀವನದಲ್ಲಿ ಹೇಗೆ ಅನ್ವಯಿಸಬಹುದು?’ ಎಂದು ಕೇಳಿಕೊಳ್ಳಿ.

ನಿರ್ದಿಷ್ಟ ಗುರಿಯಿಡಿ. ಯಾವುದಾದರೂ ಅಂಶವನ್ನು ಕಲಿಯುವ ಗುರಿಯಿಟ್ಟು ಓದಿ. ಆ ಅಂಶ ನಿಮ್ಮ ಜೀವನವನ್ನು ಉತ್ತಮಗೊಳಿಸುವ ವಿಷಯವಾಗಿರಬೇಕು. ಆಗ ಬೈಬಲಿನಿಂದ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯ. ಉದಾಹರಣೆಗೆ, ‘ನಾನು ದೇವರ ಬಗ್ಗೆ ಹೆಚ್ಚನ್ನು ಕಲಿಯಬೇಕು,’ ‘ನಾನು ಒಳ್ಳೇ ವ್ಯಕ್ತಿ, ಗಂಡ ಅಥವಾ ಹೆಂಡತಿ ಆಗಬೇಕು’ ಎಂಬಂಥ ಗುರಿಗಳನ್ನು ಇಟ್ಟುಕೊಳ್ಳಬಹುದು. ನಂತರ, ಇವುಗಳನ್ನು ಮುಟ್ಟಲು ಸಹಾಯ ಮಾಡುವ ಬೈಬಲಿನ ಭಾಗಗಳನ್ನು ಆರಿಸಿ ಅವುಗಳನ್ನು ಓದಿ. *

ಈ ಐದು ವಿಷಯಗಳು ಬೈಬಲ್‌ ಓದುವುದನ್ನು ಆರಂಭಿಸಲು ನಿಮಗೆ ಸಹಾಯ ಮಾಡುತ್ತವೆ. ಆದರೆ ಬೈಬಲ್‌ ಓದುವುದನ್ನು ಆಸಕ್ತಿಕರವಾಗಿ ಮಾಡುವುದು ಹೇಗೆ? ಮುಂದಿನ ಲೇಖನ ಅದನ್ನು ತಿಳಿಸುತ್ತದೆ.

^ ಪ್ಯಾರ. 8 ಬೈಬಲಿನ ಯಾವ ಭಾಗ ಓದಬೇಕೆಂದು ನಿಮಗೆ ಗೊತ್ತಿಲ್ಲದೆ ಇದ್ದರೆ, ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ.