ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಪ್ರಾರ್ಥನೆಯಿಂದ ಪ್ರಯೋಜನ ಇದೆಯಾ?

ನಾವು ಪ್ರಾರ್ಥಿಸಬೇಕೆಂದು ದೇವರು ಏಕೆ ಹೇಳುತ್ತಾನೆ?

ನಾವು ಪ್ರಾರ್ಥಿಸಬೇಕೆಂದು ದೇವರು ಏಕೆ ಹೇಳುತ್ತಾನೆ?

ನಾವಾತನ ಸ್ನೇಹಿತರಾಗಬೇಕೆಂದು ಬಯಸುವುದರಿಂದ.

ಸ್ನೇಹ ಸಂಬಂಧ ಬೆಳೆಯಬೇಕೆಂದರೆ ಸ್ನೇಹಿತರಿಬ್ಬರೂ ಮಾತಾಡಬೇಕು. ಅದೇರೀತಿ, ನಾವು ತನ್ನ ಸ್ನೇಹಿತರಾಗಬೇಕೆಂದು ಬಯಸುವುದರಿಂದಲೇ ದೇವರು ನಮಗೆ ತನ್ನ ಜೊತೆ ಮಾತಾಡುವಂತೆ ಹೇಳುತ್ತಾನೆ. “ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು” ಎಂದು ಸ್ವತಃ ದೇವರೇ ಹೇಳಿದ್ದಾನೆ. (ಯೆರೆಮಿಾಯ 29:12) ದೇವರ ಜೊತೆ ಮಾತಾಡುತ್ತಿದ್ದಂತೆ ನಾವು ‘ಆತನಿಗೆ ಹತ್ತಿರವಾಗುತ್ತೇವೆ,’ ಆಗ ಆತನೂ ‘ನಮಗೆ ಹತ್ತಿರವಾಗುತ್ತಾನೆ.’ (ಯಾಕೋಬ 4:8) ಯೆಹೋವನಿಗೆ “ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ” ಎಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ. (ಕೀರ್ತನೆ 145:18) ನಾವು ದೇವರಿಗೆ ಎಷ್ಟು ಹೆಚ್ಚು ಪ್ರಾರ್ಥಿಸುತ್ತೇವೋ ದೇವರೊಂದಿಗಿನ ನಮ್ಮ ಸ್ನೇಹವೂ ಅಷ್ಟೇ ಹೆಚ್ಚು ಬಲಗೊಳ್ಳುತ್ತದೆ.

ಯೆಹೋವನಿಗೆ “ಮೊರೆಯಿಡು ವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.”—ಕೀರ್ತನೆ 145:18

ಆತನು ನಮಗೆ ಸಹಾಯ ಮಾಡಲು ಬಯಸುವುದರಿಂದ.

“ನಿಮ್ಮಲ್ಲಿ ಯಾವನಾದರೂ ರೊಟ್ಟಿಯನ್ನು ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? ಅಥವಾ ಪ್ರಾಯಶಃ ಮೀನನ್ನು ಕೇಳಿದರೆ ಹಾವನ್ನು ಕೊಡುವನೇ? ಆದುದರಿಂದ, . . . ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ನಿಮ್ಮ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಕೊಡುವನಲ್ಲವೆ?” ಎಂದು ಯೇಸು ಹೇಳಿದ್ದಾನೆ. (ಮತ್ತಾಯ 7:9-11) ದೇವರಿಗೆ ‘ನಮ್ಮ ಬಗ್ಗೆ ಚಿಂತೆ [ಕಾಳಜಿ] ಇರುವುದರಿಂದಲೇ’ ಪ್ರಾರ್ಥಿಸುವಂತೆ ಹೇಳಿದ್ದಾನೆ. (1 ಪೇತ್ರ 5:7) ನಮ್ಮ ಸಮಸ್ಯೆಗಳ ಬಗ್ಗೆ ತನ್ನ ಹತ್ತಿರ ಹೇಳಿಕೊಳ್ಳುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ. “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ” ಎಂದು ಬೈಬಲ್‌ ತಿಳಿಸುತ್ತದೆ.—ಫಿಲಿಪ್ಪಿ 4:6.

ಆಧ್ಯಾತ್ಮಿಕ ವಿಷಯಗಳ ಅಗತ್ಯ ನಮಗಿರುವುದರಿಂದ.

‘ದೇವರಿಗೆ ಪ್ರಾರ್ಥಿಸುವ ಅಗತ್ಯ ನಮಗಿದೆ’ ಎಂಬ ಭಾವನೆ ಕೋಟ್ಯಾಂತರ ಜನರಿಗಿದೆ ಮತ್ತು ಈ ಭಾವನೆ ಕೆಲವು ನಾಸ್ತಿಕರಲ್ಲಿ, ದೇವರು ಇದ್ದಾನಾ ಇಲ್ವಾ ಎಂಬ ಸಂಶಯವಿರುವವರಲ್ಲೂ ಇದೆ ಎಂದು ಮಾನವ ಸ್ವಭಾವದಲ್ಲಿ ಪರಿಣಿತರಾದ ತಜ್ಞರೊಬ್ಬರು ಹೇಳುತ್ತಾರೆ. * ಮಾನವರನ್ನು ಆಧ್ಯಾತ್ಮಿಕ ವಿಷಯಗಳ ಅಗತ್ಯವನ್ನಿಟ್ಟು ಸೃಷ್ಟಿಸಲಾಗಿದೆ ಎಂದು ಇದರಿಂದ ಗೊತ್ತಾಗುತ್ತದೆ. ಆದುದರಿಂದಲೇ ಯೇಸು, “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ಹೇಳಿದ್ದಾನೆ. (ಮತ್ತಾಯ 5:3) ಈ ಅಗತ್ಯವನ್ನು ಪೂರೈಸುವ ಒಂದು ವಿಧ, ಕ್ರಮವಾಗಿ ದೇವರ ಜೊತೆ ಮಾತಾಡುವುದೇ ಆಗಿದೆ.

ದೇವರು ಹೇಳಿದಂತೆ ನಾವು ಪ್ರಾರ್ಥಿಸುವುದಾದರೆ ನಮಗೇನು ಪ್ರಯೋಜನ? (w15-E 10/01)

^ ಪ್ಯಾರ. 8 ಅಮೆರಿಕದ ನಾಸ್ತಿಕರು ಅಥವಾ ದೇವರು ಇದ್ದಾನಾ ಇಲ್ವಾ ಎಂದು ಸಂಶಯಪಡುವವರಲ್ಲಿ 11 ಪ್ರತಿಶತ ಜನರು ಕಡಿಮೆಪಕ್ಷ ತಿಂಗಳಿಗೆ ಒಮ್ಮೆಯಾದರೂ ಪ್ರಾರ್ಥಿಸುತ್ತಾರೆ ಎಂದು 2012ರಲ್ಲಿ ಪ್ಯೂ ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.