ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು  |  ಜನವರಿ 2015

“ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ”

“ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ”

ಒಂದು ಕಾಲೇಜಿನ ಬಾಸ್ಕೆಟ್‌ಬಾಲ್‌ ತರಬೇತುಗಾರನು ಕೋಪಿಷ್ಠನಾಗಿದ್ದ ಕಾರಣ ಅವನನ್ನು ಕೆಲಸದಿಂದ ತೆಗೆದುಹಾಕಲಾಯಿತು.

ತಾನು ಅಂದುಕೊಂಡಂತೆ ನಡೆಯದೇ ಇದ್ದದ್ದಕ್ಕೆ ಮಗು ಕೋಪದಿಂದ ರಂಪಾಟ ಮಾಡಿತು.

ಮಗನು ತನ್ನ ರೂಮನ್ನು ನೀಟಾಗಿ ಇಡದ ಕಾರಣ ಅಮ್ಮ-ಮಗನ ಮಧ್ಯೆ ಜಗಳ ಪ್ರಾರಂಭವಾಗಿ ಒಬ್ಬರ ಮೇಲೊಬ್ಬರು ಕಿರಿಚಾಡಿದರು.

ನಾವೆಲ್ಲರೂ ದಿನಬೆಳಗಾದರೆ ಜನ ಕೋಪದಿಂದ ರೇಗಾಡುವುದನ್ನು ನೋಡುತ್ತಿರುತ್ತೇವೆ, ಅಷ್ಟೇಕೆ ನಮಗೇ ಕೆಲವೊಮ್ಮೆ ಕೋಪ ಬರುತ್ತದೆ. ಕೋಪ ಮಾಡಿಕೊಳ್ಳುವುದು ಒಳ್ಳೇದಲ್ಲ, ಅದನ್ನು ಹಿಡಿತದಲ್ಲಿಡಬೇಕು ಅಂತ ನಮಗೆಲ್ಲರಿಗೂ ಗೊತ್ತಿದೆ. ಆದರೂ ಕೆಲವೊಮ್ಮೆ ಯಾರಾದರೊಬ್ಬರು ಅನ್ಯಾಯ ಮಾಡುತ್ತಿದ್ದಾರೆ ಅಂತ ನಮಗನಿಸುವಾಗ ಕೋಪ ನೆತ್ತಿಗೇರುತ್ತದೆ. “ಕೋಪ ಮಾನವ ಸಹಜ ಗುಣ” ಎಂದು ಅಮೆರಿಕದ ಮನಶ್ಶಾಸ್ತ್ರ ಸಂಸ್ಥೆ ತನ್ನ ಒಂದು ಲೇಖನದಲ್ಲಿ ತಿಳಿಸಿತು.

ಕ್ರೈಸ್ತನಾದ ಅಪೊಸ್ತಲ ಪೌಲನು ದೇವ ಪ್ರೇರಣೆಯಿಂದ ಬರೆದ ಮಾತುಗಳನ್ನು ಗಮನಿಸುವುದಾದರೆ ಮೇಲೆ ತಿಳಿಸಲಾಗಿರುವ ಮಾತು ಸತ್ಯ ಎಂದನಿಸುತ್ತದೆ. ಜನರು ಕೆಲವೊಮ್ಮೆ ಕೋಪಗೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾ ಅವನು ಹೀಗೆ ಬರೆದನು: “ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಹಾಗಾದರೆ ಕೋಪ ಬಂದಾಗೆಲ್ಲಾ ನಾವು ಅದನ್ನು ತೋರಿಸಬೇಕಾ ಅಥವಾ ಹಿಡಿತದಲ್ಲಿಡಬೇಕಾ?

ಕೋಪ ಮಾಡಿಕೊಳ್ಳುವುದು ತಪ್ಪಾ?

ಕೋಪದ ಕುರಿತು ಸಲಹೆ ಕೊಡುವಾಗ ಪೌಲನ ಮನಸ್ಸಿನಲ್ಲಿ ಕೀರ್ತನೆಗಾರನು ಹೇಳಿದ “ಭಯಪಡಿರಿ, ಪಾಪಮಾಡಬೇಡಿರಿ” ಎಂಬ ಮಾತು ಇದ್ದಿರಬೇಕು. (ಕೀರ್ತನೆ 4:4) ಹಾಗಾದರೆ ಪೌಲನ ಎಚ್ಚರಿಕೆಯ ಅರ್ಥವೇನು? ಅವನು ಮುಂದುವರಿಸುತ್ತಾ ಹೇಳಿದ್ದು: “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ.” (ಎಫೆಸ 4:31) ಇಲ್ಲಿ “ತೆಗೆದುಹಾಕಿರಿ” ಎಂಬ ಪೌಲನ ಮಾತಿನ ಅರ್ಥ ಕೋಪವನ್ನು ಹಿಡಿತದಲ್ಲಿಡಿ ಎಂದಾಗಿದೆ. ಈ ಹಿಂದೆ ತಿಳಿಸಲಾದ ಅಮೆರಿಕದ ಮನಶ್ಶಾಸ್ತ್ರ ಸಂಸ್ಥೆ ತನ್ನ ಲೇಖನದಲ್ಲಿ ಹೀಗೆ ತಿಳಿಸಿತು: “ಕೋಪವನ್ನು ಹಿಡಿತದಲ್ಲಿ ಇಡದಿದ್ದರೆ ಅದು ಹೆಚ್ಚುತ್ತಾ ಹೋಗುತ್ತದೆ ಮತ್ತು ಜಗಳಗಳಾಗುತ್ತವೆ. ಇದರಿಂದ . . . ಪರಿಸ್ಥಿತಿಯನ್ನು ಸರಿಪಡಿಸಲು ಆಗುವುದಿಲ್ಲ.”

ಹಾಗಾದರೆ ಕೋಪವನ್ನು ಮತ್ತು ಅದರಿಂದಾಗುವ ಕೆಟ್ಟ ಪರಿಣಾಮಗಳನ್ನು ‘ತೆಗೆದುಹಾಕುವುದು’ ಹೇಗೆ? ಪುರಾತನ ಇಸ್ರಾಯೇಲಿನ ವಿವೇಕಿ ಅರಸ ಸೊಲೊಮೋನನು, “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ” ಎಂದು ಬರೆದನು. (ಜ್ಞಾನೋಕ್ತಿ 19:11) ಈ ಮಾತಿನ ಅರ್ಥವೇನು?

ಕೋಪವನ್ನು ಹಿಡಿತದಲ್ಲಿಡಲು ವಿವೇಕ ಹೇಗೆ ಸಹಾಯ ಮಾಡುತ್ತದೆ?

ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ವಿವೇಕ ಎನ್ನುತ್ತಾರೆ. ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’  ಎಂಬಂತೆ ನಿಜ ವಿವೇಕ ಮೇಲ್ನೋಟಕ್ಕೆ ಕಾಣುವುದನ್ನು ನಂಬುವುದಿಲ್ಲ, ಬದಲಿಗೆ ವಿಷಯದ ಹಿಂದಿರುವ ಕಾರಣಗಳನ್ನು ಅರ್ಥ ಮಾಡಿಕೊಳ್ಳುತ್ತದೆ.

ಅನ್ಯಾಯವನ್ನು ನೋಡಿದಾಗ ನಮಗೆ ಕೋಪ ಬರಬಹುದು. ಹಾಗಂತ ಕೋಪದಿಂದ ನಡೆದುಕೊಂಡರೆ ಕೊನೆಯಲ್ಲಿ ನಮಗೂ, ಇತರರಿಗೂ ನೋವಾಗುತ್ತದೆ. ಬೆಂಕಿ ಮನೆಯನ್ನು ಸುಟ್ಟು ಭಸ್ಮ ಮಾಡುವಂತೆಯೇ ಕೋಪದ ಜ್ವಾಲೆ ನಮ್ಮ ಗೌರವವನ್ನು, ಇತರರೊಂದಿಗಿನ ಮತ್ತು ಯೆಹೋವನೊಂದಿಗಿನ ಸಂಬಂಧವನ್ನು ಹಾಳು ಮಾಡುತ್ತದೆ. ಆದ್ದರಿಂದ ನಮಗೆ ಕೋಪ ಬರುತ್ತಿದೆ ಎಂದನಿಸುವಾಗ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಏನು ನಡೆದಿದೆ ಎಂಬುದರ ಕುರಿತು ಸಂಪೂರ್ಣ ಚಿತ್ರಣವನ್ನು ಅರ್ಥ ಮಾಡಿಕೊಳ್ಳುವುದಾದರೆ ನಮ್ಮ ಕೋಪ ಅಥವಾ ಭಾವನೆಗಳನ್ನು ಹಿಡಿತದಲ್ಲಿಡಲು ಸಾಧ್ಯವಾಗುತ್ತದೆ.

ಸೊಲೊಮೋನನ ತಂದೆ ಅರಸ ದಾವೀದನು ನಾಬಾಲ ಮತ್ತವನ ಮನೆಯವರ ಮೇಲೆ ಕೋಪಗೊಂಡು ಅವರನ್ನು ಕೊಲ್ಲಬೇಕೆಂದಿದ್ದನು. ಆದರೆ ದಾವೀದನು ಈ ರಕ್ತಾಪರಾಧದಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡನು. ಕಾರಣ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಅವನಿಗೆ ಸಹಾಯ ಸಿಕ್ಕಿತು. ದಾವೀದ ಮತ್ತವನ ಸೇವಕರು ಅರಣ್ಯದಲ್ಲಿದ್ದಾಗ ನಾಬಾಲನ ಕುರಿಗಳಿಗೆ ಏನೂ ಹಾನಿಯಾಗದಂತೆ ಕಾವಲಿದ್ದರು. ಆದ್ದರಿಂದ ಕುರಿಗಳ ಉಣ್ಣೆಯನ್ನು ಕತ್ತರಿಸುವ ಸಮಯ ಬಂದಾಗ ದಾವೀದನು ತನಗೂ ತನ್ನ ಸೇವಕರಿಗಾಗಿಯೂ ಆಹಾರವನ್ನು ಕೇಳಿದನು. ಅದಕ್ಕೆ ನಾಬಾಲನು, “ಉಣ್ಣೆಕತ್ತರಿಸುವವರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನೂ ಆಹಾರಪಾನಗಳನ್ನೂ ಎತ್ತಿ ಎಲ್ಲಿಂದಲೋ ಬಂದವರಿಗೆ ಕೊಟ್ಟುಬಿಡಬೇಕೋ” ಅಂದನು. ಇದು ದಾವೀದನಿಗೆ ತಿಳಿದಾಗ ಎಷ್ಟೊಂದು ಅವಮಾನವಾಗಿರಬೇಕು! ಅವನು 400 ಮಂದಿ ಸೇವಕರನ್ನು ಕರೆದುಕೊಂಡು ನಾಬಾಲನನ್ನೂ ಅವನ ಮನೆಯವರನ್ನೂ ಸಂಹರಿಸಲು ಹೊರಟನು.—1 ಸಮುವೇಲ 25:4-13.

ನಾಬಾಲನ ಹೆಂಡತಿ ಅಬೀಗೈಲಳಿಗೆ ನಡೆದ ವಿಷಯ ತಿಳಿದುಬಂದಾಗ ಕೂಡಲೇ ದಾವೀದನನ್ನು ಭೇಟಿ ಮಾಡಿದಳು. ಅವನ ಕಾಲಿಗೆ ಬಿದ್ದು, “ನಿನ್ನ ದಾಸಿಯು ಮಾತಾಡುವದಕ್ಕೆ ಅಪ್ಪಣೆಯಾಗಲಿ; ಅವಳ ಮಾತನ್ನು ಲಾಲಿಸಬೇಕು” ಎಂದು ಹೇಳಿದಳು. ನಂತರ ಅವಳು ನಾಬಾಲನು ಎಷ್ಟು ಮೂರ್ಖನೆಂದು ಮತ್ತು ಅವನ ರಕ್ತವನ್ನು ಸುರಿಸಿ ಮುಯ್ಯಿತೀರಿಸುವುದರಿಂದ ದಾವೀದನು ಪರಿತಪಿಸಬೇಕಾಗುತ್ತದೆ ಎಂದು ವಿವರಿಸಿದಳು.—1 ಸಮುವೇಲ 25:24-31.

ಅಬೀಗೈಲಳ ಮಾತುಗಳಿಂದ ದಾವೀದನಿಗೆ ಏನು ಅರ್ಥವಾಯಿತು? ನಾಬಾಲನು ಹುಟ್ಟು ಮೂರ್ಖ ಎಂದೂ, ತಾನು ಮುಯ್ಯಿತೀರಿಸುವುದಾದರೆ ತನ್ನ ಮೇಲೆ ರಕ್ತಾಪರಾಧ ಬರುತ್ತದೆಂದೂ ತಿಳಿಯಿತು. ಈ ತಿಳಿವಳಿಕೆ ಅವನಿಗೆ ತನ್ನ ಕೋಪವನ್ನು ಹಿಡಿತದಲ್ಲಿಡಲು ಸಹಾಯ ಮಾಡಿತು. ದಾವೀದನಂತೆ ನಿಮಗೂ ಕೆಲವೊಮ್ಮೆ ಕೋಪ ಬರಬಹುದು. ಆಗ ನೀವೇನು ಮಾಡಬೇಕು? ಕೋಪ ಬಂದಾಗ “ದೀರ್ಘವಾಗಿ ಉಸಿರೆಳೆದು 1ರಿಂದ 10ನ್ನು ಎಣಿಸಿ” ಎಂದು ಮಾಯೋ ಕ್ಲಿನಿಕ್‍ನ ಸಿಬ್ಬಂದಿಗಳು ಬರೆದ ಒಂದು ಲೇಖನ ತಿಳಿಸುತ್ತದೆ. ಕೋಪ ಬಂದಾಗ ವಿವೇಕದಿಂದ ವರ್ತಿಸಿ. ಹೇಗೆಂದರೆ ಸ್ವಲ್ಪ ಸಮಯ ತೆಗೆದುಕೊಂಡು ಸಮಸ್ಯೆಗೆ ಏನು ಕಾರಣ ಮತ್ತು ಕೋಪದಿಂದ ನಡೆದುಕೊಂಡರೆ ಅದರ ಪರಿಣಾಮ ಏನಾಗುತ್ತದೆಂದು ಯೋಚನೆ ಮಾಡಿ. ಈ ವಿವೇಕ ನಿಮ್ಮ ಕೋಪವನ್ನು ತಣ್ಣಗಾಗಿಸುತ್ತದೆ.—1 ಸಮುವೇಲ 25:32-35.

ಇಂದು ಇದೇ ರೀತಿಯಲ್ಲಿ ಅನೇಕರು ಕೋಪವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಲಿತಿದ್ದಾರೆ. ಪೋಲೆಂಡ್‍ನ ಜೈಲಿನಲ್ಲಿದ್ದ 23 ವರ್ಷದ ಸೆಬಾಸ್ಟಿಯನ್‌ ಎಂಬಾತ ಬೈಬಲ್‌ ಅಧ್ಯಯನದ ಸಹಾಯದಿಂದ ತನ್ನ ಕೋಪವನ್ನು ಮತ್ತು ಭಾವೋದ್ವೇಗವನ್ನು ಹಿಡಿತದಲ್ಲಿಡಲು ಕಲಿತನು. “ಮೊದಲು ನಾನು ಸಮಸ್ಯೆಯ ಬಗ್ಗೆ ಯೋಚಿಸುತ್ತೇನೆ. ನಂತರ ಅದಕ್ಕೆ ಸಂಬಂಧಿಸಿದ ಬೈಬಲ್‌ ಸಲಹೆಯನ್ನು ಅನ್ವಯಿಸಲು ಪ್ರಯತ್ನಿಸುತ್ತೇನೆ. ನನಗಂತೂ ಬೈಬಲ್‌ ಅತ್ಯುತ್ತಮ ಮಾರ್ಗದರ್ಶಿಯಾಗಿದೆ” ಎಂದವನು ಹೇಳುತ್ತಾನೆ.

ಬೈಬಲ್‌ ಸಲಹೆಯನ್ನು ಅನ್ವಯಿಸುವ ಮೂಲಕ ಕೋಪವನ್ನು ಹಿಡಿತದಲ್ಲಿ ಇಡಬಲ್ಲಿರಿ

ಸೆಟ್ಸೂಒ ಎಂಬಾತನು ಸಹ ತನ್ನ ಕೋಪವನ್ನು ಹಿಡಿತದಲ್ಲಿಡಲು ಇದೇ ವಿಧಾನವನ್ನು ಉಪಯೋಗಿಸಿದನು. ಅವನು ಹೇಳುವುದು: “ಕೆಲಸದ ಸ್ಥಳದಲ್ಲಿ ಯಾರಾದರೂ ಕಿರಿಕಿರಿ ಮಾಡಿದರೆ ನಾನು ಅವರ ಮೇಲೆ ಕಿರಿಚಾಡುತ್ತಿದ್ದೆ. ಆದರೆ ಬೈಬಲನ್ನು ಕಲಿತ ನಂತರ, ಕೋಪ ಬರುವಾಗ ಕಿರುಚಾಡದೆ, ‘ತಪ್ಪು ಯಾರದ್ದು? ಸಮಸ್ಯೆಗೆ ನಾನೇ ಕಾರಣನಾ?’ ಎಂದು ಯೋಚಿಸುತ್ತೇನೆ.” ಈ ರೀತಿ ಯೋಚಿಸಿದ್ದು ಕೋಪವನ್ನು ಮತ್ತು ಭಾವೋದ್ವೇಗವನ್ನು ಹಿಡಿತದಲ್ಲಿಡಲು ಅವರಿಗೆ ಸಹಾಯ ಮಾಡಿತು.

ಕೋಪವನ್ನು ಹಿಡಿತದಲ್ಲಿಡಲು ಸಾಧ್ಯವೇ ಇಲ್ಲ ಎಂದು ನಿಮಗನಿಸಬಹುದು. ಆದರೆ ದೇವರ ವಾಕ್ಯವಾದ ಬೈಬಲಿಗೆ ಆ ಶಕ್ತಿ ಇದೆ. ಬೈಬಲಿನ ಸಲಹೆಗಳನ್ನು ಪಾಲಿಸಿ, ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸುವ ಮೂಲಕ ಕೋಪವನ್ನು ಹಿಡಿತದಲ್ಲಿಡಿ. ನಿಮ್ಮಲ್ಲಿರುವ ವಿವೇಕವನ್ನು ತೋರಿಸಿ. ▪ (w14-E 12/01)