ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ದೇವರು ನಿಮ್ಮ ಸ್ನೇಹಿತನಾ?

ದೇವರು ನಮ್ಮ ಸ್ನೇಹಿತನಾಗಲು ಸಾಧ್ಯನಾ?

ದೇವರು ನಮ್ಮ ಸ್ನೇಹಿತನಾಗಲು ಸಾಧ್ಯನಾ?

“ನೀವು ದೇವರ ಸ್ನೇಹಿತರಾದರೆ ನಿಮಗೆ ಸುರಕ್ಷೆ, ಸಂತೃಪ್ತಿ ಇರುತ್ತದೆ. ನಿಮಗೆ ಒಳ್ಳೇದನ್ನು ಮಾಡಲು ದೇವರು ಯಾವಾಗಲೂ ತುದಿಗಾಲಲ್ಲಿ ನಿಂತಿದ್ದಾನೆ ಅಂತ ಅನಿಸುತ್ತೆ.”—ಕ್ರಿಸ್ಟಫರ್‌, ಘಾನ ದೇಶದ ಯುವಕ.

“ನೀವು ಕಷ್ಟದಲ್ಲಿರುವಾಗ ದೇವರು ನಿಮ್ಮ ಬಗ್ಗೆ ಹೆಚ್ಚು ಚಿಂತಿಸುತ್ತಾನೆ. ಆ ಸಂದರ್ಭದಲ್ಲಿ ನೀವು ಕೇಳುವುದಕ್ಕಿಂತ ಹೆಚ್ಚು ಪ್ರೀತಿ ಮತ್ತು ಕಾಳಜಿ ತೋರಿಸುತ್ತಾನೆ.”—13 ವರ್ಷದ ಹನ್ನಾ, ಅಲಾಸ್ಕ, ಅಮೆರಿಕ.

“ದೇವರು ನಮ್ಮ ಸ್ನೇಹಿತ ಎಂಬ ಅನಿಸಿಕೇನೇ ತುಂಬ ಅಮೂಲ್ಯವಾದದ್ದು, ಅದು ನೆಮ್ಮದಿಯನ್ನು ಕೊಡುತ್ತದೆ!”—ಜೀನ, 40ರ ಪ್ರಾಯದ ಜಮೈಕಾದ ಮಹಿಳೆ.

ಇವು ಕ್ರಿಸ್ಟಫರ್‌, ಹನ್ನಾ ಮತ್ತು ಜೀನರ ಮಾತುಗಳಷ್ಟೇ ಅಲ್ಲ. ಭೂವ್ಯಾಪಕವಾಗಿರುವ ಲಕ್ಷಾಂತರ ಜನರು ‘ದೇವರು ನಮ್ಮ ಸ್ನೇಹಿತ!’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಿಮಗೇನು ಅನಿಸುತ್ತೆ? ದೇವರು ನಿಮಗೂ ಸ್ನೇಹಿತನಾ? ನೀವೂ ಆತನ ಸ್ನೇಹಿತರಾಗಲು ಬಯಸುತ್ತೀರಾ? ಆದರೆ, ‘ಎಲ್ಲವನ್ನೂ ಸೃಷ್ಟಿಮಾಡಿದ ದೇವರು ಸಾಮಾನ್ಯ ಮನುಷ್ಯರಾದ ನಮ್ಮ ಸ್ನೇಹಿತನಾಗಲು ಆಗುತ್ತಾ? ಆಗುವುದಾದರೂ ಅದು ಹೇಗೆ ಸಾಧ್ಯ?’ ಅಂತ ಕೆಲವರು ಪ್ರಶ್ನಿಸುತ್ತಾರೆ. ನಿಮಗೂ ಇದೇ ಪ್ರಶ್ನೆ ಬರುತ್ತಾ? ಹಾಗಾದರೆ ಮುಂದೆ ಓದಿ.

ದೇವರು ನಮ್ಮ ಸ್ನೇಹಿತನಾಗಲು ಸಾಧ್ಯ!

ದೇವರು ಪ್ರತಿಯೊಬ್ಬರಿಗೂ ಸ್ನೇಹಿತನಾಗಬಹುದು ಎಂದು ಬೈಬಲ್‌ ಹೇಳುತ್ತದೆ. ಎಷ್ಟೋ ವರ್ಷಗಳ ಹಿಂದೆ ಇದ್ದ ನಂಬಿಗಸ್ತ ಅಬ್ರಹಾಮನನ್ನು ದೇವರು “ನನ್ನ ಸ್ನೇಹಿತ” ಎಂದು ಕರೆದನು. (ಯೆಶಾಯ 41:8) “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲಿನ ಯಾಕೋಬ 4:8 ಹೇಳುತ್ತದೆ. ಇದನ್ನೆಲ್ಲಾ ನೋಡಿದ ಮೇಲೆ ನಿಮಗೇನು ಅನಿಸುತ್ತದೆ? ದೇವರೊಂದಿಗೆ ಒಂದು ಆಪ್ತ ಸಂಬಂಧ ಅಂದರೆ ಸ್ನೇಹ ಹೊಂದಲು ಸಾಧ್ಯವಿದೆ ಅಂತ ಅನಿಸುತ್ತಲ್ವಾ? ಆದರೆ ಒಂದು ಪ್ರಶ್ನೆ ಬರುತ್ತೆ, ಕಣ್ಣಿಗೆ ಕಾಣಿಸದಿರುವ ದೇವರ ಸಮೀಪಕ್ಕೆ ನಾವು ಹೇಗೆ ಹೋಗಬಹುದು? ಆತನಿಗೆ ಹೇಗೆ ಸ್ನೇಹಿತರಾಗಬಹುದು?

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು, ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳ ಮಧ್ಯೆ ಸ್ನೇಹ ಹೇಗೆ ಆರಂಭವಾಗುತ್ತೆ ಅಂತ ನೋಡೋಣ. ಮೊದಲು ಇಬ್ಬರೂ ಹೆಸರನ್ನು ತಿಳಿದುಕೊಳ್ಳುತ್ತಾರೆ. ಹೀಗೆ ಪರಿಚಯವಾದವರು ಮಾತಾಡುತ್ತಾ, ಮಾತಾಡುತ್ತಾ ತಮ್ಮ ಯೋಚನೆಗಳನ್ನು, ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಆಗ ಅವರ ಮಧ್ಯೆ ಸ್ನೇಹ ಚಿಗುರುತ್ತದೆ. ಒಬ್ಬರು ಇನ್ನೊಬ್ಬರಿಗೋಸ್ಕರ ಸಹಾಯ ಮಾಡಲು ಮುಂದಾದಾಗ ಅವರ ಸ್ನೇಹ ಇನ್ನಷ್ಟು ಬಲಗೊಳ್ಳುತ್ತದೆ. ದೇವರ ಸ್ನೇಹಿತರಾಗೋದೂ ಒಂದು ರೀತಿ ಹೀಗೇನೇ. ಅದನ್ನು ಮುಂದಿನ ಲೇಖನದಲ್ಲಿ ನೋಡೋಣ. (w14-E 12/01)