ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ನವೆಂಬರ್ 2015

ದೇವರ ರಾಜ್ಯದ ಆಳ್ವಿಕೆಯ ನೂರು ವರ್ಷ!

ದೇವರ ರಾಜ್ಯದ ಆಳ್ವಿಕೆಯ ನೂರು ವರ್ಷ!

“ಶಾಂತಿಯ ದೇವರು ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಸಕಲ ಒಳ್ಳೇ ವಿಷಯಗಳಿಂದ ನಿಮ್ಮನ್ನು ಸಜ್ಜುಗೊಳಿಸಲಿ.”—ಇಬ್ರಿ. 13:20, 21.

ಗೀತೆಗಳು: 136, 14

1. ಯೇಸುವಿಗೆ ಸಾರುವ ಕೆಲಸ ಎಷ್ಟು ಮುಖ್ಯವಾಗಿತ್ತು? ವಿವರಿಸಿ.

ದೇವರ ರಾಜ್ಯದ ಬಗ್ಗೆ ಮಾತಾಡುವುದೆಂದರೆ ಯೇಸುವಿಗೆ ತುಂಬ ಇಷ್ಟವಿತ್ತು. ಅವನು ಭೂಮಿಯಲ್ಲಿದ್ದಾಗ ಬೇರೆಲ್ಲ ವಿಷಯಗಳಿಗಿಂತ ರಾಜ್ಯದ ಬಗ್ಗೆ ಜಾಸ್ತಿ ಮಾತಾಡಿದನು. 100ಕ್ಕಿಂತ ಹೆಚ್ಚು ಸಲ ಅವನು ರಾಜ್ಯದ ಬಗ್ಗೆ ತನ್ನ ಸೇವೆಯಲ್ಲಿ ತಿಳಿಸಿದನು. ಯೇಸುವಿಗೆ ರಾಜ್ಯವು ತುಂಬ ಮುಖ್ಯವಾಗಿತ್ತೆಂದು ಇದರಿಂದ ಗೊತ್ತಾಗುತ್ತದೆ.—ಮತ್ತಾಯ 12:34 ಓದಿ.

2. (ಎ) ಮತ್ತಾಯ 28:19, 20 ರಲ್ಲಿರುವ ಆಜ್ಞೆಯನ್ನು ಎಷ್ಟು ಮಂದಿ ಕೇಳಿದರು? (ಬಿ) ಇದನ್ನು ಹೇಗೆ ಹೇಳಸಾಧ್ಯ?

2 ಪುನರುತ್ಥಾನವಾದ ಸ್ವಲ್ಪದರಲ್ಲೇ ಯೇಸು 500ಕ್ಕಿಂತ ಹೆಚ್ಚು ಮಂದಿಯ ಒಂದು ಗುಂಪನ್ನು ಭೇಟಿಯಾದನು. ಮುಂದಕ್ಕೆ ಇವರು ರಾಜ್ಯ ಘೋಷಕರಾಗಲಿದ್ದರು. (1 ಕೊರಿಂ. 15:6) ‘ಎಲ್ಲ ಜನಾಂಗಗಳ ಜನರಿಗೆ’ ಸಾರಬೇಕೆಂಬ ಆಜ್ಞೆಯನ್ನು ಯೇಸು ಆ ಸಂದರ್ಭದಲ್ಲೇ ಕೊಟ್ಟಿರಬಹುದು. ಆದರೆ ಅದನ್ನು ಮಾಡುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. * (ಪಾದಟಿಪ್ಪಣಿ ನೋಡಿ.) ಸಾರುವ ಕೆಲಸ ತುಂಬ ಸಮಯದ ವರೆಗೆ ಅಂದರೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ತನಕ ಮುಂದುವರಿಯಲಿದೆ ಎಂದು ಯೇಸು ಆ ಶಿಷ್ಯರಿಗೆ ಹೇಳಿದನು. ನೀವು ಇಂದು ಸುವಾರ್ತೆ ಸಾರಲು ಹೋದಾಗ ಆ ಪ್ರವಾದನೆಯನ್ನು  ನೆರವೇರಿಸಲು ಸಹಾಯ ಮಾಡುತ್ತಿದ್ದೀರಿ.—ಮತ್ತಾ. 28:19, 20.

3. ಸುವಾರ್ತೆ ಸಾರಲು ನಮಗೆ ಯಾವ ಮೂರು ವಿಷಯಗಳು ಸಹಾಯ ಮಾಡಿವೆ?

3 ಸಾರಬೇಕೆಂದು ಯೇಸು ಆಜ್ಞೆಕೊಟ್ಟದ್ದು ಮಾತ್ರವಲ್ಲ “ನಿಮ್ಮ ಸಂಗಡ ಇರುತ್ತೇನೆ” ಎಂದೂ ಹೇಳಿದನು. (ಮತ್ತಾ. 28:20) ಸಾರುವ ಕೆಲಸವನ್ನು ತಾನು ನಿರ್ದೇಶಿಸಲಿದ್ದೇನೆ ಮತ್ತು ಇಡೀ ಭೂಮಿಯಲ್ಲಿ ಸುವಾರ್ತೆ ಸಾರಲು ಸಹಾಯ ಮಾಡುತ್ತೇನೆಂದು ಯೇಸು ತನ್ನ ಹಿಂಬಾಲಕರಿಗೆ ಮಾತುಕೊಟ್ಟನು. ಯೆಹೋವನು ಸಹ ನಮ್ಮ ಜೊತೆ ಇದ್ದಾನೆ. ಸಾರಲು ನೆರವಾಗುವಂತೆ “ಸಕಲ ಒಳ್ಳೇ ವಿಷಯ”ಗಳನ್ನು ಆತನು ನಮಗೆ ಕೊಟ್ಟಿದ್ದಾನೆ. (ಇಬ್ರಿ. 13:20, 21) ಈ ಒಳ್ಳೇ ವಿಷಯಗಳಲ್ಲಿ ಮೂರನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ: (1) ನಮಗೆ ಕೊಡಲಾಗಿರುವ ಸಾಧನಗಳು (2) ನಾವು ಬಳಸುತ್ತಿರುವ ವಿಧಾನಗಳು ಮತ್ತು (3) ನಮಗೆ ಕೊಡಲಾಗಿರುವ ತರಬೇತಿ. ಕಳೆದ 100 ವರ್ಷಗಳಿಂದ ನಾವು ಬಳಸುತ್ತಿರುವ ಸಾಧನಗಳ ಬಗ್ಗೆ ಮೊದಲು ನೋಡೋಣ.

ಸಾರಲು ನೆರವಾಗುತ್ತಿರುವ ಸಾಧನಗಳು

4. ಸಾರುವ ಕೆಲಸದಲ್ಲಿ ಬೇರೆಬೇರೆ ಸಾಧನಗಳು ಹೇಗೆ ನೆರವಾಗಿವೆ?

4 ಯೇಸು ರಾಜ್ಯದ ಸಂದೇಶವನ್ನು ಬೇರೆಬೇರೆ ರೀತಿಯ ಮಣ್ಣಿನಲ್ಲಿ ಬಿತ್ತಲಾದ ಬೀಜಕ್ಕೆ ಹೋಲಿಸಿದನು. (ಮತ್ತಾ. 13:18, 19) ತೋಟಗಾರನೊಬ್ಬ ಮಣ್ಣನ್ನು ಹದಗೊಳಿಸಲು ಬೇರೆಬೇರೆ ಸಾಧನಗಳನ್ನು ಬಳಸುತ್ತಾನೆ. ಅದೇ ರೀತಿ ನಾವು ಹೇಳುವ ಸಂದೇಶವನ್ನು ಜನರು ಸ್ವೀಕರಿಸಲು ನೆರವಾಗುವಂತೆ ನಮ್ಮ ರಾಜನು ಸಾಧನಗಳನ್ನು ಕೊಟ್ಟಿದ್ದಾನೆ. ಕೆಲವು ಸಾಧನಗಳು ಸ್ವಲ್ಪ ಸಮಯದ ವರೆಗೆ ಬಳಕೆಯಲ್ಲಿದ್ದವು. ಇನ್ನು ಕೆಲವು ಈಗಿನ ವರೆಗೂ ಬಳಕೆಯಲ್ಲಿವೆ. ಆದರೆ ಈ ಎಲ್ಲಾ ಸಾಧನಗಳು ಸಾರುವ ಕೆಲಸದಲ್ಲಿ ನಮ್ಮ ಕೌಶಲವನ್ನು ಹೆಚ್ಚಿಸಲು ಸಹಾಯ ಮಾಡಿವೆ.

5. (ಎ) ಟೆಸ್ಟಿಮನಿ ಕಾರ್ಡ್‌ ಅಂದರೇನು? (ಬಿ) ಅದನ್ನು ಹೇಗೆ ಬಳಸಲಾಗುತ್ತಿತ್ತು?

5 ಇಸವಿ 1933ರಲ್ಲಿ ಪ್ರಚಾರಕರು ಟೆಸ್ಟಿಮನಿ ಕಾರ್ಡ್‌ ಅನ್ನು ಬಳಸಲು ಶುರು ಮಾಡಿದರು. ಇದರ ಸಹಾಯದಿಂದ ಅನೇಕರು ಮೊದಲ ಬಾರಿ ಸೇವೆಗೆ ಹೋಗಲು ಆರಂಭಿಸಿದರು. 3 ಇಂಚು ಅಗಲ, 5 ಇಂಚು ಉದ್ದದ ಆ ಚಿಕ್ಕ ಕಾರ್ಡಲ್ಲಿ ಚುಟುಕಾದ, ಸರಳವಾದ ಬೈಬಲ್‌ ಸಂದೇಶ ಇರುತ್ತಿತ್ತು. ಆಗಿಂದಾಗ್ಗೆ ಹೊಸ ಸಂದೇಶವುಳ್ಳ ಹೊಸ ಕಾರ್ಡ್‌ಗಳನ್ನು ಮುದ್ರಿಸಲಾಗುತ್ತಿತ್ತು. ಸಹೋದರ ಅರ್ಲನ್‌ಮೇಯರ್‌ ಮೊದಲನೇ ಸಲ ಈ ಕಾರ್ಡನ್ನು ಬಳಸಿದಾಗ ಅವರಿಗೆ ಸುಮಾರು 10 ವರ್ಷ. “ಸಾಮಾನ್ಯವಾಗಿ ಈ ಕಾರ್ಡನ್ನು ಕೊಡುವ ಮುಂಚೆ ಪೀಠಿಕೆಯಾಗಿ, ‘ದಯವಿಟ್ಟು ಈ ಕಾರ್ಡ್‌ ಅನ್ನು ಓದುತ್ತೀರಾ?’ ಎಂದು ಕೇಳುತ್ತಿದ್ದೆವು. ಮನೆಯವರು ಕಾರ್ಡನ್ನು ಓದಿದ ನಂತರ ಸಾಹಿತ್ಯ ಕೊಟ್ಟು ಮುಂದೆ ಹೋಗುತ್ತಿದ್ದೆವು” ಎನ್ನುತ್ತಾರವರು.

6. ಟೆಸ್ಟಿಮನಿ ಕಾರ್ಡಿನಿಂದ ಯಾವ ಸಹಾಯವಾಯಿತು?

6 ಈ ಟೆಸ್ಟಿಮನಿ ಕಾರ್ಡ್‌ ಪ್ರಚಾರಕರಿಗೆ ಅನೇಕ ವಿಧಗಳಲ್ಲಿ ಸಹಾಯ ಮಾಡಿತು. ಉದಾಹರಣೆಗೆ ಕೆಲವು ಪ್ರಚಾರಕರಿಗೆ ಸೇವೆಯಲ್ಲಿ ಮಾತಾಡುವುದೆಂದರೆ ತುಂಬ ನಾಚಿಕೆ. ಸಾರಬೇಕೆಂಬ ಆಸೆ ಅವರಿಗಿದ್ದರೂ ಏನು ಹೇಳಬೇಕೆಂದೇ ಗೊತ್ತಾಗುತ್ತಿರಲಿಲ್ಲ. ಇನ್ನು ಕೆಲವರಿಗೆ ತುಂಬ ಧೈರ್ಯ. ಎಷ್ಟೆಂದರೆ ತಮಗೆ ಗೊತ್ತಿದ್ದ ಎಲ್ಲ ವಿಷಯಗಳನ್ನು ಮನೆಯವರಿಗೆ ಕೆಲವೇ ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಆದರೆ ಜಾಣ್ಮೆ ಬಳಸುತ್ತಿರಲಿಲ್ಲ. ಮುಖಕ್ಕೆ ಹೊಡೆದ ಹಾಗೆ ಮಾತಾಡುತ್ತಿದ್ದರು. ಆದರೆ ಟೆಸ್ಟಿಮನಿ ಕಾರ್ಡ್‌ ಸ್ಪಷ್ಟ ಹಾಗೂ ಸರಳ ಸಂದೇಶ ಕೊಡಲು ಪ್ರಚಾರಕರಿಗೆ ಸಹಾಯಮಾಡಿತು.

7. ಕಾರ್ಡನ್ನು ಬಳಸುತ್ತಿದ್ದಾಗ ಎದುರಾದ ಕೆಲವು ಸವಾಲುಗಳೇನು?

7 ಸವಾಲುಗಳೇನು ಇರಲಿಲ್ಲ ಎಂದಲ್ಲ. ಸಹೋದರಿ ಗ್ರೇಸ್‌ ಇಸ್ಟೆಪ್‌ ಏನನ್ನುತ್ತಾರೆ ಕೇಳಿ: “ಕೆಲವೊಮ್ಮೆ ಜನರು ನಮಗೆ ‘ಏನಿದೆ ಇದರಲ್ಲಿ? ನೀವೇ ಹೇಳಬಹುದಲ್ಲ’ ಎನ್ನುತ್ತಿದ್ದರು.” ಕೆಲವರಿಗಂತೂ ಓದಲಿಕ್ಕೇ ಬರುತ್ತಿರಲಿಲ್ಲ. ಇನ್ನು ಬೇರೆಯವರು ಕಾರ್ಡನ್ನು ತಕ್ಕೊಂಡು ಬಾಗಿಲು ಹಾಕಿಕೊಳ್ಳುತ್ತಿದ್ದರು. ಕೆಲವರಿಗೆ ನಾವು ಹೇಳುತ್ತಿದ್ದ ಸಂದೇಶ ಇಷ್ಟವಾಗದೆ ಕಾರ್ಡನ್ನು ಹರಿದು ಚೂರುಚೂರು ಮಾಡುತ್ತಿದ್ದರು. ಈ ಸವಾಲುಗಳಿದ್ದರೂ ಟೆಸ್ಟಿಮನಿ ಕಾರ್ಡ್‌ಗಳು ಪ್ರಚಾರಕರಿಗೆ ಸುವಾರ್ತೆ ಸಾರಲು ನೆರವಾದವು ಮತ್ತು ಅವರು ರಾಜ್ಯದ ಬಗ್ಗೆ ಸಾರುವವರು ಎಂದು ಗುರುತಿಸಿತು.

8. ಸುಲಭವಾಗಿ ಒಯ್ಯಲಾಗುವ ಫೋನೋಗ್ರಾಫ್‌ಗಳನ್ನು ಹೇಗೆ ಬಳಸಲಾಗುತ್ತಿತ್ತು? (ಲೇಖನದ ಆರಂಭದ ಚಿತ್ರ ನೋಡಿ.)

8 ಇಸವಿ 1930ರ ನಂತರ ಬಳಕೆಗೆ ಬಂದ ಇನ್ನೊಂದು ಸಾಧನ, ಸುಲಭವಾಗಿ ಒಯ್ಯಲಾಗುವ ಫೋನೋಗ್ರಾಫ್‌. ಇದನ್ನು ಕೆಲವು ಸಾಕ್ಷಿಗಳು  ‘ಆರೋನ’ ಎಂದು ಕರೆಯುತ್ತಿದ್ದರು. ಏಕೆಂದರೆ ಪ್ರಚಾರಕರ ಬದಲು ಈ ಯಂತ್ರವೇ ಮಾತಾಡುತ್ತಿತ್ತು. (ವಿಮೋಚನಕಾಂಡ 4:14-16 ಓದಿ.) ಪ್ರಚಾರಕರು ಮೊದಲು ಮನೆಯವರ ಒಪ್ಪಿಗೆ ಪಡೆದು ಒಂದು ಚಿಕ್ಕ ಬೈಬಲ್‌ ಭಾಷಣವನ್ನು ಫೋನೋಗ್ರಾಫ್‍ನಲ್ಲಿ ನುಡಿಸುತ್ತಿದ್ದರು. ನಂತರ ಸಾಹಿತ್ಯ ಕೊಡುತ್ತಿದ್ದರು. ಕೆಲವು ಸಲ ಇಡೀ ಕುಟುಂಬ ಸೇರಿ ಭಾಷಣ ಕೇಳಿದ್ದೂ ಇದೆ! 1934ರಲ್ಲಿ ವಾಚ್‍ಟವರ್‌ ಸೊಸೈಟಿ ಸುವಾರ್ತೆ ಸಾರಲಿಕ್ಕೆಂದೇ ಸುಲಭವಾಗಿ ಒಯ್ಯಲಾಗುವ ಫೋನೋಗ್ರಾಫ್‌ಗಳನ್ನು ತಯಾರಿಸಿತು. ಸಮಯಸಂದಂತೆ ಸಹೋದರರು ಫೋನೋಗ್ರಾಫ್‍ನಲ್ಲಿ ನುಡಿಸಲು 92 ಭಾಷಣಗಳ ರೆಕಾರ್ಡಿಂಗ್‌ಗಳನ್ನು ತಯಾರಿಸಿದರು.

9. ಸುಲಭವಾಗಿ ಒಯ್ಯಲಾಗುವ ಫೋನೋಗ್ರಾಫ್‌ಗಳಿಂದ ಯಾವ ಪ್ರಯೋಜನವಾಗಿದೆ?

9 ಹಿಲರಿ ಗೊಸ್ಲಿನ್‌ ಎಂಬವರಿಗೆ ಇಂಥ ಭಾಷಣಗಳಲ್ಲಿ ಒಂದನ್ನು ಕೇಳಿಸಿಕೊಂಡಾಗ ತುಂಬ ಖುಷಿ ಆಯಿತು. ತನ್ನ ಅಕ್ಕಪಕ್ಕದ ಮನೆಯವರೊಂದಿಗೆ ಈ ಬೈಬಲ್‌ ಸಂದೇಶವನ್ನು ಹಂಚಿಕೊಳ್ಳಲು ಒಂದು ವಾರದ ಮಟ್ಟಿಗೆ ಫೋನೋಗ್ರಾಫನ್ನು ಪ್ರಚಾರಕನಿಂದ ತಕ್ಕೊಂಡರು. ಪ್ರಚಾರಕನು ವಾಪಸ್‌ ಗೊಸ್ಲಿನ್‍ರ ಮನೆಗೆ ಬಂದಾಗ ತುಂಬ ಮಂದಿ ಹೊಸಬರು ಅವನಿಗಾಗಿ ಕಾಯುತ್ತಾ ಇದ್ದರು. ಸಮಯಾನಂತರ ಇವರಲ್ಲಿ ಹಲವರು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡರು. ಸಹೋದರ ಗೊಸ್ಲಿನ್‍ರ ಇಬ್ಬರು ಹೆಣ್ಮಕ್ಕಳು ಮುಂದೆ ಗಿಲ್ಯಡ್ ಶಾಲೆಗೆ ಹಾಜರಾಗಿ ಮಿಷನರಿಗಳಾದರು. ಸಾರುವ ಕೆಲಸ ಆರಂಭಿಸಲು ಸಹಾಯ ಮಾಡಿದ ಟೆಸ್ಟಿಮನಿ ಕಾರ್ಡಿನಂತೆ, ಸುಲಭವಾಗಿ ಒಯ್ಯಲಾಗುವ ಫೋನೋಗ್ರಾಫ್‌ ಕೂಡ ಪ್ರಚಾರಕರಿಗೆ ನೆರವಾಯಿತು. ನಂತರದ ದಿನಗಳಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಸಹಾಯದಿಂದ ರಾಜನು ತನ್ನ ಜನರಿಗೆ ಪರಿಣಾಮಕಾರಿ ಬೋಧಕರಾಗಲು ತರಬೇತಿ ಕೊಡಲಿದ್ದನು.

ಜನರನ್ನು ತಲಪಲು ಸಾಧ್ಯವಿರುವ ಎಲ್ಲಾ ವಿಧಾನಗಳ ಬಳಕೆ

10, 11. (ಎ) ಸಾರಲಿಕ್ಕಾಗಿ ವಾರ್ತಾಪತ್ರಿಕೆ ಮತ್ತು ರೇಡಿಯೋವನ್ನು ಹೇಗೆ ಬಳಸಲಾಗಿದೆ? (ಬಿ) ಆ ವಿಧಾನಗಳು ಏಕೆ ಪರಿಣಾಮಕಾರಿಯಾಗಿದ್ದವು?

10 ನಮ್ಮ ರಾಜನ ನಿರ್ದೇಶನದ ಕೆಳಗೆ ದೇವರ ಜನರು ಸಾರುವ ಕೆಲಸದಲ್ಲಿ ಆದಷ್ಟು ಹೆಚ್ಚು ಜನರನ್ನು ತಲಪಲು ಬೇರೆಬೇರೆ ವಿಧಾನಗಳನ್ನು ಬಳಸಿದ್ದಾರೆ. ಕೆಲವೇ ಮಂದಿ ಕೆಲಸಗಾರರು ಇದ್ದಾಗಲಂತೂ ಈ ವಿಧಾನಗಳು ಮುಖ್ಯವಾಗಿದ್ದವು. (ಮತ್ತಾಯ 9:37 ಓದಿ.) ಉದಾಹರಣೆಗೆ ಅನೇಕ ವರ್ಷಗಳ ಹಿಂದೆ ವಾರ್ತಾಪತ್ರಿಕೆಗಳನ್ನು ಬಳಸಿ ಸುವಾರ್ತೆ ಸಾರಲಾಗಿತ್ತು. ಪ್ರತಿ ವಾರ ಸಹೋದರ ರಸಲ್‌ರವರು ಬೈಬಲ್‌ ಆಧರಿತ ಭಾಷಣವೊಂದನ್ನು ವಾರ್ತಾ ಏಜೆನ್ಸಿಗೆ ಕಳುಹಿಸುತ್ತಿದ್ದರು. ಏಜೆನ್ಸಿಯವರು ಅದನ್ನು ಕೆನಡ, ಯುರೋಪ್‌ ಮತ್ತು ಅಮೆರಿಕದಲ್ಲಿದ್ದ ವಾರ್ತಾಪತ್ರಿಕೆಗಳಿಗೆ ರವಾನಿಸುತ್ತಿದ್ದರು. 1913ರಷ್ಟಕ್ಕೆ ಸಹೋದರ ರಸಲ್‌ರವರ ಭಾಷಣಗಳನ್ನು 2,000 ವಾರ್ತಾಪತ್ರಿಕೆಗಳಲ್ಲಿ ಮುದ್ರಿಸಲಾಗುತ್ತಿತ್ತು. ಅದನ್ನು ಓದಿದವರ ಸಂಖ್ಯೆ ಸುಮಾರು 1 ಕೋಟಿ 50 ಲಕ್ಷ!

11 ಪರಿಣಾಮಕಾರಿಯಾಗಿ ಸುವಾರ್ತೆ ಸಾರಲು ರೇಡಿಯೋ ಅನ್ನೂ ಬಳಸಲಾಗಿದೆ. ಸಹೋದರ ರದರ್‌ಫರ್ಡ್‌ ರೇಡಿಯೋದಲ್ಲಿ ಕೊಟ್ಟ ಪ್ರಥಮ ಭಾಷಣಗಳಲ್ಲಿ ಒಂದನ್ನು 1922 ಏಪ್ರಿಲ್‌16ರಂದು ಕೊಟ್ಟರು. ಅದನ್ನು ಕೇಳಿದವರ ಸಂಖ್ಯೆ 50,000! ನಮ್ಮದೇ ಒಂದು ರೇಡಿಯೋ ಸ್ಟೇಷನ್‌ ಅನ್ನೂ ಆರಂಭಿಸಿದೆವು. ಅದರ ಹೆಸರು ಡಬ್ಲ.ಬಿ.ಬಿ.ಆರ್‌. ಮೊದಲ ಕಾರ್ಯಕ್ರಮ 1924, ಫೆಬ್ರವರಿ 24ರಂದು ನಡೆಯಿತು. 1924, ಡಿಸೆಂಬರ್‌ 1ರ ಕಾವಲಿನಬುರುಜು ಹೀಗಂದಿತು: “ಕಡಿಮೆ ಖರ್ಚಿನಲ್ಲಿ, ಪರಿಣಾಮಕಾರಿಯಾಗಿ ಸತ್ಯದ ಸಂದೇಶವನ್ನು ಹರಡಿಸಲು ರೇಡಿಯೋ ತುಂಬ ಸಹಾಯಕಾರಿ ಎಂದು ನಾವು ನಂಬುತ್ತೇವೆ. ಇಲ್ಲಿ ವರೆಗೆ ಇಂಥ ವಿಧಾನವನ್ನು ನಾವು ಬಳಸಿಲ್ಲ.” ಕಡಿಮೆ ಪ್ರಚಾರಕರು ಇರುವ ಸ್ಥಳದಲ್ಲಿನ ಜನರಿಗೆ ನಮ್ಮ ಸಂದೇಶವನ್ನು ಮುಟ್ಟಿಸಲು ವಾರ್ತಾಪತ್ರಿಕೆಯಂತೆ ರೇಡಿಯೋ ಸಹ ಸಹಾಯಮಾಡಿತು.

ತುಂಬ ಮಂದಿ ರಾಜ್ಯ ಪ್ರಚಾರಕರಿಗೆ ಸಾರ್ವಜನಿಕ ಸಾಕ್ಷಿಕಾರ್ಯ ಮತ್ತು ನಮ್ಮ ವೆಬ್‌ಸೈಟ್‌ ಬಗ್ಗೆ ಜನರಿಗೆ ಹೇಳುವುದೆಂದರೆ ತುಂಬ ಇಷ್ಟ (ಪ್ಯಾರ 12, 13 ನೋಡಿ)

12. (ಎ) ನಿಮಗೆ ಯಾವ ರೀತಿಯ ಸಾರ್ವಜನಿಕ ಸಾಕ್ಷಿಕಾರ್ಯ ತುಂಬ ಖುಷಿ ತರುತ್ತದೆ? (ಬಿ) ಸಾರ್ವಜನಿಕ ಸಾಕ್ಷಿಕಾರ್ಯದ ಬಗ್ಗೆ ಇರುವ ಭಯವನ್ನು ಮೆಟ್ಟಿನಿಲ್ಲಲು ನಮಗೆ ಯಾವುದು ಸಹಾಯ ಮಾಡುತ್ತದೆ?

12 ಇಂದು ಜನರನ್ನು ತಲಪಲು ಇರುವ ಇನ್ನೊಂದು ಪರಿಣಾಮಕಾರಿ ವಿಧಾನ ಸಾರ್ವಜನಿಕ ಸಾಕ್ಷಿಕಾರ್ಯ. ಬಸ್‌ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ, ಪಾರ್ಕಿಂಗ್‌ ಸ್ಥಳಗಳಲ್ಲಿ, ಸಾರ್ವಜನಿಕ ಚೌಕಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಸಾರಲು ಹೆಚ್ಚು ಪ್ರಯತ್ನ ಹಾಕಲಾಗುತ್ತಿದೆ. ಸಾರ್ವಜನಿಕ ಸಾಕ್ಷಿಕಾರ್ಯ ಮಾಡಲು ನಿಮಗೆ ಭಯವಾಗುತ್ತದಾ?  ಹಾಗಿದ್ದರೆ ಪ್ರಾರ್ಥನೆ ಮಾಡಿ. ಸಂಚರಣ ಮೇಲ್ವಿಚಾರಕರಾದ ಸಹೋದರ ಮನೆರಾ ಹೇಳಿದ ಮಾತಿಗೆ ಗಮನಕೊಡಿ: “ಸಾರಲು ನಮಗೆ ಸಿಗುವ ಒಂದೊಂದು ಹೊಸ ವಿಧಾನವನ್ನು ಯೆಹೋವನ ಸೇವೆ ಮಾಡಲು ಒಂದು ಹೊಸ ಮಾರ್ಗ, ನಮ್ಮ ನಿಷ್ಠೆ ತೋರಿಸಲು ಒಂದು ಅವಕಾಶ, ಸಮಗ್ರತೆಯ ಪರೀಕ್ಷೆ ಎಂದು ಎಣಿಸಿದ್ದೇವೆ. ಯೆಹೋವನು ಹೇಳುವ ರೀತಿಯಲ್ಲಿ ಆತನ ಸೇವೆ ಮಾಡಲು ನಾವು ಸಿದ್ಧರೆಂದು ಸಾಬೀತುಪಡಿಸಲು ಉತ್ಸುಕರಾಗಿದ್ದೆವು.” ನಮ್ಮ ಭಯಗಳನ್ನು ಮೆಟ್ಟಿನಿಂತು ಸಾರುವ ಹೊಸ ವಿಧಾನಗಳನ್ನು ಬಳಸಿದಾಗ ಯೆಹೋವನಲ್ಲಿ ನಮಗಿರುವ ಭರವಸೆ ಬಲಗೊಳ್ಳುತ್ತದೆ ಮತ್ತು ಇನ್ನೂ ಚೆನ್ನಾಗಿ ಸುವಾರ್ತೆ ಸಾರಲು ನಮ್ಮಿಂದಾಗುತ್ತದೆ.—2 ಕೊರಿಂಥ 12:9, 10 ಓದಿ.

13. (ಎ) ಸೇವೆಯಲ್ಲಿ ನಮ್ಮ ವೆಬ್‌ಸೈಟನ್ನು ಬಳಸುವುದು ಏಕೆ ಒಂದು ಪರಿಣಾಮಕಾರಿ ವಿಧಾನ? (ಬಿ) ಅದನ್ನು ಬಳಸಿದ್ದರಿಂದ ನಿಮಗಾದ ಅನುಭವಗಳನ್ನು ತಿಳಿಸಿ.

13 ನಮ್ಮ ವೆಬ್‌ಸೈಟ್‌ jw.org ಬಗ್ಗೆ ಮಾತಾಡುವುದೆಂದರೆ ಅನೇಕ ಪ್ರಚಾರಕರಿಗೆ ತುಂಬ ಖುಷಿ. ನಮ್ಮ ವೆಬ್‌ಸೈಟ್‍ನಲ್ಲಿ 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬೈಬಲ್‌ ಸಾಹಿತ್ಯವನ್ನು ಓದಬಹುದು. ಡೌನ್‌ಲೋಡ್ ಕೂಡ ಮಾಡಬಹುದು. ಪ್ರತಿ ದಿನ 16 ಲಕ್ಷ ಜನ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುತ್ತಾರೆ. ಮುಂಚೆ ರೇಡಿಯೋ ದೂರದ ಪ್ರದೇಶದಲ್ಲಿರುವ ಜನರಿಗೂ ನಮ್ಮ ಸಂದೇಶವನ್ನು ತಲಪಿಸುತ್ತಿತ್ತು. ಅದನ್ನೇ ನಮ್ಮ ವೆಬ್‌ಸೈಟ್‌ ಇಂದು ಮಾಡುತ್ತಿದೆ.

ಸುವಾರ್ತೆ ಸಾರುವವರಿಗಾಗಿ ತರಬೇತಿ

14. (ಎ) ಪ್ರಚಾರಕರಿಗೆ ಯಾವ ತರಬೇತಿಯ ಅಗತ್ಯವಿತ್ತು? (ಬಿ) ಪರಿಣಾಮಕಾರಿ ಬೋಧಕರಾಗಲು ಯಾವ ಶಾಲೆ ಅವರಿಗೆ ಸಹಾಯ ಮಾಡಿದೆ?

14 ಇಲ್ಲಿವರೆಗೆ ನಾವು ಚರ್ಚಿಸಿದ ಸಾಧನ ಮತ್ತು ವಿಧಾನಗಳು ತುಂಬ ಪರಿಣಾಮಕಾರಿ ಆಗಿದ್ದವು. ಆದರೆ ಆರಂಭದ ಆ ವರ್ಷಗಳಲ್ಲಿ ಪ್ರಚಾರಕರೇ ಮಾತಾಡಿ ಸುವಾರ್ತೆ ಸಾರುವುದು ಹೇಗೆಂಬ ವಿಷಯದಲ್ಲಿ ತರಬೇತಿ ಪಡೆಯುವ ಅಗತ್ಯವಿತ್ತು. ಏಕೆಂದರೆ ಫೋನೋಗ್ರಾಫ್‍ನಿಂದ ಕೇಳಿಬರುತ್ತಿದ್ದ ವಿಷಯವನ್ನು ಕೆಲವೊಮ್ಮೆ ಮನೆಯವರು ಒಪ್ಪುತ್ತಿರಲಿಲ್ಲ. ಕೆಲವರು ಕೇಳಿಸಿಕೊಂಡ ವಿಷಯದ ಬಗ್ಗೆ ಆಸಕ್ತಿ ತೋರಿಸಿ ಇನ್ನೂ ಕಲಿಯಬೇಕೆಂಬ ಆಸೆ ವ್ಯಕ್ತಪಡಿಸುತ್ತಿದ್ದರು. ಮನೆಯವರು ಆಕ್ಷೇಪಣೆ ಮಾಡಿದಾಗ ಅದಕ್ಕೆ ಜಾಣ್ಮೆಯಿಂದ ಉತ್ತರ ಕೊಡುವುದು ಹೇಗೆ ಮತ್ತು ಉತ್ತಮ ಬೋಧಕರಾಗುವುದು ಹೇಗೆಂದು ಪ್ರಚಾರಕರು ಕಲಿಯಬೇಕಿತ್ತು. ಸೇವೆಯಲ್ಲಿ ಪ್ರಚಾರಕರು ಹೇಗೆ ಮಾತಾಡಬೇಕೆಂದು ಕಲಿಯುವುದು ಮುಖ್ಯ ಎನ್ನುವುದನ್ನು ಸಹೋದರ ನಾರ್‌ ಅರಿತರು. ಖಂಡಿತ ಇದರಲ್ಲಿ ಪವಿತ್ರಾತ್ಮದ ಕೈಯಿತ್ತು. ಹಾಗಾಗಿ 1943ರಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ಸಭೆಗಳಲ್ಲಿ ಆರಂಭಿಸಲಾಯಿತು. ಪರಿಣಾಮಕಾರಿ ಬೋಧಕರಾಗಲು ಈ ಶಾಲೆ ಎಲ್ಲರಿಗೂ ಸಹಾಯ ಮಾಡಿತು.

15. (ಎ) ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣ ಕೊಟ್ಟಾಗ ಕೆಲವರಿಗೆ ಯಾವ ಅನುಭವವಾಯಿತು? (ಬಿ) ಕೀರ್ತನೆ 32:8 ರಲ್ಲಿ ಯೆಹೋವನು ಕೊಟ್ಟಿರುವ ಮಾತು ನಿಮ್ಮ ಜೀವನದಲ್ಲಿ ಹೇಗೆ ನಿಜವಾಗಿದೆ?

15 ತುಂಬ ಸಹೋದರರಿಗೆ ಸಭಿಕರ ಮುಂದೆ ನಿಂತು ಮಾತಾಡುವ ಅಭ್ಯಾಸ ಇರಲಿಲ್ಲ. ಸಹೋದರ  ಹುಲ್ಯೊ ಎಂಬವರು 1944ರಲ್ಲಿ ಮೊದಲನೇ ಸಲ ಭಾಷಣ ಕೊಟ್ಟಾಗ ಏನಾಯಿತೆಂದು ಅವರಿಗೆ ಇನ್ನೂ ನೆನಪಿದೆ. ಬೈಬಲಲ್ಲಿ ತಿಳಿಸಲಾಗಿರುವ ದೋಯೇಗ ಎಂಬವನ ಬಗ್ಗೆ ಅವರು ಭಾಷಣ ಕೊಡಬೇಕಿತ್ತು. ಅವರು ಹೀಗಂದರು: “ಹೆದರಿಕೆಯಿಂದ ನನ್ನ ಮಂಡಿ ಒಂದಕ್ಕೊಂದು ಹೊಡೆದುಕೊಳ್ಳುತ್ತಿತ್ತು. ಕೈ, ಬಾಯಿ ಎಲ್ಲಾ ನಡುಗುತ್ತಾ ಇತ್ತು.” ಅವರು ಮುಂದುವರಿಸಿದ್ದು: “ಇದೇ ಮೊದಲ ಬಾರಿ ನಾನು ವೇದಿಕೆ ಮೇಲೆ ನಿಂತು ಮಾತಾಡಿದ್ದು. ಆದರೆ ನಾನು ಬಿಟ್ಟುಕೊಡಲಿಲ್ಲ.” ಭಾಷಣ ಕೊಡುವುದು ಮಕ್ಕಳಿಗೆ ಸುಲಭವಲ್ಲದಿದ್ದರೂ ಈ ಶಾಲೆಯಲ್ಲಿ ಅವರದನ್ನು ಮಾಡುತ್ತಿದ್ದರು. ಒಬ್ಬ ಚಿಕ್ಕ ಹುಡುಗ ಭಾಷಣ ಕೊಟ್ಟಾಗ ಏನಾಯಿತೆಂದು ಸಹೋದರ ಮನೇರಾ ನೆನಪಿಸಿಕೊಳ್ಳುತ್ತಾರೆ: “ಅವನೆಷ್ಟು ಹೆದರಿ ಹೋಗಿದ್ದನೆಂದರೆ ಭಾಷಣ ಕೊಡಲು ಶುರು ಮಾಡಿದ್ದೇ ತಡ, ಬಿಕ್ಕಿಬಿಕ್ಕಿ ಅಳಲು ಶುರು ಮಾಡಿದ. ಆದರೆ ಭಾಷಣ ಕೊಡಲೇಬೇಕೆಂದು ಅವನು ಗಟ್ಟಿಮನಸ್ಸು ಮಾಡಿದ್ದರಿಂದ ಅಳುತ್ತಾ ಅಳುತ್ತಾ ಇಡೀ ಭಾಷಣ ಕೊಟ್ಟ.” ನೀವೂ ತುಂಬ ನಾಚಿಕೆ ಸ್ವಭಾವದವರು ಅಥವಾ ನಮ್ಮಿಂದ ಇವೆಲ್ಲ ಆಗಲ್ಲ ಎಂಬ ಭಾವನೆಯುಳ್ಳವರು ಆಗಿರಬಹುದು. ಆದ್ದರಿಂದ ಬಹುಶಃ ನೀವು ಕೂಟಗಳಲ್ಲಿ ಉತ್ತರ ಕೊಡುವುದಿಲ್ಲ ಅಥವಾ ಭಾಗವಹಿಸುವುದಿಲ್ಲ. ಹಾಗಿದ್ದರೆ ನಿಮ್ಮ ಭಯವನ್ನು ಮೆಟ್ಟಿನಿಲ್ಲಲು ಸಹಾಯಮಾಡುವಂತೆ ಯೆಹೋವನ ಹತ್ತಿರ ಬೇಡಿಕೊಳ್ಳಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಆರಂಭದ ವಿದ್ಯಾರ್ಥಿಗಳಿಗೆ ಯೆಹೋವನು ಸಹಾಯ ಮಾಡಿದಂತೆ ನಿಮಗೂ ಮಾಡುವನು.—ಕೀರ್ತನೆ 32:8 ಓದಿ.

16. (ಎ) ಹಿಂದೆಲ್ಲ ಗಿಲ್ಯಡ್ ಶಾಲೆಯ ಗುರಿ ಏನಾಗಿತ್ತು? (ಬಿ) 2011ರಿಂದ ಗಿಲ್ಯಡ್ ಶಾಲೆಯ ಗುರಿ ಏನಾಗಿದೆ?

16 ದೇವರ ಸಂಘಟನೆ ಗಿಲ್ಯಡ್ ಶಾಲೆಯ ಮೂಲಕವೂ ತರಬೇತಿ ಕೊಟ್ಟಿದೆ. ಈ ಶಾಲೆಗಿರುವ ಒಂದು ಗುರಿ ಯಾವುದೆಂದರೆ ಸುವಾರ್ತೆ ಸಾರಲು ವಿದ್ಯಾರ್ಥಿಗಳಿಗಿರುವ ಆಸೆಯನ್ನು ಇನ್ನಷ್ಟು ಬಲಗೊಳಿಸುವುದೇ. 1943ರಲ್ಲಿ ಈ ಶಾಲೆ ಆರಂಭವಾಯಿತು. ಆವಾಗಿನಿಂದ ಇಲ್ಲಿವರೆಗೆ 8,500 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಅವರನ್ನು 170 ದೇಶಗಳಿಗೆ ಕಳುಹಿಸಲಾಗಿದೆ. 2011ರಿಂದ ವಿಶೇಷ ಪಯನೀಯರರು, ಸಂಚರಣ ಮೇಲ್ವಿಚಾರಕರು, ಬೆತೆಲಿಗರು ಅಥವಾ ಇನ್ನೂ ಈ ಶಾಲೆಗೆ ಹೋಗಿರದ ಮಿಷನರಿಗಳನ್ನು ಸಹ ಈ ಶಾಲೆಗೆ ಆಮಂತ್ರಿಸಲಾಗಿದೆ.

17. ಗಿಲ್ಯಡ್ ಶಾಲೆ ಎಷ್ಟು ಪರಿಣಾಮಕಾರಿ ಎಂದು ಹೇಳಿ.

17 ಗಿಲ್ಯಡ್ ಶಾಲೆ ಪರಿಣಾಮಕಾರಿ ಆಗಿದೆಯಾ? ಖಂಡಿತ ಹೌದು. ಜಪಾನ್‍ನಲ್ಲಿ ಏನಾಯಿತೆಂದು ನೋಡಿ. 1949ರ ಆಗಸ್ಟ್‌ ತಿಂಗಳಲ್ಲಿ 10ಕ್ಕಿಂತ ಕಡಿಮೆ ಪ್ರಚಾರಕರು ಆ ದೇಶದಲ್ಲಿದ್ದರು. ಆದರೆ ಆ ವರ್ಷದ ಕೊನೆಯಷ್ಟಕ್ಕೆ 13 ಮಿಷನರಿಗಳನ್ನು ಅಲ್ಲಿನ ಪ್ರಚಾರಕರ ಜೊತೆ ಕೆಲಸ ಮಾಡಲು ನೇಮಿಸಲಾಯಿತು. ಇವತ್ತು ಜಪಾನ್‍ನಲ್ಲಿ 2,16,000 ಪ್ರಚಾರಕರಿದ್ದಾರೆ. ಈ ಸಂಖ್ಯೆಯಲ್ಲಿ ಸುಮಾರು ಅರ್ಧಕ್ಕರ್ಧ ಮಂದಿ ಪಯನೀಯರರು!

18. ನಮಗೆ ಇನ್ಯಾವ ಶಾಲೆಗಳಿವೆ?

18 ಈ ಮುಂದಿನ ಶಾಲೆಗಳು ಸಹ ನಮಗಿವೆ: ರಾಜ್ಯ ಶುಶ್ರೂಷಾ ಶಾಲೆ, ಪಯನೀಯರ್‌ ಸೇವಾ ಶಾಲೆ, ರಾಜ್ಯ ಪ್ರಚಾರಕರ ಶಾಲೆ, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಗಾಗಿ ಶಾಲೆ, ಬ್ರಾಂಚ್‌ ಕಮಿಟಿ ಸದಸ್ಯರು ಮತ್ತು ಅವರ ಪತ್ನಿಯರಿಗಾಗಿ ಶಾಲೆ. ಈ ಎಲ್ಲಾ ಶಾಲೆಗಳು ಸಹೋದರ ಸಹೋದರಿಯರಿಗೆ ಒಳ್ಳೇ ತರಬೇತಿ ಕೊಟ್ಟು ಅವರ ನಂಬಿಕೆಯನ್ನು ಬಲಗೊಳಿಸಿವೆ. ಯೇಸು ಅನೇಕ ಜನರಿಗೆ ತರಬೇತಿ ಕೊಡುವುದನ್ನು ಮುಂದುವರಿಸಿದ್ದಾನೆ ಎನ್ನುವುದಕ್ಕೆ ಇಷ್ಟು ಪುರಾವೆ ಸಾಕಲ್ಲವಾ!

19. (ಎ) ಸಾರುವ ಕೆಲಸದ ಬಗ್ಗೆ ಸಹೋದರ ರಸಲ್‌ ಏನಂದರು? (ಬಿ) ಆ ಮಾತು ಹೇಗೆ ಇಂದು ನಿಜವಾಗಿದೆ?

19 ದೇವರ ರಾಜ್ಯ 100 ವರ್ಷಕ್ಕಿಂತ ಹೆಚ್ಚು ಸಮಯದಿಂದ ಆಳುತ್ತಿದೆ. ಈ ಎಲ್ಲಾ ಸಮಯದಲ್ಲಿ ಯೇಸು ಕ್ರಿಸ್ತನು ನಮ್ಮ ರಾಜನಾಗಿದ್ದುಕೊಂಡು ಸಾರುವ ಕೆಲಸವನ್ನು ನಿರ್ದೇಶಿಸುತ್ತಾ ಬಂದಿದ್ದಾನೆ. ಸಾರುವ ಕೆಲಸ ಇಡೀ ಭೂಮಿಯನ್ನು ವ್ಯಾಪಿಸಲಿದೆ ಎಂದು 1916ರಲ್ಲೇ ಸಹೋದರ ರಸಲ್‌ರಿಗೆ ಚೆನ್ನಾಗಿ ಗೊತ್ತಿತ್ತು. “ಈ ಕೆಲಸ ತುಂಬ ವೇಗವಾಗಿ ಹೆಚ್ಚಾಗುತ್ತಿದೆ. ‘ರಾಜ್ಯದ ಈ ಸುವಾರ್ತೆ’ಯನ್ನು ಇಡೀ ಲೋಕದಲ್ಲಿ ಸಾರಲಿಕ್ಕಿರುವುದರಿಂದ ಈ ಕೆಲಸ ಇನ್ನೂ ಹೆಚ್ಚಾಗಲಿದೆ” ಎಂದರವರು. (ಎ.ಎಚ್‌. ಮ್ಯಾಕ್‌ಮಿಲನ್‍ರ ಫೇತ್‌ ಆನ್‌ ದ ಮಾರ್ಚ್ ಎಂಬ ಪುಸ್ತಕ, ಪುಟ 69) ಆ ಕೆಲಸ ಈಗ ನಡೆಯುತ್ತಿದೆ. ಶಾಂತಿಯ ದೇವರಾಗಿರುವ ಯೆಹೋವನ ಚಿತ್ತವನ್ನು ಮಾಡಲು ನಮಗೇನು ಬೇಕೊ ಅದೆಲ್ಲವನ್ನು ಆತನು ಕೊಡುತ್ತಿದ್ದಾನೆ. ಇದಕ್ಕಾಗಿ ನಾವಾತನಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ!

^ ಪ್ಯಾರ. 2 ಆ ಗುಂಪಿನಲ್ಲಿ ಹೆಚ್ಚಿನವರು ಕ್ರೈಸ್ತರಾದರು ಎಂದು ಹೇಳಬಹುದು. ಏಕೆ? ಏಕೆಂದರೆ ಅಪೊಸ್ತಲ ಪೌಲನು ಅವರನ್ನು ‘500 ಮಂದಿ ಸಹೋದರರು’ ಎಂದು ಕರೆದನು. ಅವನು ಕೂಡಿಸಿ ಹೇಳಿದ್ದು: “ಅವರಲ್ಲಿ ಹೆಚ್ಚಿನವರು ಇಂದಿನ ವರೆಗೂ ಇದ್ದಾರೆ, ಆದರೆ ಕೆಲವರು ಮರಣದಲ್ಲಿ ನಿದ್ರೆಹೋಗಿದ್ದಾರೆ.” ಹಾಗಾಗಿ ಯೇಸು ಸಾರುವುದರ ಬಗ್ಗೆ ಕೊಟ್ಟ ಆಜ್ಞೆಯನ್ನು ಕಿವಿಯಾರೆ ಕೇಳಿದ ಅನೇಕರ ಪರಿಚಯ ಪೌಲನಿಗೆ ಮತ್ತು ಇತರ ಕ್ರೈಸ್ತರಿಗೆ ಇತ್ತೆಂದು ಹೇಳಬಹುದು.