ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಸೆಪ್ಟೆಂಬರ್ 2015

ಯೆಹೋವನು ಯಾವೆಲ್ಲ ವಿಧಗಳಲ್ಲಿ ನಮ್ಮನ್ನು ಪ್ರೀತಿಸುತ್ತಾನೆ?

ಯೆಹೋವನು ಯಾವೆಲ್ಲ ವಿಧಗಳಲ್ಲಿ ನಮ್ಮನ್ನು ಪ್ರೀತಿಸುತ್ತಾನೆ?

“ತಂದೆಯು ನಮಗೆ ಎಂಥ ಪ್ರೀತಿಯನ್ನು ಕೊಟ್ಟಿದ್ದಾನೆ ಎಂಬುದನ್ನು ನೋಡಿರಿ.”—1 ಯೋಹಾ. 3:1.

ಗೀತೆಗಳು: 91, 13

1. ನಾವು ಯಾವುದರ ಬಗ್ಗೆ ಯೋಚಿಸುವಂತೆ ಅಪೊಸ್ತಲ ಯೋಹಾನನು ಉತ್ತೇಜಿಸುತ್ತಾನೆ? ಏಕೆ?

ಯೆಹೋವನ ಅತ್ಯುನ್ನತ ಪ್ರೀತಿಯ ಬಗ್ಗೆ ಆಳವಾಗಿ ಯೋಚಿಸುವಂತೆ ಅಪೊಸ್ತಲ ಯೋಹಾನನು ನಮ್ಮನ್ನು ಉತ್ತೇಜಿಸಿದ್ದಾನೆ. 1 ಯೋಹಾನ 3:1ರಲ್ಲಿ ಅವನು ಹೀಗೆ ಬರೆದದ್ದು: “ತಂದೆಯು ನಮಗೆ ಎಂಥ ಪ್ರೀತಿಯನ್ನು ಕೊಟ್ಟಿದ್ದಾನೆ ಎಂಬುದನ್ನು ನೋಡಿರಿ.” ಯೆಹೋವನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆ, ಹೇಗೆಲ್ಲ ಪ್ರೀತಿಸುತ್ತಾನೆ ಎನ್ನುವುದನ್ನು ನಾವು ಧ್ಯಾನಿಸುವಾಗ ಆತನಿಗೆ ಇನ್ನೂ ಹತ್ತಿರವಾಗುತ್ತೇವೆ, ಆತನ ಮೇಲಿನ ನಮ್ಮ ಪ್ರೀತಿ ಇನ್ನೂ ಹೆಚ್ಚಾಗುತ್ತದೆ.

2. ಯೆಹೋವನು ತಮ್ಮನ್ನು ಪ್ರೀತಿಸುತ್ತಾನೆಂದು ಕೆಲವರಿಗೆ ಅರ್ಥಮಾಡಿಕೊಳ್ಳಲು ಯಾಕೆ ಕಷ್ಟವಾಗುತ್ತದೆ?

2 ದುಃಖದ ಸಂಗತಿಯೇನೆಂದರೆ, ದೇವರು ಮನುಷ್ಯರನ್ನು ಪ್ರೀತಿಸುವುದು ಅಸಾಧ್ಯ ಎನ್ನುವುದು ಕೆಲವರ ಅನಿಸಿಕೆ. ಜನರ ಬಗ್ಗೆ ದೇವರಿಗೆ ಚಿಂತೆಯಿಲ್ಲ ಎಂಬ ಅಭಿಪ್ರಾಯ ಅವರದ್ದು. ದೇವರು ಬರೀ ನಿಯಮಗಳನ್ನು ಮಾಡುತ್ತಾನೆ ಮತ್ತು ಆತನ ಮಾತನ್ನು ಕೇಳದವರನ್ನು ಶಿಕ್ಷಿಸುತ್ತಾನೆಂದು ಅವರು ನಂಬುತ್ತಿರಬಹುದು. ಸುಳ್ಳು ಬೋಧನೆಗಳು ಅವರಲ್ಲಿ ದೇವರು ಕ್ರೂರಿ, ಆತನನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಎಂಬ ಯೋಚನೆಯನ್ನು ತುಂಬಿಸಿದೆ. ಇನ್ನೂ ಕೆಲವರು, ಜನರು ಏನೇ ಮಾಡಿದರೂ ದೇವರು ಅವರನ್ನು ಪ್ರೀತಿಸುತ್ತಾನೆಂದು ನೆನಸುತ್ತಾರೆ. ಆದರೆ ನೀವು ಬೈಬಲನ್ನು ಅಧ್ಯಯನ ಮಾಡಿದಾಗ ಯೆಹೋವನ ಕುರಿತ ಸತ್ಯವನ್ನು ತಿಳಿದುಕೊಂಡಿದ್ದೀರಿ. ಪ್ರೀತಿಯು ಆತನ ಅತೀ ಶ್ರೇಷ್ಠ ಗುಣವಾಗಿದೆ, ನಿಮಗಾಗಿ ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟಿದ್ದಾನೆಂದು ತಿಳಿದುಕೊಂಡಿದ್ದೀರಿ. (ಯೋಹಾ. 3:16; 1 ಯೋಹಾ. 4:8) ಹಾಗಿದ್ದರೂ ಯೆಹೋವನು ನಿಮ್ಮನ್ನು ಎಷ್ಟೊಂದು ಪ್ರೀತಿಸುತ್ತಾನೆಂದು ಅರ್ಥಮಾಡಿಕೊಳ್ಳಲು  ಕಷ್ಟವಾಗಬಹುದು ಏಕೆಂದರೆ ನಿಮ್ಮ ಜೀವನದಲ್ಲಿ ಕೆಲವು ಕೆಟ್ಟ ಅನುಭವಗಳಾಗಿರಬಹುದು.

3. ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆಂದು ತಿಳಿಯಲು ನಮಗೆ ಯಾವುದು ಸಹಾಯಮಾಡುತ್ತದೆ?

3 ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆಂದು ನಮಗೆ ಗೊತ್ತಾಗಬೇಕಾದರೆ ನಾವು ಮೊದಲು ಈ ವಿಷಯ ಅರ್ಥಮಾಡಿಕೊಳ್ಳಬೇಕು: ನಮ್ಮನ್ನು ಸೃಷ್ಟಿಸಿದವನು, ನಮಗೆ ಜೀವಕೊಟ್ಟವನು ಯೆಹೋವನೇ. (ಕೀರ್ತನೆ 100:3-5 ಓದಿ.) ಅದಕ್ಕೇ ಬೈಬಲ್‌ ಮೊದಲ ಮಾನವನನ್ನು “ದೇವರ ಮಗನು” ಎಂದು ಕರೆಯುತ್ತದೆ. (ಲೂಕ 3:38) ಯೇಸು ಯೆಹೋವನನ್ನು “ಸ್ವರ್ಗದಲ್ಲಿರುವ ನಮ್ಮ ತಂದೆಯೇ” ಎಂದು ಕರೆಯಲು ಕಲಿಸಿದ್ದಾನೆ. (ಮತ್ತಾ. 6:9) ಹಾಗಾಗಿ ಯೆಹೋವನು ನಮ್ಮ ತಂದೆಯಾಗಿದ್ದಾನೆ. ಒಬ್ಬ ತಂದೆ ಮಕ್ಕಳನ್ನು ಪ್ರೀತಿಸುವ ಹಾಗೆ ಆತನು ನಮ್ಮನ್ನು ಪ್ರೀತಿಸುತ್ತಾನೆ.

4. (ಎ) ಯೆಹೋವನು ಯಾವ ರೀತಿಯ ತಂದೆಯಾಗಿದ್ದಾನೆ? (ಬಿ) ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

4 ‘ತಂದೆ’ ಎಂದ ಕೂಡಲೇ ಕೆಲವರ ಮನಸ್ಸಿನಲ್ಲಿ ಪ್ರೀತಿಯುಳ್ಳ ವ್ಯಕ್ತಿ ಎನ್ನುವ ಚಿತ್ರಣ ಬರುವುದಿಲ್ಲ. ಬಾಲ್ಯದಲ್ಲಿ ಅವರ ತಂದೆ ಅವರೊಟ್ಟಿಗೆ ಕ್ರೂರವಾಗಿ ನಡೆದುಕೊಂಡ ಕಹಿ ನೆನಪುಗಳಿಂದಾಗಿ ಅವರಿಗೆ ಹಾಗನಿಸುತ್ತದೆ. ಆದರೆ ಯೆಹೋವನು ತನ್ನ ಮಕ್ಕಳೊಂದಿಗೆ ಯಾವತ್ತೂ ಕ್ರೂರವಾಗಿ ನಡಕೊಳ್ಳುವುದಿಲ್ಲ. ಆತನಷ್ಟು ಒಳ್ಳೇ ತಂದೆ ನಮಗಿರಲು ಸಾಧ್ಯವೇ ಇಲ್ಲ. (ಕೀರ್ತ. 27:10) ಆತನು ನಮ್ಮನ್ನು ತುಂಬ ಪ್ರೀತಿಸುತ್ತಾನೆ. ಅನೇಕ ವಿಧಗಳಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಯೆಹೋವನು ನಮ್ಮನ್ನು ಹೇಗೆ ಪ್ರೀತಿಸುತ್ತಾನೆಂದು ನಾವು ತಿಳಿದುಕೊಂಡರೆ ನಾವಾತನನ್ನು ಹೆಚ್ಚು ಪ್ರೀತಿಸುತ್ತೇವೆ. (ಯಾಕೋ. 4:8) ಯೆಹೋವನು ನಮಗೆ ಪ್ರೀತಿ ತೋರಿಸುವ ನಾಲ್ಕು ವಿಧಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಮುಂದಿನ ಲೇಖನದಲ್ಲಿ ನಾವು ಯೆಹೋವನನ್ನು ಪ್ರೀತಿಸುವ ನಾಲ್ಕು ವಿಧಗಳನ್ನು ತಿಳಿಯಲಿದ್ದೇವೆ.

ಯೆಹೋವನು ಪ್ರೀತಿ, ಧಾರಾಳತನ ತೋರಿಸುವವನು

5. ದೇವರು ಎಲ್ಲ ಜನರಿಗೆ ಏನೆಲ್ಲ ಕೊಡುತ್ತಿದ್ದಾನೆ?

5 ಅಪೊಸ್ತಲ ಪೌಲನು ಗ್ರೀಸ್‍ನ ಅಥೆನ್ಸ್‌ ಪಟ್ಟಣದಲ್ಲಿದ್ದಾಗ ಅಲ್ಲಿ ತುಂಬ ವಿಗ್ರಹಗಳಿರುವುದನ್ನು, ಅವೇ ತಮಗೆ ಜೀವಕೊಟ್ಟಿವೆ ಎಂದು ಜನರು ನಂಬುವುದನ್ನು ಗಮನಿಸಿದನು. ಆದ್ದರಿಂದ ಆತನು ಆ ಜನರಿಗೆ “ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ದೇವರ” ಬಗ್ಗೆ ಹೇಳಿದನು. ಅವನು ಮುಂದುವರಿಸುತ್ತಾ, ದೇವರೇ “ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತನಾಗಿದ್ದಾನೆ” ಮತ್ತು “ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ” ಎಂದು ಹೇಳಿದನು. (ಅ. ಕಾ. 17:24, 25, 28) ನಾವು ಜೀವಿಸಲು ಮತ್ತು ಜೀವನವನ್ನು ಆನಂದಿಸಲು ಏನೆಲ್ಲ ಬೇಕೊ ಅದೆಲ್ಲವನ್ನು ಯೆಹೋವನು ಕೊಟ್ಟಿದ್ದಾನೆ. ನಮ್ಮ ಮೇಲಿನ ಪ್ರೀತಿಯಿಂದಾಗಿ ಆತನು ನಮಗೆ ಕೊಟ್ಟಿರುವ ಕೆಲವು ವಿಷಯಗಳ ಬಗ್ಗೆ ಯೋಚಿಸಿ.

6. ಯೆಹೋವನು ನಮಗೆ ಯಾವ ರೀತಿಯ ವಾಸಸ್ಥಳವನ್ನು ಕೊಟ್ಟಿದ್ದಾನೆ? (ಲೇಖನದ ಆರಂಭದ ಚಿತ್ರ ನೋಡಿ.)

6 ಉದಾಹರಣೆಗೆ, ಯೆಹೋವನು ನಮಗೋಸ್ಕರ ಸುಂದರ ವಾಸಸ್ಥಳವನ್ನು ಕೊಟ್ಟಿದ್ದಾನೆ. (ಕೀರ್ತ. 115:15, 16) ದೇವರು ಅನೇಕ ಗ್ರಹಗಳನ್ನು ಸೃಷ್ಟಿಸಿದ್ದಾನೆ. ಆದರೆ ಭೂಮಿಯಂಥ ಗ್ರಹ ಬೇರೊಂದಿಲ್ಲ. ವಿಜ್ಞಾನಿಗಳು ಬಾಹ್ಯಾಕಾಶವನ್ನು ಶೋಧಿಸಿ, ಅನೇಕ ಗ್ರಹಗಳನ್ನು ಕಂಡುಹಿಡಿದಿದ್ದಾರೆ. ಆದರೆ ಮನುಷ್ಯರಿಗೆ ಬದುಕಲು ಬೇಕಾಗಿರುವುದೆಲ್ಲವೂ ಇರುವ ಇನ್ನೊಂದು ಗ್ರಹವನ್ನು ಅವರು ಈವರೆಗೂ ಕಂಡುಹಿಡಿದಿಲ್ಲ. ನಾವು ಜೀವಂತವಾಗಿರಲು ಬೇಕಾದದ್ದೆಲ್ಲವನ್ನೂ ಯೆಹೋವನು ಭೂಮಿಯಲ್ಲಿ ಇಟ್ಟಿದ್ದಾನೆ. ಅಷ್ಟೇ ಅಲ್ಲ ನಾವು ಜೀವನವನ್ನು ಆನಂದಿಸುವಂತೆ ಭೂಮಿಯನ್ನು ಸುಂದರ, ಆರಾಮದಾಯಕ ಹಾಗೂ ಸುರಕ್ಷಿತ ಸ್ಥಳವನ್ನಾಗಿ ಸೃಷ್ಟಿಸಿದ್ದಾನೆ. (ಯೆಶಾ. 45:18) ನಮಗೋಸ್ಕರ ಯೆಹೋವನು ಕೊಟ್ಟಿರುವ ಈ ವಾಸಸ್ಥಳದ ಬಗ್ಗೆ ಯೋಚಿಸುವಾಗ ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆಯೆಂದು ಗೊತ್ತಾಗುತ್ತದೆ.—ಯೋಬ 38:4, 6; ಕೀರ್ತನೆ 8:3-5 ಓದಿ.

7. ಯೆಹೋವನು ನಮ್ಮನ್ನು ಸೃಷ್ಟಿಸಿದ ವಿಧವು ಆತನು ನಮ್ಮನ್ನು ನಿಜವಾಗಿ ಪ್ರೀತಿಸುತ್ತಾನೆಂದು ಹೇಗೆ ತೋರಿಸುತ್ತದೆ?

7 ಯೆಹೋವನು ನಮ್ಮನ್ನು ಸೃಷ್ಟಿಸಿದಾಗ ಆತನನ್ನು ಅನುಕರಿಸುವ ಸಾಮರ್ಥ್ಯವನ್ನು ಕೊಟ್ಟನು. ಈ ವಿಧದಲ್ಲೂ ನಮಗೆ ಆತನ ಪ್ರೀತಿ ತೋರಿಬರುತ್ತದೆ. (ಆದಿ. 1:27) ಈ ಸಾಮರ್ಥ್ಯ ಇರುವುದರಿಂದ ನಾವಾತನ ಪ್ರೀತಿಯನ್ನು ಗ್ರಹಿಸಲು ಮತ್ತು ಆತನಿಗೆ ನಮ್ಮ ಪ್ರೀತಿಯನ್ನು ತೋರಿಸಲು ಸಾಧ್ಯವಾಗುತ್ತದೆ. ಇದು ನಮಗೆ ನಿಜ ಸಂತೋಷ ಕೊಡುತ್ತದೆಂದು ಆತನಿಗೆ ತಿಳಿದಿದೆ. ಹೆತ್ತವರು ತಮ್ಮನ್ನು ಪ್ರೀತಿಸುತ್ತಾರೆಂದು ತಿಳಿಯುವಾಗ ಮಕ್ಕಳಿಗೆ ಹೇಗೆ ಖುಷಿಯಾಗುತ್ತದೊ ಹಾಗೆ. ನೆನಪಿಡಿ,  ನಮ್ಮ ತಂದೆಯಾದ ಯೆಹೋವನಿಗೆ ನಾವು ಹತ್ತಿರವಾಗಿದ್ದರೆ ಸಂತೋಷದಿಂದ ಇರುತ್ತೇವೆಂದು ಯೇಸು ಕಲಿಸಿದನು. (ಮತ್ತಾ. 5:3) ಯೆಹೋವನು ‘ನಮ್ಮ ಆನಂದಕ್ಕಾಗಿ ಎಲ್ಲವನ್ನೂ’ ಕೊಡುತ್ತಾನೆ. ಹೌದು, ಆತನು ತುಂಬ ಧಾರಾಳ ಮನಸ್ಸಿನವನು. ನಮ್ಮನ್ನು ತುಂಬ ಪ್ರೀತಿಸುತ್ತಾನೆ.—1 ತಿಮೊ. 6:17; ಕೀರ್ತ. 145:16.

ಯೆಹೋವನು ನಮಗೆ ಸತ್ಯವನ್ನು ಕಲಿಸುತ್ತಾನೆ

8. ಯೆಹೋವನು ನಮಗೆ ಕಲಿಸಬೇಕೆಂದು ಏಕೆ ಬಯಸುತ್ತೇವೆ?

8 ಒಬ್ಬ ತಂದೆ ತನ್ನ ಮಕ್ಕಳನ್ನು ಪ್ರೀತಿಸುತ್ತಾನೆ. ಯಾರೂ ಅವರನ್ನು ದಾರಿತಪ್ಪಿಸಬಾರದು, ಯಾರಿಂದಲೂ ಅವರು ಮೋಸಹೋಗಬಾರದೆಂದು ಬಯಸುತ್ತಾನೆ. ಆದರೆ ಇಂದು ಹೆಚ್ಚಿನ ಹೆತ್ತವರು ಸರಿ ಯಾವುದು ತಪ್ಪು ಯಾವುದು ಎನ್ನುವುದರ ಕುರಿತ ಬೈಬಲಿನ ನಿರ್ದೇಶನವನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ಅವರು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಕೊಡಲು ಆಗುವುದಿಲ್ಲ. ಇದರಿಂದ ಕುಟುಂಬದಲ್ಲಿ ಅಸಂತೋಷ, ಗಲಿಬಿಲಿ ಉಂಟಾಗುತ್ತದೆ. (ಜ್ಞಾನೋ. 14:12) ಆದರೆ ಯೆಹೋವನು ‘ಸತ್ಯದ ದೇವರು’ ಆಗಿರುವುದರಿಂದ ಆತನು ತನ್ನ ಮಕ್ಕಳಿಗೆ ಕೊಡುವ ಮಾರ್ಗದರ್ಶನ ಅತ್ಯುತ್ತಮ ಆಗಿರುತ್ತದೆ. (ಕೀರ್ತ. 31:5, ಪವಿತ್ರ ಗ್ರಂಥ ಭಾಷಾಂತರ) ಆತನು ನಮಗೆ ತನ್ನ ಕುರಿತ ಸತ್ಯವನ್ನು ಕಲಿಸುತ್ತಾನೆ. ಆತನನ್ನು ಆರಾಧಿಸುವುದು ಹೇಗೆಂದು ಮತ್ತು ನಾವು ಉತ್ತಮ ಜೀವನ ನಡೆಸುವುದು ಹೇಗೆಂದೂ ಕಲಿಸುತ್ತಾನೆ. (ಕೀರ್ತನೆ 43:3 ಓದಿ.) ಯೆಹೋವನು ಕಲಿಸಿರುವ ಯಾವೆಲ್ಲ ವಿಷಯಗಳು ಆತನಿಗೆ ನಮ್ಮ ಮೇಲೆ ಪ್ರೀತಿಯಿದೆ ಎಂದು ತೋರಿಸುತ್ತವೆ?

ಯೆಹೋವನಂತೆ ಒಬ್ಬ ಕ್ರೈಸ್ತ ತಂದೆ ತನ್ನ ಮಕ್ಕಳಿಗೆ ಸತ್ಯದ ಬಗ್ಗೆ ಕಲಿಸುತ್ತಾನೆ ಮತ್ತು ಸ್ವರ್ಗದಲ್ಲಿರುವ ತಂದೆಯೊಟ್ಟಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತಾನೆ (ಪ್ಯಾರ 8-10 ನೋಡಿ)

9, 10. (ಎ) ಯೆಹೋವನು ನಮಗೆ ತನ್ನ ಬಗ್ಗೆ ಯಾಕೆ ತಿಳಿಸುತ್ತಾನೆ? (ಬಿ) ನಮಗಾಗಿ ಆತನ ಉದ್ದೇಶ ಏನಾಗಿದೆಯೆಂದು ಯೆಹೋವನು ಕಲಿಸಿದ್ದಾನೆ?

9 ಮೊದಲಾಗಿ ಯೆಹೋವನು ನಮಗೆ ತನ್ನ ಬಗ್ಗೆ ತಿಳಿಸಿದ್ದಾನೆ. ಆತನ ಬಗ್ಗೆ ನಾವು ತಿಳಿದುಕೊಳ್ಳಬೇಕೆಂಬ ಆಸೆ ಆತನಿಗಿದೆ. (ಯಾಕೋ. 4:8) ಆದ್ದರಿಂದಲೇ ಆತನ ಹೆಸರನ್ನು ನಮಗೆ ತಿಳಿಸಿದ್ದಾನೆ. ಬೈಬಲಿನಲ್ಲಿ ಬೇರೆಲ್ಲ ಹೆಸರುಗಳಿಗಿಂತ ಆತನ ಹೆಸರೇ ಹೆಚ್ಚು ಬಾರಿ ಇದೆ. ಆತನು ಎಂಥ ವ್ಯಕ್ತಿ ಎಂಬುದನ್ನು ಸಹ ಯೆಹೋವನು ತಿಳಿಸಿದ್ದಾನೆ. ಆತನು ಸೃಷ್ಟಿಸಿರುವ ವಿಷಯಗಳನ್ನು ನೋಡುವಾಗ ಆತನಿಗಿರುವ ಶಕ್ತಿ ಮತ್ತು ವಿವೇಕ ನಮಗೆ ತಿಳಿದುಬರುತ್ತದೆ. (ರೋಮ. 1:20) ಅಲ್ಲದೆ, ಬೈಬಲನ್ನು ಓದುವಾಗ ಯೆಹೋವನು ನ್ಯಾಯ ಮತ್ತು ಪ್ರೀತಿಯುಳ್ಳವನೆಂದು ಗೊತ್ತಾಗುತ್ತದೆ. ಯೆಹೋವನ ಅತ್ಯುತ್ತಮ ಗುಣಗಳ ಬಗ್ಗೆ ತಿಳಿಯುತ್ತಾ ಹೋದಂತೆ ನಾವು ಆತನಿಗೆ ಇನ್ನಷ್ಟು ಹತ್ತಿರವಾಗುತ್ತೇವೆ.

10 ಯೆಹೋವನು ತನ್ನ ಉದ್ದೇಶ ಏನೆಂದು ಸಹ ನಮಗೆ ತಿಳಿಸಿದ್ದಾನೆ. ನಾವು ಆತನ ಕುಟುಂಬದ ಭಾಗವಾಗಿದ್ದೇವೆಂದು ತಿಳಿಸಿದ್ದಾನೆ. ಆತನ ಕುಟುಂಬದಲ್ಲಿರುವ ಎಲ್ಲರೊಂದಿಗೆ ನಾವು ಐಕ್ಯ, ಸಮಾಧಾನದಿಂದ ಕೆಲಸಮಾಡಬೇಕೆಂದು ಆತನು ಬಯಸುತ್ತಾನೆ. ಅದಕ್ಕಾಗಿ ನಾವು ಎಂಥ ವ್ಯಕ್ತಿಗಳಾಗಿರಬೇಕೆಂದು ವಿವರಿಸಿದ್ದಾನೆ. ದೇವರು ನಮ್ಮನ್ನು ಸೃಷ್ಟಿಸಿದಾಗ ಯಾವುದು ಒಳ್ಳೇದು ಯಾವುದು ಕೆಟ್ಟದ್ದೆಂದು ನಾವೇ ನಿರ್ಣಯಿಸುವ ಹಕ್ಕನ್ನು ಕೊಡಲಿಲ್ಲವೆಂದು ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತದೆ. (ಯೆರೆ. 10:23) ನಮಗೆ ಯಾವುದು ಅತ್ಯುತ್ತಮವಾದದ್ದೆಂದು ಯೆಹೋವನಿಗೆ ಚೆನ್ನಾಗಿ ಗೊತ್ತು. ಆತನ ಅಧಿಕಾರವನ್ನು ಒಪ್ಪಿಕೊಂಡು ಆತನಿಗೆ ವಿಧೇಯರಾದಾಗ ಮಾತ್ರ ನೆಮ್ಮದಿ, ತೃಪ್ತಿಯಿರುವ ಜೀವನ ನಮ್ಮದಾಗುತ್ತದೆ. ಈ ಪ್ರಾಮುಖ್ಯ ಸತ್ಯವನ್ನು ಯೆಹೋವನು ನಮಗೆ ಕಲಿಸಿರುವುದು ಆತನಿಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ.

11. ಭವಿಷ್ಯದ ಕುರಿತು ನಮ್ಮ ಪ್ರೀತಿಯ ತಂದೆ ಏನು ಹೇಳಿದ್ದಾನೆ?

11 ಒಬ್ಬ ಪ್ರೀತಿಯುಳ್ಳ ತಂದೆ ತನ್ನ ಮಕ್ಕಳ ಭವಿಷ್ಯದ ಕುರಿತು ತುಂಬ ಯೋಚಿಸುತ್ತಾನೆ. ಅವರ ಜೀವನ ತೃಪ್ತಿಕರ ಆಗಿರಬೇಕೆಂದು ಅವನು ಬಯಸುತ್ತಾನೆ. ದುಃಖದ ಸಂಗತಿಯೇನೆಂದರೆ, ಹೆಚ್ಚಿನವರು ಭವಿಷ್ಯದ ಕುರಿತು ಅತಿಯಾಗಿ ಚಿಂತಿಸುತ್ತಾರೆ. ಅಥವಾ ಶಾಶ್ವತವಾಗಿ ಉಳಿಯದಂಥ ವಸ್ತುಗಳನ್ನು ಗಳಿಸುವುದರಲ್ಲೇ ಅನೇಕರು ಜೀವನ ಕಳೆಯುತ್ತಾರೆ. (ಕೀರ್ತ. 90:10) ಆದರೆ ನಮ್ಮ ತಂದೆಯಾದ ಯೆಹೋವನು ನಾವು ಇಂದು ತೃಪ್ತಿಕರ ಜೀವನ ಹೇಗೆ ನಡೆಸಬೇಕೆಂದು ಕಲಿಸಿದ್ದಾನೆ ಮಾತ್ರವಲ್ಲ, ಅದ್ಭುತಕರ ಭವಿಷ್ಯದ ಬಗ್ಗೆಯೂ ನಿರೀಕ್ಷೆ ಕೊಟ್ಟಿದ್ದಾನೆ. ಇದಕ್ಕಾಗಿ ನಾವು ತುಂಬ ಕೃತಜ್ಞರು.

ಯೆಹೋವನು ತನ್ನ ಮಕ್ಕಳಿಗೆ ಮಾರ್ಗದರ್ಶನ, ಶಿಸ್ತು ಕೊಡುತ್ತಾನೆ

12. ಕಾಯಿನ ಮತ್ತು ಬಾರೂಕನಿಗೆ ಯೆಹೋವನು ಹೇಗೆ ಸಹಾಯಮಾಡಿದನು?

12 ಕಾಯಿನನು ಗಂಭೀರ ತಪ್ಪನ್ನು ಮಾಡುವ ಅಪಾಯದಲ್ಲಿದ್ದಾಗ ಯೆಹೋವನು ಅವನಿಗೆ “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ” ಎಂದು ಕೇಳಿದನು. (ಆದಿ. 4:6, 7) ಆದರೆ ಕಾಯಿನನು ಯೆಹೋವನ ಈ ಸಹಾಯವನ್ನು ತಳ್ಳಿಹಾಕಿದನು.  ಇದರಿಂದಾಗಿ ಆತನು ಕಷ್ಟ ಅನುಭವಿಸಬೇಕಾಯಿತು. (ಆದಿ. 4:11-13) ಕಾಲಾನಂತರ ಯೆಹೋವನು ಬಾರೂಕನನ್ನು ಗಮನಿಸಿದನು. ಅವನಿಗಿದ್ದ ತಪ್ಪಾದ ಮನೋಭಾವದಿಂದಾಗಿ ಅವನು ದಣಿದಿದ್ದನ್ನು, ಬೇಸರಗೊಂಡಿದ್ದನ್ನು ನೋಡಿದನು. ಆದ್ದರಿಂದ ಯೆಹೋವನು ಅವನಿಗೆ ಅವನ ಯೋಚನೆ ತಪ್ಪು, ಅದನ್ನು ಬದಲಾಯಿಸಬೇಕೆಂದು ಹೇಳಿದನು. ಈ ಸಲಹೆಯನ್ನು ಬಾರೂಕನು ಪಾಲಿಸಿ ಜೀವ ಉಳಿಸಿಕೊಂಡನು.—ಯೆರೆ. 45:2-5.

13. ಯೆಹೋವನ ನಂಬಿಗಸ್ತ ಸೇವಕರು ಕಷ್ಟಗಳನ್ನು ಎದುರಿಸಿದಾಗ ಏನು ಕಲಿತರು?

13 ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಮಾರ್ಗದರ್ಶನ, ಶಿಸ್ತು ಕೊಡುತ್ತಾನೆ. ಅಗತ್ಯವಿರುವಾಗೆಲ್ಲ ಆತನು ನಮ್ಮನ್ನು ತಿದ್ದುತ್ತಾನೆ ಮಾತ್ರವಲ್ಲ ತರಬೇತಿಯನ್ನೂ ಕೊಡುತ್ತಾನೆ. (ಇಬ್ರಿ. 12:6) ಇನ್ನಷ್ಟು ಉತ್ತಮ ವ್ಯಕ್ತಿಗಳಾಗುವಂತೆ ಯೆಹೋವನು ತರಬೇತಿ ಕೊಟ್ಟ ನಂಬಿಗಸ್ತ ಸೇವಕರ ಬಗ್ಗೆ ಬೈಬಲಿನಲ್ಲಿದೆ. ಉದಾಹರಣೆಗೆ, ಯೋಸೇಫ, ಮೋಶೆ, ದಾವೀದ ಇವರೆಲ್ಲ ತುಂಬ ಕಷ್ಟಗಳನ್ನು ಅನುಭವಿಸಿದ ಸಮಯಗಳಿದ್ದವು. ಆಗೆಲ್ಲ ಯೆಹೋವನು ಅವರೊಂದಿಗಿದ್ದನು. ಆಗ ಅವರು ಕಲಿತಂಥ ವಿಷಯಗಳು ಯೆಹೋವನು ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ಕೊಟ್ಟಾಗ ತುಂಬ ನೆರವಾಯಿತು. ಯೆಹೋವನು ತನ್ನ ಜನರನ್ನು ಬೆಂಬಲಿಸುವ ಮತ್ತು ತರಬೇತಿಗೊಳಿಸುವ ವಿಧದ ಬಗ್ಗೆ ನಾವು ಬೈಬಲಿನಲ್ಲಿ ಓದುವಾಗ ಆತನಿಗೆ ನಮ್ಮ ಮೇಲೆ ನಿಜವಾದ ಪ್ರೀತಿ ಇದೆಯೆಂದು ತಿಳಿದುಬರುತ್ತದೆ.—ಜ್ಞಾನೋಕ್ತಿ 3:11, 12 ಓದಿ.

14. ನಾವು ತಪ್ಪನ್ನು ಮಾಡಿದಾಗ ಯೆಹೋವನು ನಮಗೆ ಹೇಗೆ ಪ್ರೀತಿ ತೋರಿಸುತ್ತಾನೆ?

14 ನಾವು ತಪ್ಪನ್ನು ಮಾಡಿದಾಗ ಯೆಹೋವನು ನಮಗೆ ಪ್ರೀತಿ ತೋರಿಸುತ್ತಾನೆ. ಹೇಗೆ? ಶಿಸ್ತನ್ನು ಕೊಡುವ ಮೂಲಕ. ಅದನ್ನು ನಾವು ಸ್ವೀಕರಿಸಿ ಪಶ್ಚಾತ್ತಾಪಪಟ್ಟರೆ ಯೆಹೋವನು “ಮಹಾಕೃಪೆಯಿಂದ” ಕ್ಷಮಿಸುತ್ತಾನೆ. (ಯೆಶಾ. 55:7) ಯೆಹೋವನ ಕ್ಷಮೆಯ ಬಗ್ಗೆ ದಾವೀದನು ಈ ಹೃದಯಸ್ಪರ್ಶಿ ವರ್ಣನೆ ಕೊಡುತ್ತಾನೆ: “ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಪ್ರೀತಿಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃ೦ಗರಿಸುವವನೂ  ಆಗಿದ್ದಾನೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.” (ಕೀರ್ತ. 103:3, 4, 12) ಯೆಹೋವನು ಬೇರೆಬೇರೆ ವಿಧಗಳಲ್ಲಿ ಶಿಸ್ತು, ಮಾರ್ಗದರ್ಶನ ಕೊಡುತ್ತಾನೆ. ಅದು ಸಿಕ್ಕಿದ ಕೂಡಲೇ ಬದಲಾವಣೆ ಮಾಡಿಕೊಳ್ಳುತ್ತೀರಾ? ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಶಿಸ್ತು ಕೊಡುತ್ತಾನೆ. ಈ ಮಾತನ್ನು ಯಾವಾಗಲೂ ನೆನಪಿಡೋಣ.—ಕೀರ್ತ. 30:5.

ಯೆಹೋವನು ನಮ್ಮನ್ನು ಕಾಪಾಡುತ್ತಾನೆ

15. ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆಂದು ತೋರಿಸುವ ಇನ್ನೊಂದು ವಿಧ ಯಾವುದು?

15 ಒಬ್ಬ ಪ್ರೀತಿಯುಳ್ಳ ತಂದೆಯು ತನ್ನ ಕುಟುಂಬವನ್ನು ಅಪಾಯದಿಂದ ರಕ್ಷಿಸುತ್ತಾನೆ. ನಮ್ಮ ತಂದೆಯಾದ ಯೆಹೋವನು ಸಹ ನಮ್ಮನ್ನು ಹಾಗೆಯೇ ಕಾಪಾಡುತ್ತಾನೆ. ಕೀರ್ತನೆಗಾರನು ಯೆಹೋವನ ಬಗ್ಗೆ ಹೀಗಂದನು: “ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.” (ಕೀರ್ತ. 97:10) ಇದರ ಕುರಿತು ಯೋಚಿಸಿ: ನಿಮ್ಮ ಕಣ್ಣಿಗೆ ಏನಾದರೂ ತಗಲುವಾಗ ಕೂಡಲೇ ಅದನ್ನು ಕಾಪಾಡುತ್ತೀರಿ ಏಕೆಂದರೆ ಕಣ್ಣು ನಿಮಗೆ ಅಮೂಲ್ಯ. ಅದೇ ರೀತಿ ಯೆಹೋವನು ತನ್ನ ಜನರನ್ನು ಕೂಡಲೇ ಕಾಪಾಡುತ್ತಾನೆ ಏಕೆಂದರೆ ಅವರು ಆತನಿಗೆ ಅಮೂಲ್ಯರು.—ಜೆಕರ್ಯ 2:8 ಓದಿ.

16, 17. (ಎ) ಯೆಹೋವನು ತನ್ನ ಜನರನ್ನು ಹಿಂದಿನ ಕಾಲದಲ್ಲಿ ಹೇಗೆ ಕಾಪಾಡಿದನು? (ಬಿ) ನಮ್ಮ ಕಾಲದಲ್ಲಿ ಹೇಗೆ ಕಾಪಾಡುತ್ತಿದ್ದಾನೆ?

16 ಹಿಂದಿನ ಕಾಲದಲ್ಲಿ ಮತ್ತು ಈಗಲೂ ಸಹ ಯೆಹೋವನು ತನ್ನ ಜನರನ್ನು ರಕ್ಷಿಸುವ ಒಂದು ವಿಧ ದೇವದೂತರ ಮೂಲಕವಾಗಿದೆ. (ಕೀರ್ತ. 91:11) ಒಬ್ಬನೇ ಒಬ್ಬ ದೇವದೂತ ಒಂದೇ ರಾತ್ರಿಯಲ್ಲಿ 1,85,000 ಅಶ್ಶೂರ್ಯದ ಸೈನಿಕರನ್ನು ಸಾಯಿಸಿ ದೇವಜನರನ್ನು ರಕ್ಷಿಸಿದನು. (2 ಅರ. 19:35) ಪ್ರಥಮ ಶತಮಾನದಲ್ಲಿ ಪೇತ್ರ, ಪೌಲ ಮತ್ತು ಇತರರನ್ನು ದೇವದೂತರು ಸೆರೆಮನೆಯಿಂದ ಬಿಡಿಸಿದರು. (ಅ. ಕಾ. 5:18-20; 12:6-11) ಇತ್ತೀಚೆಗೆ ಆಫ್ರಿಕದ ಒಂದು ದೇಶದಲ್ಲಿ ಭೀಕರ ಯುದ್ಧವೊಂದು ನಡೆಯಿತು. ಅಲ್ಲಿ ನಡೆದ ಹೊಡೆದಾಟ, ಕಳ್ಳತನ, ಅತ್ಯಾಚಾರ, ಕೊಲೆಗಳಿಂದಾಗಿ ಇಡೀ ದೇಶವು ಅಸ್ತವ್ಯಸ್ಥವಾಗಿತ್ತು. ನಮ್ಮ ಸಹೋದರರಲ್ಲಿ ಯಾರಿಗೂ ಜೀವಹಾನಿಯಾಗಲಿಲ್ಲ. ಹಾಗಿದ್ದರೂ ಅನೇಕರು ತಮ್ಮೆಲ್ಲ ಸೊತ್ತುಗಳನ್ನು ಕಳೆದುಕೊಂಡರು. ಆದರೆ ಅವರಿಗೆ ಯೆಹೋವನ ಪ್ರೀತಿ ಮತ್ತು ಆರೈಕೆಯ ಅನುಭವವಾಯಿತು. ಅವರು ಅಷ್ಟೊಂದು ಕಷ್ಟಗಳ ಮಧ್ಯೆಯೂ ಸಂತೋಷವಾಗಿದ್ದರು. ಮುಖ್ಯ ಕಾರ್ಯಾಲಯದಿಂದ ಪ್ರತಿನಿಧಿಯಾಗಿ ಬಂದ ಸಹೋದರರು ಅಲ್ಲಿನ ಸಹೋದರ ಸಹೋದರಿಯರ ಕ್ಷೇಮ ವಿಚಾರಿಸಿದಾಗ ಅವರು, “ನಾವು ಚೆನ್ನಾಗಿದ್ದೇವೆ. ಅದಕ್ಕಾಗಿ ಯೆಹೋವನಿಗೆ ಧನ್ಯವಾದ!” ಎಂದು ಉತ್ತರಕೊಟ್ಟರು.

17 ಯೆಹೋವನ ಸೇವಕರಲ್ಲಿ ಕೆಲವರು, ಉದಾಹರಣೆಗೆ ಸ್ತೆಫನ ಮತ್ತು ಇತರ ಶಿಷ್ಯರು ತಮ್ಮ ನಂಬಿಕೆಯ ಕಾರಣ ಸತ್ತರು. ಶತ್ರುಗಳು ತನ್ನ ಸೇವಕರನ್ನು ಕೊಲ್ಲುವುದನ್ನು ಯೆಹೋವನು ಎಲ್ಲ ಸಮಯ ತಡೆಯುವುದಿಲ್ಲ. ಆದರೆ ತನ್ನ ಜನರನ್ನು ಗುಂಪಿನೋಪಾದಿ ಕಾಪಾಡುತ್ತಾನೆ. ಹೇಗೆ? ಅವರನ್ನು ಸೈತಾನನು ಮೋಸಗೊಳಿಸಲು ಪ್ರಯತ್ನಿಸುವಾಗ ಎಚ್ಚರಿಕೆ ಕೊಡುವ ಮೂಲಕ. (ಎಫೆ. 6:10-12) ಈ ಎಚ್ಚರಿಕೆಗಳನ್ನು ಬೈಬಲಿನಲ್ಲಿ ಮತ್ತು ಯೆಹೋವನ ಸಂಘಟನೆಯಿಂದ ಬರುವ ಪ್ರಕಾಶನಗಳಲ್ಲಿ ಕೊಡುತ್ತಾನೆ. ಉದಾಹರಣೆಗೆ ಇಂಟರ್‌ನೆಟ್‌, ಹಣದಾಸೆ, ಅನೈತಿಕ ಮತ್ತು ಹಿಂಸಾತ್ಮಕ ಚಲನಚಿತ್ರಗಳು, ಪುಸ್ತಕಗಳು ಅಥವಾ ಆಟಗಳ ಅಪಾಯಗಳ ಬಗ್ಗೆ ನಮಗೆ ಕಲಿಸುತ್ತಾನೆ. ಇದರಿಂದ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ಕಾಪಾಡುತ್ತಾನೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಮಹಾ ಸುಯೋಗ

18. ಯೆಹೋವನಿಗೆ ನಿಮ್ಮ ಮೇಲಿರುವ ಪ್ರೀತಿಯ ಬಗ್ಗೆ ನಿಮಗೆ ಹೇಗನಿಸುತ್ತದೆ?

18 ಯೆಹೋವನ ಸೇವೆಯಲ್ಲಿ ತಾನು ಕಳೆದಂಥ ವರ್ಷಗಳ ಕುರಿತು ಮೋಶೆ ಯೋಚಿಸಿದಾಗ, ಯೆಹೋವನು ಆ ಎಲ್ಲ ವರ್ಷಗಳಲ್ಲಿ ತನಗೆ ಪ್ರೀತಿ ತೋರಿಸಿದ್ದಾನೆಂಬ ಪೂರ್ಣ ಖಾತ್ರಿ ಅವನಿಗಿತ್ತು. ಮೋಶೆ ಅಂದದ್ದು: “ಉದಯದಲ್ಲಿ ನಿನ್ನ ಕೃಪೆಯಿಂದ [“ಕುಂದದ ಪ್ರೀತಿಯಿಂದ,” ಪವಿತ್ರ ಗ್ರಂಥ ಭಾಷಾಂತರ] ನಮ್ಮನ್ನು ಸಂತೃಪ್ತಿಪಡಿಸು; ಆಗ ಜೀವಮಾನದಲ್ಲೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.” (ಕೀರ್ತ. 90:14) ಯೆಹೋವನಿಗೆ ನಮ್ಮ ಮೇಲಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಭವಿಸಲು ನಾವು ಧನ್ಯರು. ಆತನ ಪ್ರೀತಿಗೆ ಪಾತ್ರರಾಗುವುದು ಎಂಥ ಮಹಾ ಸುಯೋಗ! ಅಪೊಸ್ತಲ ಯೋಹಾನನು ಹೇಳಿದಂತೆ ನಾವೂ ಹೇಳಬಲ್ಲೆವು: “ತಂದೆಯು ನಮಗೆ ಎಂಥ ಪ್ರೀತಿಯನ್ನು ಕೊಟ್ಟಿದ್ದಾನೆ ಎಂಬುದನ್ನು ನೋಡಿರಿ.”—1 ಯೋಹಾ. 3:1.