ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಸೆಪ್ಟೆಂಬರ್ 2015

 ಜೀವನ ಕಥೆ

ಯೆಹೋವನ ಆಶೀರ್ವಾದದಿಂದ ನನ್ನ ಬದುಕು ಹಸನಾಯಿತು

ಯೆಹೋವನ ಆಶೀರ್ವಾದದಿಂದ ನನ್ನ ಬದುಕು ಹಸನಾಯಿತು

ಕೆನಡದ ಸಸ್ಕ್ಯಾಚುವಾನ್‍ನ ಚಿಕ್ಕ ಪಟ್ಟಣವಾದ ವಕಾವ್‍ನಲ್ಲಿ 1927ರಲ್ಲಿ ನಾನು ಹುಟ್ಟಿದೆ. ನಾವು ಒಟ್ಟು ಏಳು ಮಂದಿ ಮಕ್ಕಳು. ನಾಲ್ಕು ಗಂಡು, ಮೂರು ಹೆಣ್ಣು ಮಕ್ಕಳು. ಆದ್ದರಿಂದ ಜನರೊಟ್ಟಿಗೆ ಹೇಗೆ ಇರುವುದೆಂದು ಚಿಕ್ಕಂದಿನಿಂದಲೇ ಕಲಿತೆ.

1930ರ ದಶಕದಲ್ಲಿ ನಡೆದ ಜಾಗತಿಕ ಮಹಾ ಆರ್ಥಿಕ ಕುಸಿತದಿಂದ ನಮ್ಮ ಕುಟುಂಬಕ್ಕೂ ತೊಂದರೆಯಾಯಿತು. ನಾವೇನು ಶ್ರೀಮಂತರಾಗಿರಲಿಲ್ಲ ಆದರೆ ಹೊಟ್ಟೆಗಿಲ್ಲದ ಪರಿಸ್ಥಿತಿಯೇನು ಬರಲಿಲ್ಲ. ನಾವು ಕೋಳಿಗಳನ್ನು, ಒಂದು ಹಸುವನ್ನು ಸಾಕುತ್ತಿದ್ದೆವು. ಆದ್ದರಿಂದ ನಮಗೆ ಮೊಟ್ಟೆ, ಹಾಲು, ಕೆನೆ, ಗಿಣ್ಣು, ಬೆಣ್ಣೆಗೇನು ಕೊರತೆ ಇರಲಿಲ್ಲ. ಮನೆಯಲ್ಲಿದ್ದ ಎಲ್ಲರಿಗೂ ಪ್ರಾಣಿಗಳನ್ನು ನೋಡಿಕೊಳ್ಳುವುದು ಅಥವಾ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತಿತ್ತು.

ನನಗೆ ಆ ದಿನಗಳ ಬಗ್ಗೆ ಅನೇಕ ಸವಿ ನೆನಪುಗಳಿವೆ. ಉದಾಹರಣೆಗೆ ಚಳಿಗಾಲದಲ್ಲಿ ಹಾಲು, ಮೊಟ್ಟೆ ಇತ್ಯಾದಿಗಳನ್ನು ಮಾರಲು ಅಪ್ಪ ಪಟ್ಟಣಕ್ಕೆ ಹೋಗುತ್ತಿದ್ದರು. ವಾಪಸ್ಸು ಬರುವಾಗ ತಾಜಾ ಸೇಬುಗಳನ್ನು ಬುಟ್ಟಿಯಲ್ಲಿ ತುಂಬಿಸಿ ತರುತ್ತಿದ್ದರು. ಆ ಸೇಬುಗಳ ಪರಿಮಳ ಮನೆಯಲೆಲ್ಲಾ ಹರಡುತ್ತಿತ್ತು. ದಿನಾಲೂ ಒಬ್ಬೊಬ್ಬರಿಗೆ ರಸಭರಿತ ಸೇಬು ತಿನ್ನಲು ಸಿಗುತ್ತಿತ್ತು! ಇವೆಲ್ಲಾ ನನಗಿನ್ನು ನೆನಪಿದೆ.

ನಮ್ಮ ಕುಟುಂಬ ಸತ್ಯ ಕಲಿತದ್ದು

ನನಗೆ 6 ವರ್ಷವಿದ್ದಾಗ ಅಪ್ಪಅಮ್ಮನಿಗೆ ಸತ್ಯ ಸಿಕ್ಕಿತ್ತು. ಅವರ ಮೊದಲ ಮಗನಾದ ಜಾನಿ ಹುಟ್ಟಿ ಸ್ವಲ್ಪ ಸಮಯದಲ್ಲೇ ಸತ್ತು ಹೋದನು. ಅಪ್ಪಅಮ್ಮನ ಮನಸ್ಸು ನುಚ್ಚುನೂರಾಯಿತು. ಅವರು ಅಲ್ಲಿನ ಪಾದ್ರಿಯ ಹತ್ತಿರ ಹೋಗಿ “ಜಾನಿ ಈಗ ಎಲ್ಲಿದ್ದಾನೆ?” ಎಂದು ಕೇಳಿದರು. ಮಗುವಿಗೆ ದೀಕ್ಷಾಸ್ನಾನ ಆಗದೇ ಇದ್ದದರಿಂದ ಸ್ವರ್ಗಕ್ಕೆ ಹೋಗಿಲ್ಲ. ಹಣ ಕೊಟ್ಟರೆ ಅವನನ್ನು ಸ್ವರ್ಗಕ್ಕೆ ಕಳುಹಿಸಲು ಜಾನಿಗೋಸ್ಕರ ಪ್ರಾರ್ಥನೆ ಮಾಡುತ್ತೇನೆ ಎಂದು ಅಪ್ಪಅಮ್ಮನಿಗೆ ಹೇಳಿದನು. ನೀವಲ್ಲಿ ಇರುತ್ತಿದ್ದರೆ ನಿಮಗೆ ಹೇಗೆ ಅನಿಸುತ್ತಿತ್ತು? ಅಪ್ಪ ಅಮ್ಮನಿಗೆ ಎಷ್ಟು ಬೇಜಾರಾಯಿತೆಂದರೆ ಆ ಪಾದ್ರಿಯ ಹತ್ತಿರ ಮಾತಾಡುವುದನ್ನೇ ಬಿಟ್ಟುಬಿಟ್ಟರು. ಆದರೂ ಜಾನಿಗೆ ಏನಾಗಿದೆ, ಅವನು ಎಲ್ಲಿದ್ದಾನೆ ಎಂಬ ಪ್ರಶ್ನೆಗಳು ಅವರ ಮನಸ್ಸನ್ನು ಕೊರೆಯುತ್ತಾ ಇತ್ತು.

ಯೆಹೋವನ ಸಾಕ್ಷಿಗಳು ಪ್ರಕಾಶಿಸಿದ ಸತ್ತವರು ಎಲ್ಲಿದ್ದಾರೆ? (ಇಂಗ್ಲಿಷ್‌) ಎಂಬ ಕಿರುಪುಸ್ತಿಕೆ ಒಂದು ದಿನ ಅಮ್ಮನಿಗೆ ಸಿಕ್ಕಿತು. ಅವರು ಅದನ್ನು ತುಂಬ ಆಸಕ್ತಿಯಿಂದ ಓದಿ ಮುಗಿಸಿದರು. ಅಪ್ಪ ಮನೆಗೆ ಬಂದ ಕೂಡಲೇ ಅಮ್ಮ ಸಂತೋಷದಿಂದ “ಜಾನಿ ಎಲ್ಲಿದ್ದಾನೆ ಎಂದು ನನಗೆ ಗೊತ್ತು! ಅವನೀಗ ನಿದ್ದೆ ಮಾಡುತ್ತಿದ್ದಾನೆ, ಆದರೆ ಖಂಡಿತ ಒಂದು ದಿನ ಎದ್ದೇಳುತ್ತಾನೆ” ಎಂದರು. ಅಪ್ಪ ಅದೇ ಸಂಜೆ ಇಡೀ ಕಿರುಪುಸ್ತಿಕೆ ಓದಿ ಮುಗಿಸಿದರು. ಸತ್ತವರು ನಿದ್ದೆ ಮಾಡುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಅವರಿಗೆ ಪುನರುತ್ಥಾನವಾಗಲಿದೆ ಎಂದು ಬೈಬಲ್‍ನಲ್ಲಿ ಹೇಳಲಾಗಿರುವ ವಿಷಯವನ್ನು ಕಲಿತಾಗ ಅಪ್ಪಅಮ್ಮನಿಗೆ ತುಂಬ ಸಮಾಧಾನವಾಯಿತು.—ಪ್ರಸಂ. 9:5, 10; ಅ. ಕಾ. 24:15.

ಅವರಿಗೆ ತಿಳಿದ ಈ ವಿಷಯ ನಮ್ಮ ಜೀವನವನ್ನೇ ಬದಲಾಯಿಸಿ ನಮಗೆ ಸಮಾಧಾನ, ಖುಷಿ ತಂದಿತು. ಅವರು ಸಾಕ್ಷಿಗಳೊಟ್ಟಿಗೆ ಬೈಬಲನ್ನು ಕಲಿಯಲು ಮತ್ತು ವಕಾವ್‍ನಲ್ಲಿದ್ದ ಚಿಕ್ಕ ಸಭೆಯಲ್ಲಿ ಕೂಟಗಳಿಗೆ ಹಾಜರಾಗಲು ಶುರುಮಾಡಿದರು. ಆ ಸಭೆಯಲ್ಲಿದ್ದ ಅನೇಕರು ಯುಕ್ರೇನಿನವರು ಆಗಿದ್ದರು. ಅಪ್ಪಅಮ್ಮ ಬೇಗನೆ ಸಾರುವ ಕೆಲಸದಲ್ಲಿ ಭಾಗವಹಿಸಲು ಶುರುಮಾಡಿದರು.

ಇದಾದ ಸ್ವಲ್ಪ ಸಮಯದಲ್ಲೇ ನಾವು ಮನೆ ಬದಲಾಯಿಸಿ ಬ್ರಿಟಿಷ್‌ ಕೊಲಂಬಿಯಕ್ಕೆ ಹೋದೆವು. ಅಲ್ಲಿನ ಸಭೆಯು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿತು. ಭಾನುವಾರದ ಕೂಟಗಳಿಗೆ ಕಾವಲಿನಬುರುಜುವಿನ ಅಧ್ಯಯನಕ್ಕಾಗಿ ಕುಟುಂಬವಾಗಿ ತಯಾರಿಮಾಡುತ್ತಿದ್ದದ್ದು ನೆನಸುವಾಗೆಲ್ಲಾ ನನಗೆ ತುಂಬ ಖುಷಿಯಾಗುತ್ತದೆ. ನಾವೆಲ್ಲರೂ ಯೆಹೋವನ ಮೇಲೆ ಮತ್ತು ಬೈಬಲ್‌ ಸತ್ಯದ ಕಡೆಗೆ ಆಳವಾದ ಪ್ರೀತಿ ಬೆಳೆಸಿಕೊಳ್ಳಲು ಶುರು ಮಾಡಿದೆವು. ನಮ್ಮ ಬದುಕು ಹಸನಾಗಿದ್ದನ್ನು, ಯೆಹೋವನು ನಮ್ಮನ್ನು ಆಶೀರ್ವದಿಸುತ್ತಿದ್ದದ್ದನ್ನು ನಾನು ಕಣ್ಣಾರೆ ಕಂಡೆ.

ಮಕ್ಕಳಾಗಿದ್ದ ನಮಗೆ ನಮ್ಮ ನಂಬಿಕೆಗಳ ಬಗ್ಗೆ ಜನರೊಟ್ಟಿಗೆ ಮಾತಾಡುವುದು ಸುಲಭವಾಗಿರಲಿಲ್ಲ. ನಾನು ಮತ್ತು ನನ್ನ ತಂಗಿ ಈವಾ ಪ್ರತಿ ತಿಂಗಳು ಸೇವೆಗೆಂದು ಕೊಡಲಾದ ನಿರೂಪಣೆಯನ್ನು ತಯಾರಿಸಿ  ಅದನ್ನು ಸೇವಾ ಕೂಟದ ಪ್ರಾತ್ಯಕ್ಷಿಕೆಯಲ್ಲಿ ತೋರಿಸುತ್ತಿದ್ದೆವು. ನಮಗೆ ಇದು ನಿಜವಾಗಿಯೂ ಸಹಾಯ ಮಾಡಿತು. ನಾಚಿಕೆ ಸ್ವಭಾವದ ನಮಗೆ ಬೇರೆಯವರ ಜೊತೆ ಬೈಬಲ್‌ ಬಗ್ಗೆ ಮಾತಾಡುವಂತೆ ಕಲಿಯಲು ಇದೊಂದು ಅದ್ಭುತ ವಿಧಾನವಾಗಿತ್ತು. ಸಾರಲು ನಮಗೆ ಸಿಕ್ಕಿದ ಈ ತರಬೇತಿಗಾಗಿ ನಾನು ಆಭಾರಿ!

ನಮ್ಮ ಬಾಲ್ಯದ ಬಗ್ಗೆ ತುಂಬ ಇಷ್ಟವಾಗುತ್ತಿದ್ದ ಒಂದು ವಿಷಯವೇನೆಂದರೆ ನಮ್ಮೊಟ್ಟಿಗೆ ಪೂರ್ಣ ಸಮಯದ ಸೇವಕರು ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಉದಾಹರಣೆಗೆ ಸಂಚರಣ ಮೇಲ್ವಿಚಾರಕರಾದ ಜ್ಯಾಕ್‌ ನೇತನ್‍ರವರು ನಮ್ಮ ಸಭೆಯನ್ನು ಭೇಟಿಯಾದಾಗ ನಮ್ಮ ಮನೆಯಲ್ಲೇ ಇರುತ್ತಿದ್ದರು. * ಅವರು ಹೇಳುತ್ತಿದ್ದ ಅನುಭವದ ಕತೆಗಳು ನಮಗೆ ತುಂಬ ಸಂತೋಷ ತಂದವು. ಅವರು ಮನಃಪೂರ್ವಕವಾಗಿ ಕೊಡುತ್ತಿದ್ದ ಶ್ಲಾಘನೆ ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡಲು ನಮಗೆ ಪ್ರೇರೇಪಣೆ ಕೊಟ್ಟಿತು.

“ನಾನು ದೊಡ್ಡವಳಾದಾಗ ಸಹೋದರ ನೇತನ್‍ರ೦ತೆಯೇ ಆಗುತ್ತೇನೆ” ಎಂದು ಯೋಚಿಸುತ್ತಿದ್ದದ್ದು ನನಗಿನ್ನೂ ನೆನಪಿದೆ. ಅವರ ಮಾದರಿಯು ಪೂರ್ಣ ಸಮಯದ ಸೇವೆಯನ್ನು ಜೀವನ ವೃತ್ತಿಯಾಗಿ ಆರಿಸಲು ತಯಾರಿ ಮಾಡುತ್ತಿತ್ತೆಂದು ಆಗ ನನಗೆ ಗೊತ್ತಾಗಲಿಲ್ಲ. 15 ವರ್ಷವಾಗುವಷ್ಟರಲ್ಲಿ ನಾನು ಯೆಹೋವನ ಸೇವೆ ಮಾಡಲು ದೃಢತೀರ್ಮಾನ ಮಾಡಿದ್ದೆ. 1942ರಲ್ಲಿ ನಾನು ಮತ್ತು ಈವಾ ದೀಕ್ಷಾಸ್ನಾನ ಪಡೆದೆವು.

ನಂಬಿಕೆಯ ಪರೀಕ್ಷೆಗಳು

ಎರಡನೇ ಮಹಾಯುದ್ಧದ ಸಮಯದಲ್ಲಿ ಎಲ್ಲೆಲ್ಲೂ ದೇಶಭಕ್ತಿ ಜಾಸ್ತಿಯಾಗಿತ್ತು. ನನ್ನ ಶಾಲೆಯಲ್ಲಿ ಮಿಸ್‌ ಸ್ಕಾಟ್‌ ಎಂಬ ಶಿಕ್ಷಕಿ ಇದ್ದರು. ನನ್ನ ತಮ್ಮ, ತಂಗಿಯರು ಧ್ವಜವಂದನೆ ಮಾಡಲು ನಿರಾಕರಿಸುತ್ತಿದ್ದರೆಂಬ ಕಾರಣಕ್ಕೆ ಅವರನ್ನು ಶಾಲೆಯಿಂದ ಹೊರಹಾಕಿದರು. ನಂತರ ಮಿಸ್‌ ಸ್ಕಾಟ್‌ ನನ್ನ ಶಿಕ್ಷಕಿಯನ್ನು ಭೇಟಿ ಮಾಡಿ ನನ್ನನ್ನೂ ಶಾಲೆಯಿಂದ ಹೊರಹಾಕಲು ಒತ್ತಾಯಿಸಿದರು. ಆದರೆ ನನ್ನ ಶಿಕ್ಷಕಿ “ಈ ದೇಶದಲ್ಲಿ ಏನು ಹೇಳಬೇಕು ಏನು ನಂಬಬೇಕೆಂದು ಆರಿಸುವ ಹಕ್ಕು ಜನರಿಗಿದೆ. ಹಾಗಾಗಿ ದೇಶಭಕ್ತಿಗೆ ಸಂಬಂಧಪಟ್ಟ ಸಮಾರಂಭಗಳಲ್ಲಿ ಸೇರದೆ ಇರುವ ಹಕ್ಕು ನಮಗಿದೆ” ಎಂದರು. ಮಿಸ್‌ ಸ್ಕಾಟ್‌ ತುಂಬ ಒತ್ತಡ ಹಾಕಿದರೂ ನನ್ನ ಶಿಕ್ಷಕಿ ನನ್ನನ್ನು ಹೊರಹಾಕದೆ ದೃಢವಾಗಿ ಹೀಗಂದರು: “ಇದು ನನ್ನ ತೀರ್ಮಾನ.”

ಅದಕ್ಕೆ ಮಿಸ್‌ ಸ್ಕಾಟ್‌ “ಇಲ್ಲ, ಇದು ನಿಮ್ಮ ತೀರ್ಮಾನವಲ್ಲ. ನೀವು ಮೆಲಿಟಾಳನ್ನು ಹೊರಹಾಕದಿದ್ದರೆ ನಾನು ನಿಮ್ಮ ಬಗ್ಗೆ ದೂರು ಕೊಡುತ್ತೇನೆ” ಎಂದು ಹೇಳಿದರು. ನನ್ನನ್ನು ಶಾಲೆಯಿಂದ ಹೊರಹಾಕದಿದ್ದರೆ ತನ್ನ ಕೆಲಸ ಕಳೆದುಕೊಳ್ಳುತ್ತೇನೆಂದು ನನ್ನ ಶಿಕ್ಷಕಿ ಅಪ್ಪಅಮ್ಮನಿಗೆ ಹೇಳಿದರು. ಇದು ತಪ್ಪೆಂದು ಅವರಿಗೆ ಗೊತ್ತಿದ್ದರೂ ಬೇರೆ ದಾರಿ ಇಲ್ಲದೆ ಹೀಗೆ ಮಾಡುತ್ತಿದ್ದೇನೆಂದೂ ಹೇಳಿದರು. ನಂತರ ನಾವು ಪುಸ್ತಕಗಳನ್ನು ತಂದು ಮನೆಯಲ್ಲಿ ಇದ್ದುಕೊಂಡೇ ಓದನ್ನು ಮುಂದುವರಿಸಿದೆವು. ಸ್ವಲ್ಪ ಸಮಯದಲ್ಲೇ 20 ಮೈಲಿ (32 ಕಿ.ಮೀ.) ದೂರದಲ್ಲಿರುವ ಬೇರೊಂದು ಮನೆಗೆ ಸ್ಥಳಾಂತರಿಸಿದೆವು. ಅಲ್ಲಿನ ಒಂದು ಶಾಲೆ ನಮ್ಮನ್ನು ಸೇರಿಸಿಕೊಂಡಿತು.

ಆ ಯುದ್ಧದ ವರ್ಷಗಳಲ್ಲಿ ನಮ್ಮ ಸಾಹಿತ್ಯಕ್ಕೆಲ್ಲ ನಿಷೇಧವಿತ್ತು. ಆದರೂ ನಾವು ಬೈಬಲನ್ನು ಮಾತ್ರ ಬಳಸಿ ಮನೆಮನೆ ಸೇವೆಯನ್ನು ಮುಂದುವರಿಸಿದೆವು. ಹೀಗೆ ನಾವು ಬರೀ ಬೈಬಲ್‌ ಬಳಸಿ ರಾಜ್ಯದ ಸುವಾರ್ತೆ ಸಾರುವುದರಲ್ಲಿ ನಿಪುಣರಾದೆವು. ಆಧ್ಯಾತ್ಮಿಕವಾಗಿ ಬೆಳೆಯಲು ಮತ್ತು ಯೆಹೋವನ ಬೆಂಬಲವನ್ನು ಅನುಭವಿಸಲು ಇದು ನಮಗೆ ನೆರವಾಯಿತು.

ಪೂರ್ಣ ಸಮಯ ಸೇವೆಯ ಆರಂಭ

ಕೇಶವಿನ್ಯಾಸ ಮಾಡುವ ಕೌಶಲ ನನಗಿತ್ತು ಮತ್ತು ಇದಕ್ಕಾಗಿ ನನಗೆ ಕೆಲವು ಪ್ರಶಸ್ತಿಗಳೂ ಸಿಕ್ಕಿವೆ

ನಾನು ಮತ್ತು ಈವಾ ಶಾಲಾ ಶಿಕ್ಷಣ ಮುಗಿಸಿ ಪಯನೀಯರ್‌ ಸೇವೆ ಮಾಡಲಾರಂಭಿಸಿದೆವು. ಮೊದಲಿಗೆ ನಾನು ಆಹಾರದ ಅಂಗಡಿಯಲ್ಲಿ ಕೆಲಸ ಮಾಡಿದೆ. ನನಗೆ ಕೇಶವಿನ್ಯಾಸ ಮಾಡುವುದೆಂದರೆ ತುಂಬ ಇಷ್ಟ. ಮನೆಯಲ್ಲಿರುವಾಗಲೇ ಅಲ್ಪಸ್ವಲ್ಪ ಮಾಡುತ್ತಿದ್ದೆ. ಹಾಗಾಗಿ ಈ ಕೆಲಸಕ್ಕಾಗಿ ಆರು ತಿಂಗಳಿನ ತರಬೇತಿ ಪಡೆದೆ. ವಾರದಲ್ಲಿ ಎರಡು ದಿನ ನಾನು ಕೇಶವಿನ್ಯಾಸದ ಅಂಗಡಿಯಲ್ಲಿ ಕೆಲಸ ಮಾಡಿದೆ. ತಿಂಗಳಲ್ಲಿ ಎರಡು ಸಲ ಬೇರೆಯವರಿಗೆ ಈ ಕೆಲಸ ಕಲಿಸುತ್ತಿದ್ದೆ. ಹೀಗೆ ನಾನು ಪೂರ್ಣ ಸಮಯದ ಸೇವೆಗಾಗಿ ಬೇಕಾದ ಹಣವನ್ನು ಸಂಪಾದಿಸುತ್ತಿದ್ದೆ.

1955ರಲ್ಲಿ ಅಮೆರಿಕದ ನ್ಯೂ ಯಾರ್ಕ್‍ನಲ್ಲಿ ಮತ್ತು ಜರ್ಮನಿಯ ನುರೆಂಬರ್ಗ್‌ನಲ್ಲಿ ನಡೆಯಲಿದ್ದ “ವಿಜಯಿ ರಾಜ್ಯ” ಅಧಿವೇಶನಗಳಿಗೆ ಹಾಜರಾಗಲು ನನಗೆ ತುಂಬ ಆಸೆ ಇತ್ತು. ನ್ಯೂ ಯಾರ್ಕ್‍ಗೆ ಹೋಗುವ ಮುಂಚೆ ನನಗೆ ನಮ್ಮ ಜಾಗತಿಕ ಮುಖ್ಯ ಕಾರ್ಯಾಲಯದಿಂದ ಬಂದಿದ್ದ ಸಹೋದರ ನೇತನ್‌ ನಾರ್‌ ಭೇಟಿಯಾದರು. ಅವರು ತಮ್ಮ ಹೆಂಡತಿ ಜೊತೆ ಕೆನಡದ ವ್ಯಾ೦ಕೂವರ್‌ನಲ್ಲಿ ಒಂದು ಅಧಿವೇಶನಕ್ಕಾಗಿ ಬಂದಿದ್ದರು. ಅವರ ಭೇಟಿಯ ಸಮಯದಲ್ಲಿ ಸಹೋದರಿ ನಾರ್‌ರ ಕೇಶವಿನ್ಯಾಸ ಮಾಡಲು ನನಗೆ ಹೇಳಲಾಯಿತು. ಸಹೋದರ ನಾರ್‌ ನನ್ನ ಕೆಲಸವನ್ನು ತುಂಬ ಇಷ್ಟಪಟ್ಟು, ನನ್ನನ್ನು ಭೇಟಿಯಾಗಬೇಕೆಂದು ಹೇಳಿದರು.  ಅವರ ಜೊತೆ ಮಾತಾಡುತ್ತಾ ಇದ್ದಾಗ ನಾನು ಜರ್ಮನಿಗೆ ಹೋಗುವ ಮುಂಚೆ ನ್ಯೂ ಯಾರ್ಕ್‍ಗೆ ಹೋಗಲು ಯೋಜನೆ ಮಾಡಿದ್ದೇನೆಂದು ಹೇಳಿದೆ. ಆಗ ಅವರು ನನ್ನನ್ನು ಬ್ರೂಕ್ಲಿನ್‌ ಬೆತೆಲ್‍ನಲ್ಲಿ 9 ದಿನ ಕೆಲಸ ಮಾಡಲು ಆಮಂತ್ರಿಸಿದರು.

ಆ ಪ್ರಯಾಣ ನನ್ನ ಬದುಕನ್ನೇ ಬದಲಾಯಿಸಿತು. ನ್ಯೂ ಯಾರ್ಕ್‍ನಲ್ಲಿ ನಾನು ಒಬ್ಬ ಯುವ ಸಹೋದರನನ್ನು ಭೇಟಿಯಾದೆ. ಅವರ ಹೆಸರು ಥೀಯೊಡರ್‌ (ಟೆಡ್) ಜಾರಸ್‌. ಅವರನ್ನು ಭೇಟಿಯಾದ ಸ್ವಲ್ಪ ಸಮಯದಲ್ಲೇ ನನಗೆ “ನೀವು ಪಯನೀಯರಾ?” ಎಂದು ಕೇಳಿದರು. ಇದರಿಂದ ಚಕಿತಳಾದ ನಾನು “ಇಲ್ಲ” ಎಂದು ಹೇಳಿದೆ. ಪಕ್ಕದಲ್ಲೇ ಇದ್ದ ನನ್ನ ಸ್ನೇಹಿತೆ ಲೆವೋನ್‌ ಇದನ್ನು ಕೇಳಿಸಿಕೊಂಡು ಮಧ್ಯದಲ್ಲಿ ಬಾಯಿಹಾಕಿ “ಹೌದು ಅವಳು ಪಯನೀಯರ್‌” ಎಂದಳು. ಇದನ್ನು ಕೇಳಿ ಗಲಿಬಿಲಿಗೊಂಡ ಟೆಡ್ ಲೆವೋನ್‌ಳಿಗೆ “ಯಾರಿಗೆ ಚೆನ್ನಾಗಿ ಗೊತ್ತಿರುವುದು ನಿನಗಾ ಅವಳಿಗಾ?” ಎಂದು ಕೇಳಿದರು. ಆಗ ನಾನು ಟೆಡ್ಗೆ ನಾನು ಪಯನೀಯರ್‌ ಸೇವೆ ಮಾಡುತ್ತಾ ಇದ್ದೆ, ಅಧಿವೇಶನಗಳಿಂದ ಹಿಂದಿರುಗಿದ ಕೂಡಲೆ ಪುನಃ ಮುಂದುವರಿಸುವೆನೆಂದು ವಿವರಿಸಿದೆ.

ನಾನು ಮದುವೆಯಾದ ಆಧ್ಯಾತ್ಮಿಕ ವ್ಯಕ್ತಿ

ಅಮೆರಿಕದ ಕೆಂಟಕಿಯಲ್ಲಿ ಟೆಡ್ 1925ರಲ್ಲಿ ಹುಟ್ಟಿದರು. 15 ವರ್ಷ ಪ್ರಾಯದಲ್ಲೇ ಯೆಹೋವನಿಗೆ ಸಮರ್ಪಣೆ ಮಾಡಿ ದೀಕ್ಷಾಸ್ನಾನ ಪಡೆದರು. ಅವರ ಕುಟುಂಬದಲ್ಲಿ ಯಾರೂ ಸತ್ಯವನ್ನು ಕಲಿಯದಿದ್ದರೂ ದೀಕ್ಷಾಸ್ನಾನವಾಗಿ ಎರಡೇ ವರ್ಷಗಳಲ್ಲಿ ಪಯನೀಯರ್‌ ಸೇವೆ ಆರಂಭಿಸಿದರು. ಹೀಗೆ ಶುರುವಾದ ಅವರ ಪೂರ್ಣ ಸಮಯ ಸೇವೆಯ ಜೀವನವೃತ್ತಿ ಹತ್ತಿರತ್ತಿರ 67 ವರ್ಷ ಮುಂದುವರಿಯಿತು.

ಟೆಡ್ 20ರ ವಯಸ್ಸಿನಲ್ಲೇ ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‍ನ 7ನೇ ಕ್ಲಾಸ್‍ನಲ್ಲಿ 1946ರ ಜುಲೈಯಲ್ಲಿ ಪದವಿ ಪಡೆದರು. ಅದಾದ ನಂತರ ಕ್ಲೀವ್‌ಲ್ಯಾಂಡ್‍ನ ಒಹಾಯೋದಲ್ಲಿ ಸಂಚರಣ ಮೇಲ್ವಿಚಾರಕರಾಗಿ ಸೇವೆ ಮಾಡಿದರು. ನಾಲ್ಕು ವರ್ಷಗಳ ನಂತರ ಅವರು ಆಸ್ಟ್ರೇಲಿಯ ಬ್ರಾಂಚ್‌ ಸೇವಕರಾಗಿ ಸೇವೆ ಸಲ್ಲಿಸುವ ನೇಮಕ ಪಡೆದರು.

ಜರ್ಮನಿಯ ನುರೆಂಬರ್ಗ್‌ನಲ್ಲಿ ನಡೆದ ಅಧಿವೇಶನದಲ್ಲಿ ಟೆಡ್ ಸಹ ಇದ್ದರು. ಅಧಿವೇಶನದಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಅವಕಾಶ ನಮಗೆ ಸಿಕ್ಕಿತು. ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿತು. ಅವರ ಗುರಿಗಳೆಲ್ಲಾ ಯೆಹೋವನನ್ನು ಪೂರ್ಣ ಹೃದಯದಿಂದ ಸೇವೆ ಮಾಡುವುದಕ್ಕೆ ಸಂಬಂಧಪಟ್ಟದ್ದಾಗಿತ್ತು. ಆದ್ದರಿಂದ ನನಗೆ ತುಂಬ ಖುಷಿಯಾಯಿತು. ತಮ್ಮ ಜೀವನವನ್ನು ದೇವರ ಸೇವೆಗೆ ಮುಡಿಪಾಗಿಟ್ಟಿದ್ದರು ಮತ್ತು ದೇವರ ಆರಾಧನೆಯನ್ನು ತುಂಬ ಗಂಭೀರವಾಗಿ ಎಣಿಸುತ್ತಿದ್ದರು. ಆದರೂ ಅವರು ದಯೆ ಮತ್ತು ಸ್ನೇಹಸ್ವಭಾವದವರು ಆಗಿದ್ದರು. ಬೇರೆಯವರ ಆಸೆ ಅಥವಾ ಇಚ್ಛೆಗಳನ್ನು ತಮಗಿಂತ ಮೇಲೆಂದು ಎಣಿಸುತ್ತಿದ್ದರು. ಅಧಿವೇಶನದ ನಂತರ ಟೆಡ್ ಆಸ್ಟ್ರೇಲಿಯಾಗೆ ಹೋದರು. ನಾನು ವ್ಯಾ೦ಕೂವರ್‌ಗೆ ವಾಪಸ್ಸು ಹೋದೆ. ಆದರೆ ನಾವು ಪತ್ರಗಳ ಮೂಲಕ ಸಂಪರ್ಕ ಇಟ್ಟುಕೊಂಡೆವು.

ಟೆಡ್ 5 ವರ್ಷಗಳ ನಂತರ ಆಸ್ಟ್ರೇಲಿಯದಿಂದ ಅಮೆರಿಕಕ್ಕೆ ಮರಳಿದರು. ನಂತರ ಅವರು ವ್ಯಾ೦ಕೂವರ್‌ಗೆ ಪಯನೀಯರರಾಗಿ ಬಂದರು. ನನ್ನ ಕುಟುಂಬದವರಿಗೆ ಟೆಡ್ ತುಂಬ ಇಷ್ಟವಾದದ್ದನ್ನು ನೋಡಿ ನನಗೆ ಖುಷಿಯಾಯಿತು. ನನ್ನ ಅಣ್ಣ ಮೈಕಲ್‌ ನನ್ನ ಬಗ್ಗೆ ತುಂಬ ಜಾಗ್ರತೆ ವಹಿಸುತ್ತಿದ್ದ. ನನ್ನೊಟ್ಟಿಗೆ ಯಾರಾದರೂ ಯುವ ಪ್ರಾಯದ ಸಹೋದರ ಮಾತಾಡಿದರೆ ಅವನಿಗೆ ಚಿಂತೆಯಾಗುತ್ತಿತ್ತು. ಹೀಗಿರುವ ಅವನಿಗೆ ಟೆಡ್ ತುಂಬ ಇಷ್ಟವಾದ. “ಮೆಲಿಟಾ, ಇವನು ತುಂಬ ಒಳ್ಳೇ ಹುಡುಗ. ಅವನ ಜೊತೆ ಚೆನ್ನಾಗಿ ನಡೆದುಕೊ. ಹುಷಾರಾಗಿರು, ಅವನು ನಿನ್ನ ಕೈತಪ್ಪಿ ಹೋಗದಂತೆ ನೋಡಿಕೋ!” ಎಂದು ಹೇಳಿದ.

1956ರಲ್ಲಿ ಮದುವೆಯಾದ ನಂತರ ನಾವು ಯೆಹೋವನ ಸೇವೆಯಲ್ಲಿ ಒಟ್ಟಿಗೆ ಕಳೆದ ಅನೇಕ ವರ್ಷಗಳು ಸಂತೋಷದಿಂದ ತುಂಬಿದ್ದವು

ನನಗೂ ಟೆಡ್ ತುಂಬ ಇಷ್ಟವಾದರು. 1956 ಡಿಸೆಂಬರ್‌ 10ರಂದು ನಮ್ಮ ಮದುವೆಯಾಯಿತು. ನಾವಿಬ್ಬರು ಸೇರಿ ವ್ಯಾ೦ಕೂವರ್‌ನಲ್ಲಿ, ನಂತರ ಕ್ಯಾಲಿಫೋರ್ನಿಯದಲ್ಲಿ ಪಯನೀಯರ್‌ ಸೇವೆ ಮಾಡಿದೆವು. ಆಮೇಲೆ ನಮ್ಮನ್ನು ಮಿಸೌರಿ ಮತ್ತು ಆರ್‌ಕಾನ್‌ಸಾಸ್‍ನಲ್ಲಿ ಸರ್ಕಿಟ್‌ ಕೆಲಸಕ್ಕೆ ನೇಮಿಸಲಾಯಿತು. ಅಮೆರಿಕದ ಈ ದೊಡ್ಡ ಭಾಗದಲ್ಲಿ ಸಂಚರಣ ಸೇವೆಯಲ್ಲಿದ್ದಾಗ 18 ವರ್ಷಗಳ ವರೆಗೂ ಪ್ರತಿ ವಾರ ಒಂದೊಂದು ಮನೆಯಲ್ಲಿ ತಂಗುತ್ತಿದ್ದೆವು. ಶುಶ್ರೂಷೆಯಲ್ಲಿ ನಮಗೆ ಅದ್ಭುತ ಅನುಭವಗಳು ಸಿಕ್ಕಿದವು. ಮಾತ್ರವಲ್ಲ ಸಹೋದರ ಸಹೋದರಿಯರೊಟ್ಟಿಗೆ ಸಂತೋಷದ ಸಹವಾಸವನ್ನು ಆನಂದಿಸಿದೆವು. ಪ್ರತಿ ವಾರ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು ಅಷ್ಟೇನು ಸುಲಭ ಆಗಿರಲಿಲ್ಲವಾದರೂ ಸಂಚರಣ ಕೆಲಸವನ್ನು ಆನಂದಿಸಿದೆವು.

ಟೆಡ್ ಬಗ್ಗೆ ನಾನು ತುಂಬ ಗೌರವಿಸುತ್ತಿದ್ದ ವಿಷಯ ಯಾವುದೆಂದರೆ ಅವರು ಯೆಹೋವನೊಟ್ಟಿಗಿರುವ ತಮ್ಮ ಸಂಬಂಧವನ್ನು ಯಾವತ್ತೂ ಹಗುರವಾಗಿ ತೆಗೆದುಕೊಳ್ಳಲಿಲ್ಲ. ವಿಶ್ವದಲ್ಲೇ ಅತಿ ಮಹಾ ವ್ಯಕ್ತಿಯಾಗಿರುವ ಯೆಹೋವನ ಸೇವೆ ಮಾಡುವುದನ್ನು ತುಂಬ ಅಮೂಲ್ಯವೆಂದು ಎಣಿಸುತ್ತಿದ್ದರು. ನಾವಿಬ್ಬರು ಒಟ್ಟಿಗೆ ಕೂತು ಬೈಬಲನ್ನು ಓದಿ, ಅಧ್ಯಯನ ಮಾಡುವುದನ್ನು ತುಂಬ ಇಷ್ಟಪಡುತ್ತಿದ್ದೆವು. ರಾತ್ರಿ ಮಲಗುವ ಮುಂಚೆ ಹಾಸಿಗೆ ಹತ್ತಿರ ಮೊಣಕಾಲೂರಿ ಒಟ್ಟಿಗೆ ಪ್ರಾರ್ಥನೆ ಮಾಡಿ ನಂತರ ನಮ್ಮನಮ್ಮ ಪ್ರಾರ್ಥನೆ ಮಾಡುತ್ತಿದ್ದೆವು. ಅವರ ಮನಸ್ಸಿನಲ್ಲಿ ಯಾವುದಾದರೂ ಒಂದು ಗಂಭೀರ ವಿಷಯ ಇದ್ದರೆ ನನಗದು ಗೊತ್ತಾಗುತ್ತಿತ್ತು. ಹೇಗೆಂದರೆ ಅವರು ಪುನಃ ಮಂಚದಿಂದ ಇಳಿದು ಮೊಣಕಾಲೂರಿ ಮೌನವಾಗಿ ಉದ್ದವಾದ ಪ್ರಾರ್ಥನೆ ಮಾಡುತ್ತಿದ್ದರು. ವಿಷಯ ದೊಡ್ಡದಿರಲಿ ಚಿಕ್ಕದಿರಲಿ ಯೆಹೋವನ ಹತ್ತಿರ ಅದನ್ನು ಪ್ರಾರ್ಥನೆಯಲ್ಲಿ ಅವರು ಹೇಳುತ್ತಿದ್ದದ್ದನ್ನು ನಾನು ತುಂಬ ಮೆಚ್ಚುತ್ತಿದ್ದೆ.

 ಮದುವೆಯಾದ ಸ್ವಲ್ಪ ವರ್ಷಗಳ ನಂತರ ಕ್ರಿಸ್ತನ ಮರಣದ ಸ್ಮರಣೆಯಲ್ಲಿ ರೊಟ್ಟಿ, ದ್ರಾಕ್ಷಾಮದ್ಯವನ್ನು ಸೇವಿಸಲು ಆರಂಭಿಸಲಿದ್ದೇನೆಂದು ಟೆಡ್ ನನಗೆ ವಿವರಿಸಿದರು. “ಯೆಹೋವನು ನಾನು ಏನು ಮಾಡಲು ಬಯಸುತ್ತಿದ್ದಾನೊ ಅದನ್ನೇ ಮಾಡುತ್ತಿದ್ದೇನೆಂದು ನನಗೆ ಒಂಚೂರು ಸಂಶಯವಿರಬಾರದು. ಹಾಗಾಗಿ ಈ ವಿಷಯದ ಬಗ್ಗೆ ನಾನು ತುಂಬ ಪ್ರಾರ್ಥನೆ ಮಾಡಿದ್ದೇನೆ” ಎಂದು ಹೇಳಿದರು. ಅವರು ಸ್ವರ್ಗದಲ್ಲಿ ಸೇವೆ ಮಾಡಲು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದ ಈ ವಿಷಯ ನನಗೆ ಅಷ್ಟೇನು ಆಶ್ಚರ್ಯ ಆಗಲಿಲ್ಲ. ಕ್ರಿಸ್ತನ ಸಹೋದರರಲ್ಲಿ ಒಬ್ಬರಾದ ಅವರನ್ನು ಬೆಂಬಲಿಸುವುದು ನನ್ನ ಸುಯೋಗವೆಂದು ಎಣಿಸಿದೆ.—ಮತ್ತಾ. 25:35-40.

ಪವಿತ್ರ ಸೇವೆಯ ಹೊಸ ವಿಧಾನ

1974ರಲ್ಲಿ ಟೆಡ್ಗೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಲು ಆಮಂತ್ರಣ ಸಿಕ್ಕಿದಾಗ ನಮಗೆ ಆಶ್ಚರ್ಯವಾಯಿತು. ಸ್ವಲ್ಪದರಲ್ಲೇ ನಮ್ಮನ್ನು ಬ್ರೂಕ್ಲಿನ್‌ ಬೆತೆಲ್‍ನಲ್ಲಿ ಸೇವೆ ಮಾಡಲು ಕರೆಯಲಾಯಿತು. ಆಡಳಿತ ಮಂಡಲಿಯ ಜವಾಬ್ದಾರಿಗಳನ್ನು ಟೆಡ್ ನಿರ್ವಹಿಸುತ್ತಿದ್ದಾಗ ನನಗಿದ್ದ ನೇಮಕ ವಾಸದ ಕೋಣೆಗಳನ್ನು ಶುಚಿಮಾಡುವುದು ಅಥವಾ ಕೇಶವಿನ್ಯಾಸ ಕೆಲಸ ಮಾಡುವುದಾಗಿತ್ತು.

ಟೆಡ್‍ರವರಿಗಿದ್ದ ಜವಾಬ್ದಾರಿಗಳಲ್ಲಿ ಬೇರೆಬೇರೆ ಬ್ರಾಂಚ್‌ಗಳನ್ನು ಸಂದರ್ಶಿಸುವ ನೇಮಕವು ಸೇರಿತ್ತು. ನಮ್ಮ ಕೆಲಸದ ಮೇಲೆ ನಿಷೇಧವಿದ್ದ ದೇಶಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿಯಿತ್ತು. ಉದಾಹರಣೆಗೆ, ಸೋವಿಯಟ್‌ಒಕ್ಕೂಟದ ನಿಯಂತ್ರಣದ ಕೆಳಗಿದ್ದ ಪೂರ್ವ ಯೂರೋಪಿಯನ್‌ ದೇಶಗಳಲ್ಲಿ ನಿಷೇಧವಿತ್ತು. ಒಮ್ಮೆ ತುಂಬ ಸಮಯದ ನಂತರ ರಜೆ ತೆಗೆದುಕೊಂಡು ಸ್ವೀಡನ್‌ಗೆ ಹೋದಾಗ ಟೆಡ್ ಹೀಗಂದರು: “ಮೆಲಿಟಾ, ಪೋಲೆಂಡಿನಲ್ಲಿ ಸಾರುವ ಕೆಲಸಕ್ಕೆ ನಿಷೇಧವಿದೆ. ಹಾಗಾಗಿ ನಾನು ಅಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ.” ಆದ್ದರಿಂದ ನಾವು ವೀಸಾ ಪಡೆದು ಪೋಲೆಂಡಿಗೆ ಹೋದೆವು. ಸಾರುವ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಕೆಲವು ಸಹೋದರರನ್ನು ಟೆಡ್ ಭೇಟಿಯಾದರು. ಅವರೆಲ್ಲರೂ ಸೇರಿ ದೂರದ ವರೆಗೆ ನಡೆದುಕೊಂಡು ಹೋದರು. ನಡೆಯುತ್ತಾ ನಡೆಯುತ್ತಾ ಮಾತಾಡಿದರು. ಹಾಗಾಗಿ ಅವರ ಮಾತುಕತೆಯನ್ನು ಯಾರೂ ಕೇಳಿಸಿಕೊಳ್ಳಲು ಆಗಲಿಲ್ಲ. ನಾಲ್ಕು ದಿನಗಳ ವರೆಗೆ ಆ ಸಹೋದರರೊಂದಿಗೆ ಕೂಟಗಳು ನಡೆದವು. ತನ್ನ ಆಧ್ಯಾತ್ಮಿಕ ಕುಟುಂಬಕ್ಕೆ ಸಹಾಯಮಾಡುವಾಗ ಟೆಡ್ಗೆ ಸಿಗುತ್ತಿದ್ದ ಸಂತೃಪ್ತಿ ನೋಡಿ ನನಗೆ ಖುಷಿಯಾಯಿತು.

ನಾವು ಮತ್ತೆ ಪೋಲೆಂಡ್ಗೆ ಭೇಟಿ ನೀಡಿದ್ದು ನವೆಂಬರ್‌ 1977ರಲ್ಲಿ. ಆಡಳಿತ ಮಂಡಲಿ ಸದಸ್ಯರಾದ ಎಫ್‌. ಡಬ್ಲ್ಯು. ಫ್ರಾನ್ಸ್‌, ಡ್ಯಾನಿಯೆಲ್‌ ಸಿಡ್ಲಿಕ್‌ ಮತ್ತು ಟೆಡ್ ಮೊದಲನೆ ಅಧಿಕೃತ ಭೇಟಿಯನ್ನು ಮಾಡಿದರು. ನಮ್ಮ ಕೆಲಸಕ್ಕೆ ಇನ್ನೂ ನಿಷೇಧವಿತ್ತು. ಹಾಗಿದ್ದರೂ ಆಡಳಿತ ಮಂಡಲಿಯ ಈ ಮೂವರು ಸಹೋದರರಿಗೆ ಬೇರೆಬೇರೆ ನಗರಗಳಲ್ಲಿದ್ದ ಮೇಲ್ವಿಚಾರಕರ, ಪಯನೀಯರರ, ಮತ್ತು ಅನೇಕ ವರ್ಷಗಳಿಂದ ಸಾಕ್ಷಿಗಳಾಗಿರುವವರ ಜೊತೆ ಮಾತಾಡಲು ಸಾಧ್ಯವಾಯಿತು.

ನಮ್ಮ ಕೆಲಸಕ್ಕೆ ಅಧಿಕೃತ ಮನ್ನಣೆ ಸಿಕ್ಕಿದ ನಂತರ ಟೆಡ್ ಮತ್ತು ಬೇರೆಯವರು ಮಾಸ್ಕೋದಲ್ಲಿ ನ್ಯಾಯ ಇಲಾಖೆಯ ಮುಂದೆ ನಿಂತಿರುವುದು

ಮಿಲ್ಟನ್‌ ಹೆನ್ಶೆಲ್‌ ಮತ್ತು ಟೆಡ್ ಮುಂದಿನ ವರ್ಷ ಪೋಲೆಂಡ್ಗೆ ಭೇಟಿ ಮಾಡಿದಾಗ ಯೆಹೋವನ ಸಾಕ್ಷಿಗಳು ಮತ್ತು ಅವರ ಚಟುವಟಿಕೆಗಳ ಕಡೆಗೆ ಒಳ್ಳೇ ಅಭಿಪ್ರಾಯ ಹೊಂದಲು ಆರಂಭಿಸಿದ್ದ ಅಧಿಕಾರಿಗಳನ್ನು ಭೇಟಿಯಾದರು. 1982ರಲ್ಲಿ ಪೋಲಿಷ್‌ ಸರಕಾರವು ನಮ್ಮ ಸಹೋದರರಿಗೆ ಒಂದು ದಿನದ ಸಮ್ಮೇಳನಗಳನ್ನು ನಡೆಸಲು ಒಪ್ಪಿಗೆ ಕೊಟ್ಟಿತು. ಮುಂದಿನ ವರ್ಷ ದೊಡ್ಡ ಅಧಿವೇಶನಗಳನ್ನು ಹೆಚ್ಚಾಗಿ ಬಾಡಿಗೆಗೆ ತಕ್ಕೊಂಡ ಸಭಾಂಗಣಗಳಲ್ಲಿ ನಡೆಸಲಾಯಿತು. 1985ರಲ್ಲಿ ಇನ್ನು ನಿಷೇಧವಿದ್ದಾಗಲೇ 4 ಅಧಿವೇಶನಗಳನ್ನು ದೊಡ್ಡ ಸ್ಟೇಡಿಯಂಗಳಲ್ಲಿ ನಡೆಸಲು ಅನುಮತಿ ಸಿಕ್ಕಿತು. ಮುಂದೆ 1989ರ ಮೇ ತಿಂಗಳಲ್ಲಿ ಇನ್ನು ಹೆಚ್ಚು ದೊಡ್ಡ ಅಧಿವೇಶನಗಳ ಯೋಜನೆಗಳು ನಡೆಯುತ್ತಿದ್ದಾಗಲೇ ಪೋಲಿಷ್‌ ಸರಕಾರ ಯೆಹೋವನ ಸಾಕ್ಷಿಗಳಿಗೆ ಕಾನೂನುಬದ್ಧ ಅಂಗೀಕಾರ ನೀಡಿತು. ಈ ಕೆಲವೊಂದು ಘಟನೆಗಳು ಟೆಡ್ಗೆ ತುಂಬ ಖುಷಿ ತಂದವು.

ಪೋಲೆಂಡಿನಲ್ಲಿ ಜಿಲ್ಲಾ ಅಧಿವೇಶನ

 ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವುದು

2007ರಲ್ಲಿ ನಾವು ದಕ್ಷಿಣ ಆಫ್ರಿಕದ ಬ್ರಾಂಚ್‌ನ ಸಮರ್ಪಣಾ ಸಮಾರಂಭಕ್ಕೆ ಹಾಜರಾಗಲು ಪ್ರಯಾಣಿಸುತ್ತಿದ್ದೆವು. ಮಧ್ಯದಲ್ಲಿ ನಾವು ಇಂಗ್ಲೆಂಡ್‍ನಲ್ಲಿದ್ದಾಗ ಟೆಡ್ಗೆ ರಕ್ತದೊತ್ತಡದ ಸಮಸ್ಯೆ ಹೆಚ್ಚಾಯಿತು. ಹಾಗಾಗಿ ಪ್ರಯಾಣವನ್ನು ಮುಂದೂಡಲು ಡಾಕ್ಟರ್‌ ಹೇಳಿದರು. ಟೆಡ್ ಚೇತರಿಸಿಕೊಂಡ ನಂತರ ನಾವು ಅಮೆರಿಕಕ್ಕೆ ಹಿಂದಿರುಗಿದೆವು. ಆದರೆ ಕೆಲವು ವಾರಗಳು ಕಳೆದ ಮೇಲೆ ಅವರಿಗೆ ಲಕ್ವ ಹೊಡೆದು ಬಲ ಭಾಗವು ನಿಷ್ಕ್ರಿಯವಾಯಿತು.

ಇದರಿಂದ ಚೇತರಿಸಲು ಟೆಡ್ಗೆ ಸಮಯ ಹಿಡಿಯಿತು. ಆರಂಭದಲ್ಲಿ ಅವರಿಗೆ ಆಫೀಸ್‌ಗೆ ಹೋಗಲು ಆಗುತ್ತಿರಲಿಲ್ಲ. ನಮಗಿದ್ದ ನೆಮ್ಮದಿ ಏನೆಂದರೆ ಅವರಿಗೆ ಮಾತಾಡಲು ಯಾವುದೇ ತೊಂದರೆ ಇರಲಿಲ್ಲ. ಈ ಇತಿಮಿತಿಗಳ ಮಧ್ಯೆಯು ಅವರು ಆಫೀಸ್‌ ಕೆಲಸಗಳನ್ನು ಮಾಡುತ್ತಿದ್ದರು. ನಮ್ಮ ಕೋಣೆಯಿಂದಲೇ ಫೋನಿನ ಮುಖಾಂತರ ಆಡಳಿತ ಮಂಡಲಿಯ ಕೂಟಗಳಲ್ಲಿಯೂ ಪ್ರತಿ ವಾರ ಭಾಗವಹಿಸುತ್ತಿದ್ದರು.

ಬೆತೆಲ್‍ನಲ್ಲಿ ಅವರಿಗೆ ಸಿಕ್ಕಿದ ಉತ್ತಮ ಚಿಕಿತ್ಸೆಗೆ ಟೆಡ್ ತುಂಬ ಆಭಾರಿಯಾಗಿದ್ದರು. ಮೆಲ್ಲಮೆಲ್ಲನೆ ಅವರು ನಡೆದಾಡಲು, ಕೈಕಾಲನ್ನು ಆಡಿಸಲು ಶುರುಮಾಡಿದರು. ಅವರ ಕೆಲವು ದೇವಪ್ರಭುತ್ವಾತ್ಮಕ ನೇಮಕಗಳನ್ನು ನಿರ್ವಹಿಸಲು ಆಗುತ್ತಿತ್ತು. ಯಾವಾಗಲೂ ಸಂತೋಷದಿಂದಿರಲು ಪ್ರಯತ್ನಿಸುತ್ತಿದ್ದರು.

ಮೂರು ವರ್ಷಗಳ ನಂತರ ಅವರಿಗೆ ಎರಡನೇ ಸಲ ಲಕ್ವ ಹೊಡೆಯಿತು. ಜೂನ್‌ 9, 2010 ಬುಧವಾರದಂದು ಅವರು ಕೊನೆಯುಸಿರೆಳೆದರು. ಭೂಮಿಯಲ್ಲಿನ ಜೀವನವನ್ನು ಅವರು ಒಂದಲ್ಲ ಒಂದು ದಿನ ಮುಗಿಸಲೇಬೇಕೆಂದು ನನಗೆ ಗೊತ್ತಿದ್ದರೂ ಅವರು ಸತ್ತಾಗ ತುಂಬ ನೋವಾಯಿತು. ಅದನ್ನು ವಿವರಿಸಲು ಕಷ್ಟವಾಗುತ್ತದೆ. ಅವರ ನೆನಪು ನನ್ನನ್ನು ಕಾಡುತ್ತಾ ಇರುತ್ತದೆ. ಆದರೂ ಅವರಿಗೆ ಸಹಾಯಮಾಡುವ ಅವಕಾಶ ನನಗೆ ಸಿಕ್ಕಿದ್ದಕ್ಕಾಗಿ ನಾನು ಯೆಹೋವನಿಗೆ ಪ್ರತಿದಿನ ಧನ್ಯವಾದ ಹೇಳುತ್ತೇನೆ. ಒಟ್ಟು 53 ವರ್ಷಗಳ ಪೂರ್ಣ ಸಮಯ ಸೇವೆಯನ್ನು ನಾವಿಬ್ಬರು ಆನಂದಿಸಿದ್ದೇವೆ. ನನ್ನ ಸ್ವರ್ಗೀಯ ತಂದೆಗೆ ಇನ್ನಷ್ಟು ಹತ್ತಿರವಾಗಲು ನನಗೆ ಟೆಡ್ ಸಹಾಯ ಮಾಡಿದ್ದಕ್ಕೆ ನಾನು ಯೆಹೋವನಿಗೆ ಧನ್ಯವಾದ ಹೇಳುತ್ತೇನೆ. ಈಗ ಅವರ ಹೊಸ ನೇಮಕ ಅವರಿಗೆ ತುಂಬ ಖುಷಿ ಮತ್ತು ಸಂತೃಪ್ತಿಯನ್ನು ಕೊಡುತ್ತದೆಂಬ ವಿಷಯದಲ್ಲಿ ನನಗೆ ಸಂಶಯವಿಲ್ಲ.

ಜೀವನದ ಹೊಸ ಸವಾಲುಗಳನ್ನು ಎದುರಿಸುವುದು

ಬೆತೆಲ್‍ನಲ್ಲಿರುವ ಸಲೂನ್‍ನಲ್ಲಿ ಕೆಲಸ ಮಾಡಿದ್ದು ಮತ್ತು ತರಬೇತಿ ಕೊಟ್ಟದ್ದು ನನಗೆ ತುಂಬ ಖುಷಿ ತಂದಿದೆ

ನನ್ನ ಗಂಡನೊಟ್ಟಿಗೆ ಕಳೆದ ಅನೇಕ ಸಂತೋಷಭರಿತ, ಕಾರ್ಯಮಗ್ನ ವರ್ಷಗಳ ನಂತರ ಈಗಿನ ಸವಾಲುಗಳಿಗೆ ಹೊಂದಿಕೊಳ್ಳುವುದು ನನಗೆ ಅಷ್ಟು ಸುಲಭವಲ್ಲ. ಬೆತೆಲ್‌ ಮತ್ತು ರಾಜ್ಯ ಸಭಾಗೃಹಕ್ಕೆ ಬರುವ ಸಂದರ್ಶಕರನ್ನು ಭೇಟಿಮಾಡುವುದು ನನಗೆ ಮತ್ತು ಟೆಡ್ಗೆ ತುಂಬ ಇಷ್ಟವಾಗಿತ್ತು. ಆದರೆ ಈಗ ನನ್ನ ಪ್ರೀತಿಯ ಟೆಡ್ ನನ್ನೊಟ್ಟಿಗೆ ಇಲ್ಲ ಮತ್ತು ನನ್ನಲ್ಲಿ ಮುಂಚೆ ಇದ್ದಷ್ಟು ಬಲವಿಲ್ಲ. ಹಾಗಾಗಿ ಬೇರೆಯವರ ಜೊತೆ ತುಂಬ ಸಹವಾಸ ಮಾಡಲು ಆಗುತ್ತಿಲ್ಲ. ಬೆತೆಲ್‌ ಮತ್ತು ಸಭೆಯಲ್ಲಿರುವ ನನ್ನ ಪ್ರಿಯ ಸಹೋದರ ಸಹೋದರಿಯರ ಜೊತೆ ಇರುವುದನ್ನು ನಾನು ಈಗಲೂ ಆನಂದಿಸುತ್ತಿದ್ದೇನೆ. ಬೆತೆಲಿನ ಜೀವನಶೈಲಿ ಅಷ್ಟು ಸುಲಭವಲ್ಲ ಆದರೆ ಇಲ್ಲಿ ಯೆಹೋವನ ಸೇವೆ ಮಾಡುವುದು ತುಂಬ ಖುಷಿ ತರುತ್ತದೆ. ಸಾರುವ ಕೆಲಸಕ್ಕಾಗಿರುವ ನನ್ನ ಪ್ರೀತಿಯು ಕಡಿಮೆಯಾಗಿಲ್ಲ. ನನಗೀಗ ತುಂಬ ಆಯಾಸವಾಗುತ್ತದೆ, ತುಂಬ ಹೊತ್ತು ನಿಲ್ಲಲು ಆಗುವುದಿಲ್ಲ. ಹಾಗಿದ್ದರೂ ಬೀದಿ ಸಾಕ್ಷಿಕಾರ್ಯ ಮತ್ತು ಬೈಬಲ್‌ ಅಧ್ಯಯನ ಮಾಡುವಾಗ ನನಗೆ ತುಂಬ ತೃಪ್ತಿ ಸಿಗುತ್ತದೆ.

ಈ ಲೋಕದಲ್ಲಿ ಭಯಂಕರ ಸಂಗತಿಗಳು ನಡೆಯುತ್ತಾ ಇವೆ. ಆದರೆ ನನಗೊಬ್ಬ ಒಳ್ಳೇ ವಿವಾಹ ಸಂಗಾತಿಯ ಜೊತೆ ಯೆಹೋವನ ಸೇವೆ ಮಾಡುವ ಮತ್ತು ಈಗಲೂ ಆ ಸೇವೆ ಮುಂದುವರಿಸುವ ಅವಕಾಶ ಸಿಕ್ಕಿರುವುದು ನನಗೆ ಖುಷಿ ತರುತ್ತದೆ! ಯೆಹೋವನ ಆಶೀರ್ವಾದ ನಿಜವಾಗಿಯೂ ನನ್ನ ಬದುಕನ್ನು ಹಸನಾಗಿಸಿದೆ.—ಜ್ಞಾನೋ. 10:22.

^ ಪ್ಯಾರ. 13 ಜ್ಯಾಕ್‌ ನೇತನ್‍ರವರ ಜೀವನ ಕಥೆ ಕಾವಲಿನಬುರುಜು ಸೆಪ್ಟೆಂಬರ್‌ 1, 1990, (ಇಂಗ್ಲಿಷ್‌) ಪುಟ 10-14ರಲ್ಲಿದೆ.