ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಜೂನ್ 2015

ಆತನು ಜನರನ್ನು ಪ್ರೀತಿಸಿದನು

ಆತನು ಜನರನ್ನು ಪ್ರೀತಿಸಿದನು

“ನನಗೆ ಮನುಷ್ಯಪುತ್ರರೆಂದರೆ ವಿಶೇಷ ಪ್ರೀತಿ.”—ಜ್ಞಾನೋ. 8:31, ನೂತನ ಲೋಕ ಭಾಷಾಂತರ.

1, 2. ಮಾನವಕುಲಕ್ಕಾಗಿ ತನಗಿದ್ದ ಗಾಢ ಪ್ರೀತಿಯನ್ನು ಯೇಸು ಹೇಗೆ ತೋರಿಸಿದನು?

ಯೆಹೋವನಿಗಿರುವ ಅಪಾರ ವಿವೇಕಕ್ಕೆ ದೊಡ್ಡ ಉದಾಹರಣೆ ಆತನ ಜ್ಯೇಷ್ಠ ಪುತ್ರನಾಗಿದ್ದಾನೆ. ಇವನು ತಂದೆಯ ಜೊತೆ “ಶಿಲ್ಪಿಯಾಗಿ” ಕೆಲಸ ಮಾಡಿದನು. ತಂದೆಯು “ಆಕಾಶಮಂಡಲವನ್ನು ಸ್ಥಾಪಿಸುವಾಗ,” “ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ” ಮಗನಿಗಾದ ಸಂತೋಷ, ತೃಪ್ತಿಯನ್ನು ಸ್ವಲ್ಪ ಯೋಚಿಸಿ ನೋಡಿ. ಆದರೆ ಅವನಿಗೆ ತನ್ನ ತಂದೆ ಸೃಷ್ಟಿ ಮಾಡಿದ ಎಲ್ಲದರಲ್ಲಿ “ಮನುಷ್ಯಪುತ್ರರೆಂದರೆ ವಿಶೇಷ ಪ್ರೀತಿ.” (ಜ್ಞಾನೋ. 8:22-31) ಆರಂಭದಿಂದಲೇ ಯೇಸು ಮನುಷ್ಯರನ್ನು ಪ್ರೀತಿಸಿದನು.

2 ಮುಂದಕ್ಕೆ ಯೇಸು ತನ್ನ ತಂದೆಯ ಮೇಲಿರುವ ಪ್ರೀತಿ, ನಿಷ್ಠೆ ಹಾಗೂ ಎಲ್ಲಾ ಜನರ ಮೇಲಿನ ಗಾಢ ಪ್ರೀತಿಯನ್ನು ಸಾಬೀತುಪಡಿಸಿದನು. ಹೇಗೆ? ಮನಃಪೂರ್ವಕವಾಗಿ ಸ್ವರ್ಗವನ್ನು ಬಿಟ್ಟು ಭೂಮಿಗೆ ಒಬ್ಬ ಮನುಷ್ಯನಾಗಿ ಬರುವ ಮೂಲಕ. “ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ” ಕೊಡಲಿಕ್ಕಾಗಿ ಯೇಸು ಪ್ರೀತಿಯಿಂದ ಹೀಗೆ ಮಾಡಿದನು. (ಫಿಲಿ. 2:5-8; ಮತ್ತಾ. 20:28) ಅವನು ಭೂಮಿಯಲ್ಲಿದ್ದಾಗ ದೇವರು ಕೊಟ್ಟ ಶಕ್ತಿಯಿಂದ ಅದ್ಭುತಗಳನ್ನು ಮಾಡಿದನು. ಈ ಅದ್ಭುತಗಳು ಯೇಸು ಮನುಷ್ಯರನ್ನು ಎಷ್ಟು ಪ್ರೀತಿಸುತ್ತಾನೆಂದು ತೋರಿಸುತ್ತವೆ. ಅತಿ ಬೇಗನೆ ಮಾನವಕುಲಕ್ಕಾಗಿ ಅವನು ಮಾಡಲಿರುವ ವಿಸ್ಮಯಕಾರಿ ವಿಷಯಗಳು ಯಾವುವು ಎಂದೂ ತೋರಿಸುತ್ತವೆ.

3. ಈ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?

 3 ಯೇಸು ಭೂಮಿಗೆ ಬಂದಾಗ “ದೇವರ ರಾಜ್ಯದ ಸುವಾರ್ತೆಯನ್ನು” ಸಾರಿದನು. (ಲೂಕ 4:43) ಈ ರಾಜ್ಯವು ತನ್ನ ತಂದೆಯ ನಾಮವನ್ನು ಪವಿತ್ರೀಕರಿಸಲಿದೆ ಮತ್ತು ಮಾನವಕುಲದ ಸಮಸ್ಯೆಗಳನ್ನೆಲ್ಲಾ ನಿತ್ಯಕ್ಕೂ ಬಗೆಹರಿಸಲಿದೆ ಎಂದು ಅವನಿಗೆ ಗೊತ್ತಿತ್ತು. ಯೇಸು ಸಾರುವ ಕೆಲಸದ ಜೊತೆಗೆ ಅನೇಕ ಅದ್ಭುತಗಳನ್ನೂ ಮಾಡಿದನು. ಈ ಅದ್ಭುತಗಳು ಎಲ್ಲಾ ಜನರ ಕಡೆಗೆ ಅವನಿಗಿದ್ದ ಚಿಂತೆಯನ್ನು ತೋರಿಸಿಕೊಟ್ಟವು. ಇದಕ್ಕೆ ನಾವು ಯಾಕೆ ಗಮನಕೊಡಬೇಕು? ಏಕೆಂದರೆ ಯೇಸು ಏನು ಮಾಡಿದನೋ ಅದು ನಮಗೆ ಭವಿಷ್ಯಕ್ಕೆ ನಿರೀಕ್ಷೆ ಹಾಗೂ ಭರವಸೆಯನ್ನು ಕೊಡುತ್ತದೆ. ಈಗ ಯೇಸುವಿನ ಅದ್ಭುತಗಳಲ್ಲಿ ನಾಲ್ಕನ್ನು ಚರ್ಚಿಸೋಣ.

“ಗುಣಪಡಿಸಲಿಕ್ಕಾಗಿ ಯೆಹೋವನ ಶಕ್ತಿಯು ಅವನಲ್ಲಿತ್ತು”

4. ಕುಷ್ಠರೋಗವಿದ್ದ ಒಬ್ಬ ಮನುಷ್ಯನನ್ನು ಯೇಸು ಭೇಟಿಯಾದಾಗ ಏನಾಯಿತು?

4 ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಗಲಿಲಾಯ ಎಂಬ ಸ್ಥಳಕ್ಕೆ ಹೋದನು. ಅಲ್ಲಿನ ಒಂದು ನಗರದಲ್ಲಿ ಕುಷ್ಠ ರೋಗವಿದ್ದ ವ್ಯಕ್ತಿ ಯೇಸುವಿನ ಬಳಿ ಬಂದ. (ಮಾರ್ಕ 1:39, 40) ಅವನಲ್ಲಿ ಈ ಭಯಂಕರ ರೋಗ ಎಷ್ಟರ ಮಟ್ಟಿಗೆ ಹರಡಿತ್ತೆಂದರೆ ವೈದ್ಯನಾದ ಲೂಕನು ಅವನನ್ನು “ಕುಷ್ಠರೋಗದಿಂದ ತುಂಬಿದ್ದ”ವನು ಎಂದು ತನ್ನ ಪುಸ್ತಕದಲ್ಲಿ ವರ್ಣಿಸಿದ್ದಾನೆ. (ಲೂಕ 5:12) ಈ ಕುಷ್ಠರೋಗಿ ಯೇಸುವನ್ನು ನೋಡಿ “ಅಧೋಮುಖವಾಗಿಬಿದ್ದು, ‘ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ’” ಎಂದು ಬೇಡಿಕೊಂಡನು. ಯೇಸುವಿಗೆ ಗುಣಪಡಿಸುವ ಶಕ್ತಿಯಿದೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಗುಣಪಡಿಸಲು ಯೇಸುವಿಗೆ ಮನಸ್ಸಿತ್ತಾ ಎಂದು ಅವನಿಗೆ ತಿಳಿಯಬೇಕಿತ್ತು. ಏಕೆ? ಕುಷ್ಠರೋಗಿಗಳನ್ನು ಕೀಳಾಗಿ ನೋಡುತ್ತಿದ್ದ ಫರಿಸಾಯರ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಯೇಸು ಅವನ ಬಗ್ಗೆ ಏನು ಯೋಚಿಸುತ್ತಿದ್ದ? ದೇಹವೆಲ್ಲಾ ಬಹುಶಃ ತುಂಬ ವಿಕಾರವಾಗಿದ್ದ ಈ ಮನುಷ್ಯನೊಟ್ಟಿಗೆ ಹೇಗೆ ನಡೆದುಕೊಳ್ಳುವನು? ನೀವಲ್ಲಿ ಇರುತ್ತಿದ್ದರೆ ಏನು ಮಾಡುತ್ತಿದ್ದಿರಿ?

5. ಯೇಸು ಕುಷ್ಠರೋಗಿಯನ್ನು ಗುಣಪಡಿಸಿದ್ದೇಕೆ?

5 ಈ ರೋಗವಿದ್ದ ವ್ಯಕ್ತಿಯು, ಮೋಶೆಯ ಧರ್ಮಶಾಸ್ತ್ರ ಹೇಳುವಂತೆ ಜನರ ಮಧ್ಯೆ ಇದ್ದಾಗ ತಾನು “ಅಶುದ್ಧನು ಅಶುದ್ಧನು” ಎಂದು ಕೂಗಿಕೊಳ್ಳುತ್ತಾ ಇರಲಿಲ್ಲ. (ಯಾಜ. 13:43-46) ಹಾಗಿದ್ದರೂ ಯೇಸುವಿಗೆ ಕೋಪ ಬರಲಿಲ್ಲ. ಆ ವ್ಯಕ್ತಿಯ ಬಗ್ಗೆ ಅವನಿಗೆ ಚಿಂತೆಯಿತ್ತು, ಸಹಾಯ ಮಾಡಬೇಕೆಂಬ ಮನಸ್ಸಿತ್ತು. ಯೇಸು ಏನು ಯೋಚನೆ ಮಾಡುತ್ತಿದ್ದನೆಂದು ನಮಗೆ ನಿಖರವಾಗಿ ಗೊತ್ತಿಲ್ಲವಾದರೂ ಅವನಲ್ಲಿ ಎಂಥ ಭಾವನೆ ಮೂಡಿತೆಂದು ನಮಗೆ ಗೊತ್ತು. ಆ ವ್ಯಕ್ತಿಯ ಮೇಲೆ ಯೇಸುವಿಗೆ ಎಷ್ಟು ಕನಿಕರ ಹುಟ್ಟಿತೆಂದರೆ ಅವನೊಂದು ಅದ್ಭುತ ನಡೆಸಿ ವಾಸಿ ಮಾಡಿದನು. ಬೇರಾರೂ ಮಾಡದ ಒಂದು ಕೆಲಸವನ್ನು ಯೇಸು ಮಾಡಿದನು. ಏನದು? ಆ ಮನುಷ್ಯನನ್ನು ಮುಟ್ಟಿದನು. ಕರುಣೆ ಮತ್ತು ದೃಢವಿಶ್ವಾಸದಿಂದ ಯೇಸು ಹೀಗಂದನು: “ನನಗೆ ಮನಸ್ಸುಂಟು. ಶುದ್ಧನಾಗು.” ಆಗ “ಅವನ ಕುಷ್ಠವು ವಾಸಿಯಾಯಿತು.” (ಲೂಕ 5:13) ಯೇಸು ಈ ಅದ್ಭುತವನ್ನು ಮಾಡಲು ಮತ್ತು ಆತನು ಜನರನ್ನು ಎಷ್ಟು ಪ್ರೀತಿಸುತ್ತಾನೆಂದು ತೋರಿಸಲು ಶಕ್ತಿಯನ್ನು ಕೊಟ್ಟದ್ದು ಯೆಹೋವನೇ ಎಂದು ಸ್ಪಷ್ಟವಾಗುತ್ತದೆ.—ಲೂಕ 5:17.

6. (ಎ) ಯೇಸು ಮಾಡಿದ ಅದ್ಭುತಗಳಲ್ಲಿ ಗಮನ ಸೆಳೆಯುವ ವಿಷಯ ಯಾವುದು? (ಬಿ) ಅವು ಏನನ್ನು ತೋರಿಸುತ್ತವೆ?

6 ದೇವರ ಶಕ್ತಿಯಿಂದ ಅನೇಕ ವಿಸ್ಮಯಕಾರಿ ಅದ್ಭುತಗಳನ್ನು ಮಾಡಲು ಯೇಸುವಿಗೆ ಸಾಧ್ಯವಾಯಿತು. ಕುಷ್ಠರೋಗ ಇರುವವರನ್ನು ಮಾತ್ರ ಗುಣಪಡಿಸಿದ್ದಲ್ಲ. ಬೇರೆ ಅನೇಕ ಕಾಯಿಲೆಗಳಿದ್ದವರನ್ನೂ ಅವನು ಗುಣಪಡಿಸಿದನು. “ಮೂಕರು ಮಾತಾಡುತ್ತಿರುವುದನ್ನೂ ಕುಂಟರು ನಡೆಯುತ್ತಿರುವುದನ್ನೂ ಕುರುಡರು ನೋಡುತ್ತಿರುವುದನ್ನೂ” ಕಂಡು ಜನರು ಆಶ್ಚರ್ಯಪಟ್ಟರೆಂದು ಬೈಬಲು ಹೇಳುತ್ತದೆ. (ಮತ್ತಾ. 15:31) ಯೇಸು ಜನರನ್ನು ಗುಣಪಡಿಸುತ್ತಿದ್ದಾಗ ಆರೋಗ್ಯವಂತ ವ್ಯಕ್ತಿಗಳು ದಾನಮಾಡಿದ ಅಂಗಗಳನ್ನು ಬಳಸಬೇಕಾಗಿರಲಿಲ್ಲ. ಕಾಯಿಲೆಯಿದ್ದ ಅಂಗಗಳನ್ನೇ ಗುಣಪಡಿಸುವ ಶಕ್ತಿ ಯೇಸುವಿಗಿತ್ತು. ಜನರನ್ನು ಕೂಡಲೆ ಗುಣಪಡಿಸಿದನು. ಕೆಲವೊಮ್ಮೆ ಅವರು ಅವನಿಂದ ತುಂಬ ದೂರವಿದ್ದರೂ ಅವರನ್ನು ವಾಸಿ ಮಾಡಿದನು. (ಯೋಹಾ. 4:46-54) ಈ ಆಶ್ಚರ್ಯಕರ ಉದಾಹರಣೆಗಳು ಏನನ್ನು ತೋರಿಸುತ್ತವೆ? ಎಲ್ಲಾ ರೋಗಗಳನ್ನು ಶಾಶ್ವತವಾಗಿ ತೆಗೆದುಹಾಕುವ ಶಕ್ತಿ ಹಾಗೂ ಆಸೆ ನಮ್ಮ ರಾಜನಾದ ಯೇಸು ಕ್ರಿಸ್ತನಿಗಿದೆ ಎಂದೇ. ಯೇಸು ಜನರೊಟ್ಟಿಗೆ ಹೇಗೆ ನಡೆದುಕೊಂಡ ಎಂಬುದನ್ನು ನಾವು ತಿಳಿದುಕೊಂಡಾಗ  ಹೊಸ ಲೋಕದಲ್ಲಿ “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ”ರುತ್ತಾನೆ ಎಂಬ ಭರವಸೆ ನಮ್ಮಲ್ಲಿ ಮೂಡುತ್ತದೆ. (ಕೀರ್ತ. 72:13) ಕಷ್ಟಪಡುತ್ತಿರುವವರೆಲ್ಲರನ್ನು ಯೇಸು ಆಗ ಗುಣಪಡಿಸುವನು. ಏಕೆಂದರೆ ಹಾಗೆ ಮಾಡಲು ಅವನಿಗೆ ನಿಜವಾಗಲೂ ಮನಸ್ಸಿದೆ.

“ಎದ್ದು ನಿನ್ನ ಮಂಚವನ್ನು ಎತ್ತಿಕೊಂಡು ನಡೆ”

7, 8. ಕಾಯಿಲೆಬಿದ್ದಿದ್ದ ವ್ಯಕ್ತಿಯನ್ನು ಬೇತ್ಸಥಾ ಕೊಳದ ಬಳಿ ಯೇಸು ಭೇಟಿಯಾಗುವ ಮುಂಚೆ ಏನಾಯಿತೆಂದು ವರ್ಣಿಸಿ.

7 ಕುಷ್ಠ ರೋಗಿಯನ್ನು ಗುಣಪಡಿಸಿದ ಕೆಲವು ತಿಂಗಳುಗಳ ನಂತರ ಯೇಸು ಗಲಿಲಾಯದಿಂದ ಯೂದಾಯಕ್ಕೆ ಪ್ರಯಾಣ ಮಾಡಿದನು. ಆಗಲೂ ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು. ಯೇಸುವಿನ ಸಂದೇಶವನ್ನು ಸಾವಿರಾರು ಮಂದಿ ಕೇಳಿರಬಹುದು. ಅವರ ಮೇಲೆ ಅವನಿಗಿದ್ದ ಪ್ರೀತಿ ಅವರ ಮನಮುಟ್ಟಿರಬಹುದು. ಬಡವರನ್ನು ಮತ್ತು ದಬ್ಬಾಳಿಕೆಗೆ ಗುರಿಯಾದವರನ್ನು ಸಂತೈಸಲು ಮತ್ತು ಅವರಿಗೆ ನಿರೀಕ್ಷೆ ಕೊಡಲು ಅವನಿಗೆ ನಿಜವಾಗಿಯೂ ಮನಸ್ಸಿತ್ತು.—ಯೆಶಾ. 61:1, 2; ಲೂಕ 4:18-21.

8 ನೈಸಾನ್‌ ತಿಂಗಳಿನಲ್ಲಿ ಪಸ್ಕಹಬ್ಬವನ್ನು ಆಚರಿಸಲು ಯೇಸು ಯೆರೂಸಲೇಮಿಗೆ ಪ್ರಯಾಣ ಮಾಡಿದನು. ಆ ವಿಶೇಷ ಹಬ್ಬಕ್ಕೆಂದು ಬಂದಿದ್ದ ಜನರಿಂದ ನಗರ ಗಿಜಿಗುಡುತ್ತಿತ್ತು. ಆಲಯದ ಉತ್ತರ ದಿಕ್ಕಿನಲ್ಲಿ ಬೇತ್ಸಥಾ ಎಂಬ ಕೊಳವಿತ್ತು. ಈ ಕೊಳದ ಬಳಿಯೇ ಯೇಸು ಒಬ್ಬ ಮನುಷ್ಯನನ್ನು ನೋಡಿದನು. ಅವನಿಗೆ ನಡೆಯಲಿಕ್ಕೆ ಆಗುತ್ತಿರಲಿಲ್ಲ.

9, 10. (ಎ) ಜನರು ಏಕೆ ಬೇತ್ಸಥಾ ಕೊಳಕ್ಕೆ ಹೋಗುತ್ತಿದ್ದರು? (ಬಿ) ಯೇಸು ಕೊಳದ ಹತ್ತಿರ ಏನು ಮಾಡಿದನು? (ಸಿ) ಇದು ನಮಗೇನು ಕಲಿಸುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

9 ಬೇತ್ಸಥಾಗೆ ರೋಗಿಗಳು ಗುಂಪುಗುಂಪಾಗಿ ಹೋಗುತ್ತಿದ್ದರು. ಏಕೆ? ಏಕೆಂದರೆ ನೀರು ಚಲಿಸಿದಾಗ ಕೊಳದೊಳಗೆ ಇಳಿದರೆ ಅದ್ಭುತಕರವಾಗಿ ವಾಸಿಯಾಗುತ್ತದೆಂದು ನಂಬುತ್ತಿದ್ದರು. ಗುಣವಾಗಲು ಹಾತೊರೆಯುತ್ತಿದ್ದ, ಚಿಂತೆಯಿಂದಿದ್ದ, ನಿರೀಕ್ಷಾಹೀನರಾಗಿದ್ದ ತುಂಬ ಜನರು ಅಲ್ಲಿದ್ದರು. ಹಾಗಾಗಿ ಅಲ್ಲಿ ಎಷ್ಟು ಗಲಿಬಿಲಿ ಇದ್ದಿರಬಹುದೆಂದು ಸ್ವಲ್ಪ ಊಹಿಸಿ. ಯೇಸು ಪರಿಪೂರ್ಣ ವ್ಯಕ್ತಿಯಾಗಿದ್ದರೂ ಅಲ್ಲಿಗೆ ಹೋದದ್ದೇಕೆ? ಅವನಿಗೇನು ವಾಸಿಯಾಗುವ ಅಗತ್ಯ ಇರಲಿಲ್ಲವಲ್ಲಾ! ಅವನಲ್ಲಿಗೆ ಬಂದದ್ದು ಜನರ ಮೇಲಿನ ಪ್ರೀತಿಯಿಂದಲೇ. ತಾನು ಭೂಮಿಯಲ್ಲಿ ಜೀವಿಸಿದ್ದಕ್ಕಿಂತ ಹೆಚ್ಚು ವರ್ಷಗಳಿಂದ ಕಾಯಿಲೆ ಬಿದ್ದಿದ್ದ ಒಬ್ಬ ವ್ಯಕ್ತಿಯನ್ನು ಭೇಟಿಯಾದದ್ದು ಇಲ್ಲೇ.—ಯೋಹಾನ 5:5-9 ಓದಿ.

10 ಪುನಃ ನಡೆಯಲು ಮನಸ್ಸಿದೆಯಾ ಎಂದು ಯೇಸು ಆ ವ್ಯಕ್ತಿಗೆ ಕೇಳಿದನು. ಮನಸ್ಸಿದೆ ಆದರೆ ಕೊಳಕ್ಕೆ ಕರೆದುಕೊಂಡು ಹೋಗಲು ಯಾರೂ ಇಲ್ಲವೆಂದು ಯೇಸುವಿಗೆ ಹೇಳಿದಾಗ ಆ ವ್ಯಕ್ತಿಗೆ ಆಗುತ್ತಿದ್ದ ದುಃಖವನ್ನು ಸ್ವಲ್ಪ ಯೋಚಿಸಿ. ನಂತರ ಯೇಸು ಅವನಿಗೆ ಅಸಾಧ್ಯವಾದ ಕೆಲಸ, ಅಂದರೆ ಅವನ ಮಂಚವನ್ನು ಎತ್ತಿಕೊಂಡು ನಡೆಯಲಿಕ್ಕೆ ಹೇಳಿದನು. ಹೇಳಿದಂತೆಯೇ ಆ ವ್ಯಕ್ತಿ ತನ್ನ ಮಂಚವನ್ನು ಎತ್ತಿಕೊಂಡು ನಡೆಯಲು ಶುರುಮಾಡಿದನು!! ಯೇಸು ಹೊಸ ಲೋಕದಲ್ಲಿ ಏನು ಮಾಡಲಿದ್ದಾನೆಂಬುದನ್ನು ಈ ಅದ್ಭುತವು ರುಜುಪಡಿಸುತ್ತದೆ. ಜನರ ಮೇಲೆ ಯೇಸುವಿಗಿದ್ದ ಗಾಢ ಪ್ರೀತಿಯನ್ನು ಸಹ ತೋರಿಸುತ್ತದೆ. ಸಹಾಯದ ಅಗತ್ಯವಿದ್ದವರನ್ನು ಯೇಸು ಹುಡುಕಿದನು. ಈ ಲೋಕದಲ್ಲಿ ನಡೆಯುತ್ತಿರುವ ಭಯಂಕರ ಸಂಗತಿಗಳ ಕಾರಣ ಖಿನ್ನರಾಗಿರುವವರನ್ನು ಹುಡುಕುವುದಕ್ಕೆ ಅವನ ಮಾದರಿ ನಮ್ಮನ್ನು ಉತ್ತೇಜಿಸಬೇಕು.

“ನನ್ನ ಮೇಲಂಗಿಯನ್ನು ಮುಟ್ಟಿದವರು ಯಾರು?”

11. ರೋಗದಿಂದ ನರಳುವವರ ಮೇಲೆ ಯೇಸುವಿಗೆ ಪ್ರೀತಿಯಿತ್ತೆಂದು ಮಾರ್ಕ 5:25-34 ಹೇಗೆ ತೋರಿಸುತ್ತದೆ?

11 ಮಾರ್ಕ 5:25-34 ಓದಿ. ಒಬ್ಬ ಸ್ತ್ರೀ 12 ವರ್ಷಗಳಿಂದ ಒಂದು ರೋಗದಿಂದ ನರಳುತ್ತಿದ್ದಳು. ಮುಜುಗರ ತರುವ ಈ ರೋಗ ಅವಳ ಜೀವನದ ಪ್ರತಿಯೊಂದು ಅಂಶವನ್ನು, ಆರಾಧನೆಯನ್ನು ಸಹ ಬಾಧಿಸಿತ್ತು. ತನ್ನ ರೋಗ ವಾಸಿಯಾಗಬೇಕೆಂದು ಅನೇಕ ವೈದ್ಯರನ್ನು ಭೇಟಿಯಾದಳು. ತನ್ನ ಹಣವನ್ನೆಲ್ಲಾ ಅದಕ್ಕಾಗಿ ಸುರಿದಳು. ಆದರೂ ಕಾಯಿಲೆ ಜಾಸ್ತಿಯಾಯಿತೇ ವಿನಃ ವಾಸಿಯಾಗಲಿಲ್ಲ. ಒಂದು ದಿನ ಇವಳು ಗುಣವಾಗಲು ಬೇರೊಂದು ಉಪಾಯ ಮಾಡಿದಳು. ಅವಳು ಜನರ ಮಧ್ಯೆ ನಡೆದುಕೊಂಡು ಹೋಗಿ ಯೇಸುವಿನ ಮೇಲಂಗಿಯನ್ನು ಮುಟ್ಟಿದಳು. (ಯಾಜ. 15:19, 25) ತನ್ನಿಂದ ಶಕ್ತಿಯು ಹೊರಟುಹೋದದ್ದನ್ನು ಯೇಸು ಗ್ರಹಿಸಿದಾಗ, ತನ್ನನ್ನು ಮುಟ್ಟಿದವರು ಯಾರು ಎಂದು ಕೇಳಿದನು. ಆಗ “ಭಯದಿಂದ ನಡುಗುತ್ತಾ” ಸ್ತ್ರೀಯು  “ಅವನ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲ ಹೇಳಿದಳು.” ಯೆಹೋವನೇ ಸ್ತ್ರೀಯನ್ನು ಗುಣಪಡಿಸಿದ್ದಾನೆಂದು ಯೇಸುವಿಗೆ ಗೊತ್ತಿತ್ತು. ಹಾಗಾಗಿ ಅವನು ದಯೆಯಿಂದ ಹೀಗಂದನು: “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು.”

ನಮ್ಮ ಬಗ್ಗೆ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಚಿಂತೆಯಿದೆ ಎಂದು ಯೇಸು ತನ್ನ ಅದ್ಭುತಗಳ ಮೂಲಕ ಸಾಬೀತುಪಡಿಸಿದನು (ಪ್ಯಾರ 11, 12 ನೋಡಿ)

12. (ಎ) ಈಗ ಕಲಿತ ವಿಷಯಗಳನ್ನು ಮನಸ್ಸಿನಲ್ಲಿಟ್ಟು ಯೇಸುವನ್ನು ಹೇಗೆ ವರ್ಣಿಸುವಿರಾ? (ಬಿ) ಯೇಸು ನಮಗಾಗಿ ಯಾವ ಮಾದರಿಯನ್ನಿಟ್ಟನು?

12 ಜನರ ಮೇಲೆ, ವಿಶೇಷವಾಗಿ ರೋಗದಿಂದ ನರಳುವವರ ಮೇಲೆ ಯೇಸುವಿಗೆ ತುಂಬ ಪ್ರೀತಿಯಿತ್ತೆಂದು ತಿಳಿದಾಗ ಮನಸ್ಸು ಹಗುರವಾಗುತ್ತದೆ. ನಮ್ಮನ್ನು ಯಾರೂ ಪ್ರೀತಿಸುವುದಿಲ್ಲ, ನಾವು ಕೆಲಸಕ್ಕೆ ಬಾರದವರು ಎಂದು ಮನದಟ್ಟು ಮಾಡಿಸಲು ಕೈಮೀರಿ ಪ್ರಯತ್ನಿಸುವ ಸೈತಾನನಂತೆ ಅವನಿಲ್ಲ. ಯೇಸು ಮಾಡಿದ ಅದ್ಭುತಗಳು ಅವನಿಗೆ ನಮ್ಮ ಬಗ್ಗೆ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಚಿಂತೆಯಿದೆ ಎಂದು ಸಾಬೀತುಪಡಿಸುತ್ತವೆ. ಇಂಥ ಪ್ರೀತಿಯ ರಾಜ ಮತ್ತು ಮಹಾ ಯಾಜಕನು ಇರುವುದರಿಂದ ನಾವು ಆಭಾರಿಗಳಲ್ಲವೇ! (ಇಬ್ರಿ. 4:15) ತುಂಬ ಸಮಯದಿಂದ ಕಾಯಿಲೆ ಇರುವವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಕಷ್ಟವಾಗಬಹುದು. ವಿಶೇಷವಾಗಿ ನಮಗೆ ಅಂಥ ಕಾಯಿಲೆ ಇಲ್ಲದಿದ್ದರೆ ಇನ್ನೂ ಕಷ್ಟವಾಗುತ್ತದೆ. ಆದರೆ ಯೇಸುವಿನ ಬಗ್ಗೆ ಸ್ವಲ್ಪ ಯೋಚಿಸಿ. ಅವನಿಗೆ ಯಾವತ್ತೂ ಯಾವ ಕಾಯಿಲೆಯೂ ಬರಲಿಲ್ಲವಾದರೂ ಕಾಯಿಲೆ ಇದ್ದವರ ಕಡೆಗೆ ಅನುಕಂಪವಿತ್ತು. ಯೇಸುವಿನ ಈ ಪ್ರೀತಿಯ ಮಾದರಿಯನ್ನು ಅನುಕರಿಸಲು ನಮ್ಮ ಕೈಲಾದದೆಲ್ಲವನ್ನು ಮಾಡೋಣ.—1 ಪೇತ್ರ 3:8.

“ಯೇಸು ಕಣ್ಣೀರು ಸುರಿಸಿದನು”

13. ಲಾಜರನ ಪುನರುತ್ಥಾನ ಯೇಸುವಿನ ಕುರಿತು ಏನನ್ನು ತಿಳಿಸುತ್ತದೆ?

13 ಬೇರೆಯವರ ನೋವು ನೋಡಿ ಯೇಸುವಿನ ಮನಸ್ಸು ಕರಗಿತು. ಉದಾಹರಣೆಗೆ ತನ್ನ ಗೆಳೆಯ ಲಾಜರನು ಸತ್ತಾಗ ಅವನ ಕುಟುಂಬದ ಮತ್ತು ಗೆಳೆಯರ ನೋವನ್ನು ಕಂಡು ಯೇಸು “ಆಂತರ್ಯದಲ್ಲಿ ನೊಂದುಕೊಂಡು ಕಳವಳಪಟ್ಟನು.” (ಯೋಹಾನ 11:33-36 ಓದಿ.) ಲಾಜರನನ್ನು ತಾನು ಪುನರುತ್ಥಾನ  ಮಾಡುವೆನೆಂದು ಗೊತ್ತಿದ್ದರೂ ಅವನು ಅತ್ತನು. ಯೇಸು ಬೇರೆಯವರ ಮುಂದೆ ತನ್ನ ಭಾವನೆಗಳನ್ನು ತೋರಿಸಲು ಹೆದರಲಿಲ್ಲ. ಯೇಸು ಲಾಜರನನ್ನು ಮತ್ತು ಅವನ ಕುಟುಂಬವನ್ನು ಎಷ್ಟು ಪ್ರೀತಿಸಿದನೆಂದರೆ ದೇವರ ಶಕ್ತಿಯನ್ನು ಉಪಯೋಗಿಸಿ ಲಾಜರನನ್ನು ಪುನಃ ಜೀವಕ್ಕೆ ತಂದನು!—ಯೋಹಾ. 11:43, 44.

14, 15. (ಎ) ಮಾನವಕುಲಕ್ಕಿರುವ ಕಷ್ಟನೋವನ್ನು ತೆಗೆದುಹಾಕಲು ಯೆಹೋವನಿಗೆ ಮನಸ್ಸಿದೆ ಎಂದು ಯಾವುದು ತೋರಿಸುತ್ತದೆ? (ಬಿ) “ಸ್ಮರಣೆಯ ಸಮಾಧಿ” ಎಂಬ ಪದಗಳಿಂದ ನಾವೇನು ಕಲಿಯುತ್ತೇವೆ?

14 ಯೇಸು ತನ್ನ ತಂದೆಯಾದ ಯೆಹೋವನಂತೆಯೇ ಇದ್ದಾನೆಂದು ಬೈಬಲ್ ವರ್ಣಿಸುತ್ತದೆ. (ಇಬ್ರಿ. 1:3) ಆದ್ದರಿಂದ ಯೇಸು ಮಾಡಿದ ಅದ್ಭುತಗಳು ರೋಗ, ನೋವು, ಮರಣವನ್ನು ತೆಗೆದುಹಾಕಲು ಯೆಹೋವನಿಗೂ ಮನಸ್ಸಿದೆಯೆಂದು ಸಾಬೀತುಪಡಿಸುತ್ತವೆ. ಬೇಗನೆ ಯೆಹೋವ ಮತ್ತು ಯೇಸು ಅನೇಕ ಜನರನ್ನು ಪುನಃ ಜೀವಕ್ಕೆ ತರಲಿದ್ದಾರೆ. “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ” ಪುನರುತ್ಥಾನ ಆಗುವ ಕಾಲ ಬರಲಿದೆಯೆಂದು ಯೇಸು ಹೇಳಿದನು.—ಯೋಹಾ. 5:28, 29.

15 ಯೇಸು ಇಲ್ಲಿ “ಸ್ಮರಣೆಯ ಸಮಾಧಿ” ಎಂದು ಹೇಳಿದ್ದು ಪುನರುತ್ಥಾನ ಮಾಡುವುದರಲ್ಲಿ ದೇವರ ನೆನಪಿನ ಶಕ್ತಿ ಒಳಗೂಡಿದೆ ಎಂದು ತೋರಿಸುತ್ತದೆ. ಸರ್ವಶಕ್ತ ದೇವರೂ ಇಡೀ ವಿಶ್ವದ ಸೃಷ್ಟಿಕರ್ತನೂ ಆಗಿರುವಾತನಿಗೆ ಮೃತಪಟ್ಟ ನಮ್ಮ ಪ್ರಿಯರ ಕುರಿತ ಒಂದೊಂದು ವಿವರವನ್ನು ನೆನಪಿಟ್ಟುಕೊಳ್ಳಲು ಸಾಧ್ಯ. ಅವರ ವ್ಯಕ್ತಿತ್ವವನ್ನು ಸಹ ನೆನಪಿಟ್ಟುಕೊಳ್ಳುತ್ತಾನೆ. (ಯೆಶಾ. 40:26) ಮೃತರನ್ನು ನೆನಪಿಡಲು ಸಾಧ್ಯ ಮಾತ್ರವಲ್ಲ ಹಾಗೆ ಮಾಡಲು ಆತನಿಗೆ ಮನಸ್ಸೂ ಇದೆ. ಬೈಬಲಿನಲ್ಲಿ ತಿಳಿಸಲಾಗಿರುವ ಪುನರುತ್ಥಾನಗಳು, ಹೊಸ ಲೋಕದಲ್ಲಿ ಏನಾಗಲಿದೆ ಎಂಬುದರ ಕುರಿತ ಅದ್ಭುತ ಉದಾಹರಣೆಗಳಾಗಿವೆ.

ಯೇಸುವಿನ ಅದ್ಭುತಗಳಿಂದ ನಾವೇನು ಕಲಿಯುತ್ತೇವೆ?

16. ದೇವರ ಅನೇಕ ಸೇವಕರಿಗೆ ಯಾವ ಅವಕಾಶ ಸಿಗಲಿದೆ?

16 ನಾವು ನಂಬಿಗಸ್ತರಾಗಿದ್ದರೆ ಅತ್ಯಂತ ದೊಡ್ಡ ಅದ್ಭುತಗಳಲ್ಲಿ ಒಂದನ್ನು ಅನುಭವಿಸುವ ಅವಕಾಶ ನಮಗಿರಬಹುದು. ಅದು ಮಹಾ ಸಂಕಟವನ್ನು ಪಾರಾಗುವುದೇ! ಅರ್ಮಗೆದೋನ್‌ ನಂತರ ಇನ್ನು ಅನೇಕ ಅದ್ಭುತಗಳನ್ನು ನೋಡಲಿದ್ದೇವೆ. ಆ ಸಮಯದಲ್ಲಿ ಎಲ್ಲಾ ಮನುಷ್ಯರಿಗೆ ಪರಿಪೂರ್ಣ ಆರೋಗ್ಯ ಸಿಗಲಿದೆ. (ಯೆಶಾ. 33:24; 35:5, 6; ಪ್ರಕ. 21:4) ಕನ್ನಡಿ, ಕೋಲು, ಕಂಕುಳುಗೋಲು, ಗಾಲಿಕುರ್ಚಿ, ಶ್ರವಣಸಾಧನ ಇವೆಲ್ಲಾ ಇಲ್ಲದಿರುವ ಕಾಲದ ಬಗ್ಗೆ ಯೋಚಿಸಿ. ಅರ್ಮಗೆದೋನ್‍ನನ್ನು ಪಾರಾಗುವವರಿಗೆ ಶಕ್ತಿ ಮತ್ತು ಆರೋಗ್ಯ ಬೇಕು ಎಂದು ಯೆಹೋವನಿಗೆ ಗೊತ್ತು. ಯಾಕೆಂದರೆ ಅಲ್ಲಿ ಅವರಿಗೆ ಮಾಡಲು ತುಂಬ ಕೆಲಸವಿರುತ್ತದೆ. ನಮ್ಮ ಸುಂದರ ಭೂಮಿಯನ್ನು ಪರದೈಸ್‌ ಆಗಿ ಮಾಡುವವರು ಇವರೇ.—ಕೀರ್ತ. 115:16.

17, 18. (ಎ) ಯೇಸು ಏಕೆ ಅದ್ಭುತಗಳನ್ನು ಮಾಡಿದನು? (ಬಿ) ದೇವರ ಹೊಸ ಲೋಕದಲ್ಲಿರಬೇಕಾದರೆ ಸಾಧ್ಯವಿರುವ ಎಲ್ಲವನ್ನು ನಾವೇಕೆ ಮಾಡಬೇಕು?

17 ಯೇಸು ಜನರನ್ನು ಹೇಗೆ ವಾಸಿಮಾಡಿದನೆಂದು “ಮಹಾ ಸಮೂಹ”ದವರು ಇಂದು ಓದುವಾಗ ಅವರಿಗೆ ಪ್ರೋತ್ಸಾಹ ಸಿಗುತ್ತದೆ. (ಪ್ರಕ. 7:9) ಭವಿಷ್ಯದಲ್ಲಿ ಸಂಪೂರ್ಣವಾಗಿ ಗುಣವಾಗಲಿದ್ದೇವೆಂಬ ನಮ್ಮ ನಿರೀಕ್ಷೆಯನ್ನು ಆ ಅದ್ಭುತಗಳೆಲ್ಲಾ ಬಲಗೊಳಿಸುತ್ತವೆ. ದೇವರ ಜ್ಯೇಷ್ಠಪುತ್ರನಿಗೆ ಮಾನವಕುಲದ ಮೇಲೆ ಎಷ್ಟು ಪ್ರೀತಿಯಿದೆಯೆಂದೂ ಅವು ತೋರಿಸಿಕೊಡುತ್ತವೆ. (ಯೋಹಾ. 10:11; 15:12, 13) ಆತನಿಗಿದ್ದ ಅನುಕಂಪವು ಯೆಹೋವನಿಗೆ ತನ್ನ ಒಬ್ಬೊಬ್ಬ ಸೇವಕರ ಮೇಲಿರುವ ಗಾಢ ಪ್ರೀತಿಯನ್ನು ರುಜುಪಡಿಸುತ್ತದೆ.—ಯೋಹಾ. 5:19.

18 ಲೋಕದಲ್ಲಿಂದು ನರಳಾಟ, ನೋವು, ಮರಣ ತುಂಬಿಕೊಂಡಿದೆ. (ರೋಮ. 8:22) ಆದ್ದರಿಂದಲೇ ದೇವರ ರಾಜ್ಯ ನಮಗೆ ಬೇಕು. ಅಲ್ಲಿ ದೇವರು ವಾಗ್ದಾನ ಮಾಡಿದ ಹಾಗೆ ಎಲ್ಲರಿಗೂ ಪರಿಪೂರ್ಣ ಆರೋಗ್ಯ ಇರಲಿದೆ. ‘ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನಾವು ಹೊರಟು ಬಂದು ಕುಣಿದಾಡುವೆವು’ ಎಂದು ಮಲಾಕಿಯ 4:2 ನಮಗೆ ನಿರೀಕ್ಷೆಯನ್ನು ಕೊಡುತ್ತದೆ. ವಾಸಿಯಾಗಿದ್ದರಿಂದ ಮತ್ತು ಅಪರಿಪೂರ್ಣತೆಯಿಂದ ಬಿಡುಗಡೆ ಸಿಕ್ಕಿದ್ದರಿಂದ ಸಂಭ್ರಮಿಸಲಿದ್ದೇವೆ. ಯೆಹೋವನಿಗಾಗಿ ಕೃತಜ್ಞತೆ ಮತ್ತು ಆತನ ವಾಗ್ದಾನಗಳ ಮೇಲಿನ ನಂಬಿಕೆಯು ಹೊಸ ಲೋಕದಲ್ಲಿ ಇರಲಿಕ್ಕೆ ಏನೆಲ್ಲಾ ಮಾಡಬೇಕೊ ಅದನ್ನೆಲ್ಲಾ ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಯೇಸು ಮಾಡಿದ ಅದ್ಭುತಗಳು ಅವನ ಆಳ್ವಿಕೆಯಡಿ ಮಾನವಕುಲಕ್ಕೆ ಸಿಗಲಿರುವ ಶಾಶ್ವತ ಪರಿಹಾರಕ್ಕೆ ಉದಾಹರಣೆಗಳಾಗಿವೆ. ಇದನ್ನು ತಿಳಿಯುವುದು ನಮಗೆಷ್ಟು ಪ್ರೋತ್ಸಾಹ ಕೊಡುತ್ತದಲ್ಲವೇ!