ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಜೂನ್ 2015

ಕ್ರಿಸ್ತನು—ದೇವರ ಶಕ್ತಿ

ಕ್ರಿಸ್ತನು—ದೇವರ ಶಕ್ತಿ

“ಕ್ರಿಸ್ತನು ದೇವರ ಶಕ್ತಿ . . . ಆಗಿದ್ದಾನೆ.”—1 ಕೊರಿಂ. 1:24.

1. “ಕ್ರಿಸ್ತನು ದೇವರ ಶಕ್ತಿ” ಎಂದು ಪೌಲನು ಹೇಳಿದ್ದೇಕೆ?

ಯೆಹೋವನು ವಿಸ್ಮಯಕಾರಿ ವಿಧಾನಗಳಲ್ಲಿ ಯೇಸು ಕ್ರಿಸ್ತನ ಮೂಲಕ ತನ್ನ ಶಕ್ತಿಯನ್ನು ತೋರಿಸಿದನು. ಭೂಮಿಯಲ್ಲಿದ್ದಾಗ ಯೇಸು ಅದ್ಭುತಗಳನ್ನು ಮಾಡಿದನು. ಅವುಗಳಲ್ಲಿ ಕೆಲವೊಂದನ್ನು ನಾವು ಬೈಬಲಿನಲ್ಲಿ ಓದಬಹುದು. ಇವು ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. (ಮತ್ತಾ. 9:35; ಲೂಕ 9:11) ಯೆಹೋವನು ಯೇಸುವಿಗೆ ತುಂಬ ಶಕ್ತಿಯನ್ನು ಕೊಟ್ಟನು. ಆದ್ದರಿಂದಲೇ ಅಪೊಸ್ತಲ ಪೌಲನು ಹೀಗಂದನು: “ಕ್ರಿಸ್ತನು ದೇವರ ಶಕ್ತಿ . . . ಆಗಿದ್ದಾನೆ.” (1 ಕೊರಿಂ. 1:24) ಆದರೆ ಯೇಸು ಮಾಡಿದ ಆ ಅದ್ಭುತಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

2. ಯೇಸುವಿನ ಅದ್ಭುತಗಳು ನಮಗೇನು ಕಲಿಸುತ್ತವೆ?

2 ಯೇಸು ‘ಆಶ್ಚರ್ಯಕಾರ್ಯಗಳನ್ನು’ ಅಂದರೆ ಅದ್ಭುತಗಳನ್ನು ಮಾಡಿದ್ದನೆಂದು ಅಪೊಸ್ತಲ ಪೇತ್ರ ಹೇಳಿದನು. (ಅ. ಕಾ. 2:22) ಆ ಅದ್ಭುತಗಳು ನಮಗೇನು ಕಲಿಸುತ್ತವೆ? ಯೇಸು ತನ್ನ ಸಾವಿರ ವರ್ಷದ ಆಳ್ವಿಕೆಯಲ್ಲಿ ಏನು ಮಾಡಲಿದ್ದಾನೆಂದು ಅವು ತೋರಿಸುತ್ತವೆ. ಆಗ ಆತನು ಭೂಮಿಯಲ್ಲಿರುವ ಎಲ್ಲ ಮಾನವರಿಗೂ ಉಪಯುಕ್ತವಾಗುವ ಹೆಚ್ಚು ಮಹತ್ತಾದ ಅದ್ಭುತಗಳನ್ನು ಮಾಡುವನು. ಈ ಅದ್ಭುತಗಳು ನಮಗೆ ಆತನ ಮತ್ತು ಆತನ ತಂದೆಯ ಗುಣಗಳ ಬಗ್ಗೆ ಬಹಳಷ್ಟನ್ನು ಅರ್ಥಮಾಡಿಕೊಳ್ಳಲೂ ಸಹಾಯಮಾಡುತ್ತವೆ. ಈ ಲೇಖನದಲ್ಲಿ ಯೇಸುವಿನ ಮೂರು ಅದ್ಭುತಗಳ ಕುರಿತು ಚರ್ಚಿಸೋಣ. ಅವು ಈಗ ಮತ್ತು ಭವಿಷ್ಯದಲ್ಲೂ ನಮ್ಮ ಮೇಲೆ ಹೇಗೆ ಪರಿಣಾಮ ಬೀರುವವೆಂದು ನೋಡೋಣ.

 ಧಾರಾಳತನವನ್ನು ಕಲಿಸುವ ಅದ್ಭುತ

3. (ಎ) ಯೇಸು ತನ್ನ ಮೊದಲ ಅದ್ಭುತವನ್ನು ಮಾಡಿದ್ದೇಕೆ? (ಬಿ) ಯೇಸು ಕಾನಾದಲ್ಲಿ ಧಾರಾಳತನ ಹೇಗೆ ತೋರಿಸಿದನು?

3 ಯೇಸು ತನ್ನ ಮೊದಲ ಅದ್ಭುತವನ್ನು ಕಾನಾ ಎಂಬ ಊರಿನಲ್ಲಿ ನಡೆದ ಮದುವೆಯಲ್ಲಿ ಮಾಡಿದನು. ಆ ಮದುವೆಯಲ್ಲಿ ಅತಿಥಿಗಳಿಗಾಗಿದ್ದ ದ್ರಾಕ್ಷಾಮದ್ಯ ಮುಗಿದುಹೋಯಿತು. ಕಾರಣ ನಮಗೆ ಗೊತ್ತಿಲ್ಲ. ಆದರೆ ಆ ನವದಂಪತಿಗೆ ಖಂಡಿತವಾಗಿ ತುಂಬ ಮುಜುಗರ ಆಗಿರಬಹುದು. ಏಕೆಂದರೆ ಬಂದ ಅತಿಥಿಗಳ ಸತ್ಕಾರ ಮಾಡುವುದು ಅವರ ಕರ್ತವ್ಯವಾಗಿತ್ತು. ಅಲ್ಲಿದ್ದ ಅತಿಥಿಗಳಲ್ಲಿ ಯೇಸುವಿನ ತಾಯಿ ಮರಿಯಳೂ ಒಬ್ಬಳು. ಅವಳು ಯೇಸುವಿನ ಬಳಿ ಬಂದು ಸಹಾಯಮಾಡಲು ಹೇಳಿದಳು. ಯಾಕೆ? ಆತನಿಗೆ ಹಾಗೆ ಮಾಡುವ ಶಕ್ತಿಯಿದೆಯೆಂದು ನಂಬಿದ್ದರಿಂದಲೊ? ತನ್ನ ಮಗನ ಬಗ್ಗೆ ಇದ್ದ ಎಲ್ಲ ಪ್ರವಾದನೆಗಳ ಕುರಿತು ಅವಳು ಧ್ಯಾನಿಸಿರಬೇಕು. ಆತನನ್ನು “ಮಹೋನ್ನತನ ಪುತ್ರನೆಂದು” ಕರೆಯಲಾಗುವುದೆಂದು ಆಕೆಗೆ ಗೊತ್ತಿತ್ತು. (ಲೂಕ 1:30-32; 2:52) ಒಂದಂತೂ ಸ್ಪಷ್ಟ. ಮರಿಯಳಿಗೂ ಯೇಸುವಿಗೂ ಆ ದಂಪತಿಗೆ ಸಹಾಯಮಾಡಲು ತುಂಬ ಮನಸ್ಸಿತ್ತು. ಆದ್ದರಿಂದ ಯೇಸು ಅದ್ಭುತಮಾಡಿ 380 ಲೀಟರಿನಷ್ಟು (100 ಗ್ಯಾಲನ್‌) ನೀರನ್ನು “ಅತ್ಯುತ್ತಮವಾದ ದ್ರಾಕ್ಷಾಮದ್ಯ”ವಾಗಿ ಮಾಡಿದನು. (ಯೋಹಾನ 2:3, 6-11 ಓದಿ.) ಆ ಅದ್ಭುತವನ್ನು ಮಾಡಲೇಬೇಕೆಂಬ ಹಂಗು ಯೇಸುವಿಗಿತ್ತಾ? ಇಲ್ಲ. ಆತನಿಗೆ ಜನರ ಬಗ್ಗೆ ಕಾಳಜಿ ಇತ್ತು. ಧಾರಾಳ ಮನಸ್ಸಿನ ತನ್ನ ತಂದೆಯನ್ನು ಅನುಕರಿಸುತ್ತಿದ್ದದರಿಂದ ಹಾಗೆ ಮಾಡಿದನು.

4, 5. (ಎ) ಯೇಸು ಮಾಡಿದ ಮೊದಲ ಅದ್ಭುತ ನಮಗೇನು ಕಲಿಸುತ್ತದೆ? (ಬಿ) ಕಾನಾದಲ್ಲಿ ನಡೆದ ಅದ್ಭುತ ನಮಗೆ ಭವಿಷ್ಯದ ಬಗ್ಗೆ ಏನನ್ನು ಕಲಿಸುತ್ತದೆ?

4 ಯೇಸು ಉತ್ತಮವಾದ ದ್ರಾಕ್ಷಾಮದ್ಯವನ್ನು ಅದ್ಭುತಕರ ರೀತಿಯಲ್ಲಿ ಒದಗಿಸಿದನು. ಆ ದೊಡ್ಡ ಗುಂಪಿಗೆ ಬೇಕಾದಷ್ಟನ್ನು ಕೊಟ್ಟನು. ಈ ಅದ್ಭುತ ಏನು ಕಲಿಸುತ್ತದೆಂದು ನಿಮಗೆ ಗೊತ್ತಾಯಿತಾ? ಯೆಹೋವ ಮತ್ತು ಯೇಸು ಜಿಪುಣರಲ್ಲ. ತುಂಬ ಧಾರಾಳ ಮನಸ್ಸಿನವರು. ಅವರು ಜನರ ಭಾವನೆಗಳಿಗೆ ಬೆಲೆಕೊಡುತ್ತಾರೆಂದು ಈ ಅದ್ಭುತ ಮನದಟ್ಟು ಮಾಡಿಸುತ್ತದೆ. ಹೊಸ ಲೋಕದಲ್ಲಿ ನಾವು ಭೂಮಿಯ ಯಾವುದೇ ಭಾಗದಲ್ಲಿ ಜೀವಿಸುತ್ತಿರಲಿ ಯೆಹೋವನು ತನ್ನ ಶಕ್ತಿಯನ್ನು ಬಳಸಿ ಬೇಕಾದಷ್ಟು ಆಹಾರ ಒದಗಿಸುವನೆಂದೂ ಅದು ತೋರಿಸುತ್ತದೆ.—ಯೆಶಾಯ 25:6 ಓದಿ.

5 ಸ್ವಲ್ಪ ಯೋಚಿಸಿ! ಬೇಗನೆ ಯೆಹೋವನು ನಮಗೆ ನಿಜವಾಗಿ ಅಗತ್ಯವಿರುವ ಎಲ್ಲವನ್ನೂ ಕೊಡಲಿದ್ದಾನೆ. ಪ್ರತಿಯೊಬ್ಬರಿಗೂ ಒಳ್ಳೇ ಮನೆ, ಪೌಷ್ಠಿಕ ಆಹಾರ ಇರುವುದು. ಪರದೈಸಿನಲ್ಲಿ ಯೆಹೋವನು ನಮಗೆ ಧಾರಾಳವಾಗಿ ಕೊಡಲಿರುವ ಒಳ್ಳೊಳ್ಳೆ ವಿಷಯಗಳ ಕುರಿತು ಯೋಚಿಸುವಾಗ ನಮ್ಮಲ್ಲಿ ಕೃತಜ್ಞತೆ ಉಕ್ಕಿಬರುತ್ತದೆ.

ನಮ್ಮ ಸಮಯವನ್ನು ಇತರರಿಗೆ ಧಾರಾಳವಾಗಿ ಕೊಡುವಾಗ ಯೇಸುವಿನ ಧಾರಾಳತನ ಕಲಿತಿದ್ದೇವೆಂದು ತೋರಿಸುತ್ತೇವೆ (ಪ್ಯಾರ 6 ನೋಡಿ)

6. (ಎ) ಯೇಸು ತನ್ನ ಶಕ್ತಿಯನ್ನು ಯಾವಾಗಲೂ ಹೇಗೆ ಬಳಸಿದನು? (ಬಿ) ನಾವಾತನನ್ನು ಹೇಗೆ ಅನುಕರಿಸಬಹುದು?

6 ಯೇಸು ಯಾವತ್ತೂ ತನ್ನ ಶಕ್ತಿಯನ್ನು ತನಗೋಸ್ಕರ ಬಳಸಲಿಲ್ಲ. ಪಿಶಾಚನು ಆತನನ್ನು ತಪ್ಪುಮಾಡಲು ಶೋಧಿಸಿದಾಗ ಏನಾಯಿತೆಂದು ಯೋಚಿಸಿ. ಕಲ್ಲುಗಳನ್ನು ರೊಟ್ಟಿಯಾಗಿ ಮಾಡುವಂತೆ ಸೈತಾನನು ಹೇಳಿದಾಗ ಯೇಸು ಅದನ್ನು ಮಾಡಲಿಲ್ಲ. ತನ್ನ ಶಕ್ತಿಯನ್ನು ಸ್ವಂತ ಪ್ರಯೋಜನಕ್ಕಾಗಿ ಬಳಸಲು ನಿರಾಕರಿಸಿದನು. (ಮತ್ತಾ. 4:2-4) ಆದರೆ ಬೇರೆಯವರಿಗೋಸ್ಕರ ತನ್ನ ಶಕ್ತಿಯನ್ನು ಬಳಸಲು ಯೇಸು ಹಿಂದೆಮುಂದೆ ನೋಡಲಿಲ್ಲ. ಆತನ ಈ ನಿಸ್ವಾರ್ಥ ಮನೋಭಾವವನ್ನು ನಾವು ಹೇಗೆ ಅನುಕರಿಸಬಹುದು? “ಕೊಡುವುದನ್ನು ರೂಢಿಮಾಡಿಕೊಳ್ಳಿರಿ” ಎಂದನು ಯೇಸು. (ಲೂಕ 6:38) ಇದನ್ನು ಹೇಗೆ ಮಾಡಬಲ್ಲೆವು? ಇತರರನ್ನು ನಮ್ಮ ಮನೆಗೆ ಒಂದು ಊಟಕ್ಕೆ ಕರೆಯುವ ಮೂಲಕ. ಕೂಟದ ನಂತರ ಒಬ್ಬರಿಗೆ ಸ್ವಲ್ಪ ಸಮಯ ಕೊಡುವ ಮೂಲಕ. ಉದಾಹರಣೆಗೆ ಸಹೋದರನೊಬ್ಬನು ತನ್ನ ಭಾಷಣವನ್ನು ಪ್ರ್ಯಾಕ್ಟಿಸ್‌ ಮಾಡುವಾಗ ಅವನಿಗೆ ಕಿವಿಗೊಡಬಹುದು.  ಅಥವಾ ಸೇವೆಯಲ್ಲಿ ಇತರರಿಗೆ ನೆರವನ್ನು ಮತ್ತು ತರಬೇತಿಯನ್ನು ಕೊಡುವ ಮೂಲಕ. ಹೀಗೆ ಸಾಧ್ಯವಿರುವಾಗಲೆಲ್ಲ ನಾವು ಇತರರಿಗೆ ಸಂತೋಷದಿಂದ ಸಹಾಯ ಮಾಡುವಾಗ ಯೇಸು ತೋರಿಸಿದ ಧಾರಾಳತನವನ್ನು ಅನುಕರಿಸುತ್ತೇವೆ.

“ಅವರೆಲ್ಲರೂ ಊಟಮಾಡಿ ತೃಪ್ತರಾದರು”

7. ಸೈತಾನನ ಲೋಕದಲ್ಲಿ ಯಾವಾಗಲೂ ಯಾವ ಸಮಸ್ಯೆ ಇದ್ದೇ ಇರುತ್ತದೆ?

7 ಬಡತನ ಎಂಬುದು ಹೊಸ ಸಂಗತಿಯೇನಲ್ಲ. ಯೆಹೋವನು ಇಸ್ರಾಯೇಲ್ಯರಿಗೆ “ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ” ಎಂದು ಹೇಳಿದ್ದನು. (ಧರ್ಮೋ. 15:11) ನೂರಾರು ವರ್ಷಗಳ ಬಳಿಕ ಯೇಸು ಸಹ, “ಬಡವರು ಯಾವಾಗಲೂ ನಿಮ್ಮ ಬಳಿ ಇರುತ್ತಾರೆ” ಎಂದನು. (ಮತ್ತಾ. 26:11) ಅಂದರೆ ಭೂಮಿ ಮೇಲೆ ಬಡ ಜನರು ಸದಾ ಇರುವರು ಎನ್ನುವುದು ಆತನ ಮಾತಿನ ಅರ್ಥವಾಗಿತ್ತಾ? ಇಲ್ಲ. ಸೈತಾನನ ಈ ಲೋಕ ಇರುವವರೆಗೂ ಬಡತನ ಇದ್ದೇ ಇರುತ್ತದೆ ಎನ್ನುವುದು ಆತನ ಮಾತಿನ ಅರ್ಥವಾಗಿತ್ತು. ಹೊಸ ಲೋಕದಲ್ಲಿ ನಾವು ಜೀವಿಸುವಾಗ ಪರಿಸ್ಥಿತಿ ಎಷ್ಟು ಭಿನ್ನವಾಗಿರಲಿದೆ! ಆಗ ಬಡತನವೇ ಇರುವುದಿಲ್ಲ. ಎಲ್ಲರಿಗೂ ಸಾಕಷ್ಟು ಆಹಾರವಿರುವುದು. ಎಲ್ಲರೂ ತೃಪ್ತರಾಗಿರುವರು!

8, 9. (ಎ) ಯೇಸು ಸಾವಿರಾರು ಜನರಿಗೆ ಆಹಾರವನ್ನು ಒದಗಿಸಿದ್ದೇಕೆ? (ಬಿ) ಈ ಅದ್ಭುತದ ಬಗ್ಗೆ ನಿಮಗೆ ಹೇಗನಿಸುತ್ತದೆ?

8 ಕೀರ್ತನೆಗಾರನು ಯೆಹೋವನ ಬಗ್ಗೆ ಹೀಗಂದನು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತ. 145:16) ಯೇಸು ಭೂಮಿ ಮೇಲಿದ್ದಾಗ ತನ್ನ ತಂದೆಯನ್ನು ಪರಿಪೂರ್ಣ ರೀತಿಯಲ್ಲಿ ಅನುಕರಿಸುತ್ತಾ, ಇತರರ ಅಗತ್ಯಗಳನ್ನು ಪೂರೈಸಿದನು. ತನಗೆ ಶಕ್ತಿಯಿದೆ ಎಂದು ಬರೀ ತೋರಿಸಲಿಕ್ಕಾಗಿ ಆತನಿದನ್ನು ಮಾಡಲಿಲ್ಲ. ಆತನಿಗೆ ಜನರ ಬಗ್ಗೆ ನಿಜವಾದ ಕಾಳಜಿಯಿತ್ತು. ಅದಕ್ಕೊಂದು ಉದಾಹರಣೆ ಮತ್ತಾಯ 14:14-21 (ಓದಿ)ರಲ್ಲಿದೆ. ಅದನ್ನು ಈಗ ಚರ್ಚಿಸೋಣ. ಜನರ ದೊಡ್ಡ ಗುಂಪೊಂದು ತಮ್ಮ ಊರುಗಳಿಂದ ಯೇಸುವನ್ನು ಕಾಲ್ನಡಿಗೆಯಲ್ಲಿ ಹಿಂಬಾಲಿಸಿಕೊಂಡು ಬಂದಿತ್ತು. (ಮತ್ತಾ. 14:13) ಸಾಯಂಕಾಲದಷ್ಟಕ್ಕೆ ಜನರಿಗೆ ಹಸಿವೆಯಾಗಿತ್ತು, ಸುಸ್ತಾಗಿದ್ದರು. ಅವರ ಬಗ್ಗೆ ಶಿಷ್ಯರಿಗೆ ಚಿಂತೆಹತ್ತಿತ್ತು. ಆದ್ದರಿಂದ ಜನರು ಹೋಗಿ ಆಹಾರವನ್ನು ಖರೀದಿಸುವಂತೆ ಕಳುಹಿಸಿಬಿಡಲು ಶಿಷ್ಯರು ಯೇಸುವಿಗೆ ಹೇಳಿದರು. ಈಗ ಯೇಸು ಏನು ಮಾಡುವನು?

9 ಐದು ರೊಟ್ಟಿ, ಎರಡು ಮೀನುಗಳಿಂದ ಯೇಸು ಸುಮಾರು 5,000 ಗಂಡಸರಿಗೆ ಮಾತ್ರವಲ್ಲ ಹೆಂಗಸರಿಗೂ ಮಕ್ಕಳಿಗೂ ಊಟಕೊಟ್ಟನು. ಯೇಸು ಈ ಅದ್ಭುತವನ್ನು ಮಾಡಿದ್ದೇಕೆ? ಏಕೆಂದರೆ ಆತನಿಗೆ ಜನರ ಮೇಲೆ ನಿಜವಾದ ಪ್ರೀತಿ ಕಾಳಜಿಯಿತ್ತು. ಯೇಸು ಅವರಿಗೆ ತುಂಬ ಆಹಾರ ಕೊಟ್ಟಿರಬೇಕು. ಏಕೆಂದರೆ “ಅವರೆಲ್ಲರೂ ಊಟಮಾಡಿ ತೃಪ್ತರಾದರು” ಎನ್ನುತ್ತದೆ ಬೈಬಲು. ಆ ಊಟವು, ದೂರದಲ್ಲಿದ್ದ ತಮ್ಮ ಮನೆಗಳಿಗೆ ಹಿಂದಿರುಗಲು ಬೇಕಾದ ಬಲವನ್ನು ಅವರಿಗೆ ಕೊಟ್ಟಿತು. (ಲೂಕ 9:10-17) ಎಲ್ಲರೂ ತಿಂದು ತೃಪ್ತರಾದ ಮೇಲೆ ಶಿಷ್ಯರು ಉಳಿದ ಆಹಾರವನ್ನು ಕೂಡಿಸಿದಾಗ ಅದು 12 ಬುಟ್ಟಿಯಷ್ಟಿತ್ತು!

10. ಭವಿಷ್ಯದಲ್ಲಿ ಬಡತನಕ್ಕೆ ಏನಾಗಲಿದೆ?

10 ಇಂದಿನ ದುರಾಸೆ ಮತ್ತು ಭ್ರಷ್ಟ ಅಧಿಪತಿಗಳಿಂದಾಗಿ ಕೋಟಿಗಟ್ಟಲೆ ಜನರ ಬದುಕು ಬಡತನದಲ್ಲಿ ಮುಳುಗಿದೆ. ನಮ್ಮ ಕೆಲವು ಸಹೋದರರಿಗೂ ಹೊಟ್ಟೆತುಂಬ ಆಹಾರ ಸಿಗುವುದಿಲ್ಲ. ಆದರೆ ಯೆಹೋವನಿಗೆ ವಿಧೇಯರಾಗುವ ಜನರು ಬೇಗನೆ ಭ್ರಷ್ಟಾಚಾರ ಹಾಗೂ ಬಡತನವಿಲ್ಲದ ಜಗತ್ತಿನಲ್ಲಿ ಜೀವಿಸಲಿದ್ದಾರೆ. ಯೆಹೋವನು ಸರ್ವಶಕ್ತ ದೇವರು. ಎಲ್ಲರ ಅಗತ್ಯಗಳನ್ನು ಪೂರೈಸುವಷ್ಟು ಶಕ್ತಿ ಆತನಿಗಿದೆ. ಆಸೆಯೂ ಇದೆ. ಕಷ್ಟಸಂಕಟಕ್ಕೆ ಅತಿ ಬೇಗನೆ ಅಂತ್ಯತರುವುದಾಗಿ ಮಾತುಕೊಟ್ಟಿದ್ದಾನೆ.ಕೀರ್ತನೆ 72:16 ಓದಿ.

11. (ಎ) ಯೇಸು ಬೇಗನೆ ಇಡೀ ಭೂಮಿಯಲ್ಲಿ ತನ್ನ ಶಕ್ತಿಯನ್ನು ಬಳಸುವನೆಂಬ ಖಾತ್ರಿ ನಿಮಗೇಕೆ ಇದೆ? (ಬಿ) ಹಾಗಾಗಿ ನೀವೇನು ಮಾಡಬೇಕೆಂದಿದ್ದೀರಿ?

11 ಯೇಸು ಭೂಮಿ ಮೇಲಿದ್ದಾಗ ಒಂದು ಚಿಕ್ಕ ಕ್ಷೇತ್ರದಲ್ಲಿ ಬರೀ ಮೂರುವರೆ ವರ್ಷಗಳ ವರೆಗೆ ಅದ್ಭುತಗಳನ್ನು ಮಾಡಿದನು. (ಮತ್ತಾ. 15:24) ಆದರೆ ಈಗ ರಾಜನಾಗಿರುವ ಆತನು ತನ್ನ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಎಲ್ಲ ಮಾನವರಿಗೆ ಸಹಾಯಮಾಡುವನು. (ಕೀರ್ತ. 72:8) ಯೇಸು ಭೂಮಿಯಲ್ಲಿದ್ದಾಗ ಮಾಡಿದ ಅದ್ಭುತಗಳು, ಆತನು ತನ್ನ ಶಕ್ತಿಯನ್ನು ನಮ್ಮ ಒಳಿತಿಗಾಗಿ ಬಳಸಲು ಇಷ್ಟಪಡುತ್ತಾನೆಂಬ ಆಶ್ವಾಸನೆಯನ್ನು ನಮಗೆ ಕೊಡುತ್ತದೆ. ಅದ್ಭುತಗಳನ್ನು ಮಾಡುವ ಶಕ್ತಿಯಂತೂ ನಮಗಿಲ್ಲ. ಹಾಗಾಗಿ ನಾವೇನು ಮಾಡಬಹುದು? ಬೈಬಲು ವಾಗ್ದಾನಿಸುವ ಸುಂದರ ಭವಿಷ್ಯತ್ತಿನ ಕುರಿತು ಇತರರಿಗೆ ತಿಳಿಸಲು  ನಮ್ಮ ಸಮಯ, ಶಕ್ತಿಯನ್ನು ಬಳಸಬಲ್ಲೆವು. ಇದು ಯೆಹೋವನ ಸಾಕ್ಷಿಗಳಾದ ನಮ್ಮ ಜವಾಬ್ದಾರಿಯೂ ಹೌದು. (ರೋಮ. 1:14, 15) ಕ್ರಿಸ್ತನು ಬೇಗನೆ ಏನನ್ನು ಮಾಡಲಿದ್ದಾನೊ ಅದರ ಬಗ್ಗೆ ನಾವು ಧ್ಯಾನಿಸಿದರೆ, ಇತರರಿಗೆ ಆ ಸಂಗತಿಗಳ ಬಗ್ಗೆ ತಿಳಿಸಲು ನಮ್ಮ ಮನಸ್ಸು ತವಕಿಸುತ್ತದೆ.—ಕೀರ್ತ. 45:1; 49:3.

ನೈಸರ್ಗಿಕ ಶಕ್ತಿಗಳು ಯೆಹೋವ ಮತ್ತು ಯೇಸುವಿನ ನಿಯಂತ್ರಣದಲ್ಲಿವೆ

12. ಯೇಸುವಿಗೆ ಈ ಭೂಮಿಯ ಪರಿಸರದ ಬಗ್ಗೆ ಒಳ್ಳೇ ಜ್ಞಾನವಿದೆಯೆಂದು ನಮಗೇಕೆ ಖಾತ್ರಿಯಿದೆ?

12 ದೇವರು ಭೂಮಿಯನ್ನು ಮತ್ತು ಅದರಲ್ಲಿ ಇರುವುದೆಲ್ಲವನ್ನೂ ಸೃಷ್ಟಿಸಿದಾಗ ಯೇಸು “ಆತನ ಹತ್ತಿರ ಶಿಲ್ಪಿಯಾಗಿ” ಕೆಲಸಮಾಡಿದನು. (ಜ್ಞಾನೋ. 8:22, 30, 31; ಕೊಲೊ. 1:15-17) ಹಾಗಾಗಿ ಯೇಸುವಿಗೆ ಈ ಭೂಮಿಯ ಪರಿಸರದ ಬಗ್ಗೆ ಒಳ್ಳೇ ಜ್ಞಾನ ಇದೆ. ನೈಸರ್ಗಿಕ ಶಕ್ತಿಗಳನ್ನು ಹೇಗೆ ಬಳಸಬೇಕು, ನಿಯಂತ್ರಿಸಬೇಕು ಎನ್ನುವುದು ಆತನಿಗೆ ತಿಳಿದಿದೆ.

ಯೇಸು ಅದ್ಭುತಗಳನ್ನು ಮಾಡುವ ತನ್ನ ಶಕ್ತಿಯನ್ನು ಬಳಸಿದ ರೀತಿಯ ಬಗ್ಗೆ ನಿಮಗೇನು ಇಷ್ಟವಾಗುತ್ತದೆ? (ಪ್ಯಾರ 13, 14 ನೋಡಿ)

13, 14. ಕ್ರಿಸ್ತನು ನೈಸರ್ಗಿಕ ಶಕ್ತಿಗಳನ್ನು ಹೇಗೆ ನಿಯಂತ್ರಿಸಬಲ್ಲನು ಎಂಬದಕ್ಕೆ ಒಂದು ಉದಾಹರಣೆ ಕೊಡಿ.

13 ಯೇಸು ಭೂಮಿಯಲ್ಲಿದ್ದಾಗ ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಿದನು. ಹೀಗೆ ತನಗೆ ದೇವರ ಶಕ್ತಿಯಿದೆಯೆಂದು ತೋರಿಸಿದನು. ಉದಾಹರಣೆಗೆ, ಯೇಸು ಒಂದು ಬಿರುಗಾಳಿಯನ್ನು ಹೇಗೆ ನಿಯಂತ್ರಿಸಿದನೆಂದು ಯೋಚಿಸಿ. (ಮಾರ್ಕ 4:37-39 ಓದಿ.) ಮಾರ್ಕನ ಪುಸ್ತಕದಲ್ಲಿ “ಬಿರುಗಾಳಿ”ಗಾಗಿರುವ ಗ್ರೀಕ್‌ ಪದವನ್ನು ಭಯಂಕರ ಚಂಡಮಾರುತಕ್ಕಾಗಿ ಬಳಸಲಾಗುತ್ತದೆಂದು ಬೈಬಲಿನ ವಿದ್ವಾಂಸರೊಬ್ಬರು ವಿವರಿಸುತ್ತಾರೆ. ಈ ಪದವು ಕಾರ್ಮೋಡಗಳು, ಬಿರುಸಾಗಿ ಬೀಸುವ ಗಾಳಿ, ಗುಡುಗು, ಜೋರಾದ ಮಳೆಯಿಂದ ಕೂಡಿದ ಬಿರುಗಾಳಿಗೆ ಸೂಚಿಸುತ್ತದೆ. ಅದು ನಿಂತು ಹೋಗುವಷ್ಟರಲ್ಲಿ ಎಲ್ಲವೂ ಅಸ್ತವ್ಯಸ್ಥ ಆಗಿರುತ್ತದೆ.

14 ಈ ಸನ್ನಿವೇಶವನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳಿ: ಅಲೆಗಳು ದೋಣಿಗೆ ರಭಸದಿಂದ ಅಪ್ಪಳಿಸುತ್ತಿವೆ. ಆಗಾಗ ನೀರು ಒಳಗೆ ಬರುತ್ತಾ ಇದೆ. ದೋಣಿ ಅತ್ತಿ೦ದಿತ್ತ ಓಲಾಡುತ್ತಾ ಇದೆ. ಬಿರುಗಾಳಿಯ ಗುಂಯ್‌ಗುಡುವ ಸದ್ದು ಜೋರಾಗಿದೆ. ಆದರೆ ಯೇಸು ಚೆನ್ನಾಗಿ ನಿದ್ದೆ ಮಾಡುತ್ತಾ ಇದ್ದಾನೆ. ಆತನಿಗೆ ಅಷ್ಟು ಸುಸ್ತಾಗಿತ್ತು! ಆದರೆ ಶಿಷ್ಯರು ಹೆದರಿ ಕಂಗಾಲಾಗಿ ಯೇಸುವನ್ನು ಎಬ್ಬಿಸಿ, “ನಾವು ಮುಳುಗಿ ಸಾಯಲಿಕ್ಕಿದ್ದೇವೆ” ಎಂದು ಹೇಳುತ್ತಾರೆ. (ಮತ್ತಾ. 8:25) ಆಗ ಯೇಸು ಏನು ಮಾಡಿದನು? ಎದ್ದುನಿಂತು ಗಾಳಿ ಹಾಗೂ ಸಮುದ್ರಕ್ಕೂ “ಷ್‌! ಸುಮ್ಮನಿರು!” ಎಂದು ಹೇಳಿದನು. ಅಷ್ಟೇ! (ಮಾರ್ಕ 4:39) ಆ ಭಯಂಕರವಾದ ಬಿರುಗಾಳಿ ನಿಂತು, “ಎಲ್ಲಾ ಶಾಂತವಾಯಿತು.” ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಲು ಯೇಸುವಿಗೆ ಶಕ್ತಿಯಿದೆಯೆಂದು ಇದೆಷ್ಟು ವಿಸ್ಮಯಕರವಾಗಿ ತೋರಿಸಿತಲ್ಲವೇ?

15. ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಬಲ್ಲೆನೆಂದು ಯೆಹೋವನು ಹೇಗೆ ತೋರಿಸಿಕೊಟ್ಟಿದ್ದಾನೆ?

15 ಕ್ರಿಸ್ತನಿಗಿರುವ ಶಕ್ತಿ ಯೆಹೋವನಿಂದ ಬರುತ್ತದೆ. ಹಾಗಾಗಿ ಸರ್ವಶಕ್ತ ದೇವರು ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಬಲ್ಲನೆಂದು ನಮಗೆ ತಿಳಿದಿದೆ. ಉದಾಹರಣೆಗೆ ಜಲಪ್ರಳಯದ ಮುಂಚೆ ಯೆಹೋವನು “ಏಳು ದಿನಗಳನಂತರ ನಾನು ಭೂಮಿಯ ಮೇಲೆ ನಾಲ್ವತ್ತು ದಿವಸ ಹಗಲಿರುಳು ಮಳೆಯನ್ನು ಸುರಿ”ಸುವೆನು ಎಂದು ಹೇಳಿದನು. (ಆದಿ. 7:4) ಹಾಗೆಯೇ “ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ”ದನೆಂದು ವಿಮೋಚನಕಾಂಡ 14:21ರಲ್ಲಿ ಹೇಳುತ್ತದೆ. ಅಲ್ಲದೆ ಯೋನ 1:4ರಲ್ಲಿ ಹೀಗೆ ಓದುತ್ತೇವೆ: “ಯೆಹೋವನು ಬಿರುಗಾಳಿಯನ್ನು ಸಮುದ್ರದ ಮೇಲೆ ಬಲವಾಗಿ ಬೀಸಲು ಸಮುದ್ರದಲ್ಲಿ ದೊಡ್ಡ ತುಫಾನು ಎದ್ದು ಹಡಗು ಒಡೆದುಹೋಗುವ ಹಾಗಾಯಿತು.” ಹೊಸ ಲೋಕದಲ್ಲೂ ಯೆಹೋವನು ಹೀಗೆ ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಲಿದ್ದಾನೆ ಎಂಬುದು ನಮಗೆ ತುಂಬ ಸಂತೋಷ ತರುತ್ತದೆ.

16. ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಲು ಯೆಹೋವ ಮತ್ತು ಯೇಸುವಿಗೆ ಶಕ್ತಿಯಿದೆಯೆಂಬ ವಿಷಯ ಏಕೆ ತುಂಬ ನೆಮ್ಮದಿ ತರುತ್ತದೆ?

16 ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಲು ಯೆಹೋವ ಮತ್ತು ಯೇಸುವಿಗೆ ಶಕ್ತಿಯಿದೆಯೆಂಬ ವಿಷಯ ತುಂಬ ನೆಮ್ಮದಿ ತರುತ್ತದೆ. ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ಭೂಮಿ ಮೇಲಿರುವ ಪ್ರತಿಯೊಬ್ಬರು ಸುರಕ್ಷಿತರಾಗಿರುವರು. ತೂಫಾನು, ಸುನಾಮಿ, ಜ್ವಾಲಾಮುಖಿ, ಭೂಕಂಪಗಳಂಥ ನೈಸರ್ಗಿಕ ವಿಪತ್ತುಗಳಿಂದ ಯಾರಿಗೂ ಹಾನಿ ಇರುವುದಿಲ್ಲ, ಜೀವವೂ ಕಳೆದುಕೊಳ್ಳುವುದಿಲ್ಲ. ನಮಗೆ ಯಾವುದೇ ವಿಪತ್ತುಗಳ ಬಗ್ಗೆ ಭಯವಿರುವುದಿಲ್ಲ ಏಕೆಂದರೆ “ದೇವರ ಗುಡಾರ” ಮನುಷ್ಯರೊಟ್ಟಿಗೆ ಇರಲಿದೆ!  (ಪ್ರಕ. 21:3, 4) ಯೇಸುವಿನ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಲು ಯೆಹೋವನು ಆತನಿಗೆ ಶಕ್ತಿ ಕೊಡುವನೆಂದು ನಮಗೆ ಪೂರ್ಣ ಭರವಸೆಯಿದೆ.

ದೇವರು ಮತ್ತು ಕ್ರಿಸ್ತನನ್ನು ಈಗಲೇ ಅನುಕರಿಸಿ

17. ದೇವರನ್ನು ಮತ್ತು ಕ್ರಿಸ್ತನನ್ನು ನಾವೀಗ ಅನುಕರಿಸಬಹುದಾದ ಒಂದು ವಿಧ ಯಾವುದು?

17 ನೈಸರ್ಗಿಕ ವಿಪತ್ತುಗಳನ್ನು ನಾವು ತಡೆಯಲು ಆಗುವುದಿಲ್ಲ ನಿಜ. ಅದನ್ನು ಯೆಹೋವ ಮತ್ತು ಯೇಸು ಮಾತ್ರ ಮಾಡಬಲ್ಲರು. ಆದರೆ ನಾವು ಒಂದು ಸಂಗತಿ ಮಾಡಬಹುದು. ಜ್ಞಾನೋಕ್ತಿ 3:27ನ್ನು (ಓದಿ) ಅನ್ವಯಿಸಬಹುದು. ನಮ್ಮ ಸಹೋದರರು ಕಷ್ಟದಲ್ಲಿರುವಾಗ ಅವರ ಶಾರೀರಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಬಲ್ಲೆವು. ಅವರಿಗೆ ಸಾಂತ್ವನ ಕೊಡಬಲ್ಲೆವು. (ಜ್ಞಾನೋ. 17:17) ಉದಾಹರಣೆಗೆ ಒಂದು ನೈಸರ್ಗಿಕ ವಿಪತ್ತಿನ ನಂತರ ಕಷ್ಟದಲ್ಲಿರುವ ಅವರಿಗೆ ಸಹಾಯ ಮಾಡಬಲ್ಲೆವು. ಸುಂಟರಗಾಳಿಯಿಂದ ಒಬ್ಬ ವಿಧವೆಯ ಮನೆಗೆ ಹಾನಿ ಆಯಿತು. ಆಕೆಯಂದದ್ದು: “ಯೆಹೋವನ ಸಂಘಟನೆಯಲ್ಲಿ ಇರುವುದಕ್ಕಾಗಿ ನಾನು ತುಂಬ ಆಭಾರಿ. ಶಾರೀರಿಕ ನೆರವಿಗಾಗಿ ಮಾತ್ರವಲ್ಲ, ಆಧ್ಯಾತ್ಮಿಕ ನೆರವಿಗಾಗಿ ಸಹ ಕೃತಜ್ಞಳಾಗಿದ್ದೇನೆ.” ಇನ್ನೊಬ್ಬ ಅವಿವಾಹಿತ ಸಹೋದರಿಯ ಮನೆಗೂ ಬಿರುಗಾಳಿಯಿಂದ ಹಾನಿಯಾಯಿತು. ಅದನ್ನು ರಿಪೇರಿ ಮಾಡಲು ಸಹೋದರರು ಸಹಾಯಮಾಡಿದರು. ಅವಳಂದದ್ದು: “ನನ್ನ ಭಾವನೆಗಳನ್ನು ಪೂರ್ತಿಯಾಗಿ ಮಾತುಗಳಲ್ಲಿ ವರ್ಣಿಸಲಿಕ್ಕೇ ಆಗುವುದಿಲ್ಲ.” ನಂತರ ಆಕೆ ಕೂಡಿಸಿದ್ದು: “ಧನ್ಯವಾದ ಯೆಹೋವ.” ನಮ್ಮ ಸಹೋದರ ಸಹೋದರಿಯರು ಇತರರ ಅಗತ್ಯಗಳ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತಿರುವುದಕ್ಕೆ ನಾವು ಆಭಾರಿಗಳು. ಅದಕ್ಕಿಂತಲೂ ಹೆಚ್ಚಾಗಿ ಯೆಹೋವ ಮತ್ತು ಯೇಸು ಕ್ರಿಸ್ತನಿಗೆ ಆಭಾರಿಗಳು. ಅವರು ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿವಹಿಸುತ್ತಾರೆ.

18. ಅದ್ಭುತಗಳನ್ನು ಮಾಡಲು ಯೇಸುವಿಗಿದ್ದ ಯಾವ ಕಾರಣ ನಿಮಗೆ ಇಷ್ಟವಾಗುತ್ತದೆ?

18 ಯೇಸು ಭೂಮಿಯಲ್ಲಿದ್ದಾಗ ತನ್ನ ಸೇವೆಯ ಸಮಯದಲ್ಲಿ ತಾನು “ದೇವರ ಶಕ್ತಿ” ಎಂಬದನ್ನು ತೋರಿಸಿಕೊಟ್ಟನು. ಆದರೆ ತನ್ನ ಶಕ್ತಿಯನ್ನು ಬೇರೆಯವರ ಮೆಚ್ಚುಗೆ ಗಳಿಸಲಿಕ್ಕಾಗಿ ಇಲ್ಲವೆ ತನ್ನ ಪ್ರಯೋಜನಕ್ಕಾಗಿ ಯಾವತ್ತೂ ಬಳಸಲಿಲ್ಲ. ಬದಲಾಗಿ ಆತನು ಜನರನ್ನು ನಿಜವಾಗಿ ಪ್ರೀತಿಸಿದ್ದರಿಂದ ಅದನ್ನು ಅದ್ಭುತಗಳನ್ನು ಮಾಡಲು ಬಳಸಿದನು. ಇದರ ಬಗ್ಗೆ ಮುಂದಿನ ಲೇಖನದಲ್ಲಿ ಹೆಚ್ಚನ್ನು ಕಲಿಯಲಿದ್ದೇವೆ.