ಇಸವಿ 1970. ಬೇಸಿಗೆಯ ಕಾಲ ಆಗಷ್ಟೇ ಆರಂಭವಾಗಿತ್ತು. ಅಮೆರಿಕದ ಪೆನ್ಸಿಲ್ವೇನಿಯದ ವ್ಯಾಲಿ ಫೋರ್ಜ್ ಜೆನರಲ್‌ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೆ. ನಾನಾಗ 20 ವರ್ಷದ ಸೈನಿಕ. ಗಂಭೀರವಾದ ಅಂಟುರೋಗ ನನಗೆ ತಗಲಿತ್ತು. ನರ್ಸ್‌ ನನ್ನ ಬಿ.ಪಿ.ಯನ್ನು ಅರ್ಧ ಗಂಟೆಗೊಮ್ಮೆ ಪರೀಕ್ಷಿಸುತ್ತಿದ್ದ. ಬಿ.ಪಿ. ಕಡಿಮೆಯಾಗುತ್ತಲೇ ಇತ್ತು. ನನಗಿಂತ ವಯಸ್ಸಲ್ಲಿ ಸ್ವಲ್ಪ ದೊಡ್ಡವನಾಗಿದ್ದ ಆ ನರ್ಸ್‌ನ ಮುಖ ಭಯದಿಂದ ಬಿಳಿಚಿಕೊಂಡಿತ್ತು. “ನಿನ್ನ ಕಣ್ಮುಂದೆಯೇ ಒಬ್ಬರ ಜೀವ ಹೋಗುತ್ತಿರುವುದನ್ನು ಯಾವತ್ತೂ ನೋಡಿಲ್ಲ ಅನಿಸುತ್ತೆ ಅಲ್ಲವಾ?” ಎಂದು ಕೇಳಿದೆ. ಅವನು “ಇಲ್ಲ” ಎಂದ.

ನನ್ನ ಜೀವ ಉಳಿಯುತ್ತದೆ ಎಂದು ನೆನಸಿರಲೇ ಇಲ್ಲ. ಹೇಗೊ ಬದುಕಿದೆ. ಆದರೆ ನನಗೆ ಈ ರೋಗ ತಗಲಿದ್ದಾದರೂ ಹೇಗೆ? ನನ್ನ ಬದುಕಲ್ಲಿ ನಡೆದ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳಿ.

ಯುದ್ಧದ ಪರಿಚಯ ನನಗಾದದ್ದು

ನನಗೆ ಕಾಯಿಲೆ ಬಂದದ್ದು ವಿಯೆಟ್ನಾಮ್‍ನಲ್ಲಿ. 1969 ಜುಲೈ ತಿಂಗಳಲ್ಲಿ ನಾನಲ್ಲಿಗೆ ಹೋದಾಗ ಯುದ್ಧ ನಡೆಯುತ್ತಾ ಇತ್ತು. ನನ್ನ ಕೆಲಸ ಶಸ್ತ್ರಚಿಕಿತ್ಸೆ ನಡೆಯುವ ಸಮಯದಲ್ಲಿ ವೈದ್ಯನಿಗೆ ಸಹಾಯಕನಾಗಿರುವುದು ಮತ್ತು ಶಸ್ತ್ರಚಿಕಿತ್ಸೆ ನಡೆಯುವ ಕೋಣೆಯನ್ನು ಸಿದ್ಧಮಾಡುವುದು ಆಗಿತ್ತು. ಹುಷಾರಿಲ್ಲದವರಿಗೆ, ಗಾಯಗೊಂಡವರಿಗೆ ಸಹಾಯ ಮಾಡುವುದೆಂದರೆ ನನಗೆ ತುಂಬ ಇಷ್ಟ. ಆದಷ್ಟು ಬೇಗ ಶಸ್ತ್ರಚಿಕಿತ್ಸಾ ವೈದ್ಯನಾಗಬೇಕು ಎಂಬ ಆಸೆ ನನಗಿತ್ತು. ವಿಯೆಟ್ನಾಮ್‍ನ ತುಂಬ ಬಿಸಿಲಿನ ವಾತಾವರಣಕ್ಕೆ ಮತ್ತು ಅಲ್ಲಿನ ಸಮಯಕ್ಕೆ ಹೊಂದಿಕೊಳ್ಳಲು ಎಲ್ಲಾ ಹೊಸಬರಿಗೆ ಒಂದು ವಾರ ಸಮಯ ಕೊಡಲಾಗುತ್ತಿದ್ದಂತೆ ನನಗೂ ಕೊಡಲಾಯಿತು.

ವಿಯೆಟ್ನಾಮ್‍ನ ಡಾಂಗ್‌ ಟ್ಯಾಮ್‍ನಲ್ಲಿದ್ದ ಸರ್ಜಿಕಲ್‌ ಆಸ್ಪತ್ರೆಯಲ್ಲಿ ನಾನು ಕೆಲಸಕ್ಕೆ ಸೇರಿಕೊಂಡ ಸ್ವಲ್ಪದರಲ್ಲೇ ಯುದ್ಧದ ಗಾಯಾಳುಗಳನ್ನು ಅಥವಾ ಸತ್ತ ಸೈನಿಕರನ್ನು ಹೆಲಿಕಾಪ್ಟರ್‌ಗಳಲ್ಲಿ ತರಲಾಯಿತು. ನನ್ನಲ್ಲಿ ದೇಶಭಕ್ತಿ ತುಂಬ ಇದ್ದದರಿಂದ ನನ್ನ ಕೆಲಸ ನನಗೆ ತುಂಬ ಇಷ್ಟ ಆಗುತ್ತಿತ್ತು. ಆದ್ದರಿಂದ ಕೂಡಲೇ ಕೆಲಸಕ್ಕೆ ಸೇರಿಕೊಂಡೆ. ಗಾಯಾಳುಗಳನ್ನು ತುರ್ತಾಗಿ ಶಸ್ತ್ರಚಿಕಿತ್ಸಾ ಕೋಣೆಗಳಿಗೆ ಸಾಗಿಸಲಾಗುತ್ತಿತ್ತು. ಕೋಣೆಗಳೆಂದರೆ ಎ.ಸಿ. ಅಳವಡಿಸಲಾಗಿದ್ದ ಲೋಹದ ದೊಡ್ಡ ಪೆಟ್ಟಿಗೆಗಳು. ಈ ಇಕ್ಕಟ್ಟಾದ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಒಬ್ಬ ವೈದ್ಯ, ಅರಿವಳಿಕೆತಜ್ಞ ಮತ್ತು ಇಬ್ಬರು ನರ್ಸ್‌ಗಳು ಇರುತ್ತಿದ್ದರು. ಜೀವ ಉಳಿಸಲು ನಮ್ಮ ಕೈಲಾದದ್ದೆಲ್ಲ ಮಾಡುತ್ತಿದ್ದೆವು. ಆದರೆ ಬರುತ್ತಿದ್ದ ಹೆಲಿಕಾಪ್ಟರ್‌ಗಳಿಂದ ಕೆಲವು ದೊಡ್ಡ ಕಪ್ಪು ಚೀಲಗಳನ್ನು ಇಳಿಸಲಾಗುತ್ತಿರಲಿಲ್ಲ. ಅವುಗಳಲ್ಲೇನಿದೆ ಎಂದು ನಾನು ಕೇಳಿದಾಗ, ಯುದ್ಧದಲ್ಲಿ ಸತ್ತ ಸೈನಿಕರ ಛಿದ್ರಛಿದ್ರವಾಗಿರುವ ದೇಹದ ಭಾಗಗಳು ಅದರಲ್ಲಿವೆ ಎಂದು ಉತ್ತರ ಸಿಕ್ಕಿತು. ನನಗೆ ಯುದ್ಧದ ಪರಿಚಯ ಆದದ್ದು ಹೀಗೆ.

ದೇವರಿಗಾಗಿ ನನ್ನ ಹುಡುಕಾಟ

ಯುವಕನಾಗಿದ್ದಾಗ ಸತ್ಯದ ಬಗ್ಗೆ ನನಗೆ ಅಲ್ಪಸ್ವಲ್ಪ ಗೊತ್ತಿತ್ತು

ಯೆಹೋವನ ಸಾಕ್ಷಿಗಳು ಕಲಿಸುತ್ತಿದ್ದ ಸತ್ಯದ ಬಗ್ಗೆ ನಾನು ಯುವಕನಾಗಿದ್ದಾಗಲೇ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಏಕೆಂದರೆ ನನ್ನ ಅಮ್ಮನೊಟ್ಟಿಗೆ ಸಾಕ್ಷಿಗಳು ಬೈಬಲ್‌ ಅಧ್ಯಯನ ನಡೆಸುತ್ತಿದ್ದರು. ಆದರೆ ಅಮ್ಮ ಪ್ರಗತಿ ಮಾಡಿ ದೀಕ್ಷಾಸ್ನಾನ ಪಡೆಯಲಿಲ್ಲ. ಅಮ್ಮ ಬೈಬಲ್‌ ಅಧ್ಯಯನಕ್ಕೆ ಕೂರುವಾಗೆಲ್ಲಾ ನಾನೂ ಅವರ ಜೊತೆ ಕೂರುತ್ತಿದ್ದೆ. ಅವರಿಗೆ ಕಲಿಸಲಾಗುತ್ತಿದ್ದ ವಿಷಯಗಳು ನನಗೆ ತುಂಬ ಇಷ್ಟವಾಗುತ್ತಿತ್ತು. ಒಂದು ದಿನ ನನ್ನ ಮಲತಂದೆ ಜೊತೆ ರಾಜ್ಯ ಸಭಾಗೃಹದ ಮುಂದೆ ಹಾದು  ಹೋಗುತ್ತಿರುವಾಗ “ಅಪ್ಪ ಅದೇನು?” ಎಂದು ಕೇಳಿದೆ. ಅದಕ್ಕೆ ಅವರು “ಅಪ್ಪಿತಪ್ಪಿಯೂ ಆ ಜನರ ಬಳಿ ಹೋಗಬೇಡ!” ಎಂದರು. ನನ್ನ ಮಲತಂದೆ ಮೇಲೆ ನನಗೆಷ್ಟು ಪ್ರೀತಿ ನಂಬಿಕೆ ಇತ್ತೆಂದರೆ ಅವರ ಆ ಮಾತನ್ನು ನಾನು ಮೀರಲಿಲ್ಲ. ಹೀಗೆ ಯೆಹೋವನ ಸಾಕ್ಷಿಗಳ ಜೊತೆ ನನಗಿದ್ದ ಸಂಪರ್ಕ ಕಡಿದು ಹೋಯಿತು.

ನನ್ನ ಜೀವನದಲ್ಲಿ ದೇವರ ಅಗತ್ಯವಿದೆ ಎಂದು ವಿಯೆಟ್ನಾಮ್‍ನಿಂದ ಅಮೆರಿಕಗೆ ವಾಪಸ್‌ ಬಂದ ಮೇಲೆ ನನಗೆ ಅನಿಸಿತು. ಯುದ್ಧದ ಕಹಿ ನೆನಪುಗಳು, ನೋವುಂಟುಮಾಡುವ ನೆನಪುಗಳಿಂದ ನನ್ನ ಮನಸ್ಸು ಕಲ್ಲಾಯಿತು. ವಿಯೆಟ್ನಾಮ್‍ನಲ್ಲಿದ್ದ ಪರಿಸ್ಥಿತಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದನಿಸಿತು. ಅಮೆರಿಕದ ಸೈನಿಕರನ್ನು ‘ಮಕ್ಕಳ ಹಂತಕರು’ ಎಂದು ಪ್ರತಿಭಟನಾಕಾರರು ಕೂಗುತ್ತಿದ್ದದ್ದು ನನಗಿನ್ನೂ ನೆನಪಿದೆ. ಯಾಕೆಂದರೆ ಅಮೆರಿಕದ ಸೈನಿಕರು ಅಮಾಯಕ ಮಕ್ಕಳನ್ನು ಕೊಲ್ಲುತ್ತಿದ್ದದರ ಬಗ್ಗೆ ವರದಿಗಳು ಬರುತ್ತಿದ್ದವು.

ನನ್ನ ಆಧ್ಯಾತ್ಮಿಕ ಹಸಿವನ್ನು ತೀರಿಸಿಕೊಳ್ಳಲು ಬೇರೆ ಬೇರೆ ಚರ್ಚುಗಳಲ್ಲಿ ನಡೆಯುತ್ತಿದ್ದ ಮಾಸ್‌ಗಳಿಗೆ ಹೋದೆ. ದೇವರ ಮೇಲೆ ನನಗೆ ಯಾವಾಗಲೂ ತುಂಬ ಪ್ರೀತಿ ಇತ್ತು. ಆದರೆ ಚರ್ಚ್ ಕಲಿಸುತ್ತಿದ್ದ ವಿಷಯಗಳಿಂದ ತೃಪ್ತಿ ಸಿಗಲಿಲ್ಲ. ಕೊನೆಗೆ ಫೆಬ್ರವರಿ 1971ರ ಭಾನುವಾರದಂದು ಫ್ಲಾರಿಡದ ಡೆಲ್‌ರೆ ಬೀಚ್‌ನಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಹೋದೆ.

ನಾನು ಒಳಗೆ ಹೋದಾಗ ಸಾರ್ವಜನಿಕ ಭಾಷಣ ಇನ್ನೇನು ಮುಗಿಯಲಿಕ್ಕಿತ್ತು. ಆದ್ದರಿಂದ ಕಾವಲಿನಬುರುಜು ಚರ್ಚೆಗೆ ಕೂತೆ. ಅಲ್ಲಿ ಯಾವ ವಿಷಯವನ್ನು ಚರ್ಚಿಸಲಾಗಿತ್ತೆಂದು ನನಗೆ ನೆನಪಿಲ್ಲ. ಆದರೆ ಅಲ್ಲಿದ್ದ ಪುಟಾಣಿ ಮಕ್ಕಳು ತಮ್ಮ ಬೈಬಲ್‌ ತೆರೆದು ವಚನಗಳನ್ನು ಹುಡುಕುತ್ತಿದ್ದದ್ದು ಮಾತ್ರ ನನಗಿನ್ನೂ ನೆನಪಿದೆ. ಅದನ್ನು ನೋಡಿ ನನಗೆ ತುಂಬ ಆಶ್ಚರ್ಯವಾಯಿತು. ನಿರ್ವಾಹಕ ಹೇಳುತ್ತಿದ್ದ ವಿಷಯಗಳಿಗೆ ಚೆನ್ನಾಗಿ ಗಮನ ಕೊಟ್ಟೆ. ಇನ್ನೇನು ರಾಜ್ಯ ಸಭಾಗೃಹದಿಂದ ಹೊರಡಬೇಕು ಎನ್ನುವಷ್ಟರಲ್ಲಿ, ಹತ್ತಿರತ್ತಿರ 80 ವರ್ಷದ ಒಬ್ಬ ಸಹೋದರ ನನ್ನ ಬಳಿ ಬಂದರು. ಅವರ ಹೆಸರು ಜಿಮ್‌ ಗಾರ್ಡ್‌ನರ್‌. ನಿತ್ಯ ಜೀವಕ್ಕೆ ನಡೆಸುವ ಸತ್ಯ ಪುಸ್ತಕವನ್ನು ನನಗೆ ಕೊಡುತ್ತಾ “ಇದು ನಿಮಗೋಸ್ಕರ. ದಯವಿಟ್ಟು ತಕ್ಕೊಳ್ಳಿ” ಎಂದು ಕೇಳಿದರು. ನಂತರ ನಾವು ಮೊದಲ ಬೈಬಲ್‌ ಅಧ್ಯಯನ ಮಾಡಲು ಗುರುವಾರ ಬೆಳಗ್ಗೆ ಸಿಗೋಣ ಎಂದು ದಿನ ಗೊತ್ತುಮಾಡಿದೆವು.

ನಾನು ಕೂಟಕ್ಕೆ ಹೋದ ಈ ಭಾನುವಾರದ ರಾತ್ರಿ ಕೆಲಸ ಮಾಡಬೇಕಿತ್ತು. ನಾನು ಕೆಲಸ ಮಾಡುತ್ತಿದದ್ದು ಫ್ಲಾರಿಡದ ಬೊಕ ರೆಟೊನ್‍ನ ಒಂದು ಖಾಸಗಿ ಆಸ್ಪತ್ರೆಯ ತುರ್ತು ಕೋಣೆಯಲ್ಲಿ. ಕೆಲಸದ ಸಮಯ ರಾತ್ರಿ 11:00ರಿಂದ ಬೆಳಗ್ಗೆ 7:00ರ ವರೆಗೆ. ಆ ರಾತ್ರಿ ಜಾಸ್ತಿ ಕೆಲಸ ಇರಲಿಲ್ಲ ಆದ್ದರಿಂದ ನಾನು ಸತ್ಯ ಪುಸ್ತಕವನ್ನು ಓದಲು ಶುರುಮಾಡಿದೆ. ಆಗ ಹಿರಿಯ ನರ್ಸ್‌ ಒಬ್ಬಳು ಬಂದು ಆ ಪುಸ್ತಕವನ್ನು ನನ್ನ ಕೈಯಿಂದ ಕಿತ್ತುಕೊಂಡಳು. ಅದರ ಮುಖಪುಟ ನೋಡುತ್ತಾ “ನೀನು ಯೆಹೋವನ ಸಾಕ್ಷಿ ಆಗುತ್ತಿಲ್ಲ ತಾನೇ?” ಎಂದು ಕಿರಿಚಿದಳು. ನಾನು ಅವಳ ಕೈಯಿಂದ ಪುಸ್ತಕವನ್ನು ವಾಪಸ್‌ ಕಿತ್ತುಕೊಂಡು “ಪುಸ್ತಕವನ್ನು ಅರ್ಧ ಮಾತ್ರ ಓದಿ ಮುಗಿಸಿದ್ದೇನೆ. ಆದರೆ ನಾನೂ ಯೆಹೋವನ ಸಾಕ್ಷಿ ಆಗಿಯೇ ಬಿಡುತ್ತೇನೆ ಅಂತ ನನಗನಿಸುತ್ತದೆ” ಎಂದು ಹೇಳಿದೆ. ಅವಳು ಹೊರಟು ಹೋದಳು. ನಂತರ ಇಡೀ ರಾತ್ರಿ ಕೂತು ಆ ಪುಸ್ತಕವನ್ನು ಓದಿ ಮುಗಿಸಿದೆ.

ನನಗೆ ಬೈಬಲ್‌ ಬಗ್ಗೆ ಕಲಿಸಿಕೊಟ್ಟ ಜಿಮ್‌ ಗಾರ್ಡ್‌ನರ್‌ ಒಬ್ಬ ಅಭಿಷಿಕ್ತ ಸಹೋದರ. ಇವರಿಗೆ ಚಾರ್ಲ್ಸ್‌ ಟೇಸ್‌ ರಸಲ್‌ರವರ ಒಳ್ಳೇ ಪರಿಚಯ ಇತ್ತು

ನನ್ನ ಬೈಬಲ್‌ ಅಧ್ಯಯನ ಶುರುವಾದದ್ದು ಹೀಗೆ: “ನನ್ನೊಟ್ಟಿಗೆ ಏನು ಅಧ್ಯಯನ ಮಾಡುತ್ತೀರಾ?” ಎಂದು ಸಹೋದರ ಗಾರ್ಡ್‌ನರ್‌ಗೆ ಕೇಳಿದೆ. ಅದಕ್ಕವರು “ನಾನು ನಿನಗೆ ಒಂದು ಪುಸ್ತಕ ಕೊಟ್ಟೆ ಅಲ್ಲವಾ, ಅದನ್ನೇ ಅಧ್ಯಯನ ಮಾಡೋಣ” ಎಂದರು. “ಆದರೆ ನಾನದನ್ನು ಪೂರ್ತಿ ಓದಿ ಮುಗಿಸಿದ್ದೇನಲ್ಲಾ” ಅಂತ ಹೇಳಿದೆ. ತಾಳ್ಮೆಯಿಂದ ಸಹೋದರ ಗಾರ್ಡ್‌ನರ್‌, “ಹೌದಾ, ಸರಿ ಹಾಗಾದರೆ ಮೊದಲ ಪಾಠವನ್ನು ಸ್ವಲ್ಪ ಚರ್ಚೆ ಮಾಡೋಣವಾ?” ಎಂದು ಕೇಳಿದರು. ಚರ್ಚೆ ಮಾಡುತ್ತಿರುವಾಗ ನನಗೆ ಗೊತ್ತಾಯಿತು, ನಾನು ಎಷ್ಟೊಂದು ವಿಷಯಗಳಿಗೆ ಗಮನವೇ ಕೊಟ್ಟಿರಲಿಲ್ಲ ಅಂತ. ನನ್ನ ಹತ್ತಿರ ಇದ್ದ ಕಿಂಗ್‌ ಜೇಮ್ಸ್ ವರ್ಷನ್‌ ಬೈಬಲಿನಿಂದ ಅನೇಕ ವಚನಗಳನ್ನು ನೋಡಲು ನನಗೆ ಅವರು ಸಹಾಯ ಮಾಡಿದರು. ಕೊನೆಗೂ ನಾನು ಸತ್ಯ ದೇವರಾದ ಯೆಹೋವನ ಬಗ್ಗೆ ಕಲಿಯುತ್ತಿದ್ದೆ. ಸಹೋದರ ಗಾರ್ಡ್‌ನರ್‌ ಅವರನ್ನು ನಾನು ಪ್ರೀತಿಯಿಂದ ಜಿಮ್‌ ಎಂದು ಕರೆಯುತ್ತಿದ್ದೆ. ನಾವಿಬ್ಬರು ಗೊತ್ತು ಮಾಡಿದ್ದ ಆ ಗುರುವಾರ ಬೆಳಗ್ಗೆ ಸತ್ಯ ಪುಸ್ತಕದ 3 ಅಧ್ಯಾಯಗಳನ್ನು ಚರ್ಚೆ ಮಾಡಿದೆವು.  ಅಂದಿನಿಂದ ಪ್ರತಿ ಗುರುವಾರ ಬೆಳಗ್ಗೆ ನಾವು ಮೂರು ಅಧ್ಯಾಯಗಳನ್ನು ಚರ್ಚಿಸುತ್ತಿದ್ದೆವು. ಈ ಬೈಬಲ್‌ ಅಧ್ಯಯನ ನನಗೆ ತುಂಬ ಇಷ್ಟವಾಗುತ್ತಿತ್ತು. ಅಭಿಷಿಕ್ತ ಸಹೋದರರಾಗಿದ್ದ ಅವರಿಂದ ಬೈಬಲ್ ಬಗ್ಗೆ ಕಲಿಯಲಿಕ್ಕೆ ಆಗಿದ್ದೇ ನನಗೆ ಸಿಕ್ಕಿದ ಸುಯೋಗವೆಂದು ನೆನಸುತ್ತೇನೆ. ಸಹೋದರ ಗಾರ್ಡ್‌ನರ್‌ಗೆ ಚಾರ್ಲ್ಸ್‌ ಟಿ. ರಸಲ್‌ರವರ ವೈಯಕ್ತಿಕ ಪರಿಚಯ ಇತ್ತು!

ಕೆಲವು ವಾರಗಳ ನಂತರ ಪ್ರಚಾರಕನಾದೆ. ಸಾರುವುದರ ಬಗ್ಗೆ ನನಗೆ ತುಂಬ ಚಿಂತೆಗಳಿದ್ದವು, ವಿಶೇಷವಾಗಿ ಮನೆಮನೆ ಸಾರುವುದು ನನಗೆ ಕಷ್ಟವಾಗುತ್ತಿತ್ತು. ಆಗೆಲ್ಲ ಜಿಮ್‌ ನನಗೆ ಸಹಾಯ ಮಾಡಿದರು. (ಅ. ಕಾ. 20:20) ನನ್ನ ಜೊತೆ ಅವರು ಸೇವೆಗೆ ಬರುತ್ತಿದ್ದದರಿಂದ ಸಾರುವ ಕೆಲಸದಲ್ಲಿ ತುಂಬ ಆನಂದಿಸಿದೆ. ದೇವರ ಜೊತೆಕೆಲಸಗಾರನಾಗಿ ಕೆಲಸ ಮಾಡುವುದು ದೊಡ್ಡ ಸುಯೋಗ. ಈಗಲೂ ನನಗೆ ಸಾರುವ ಕೆಲಸದ ಬಗ್ಗೆ ಹಾಗೇ ಅನಿಸುತ್ತದೆ.—1 ಕೊರಿಂ. 3:9.

ನನ್ನ ಮೊದಲ ಪ್ರೀತಿ—ಯೆಹೋವ

ಈಗ ನನ್ನ ವೈಯಕ್ತಿಕ ವಿಷಯವೊಂದನ್ನು ಹೇಳುತ್ತೇನೆ ಕೇಳಿ. ಯೆಹೋವನೇ ನನ್ನ ಮೊದಲ ಪ್ರೀತಿ. (ಪ್ರಕ. 2:4) ಈ ಪ್ರೀತಿಯೇ ನನಗೆ ಯುದ್ಧದ ಕಹಿ ನೆನಪುಗಳನ್ನು ಮತ್ತು ಬೇರೆ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿದೆ.—ಯೆಶಾ. 65:17.

ಯೆಹೋವನ ಮೇಲೆ ನನಗಿರುವ ಪ್ರೀತಿಯೇ ಯುದ್ಧದ ಕಹಿ ನೆನಪುಗಳನ್ನು ಮತ್ತು ಬೇರೆ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿದೆ

1971 ಜುಲೈ ತಿಂಗಳಲ್ಲಿ ಯಾಂಕೀ ಸ್ಟೇಡಿಯಂನಲ್ಲಿ ನಡೆದ “ದೈವಿಕ ಹೆಸರು” ಜಿಲ್ಲಾ ಸಮ್ಮೇಳನದಲ್ಲಿ ನನ್ನ ದೀಕ್ಷಾಸ್ನಾನವಾಯಿತು

1971ರ ವಸಂತ ಕಾಲದ ಒಂದು ವಿಶೇಷ ದಿನ ನೆನಪಾಗುತ್ತಿದೆ. ಅಪ್ಪಅಮ್ಮ ನನಗೆ ವಾಸಮಾಡಲು ಕೊಟ್ಟಿದ್ದ ಮನೆಯಿಂದ ನನ್ನನ್ನು ಕೆಲವೇ ದಿನಗಳ ಹಿಂದೆ ಹೊರಹಾಕಿದ್ದರು. ಏಕೆಂದರೆ ನನ್ನ ಮಲತಂದೆಗೆ ಯೆಹೋವನ ಸಾಕ್ಷಿಗಳೆಂದರೆ ಆಗುತ್ತಿರಲಿಲ್ಲ. ಹಾಗಾಗಿ ತನಗೆ ಸೇರಿದ ಮನೆಯಲ್ಲಿ ಯೆಹೋವನ ಸಾಕ್ಷಿಯಾಗಿದ್ದ ನನ್ನನ್ನು ಇಟ್ಟುಕೊಳ್ಳಲು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ! ಅವರು ನನ್ನನ್ನು ಮನೆಯಿಂದ ಹೊರಹಾಕಿದಾಗ ನನ್ನ ಹತ್ತಿರ ಹೆಚ್ಚು ಹಣ ಇರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಎರಡು ವಾರಕ್ಕೊಮ್ಮೆ ಸಂಬಳ ಸಿಗುತ್ತಿತ್ತಾದರೂ ಆ ಹಣದಲ್ಲಿ ನಾನು ಆಗಷ್ಟೇ ಒಂದೆರೆಡು ಜೊತೆ ಒಳ್ಳೇ ಬಟ್ಟೆ ತೆಗೆದುಕೊಂಡಿದ್ದೆ. ಏಕೆಂದರೆ ಸೇವೆಗೆ ಹೋಗುವಾಗ ಹಾಕಲಿಕ್ಕೆ ಸೂಕ್ತವಾದ ಬಟ್ಟೆ ಬೇಕಿತ್ತು. ಕಾರಣ ಸೇವೆಯಲ್ಲಿ ನಾನು ಯೆಹೋವನನ್ನು ಪ್ರತಿನಿಧಿಸುತ್ತಿದ್ದೆ. ಕೂಡಿಸಿಟ್ಟ ಸ್ವಲ್ಪ ಹಣ ನನ್ನ ಹತ್ತಿರ ಇತ್ತು. ಆದರೆ ಅದು ನಾನು ಬೆಳೆದ ನಗರವಾದ ಮಿಷಿಗನ್‍ನಲ್ಲಿನ ಬ್ಯಾಂಕಿನಲ್ಲಿತ್ತು. ಮಿಷಿಗನ್‌ ಇದ್ದದ್ದು ಅಮೆರಿಕದ ಉತ್ತರ ಭಾಗದಲ್ಲಿ. ಹಾಗಾಗಿ ಕೆಲವು ದಿನಗಳ ವರೆಗೆ ನನ್ನ ಕಾರೇ ನನ್ನ ಮನೆಯಾಗಿತ್ತು. ಗಡ್ಡ ಬೋಳಿಸಲು, ಸ್ನಾನ ಮಾಡಲು ಪೆಟ್ರೋಲ್‌ ಬಂಕ್‍ಗಳಲ್ಲಿರುತ್ತಿದ್ದ ವಿಶ್ರಾಂತಿಗೃಹಗಳಿಗೆ ಹೋಗುತ್ತಿದ್ದೆ.

 ಹೀಗೆ ಕಾರ್‌ನಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ಒಂದು ದಿನ, ಕ್ಷೇತ್ರ ಸೇವೆಗೆ ಹೋಗಲೆಂದು ರಾಜ್ಯ ಸಭಾಗೃಹಕ್ಕೆ ಎಲ್ಲರೂ ಬರುವುದಕ್ಕಿಂತ ಒಂದೆರೆಡು ತಾಸು ಬೇಗನೇ ಬಂದಿದ್ದೆ. ಆಗ ತಾನೇ ಆಸ್ಪತ್ರೆಯಿಂದ ಕೆಲಸ ಮುಗಿಸಿ ಬಂದಿದ್ದೆ. ರಾಜ್ಯ ಸಭಾಗೃಹದ ಹಿಂದೆ ಕೂತಿದ್ದೆ. ನಾನಲ್ಲಿದದ್ದು ಯಾರಿಗೂ ಕಾಣುತ್ತಿರಲಿಲ್ಲ. ಆಗ ನನಗೆ ವಿಯೆಟ್ನಾಮ್‌ ಯುದ್ಧದಲ್ಲಿ ಸುಟ್ಟು ಕರಕಲಾದ ಮಾನವ ದೇಹಗಳ ವಾಸನೆ, ಎಲ್ಲೆಲ್ಲೂ ರಕ್ತ, ಗಾಯಗಳಲ್ಲಿ ರಕ್ತ ಹೆಪ್ಪುಗಟ್ಟಿರುವ ದೃಶ್ಯಗಳು ನೆನಪಿಗೆ ಬರಲು ಶುರುವಾಯಿತು. “ನಾನು ಬದುಕುತ್ತೇನಾ? ಉಳಿಯುತ್ತೇನಾ?” ಎಂದು ಪ್ರಾಣಕ್ಕಾಗಿ ಬೇಡಿಕೊಳ್ಳುತ್ತಿದ್ದ ಯುವ ಸೈನಿಕರ ಕೂಗುಗಳು ನನ್ನ ಕಿವಿಯಲ್ಲಿ ಕೇಳಿಸುತ್ತಿತ್ತು. ಅವರು ನನ್ನ ಕಣ್ಮುಂದೆಯೇ ಇದ್ದ ಹಾಗೆ ಅನಿಸುತ್ತಿತ್ತು. ಅವರು ಸತ್ತು ಹೋಗುತ್ತಾರೆ ಅಂತ ನನಗೆ ಗೊತ್ತಿದ್ದರೂ ನನ್ನ ಮುಖದಲ್ಲಿ ಅದು ಅವರಿಗೆ ಕಾಣದ ಹಾಗೆ ಪ್ರಯತ್ನಿಸುತ್ತಾ, ಸಮಾಧಾನ ಮಾಡುತ್ತಿದ್ದೆ. ರಾಜ್ಯ ಸಭಾಗೃಹದ ಹಿಂದೆ ಕೂತಿದ್ದ ನನಗೆ ದುಃಖ ಉಮ್ಮಳಿಸಿ ಬಂತು.

ತೊಂದರೆ, ಕಷ್ಟ ಬಂದರೂ ಯೆಹೋವನ ಮೇಲಿದ್ದ ನನ್ನ ಮೊದಲ ಪ್ರೀತಿಯನ್ನು ಕಳಕೊಳ್ಳದಿರಲು ನನ್ನಿಂದಾದ ಎಲ್ಲವನ್ನೂ ಮಾಡಿದ್ದೇನೆ

ಗಳಗಳನೇ ಅಳುತ್ತಾ ಪ್ರಾರ್ಥನೆ ಮಾಡಿದೆ. (ಕೀರ್ತ. 56:8) ಆಗ ಪುನರುತ್ಥಾನ ನಿರೀಕ್ಷೆ ಬಗ್ಗೆ ತುಂಬ ಆಳವಾಗಿ ಯೋಚಿಸಲು ಶುರುಮಾಡಿದೆ. ಆಗಲೇ ಈ ವಿಷಯ ಹೊಳೆಯಿತು: ಪುನರುತ್ಥಾನದ ಮೂಲಕ ಯೆಹೋವ ದೇವರು ನಾನು ನೋಡಿದ ಆ ಎಲ್ಲಾ ರಕ್ತದೋಕುಳಿಯ ನೆನಪನ್ನು ಮತ್ತು ನಾನು ಹಾಗೂ ಇತರರು ಅನುಭವಿಸಿರುವ ಭಾವನಾತ್ಮಕ ನೋವನ್ನು ಅಳಿಸಿಹಾಕಲಿದ್ದಾನೆ. ಆ ಯುವಕರಿಗೆ ದೇವರು ಮತ್ತೆ ಜೀವ ಕೊಡುತ್ತಾನೆ. ಆಗ ಅವರಿಗೆ ಆತನ ಬಗ್ಗೆ ಸತ್ಯ ಕಲಿಯುವ ಅವಕಾಶವೂ ಸಿಗಲಿದೆ. (ಅ. ಕಾ. 24:15) ಈ ಯೋಚನೆಗಳು ನನ್ನ ಅಂತರಂಗವನ್ನು ಸ್ಪರ್ಶಿಸಿದವು. ಆ ಕ್ಷಣದಿಂದ ನನ್ನ ನರನಾಡಿಯಲ್ಲಿ ಯೆಹೋವನಿಗಾಗಿ ಪ್ರೀತಿ ಉಕ್ಕಿಹರಿಯಿತು. ಆ ದಿನ ನನ್ನ ಬದುಕಲ್ಲಿ ಇಂದಿಗೂ ವಿಶೇಷ ದಿನವಾಗಿ ಉಳಿದುಕೊಂಡಿದೆ. ಅಂದಿನಿಂದ ಇಂದಿನವರೆಗೆ ತೊಂದರೆ, ಕಷ್ಟ ಬಂದರೂ ಯೆಹೋವನ ಮೇಲೆ ನನ್ನ ಮೊದಲ ಪ್ರೀತಿಯನ್ನು ಕಳಕೊಳ್ಳದಿರಲು ನನ್ನಿಂದಾದ ಎಲ್ಲವನ್ನೂ ಮಾಡಿದ್ದೇನೆ.

ಯೆಹೋವನು ನನಗೆ ತನ್ನ ಒಳ್ಳೇತನವನ್ನು ತೋರಿಸಿದ್ದಾನೆ

ಯುದ್ಧದಲ್ಲಿ ಜನ ಭಯಾನಕ ಕೆಲಸಗಳನ್ನು ಮಾಡುತ್ತಾರೆ. ನಾನೂ ಮಾಡಿದ್ದೇನೆ. ಆದರೆ ಎರಡು ವಚನಗಳ ಬಗ್ಗೆ ಧ್ಯಾನಿಸುವುದು ನನಗೆ ತುಂಬ ಸಹಾಯ ಮಾಡಿದೆ. ಆ ವಚನಗಳೆಂದರೆ ನನಗೆ ತುಂಬ ಇಷ್ಟ. ಮೊದಲನೇದು, ಪ್ರಕಟನೆ 12:10, 11. ನಾವು ಸಾಕ್ಷಿ ನೀಡುವ ವಾಕ್ಯದಿಂದ ಮಾತ್ರವಲ್ಲ, ಕುರಿಮರಿಯ ರಕ್ತದಿಂದಲೂ ಸೈತಾನನು ಸೋತಿದ್ದಾನೆ ಎಂದು ಅದರಲ್ಲಿದೆ. ಎರಡನೇದು, ಗಲಾತ್ಯ 2:20. ಅದರಲ್ಲಿ ಯೇಸು ಕ್ರಿಸ್ತನು “ನನಗೋಸ್ಕರ” ಸತ್ತನು ಎಂದು ಇದೆ. ಯೆಹೋವನು ನನ್ನನ್ನು, ನಾನು ಮಾಡಿದ ತಪ್ಪು ಕೆಲಸಗಳನ್ನು ಯೇಸುವಿನ ರಕ್ತದ ಮೂಲಕ ಕ್ಷಮಿಸಿದ್ದಾನೆ. ಈ ನಿಜಾಂಶ ಶುದ್ಧ ಮನಸ್ಸಾಕ್ಷಿ ಹೊಂದಲಿಕ್ಕೆ ಮತ್ತು ದಯಾಭರಿತ ದೇವರಾದ ಯೆಹೋವನ ಬಗ್ಗೆ ಇತರರಿಗೆ ತಿಳಿಸಲಿಕ್ಕೆ ನನ್ನ ಕೈಲಾದದ್ದೆಲ್ಲವನ್ನು ಮಾಡಲು ಸಹಾಯ ಮಾಡಿದೆ.—ಇಬ್ರಿ. 9:14.

ನನ್ನ ಬದುಕಿನ ಪುಟಗಳನ್ನು ಹಿಂದಕ್ಕೆ ತಿರುಗಿಸಿದರೆ, ಯೆಹೋವನು ಯಾವಾಗಲೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ ಎಂಬುದು ಸ್ಪಷ್ಟವಾಗಿ ತೋರಿಬರುತ್ತದೆ. ಅದಕ್ಕಾಗಿ ನಾನು ಆತನಿಗೆ ತುಂಬ ಕೃತಜ್ಞನು. ಉದಾಹರಣೆಗೆ, ನಾನು ಕಾರ್‌ನಲ್ಲಿ ವಾಸಿಸುತ್ತಿದ್ದೆ ಎಂದು ಜಿಮ್‌ಗೆ ಗೊತ್ತಾದ ದಿನವೇ ಅವರು ಒಬ್ಬ ಸಹೋದರಿಯನ್ನು ಸಂಪರ್ಕಿಸಲು ಹೇಳಿದರು. ಆ ಸಹೋದರಿಗೆ ಒಂದು ವಸತಿ ಗೃಹ ಇತ್ತು. ಆ ಪ್ರೀತಿಯ ಸಹೋದರಿ ಮತ್ತು ಜಿಮ್‌ ಮೂಲಕ ಯೆಹೋವನೇ ನನಗೆ ಒಂದು ಒಳ್ಳೇ ಮನೆ ಸಿಗುವಂತೆ ಮಾಡಿದನೆಂದು ನನಗೆ ಗೊತ್ತು. ಯೆಹೋವನು ಎಂಥಾ ದಯಾಭಾವದ ದೇವರು! ಅವನು ಯಾವತ್ತೂ ತನ್ನ ನಂಬಿಗಸ್ತ ಸೇವಕರ ಕೈಬಿಡುವುದಿಲ್ಲ.

ಹುರುಪಿನ ಜೊತೆ ಜಾಣ್ಮೆ ತೋರಿಸಲು ಕಲಿತೆ

ಮಿಷಿಗನ್‍ನಲ್ಲಿ ನನಗೇನೊ ಕೆಲಸ ಇದದ್ದರಿಂದ 1971ರ ಮೇ ತಿಂಗಳಂದು ಅಲ್ಲಿಗೆ ಹೋಗಬೇಕಾಗಿ ಬಂತು. ಫ್ಲಾರಿಡದ ಡೆಲ್‌ರೆ ಬೀಚ್‌ ಸಭೆಯಿಂದ ಹೊರಡುವ ಮುಂಚೆ ನನ್ನ ಕಾರ್‌ ಡಿಕ್ಕಿಯಲ್ಲಿ ಸಾಹಿತ್ಯವನ್ನು ತುಂಬಿಸಿಟ್ಟೆ. ಅಲ್ಲಿಂದ ಉತ್ತರ ದಿಕ್ಕಿಗೆ ಹೆದ್ದಾರಿಯಲ್ಲಿ ಹೊರಟೆ. ಪಕ್ಕದ ರಾಜ್ಯವಾದ ಜಾರ್ಜಿಯವನ್ನು ದಾಟಿ ಹೊರಗೆ ಹೋಗುವಷ್ಟರಲ್ಲಿ ನನ್ನ ಡಿಕ್ಕಿಯಲ್ಲಿದ್ದ ಸಾಹಿತ್ಯವೆಲ್ಲಾ ಖಾಲಿಯಾಯಿತು. ಏಕೆಂದರೆ ದೇವರ ರಾಜ್ಯದ ಕುರಿತು ನಾನು ಎಲ್ಲಾ ಕಡೆ ಹುರುಪಿನಿಂದ ಸುವಾರ್ತೆ ಸಾರಿದೆ. ಜೈಲುಗಳಿಗೆ ಹೋಗಿ ಅಲ್ಲೂ ಸಾರಿದೆ. ಹೆದ್ದಾರಿ ಪಕ್ಕದಲ್ಲಿ ಚಾಲಕರಿಗಾಗಿರುವ ವಿಶ್ರಾಂತಿ ಗೃಹಗಳಿಗೆ ಹೋಗಿ ಅಲ್ಲಿದ್ದ ಪುರುಷರಿಗೂ ಕರಪತ್ರಗಳನ್ನು ಕೊಟ್ಟಿದ್ದೆ. ಆಗ ನಾನು ಬಿತ್ತಿದ ಆ ಸತ್ಯದ ಬೀಜಗಳು ಮೊಳಕೆಯೊಡೆದವಾ ಇಲ್ಲವಾ ಎನ್ನುವುದು ನನಗೆ ಇಂದಿನ ವರೆಗೂ ಗೊತ್ತಿಲ್ಲ!—1 ಕೊರಿಂ. 3:6, 7.

ನಾನು ಸತ್ಯ ಕಲಿತ ಆರಂಭದಲ್ಲಿ ಇತರರೊಟ್ಟಿಗೆ ಅದನ್ನು ಹಂಚಿಕೊಳ್ಳುವಾಗ ಜಾಣ್ಮೆಯಿಲ್ಲದೆ ಮಾತಾಡುತ್ತಿದ್ದೆ ಅನ್ನುವ ವಿಷಯವನ್ನು ಒಪ್ಪಿಕೊಳ್ಳುತ್ತೇನೆ. ಕುಟುಂಬದವರೊಟ್ಟಿಗೂ ಹೀಗೇ ಮಾತಾಡುತ್ತಿದ್ದೆ. ನನ್ನ ಮೊದಲ ಪ್ರೀತಿ ಯೆಹೋವನಿಗಾಗಿತ್ತು. ಆದು ಎಷ್ಟು ಬಲವಾಗಿತ್ತೆಂದರೆ ಧೈರ್ಯದಿಂದ ಸಾರುತ್ತಿದ್ದೆ ನಿಜ ಆದರೆ ಮುಖಕ್ಕೆ ಹೊಡೆದ ಹಾಗೆ ಮಾತಾಡುತ್ತಿದ್ದೆ. ಜಾನ್‌ ಮತ್ತು ರಾನ್‌ ನನ್ನ ಅಣ್ಣಂದಿರು. ಅವರನ್ನು ನಾನು ತುಂಬ ಪ್ರೀತಿಸುತ್ತಾ ಇದ್ದದರಿಂದ ಅವರಿಗಿಷ್ಟ ಇಲ್ಲದಿದ್ದರೂ ಬಲವಂತವಾಗಿ ಸತ್ಯದ ಬಗ್ಗೆ ಹೇಳುತ್ತಿದ್ದೆ. ನಾನು ಹಾಗೆ ನಡಕೊಂಡದ್ದಕ್ಕೆ ಕಾಲಾನಂತರ ಅವರ ಬಳಿ ಕ್ಷಮೆ ಕೇಳಿದೆ. ಆದರೆ ಅವರು ಸತ್ಯಕ್ಕೆ ಬರಬೇಕು ಅಂತ ಪ್ರಾರ್ಥನೆ ಮಾಡುವುದನ್ನು ಮಾತ್ರ ಇಂದಿನ ತನಕ ನಿಲ್ಲಿಸಿಲ್ಲ.  ಅಂದಿನಿಂದ ಇವತ್ತಿನ ವರೆಗೆ ಜಾಣ್ಮೆಯಿಂದ ಸಾರಲು ಮತ್ತು ಕಲಿಸಲು ನನಗೆ ಯೆಹೋವನು ಸಹಾಯ ಮಾಡಿದ್ದಾನೆ.—ಕೊಲೊ. 4:6.

ನಾನು ಜೀವನದಲ್ಲಿ ಪ್ರೀತಿಸಿದ ಇತರ ವ್ಯಕ್ತಿಗಳು

ಯೆಹೋವನನ್ನು ತುಂಬ ಪ್ರೀತಿಸುತ್ತೇನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಜೊತೆಗೆ ನಾನು ಪ್ರೀತಿಸುವ ಬೇರೆಯವರೂ ಇದ್ದಾರೆ. ಯೆಹೋವನ ನಂತರ ನಾನು ಹೆಚ್ಚು ಪ್ರೀತಿಸುವುದೆಂದರೆ ನನ್ನ ಮಡದಿ ಸೂಸನ್‍ಳನ್ನು. ರಾಜ್ಯದ ಕೆಲಸಗಳಲ್ಲಿ ನನಗೆ ನೆರವಾಗುವ ಸಂಗಾತಿ ಸಿಗಬೇಕೆಂಬ ಆಸೆ ನನಗಿತ್ತು. ಅದಕ್ಕೆ ತಕ್ಕಂತೆ ಸೂಸನ್‌ ಒಬ್ಬ ಆಧ್ಯಾತ್ಮಿಕ ಸ್ತ್ರೀಯಾಗಿದ್ದಳು. ಮದುವೆ ಮುಂಚೆ ನಾವಿಬ್ಬರೂ ಒಬ್ಬರನ್ನೊಬ್ಬರು ತಿಳಿದುಕೊಳ್ಳುತ್ತಿದ್ದ ಸಮಯ ನನಗಿನ್ನೂ ಚೆನ್ನಾಗಿ ನೆನಪಿದೆ. ಒಂದು ದಿನ ಅವಳನ್ನು ಭೇಟಿ ಮಾಡಲು ಅವಳ ಮನೆಗೆ ಹೋಗಿದ್ದೆ. ಅವಳ ಮನೆ ರೋಡ್ ಐಲೆಂಡ್‍ನ ಕ್ರಾನ್ಸ್‌ಟನ್‍ನಲ್ಲಿತ್ತು. ಅವಳು ಮನೆಯ ವರಾಂಡದಲ್ಲಿ ಕೂತು ಕಾವಲಿನಬುರುಜುವಿನಿಂದ ಒಂದು ಲೇಖನ ಓದುತ್ತಿದ್ದಳು. ಅದು ಅಧ್ಯಯನ ಲೇಖನವಾಗಿರಲಿಲ್ಲ! ಆದರೂ ಕೈಯಲ್ಲಿ ಬೈಬಲ್‌ ಇಟ್ಟುಕೊಂಡು ವಚನ ತೆರೆದು ನೋಡುತ್ತಿದ್ದಳು. ಇದನ್ನು ನೋಡಿ ನನಗೆ ತುಂಬ ಆಶ್ಚರ್ಯವಾಯಿತು. ‘ಆಧ್ಯಾತ್ಮಿಕ ಸ್ತ್ರೀ ಅಂದರೆ ಹೀಗಿರಬೇಕು’ ಅಂತ ನನ್ನ ಮನಸ್ಸಿಗೆ ಬಂತು. ಡಿಸೆಂಬರ್‌ 1971ರಲ್ಲಿ ಮದುವೆಯಾದೆವು. ಆ ದಿನದಿಂದ ಇಂದಿನ ವರೆಗೂ ಸೂಸನ್‌ ನನಗೆ ಜೊತೆಯಾಗಿದ್ದು ಬೆಂಬಲ ನೀಡಿದ್ದಾಳೆ. ಅವಳಲ್ಲಿರುವ ಗುಣಗಳಲ್ಲೇ ನನಗೆ ಪ್ರಿಯವಾದದ್ದು ಯಾವುದು ಗೊತ್ತಾ? ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಯೆಹೋವನನ್ನು ಪ್ರೀತಿಸುತ್ತಾಳೆ.

ನನ್ನ ಹೆಂಡತಿ ಸೂಸನ್‌, ನಮ್ಮ ಮಕ್ಕಳಾದ ಪೌಲ್‌ ಮತ್ತು ಜೆಸ್ಸಿ

ನಮಗೆ ಇಬ್ಬರು ಮಕ್ಕಳಿದ್ದಾರೆ. ಜೆಸ್ಸಿ ಮತ್ತು ಪೌಲ್‌. ಅವರು ಬೆಳೆಯುವಾಗ ಯೆಹೋವನು ಅವರ ಜೊತೆಗಿದ್ದನು. (1 ಸಮು. 3:19) ಅವರು ಸತ್ಯವನ್ನು ಸ್ವಂತದ್ದಾಗಿ ಮಾಡಿಕೊಂಡಿರುವುದರಿಂದ ನನಗೆ ಮತ್ತು ಸೂಸನ್‌ಗೆ ಒಳ್ಳೇ ಹೆಸರನ್ನು ತಂದುಕೊಟ್ಟಿದ್ದಾರೆ. ಅವರ ಮೊದಲ ಪ್ರೀತಿಯೂ ಯೆಹೋವನೇ ಆಗಿರುವುದರಿಂದ ಆತನ ಸೇವೆಯಲ್ಲಿ ಮುಂದುವರಿಯಲು ಅವರಿಗೆ ಸಹಾಯವಾಗಿದೆ. ಇಬ್ಬರೂ 20ಕ್ಕೂ ಹೆಚ್ಚು ವರ್ಷಗಳಿಂದ ಪೂರ್ಣ ಸಮಯ ಸೇವೆಯಲ್ಲಿದ್ದಾರೆ. ನನ್ನ  ಇಬ್ಬರೂ ಮಕ್ಕಳು ಆಧ್ಯಾತ್ಮಿಕ ಸ್ತ್ರೀಯರನ್ನು ಮದುವೆಯಾದರು. ಇವರ ಹೆಸರು ಸ್ಟೆಫನಿ ಮತ್ತು ರಾಕೆಲ್‌. ಇವರಿಬ್ಬರೂ ಯೆಹೋವ ದೇವರನ್ನು ತಮ್ಮ ಪೂರ್ಣ ಹೃದಯ ಮತ್ತು ಪ್ರಾಣದಿಂದ ಪ್ರೀತಿಸುತ್ತಾರೆ. ಸೊಸೆಯಂದಿರು ಅಂದರೆ ನನಗೆ ತುಂಬ ಪ್ರೀತಿ. ಅವರನ್ನು ನನ್ನ ಸ್ವಂತ ಮಕ್ಕಳಂತೆ ನೋಡುತ್ತೇನೆ.—ಎಫೆ. 6:6.

ಸಾರುವ ಕೆಲಸ ವಿರಳವಾಗಿ ನಡೆದಿರುವ ಕ್ಷೇತ್ರದಲ್ಲಿ ನಾವು ಕುಟುಂಬವಾಗಿ ಸಾರುವುದನ್ನು ಆನಂದಿಸಿದೆವು

ನನ್ನ ದೀಕ್ಷಾಸ್ನಾನದ ನಂತರ ರೋಡ್ ಐಲೆಂಡ್‍ನಲ್ಲಿ 16 ವರ್ಷ ಸೇವೆ ಮಾಡಿದೆ. ಅಲ್ಲಿ ತುಂಬ ಬೆಲೆಬಾಳುವ ಸ್ನೇಹಿತರು ನನಗೆ ಸಿಕ್ಕಿದರು. ಉತ್ತಮ ಹಿರಿಯರ ಜೊತೆ ಕೆಲಸ ಮಾಡಿದ ಸವಿ ನೆನಪುಗಳು ನನಗಿವೆ. ಜೊತೆಗೆ ತುಂಬ ಮಂದಿ ಸಂಚರಣ ಮೇಲ್ವಿಚಾರಕರಿಗೂ ನಾನು ಆಭಾರಿ. ಏಕೆಂದರೆ ನನ್ನ ಮೇಲೆ ಅವರು ಒಳ್ಳೇ ಪ್ರಭಾವಬೀರಿದರು. ಯೆಹೋವನ ಮೇಲೆ ತಮ್ಮ ಮೊದಲ ಪ್ರೀತಿಯನ್ನು ಕಾಪಾಡಿಕೊಂಡಿರುವ ಈ ಸಹೋದರರ ಜೊತೆ ಕೆಲಸ ಮಾಡಿರುವುದು ನನ್ನ ಸುಯೋಗ. ಉತ್ತರ ಕ್ಯಾರೊಲಿನ್‍ನಲ್ಲಿ ಹೆಚ್ಚಿನ ಅಗತ್ಯವಿದ್ದದರಿಂದ 1987ರಲ್ಲಿ ಅಲ್ಲಿಗೆ ಸ್ಥಳಾಂತರಿಸಿದೆವು. ಅಲ್ಲಿಯೂ ಮರೆಯಲಾಗದ ಸ್ನೇಹಸಂಬಂಧಗಳನ್ನು ಬೆಳೆಸಿಕೊಂಡೆವು. *

ಸಂಚರಣ ಕೆಲಸದಲ್ಲಿದ್ದಾಗ ಕ್ಷೇತ್ರ ಸೇವಾ ಕೂಟವನ್ನು ನಡೆಸುತ್ತಿರುವುದು

ಆಗಸ್ಟ್‌ 2002ರಲ್ಲಿ ನನಗೆ ಮತ್ತು ಸೂಸನ್‌ಗೆ ಅಮೆರಿಕದ ಪ್ಯಾಟರ್‌ಸನ್‌ ಬೆತೆಲ್‌ ಕುಟುಂಬದ ಭಾಗವಾಗಲು ಆಮಂತ್ರಣ ಸಿಕ್ಕಿದಾಗ ಅದನ್ನು ಸ್ವೀಕರಿಸಿದೆವು. ನಾನು ಸರ್ವಿಸ್‌ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡಿದೆ. ಸೂಸನ್‌ ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಕೆಲಸವನ್ನು ಅವಳು ತುಂಬ ಇಷ್ಟಪಡುತ್ತಿದ್ದಳು! ಆಗಸ್ಟ್‌ 2005ರಲ್ಲಿ ಆಡಳಿತ ಮಂಡಲಿಯ ಸದಸ್ಯನಾಗುವ ಅವಕಾಶ ಸಿಕ್ಕಿತು. ಈ ನೇಮಕ ಪಡೆಯುವಷ್ಟು ಅರ್ಹತೆ ನನಗಿಲ್ಲ ಎಂದು ನನಗನಿಸುತ್ತಿತ್ತು. ನನಗೆ ಸಿಕ್ಕಿದ ಇಷ್ಟು ದೊಡ್ಡ ಕೆಲಸ, ಜವಾಬ್ದಾರಿ, ಮಾಡಬೇಕಾದ ಪ್ರಯಾಣದ ಬಗ್ಗೆ ಯೋಚಿಸಿ ನನ್ನ ಮುದ್ದಿನ ಹೆಂಡತಿ ಕಂಗಾಲಾದಳು. ಅವಳಿಗೆ ವಿಮಾನ ಪ್ರಯಾಣ ಮಾಡುವುದೆಂದರೆ ಆಗುವುದಿಲ್ಲ. ಹಾಗಿದ್ದರೂ ನನ್ನ ಜೊತೆ ತುಂಬ ಕಡೆ ಪ್ರಯಾಣ ಮಾಡುತ್ತಾಳೆ! ನನಗೆ ಆದಷ್ಟು ಸಹಾಯ ಬೆಂಬಲ ನೀಡುವ ನಿರ್ಧಾರ ಮಾಡಲು ಆಡಳಿತ ಮಂಡಲಿಯ ಇತರ ಸದಸ್ಯರ ಹೆಂಡತಿಯರು ಪ್ರೀತಿಯಿಂದ ಹೇಳಿದ ಮಾತುಗಳು ತನಗೆ ನೆರವಾಗಿವೆ ಎನ್ನುತ್ತಾಳೆ ಸೂಸನ್‌. ಅವಳು ನನಗೆ ನಿಜವಾಗಲೂ ಸಹಾಯ, ಬೆಂಬಲ ನೀಡಿದ್ದಾಳೆ. ಅದಕ್ಕಾಗಿ ನಾನವಳನ್ನು ತುಂಬ ಪ್ರೀತಿಸುತ್ತೇನೆ.

ನನ್ನ ಆಫೀಸ್‍ನಲ್ಲಿ ಅನೇಕ ಫೋಟೋಗಳಿವೆ. ಅವುಗಳು ನನಗೆ ತುಂಬ ಅಮೂಲ್ಯ! ನಾನು ಎಂಥಾ ಸುಂದರ ಬದುಕನ್ನು ಆನಂದಿಸಿದ್ದೇನೆಂದು ಅವು ನನಗೆ ನೆನಪು ಹುಟ್ಟಿಸುತ್ತವೆ. ನಾನು ಮೊದಲು ಪ್ರೀತಿಸಿದ್ದು ಯೆಹೋವನನ್ನೇ ಎಂದು ಯಾವಾಗಲೂ ನೆನಪಿಟ್ಟುಕೊಳ್ಳಲು ನನ್ನಿಂದಾದ ಎಲ್ಲವನ್ನೂ ಮಾಡಿದ್ದೇನೆ. ಅದಕ್ಕಾಗಿ ಈಗಾಗಲೇ ಅನೇಕ ಅದ್ಭುತ ಆಶೀರ್ವಾದಗಳನ್ನು ಅನುಭವಿಸಿದ್ದೇನೆ.

ಕುಟುಂಬದ ಜೊತೆ ಕಳೆಯುವ ಸಮಯ ನನಗೆ ತುಂಬ ಆನಂದ ತರುತ್ತದೆ

^ ಪ್ಯಾರ. 31 ಸಹೋದರ ಮಾರಿಸ್‌ರವರ ಪೂರ್ಣ ಸಮಯ ಸೇವೆಯ ಬಗ್ಗೆ ಮಾರ್ಚ್ 15, 2006ರ ಕಾವಲಿನಬುರುಜು ಪುಟ 26ರಲ್ಲಿ ಮಾಹಿತಿ ಇದೆ.