ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸದಾ ಎಚ್ಚರವಾಗಿ” ಇರುವಿರಾ?

“ಸದಾ ಎಚ್ಚರವಾಗಿ” ಇರುವಿರಾ?

“ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.”—ಮತ್ತಾ. 25:13.

1, 2. (ಎ) ಕಡೇ ದಿವಸಗಳ ಬಗ್ಗೆ ಯೇಸು ಏನು ಹೇಳಿದನು? (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

ಯೇಸು ಆಲೀವ್‌ ಮರಗಳ ಗುಡ್ಡದ ಮೇಲೆ ಕುಳಿತಿದ್ದನು. ಅಲ್ಲಿಂದ ಯೆರೂಸಲೇಮ್‌ ದೇವಾಲಯ ಕಾಣುತ್ತಿತ್ತು. ಅಪೊಸ್ತಲರಲ್ಲಿ ನಾಲ್ಕು ಮಂದಿ ಪೇತ್ರ, ಅಂದ್ರೆಯ, ಯಾಕೋಬ, ಯೋಹಾನ ಆತನ ಜೊತೆ ಇದ್ದರು. ಯೇಸು ಭವಿಷ್ಯದ ಬಗ್ಗೆ ರೋಮಾಂಚಕ ಪ್ರವಾದನೆ ಹೇಳುತ್ತಿದ್ದಾಗ ಅವರು ಮೈಯೆಲ್ಲಾ ಕಿವಿಯಾಗಿಸಿಕೊಂಡು ಕೇಳುತ್ತಾ ಇದ್ದರು. ಯೇಸು ಹೇಳಿದ ಆ ಪ್ರವಾದನೆ ಆತನು ದುಷ್ಟ ಲೋಕದ ಕಡೇ ದಿವಸಗಳಲ್ಲಿ ದೇವರ ರಾಜ್ಯದಲ್ಲಿ ಆಳುತ್ತಿರುವಾಗ ಏನಾಗುತ್ತದೆಂದು ತಿಳಿಸಿತು. ಆಗ ಭೂಮಿ ಮೇಲೆ ತನ್ನನ್ನು ಪ್ರತಿನಿಧಿಸುವ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ತನ್ನ ಹಿಂಬಾಲಕರಿಗೆ ಸಮಯಕ್ಕೆ ಸರಿಯಾಗಿ ಬೇಕಾದ ಆಧ್ಯಾತ್ಮಿಕ ಆಹಾರ ಕೊಡುವುದೆಂದೂ ಯೇಸು ಹೇಳಿದನು.—ಮತ್ತಾ. 24:45-47.

2 ನಂತರ ಅದೇ ಪ್ರವಾದನೆಯಲ್ಲಿ ಯೇಸು ಹತ್ತು ಕನ್ಯೆಯರ ಬಗ್ಗೆ ಕಥೆಯನ್ನು ಹೇಳಿದನು. (ಮತ್ತಾಯ 25:1-13 ಓದಿ.) ಅದಕ್ಕೆ ಸಂಬಂಧಪಟ್ಟ ಮೂರು ಪ್ರಶ್ನೆಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ: (1) ಈ ಕಥೆಯ ಮೂಲ ಸಂದೇಶ ಏನು? (2) ಈ ಕಥೆಯಲ್ಲಿರುವ ಯೇಸುವಿನ ಸಲಹೆಯನ್ನು ನಂಬಿಗಸ್ತ ಅಭಿಷಿಕ್ತರು ಹೇಗೆ ಪಾಲಿಸಿದ್ದಾರೆ ಮತ್ತು ಇದರ ಪರಿಣಾಮಗಳೇನು?  (3) ಈ ಕಥೆಯಿಂದ ಇಂದು ನಮಗೇನು ಪ್ರಯೋಜನ ಇದೆ?

ಕಥೆಯ ಸಂದೇಶ ಏನು?

3. (ಎ) ಹಿಂದೆ ನಮ್ಮ ಸಾಹಿತ್ಯದಲ್ಲಿ ಹತ್ತು ಕನ್ಯೆಯರ ಕುರಿತ ಕಥೆಯನ್ನು ಹೇಗೆ ವಿವರಿಸಲಾಗುತ್ತಿತ್ತು? (ಬಿ) ಇಂಥ ವಿವರಣೆಯಿಂದಾಗಿ ಏನಾಗಿರುವ ಸಾಧ್ಯತೆಯಿದೆ?

3 ಇತ್ತೀಚಿನ ವರ್ಷಗಳಲ್ಲಿ ನಂಬಿಗಸ್ತ ಆಳು ಕೆಲವು ಬೈಬಲ್‌ ವೃತ್ತಾಂತಗಳನ್ನು ವಿವರಿಸುವ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ಇದನ್ನೇ ಹಿಂದಿನ ಲೇಖನದಲ್ಲಿ ಕಲಿತೆವು. ಇಂದು ನಂಬಿಗಸ್ತ ಆಳು ಆ ವೃತ್ತಾಂತಗಳಿಗೆ ಇರಬಹುದಾದ ಸಾಂಕೇತಿಕ ಹಾಗೂ ಪ್ರವಾದನಾತ್ಮಕ ಅರ್ಥಕ್ಕೆ ಕಡಿಮೆ ಗಮನಕೊಟ್ಟು, ಪ್ರಾಯೋಗಿಕ ಪಾಠಗಳಿಗೆ ಹೆಚ್ಚು ಗಮನ ಕೊಡುತ್ತಿದೆ. ಹತ್ತು ಕನ್ಯೆಯರ ಕುರಿತು ಯೇಸು ಹೇಳಿದ ಕಥೆಯನ್ನೇ ತಕ್ಕೊಳ್ಳಿ. ಅದರಲ್ಲಿ ತಿಳಿಸಲಾದ ದೀಪ, ಎಣ್ಣೆ, ಪಾತ್ರೆ ಏನನ್ನೋ ಅಥವಾ ಯಾರನ್ನೋ ಸೂಚಿಸುತ್ತದೆಂದು ಹಿಂದೆ ನಮ್ಮ ಸಾಹಿತ್ಯ ವಿವರಿಸುತ್ತಿತ್ತು. ಈ ರೀತಿ ಚಿಕ್ಕಪುಟ್ಟ ವಿವರಗಳಿಗೆ ಹೆಚ್ಚು ಗಮನ ಕೊಟ್ಟದ್ದರಿಂದ ಕಥೆಯ ಸರಳ ಹಾಗೂ ತುರ್ತಿನ ಸಂದೇಶಕ್ಕೆ ನಾವು ಗಮನ ಕೊಡದೇ ಹೋಗಿರುವ ಸಾಧ್ಯತೆ ಇದೆಯಾ? ಈ ಪ್ರಶ್ನೆಯ ಉತ್ತರ ತುಂಬ ಪ್ರಾಮುಖ್ಯ.

4. ಕಥೆಯಲ್ಲಿನ ಮದುಮಗ ಮತ್ತು ಕನ್ಯೆಯರು ಯಾರೆಂದು ಹೇಗೆ ಗುರುತಿಸಬಹುದು?

4 ಯೇಸು ಹೇಳಿದ ಕಥೆಯ ಮೂಲ ಸಂದೇಶ ಏನೆಂದು ನೋಡೋಣ. ಮೊದಲಿಗೆ ಕಥೆಯಲ್ಲಿರುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳೋಣ. ಮದುಮಗನು ಯಾರು? ಯೇಸು. ಇದಕ್ಕೆ ಮುಂಚೆ ಯೇಸು ತನ್ನನ್ನು ಮದುಮಗನಿಗೆ ಹೋಲಿಸಿದ್ದರಿಂದ ಇದನ್ನು ಹೇಳಬಹುದು. (ಲೂಕ 5:34, 35) ಕನ್ಯೆಯರು ಯಾರು? ಅಭಿಷಿಕ್ತರ ‘ಚಿಕ್ಕ ಹಿಂಡು.’ ಇದನ್ನು ಹೇಗೆ ಹೇಳಬಹುದು? ಮದುಮಗನು ಬರುವಾಗ ಈ ಕನ್ಯೆಯರು ಉರಿಯುತ್ತಿರುವ ದೀಪಗಳೊಂದಿಗೆ ಸಿದ್ಧರಾಗಿರುತ್ತಾರೆಂದು ಕಥೆಯಲ್ಲಿ ಹೇಳಲಾಗಿದೆ. ಯೇಸು ತನ್ನ ಅಭಿಷಿಕ್ತ ಹಿಂಬಾಲಕರಿಗೆ ಹೀಗಂದಿದ್ದನು: ‘ನಿಮ್ಮ ನಡುಗಳು ಕಟ್ಟಿರಲಿ ಮತ್ತು ನಿಮ್ಮ ದೀಪಗಳು ಉರಿಯುತ್ತಾ ಇರಲಿ. ನೀವಾದರೋ ತಮ್ಮ ಯಜಮಾನನು ಮದುವೆಯಿಂದ ಯಾವಾಗ ಹಿಂದಿರುಗುತ್ತಾನೆ ಎಂದು ಕಾಯುತ್ತಿರುವ ಜನರಂತಿರಿ.’ (ಲೂಕ 12:32, 35, 36) ಅಲ್ಲದೇ ಅಪೊಸ್ತಲರಾದ ಪೌಲ ಮತ್ತು ಯೋಹಾನ ಇಬ್ಬರೂ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರನ್ನು ಶುದ್ಧ ಕನ್ಯೆಯರಿಗೆ ಹೋಲಿಸುತ್ತಾರೆ. (2 ಕೊರಿಂ. 11:2; ಪ್ರಕ. 14:4) ಆದ್ದರಿಂದ ಮತ್ತಾಯ 25:1-13ರಲ್ಲಿರುವ ಎಚ್ಚರಿಕೆ ಹಾಗೂ ಬುದ್ಧಿವಾದ ಯೇಸುವಿನ ಅಭಿಷಿಕ್ತ ಹಿಂಬಾಲಕರಿಗೆ ಅನ್ವಯಿಸುತ್ತದೆಂದು ಹೇಳಬಹುದು.

5. ತಾನು ಹೇಳಿದ ಕಥೆಯು ಯಾವ ಸಮಯಕ್ಕೆ ಅನ್ವಯವಾಗುತ್ತದೆಂದು ಯೇಸು ತೋರಿಸಿಕೊಟ್ಟದ್ದು ಹೇಗೆ?

5 ಯೇಸು ಕೊಟ್ಟ ಬುದ್ಧಿವಾದ ಯಾವ ಸಮಯಕ್ಕೆ ಅನ್ವಯವಾಗುತ್ತದೆ? ಕಥೆಯ ಕೊನೆಯಲ್ಲಿರುವ ಆತನ ಮಾತಿನಿಂದ ಇದಕ್ಕೆ ಉತ್ತರ ಸಿಗುತ್ತದೆ. “ಮದುಮಗನು ಬಂದನು” ಎಂದು ಯೇಸು ಹೇಳಿದನು. (ಮತ್ತಾ. 25:10) ಮತ್ತಾಯ 24 ಮತ್ತು 25ನೇ ಅಧ್ಯಾಯಗಳಲ್ಲಿರುವ ಪ್ರವಾದನೆಯಲ್ಲಿ ಯೇಸು ‘ಬರುವುದರ’ ಬಗ್ಗೆ ಎಂಟು ಸಾರಿ ಹೇಳಲಾಗಿದೆ. ಇದನ್ನು ಜುಲೈ 15, 2013ರ ಕಾವಲಿನಬುರುಜುವಿನಲ್ಲಿ ಕಲಿತೆವು. ಯೇಸು ತಾನು ‘ಬರುವುದರ’ ಕುರಿತು ಹೇಳಿದಾಗಲೆಲ್ಲ ಮಹಾ ಸಂಕಟದ ಸಮಯದಲ್ಲಿ ತಾನು ತೀರ್ಪುಮಾಡಲು ಮತ್ತು ಈ ದುಷ್ಟ ಲೋಕವನ್ನು ನಾಶಮಾಡಲು ಬರುವ ಸಮಯಕ್ಕೆ ಸೂಚಿಸುತ್ತಿದ್ದನು. ಆದ್ದರಿಂದ ಆತನು ಹೇಳಿದ ಕಥೆ ಕಡೇ ದಿವಸಗಳಿಗೆ ಅನ್ವಯಿಸುತ್ತದೆ, ಆದರೆ ಅವನು ‘ಬರುವುದು’ ಮಹಾ ಸಂಕಟದ ಸಮಯದಲ್ಲಿ ಎಂದು ಹೇಳಬಹುದು.

6. ಕಥೆಯ ಮೂಲ ಸಂದೇಶ ಏನು?

6 ಈ ಕಥೆಯ ಮೂಲ ಸಂದೇಶ ಏನು? ಈ ಕಥೆಯ ಹಿಂದಿನ ವಚನಗಳಲ್ಲಿ ಯೇಸು ಏನು ಹೇಳಿದನು ಅಂತ ನೆನಪುಮಾಡಿಕೊಳ್ಳಿ. ಮತ್ತಾಯ 24ರಲ್ಲಿ ಯೇಸು ‘ನಂಬಿಗಸ್ತನು, ವಿವೇಚನೆಯುಳ್ಳವನು ಆದ ಆಳಿನ’ ಕುರಿತು ಹೇಳಿದ್ದನು. ಈ ಆಳು ಕಡೇ ದಿವಸಗಳಲ್ಲಿ ಕ್ರಿಸ್ತನ ಹಿಂಬಾಲಕರ ಮಧ್ಯೆ ಮುಂದಾಳತ್ವ ವಹಿಸುವ ಅಭಿಷಿಕ್ತರ ಒಂದು ಚಿಕ್ಕ ಗುಂಪಾಗಿದೆ. ಅವರು ನಂಬಿಗಸ್ತರಾಗಿ ಉಳಿಯಬೇಕೆಂದು ಯೇಸು ಎಚ್ಚರಿಸಿದನು. 25ನೇ ಅಧ್ಯಾಯದಲ್ಲಿ ಯೇಸು ಹತ್ತು ಕನ್ಯೆಯರ ಕಥೆಯನ್ನು ಹೇಳುವ ಮೂಲಕ ಕಡೇ ದಿವಸಗಳಲ್ಲಿರುವ ಎಲ್ಲಾ ಅಭಿಷಿಕ್ತರಿಗೆ ಬುದ್ಧಿವಾದ ಕೊಡುತ್ತಾನೆ. ತಮಗಿರುವ ಸ್ವರ್ಗೀಯ ಬಹುಮಾನವನ್ನು ಕಳೆದುಕೊಳ್ಳದಂತೆ “ಸದಾ ಎಚ್ಚರವಾಗಿರಿ”  ಎನ್ನುವುದೇ ಆತನು ಕೊಟ್ಟ ಸಂದೇಶ. (ಮತ್ತಾ. 25:13) ಈಗ ಈ ಕಥೆಯ ಕುರಿತು ಇನ್ನೂ ಹೆಚ್ಚನ್ನು ಕಲಿಯೋಣ ಮತ್ತು ಅಭಿಷಿಕ್ತರು ಈ ಬುದ್ಧಿವಾದವನ್ನು ಹೇಗೆ ಅನ್ವಯಿಸಿದ್ದಾರೆಂದು ನೋಡೋಣ.

ಕಥೆಯ ಬುದ್ಧಿವಾದವನ್ನು ಅಭಿಷಿಕ್ತರು ಹೇಗೆ ಅನ್ವಯಿಸಿದ್ದಾರೆ?

7, 8. (ಎ) ಬುದ್ಧಿವಂತೆ ಕನ್ಯೆಯರು ಸಿದ್ಧರಾಗಿರಲು ಸಾಧ್ಯವಾದದ್ದೇಕೆ? (ಬಿ) ಅಭಿಷಿಕ್ತರು ಹೇಗೆ ತಯಾರಾಗಿದ್ದಾರೆ?

7 ಬುದ್ಧಿವಂತೆ ಕನ್ಯೆಯರು ಬುದ್ಧಿಹೀನ ಕನ್ಯೆಯರಂತೆ ಇರದೆ ಮದುಮಗ ಬಂದಾಗ ಸಿದ್ಧರಾಗಿದ್ದರು ಅಂತ ಯೇಸು ಹೇಳಿದನು. ಅವರು ಸಿದ್ಧರಾಗಿರಲು ಏಕೆ ಸಾಧ್ಯವಾಯಿತು? ಏಕೆಂದರೆ ಅವರು ಮೊದಲೇ ತಯಾರಿ ನಡೆಸಿದ್ದರು ಮತ್ತು ಎಚ್ಚರವಾಗಿದ್ದರು. ಎಲ್ಲಾ ಹತ್ತು ಕನ್ಯೆಯರು ನಿದ್ದೆಮಾಡದೆ ರಾತ್ರಿಯಿಡೀ ತಮ್ಮ ದೀಪಗಳು ಆರಿಹೋಗದಂತೆ ನೋಡಿಕೊಳ್ಳಬೇಕಿತ್ತು. ಬುದ್ಧಿವಂತೆ ಕನ್ಯೆಯರು ಬುದ್ಧಿಹೀನ ಕನ್ಯೆಯರಂತಿರದೆ ದೀಪಗಳ ಜೊತೆ ಬೇಕಾದಷ್ಟು ಎಣ್ಣೆಯನ್ನೂ ತರುವ ಮೂಲಕ ತಯಾರಾಗಿದ್ದರು. ಯೇಸುವಿನ ಬರೋಣಕ್ಕಾಗಿ ನಂಬಿಗಸ್ತ ಅಭಿಷಿಕ್ತರು ಹೇಗೆ ತಯಾರಾಗಿದ್ದಾರೆ?

8 ಅಭಿಷಿಕ್ತರು ತಮಗಿರುವ ನೇಮಕವನ್ನು ಕೊನೆವರೆಗೂ ಮಾಡಲು ತಯಾರಿದ್ದಾರೆ. ದೇವರ ಸೇವೆ ಮಾಡಲು ತಾವು ಸೈತಾನನ ಲೋಕದಲ್ಲಿರುವ ಸುಖ ಸೌಕರ್ಯಗಳನ್ನು ಬಿಟ್ಟುಕೊಡಬೇಕು ಅಂತ ಅವರಿಗೆ ಗೊತ್ತು. ಅಂಥ ಪರಿಸ್ಥಿತಿ ಬಂದರೆ ಅದನ್ನು ಮಾಡೇ ಮಾಡುತ್ತಾರೆ. ಅಂತ್ಯ ಹತ್ತಿರದಲ್ಲಿರುವ ಕಾರಣಕ್ಕಾಗಿ ಅಲ್ಲ ಬದಲಾಗಿ ದೇವರನ್ನು ಮತ್ತು ಆತನ ಮಗನನ್ನು ಅವರು ತುಂಬ ಪ್ರೀತಿಸುವುದರಿಂದ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುವ ಛಲ ಅವರಿಗಿದೆ. ಅವರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಾರೆ ಮಾತ್ರವಲ್ಲ ಲೋಕದ ಪ್ರಾಪಂಚಿಕ, ಅನೈತಿಕ ಮತ್ತು ಸ್ವಾರ್ಥ ಮನೋಭಾವ ತಮ್ಮನ್ನು ತಟ್ಟದಂತೆ ನೋಡಿಕೊಳ್ಳುತ್ತಾರೆ. ಬುದ್ಧಿವಂತೆ ಕನ್ಯೆಯರು ದೀಪಗಳೊಂದಿಗೆ ಹೇಗೆ ಸಿದ್ಧರಾಗಿದ್ದರೋ ಹಾಗೆಯೇ ಇವರು ಬೆಳಕು ಕೊಡುವ ವ್ಯಕ್ತಿಗಳಂತೆ ಹೊಳೆಯುತ್ತಿದ್ದಾರೆ. ಮದುಮಗನು ಬರುವುದಕ್ಕೆ ತಡವಾಗುತ್ತಿದೆ ಅಂತ ತೋರಿದರೂ ತಾಳ್ಮೆಯಿಂದ ಕಾಯುತ್ತಿದ್ದಾರೆ.—ಫಿಲಿ. 2:15.

9. (ಎ) ತೂಕಡಿಸುವ ಬಗ್ಗೆ ಯೇಸು ಯಾವ ಎಚ್ಚರಿಕೆ ಕೊಟ್ಟನು? (ಬಿ) “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗಿಗೆ ಅಭಿಷಿಕ್ತರು ಹೇಗೆ ಪ್ರತಿಕ್ರಿಯಿಸಿದ್ದಾರೆ? (ಪಾದಟಿಪ್ಪಣಿ ಸಹ ನೋಡಿ.)

9 ಬುದ್ಧಿವಂತೆ ಕನ್ಯೆಯರು ಮದುಮಗನ ಬರೋಣಕ್ಕೆ ಸಿದ್ಧರಾಗಿದ್ದ ಇನ್ನೊಂದು ವಿಧ ಅವರು ಎಚ್ಚರವಾಗಿರುವ ಮೂಲಕವೇ. ಮದುಮಗ ಬರುವುದಕ್ಕೆ ತಡವಾಗುತ್ತಿರುವಂತೆ ತೋರಿದಾಗ ಕಾಯುತ್ತಾ ಇದ್ದ ಎಲ್ಲ ಹತ್ತು ಮಂದಿ ಕನ್ಯೆಯರು “ತೂಕಡಿಸಿ ನಿದ್ರಿಸಿದರು” ಎಂದು ಕಥೆಯಲ್ಲಿ ಹೇಳಲಾಗಿದೆ. ಹಾಗಾದರೆ ಇಂದು ಅಭಿಷಿಕ್ತರು ‘ನಿದ್ರಿಸುವ’ ಸಾಧ್ಯತೆ ಇದೆಯಾ? ಅಂದರೆ ಯೇಸು ಬರುವುದಕ್ಕೆ ಕಾಯುತ್ತಿರುವಾಗ ಅಪಕರ್ಷಿತರಾಗುವ ಸಾಧ್ಯತೆ ಇದೆಯಾ? ಹೌದು. ಒಬ್ಬನಿಗೆ ಸಿದ್ಧಮನಸ್ಸು ಹಾಗೂ ಕಾತುರತೆ ಇದ್ದರೂ ತನ್ನ ಬರೋಣಕ್ಕೆ ಕಾಯುತ್ತಿರುವಾಗ ಬಲಹೀನನಾಗಿ ಅಪಕರ್ಷಿತನಾಗುವ ಸಾಧ್ಯತೆಯಿದೆಯೆಂದು ಯೇಸುವಿಗೆ ಗೊತ್ತಿತ್ತು. ಆತನು ಕೊಟ್ಟ ಆ ಪರೋಕ್ಷ ಎಚ್ಚರಿಕೆಯನ್ನು ಪಾಲಿಸುತ್ತಾ, ನಂಬಿಗಸ್ತ ಅಭಿಷಿಕ್ತರು ಎಚ್ಚರವಾಗಿರಲು ಹೆಚ್ಚಿನ ಪ್ರಯತ್ನ ಹಾಕಿದ್ದಾರೆ. ಹೇಗೆ? ಕಥೆಯಲ್ಲಿ ಎಲ್ಲಾ ಹತ್ತು ಕನ್ಯೆಯರು “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗನ್ನು ಕೇಳಿಸಿಕೊಂಡಾಗ ಪ್ರತಿಕ್ರಿಯಿಸುತ್ತಾರೆ. ಆದರೆ ಕೊನೆ ವರೆಗೂ ಎಚ್ಚರವಾಗಿಯೇ ಉಳಿದವರು ಬುದ್ಧಿವಂತೆ ಕನ್ಯೆಯರು ಮಾತ್ರ. (ಮತ್ತಾ. 25:5, 6; 26:41) ಅದೇ ರೀತಿ ಕಡೇ ದಿವಸಗಳಲ್ಲಿ ನಂಬಿಗಸ್ತ ಅಭಿಷಿಕ್ತರು “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗಿಗೆ ಪ್ರತಿಕ್ರಿಯಿಸಿದ್ದಾರೆ. ಯೇಸು ಇನ್ನೇನು ಬರಲಿದ್ದಾನೆ ಎನ್ನುವ ದೃಢ ಪುರಾವೆಯನ್ನು ಅವರು ಒಪ್ಪಿಕೊಂಡು ಅವನಿಗಾಗಿ ಸಿದ್ಧರಾಗಿದ್ದಾರೆ. * (ಪಾದಟಿಪ್ಪಣಿ ನೋಡಿ.) ಮುಂದಿನ ಪ್ಯಾರಗಳಲ್ಲಿ ಕಥೆಯ ಕೊನೆ ಭಾಗವನ್ನು ಚರ್ಚಿಸೋಣ. ಅದೊಂದು ನಿರ್ದಿಷ್ಟ ಅವಧಿಯ ಬಗ್ಗೆ ಮಾತಾಡುತ್ತದೆ.

 ಬುದ್ಧಿವಂತೆಯರಿಗೆ ಆಶೀರ್ವಾದ, ಬುದ್ಧಿಹೀನರಿಗೆ ಶಿಕ್ಷೆ

10. ಬುದ್ಧಿವಂತೆ ಕನ್ಯೆಯರು ಮತ್ತು ಬುದ್ಧಿಹೀನ ಕನ್ಯೆಯರ ನಡುವಿನ ಮಾತುಕತೆಯಿಂದ ಯಾವ ಪ್ರಶ್ನೆ ಏಳುತ್ತದೆ?

10 ಕಥೆಯ ಕೊನೆಯಲ್ಲಿ ಬುದ್ಧಿಹೀನ ಕನ್ಯೆಯರು ಬುದ್ಧಿವಂತೆ ಕನ್ಯೆಯರಿಗೆ ಸ್ವಲ್ಪ ಎಣ್ಣೆ ಕೊಡುವಂತೆ ಕೇಳುತ್ತಾರೆ. ಆದರೆ ಬುದ್ಧಿವಂತೆ ಕನ್ಯೆಯರು ಕೊಡುವುದಿಲ್ಲ. (ಮತ್ತಾಯ 25:8, 9 ಓದಿ.) ಇದರಿಂದ ಈ ಪ್ರಶ್ನೆ ಏಳುತ್ತದೆ: ‘ದೇವಜನರ ಇತಿಹಾಸದಲ್ಲಿ ನಂಬಿಗಸ್ತ ಅಭಿಷಿಕ್ತರು ಬೇರೆಯವರಿಗೆ ಸಹಾಯ ಮಾಡಲು ಯಾವಾಗ ನಿರಾಕರಿಸುತ್ತಾರೆ?’ ಇದಕ್ಕೆ ಉತ್ತರ ತಿಳಿಯಲು ಈ ಕಥೆ ಅನ್ವಯವಾಗುವ ಸಮಯಾವಧಿಯನ್ನು ನೆನಪುಮಾಡಿಕೊಳ್ಳಿ. ಮಹಾ ಸಂಕಟ ಕೊನೆಗೊಳ್ಳುವ ಸ್ವಲ್ಪ ಮುಂಚೆ ಮದುಮಗನಾದ ಯೇಸು ತೀರ್ಪುಮಾಡಲು ಬರುತ್ತಾನೆ. ಹಾಗಾದರೆ ಬುದ್ಧಿಹೀನ ಕನ್ಯೆಯರು ಎಣ್ಣೆಯನ್ನು ಕೇಳುವ ಸಂಗತಿ ಮಹಾ ಸಂಕಟದ ಸ್ವಲ್ಪ ಮುಂಚೆ ನಡೆಯುವ ವಿಷಯವನ್ನು ಸೂಚಿಸುತ್ತಿರಬಹುದು. ನಾವಿದನ್ನು ಏಕೆ ಹೇಳುತ್ತೇವೆ? ಏಕೆಂದರೆ ಅಷ್ಟರಲ್ಲಿ ಅಭಿಷಿಕ್ತರು ಕೊನೆಯ ಮುದ್ರೆ ಹೊಂದಿರುವರು.

11. (ಎ) ಮಹಾ ಸಂಕಟ ಆರಂಭವಾಗುವ ಸ್ವಲ್ಪ ಮುಂಚೆ ಏನಾಗುತ್ತದೆ? (ಬಿ) ಬುದ್ಧಿವಂತೆ ಕನ್ಯೆಯರು ಬುದ್ಧಿಹೀನ ಕನ್ಯೆಯರಿಗೆ ಹೋಗಿ ಎಣ್ಣೆಯನ್ನು ಕೊಂಡುಕೊಳ್ಳುವಂತೆ ಹೇಳುವುದರ ಅರ್ಥವೇನು?

11 ಮಹಾ ಸಂಕಟ ಆರಂಭವಾಗುವುದಕ್ಕಿಂತ ಮುಂಚೆ ಭೂಮಿಯಲ್ಲಿರುವ ಎಲ್ಲಾ ನಂಬಿಗಸ್ತ ಅಭಿಷಿಕ್ತರು ಕೊನೆಯ ಮುದ್ರೆ ಹೊಂದಿರುತ್ತಾರೆ. (ಪ್ರಕ. 7:1-4) ಅವರು ಸ್ವರ್ಗಕ್ಕೆ ಹೋಗುವುದು ಅಂದಿನಿಂದ ಖಚಿತ. ಆದರೆ ಮಹಾ ಸಂಕಟಕ್ಕೆ ಮುಂಚಿನ ವರ್ಷಗಳಲ್ಲಿ ಎಚ್ಚರವಾಗಿರದೆ ಅಪನಂಬಿಗಸ್ತರಾದ ಅಭಿಷಿಕ್ತರ ಕುರಿತೇನು? ಅವರಿಗೆ ಕೊನೆ ಮುದ್ರೆ ಸಿಗುವುದಿಲ್ಲ. ಅವರ ಬದಲು ನಂಬಿಗಸ್ತರಾಗಿ ಉಳಿದ ಬೇರೆ ಕ್ರೈಸ್ತರನ್ನು ಅಭಿಷಿಕ್ತರಾಗಿ ಆರಿಸಲಾಗುವುದು. ಮಹಾ ಸಂಕಟ ಆರಂಭವಾಗುವುದನ್ನು ಅಂದರೆ ಮಹಾ ಬಾಬೆಲ್‌ ನಾಶವಾಗುವುದನ್ನು ನೋಡಿ ಬುದ್ಧಿಹೀನರಿಗೆ ಆಘಾತವಾಗುತ್ತದೆ. ಯೇಸುವಿನ ಬರೋಣಕ್ಕೆ ತಾವಿನ್ನೂ ಸಿದ್ಧರಾಗಿಲ್ಲ ಎಂದು ಆಗ ಅವರಿಗೆ ಅರಿವಾಗಬಹುದು. ಆ ಸಮಯದಲ್ಲಿ ಅವರು ಸಹಾಯ ಕೇಳಿದರೆ ಏನಾಗುತ್ತದೆ? ಇದಕ್ಕೆ ಉತ್ತರ ಕಥೆಯಲ್ಲಿದೆ. ಬುದ್ಧಿವಂತೆ ಕನ್ಯೆಯರು ಬುದ್ಧಿಹೀನ ಕನ್ಯೆಯರಿಗೆ ಎಣ್ಣೆ ಕೊಡುವುದಿಲ್ಲ ಬದಲಿಗೆ ಅವರೇ ಹೋಗಿ ಕೊಂಡುಕೊಳ್ಳುವಂತೆ ಹೇಳಿದರು. “ಮಧ್ಯರಾತ್ರಿ” ಆಗಿದ್ದರಿಂದ ಅವರಿಗೆ ಎಣ್ಣೆ ಮಾರಲು ಯಾರೂ ಇರಲಿಲ್ಲ. ಸಮಯ ಕೈಮೀರಿ ಹೋಗಿತ್ತು!

12. (ಎ) ಕೊನೆಯ ಮುದ್ರೆಯೊತ್ತುವಿಕೆ ಮುಂಚೆ ಅಭಿಷಿಕ್ತರಲ್ಲಿ ಅಪನಂಬಿಗಸ್ತರಾದವರಿಗೆ ನಂಬಿಗಸ್ತರು ಅಭಿಷಿಕ್ತರು ಮಹಾ ಸಂಕಟದ ಸಮಯದಲ್ಲಿ ಆಗುತ್ತದಾ? ಯಾಕೆ? (ಬಿ) ಬುದ್ಧಿಹೀನ ಕನ್ಯೆಯಂತಿರುವವರಿಗೆ ಏನಾಗುವುದು?

12 ಮಹಾ ಸಂಕಟದ ಸಮಯದಲ್ಲಿ ನಂಬಿಗಸ್ತ ಅಭಿಷಿಕ್ತರು ಅಪನಂಬಿಗಸ್ತರಾದ ಯಾರಿಗೂ ಸಹಾಯ ಮಾಡಲು ಆಗುವುದಿಲ್ಲ. ಏಕೆಂದರೆ ಸಮಯ ಕೈಮೀರಿ ಹೋಗಿರುತ್ತದೆ. ಆ ಅಪನಂಬಿಗಸ್ತರಿಗೆ ಏನಾಗುವುದು? ಎಣ್ಣೆ ಕೊಂಡುಕೊಳ್ಳಲು ಹೋದ ಬುದ್ಧಿಹೀನ ಕನ್ಯೆಯರಿಗೆ ಏನಾಯಿತೆಂದು ನೋಡಿ: “ಮದುಮಗನು ಬಂದನು ಮತ್ತು ಸಿದ್ಧರಾಗಿದ್ದ ಕನ್ಯೆಯರು ಅವನೊಂದಿಗೆ ಒಳಗೆ ಮದುವೆಯ ಔತಣಕ್ಕೆ ಹೋದರು; ಹಾಗೂ ಬಾಗಿಲು ಮುಚ್ಚಲ್ಪಟ್ಟಿತು.” ಮಹಾ ಸಂಕಟದ ಕೊನೆ ಹತ್ತಿರವಾಗುತ್ತಿದ್ದಂತೆ ಕ್ರಿಸ್ತನು ಮಹಿಮೆಯಲ್ಲಿ ಬರುವಾಗ ನಂಬಿಗಸ್ತರಾಗಿ ಉಳಿದ ಅಭಿಷಿಕ್ತರನ್ನು ಸ್ವರ್ಗಕ್ಕೆ ಕರೆದುಕೊಳ್ಳುವನು. (ಮತ್ತಾ. 24:31; 25:10; ಯೋಹಾ. 14:1-3; 1 ಥೆಸ. 4:17) ಆದರೆ ಅಪನಂಬಿಗಸ್ತರನ್ನು ತ್ಯಜಿಸಿಬಿಡುವನು. ಆಗ ಅವರು ಬುದ್ಧಿಹೀನ ಕನ್ಯೆಯರಂತೆ “ಸ್ವಾಮಿ, ಸ್ವಾಮಿ, ನಮಗೆ ಬಾಗಿಲನ್ನು ತೆರೆ” ಎಂದು ಹೇಳಬಹುದು. ಯೇಸು ಏನು ಮಾಡುವನು? “ನಿಮ್ಮ ಪರಿಚಯ ನನಗಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದು ಆಡುಗಳಂತೆ ಇರುವವರಿಗೆ ಹೇಳುವುದನ್ನೇ ಇವರಿಗೂ ಹೇಳುವನು.—ಮತ್ತಾ. 7:21-23; 25:11, 12.

13. (ಎ) ಅಭಿಷಿಕ್ತರಲ್ಲಿ ಅನೇಕರು ಅಪನಂಬಿಗಸ್ತರಾಗುವರು ಎನ್ನುವ ತೀರ್ಮಾನಕ್ಕೆ ನಾವೇಕೆ ಬರಬಾರದು? (ಬಿ) ಯೇಸು ಹೇಳಿದ ಕಥೆ ಆತನಿಗೆ ಅಭಿಷಿಕ್ತರ ಮೇಲಿರುವ ಭರವಸೆಯನ್ನು ತೋರಿಸಿಕೊಡುತ್ತದೆಂದು ಹೇಗೆ ಹೇಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

13 ಹಾಗಾದರೆ ಯೇಸು ಏನು ಹೇಳುತ್ತಿದ್ದನು? ಅಭಿಷಿಕ್ತರಲ್ಲಿ ಅನೇಕರು ಅಪನಂಬಿಗಸ್ತರಾಗುವರು, ಅವರ ಸ್ಥಾನದಲ್ಲಿ ಇತರರನ್ನು ನೇಮಿಸಲಾಗುವುದು ಎಂದಾ? ಇಲ್ಲ. ಮತ್ತಾಯ 24ನೇ ಅಧ್ಯಾಯದಲ್ಲಿ ನಂಬಿಗಸ್ತನು, ವಿವೇಚನೆಯುಳ್ಳವನು ಆದ ಆಳು ಕೆಟ್ಟ ಆಳು ಆಗುತ್ತಾನೆಂದು ಯೇಸು ಹೇಳಲಿಲ್ಲ,  ಅದೊಂದು ಎಚ್ಚರಿಕೆಯ ಮಾತಾಗಿತ್ತಷ್ಟೆ ಎಂದು ಓದುತ್ತೇವೆ. ಹಾಗೆಯೇ ಹತ್ತು ಕನ್ಯೆಯರ ಕುರಿತ ಕಥೆಯೂ ಒಂದು ಎಚ್ಚರಿಕೆಯಾಗಿತ್ತು. ಹತ್ತು ಮಂದಿ ಕನ್ಯೆಯರಲ್ಲಿ ಐದು ಮಂದಿ ಬುದ್ಧಿವಂತೆಯರು, ಐದು ಮಂದಿ ಬುದ್ಧಿಹೀನರಾಗಿದ್ದರು. ಇದರರ್ಥ ಅಭಿಷಿಕ್ತರಲ್ಲಿ ಅರ್ಧಕ್ಕರ್ಧ ಮಂದಿ ಅಪನಂಬಿಗಸ್ತರಾಗುತ್ತಾರೆ ಎಂದಲ್ಲ. ಬದಲಿಗೆ ಅವರಲ್ಲಿ ಪ್ರತಿಯೊಬ್ಬರು ತಾವು ನಂಬಿಗಸ್ತರಾಗಿರುತ್ತೇವಾ ಇಲ್ಲವಾ ಎಂಬ ಆಯ್ಕೆ ಮಾಡಬೇಕು. ಇದೇ ರೀತಿಯ ಎಚ್ಚರಿಕೆಯನ್ನು ಪೌಲನು ಕೂಡ ಅಭಿಷಿಕ್ತ ಸಹೋದರ ಸಹೋದರಿಯರಿಗೆ ಕೊಟ್ಟನು. (ಇಬ್ರಿಯ 6:4-9 ಓದಿ; ಧರ್ಮೋಪದೇಶಕಾಂಡ 30:19 ಹೋಲಿಸಿ.) ಆತನು ಕೊಟ್ಟ ಎಚ್ಚರಿಕೆ ನೇರವಾಗಿತ್ತು. ಆದರೆ ತನ್ನ ಸಹೋದರ ಸಹೋದರಿಯರು ತಮ್ಮ ಬಹುಮಾನ ಪಡೆಯುವರೆಂಬ ಭರವಸೆಯೂ ಅವನಿಗಿತ್ತು. ಹತ್ತು ಕನ್ಯೆಯರ ಕಥೆಯಲ್ಲಿರುವ ಎಚ್ಚರಿಕೆ ಯೇಸುವಿಗೂ ಅಭಿಷಿಕ್ತರಲ್ಲಿ ಇಂಥದ್ದೇ ಭರವಸೆ ಇತ್ತೆಂದು ತೋರಿಸಿಕೊಡುತ್ತದೆ. ಪ್ರತಿಯೊಬ್ಬ ಅಭಿಷಿಕ್ತನು ನಂಬಿಗಸ್ತನಾಗಿದ್ದು ತನಗಿರುವ ಅದ್ಭುತ ಬಹುಮಾನವನ್ನು ಪಡೆದುಕೊಳ್ಳಬಹುದು ಎಂದು ಯೇಸುವಿಗೆ ಗೊತ್ತು.

ಯೇಸುವಿನ “ಬೇರೆ ಕುರಿ”ಗಳಿಗೆ ಯಾವ ಪಾಠವಿದೆ?

14. ಹತ್ತು ಕನ್ಯೆಯರ ಕಥೆಯಿಂದ “ಬೇರೆ ಕುರಿ”ಗಳಿಗೂ ಯಾವ ಪಾಠವಿದೆ?

14 ಯೇಸು ಈ ಕಥೆಯನ್ನು ಅಭಿಷಿಕ್ತರಿಗೆ ಸೂಚಿಸಿ ಹೇಳಿರುವುದಾದರೂ “ಬೇರೆ ಕುರಿ”ಗಳಿಗೆ ಇದರಿಂದ ಪಾಠ ಇದೆ. ಏನದು? (ಯೋಹಾ. 10:16) “ಸದಾ ಎಚ್ಚರವಾಗಿರಿ” ಎನ್ನುವುದೇ ಕಥೆಯ ಸಂದೇಶ. ಯೇಸು ಒಮ್ಮೆ ಹೇಳಿದ್ದು: “ನಾನು ನಿಮಗೆ ಹೇಳುವುದನ್ನು ಎಲ್ಲರಿಗೂ ಹೇಳುತ್ತೇನೆ, ಸದಾ ಎಚ್ಚರವಾಗಿರಿ.” (ಮಾರ್ಕ 13:37) ತನ್ನ ಎಲ್ಲಾ ಹಿಂಬಾಲಕರು ಸಿದ್ಧರಾಗಿರಬೇಕು ಮತ್ತು ಎಚ್ಚರಿಕೆಯಿಂದಿರಬೇಕೆಂಬುದೇ ಯೇಸುವಿನ ಬಯಕೆ. ಸೇವೆಗೆ ಮೊದಲ ಸ್ಥಾನ ಕೊಡುವ ಅಭಿಷಿಕ್ತರ ಒಳ್ಳೇ ಮಾದರಿಯನ್ನು ಎಲ್ಲಾ ಕ್ರೈಸ್ತರು ಅನುಕರಿಸಬಹುದು. ಬುದ್ಧಿಹೀನ ಕನ್ಯೆಯರು ಬುದ್ಧಿವಂತೆ ಕನ್ಯೆಯರಿಂದ ಎಣ್ಣೆ ಕೇಳಿದ್ದನ್ನು ನೆನಪಿಸಿಕೊಳ್ಳಿ. ಆದರೆ ಅವರಿಗೆ ಅದನ್ನು ಕೊಡಲಾಗುವುದಿಲ್ಲ. ಇದು, ದೇವರಿಗೆ ನಂಬಿಗಸ್ತರಾಗಿ ಉಳಿಯುವುದು, ಸಿದ್ಧರಾಗಿರುವುದು, ಎಚ್ಚರದಿಂದಿರುವುದು ನಮ್ಮ ಸ್ವಂತ ಜವಾಬ್ದಾರಿ ಆಗಿದೆಯೆಂದು ನೆನಪಿಸುತ್ತದೆ. ಇದನ್ನು ಬೇರಾರೂ ನಮಗೋಸ್ಕರ ಮಾಡಲು ಆಗುವುದಿಲ್ಲ. ಬೇಗನೆ ಬರಲಿರುವ ನೀತಿವಂತ ನ್ಯಾಯಾಧಿಪತಿಯಾದ ಯೇಸುವಿಗೆ ಪ್ರತಿಯೊಬ್ಬರು ಲೆಕ್ಕ ಕೊಡಬೇಕು. ಆದ್ದರಿಂದ ತಯಾರಾಗಿರೋಣ!

ಎಣ್ಣೆ ಕೊಡುವಂತೆ ಕನ್ಯೆಯರು ಮಾಡಿದ ವಿನಂತಿಯು ಬೇರಾರೂ ನಮಗಾಗಿ ನಂಬಿಗಸ್ತರಾಗಿರಲು ಅಥವಾ ಎಚ್ಚರವಾಗಿರಲು ಸಾಧ್ಯವಿಲ್ಲ ಎಂದು ನೆನಪಿಸುತ್ತದೆ

15. ಯೇಸುವಿನ ಹಾಗೂ ಮದುಮಗಳ ವಿವಾಹದ ಬಗ್ಗೆ ಕ್ರೈಸ್ತರು ಯಾಕೆ ಹರ್ಷಿಸುತ್ತಾರೆ?

15 ಯೇಸು ಹೇಳಿದ ಕಥೆಯಲ್ಲಿನ ಮದುವೆ ಬಗ್ಗೆ ಎಲ್ಲಾ ಕ್ರೈಸ್ತರು ಹರ್ಷಿಸುತ್ತಾರೆ. ಭವಿಷ್ಯದಲ್ಲಿ ಅರ್ಮಗೆದೋನ್‌ ಯುದ್ಧದ ನಂತರ ಅಭಿಷಿಕ್ತ ಕ್ರೈಸ್ತರು ಯೇಸುವಿನ ಮದುಮಗಳಾಗುತ್ತಾರೆ. (ಪ್ರಕ. 19:7-9) ಸ್ವರ್ಗದಲ್ಲಾಗುವ ಈ ವಿವಾಹದಿಂದ ಭೂಮಿಯಲ್ಲಿರುವ ಪ್ರತಿಯೊಬ್ಬರು ಪ್ರಯೋಜನ ಪಡೆಯುವರು. ಏಕೆ? ಏಕೆಂದರೆ ಈ ವಿವಾಹವು ಮನುಷ್ಯರಿಗೆ ಒಂದು ಪರಿಪೂರ್ಣ ಸರ್ಕಾರ ಬರುವುದೆಂಬ ಖಾತ್ರಿ ಕೊಡುತ್ತದೆ. ನಮಗೆ ಸ್ವರ್ಗದ ನಿರೀಕ್ಷೆ ಇರಲಿ ಭೂನಿರೀಕ್ಷೆ ಇರಲಿ ಯಾವಾಗಲೂ ಸಿದ್ಧರಾಗಿರುವ, ಎಚ್ಚರವಾಗಿರುವ ದೃಢನಿರ್ಧಾರ ಮಾಡೋಣ. ಹೀಗೆ ಮಾಡಿದರೆ ಯೆಹೋವನು ನಮಗಾಗಿ ತಯಾರಿಸಿರುವ ಅದ್ಭುತ ಭವಿಷ್ಯವನ್ನು ಆನಂದಿಸುವೆವು.

^ ಪ್ಯಾರ. 9 “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗು (6ನೇ ವಚನ) ಮತ್ತು ಯೇಸು ಬರುವುದು (10ನೇ ವಚನ) ಇವೆರಡರ ಮಧ್ಯೆ ಒಂದು ಸಮಯಾವಧಿ ಇದೆ. ಕಡೇ ದಿವಸಗಳಾದ್ಯಂತ ಅಭಿಷಿಕ್ತರು ಎಚ್ಚರವಾಗಿ ಉಳಿದಿದ್ದಾರೆ. ಅವರು ಯೇಸುವಿನ ಸಾನಿಧ್ಯದ ಸೂಚನೆಯನ್ನು ಗುರುತಿಸಿದ್ದಾರೆ. ಆದ್ದರಿಂದ ಆತನು ದೇವರ ರಾಜ್ಯದ ರಾಜನಾಗಿ ಈಗ ಆಳುತ್ತಿದ್ದಾನೆಂದು ಅಭಿಷಿಕ್ತರಿಗೆ ತಿಳಿದಿದೆ. ಆದರೂ ಆತನು ಮಹಾ ಸಂಕಟದ ಸಮಯದಲ್ಲಿ ಬರುವವರೆಗೂ ಅವರು ಎಚ್ಚರವಾಗಿರಬೇಕು.