‘ನೀನು ವಿವೇಕಿಗಳಿಗೂ ಜ್ಞಾನಿಗಳಿಗೂ ಈ ವಿಷಯಗಳನ್ನು ಜಾಗರೂಕತೆಯಿಂದ ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿದ್ದಿ.’—ಲೂಕ 10:21.

1. ಯೇಸು “ಪವಿತ್ರಾತ್ಮದಿಂದ ಅತ್ಯಾನಂದ”ಗೊಳ್ಳಲು ಕಾರಣವೇನು? (ಲೇಖನದ ಆರಂಭದ ಚಿತ್ರ ನೋಡಿ.)

ಈ ಸನ್ನಿವೇಶವನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ಯೇಸು “ಪವಿತ್ರಾತ್ಮದಿಂದ ಅತ್ಯಾನಂದ”ಗೊಂಡಿದ್ದಾನೆ. ಅವನ ಕಣ್ಣುಗಳು ಉತ್ಸಾಹದಿಂದ ಮಿನುಗುತ್ತಿವೆ. ಮುಖದಲ್ಲೊಂದು ನಗು ಇದೆ. ಯಾಕೆ? ಆಗತಾನೇ ತನ್ನ 70 ಮಂದಿ ಶಿಷ್ಯರನ್ನು ದೇವರ ರಾಜ್ಯದ ಬಗ್ಗೆ ಸುವಾರ್ತೆ ಸಾರಲು ಕಳುಹಿಸಿದ್ದನು. ತುಂಬ ವೈರಿಗಳು ಇದ್ದದರಿಂದ ಶಿಷ್ಯರು ಹೇಗೆ ಸುವಾರ್ತೆ ಸಾರುತ್ತಾರೆ ಎಂದು ತಿಳಿಯಲು ಕಾತುರದಿಂದಿದ್ದನು. ಈ ವೈರಿಗಳಲ್ಲಿ ಹೆಚ್ಚು ವಿದ್ಯಾಭ್ಯಾಸವಿದ್ದ ಚಾಲಾಕಿನ ಶಾಸ್ತ್ರಿ ಫರಿಸಾಯರೂ ಇದ್ದರು. ಹಾಗಾಗಿ ಜನರು ಯೇಸುವನ್ನು ಒಬ್ಬ ಸಾಮಾನ್ಯ ಬಡಗಿ ಮತ್ತು ಅವನ ಶಿಷ್ಯರನ್ನು ‘ಹೆಚ್ಚು ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳಾಗಿ’ ನೋಡಬೇಕೆಂದು ಇವರು ಬಯಸಿದರು. (ಅ. ಕಾ. 4:13; ಮಾರ್ಕ 6:3) ಸನ್ನಿವೇಶ ಹೀಗಿದ್ದರೂ ಶಿಷ್ಯರು ಸುವಾರ್ತೆ ಕೆಲಸ ಮುಗಿಸಿ ಸಂತೋಷದಿಂದ ವಾಪಸ್‌ ಬಂದರು. ದೆವ್ವಗಳಿಂದ ವಿರೋಧ ಬಂದರೂ ಅವರು ಹೆದರದೆ ಸುವಾರ್ತೆ ಸಾರಿದ್ದರು! ಇಷ್ಟು ಧೈರ್ಯದಿಂದ, ಸಂತೋಷದಿಂದ ಇರಲು ಅವರಿಗೆ ಹೇಗೆ ಸಾಧ್ಯವಾಯಿತು?—ಲೂಕ 10:1, 17-21 ಓದಿ.

2. (ಎ) ಯೇಸುವಿನ ಶಿಷ್ಯರು ಹೇಗೆ ಚಿಕ್ಕ ಮಕ್ಕಳಂತಿದ್ದರು? (ಬಿ) ಬೈಬಲಿನ ಆಳವಾದ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ಶಿಷ್ಯರಿಗೆ ಹೇಗೆ ಸಾಧ್ಯವಾಯಿತು?

2 ಯೇಸು ಯೆಹೋವನಿಗೆ ಹೀಗೆ ಹೇಳಿದನು: “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, ನೀನು ವಿವೇಕಿಗಳಿಂದಲೂ ಜ್ಞಾನಿಗಳಿಂದಲೂ ಈ ವಿಷಯಗಳನ್ನು ಮರೆಮಾಡಿ ಶಿಶುಗಳಿಗೆ ಪ್ರಕಟಪಡಿಸಿರುವುದರಿಂದ ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ. ಹೌದು ತಂದೆಯೇ, ಹೀಗೆ ಮಾಡುವುದು ನಿನಗೆ  ಒಪ್ಪಿಗೆಯಾದ ಮಾರ್ಗವಾಗಿತ್ತು.” (ಮತ್ತಾ. 11:25, 26) ಯೇಸು ತನ್ನ ಶಿಷ್ಯರನ್ನು ಶಿಶುಗಳಿಗೆ ಅಥವಾ ಚಿಕ್ಕ ಮಕ್ಕಳಿಗೆ ಹೋಲಿಸಿದ್ದೇಕೆ? ಏಕೆಂದರೆ ಅವರು ಶಾಸ್ತ್ರಿ ಫರಿಸಾಯರಂತೆ ಇರಲಿಲ್ಲ. ಈ ಶಾಸ್ತ್ರಿ ಫರಿಸಾಯರಿಗೆ ತುಂಬ ವಿದ್ಯಾಭ್ಯಾಸ ಇದ್ದದರಿಂದ ತಾವೇ ಬುದ್ಧಿವಂತರೆಂದು ನೆನಸುತ್ತಿದ್ದರು. ಆದರೆ ಯೇಸುವಿನ ಶಿಷ್ಯರಿಗೆ ಮಕ್ಕಳಲ್ಲಿರುವಂಥ ಕಲಿಯುವ ಮನೋಭಾವ ಇತ್ತು. ಅವರಲ್ಲಿ ಅಹಂಕಾರ ಅಲ್ಲ, ದೀನತೆ ಇತ್ತು. (ಮತ್ತಾ. 18:1-4) ಆದ್ದರಿಂದಲೇ ಆಳವಾದ ಬೈಬಲ್‌ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಯೆಹೋವನು ಅವರಿಗೆ ಪವಿತ್ರಾತ್ಮದ ಮೂಲಕ ಸಹಾಯ ಮಾಡಿದನು. ಆದರೆ ಅಹಂಕಾರಿ ಯೆಹೂದಿ ಧಾರ್ಮಿಕ ಮುಖಂಡರು ಸೈತಾನನಿಂದ ಮತ್ತು ಅವರಿಗಿದ್ದ ಜಂಬದಿಂದಾಗಿ ಕುರುಡರಾಗಿಯೇ ಇದ್ದರು.

3. ಈ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

3 ಕಡಿಮೆ ವಿದ್ಯಾಭ್ಯಾಸ ಇದ್ದರೂ ದೀನರಾಗಿದ್ದವರಿಗೆ ಯೆಹೋವನು ಆಳವಾದ ಬೈಬಲ್‌ ಸತ್ಯಗಳನ್ನು ತಿಳಿಯಪಡಿಸಿದ ರೀತಿಯನ್ನು ನೋಡಿ ಯೇಸುವಿಗೆ ಸಂತೋಷವಾಯಿತು. ಈ ರೀತಿಯಲ್ಲಿ ಬೋಧಿಸುವುದನ್ನು ಯೆಹೋವನು ಒಪ್ಪಿದನು. ಆತನು ಬದಲಾಗಿಲ್ಲ. ಇಂದೂ ಆತನು ಒಪ್ಪುವುದು ಅದನ್ನೇ. ಇದನ್ನು ಹೇಗೆ ಹೇಳಬಹುದು? ಇಂದು ಯೆಹೋವನು ದೀನ ವ್ಯಕ್ತಿಗಳಿಗೆ ಆಳವಾದ ಬೈಬಲ್‌ ಸತ್ಯಗಳನ್ನು ಹೇಗೆ ತಿಳಿಯಪಡಿಸುತ್ತಾನೆಂದು ಈ ಲೇಖನದಲ್ಲಿ ಕಲಿಯೋಣ.

ಎಲ್ಲರಿಗೂ ಆಳವಾದ ಸತ್ಯಗಳನ್ನು ವಿವರಿಸುವುದು

4. ಯಾವ ರೀತಿಯಲ್ಲಿ ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಆವೃತ್ತಿ ಒಂದು ಪ್ರೀತಿಯ ಉಡುಗೊರೆಯಂತಿದೆ?

4 ಇತ್ತೀಚಿನ ವರ್ಷಗಳಲ್ಲಿ ದೇವರ ಸಂಘಟನೆ ಹೆಚ್ಚು ಸರಳವಾಗಿ, ಹೆಚ್ಚು ಸ್ಪಷ್ಟವಾಗಿ ಬೋಧಿಸುವುದಕ್ಕೆ ತುಂಬ ಮಹತ್ವ ಕೊಡುತ್ತಿದೆ. ಅದಕ್ಕೆ ಮೂರು ಉದಾಹರಣೆ ನೋಡೋಣ. ಒಂದು, ಈಗ ಸರಳೀಕೃತ ಕಾವಲಿನಬುರುಜು ಲಭ್ಯ. * (ಪಾದಟಿಪ್ಪಣಿ ನೋಡಿ.) ತುಂಬ ಜನರಿಗೆ ಅದರಲ್ಲೂ ಓದಲು, ಅಥವಾ ನಿರ್ದಿಷ್ಟ ಭಾಷೆ ಅರ್ಥಮಾಡಿಕೊಳ್ಳಲು ಕಷ್ಟವಾಗುವವರಿಗೆ ಇದೊಂದು ಉಡುಗೊರೆ. ಮಕ್ಕಳಿಗೂ ಈ ಪತ್ರಿಕೆ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಅನೇಕ ಕುಟುಂಬಗಳು ಹೇಳುತ್ತಿವೆ. ಅನೇಕರು ಪತ್ರಗಳ ಮೂಲಕ ಈ ಆವೃತ್ತಿಗಾಗಿ ಕೃತಜ್ಞತೆ ತಿಳಿಸಿದ್ದಾರೆ. ಸಹೋದರಿಯೊಬ್ಬರು ಕಾವಲಿನಬುರುಜು ಅಧ್ಯಯನ ನಡೆಯುವಾಗ ಕೈಯೆತ್ತಿ ಉತ್ತರ ಕೊಡಲು ಹೆದರುತ್ತಿದ್ದರು. ಈಗ? ಸರಳೀಕೃತ ಆವೃತ್ತಿ ಬಳಸುತ್ತಿರುವುದರಿಂದ ಹೀಗನ್ನುತ್ತಾರೆ: “ಈಗ ನನಗೆ ಸ್ವಲ್ಪನೂ ಭಯ ಇಲ್ಲ. ಒಂದಕ್ಕಿಂತ ಜಾಸ್ತಿ ಉತ್ತರ ಕೊಡುತ್ತೇನೆ! ಯೆಹೋವನಿಗೆ ಮತ್ತು ನಿಮಗೆ ತುಂಬ ಧನ್ಯವಾದ.”

5. ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯ ಕೆಲವು ಪ್ರಯೋಜನಗಳೇನು?

5 ಎರಡು, ನಮಗೀಗ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿ ಲಭ್ಯ. ಅಕ್ಟೋಬರ್‌ 5, 2013ರಂದು ನಡೆದ ವಾರ್ಷಿಕ ಕೂಟದಲ್ಲಿ ಇದನ್ನು ಇಂಗ್ಲಿಷ್‍ನಲ್ಲಿ ಬಿಡುಗಡೆ ಮಾಡಲಾಯಿತು. * (ಪಾದಟಿಪ್ಪಣಿ ನೋಡಿ.) ಅನೇಕ ವಚನಗಳಲ್ಲಿ ಮುಂಚೆಗಿಂತ ಕಡಿಮೆ ಪದಗಳನ್ನು ಬಳಸಲಾಗಿದೆ. ಹಾಗಂತ ವಚನಗಳ ಅರ್ಥ ಬದಲಾಗಿಲ್ಲ. ಅವು ಇನ್ನಷ್ಟು ಸುಲಭವಾಗಿ ಅರ್ಥವಾಗುತ್ತವೆ. ಉದಾಹರಣೆಗೆ ಯೋಬ 10:1ರಲ್ಲಿ ಮುಂಚೆ 27 ಪದಗಳಿದ್ದವು. ಈಗ ಬರೀ 19 ಪದಗಳಿವೆ. ಜ್ಞಾನೋಕ್ತಿ 8:6ರಲ್ಲಿ 20 ಪದಗಳಿದ್ದವು. ಈಗ 13 ಪದಗಳಿವೆ. ಪರಿಷ್ಕೃತ ಆವೃತ್ತಿಯಲ್ಲಿ ಈ ಎರಡೂ ವಚನಗಳು ಹೆಚ್ಚು ಸ್ಪಷ್ಟವಾಗಿವೆ. ತುಂಬ ವರ್ಷಗಳಿಂದ ನಂಬಿಗಸ್ತರಾಗಿ ಯೆಹೋವನ ಸೇವೆ ಮಾಡುತ್ತಿರುವ ಒಬ್ಬ ಅಭಿಷಿಕ್ತ ಸಹೋದರ ಹೀಗಂದರು: “ಈಗತಾನೇ ಪರಿಷ್ಕೃತ ಆವೃತ್ತಿಯಲ್ಲಿ ಯೋಬ ಪುಸ್ತಕವನ್ನು ಓದಿದೆ. ಆದರೆ ಇದೇ ಮೊದಲನೇ ಸಾರಿ ಅರ್ಥವಾದಂತೆ ಅನಿಸಿತು!” ತುಂಬ ಜನ ಇಂಥ ಹೇಳಿಕೆಯನ್ನೇ ಮಾಡಿದ್ದಾರೆ.

6. ಮತ್ತಾಯ 24:45-47ರ ಹೆಚ್ಚು ಸ್ಪಷ್ಟವಾದ ತಿಳಿವಳಿಕೆ ಬಗ್ಗೆ ನಿಮಗೆ ಹೇಗನಿಸುತ್ತದೆ?

6 ಮೂರು, ಕೆಲವು ವಚನಗಳನ್ನು ನಾವು ಅರ್ಥ ಮಾಡಿಕೊಳ್ಳುತ್ತಿದ್ದ ರೀತಿಯಲ್ಲಾದ ಪರಿಷ್ಕರಣೆ. ಉದಾಹರಣೆಗೆ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಬಗ್ಗೆ ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದೆವು. ಇದರ ವಿವರಣೆ ಜುಲೈ 15, 2013ರ ಕಾವಲಿನಬುರುಜುವಿನಲ್ಲಿದೆ. (ಮತ್ತಾ. 24: 45-47) ಆಡಳಿತ ಮಂಡಲಿಯೇ ನಂಬಿಗಸ್ತ ಆಳು ಎಂದು ಅದರಲ್ಲಿ ವಿವರಿಸಲಾಗಿತ್ತು. “ಮನೆಯವರು” ಎಂದರೆ ನಂಬಿಗಸ್ತ ಆಳಿನಿಂದ ಆಧ್ಯಾತ್ಮಿಕ ಆಹಾರ ಪಡೆಯುವ ಅಭಿಷಿಕ್ತರು ಮತ್ತು ‘ಬೇರೆ ಕುರಿಗಳು.’ (ಯೋಹಾ. 10:16) ಈ ಸತ್ಯಗಳನ್ನು ಕಲಿಯುವಾಗ ನಮಗೆ ಖುಷಿಯಾಗುತ್ತದೆ. ಬೇರೆಯವರಿಗೂ ಕಲಿಸಲು ಸಂತೋಷವಾಗುತ್ತದೆ. ಆದರೆ ಯೆಹೋವನು ಹೆಚ್ಚು ಸರಳ, ಹೆಚ್ಚು ಸ್ಪಷ್ಟವಾದ ಬೋಧನಾ ರೀತಿಯನ್ನೇ ಒಪ್ಪುತ್ತಾನೆಂದು ಇನ್ಯಾವ ವಿಧಗಳಲ್ಲಿ ತೋರಿಸಿದ್ದಾನೆ?

ಬೈಬಲ್‌ ವೃತ್ತಾಂತಗಳ ಸರಳ ವಿವರಣೆ

7, 8. ಭವಿಷ್ಯದಲ್ಲಿ ಬರಲಿರುವ ದೊಡ್ಡ ವಿಷಯಗಳನ್ನು ಪ್ರತಿನಿಧಿಸಿದ ಕೆಲವು ಬೈಬಲ್‌ ವೃತ್ತಾಂತಗಳು ಯಾವುವು?

7 ನೀವು ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವುದಾದರೆ ನಮ್ಮ ಸಾಹಿತ್ಯದಲ್ಲಿ ಬೈಬಲ್‌ ವೃತ್ತಾಂತಗಳನ್ನು ವಿವರಿಸುವ ರೀತಿಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿರಬಹುದು. ಹಿಂದೆಲ್ಲಾ, ಭವಿಷ್ಯದಲ್ಲಿ ಬರಲಿರುವಂಥ ದೊಡ್ಡ ವಿಷಯವನ್ನು ಪ್ರತಿನಿಧಿಸುವ ಕೆಲವು ವೃತ್ತಾಂತಗಳನ್ನು ‘ಸೂಚಕ’ ಎಂದು ಹೇಳಲಾಗುತ್ತಿತ್ತು. ಈ ವೃತ್ತಾಂತಗಳು ಏನನ್ನು ಪ್ರತಿನಿಧಿಸುತ್ತಿದ್ದವೊ ಅದು ‘ಸೂಚಕರೂಪ.’ ಬೈಬಲ್‌ ವೃತ್ತಾಂತಗಳನ್ನು ಹೀಗೆ ವಿವರಿಸಲು ಆಧಾರ ಇದೆಯಾ? ಇದೆ. ಉದಾಹರಣೆಗೆ “ಪ್ರವಾದಿಯಾದ ಯೋನನ ಸೂಚಕಕಾರ್ಯ”ದ ಬಗ್ಗೆ ಯೇಸು ಹೇಳಿದನು. (ಮತ್ತಾಯ 12:39, 40 ಓದಿ.) ಯೋನನು ಮೀನಿನ ಹೊಟ್ಟೆಯೊಳಗಿದ್ದ ಅವಧಿ ತಾನು ಸಮಾಧಿಯಲ್ಲಿರುವ ಅವಧಿಯನ್ನು ಪ್ರತಿನಿಧಿಸುತ್ತದೆಂದು ಯೇಸು ವಿವರಿಸಿದನು.

8 ಭವಿಷ್ಯದಲ್ಲಿ ಬರಲಿರುವ ದೊಡ್ಡ ವಿಷಯಗಳನ್ನು ಪ್ರತಿನಿಧಿಸುವಂಥ ಇತರ ಬೈಬಲ್‌ ವೃತ್ತಾಂತಗಳೂ ಇವೆ. ಅಪೊಸ್ತಲ ಪೌಲ ಅವುಗಳಲ್ಲಿ ಹಲವನ್ನು ವಿವರಿಸಿದನು. ಉದಾಹರಣೆಗೆ, ಹಾಗರ ಮತ್ತು ಸಾರಳ ಜೊತೆ ಅಬ್ರಹಾಮನಿಗಿದ್ದ ಸಂಬಂಧವು ಇಸ್ರಾಯೇಲ್‌ ಜನಾಂಗ ಮತ್ತು ದೇವರ ಸಂಘಟನೆಯ ಸ್ವರ್ಗೀಯ ಭಾಗದೊಂದಿಗೆ ಯೆಹೋವನಿಗಿರುವ ಸಂಬಂಧವನ್ನು ಪ್ರತಿನಿಧಿಸಿತು. (ಗಲಾ. 4:22-26) ಅದೇ ರೀತಿ ದೇವದರ್ಶನ ಗುಡಾರ, ಆಲಯ, ದೋಷಪರಿಹಾರಕ ದಿನ, ಮಹಾ ಯಾಜಕ ಮತ್ತು ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಇತರ ವಿಷಯಗಳು ‘ಬರಲಿರುವ ಒಳ್ಳೆಯ ವಿಷಯಗಳ ಛಾಯೆಯಾಗಿದ್ದವು.’ (ಇಬ್ರಿ. 9:23-25; 10:1) ಈ ಬೈಬಲ್‌ ವೃತ್ತಾಂತಗಳ ಬಗ್ಗೆ ಮತ್ತು ಅವು ಏನನ್ನು ಪ್ರತಿನಿಧಿಸುತ್ತವೊ ಅವುಗಳ ಬಗ್ಗೆ ಕಲಿಯುವಾಗ ನಮ್ಮ ನಂಬಿಕೆ ಬಲಗೊಳ್ಳುತ್ತದೆ. ಆದರೆ ಬೈಬಲ್‍ನಲ್ಲಿ ತಿಳಿಸಲಾಗಿರುವ ಪ್ರತಿಯೊಂದು ಘಟನೆ, ವಸ್ತು ಮತ್ತು ಪ್ರತಿಯೊಬ್ಬ ವ್ಯಕ್ತಿ ಯಾವುದೊ ಒಂದು ವಿಷಯ ಅಥವಾ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆಂದು ಇದರ ಅರ್ಥನಾ?

9. ನಾಬೋತನ ಕುರಿತಾದ ಬೈಬಲ್‌ ವೃತ್ತಾಂತವನ್ನು ಹಿಂದೆಲ್ಲಾ ಹೇಗೆ ವಿವರಿಸಲಾಗುತ್ತಿತ್ತು?

9 ಹಿಂದೆಲ್ಲಾ ನಮ್ಮ ಸಾಹಿತ್ಯದಲ್ಲಿ ಕೆಲವು ವೃತ್ತಾಂತಗಳಲ್ಲಿರುವ ಪ್ರತಿಯೊಂದು ಘಟನೆ, ವಸ್ತು ಮತ್ತು ಪ್ರತಿಯೊಬ್ಬ ವ್ಯಕ್ತಿ ಯಾವುದೊ ಒಂದು ವಿಷಯ ಅಥವಾ ವ್ಯಕ್ತಿಯನ್ನು ಪ್ರತಿನಿಧಿಸುತ್ತಿತ್ತೆಂದು ವಿವರಿಸಲಾಗುತ್ತಿತ್ತು. ಉದಾಹರಣೆಗೆ ದುಷ್ಟ ರಾಣಿ ಈಜೆಬೆಲಳು ನಾಬೋತನನ್ನು ಕೊಲ್ಲಿಸಿ ಅವನ ದ್ರಾಕ್ಷೆತೋಟ ತನ್ನ ಗಂಡನಾದ ಆಹಾಬನಿಗೆ ಸಿಗುವಂತೆ ಮಾಡಿದಳು. (1 ಅರ. 21:1-16) 1932ರ ಕಾವಲಿನಬುರುಜುವಿನಲ್ಲಿ ಆಹಾಬ ಮತ್ತು ಈಜೆಬೆಲ ಸೈತಾನ ಮತ್ತವನ ಸಂಘಟನೆಯನ್ನು, ನಾಬೋತನು ಯೇಸುವನ್ನು, ನಾಬೋತನ ಸಾವು ಯೇಸುವಿನ ಸಾವನ್ನು ಪ್ರತಿನಿಧಿಸುತ್ತದೆ ಎಂದು ವಿವರಿಸಲಾಗಿತ್ತು. ಆದರೆ 1961ರಲ್ಲಿ “ಲೆಟ್‌ ಯುವರ್‌ ನೇಮ್‌ ಬಿ ಸ್ಯಾ೦ಕ್ಟಿಫೈಡ್” ಎಂಬ ಪುಸ್ತಕದಲ್ಲಿ ನಾಬೋತನು ಅಭಿಷಿಕ್ತರನ್ನು ಮತ್ತು ಈಜೆಬೆಲಳು ಕ್ರೈಸ್ತಪ್ರಪಂಚವನ್ನು ಸೂಚಿಸುತ್ತಾಳೆ ಎಂದು ವಿವರಿಸಲಾಗಿತ್ತು. ಅದೂ ಅಲ್ಲದೆ, ಈಜೆಬೆಲಳು ನಾಬೋತನಿಗೆ ನೀಡಿದ ಹಿಂಸೆಯು ಕಡೇ ದಿವಸಗಳಲ್ಲಿ ಅಭಿಷಿಕ್ತರು ಅನುಭವಿಸುವ ಹಿಂಸೆಗೆ ಸೂಚಿಸುತ್ತದೆಂದು ಹೇಳಲಾಗಿತ್ತು. ಅನೇಕ ವರ್ಷಗಳ ತನಕ ಈ ವಿವರಣೆಗಳು ದೇವಜನರ ನಂಬಿಕೆಯನ್ನು ಬಲಗೊಳಿಸಿವೆ. ಹಾಗಾದರೆ ಈಗ ನಾವೇಕೆ ಬೇರೆ ರೀತಿಯಲ್ಲಿ ಈ ವಿಷಯಗಳನ್ನು ವಿವರಿಸುತ್ತೇವೆ?

10. (ಎ) ಕೆಲವೊಂದು ಬೈಬಲ್‌ ವೃತ್ತಾಂತಗಳನ್ನು ವಿವರಿಸುವಾಗ ನಂಬಿಗಸ್ತ ಆಳು ಹೇಗೆ ಹೆಚ್ಚು ಜಾಗ್ರತೆ ವಹಿಸುತ್ತಿದೆ? (ಬಿ) ಈಗ ನಮ್ಮ ಸಾಹಿತ್ಯ ಯಾವುದಕ್ಕೆ ಹೆಚ್ಚು ಗಮನ ಕೊಡುತ್ತದೆ?

10 ವರ್ಷಗಳು ದಾಟುತ್ತಾ ಹೋದಂತೆ ಯೆಹೋವನು ‘ನಂಬಿಗಸ್ತನು, ವಿವೇಚನೆಯುಳ್ಳವನು ಆದಂಥ ಆಳಿಗೆ’ ಹೆಚ್ಚು ವಿವೇಚನೆ ತೋರಿಸಲು ಅಂದರೆ ಜಾಗ್ರತೆ ವಹಿಸಲು ಸಹಾಯ ಮಾಡಿದ್ದಾನೆ. ಯಾವ ವಿಷಯದಲ್ಲಿ? ಯಾವುದೇ ಬೈಬಲ್‌ ವೃತ್ತಾಂತ  ಒಂದು ದೊಡ್ಡ ವಿಷಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲು ಆ ಆಳು ಈಗ ಜಾಗ್ರತೆವಹಿಸುತ್ತದೆ. ಸ್ಪಷ್ಟವಾದ ಬೈಬಲ್‌ ಆಧಾರ ಇದ್ದರೆ ಮಾತ್ರ ಒಂದು ವೃತ್ತಾಂತ ಏನನ್ನು ಪ್ರತಿನಿಧಿಸುತ್ತದೆ ಎಂದು ಆಳು ಹೇಳುತ್ತದೆ. ಮುಂಚೆ ಕೊಡಲಾಗುತ್ತಿದ್ದ ಸೂಚಕ ಮತ್ತು ಸೂಚಕರೂಪದ ವಿವರಣೆಗಳನ್ನು ಅರ್ಥಮಾಡಿಕೊಳ್ಳಲು, ನೆನಪಿಡಲು ಮತ್ತು ಅನ್ವಯಿಸಲು ಕಷ್ಟವಾಗುತ್ತಿತ್ತು. ‘ಇದರ ಅರ್ಥ ಹೀಗಿರಬಹುದು, ಹಾಗಿರಬಹುದು’ ಎಂಬುದಕ್ಕೆ ಹೆಚ್ಚು ಗಮನಕೊಡಲು ಹೋಗಿ ಆ ವೃತ್ತಾಂತಗಳ ಪ್ರಾಯೋಗಿಕ ಪಾಠಗಳನ್ನೇ ಅಲಕ್ಷಿಸಲಾಗುತ್ತಿತ್ತು. ಆದ್ದರಿಂದ ಈಗ ನಮ್ಮ ಸಾಹಿತ್ಯ ಬೈಬಲ್‌ ವೃತ್ತಾಂತಗಳು ಕಲಿಸುವಂಥ ಸರಳ ಮತ್ತು ಪ್ರಾಯೋಗಿಕ ಪಾಠಗಳಿಗೆ ಗಮನಕೊಡುತ್ತಾ ಇದೆ. ಈ ಪಾಠಗಳು ನಂಬಿಕೆ, ತಾಳ್ಮೆ, ದೇವಭಕ್ತಿ ಮತ್ತು ಇತರ ಬೆಲೆಬಾಳುವ ಗುಣಗಳ ಕುರಿತಾಗಿರುತ್ತವೆ. *—ಪಾದಟಿಪ್ಪಣಿ ನೋಡಿ.

ನಾಬೋತನ ಉದಾಹರಣೆ ನಮಗೊಂದು ಮುಖ್ಯ ಪಾಠವನ್ನು ಕಲಿಸುತ್ತದೆ (ಪ್ಯಾರ 11 ನೋಡಿ)

11. (ಎ) ನಾಬೋತನ ಉದಾಹರಣೆಯನ್ನು ನಾವೀಗ ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ? (ಬಿ) ಅವನ ಉದಾಹರಣೆ ನಮಗೆ ಹೇಗೆ ಸಹಾಯ ಮಾಡುತ್ತದೆ? (ಸಿ) ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಾಹಿತ್ಯ ಹೆಚ್ಚಾಗಿ ಸೂಚಕ ಮತ್ತು ಸೂಚಕರೂಪದ ವಿವರಣೆಯನ್ನು ಯಾಕೆ ಕೊಡುವುದಿಲ್ಲ? (ಈ ಆವೃತ್ತಿಯ “ವಾಚಕರಿಂದ ಪ್ರಶ್ನೆಗಳು” ನೋಡಿ.)

11 ನಾಬೋತನ ಕುರಿತ ನಮ್ಮ ತಿಳಿವಳಿಕೆ ಈಗ ಹೆಚ್ಚು ಸರಳ, ಹೆಚ್ಚು ಸ್ಪಷ್ಟವಾಗಿದೆ. ಅವನು ಸತ್ತಿದ್ದು ಯೇಸು ಅಥವಾ ಅಭಿಷಿಕ್ತರನ್ನು ಪ್ರತಿನಿಧಿಸುತ್ತಿದ್ದ ಕಾರಣಕ್ಕಾಗಿ ಅಲ್ಲ. ಬದಲಿಗೆ, ಕೊನೇ ತನಕ ದೇವರಿಗೆ ನಂಬಿಗಸ್ತನಾಗಿರಬೇಕೆಂಬ ದೃಢತೀರ್ಮಾನ ಅವನ ಸಾವಿಗೆ ಕಾರಣವಾಯಿತು. ಒಬ್ಬ ಶಕ್ತಿಶಾಲಿ ಅಧಿಕಾರಿಯಿಂದ ಹಿಂಸೆ ಬಂದರೂ ಯೆಹೋವನ ಆಜ್ಞೆಗಳಿಗೆ ವಿಧೇಯನಾಗಿದ್ದನು. (ಅರ. 36:7; 1 ಅರ. 21:3) ಅಂಥದ್ದೇ ಹಿಂಸೆಯನ್ನು ಎದುರಿಸಬೇಕಾಗಬಹುದಾದ ದೇವರ ಸೇವಕರಿಗೆ ನಾಬೋತ ಎಂಥಾ ಒಳ್ಳೇ ಮಾದರಿ ಅಲ್ಲವಾ? (2 ತಿಮೊಥೆಯ 3:12 ಓದಿ.) ಎಲ್ಲಾ ಕ್ರೈಸ್ತರು ಈ ಪಾಠವನ್ನು ಅರ್ಥಮಾಡಿಕೊಳ್ಳಬಹುದು, ನೆನಪಿಡಬಹುದು, ಅನ್ವಯಿಸಲೂಬಹುದು. ಇದರಿಂದ ನಂಬಿಕೆಯೂ ಬಲಗೊಳ್ಳುತ್ತದೆ.

12. (ಎ) ಬೈಬಲ್‌ ವೃತ್ತಾಂತಗಳ ಬಗ್ಗೆ ನಾವೇನು ನೆನಸಬಾರದು? (ಬಿ) ಅಗಾಧವಾದ ವಿಷಯಗಳ ಬಗ್ಗೆಯೂ ನಮಗೀಗ ಸ್ಪಷ್ಟ ವಿವರಣೆ ಸಿಗಲು ಕಾರಣವೇನು? (ಪಾದಟಿಪ್ಪಣಿ ನೋಡಿ.)

12 ಬೈಬಲ್‌ ವೃತ್ತಾಂತಗಳಿಂದ ಬರೀ ಪ್ರಾಯೋಗಿಕ ಪಾಠಗಳನ್ನು ಕಲಿಯಬಹುದು, ಅದಕ್ಕೆ ಬೇರಾವುದೇ ಅರ್ಥ ಇಲ್ಲ ಎಂದು ನೆನಸಬೇಕಾ? ಇಲ್ಲ. ಈಗ ನಮ್ಮ ಸಾಹಿತ್ಯ ಬೈಬಲ್‌ ವೃತ್ತಾಂತಗಳನ್ನು ಸೂಚಕ ಮತ್ತು ಸೂಚಕರೂಪಗಳೆಂದು ವಿವರಿಸುವ ಬದಲು ಒಂದು ವೃತ್ತಾಂತ ಇನ್ನೊಂದಕ್ಕೆ ಹೇಗೆ ಸಂಬಂಧಪಟ್ಟಿದೆ ಎಂಬುದಕ್ಕೆ ಹೆಚ್ಚು ಗಮನ ಕೊಡುತ್ತಿದೆ. ಉದಾಹರಣೆಗೆ ಹಿಂಸೆ  ಮತ್ತು ಸಾವು ಬಂದರೂ ನಾಬೋತನು ತೋರಿಸಿದ ಸಮಗ್ರತೆ ಕ್ರಿಸ್ತನ ಮತ್ತು ಅಭಿಷಿಕ್ತರ ಸಮಗ್ರತೆಯನ್ನು ನೆನಪಿಗೆ ತರುತ್ತದೆ. ಜೊತೆಗೆ ಎಷ್ಟೋ ಮಂದಿ “ಬೇರೆ ಕುರಿ”ಗಳ ಸಮಗ್ರತೆಯನ್ನೂ ನೆನಪಿಗೆ ತರುತ್ತದೆ. ಹೀಗೆ ಯೆಹೋವನು ಸರಳ ರೀತಿಯಲ್ಲಿ ನಮಗೆ ಬೋಧಿಸುತ್ತಿರುವುದನ್ನು ನಾವು ನೋಡಬಹುದು. *—ಪಾದಟಿಪ್ಪಣಿ ನೋಡಿ.

ಯೇಸುವಿನ ದೃಷ್ಟಾಂತಗಳ ಸರಳ ವಿವರಣೆ

13. ಯೇಸುವಿನ ಕೆಲವು ದೃಷ್ಟಾಂತಗಳನ್ನು ನಾವೀಗ ಹೆಚ್ಚು ಸರಳ, ಹೆಚ್ಚು ಸ್ಪಷ್ಟವಾಗಿ ವಿವರಿಸುತ್ತೇವೆ ಎಂದು ಯಾವ ಉದಾಹರಣೆಗಳು ತೋರಿಸುತ್ತವೆ?

13 ಬದುಕಿರುವವರಲ್ಲೇ ಮಹಾನ್‌ ಬೋಧಕನು ಯೇಸು ಕ್ರಿಸ್ತ. ಬೋಧಿಸುವಾಗ ದೃಷ್ಟಾಂತಗಳನ್ನು, ಉದಾಹರಣೆಗಳನ್ನು ಬಳಸಲು ತುಂಬ ಇಷ್ಟಪಡುತ್ತಿದ್ದನು. (ಮತ್ತಾ. 13:34) ದೃಷ್ಟಾಂತಗಳ ಬಳಕೆ ತುಂಬ ಪರಿಣಾಮಕಾರಿ. ಏಕೆಂದರೆ ಅವು ಕಷ್ಟಕರ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ, ಯೋಚಿಸುವಂತೆ ಮಾಡುತ್ತವೆ ಮತ್ತು ನಮ್ಮ ಹೃದಯದ ಮೇಲೆ ಪರಿಣಾಮಬೀರುತ್ತವೆ. ವರ್ಷಗಳು ಕಳೆದಂತೆ ನಮ್ಮ ಸಾಹಿತ್ಯ ಯೇಸುವಿನ ದೃಷ್ಟಾಂತಗಳನ್ನು ಹೆಚ್ಚು ಸರಳ, ಹೆಚ್ಚು ಸ್ಪಷ್ಟವಾಗಿ ವಿವರಿಸುತ್ತಾ ಬಂದಿದೆ. ಉದಾಹರಣೆಗೆ ಜುಲೈ 15, 2008ರ ಕಾವಲಿನಬುರುಜು ಹುಳಿಹಿಟ್ಟಿನ, ಸಾಸಿವೆ ಕಾಳಿನ ಮತ್ತು ಸೆಳೆಬಲೆಯ ಕುರಿತ ಯೇಸುವಿನ ದೃಷ್ಟಾಂತಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡಿತು. ಈ ದೃಷ್ಟಾಂತಗಳು ದೇವರ ರಾಜ್ಯವನ್ನು ಪ್ರತಿನಿಧಿಸುತ್ತವೆ ಎಂದು ನಮಗೀಗ ಗೊತ್ತು. ಅನೇಕ ಜನರು ದುಷ್ಟ ಲೋಕವನ್ನು ತ್ಯಜಿಸಿ ಕ್ರಿಸ್ತನ ಶಿಷ್ಯರಾಗುವಂತೆ ಇವು ಸಹಾಯಮಾಡಿವೆ.

14. (ಎ) ದಯಾಗುಣ ಇದ್ದ ಸಮಾರ್ಯದವನ ಕಥೆಯನ್ನು ಹಿಂದೆ ಹೇಗೆ ವಿವರಿಸಲಾಗಿತ್ತು? (ಬಿ) ಈಗ ಅದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ?

14 ಯೇಸು ಹೆಚ್ಚು ವಿವರಗಳನ್ನು ಕೊಟ್ಟು ಹೇಳಿದ ಕಥೆಗಳನ್ನು ಅಂದರೆ ಸಾಮ್ಯಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು? ಈ ಕಥೆಗಳಲ್ಲಿ ಕೆಲವೊಂದಕ್ಕೆ ಸಾಂಕೇತಿಕ ಅಥವಾ ಪ್ರವಾದನಾತ್ಮಕ ಅರ್ಥವಿದೆ. ಇನ್ನು ಕೆಲವು ಕಥೆಗಳಲ್ಲಿ ದೈನಂದಿನ ಜೀವನಕ್ಕೆ ಅನ್ವಯಿಸಬಹುದಾದ ಪಾಠವಿದೆ. ಆದರೆ ಯಾವುದು ಸಾಂಕೇತಿಕ, ಯಾವುದು ಅಲ್ಲ ಎಂದು ತಿಳಿಯುವುದು ಹೇಗೆ? ವರ್ಷಗಳು ಕಳೆದಂತೆ ಇದಕ್ಕೆ ಉತ್ತರ ಸ್ಪಷ್ಟವಾಗಿದೆ. ಉದಾಹರಣೆಗೆ ಸಮಾರ್ಯದವನ ಕಥೆಯನ್ನು ಹಿಂದೆ ಹೇಗೆ ವಿವರಿಸುತ್ತಿದ್ದೆವೆಂದು ನೋಡಿ. (ಲೂಕ 10:30-37) 1924ರ ಕಾವಲಿನಬುರುಜುವಿನಲ್ಲಿ ಸಮಾರ್ಯದವನು ಯೇಸುವನ್ನು, ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುವ ದಾರಿ ಏದೆನಿನಲ್ಲಾದ ದಂಗೆಯ ನಂತರ ಮಾನವರ ಸ್ಥಿತಿ ಕೆಡುತ್ತಿರುವುದನ್ನು ಸೂಚಿಸುತ್ತದೆಂದು ತಿಳಿಸಲಾಗಿತ್ತು. ದಾರಿಯಲ್ಲಿ ಎದುರಾದ ಕಳ್ಳರು ದೊಡ್ಡದೊಡ್ಡ ಸಂಸ್ಥೆಗಳನ್ನು, ಅತಿಯಾಸೆ ಇರುವ ವ್ಯಾಪಾರಿಗಳನ್ನು ಸೂಚಿಸುತ್ತಾರೆ ಮತ್ತು ಯಾಜಕ ಹಾಗೂ ಲೇವಿಯನು ಕ್ರೈಸ್ತಪ್ರಪಂಚವನ್ನು ಸೂಚಿಸುತ್ತಾರೆಂದೂ ತಿಳಿಸಲಾಗಿತ್ತು. ಆದರೆ ಇಂದು ನಮ್ಮ ಸಾಹಿತ್ಯ ಆ ಕಥೆಯನ್ನು ಬಳಸಿ ಈ ಪಾಠವನ್ನು ನೆನಪಿಗೆ ತರುತ್ತದೆ: ಕ್ರೈಸ್ತರು ಭೇದಭಾವ ತೋರಿಸಬಾರದು. ಅಗತ್ಯ ಇರುವವರೆಲ್ಲರಿಗೆ ಸಹಾಯ ನೀಡಬೇಕು. ಅದರಲ್ಲೂ ದೇವರ ಬಗ್ಗೆ ಸತ್ಯವನ್ನು ಕಲಿಸಿ ಅವರಿಗೆ ಸಹಾಯ ಮಾಡಬೇಕು. ಹೀಗೆ ಯೆಹೋವನು ಈ ಕಥೆಗಳ ಕುರಿತ ಸತ್ಯವನ್ನು ಸ್ಪಷ್ಟಪಡಿಸುತ್ತಿರುವುದನ್ನು ನೋಡಿ ನಮಗೆ ಸಂತೋಷ ಆಗುತ್ತದೆ.

15. ಮುಂದಿನ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

15 ಮುಂದಿನ ಲೇಖನದಲ್ಲಿ, ಹತ್ತು ಮಂದಿ ಕನ್ಯೆಯರ ಕುರಿತು ಯೇಸು ಹೇಳಿದ ಕಥೆಯ ಬಗ್ಗೆ ಕಲಿಯೋಣ. (ಮತ್ತಾ. 25:1-13) ಕಡೇ ದಿವಸಗಳಲ್ಲಿರುವ ತನ್ನ ಹಿಂಬಾಲಕರು ಈ ಪ್ರಬಲವಾದ ದೃಷ್ಟಾಂತವನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ಯೇಸು ಬಯಸಿದನು? ಈ ದೃಷ್ಟಾಂತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಘಟನೆ, ವಸ್ತು ಯಾವುದೊ ಭವಿಷ್ಯದ ಯಾವುದೊ ಒಂದು ದೊಡ್ಡ ವಿಷಯ ಅಥವಾ ವ್ಯಕ್ತಿಯನ್ನು ಪ್ರತಿನಿಧಿಸುತ್ತದಾ? ಅಥವಾ ಕಡೇ ದಿವಸಗಳಲ್ಲಿರುವ ನಮಗೆ ದೈನಂದಿನ ಜೀವನದಲ್ಲಿ ಅನ್ವಯವಾಗುವ ವಿಷಯಗಳನ್ನು ಕಲಿಯಬೇಕೆಂದು ಯೇಸು ಬಯಸುತ್ತಿದ್ದನೇ? ನೋಡೋಣ.

^ ಪ್ಯಾರ. 4 ಇಂಗ್ಲಿಷ್‌ ಭಾಷೆಯಲ್ಲಿ ಸರಳೀಕೃತ ಆವೃತ್ತಿಯನ್ನು ಮೊದಲು ಬಿಡುಗಡೆ ಮಾಡಿದ್ದು ಜುಲೈ 2011ರಂದು. ಇಂದು ಅದು ಬೇರೆ ಕೆಲವು ಭಾಷೆಗಳಲ್ಲೂ ಲಭ್ಯ.

^ ಪ್ಯಾರ. 5 ಬೇರೆ ಭಾಷೆಗಳಲ್ಲೂ ಪರಿಷ್ಕೃತ ಆವೃತ್ತಿಯನ್ನು ಲಭ್ಯಗೊಳಿಸಲು ಸಿದ್ಧತೆ ನಡೆಯುತ್ತಿದೆ.

^ ಪ್ಯಾರ. 10 ಉದಾಹರಣೆಗೆ ಅವರ ನಂಬಿಕೆಯನ್ನು ಅನುಕರಿಸಿ ಪುಸ್ತಕದಲ್ಲಿ 14 ವ್ಯಕ್ತಿಗಳ ಬಗ್ಗೆ ಸವಿವರವಾಗಿ ಚರ್ಚಿಸಲಾಗಿದೆ. ದೈನಂದಿನ ಜೀವನದಲ್ಲಿ ಅನ್ವಯಿಸಬಹುದಾದ ಪಾಠಗಳು ಅದರಲ್ಲಿವೆ. ಸೂಚಕ ಅಥವಾ ಸೂಚಕರೂಪದ ಬಗ್ಗೆ ಅದರಲ್ಲಿಲ್ಲ.

^ ಪ್ಯಾರ. 12 “ಅರ್ಥಮಾಡಿಕೊಳ್ಳಲು ಕಷ್ಟ” ಎಂಬಂತೆ ತೋರುವ ವಿಷಯಗಳೂ ಬೈಬಲ್‍ನಲ್ಲಿವೆ. ಅವುಗಳಲ್ಲಿ ಪೌಲನ ಕೆಲವು ಬರಹಗಳು ಸೇರಿವೆ. ಎಲ್ಲಾ ಬೈಬಲ್‌ ಬರಹಗಾರರು ಪವಿತ್ರಾತ್ಮದಿಂದ ಪ್ರೇರಣೆ ಹೊಂದಿದ್ದರು. ಇಂದು ಸಹ ನಿಜ ಕ್ರೈಸ್ತರಿಗೆ ಬೈಬಲ್‍ನಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿರುವುದು ಅದೇ ದೇವರಾತ್ಮ. ಇದರಲ್ಲಿ ‘ದೇವರ ಅಗಾಧವಾದ ವಿಷಯಗಳನ್ನು’ ಅರ್ಥ ಮಾಡಿಕೊಳ್ಳುವುದೂ ಸೇರಿದೆ.—2 ಪೇತ್ರ 3:16, 17; 1 ಕೊರಿಂ. 2:10.