ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಮಾರ್ಚ್ 2015

ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ನೀಡೋಣ

ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ನೀಡೋಣ

“ನೀವು ಈ ನನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನಿಗೆ ಏನೆಲ್ಲ ಮಾಡಿದಿರೋ ಅದನ್ನು ನನಗೆ ಕೂಡ ಮಾಡಿದಿರಿ.” —ಮತ್ತಾ. 25:40.

1, 2. (ಎ) ಯೇಸು ತನ್ನ ಆಪ್ತ ಗೆಳೆಯರಿಗೆ ಯಾವ ಕಥೆಗಳನ್ನು ಹೇಳಿದನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಕುರಿ ಮತ್ತು ಆಡುಗಳ ಕಥೆಯ ಬಗ್ಗೆ ನಾವೇನು ತಿಳಿದುಕೊಳ್ಳಬೇಕು?

ಯೇಸು ತನ್ನ ಆಪ್ತ ಗೆಳೆಯರಾದ ಪೇತ್ರ, ಅಂದ್ರೆಯ, ಯಾಕೋಬ, ಯೋಹಾನರೊಟ್ಟಿಗೆ ತುಂಬ ಆಸಕ್ತಿಕರ ವಿಷಯವನ್ನು ಮಾತಾಡುತ್ತಾ ಇದ್ದನು. ನಂಬಿಗಸ್ತ ವಿವೇಚನೆಯುಳ್ಳ ಆಳು, ಹತ್ತು ಕನ್ಯೆಯರು ಮತ್ತು ತಲಾಂತುಗಳ ಕಥೆಗಳನ್ನು ಹೇಳಿದ ನಂತರ ಅವನು ಅವರಿಗೆ ಇನ್ನೊಂದು ಕಥೆ ಹೇಳಿದನು. ಅದರಲ್ಲಿ ಅವನು “ಮನುಷ್ಯಕುಮಾರನು” ‘ಎಲ್ಲ ಜನಾಂಗಗಳವರನ್ನು’ ತೀರ್ಪು ಮಾಡುವ ಸಮಯದ ಬಗ್ಗೆ ಮಾತಾಡಿದನು. ಅದರಲ್ಲಿ “ಮನುಷ್ಯಕುಮಾರನು” ಜನರನ್ನು ಕುರಿ ಮತ್ತು ಆಡುಗಳೆಂಬ ಎರಡು ಗುಂಪುಗಳಾಗಿ ಪ್ರತ್ಯೇಕಿಸುವನೆಂದು ವಿವರಿಸಿದನು. ಮುಖ್ಯವಾದ ಮೂರನೇ ಗುಂಪಿನ ಬಗ್ಗೆಯೂ ಹೇಳಿದನು. ಅವರೇ ಅರಸನ ‘ಸಹೋದರರು.’—ಮತ್ತಾಯ 25:31-46 ಓದಿ.

2 ಅಪೊಸ್ತಲರ ಹಾಗೇ ನಮ್ಮ ಕಾಲದಲ್ಲಿ ಯೆಹೋವನ ಸೇವಕರು ಯೇಸು ಹೇಳಿದ ಈ ಕಥೆಯ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಏಕೆಂದರೆ ಇದರಲ್ಲಿ ಜನರ ಜೀವಕ್ಕೆ ಸಂಬಂಧಪಟ್ಟ ವಿಷಯ ಇದೆ. ಕೆಲವರು ನಿತ್ಯಜೀವ ಪಡೆಯುವರು, ಇತರರು ನಾಶವಾಗುವರು ಎಂದು ಯೇಸು ಇದರಲ್ಲಿ ಹೇಳಿದನು. ಹಾಗಾಗಿ ನಾವು ಈ ಕಥೆಯ ಅರ್ಥವೇನು ಮತ್ತು ನಿತ್ಯಜೀವ ಪಡೆಯಲು ಏನು ಮಾಡಬೇಕು ಎಂದು ತಿಳಿದುಕೊಳ್ಳುವುದು ತುಂಬ ಮುಖ್ಯ. ಹಾಗಾಗಿ ಈ ಲೇಖನದಲ್ಲಿ ಮುಂದಿನ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲಿದ್ದೇವೆ: ಈ ಕಥೆಯನ್ನು  ಅರ್ಥ ಮಾಡಿಕೊಳ್ಳಲು ಯೆಹೋವನು ನಮಗೆ ಹೇಗೆ ಸಹಾಯ ಮಾಡಿದ್ದಾನೆ? ಈ ಕಥೆ ಸಾರುವ ಕೆಲಸಕ್ಕೆ ಒತ್ತು ಕೊಡುತ್ತದೆ ಎಂದು ನಮಗೆ ಹೇಗೆ ಗೊತ್ತು? ಯಾರು ಸಾರಬೇಕು? ‘ಅರಸನಿಗೆ’ ಮತ್ತು ಅವನ ‘ಸಹೋದರರಿಗೆ’ ಇಂದು ನಿಷ್ಠೆ ತೋರಿಸುವುದು ಏಕೆ ಪ್ರಾಮುಖ್ಯ?

ಈ ಕಥೆಯನ್ನು ಅರ್ಥ ಮಾಡಿಕೊಳ್ಳಲು ಯೆಹೋವನು ಹೇಗೆ ಸಹಾಯ ಮಾಡಿದ್ದಾನೆ?

3, 4. (ಎ) ಈ ಕಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಏನನ್ನು ತಿಳಿದುಕೊಳ್ಳಬೇಕು? (ಬಿ) ಇಸವಿ 1881ರಲ್ಲಿ ಕಾವಲಿನಬುರುಜು ಈ ಕಥೆ ಬಗ್ಗೆ ಯಾವ ವಿವರಣೆ ಕೊಟ್ಟಿತು?

3 ಕುರಿ ಮತ್ತು ಆಡುಗಳ ಕಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು: “ಮನುಷ್ಯಕುಮಾರನು,” “ಅರಸ,” ಕುರಿ ಮತ್ತು ಆಡುಗಳು, ಅರಸನ ‘ಸಹೋದರರು’ ಯಾರು? ಕುರಿ ಮತ್ತು ಆಡುಗಳನ್ನು “ಮನುಷ್ಯಕುಮಾರನು” ಯಾವಾಗ ಪ್ರತ್ಯೇಕಿಸುವನು ಅಥವಾ ತೀರ್ಪುಮಾಡುವನು? ಕೆಲವರನ್ನು ಕುರಿಗಳೆಂದು ಕೆಲವರನ್ನು ಆಡುಗಳೆಂದು ಯಾಕೆ ಕರೆಯಲಾಗಿದೆ?

4 ಇಸವಿ 1881ರಲ್ಲಿ ಕಾವಲಿನಬುರುಜು ಪತ್ರಿಕೆ ಹೀಗೆ ವಿವರಿಸಿತ್ತು: “ಮನುಷ್ಯಕುಮಾರ” ಅಥವಾ “ಅರಸ” ಅಂದರೆ ಯೇಸು. ಅರಸನ ‘ಸಹೋದರರು’ ಅಂದರೆ ಯೇಸುವಿನ ಜೊತೆ ಸ್ವರ್ಗದಲ್ಲಿ ಆಳುವವರು ಮಾತ್ರವಲ್ಲ ಪರಿಪೂರ್ಣರಾದಾಗ ಭೂಮಿಯಲ್ಲಿ ಜೀವಿಸುವ ಜನರು ಸಹ. ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯಲ್ಲಿ ಜನರನ್ನು ಪ್ರತ್ಯೇಕಿಸಲಾಗುವುದು. ತಮ್ಮ ಪ್ರತಿಯೊಂದು ಕೆಲಸಕಾರ್ಯದಲ್ಲಿ ದೇವರ ಪ್ರೀತಿಯನ್ನು ಅನುಕರಿಸುವವರನ್ನು ಕುರಿಗಳೆಂದು ಕರೆಯಲಾಗುವುದು ಎಂದೂ ಆ ಪತ್ರಿಕೆ ಹೇಳಿತ್ತು.

5. ದೇವರ ಜನರು 1923ರಲ್ಲಿ ಈ ಕಥೆಯನ್ನು ಹೇಗೆ ಅರ್ಥ ಮಾಡಿಕೊಂಡಿದ್ದರು?

5 ಆದರೆ ಯೆಹೋವನು ತನ್ನ ಜನರಿಗೆ ಈ ಕಥೆಯನ್ನು ಇನ್ನೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದನು. ಅಕ್ಟೋಬರ್‌ 15, 1923ರ ಕಾವಲಿನಬುರುಜು ಹೇಳಿದ್ದೇನೆಂದರೆ “ಮನುಷ್ಯಕುಮಾರ” ಅಂದರೆ ಯೇಸು. ಆ ಪತ್ರಿಕೆ ಬೈಬಲ್‌ ವಚನಗಳನ್ನು ಬಳಸಿ ಈ ಅಂಶಗಳನ್ನು ವಿವರಿಸಿತು: ಯೇಸುವಿನ ಜೊತೆ ಆಳುವವರು ಮಾತ್ರ ‘ಸಹೋದರರು’ ಮತ್ತು ಇವರೆಲ್ಲರೂ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಸ್ವರ್ಗದಲ್ಲಿರುತ್ತಾರೆ. ಯೇಸುವಿನ ಮತ್ತು ಅವನ ಸಹೋದರರ ಆಳ್ವಿಕೆಯಡಿ ಭೂಮಿಯಲ್ಲಿ ಜೀವಿಸುವವರೇ ಕುರಿಗಳು. ಇವರು ಯೇಸುವನ್ನು ನಂಬುವವರು ಮತ್ತು ರಾಜ್ಯವು ಒಳ್ಳೇ ಪರಿಸ್ಥಿತಿ ತರುತ್ತದೆಂದು ನಂಬುವವರು ಆಗಿರುತ್ತಾರೆ. ಇವರು ಅರಸನ ಸಹೋದರರಿಗೆ ಸಹಾಯ ಮಾಡುತ್ತಾರೆಂದು ಕಥೆಯಲ್ಲಿ ಹೇಳಲಾಗಿರುವುದರಿಂದ ಪ್ರತ್ಯೇಕಿಸುವಿಕೆ ಅಥವಾ ತೀರ್ಪಿನ ಕೆಲಸ ಸಾವಿರ ವರ್ಷ ಆಳ್ವಿಕೆ ಆರಂಭವಾಗುವ ಮುಂಚೆಯೇ ನಡೆಯುತ್ತದೆ. ಏಕೆಂದರೆ ಆಗ ಅಭಿಷಿಕ್ತರು ಇನ್ನೂ ಭೂಮಿಯಲ್ಲಿರುತ್ತಾರೆ.

6. ಈ ಕಥೆಯನ್ನು ನಾವು ಅರ್ಥ ಮಾಡಿಕೊಳ್ಳುತ್ತಿದ್ದ ರೀತಿ 1995ರಲ್ಲಿ ಹೇಗೆ ಬದಲಾಯಿತು?

6 ಅಂತ್ಯ ಕಾಲದಲ್ಲಿ ನಡೆಯುವ ಸುವಾರ್ತಾ ಕೆಲಸದ ಮೂಲಕ ಜನರ ತೀರ್ಪು ಮಾಡಲಾಗುವುದು ಎಂದು ತುಂಬ ವರ್ಷಗಳ ತನಕ ನೆನಸಿದ್ದೆವು. ಜನರು ನಮ್ಮ ಸಂದೇಶವನ್ನು ಸ್ವೀಕರಿಸಿದರೆ ಅವರು ಕುರಿಗಳು ಇಲ್ಲವಾದರೆ ಆಡುಗಳು ಎಂದು ಅರ್ಥ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ಕಥೆಯನ್ನು ನಾವು ಅರ್ಥ ಮಾಡಿಕೊಳ್ಳುತ್ತಿದ್ದ ರೀತಿ 1995ರಲ್ಲಿ ಬದಲಾಯಿತು. ಆ ವರ್ಷದ ಕಾವಲಿನಬುರುಜು ಮತ್ತಾಯ 24:29-31ನ್ನು (ಓದಿ) ಮತ್ತಾಯ 25:31, 32(ಓದಿ) ಜೊತೆ ಹೋಲಿಸಿ ಈ ವಿವರಣೆ ಕೊಟ್ಟಿತು: ಮಹಾ ಸಂಕಟದ ಸಮಯದಲ್ಲಿ ಯೇಸು ಮನುಷ್ಯಕುಮಾರನಾಗಿ “ಮಹಿಮೆಯಲ್ಲಿ” ಬರುವಾಗ ತೀರ್ಪಿನ ಕೆಲಸ ಮಾಡುವನು. *—ಪಾದಟಿಪ್ಪಣಿ ನೋಡಿ.

7. ಕುರಿ ಮತ್ತು ಆಡುಗಳ ಕಥೆಯ ಅರ್ಥ ಏನು?

7 ಇಂದು ಕುರಿ ಮತ್ತು ಆಡುಗಳ ಕಥೆಯ ಅರ್ಥ ನಮಗೆ ಸ್ಪಷ್ಟವಾಗಿದೆ. “ಮನುಷ್ಯಕುಮಾರ” ಅಥವಾ “ಅರಸ” ಅಂದರೆ ಯೇಸು. ಅರಸನ ‘ಸಹೋದರರು’ ಅಂದರೆ ಪವಿತ್ರಾತ್ಮದಿಂದ ಅಭಿಷಿಕ್ತರಾದವರು. ಇವರು ಸ್ವರ್ಗದಿಂದ ಯೇಸುವಿನ ಜೊತೆ  ಆಳ್ವಿಕೆ ಮಾಡುವವರು. (ರೋಮ. 8:16, 17) “ಕುರಿ ಮತ್ತು ಆಡುಗಳು” ಅಂದರೆ ಎಲ್ಲಾ ಜನಾಂಗಗಳ ಜನರು. ಇವರನ್ನು ಮಹಾ ಸಂಕಟದ ಅಂತ್ಯ ಹತ್ತಿರವಿರುವಾಗ ತೀರ್ಪು ಮಾಡಲಾಗುವುದು. ಮಹಾ ಸಂಕಟ ಇನ್ನೇನು ಆರಂಭವಾಗಲಿದೆ. ಜನರು ಭೂಮಿ ಮೇಲೆ ಇನ್ನೂ ಉಳಿದಿರುವ ಅಭಿಷಿಕ್ತರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಯೇಸು ಅವರ ತೀರ್ಪು ಮಾಡುತ್ತಾನೆಂದು ನಮಗೆ ಗೊತ್ತು. ವರ್ಷಗಳು ಉರುಳಿದಂತೆ ಯೆಹೋವನು ನಮಗೆ ಈ ಕಥೆಯನ್ನು ಮತ್ತು ಮತ್ತಾಯ 24, 25ನೇ ಅಧ್ಯಾಯಗಳ ಬೇರೆ ಕಥೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿರುವುದಕ್ಕೆ ನಾವು ಕೃತಜ್ಞರಲ್ಲವೇ!

ಸಾರುವ ಕೆಲಸ ತುಂಬ ಮುಖ್ಯ ಎಂದು ಈ ಕಥೆ ಕಲಿಸುತ್ತದೆ

8, 9. ಯೇಸು ಕುರಿಗಳನ್ನು ‘ನೀತಿವಂತರು’ ಎಂದು ಕರೆದದ್ದೇಕೆ?

8 ಯೇಸು ಕುರಿ ಮತ್ತು ಆಡುಗಳ ಕಥೆ ಹೇಳಿದಾಗ ಅದರಲ್ಲಿ “ಸಾರಿರಿ” ಅಥವಾ “ಸಾರುವ ಕೆಲಸ” ಎಂಬ ಪದಗಳನ್ನು ಎಲ್ಲೂ ಬಳಸಿಲ್ಲ. ಹಾಗಾಗಿ ಈ ಕಥೆಯು ಸಾರುವ ಕೆಲಸ ತುಂಬ ಮುಖ್ಯ ಎಂಬ ಪಾಠ ಕಲಿಸುತ್ತದೆಂದು ನಮಗೆ ಹೇಗೆ ಗೊತ್ತು?

9 ಇದಕ್ಕೆ ಉತ್ತರ ಕಂಡುಹಿಡಿಯಲು, ಯೇಸು ಈ ಕಥೆಯ ಮೂಲಕ ಒಂದು ಪಾಠವನ್ನು ಕಲಿಸುತ್ತಿದ್ದನೆಂದು ನಾವು ಮೊದಲು ನೆನಪಿಡಬೇಕು. ಅವನು ನಿಜವಾದ ಕುರಿ, ಆಡುಗಳ ಬಗ್ಗೆ ಹೇಳುತ್ತಿರಲಿಲ್ಲ. ಅದೇ ರೀತಿ ಕುರಿ ಎಂದು ತೀರ್ಪುಮಾಡಲಾಗುವ ಪ್ರತಿಯೊಬ್ಬರೂ ಅಭಿಷಿಕ್ತರಿಗೆ ಊಟ ಬಟ್ಟೆ ಕೊಡಬೇಕು, ಅವರಿಗೆ ಹುಷಾರಿಲ್ಲದಿದ್ದಾಗ ನೋಡಿಕೊಳ್ಳಬೇಕು, ಸೆರೆಮನೆಯಲ್ಲಿದ್ದಾಗ ಅವರನ್ನು ನೋಡಲು ಹೋಗಬೇಕೆಂದೂ ಯೇಸು ಹೇಳುತ್ತಿರಲಿಲ್ಲ. ಅವನು ಕುರಿಗಳನ್ನು ‘ನೀತಿವಂತರು’ ಎಂದು ಕರೆಯುತ್ತಾನೆ. ಏಕೆಂದರೆ ಅವರು ಅಭಿಷಿಕ್ತರನ್ನು ಯೇಸುವಿನ ಸಹೋದರರಂತೆ ನೋಡುತ್ತಾರೆ ಹಾಗೂ ಕಷ್ಟಕರವಾದ ಕಡೇ ದಿವಸಗಳಲ್ಲಿ ಅಭಿಷಿಕ್ತರಿಗೆ ನಿಷ್ಠೆ ತೋರಿಸುತ್ತಾರೆ.—ಮತ್ತಾ. 10:40-42; 25:40, 46; 2 ತಿಮೊ. 3:1-5.

10. ಕುರಿಗಳು ಕ್ರಿಸ್ತನ ಸಹೋದರರಿಗೆ ಹೇಗೆ ಸಹಾಯ ಮಾಡಬಹುದು?

10 ಕುರಿ ಮತ್ತು ಆಡುಗಳ ಬಗ್ಗೆ ಯೇಸು ಕಥೆ ಹೇಳಿದಾಗ ಅವನು ಅಂತ್ಯಕಾಲದಲ್ಲಿ ಏನಾಗುವುದು ಎಂಬುದರ ಬಗ್ಗೆ ಮಾತಾಡುತ್ತಿದ್ದನು. (ಮತ್ತಾ. 24:3) ಉದಾಹರಣೆಗೆ ಯೇಸು ಹೀಗೆ ಹೇಳಿದನು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು.” (ಮತ್ತಾ. 24:14) ಕುರಿ ಮತ್ತು ಆಡುಗಳ ಬಗ್ಗೆ ಹೇಳುವ ಸ್ವಲ್ಪ ಮುಂಚೆ ಅವನು ತಲಾಂತುಗಳ ಕಥೆಯನ್ನು ಹೇಳಿದನು. ಅಭಿಷಿಕ್ತರು ಸಾರುವ ಕೆಲಸದಲ್ಲಿ ತುಂಬ ಶ್ರಮಪಡಬೇಕು ಎಂದು ಕಲಿಸಲು ಯೇಸು ಈ ಕಥೆ ಹೇಳಿದ್ದನು. ಆದರೆ ಭೂಮಿ ಮೇಲೆ ಸ್ವಲ್ಪವೇ ಮಂದಿ ಅಭಿಷಿಕ್ತರಿದ್ದಾರೆ. ಮಾಡಲು ಕೆಲಸ ತುಂಬ ಇದೆ. ಅಂತ್ಯ ಬರುವ ಮುಂಚೆ “ಎಲ್ಲ ಜನಾಂಗಗಳಿಗೆ” ಸುವಾರ್ತೆ ಸಾರಬೇಕು ಎಂದೂ ಅಭಿಷಿಕ್ತರಿಗೆ ಹೇಳಲಾಗಿದೆ. ‘ಕುರಿಗಳು’ ಯೇಸುವಿನ ಸಹೋದರರಿಗೆ ಸಹಾಯ ಮಾಡುತ್ತಾರೆಂದು ಕುರಿ ಮತ್ತು ಆಡುಗಳ ಕಥೆ ಹೇಳುತ್ತದೆ. ಅವರು ಕೊಡಬಹುದಾದ ಅತ್ಯುತ್ತಮ ಸಹಾಯ ಸಾರುವ ಕೆಲಸದಲ್ಲಿ ಯೇಸುವಿನ ಸಹೋದರರೊಂದಿಗೆ ಕೈ ಜೋಡಿಸುವುದೇ. ಅವರು ಈ ಕೆಲಸಕ್ಕಾಗಿ ಕಾಣಿಕೆಗಳನ್ನು ಕೊಟ್ಟರೆ ಅಥವಾ ಸಾರುವ ಕೆಲಸ ಮಾಡುತ್ತಾ ಇರಿ ಎಂದು ಪ್ರೋತ್ಸಾಹ ಕೊಟ್ಟರೆ ಮಾತ್ರ ಸಾಕಾ?

ಯಾರು ಸಾರಬೇಕು?

11. ಕೆಲವರು ಯಾವ ಪ್ರಶ್ನೆ ಕೇಳಬಹುದು? ಏಕೆ?

11 ಇಂದು ಯೇಸುವಿನ ಶಿಷ್ಯರು 80 ಲಕ್ಷದಷ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಅಭಿಷಿಕ್ತರಲ್ಲ. ಯೇಸು ಇವರಿಗೆ ತಲಾಂತುಗಳನ್ನು ಕೊಟ್ಟಿಲ್ಲ. ಕೊಟ್ಟದ್ದು ಅಭಿಷಿಕ್ತ ಸಹೋದರರಿಗೆ. (ಮತ್ತಾ. 25:14-18) ಆದ್ದರಿಂದ ಕೆಲವರು ಹೀಗೆ ಕೇಳಬಹುದು: ‘ಯೇಸು ಇವರಿಗೆ ತಲಾಂತು ಕೊಟ್ಟಿಲ್ಲ ಅಂದಮೇಲೆ ಇವರು ಯಾಕೆ ಸಾರಬೇಕು?’ ಯಾಕೆಂದು ನೋಡೋಣ.

12. ಮತ್ತಾಯ 28:19, 20ರಲ್ಲಿರುವ ಯೇಸುವಿನ ಮಾತಿನಿಂದ ನಾವೇನು ಕಲಿಯುತ್ತೇವೆ?

12 ಸಾರಬೇಕೆಂದು ಯೇಸು ತನ್ನೆಲ್ಲಾ ಶಿಷ್ಯರಿಗೆ  ಆಜ್ಞಾಪಿಸಿದನು. ಪುನರುತ್ಥಾನದ ಬಳಿಕ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದೇನೆಂದರೆ ಅವರು “ಶಿಷ್ಯರನ್ನಾಗಿ ಮಾಡಿ” ತಾನು ಆಜ್ಞಾಪಿಸಿದ “ಎಲ್ಲಾ ವಿಷಯಗಳನ್ನು” ಪಾಲಿಸುವಂತೆ ಆ ಶಿಷ್ಯರಿಗೆ ಬೋಧಿಸಬೇಕು. ಈ ‘ವಿಷಯಗಳಲ್ಲಿ’ ಸಾರಬೇಕೆಂಬ ಯೇಸುವಿನ ಆಜ್ಞೆಗೆ ವಿಧೇಯರಾಗುವುದೂ ಸೇರಿತ್ತು. (ಮತ್ತಾಯ 28:19, 20 ಓದಿ.) ನಮಗೆ ಸ್ವರ್ಗೀಯ ನಿರೀಕ್ಷೆ ಇರಲಿ ಭೂ ನಿರೀಕ್ಷೆ ಇರಲಿ ನಾವೆಲ್ಲರೂ ಸಾರಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.—ಅ. ಕಾ. 10:42.

13. ಯೋಹಾನನು ನೋಡಿದ ದರ್ಶನದಿಂದ ನಾವೇನು ಕಲಿಯಬಹುದು?

13 ಅಭಿಷಿಕ್ತರ ಜೊತೆಗೆ ಇತರರೂ ಸಾರುವ ಕೆಲಸ ಮಾಡುತ್ತಾರೆಂದು ಪ್ರಕಟನೆ ಪುಸ್ತಕದಿಂದ ಕಲಿಯಬಹುದು. ಜೀವಜಲ ಕುಡಿಯುವಂತೆ ಆಮಂತ್ರಿಸುತ್ತಿರುವ “ವಧು”ವಿನ ಒಂದು ದರ್ಶನವನ್ನು ಯೇಸು ಅಪೊಸ್ತಲ ಯೋಹಾನನಿಗೆ ಕೊಟ್ಟನು. ವಧುವು 1,44,000 ಅಭಿಷಿಕ್ತರನ್ನು ಸೂಚಿಸುತ್ತಾಳೆ. ಇವರು ಯೇಸುವಿನ ಜೊತೆ ಸ್ವರ್ಗದಿಂದ ಆಳುತ್ತಾರೆ. (ಪ್ರಕ. 14:1, 3; 22:17) ಜೀವಜಲ ಯೇಸುವಿನ ವಿಮೋಚನಾ ಮೌಲ್ಯಕ್ಕೆ ಸೂಚಿಸುತ್ತದೆ. ಇದು ಜನರಿಗೆ ಪಾಪ ಮತ್ತು ಮರಣವಿಲ್ಲದ ಬದುಕನ್ನು ಕೊಡುತ್ತದೆ. (ಮತ್ತಾ. 20:28; ಯೋಹಾ. 3:16; 1 ಯೋಹಾ. 4:9, 10) ಅಭಿಷಿಕ್ತ ಕ್ರೈಸ್ತರು ಜನರಿಗೆ ವಿಮೋಚನಾ ಮೌಲ್ಯದ ಬಗ್ಗೆ ಮತ್ತು ಅದರಿಂದ ಅವರು ಹೇಗೆ ಪ್ರಯೋಜನ ಪಡೆಯಬಹುದೆಂದು ಹುರುಪಿನಿಂದ ಕಲಿಸುತ್ತಾರೆ. (1 ಕೊರಿಂ. 1:23) ಅದೇ ದರ್ಶನದಲ್ಲಿ ಇನ್ನೊಂದು ಗುಂಪಿನ ಬಗ್ಗೆಯೂ ಇದೆ. ಇವರು ಅಭಿಷಿಕ್ತರಲ್ಲ. ಇವರಿಗೆ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇದೆ. “ಬಾ!” ಎಂದು ಜನರನ್ನು ಕರೆಯುವ ಆಜ್ಞೆ ಇವರಿಗೂ ಇದೆ. ಇತರರಿಗೆ ಸುವಾರ್ತೆ ತಿಳಿಸುವ ಮೂಲಕ ಈ ಗುಂಪಿನ ಜನರು ಆ ಆಜ್ಞೆಯನ್ನು ಪಾಲಿಸುತ್ತಾರೆ. ಯಾರೆಲ್ಲಾ ಸುವಾರ್ತೆಯ ಸಂದೇಶವನ್ನು ಸ್ವೀಕರಿಸುತ್ತಾರೊ ಅವರೆಲ್ಲರೂ ಬೇರೆಯವರಿಗೆ ಸಾರಲೇಬೇಕೆಂದು ಈ ದರ್ಶನ ತೋರಿಸಿಕೊಡುತ್ತದೆ.

14. “ಕ್ರಿಸ್ತನ ನಿಯಮ”ಕ್ಕೆ ನಾವು ಹೇಗೆ ವಿಧೇಯರಾಗುತ್ತೇವೆ?

14 “ಕ್ರಿಸ್ತನ ನಿಯಮ”ಕ್ಕೆ ವಿಧೇಯರಾಗುವ ಎಲ್ಲರೂ ಸಾರಲೇಬೇಕು. (ಗಲಾ. 6:2) ತನ್ನನ್ನು  ಆರಾಧಿಸುವವರೆಲ್ಲರೂ ಒಂದೇ ರೀತಿಯ ಆಜ್ಞೆಗಳನ್ನು ಪಾಲಿಸಬೇಕೆಂದು ಯೆಹೋವನು ಬಯಸುತ್ತಾನೆ. ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ಮತ್ತು ಅವರ ಮಧ್ಯೆ ಇದ್ದ ಪರದೇಶೀಯರೂ ಆತನ ಆಜ್ಞೆಗಳನ್ನು ಪಾಲಿಸಬೇಕೆಂದು ಆತನು ಬಯಸಿದನು. (ವಿಮೋ. 12:49; ಯಾಜ. 24:22) ಇಸ್ರಾಯೇಲ್ಯರಿಗೆ ಕೊಡಲಾದ ಎಲ್ಲಾ ಆಜ್ಞೆಗಳಿಗೆ ನಾವಿಂದು ವಿಧೇಯರಾಗಬೇಕಿಲ್ಲ ನಿಜ. ಅದರ ಬದಲು “ಕ್ರಿಸ್ತನ ನಿಯಮವನ್ನು” ನಾವು ಪಾಲಿಸಬೇಕು. ನಾವು ಅಭಿಷಿಕ್ತರಾಗಿರಲಿ ಇಲ್ಲದಿರಲಿ ನಾವಿದನ್ನು ಮಾಡಬೇಕು. ಯೇಸು ಕಲಿಸಿದ ಅತೀ ಪ್ರಾಮುಖ್ಯ ವಿಷಯಗಳಲ್ಲಿ ಒಂದು ಬೇರೆಯವರನ್ನು ಪ್ರೀತಿಸುವುದು. (ಯೋಹಾ. 13:35; ಯಾಕೋ. 2:8) ನಾವು ಯೆಹೋವನನ್ನು, ಯೇಸುವನ್ನು ಮತ್ತು ಜನರನ್ನು ಪ್ರೀತಿಸಬೇಕು. ಇದನ್ನು ಮಾಡಲು ನಮಗಿರುವ ಉತ್ತಮ ದಾರಿ ಜನರಿಗೆ ರಾಜ್ಯದ ಸುವಾರ್ತೆಯ ಬಗ್ಗೆ ತಿಳಿಸುವುದೇ.—ಯೋಹಾ. 15:10; ಅ. ಕಾ. 1:8.

15. ಯೇಸು ತನ್ನೆಲ್ಲಾ ಶಿಷ್ಯರಿಗೆ ಸಾರುವ ಆಜ್ಞೆ ಕೊಟ್ಟನೆಂದು ನಾವು ಹೇಗೆ ಹೇಳಬಹುದು?

15 ಯೇಸು ಕೆಲವು ಶಿಷ್ಯರಿಗೆ ಹೇಳಿದ ಮಾತುಗಳು ಒಮ್ಮೊಮ್ಮೆ ಅನೇಕ ಶಿಷ್ಯರಿಗೂ ಅನ್ವಯಿಸುತ್ತವೆ. ಉದಾಹರಣೆಗೆ, ‘ನನ್ನೊಂದಿಗೆ ರಾಜ್ಯದಲ್ಲಿ ಆಳುವಿರಿ’ ಎಂದು ಯೇಸು ಮಾತುಕೊಟ್ಟದ್ದು ಬರೀ 11 ಶಿಷ್ಯರಿಗೆ. ಆದರೆ ನಿಜವಾಗಿ ಆತನೊಂದಿಗೆ ಆಳುವವರ ಸಂಖ್ಯೆ 1,44,000. (ಲೂಕ 22:29, 30; ಪ್ರಕ. 5:10; 7:4-8) ಯೇಸು ಪುನರುತ್ಥಾನದ ನಂತರ ಸಾರಬೇಕೆಂಬ ಆಜ್ಞೆ ಕೊಟ್ಟದ್ದು ಕೆಲವೇ ಶಿಷ್ಯರಿಗೆ. (ಅ. ಕಾ. 10:40-42; 1 ಕೊರಿಂ. 15:6) ಆದರೆ ಪ್ರಥಮ ಶತಮಾನದ ಯೇಸುವಿನ ಎಲ್ಲಾ ಹಿಂಬಾಲಕರು ಆ ಆಜ್ಞೆಯನ್ನು ಪಾಲಿಸಿದರು. (ಅ. ಕಾ. 8:4; 1 ಪೇತ್ರ 1:8) ಸಾರುವ ಕೆಲಸ ಮಾಡಬೇಕೆಂದು ಯೇಸು ಹೇಳುತ್ತಿರುವ ಸ್ವರ ನಮಗಿಂದು ನೇರವಾಗಿ ಕೇಳಿಬರುತ್ತಿಲ್ಲವಾದರೂ ಆ ಕೆಲಸ ಮಾಡಬೇಕೆಂದು ನಮಗೆ ಗೊತ್ತು. ಹಾಗಾಗಿ 80 ಲಕ್ಷದಷ್ಟು ಜನರು ಸಾರುವ ಕೆಲಸವನ್ನು ಮಾಡುತ್ತಿದ್ದೇವೆ. ಇದರ ಮೂಲಕ ಯೇಸುವಿನ ಮೇಲೆ ನಮಗೆ ನಂಬಿಕೆ ಇದೆ ಎಂದು ತೋರಿಸಿಕೊಡುತ್ತೇವೆ.—ಯಾಕೋ. 2:18.

ನಿಷ್ಠರಾಗಿರುವ ಸಮಯ ಇದೇ

16-18. (ಎ) ನಿಷ್ಠೆಯಿಂದ ಕ್ರಿಸ್ತನ ಸಹೋದರರಿಗೆ ಸಹಾಯ ಮಾಡುವುದು ಹೇಗೆ? (ಬಿ) ಇದನ್ನು ಈಗಲೇ ಏಕೆ ಮಾಡಬೇಕು?

16 ಭೂಮಿ ಮೇಲಿರುವ ಕ್ರಿಸ್ತನ ಅಭಿಷಿಕ್ತ ಸಹೋದರರ ವಿರುದ್ಧ ಸೈತಾನನು ಹೆಚ್ಚೆಚ್ಚು ದಾಳಿ ಮಾಡುತ್ತಿದ್ದಾನೆ. ತನಗಿರುವ “ಸಮಯಾವಧಿಯು ಸ್ವಲ್ಪ” ಎಂದೂ ಅವನಿಗೆ ಚೆನ್ನಾಗಿ ಗೊತ್ತಿದೆ. (ಪ್ರಕ. 12:9, 12, 17) ಸೈತಾನನ ದಾಳಿಗಳ ಮಧ್ಯೆಯೂ ಅಭಿಷಿಕ್ತರು ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಜನರು ಸುವಾರ್ತೆ ಕೇಳಿ ಪ್ರತಿಕ್ರಿಯಿಸುತ್ತಿದ್ದಾರೆ. ಯೇಸು ಅಭಿಷಿಕ್ತರೊಂದಿಗಿದ್ದು ಅವರನ್ನು ಮಾರ್ಗದರ್ಶಿಸುತ್ತಿದ್ದಾನೆ ಎಂದು ಇದರಿಂದ ಗೊತ್ತಾಗುತ್ತದೆ.—ಮತ್ತಾ. 28:20.

17 ಸಾರುವ ಕೆಲಸದ ಮೂಲಕ ಕ್ರಿಸ್ತನ ಸಹೋದರರಿಗೆ ಸಹಾಯ ಮಾಡುವುದು ನಮ್ಮ ಸುಯೋಗ ಎಂದು ಎಣಿಸುತ್ತೇವೆ. ಕಾಣಿಕೆ ಕೊಡುವ ಮೂಲಕ, ರಾಜ್ಯ ಸಭಾಗೃಹಗಳು, ಸಮ್ಮೇಳನ ಹಾಲ್‌ಗಳು ಮತ್ತು ಬ್ರಾಂಚ್‌ ಆಫೀಸ್‌ಗಳ ನಿರ್ಮಾಣ ಕಾರ್ಯದಲ್ಲಿ ಶ್ರಮಿಸುವ ಮೂಲಕ ಸಹ ಅವರಿಗೆ ಸಹಾಯ ಮಾಡುತ್ತೇವೆ. “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ನೇಮಿಸಿರುವ ಹಿರಿಯರಿಗೆ ಮತ್ತು ಇತರ ಸಹೋದರರಿಗೆ ನಿಷ್ಠೆಯಿಂದ ವಿಧೇಯರಾಗುವ ಮೂಲಕ ಕ್ರಿಸ್ತನ ಸಹೋದರರಿಗೆ ಸಹಾಯಮಾಡಲು ಇಷ್ಟಪಡುತ್ತೇವೆಂದು ತೋರಿಸಿಕೊಡುತ್ತೇವೆ.—ಮತ್ತಾ. 24:45-47; ಇಬ್ರಿ. 13:17.

ಕ್ರಿಸ್ತನ ಸಹೋದರರಿಗೆ ನಾವು ಅನೇಕ ವಿಧಗಳಲ್ಲಿ ಸಹಾಯ ಮಾಡುತ್ತೇವೆ (ಪ್ಯಾರ 17 ನೋಡಿ)

18 ಭೂಮಿ ಮೇಲೆ ಉಳಿದಿರುವ ಅಭಿಷಿಕ್ತರು ಬೇಗನೆ ಕೊನೆಯ ಮುದ್ರೆ ಪಡೆಯಲಿದ್ದಾರೆ. ನಂತರ ದೇವದೂತರು ಹಿಡಿದಿಟ್ಟಿರುವ “ಭೂಮಿಯ ನಾಲ್ಕು ಗಾಳಿಗಳನ್ನು” ಬಿಟ್ಟುಬಿಟ್ಟಾಗ ಮಹಾ ಸಂಕಟ ಶುರುವಾಗುವುದು. (ಪ್ರಕ. 7:1-3) ಅರ್ಮಗೆದೋನ್‌ ಆರಂಭವಾಗುವ ಮುಂಚೆ ಯೇಸು ಅಭಿಷಿಕ್ತರನ್ನು ಸ್ವರ್ಗಕ್ಕೆ ಕರಕೊಳ್ಳುತ್ತಾನೆ. (ಮತ್ತಾ. 13:41-43) ಹಾಗಾಗಿ ಯೇಸು ಬರುವಾಗ ನಮ್ಮನ್ನು ಕುರಿಗಳಾಗಿ ತೀರ್ಪು ಮಾಡಬೇಕಾದರೆ ಕ್ರಿಸ್ತನ ಸಹೋದರರಿಗೆ ನಾವು ನಿಷ್ಠೆ ತೋರಿಸುವ ಸಮಯ ಇದೇ.

^ ಪ್ಯಾರ. 6 ಈ ಕಥೆಯ ಸವಿವರವಾದ ಚರ್ಚೆಗಾಗಿ ಅಕ್ಟೋಬರ್‌ 15, 1995ರ “ನ್ಯಾಯಾಸನದ ಮುಂದೆ ನೀವು ಹೇಗೆ ನಿಲ್ಲುವಿರಿ?” ಮತ್ತು “ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?” ಲೇಖನಗಳನ್ನು ನೋಡಿ.